ಕಮರ | |
---|---|
New leaves of an Anjan tree at Chinawal, India | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Hardwickia |
ಕಮರಇದು ಮಧ್ಯಮ ಪ್ರಮಾಣದಿಂದ ದೊಡ್ಡ ಪ್ರಮಾಣದವರೆಗೂ ಬೆಳೆಯುವ ಮರ. ವಾಣಿಜ್ಯ ಪ್ರಪಂಚದಲ್ಲಿ ಇದನ್ನು ಅಂಜನ್ ಎಂದು ಕರೆಯುವರು.
ಫ್ಯಾಂಬೇಸೀ (ಲೆಗ್ಯೂಮಿನೋಸೀ) ಕುಟುಂಬದ ಸೀಸಾಲ್ಪಿನಿಯಾಯ್ಡೀ ಹಾರ್ಡ್‍ವಿಕಿಯ ಬೈನೇಟ ಎಂಬ ವೈಜ್ಞಾನಿಕ ಹೆಸರು ಇದಕ್ಕಿದೆ.ಇದರ ಹೆಸರನ್ನು ಸಸ್ಯ ವಿಜ್ಞಾನಿ ಥಾಮಸ್ ಹಾರ್ಡ್‍ವಿಕ್ ನೆನಪಿಗೆ ಇಡಲಾಗಿದೆ.[೧]
ಎಳೆಯ ಗಿಡದಲ್ಲಿ ಇದರ ಹಂದರ ಶಂಖುವಿನಾಕಾರದಲ್ಲಿದ್ದು ದೊಡ್ಡದಾದಂತೆ ಹರಡಿಕೊಳ್ಳುವುದು. ಎಲೆಗಳು ಗೊರಸಿನಾಕಾರ, ಶುಷ್ಕತೆಯಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಕಂಡುಬರುವುದು. ಚಿತ್ರದುರ್ಗ ಜಿಲ್ಲೆಯ ಕಮರಾಕಾವಲ್ ಇದಕ್ಕೆ ಹೆಸರಾದುದು. ಬೆಂಗಳೂರು, ತುಮಕೂರು, ಕೊಳ್ಳೇಗಾಲ, ಬೆಳಗಾಂವಿ, ಧಾರವಾಡ ಜಿಲ್ಲೆಗಳಲ್ಲೂ ಇದರ ವ್ಯಾಪನೆಯಿದೆ. ದೀರ್ಘಕಾಲದ ಶುಷ್ಕತೆಯನ್ನು ತಡೆದುಕೊಳ್ಳಬಲ್ಲ ಇದರಲ್ಲಿ ಫೆಬ್ರವರಿ-ಮಾರ್ಚ್ ತಿಂಗಳ ಸುಮಾರಿಗೆ ಎಲೆಗಳು ಉದುರಿ ಕೆಂಪು ಛಾಯೆಯ ಹೊಸ ಚಿಗುರು ಏಪ್ರಿಲ್ ತಿಂಗಳಲ್ಲಿ ಬರುವುದು. ಹಳದಿಮಿಶ್ರಿತ ಹಸಿರು ಛಾಯೆಯ ಸಣ್ಣ ಹೂಗೊಂಚಲುಗಳು ಜುಲೈಯಿಂದ ಸೆಪ್ಟೆಂಬರ್ ವರೆಗೂ ಮೂಡಿ, ಕಾಯಿಗಳು ಏಪ್ರಿಲ್ ತಿಂಗಳ ಸುಮಾರಿಗೆ ಬಲಿಯುತ್ತವೆ. ಚಪ್ಪಟೆಯಾದ ಕಾಯಿಗಳು ಗಾಳಿಯಲ್ಲಿ ಸ್ವಲ್ಪ ದೂರ ತೂರಿಹೋಗಬಲ್ಲವು-3-5 ವರ್ಷಗಳಿಗೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಬಿಟ್ಟು ಮಿಕ್ಕ ವರ್ಷಗಳಲ್ಲಿ ಸಾಧಾರಣವಾಗಿ ಫಲ ಬಿಡುತ್ತದೆ. ಇದರ ಸಸಿಗಳು ಗಟ್ಟಿ ನೆಲದಲ್ಲಿಯೂ ತಾಯಿಬೇರನ್ನು ಆಳವಾಗಿ ಇಳಿಸಬಲ್ಲವು. ಇದರಿಂದಲೇ ಇವು ಶುಷ್ಕತೆಯ ಪ್ರದೇಶಗಳಲ್ಲಿಯೂ ಬೆಳೆಯುವ ಶಕ್ತಿ ಪಡೆದಿರುವುದು. ಬುಡ ಕತ್ತರಿಸಿದಾಗ ಕಾಂಡ ಚಿಗುರದಿದ್ದರೂ ರೆಂಬೆಗಳನ್ನು ಕತ್ತರಿಸಿದರೆ ಚೆನ್ನಾಗಿ ಚಿಗುರುತ್ತದೆ. ದನ, ಮೇಕೆ, ಜಿಂಕೆಗಳಿಗೆ ಇದರ ಎಲೆ ಬಹಳ ಇಷ್ಟ. ಎಳೆಯ ಸಸಿಗಳಿಗೆ ಬೆಂಕಿ ಬಹು ಅಪಾಯಕಾರಿ. ಈ ಸಸ್ಯಗಳ ಸ್ವಾಭಾವಿಕ ಪುನರುತ್ಪತ್ತಿಗೆ ಬೆಂಕಿ, ಜಾನುವಾರುಗಳ ಉಪಟಳ ಹಾಗೂ ಹುಲ್ಲು, ಕಳೆ ಮಾರಕವಾಗಿ ಪರಿಣಮಿಸುತ್ತವೆ. ಆದ್ದರಿಂದ ಬೀಜ ಬಿತ್ತಿ ಬೆಳೆಸುವಾಗ ಎಳೆಯದರಲ್ಲಿ ಬೆಂಕಿ ಜಾನುವಾರುಗಳಿಂದ ಕಾಪಾಡಬೇಕು. ಅರಣ್ಯಶಾಖೆಯವರು ಮೈದಾನಪ್ರದೇಶಗಳಲ್ಲಿ ಬೆಳೆಸುವ ತೋಪುಗಳ ಕಾರ್ಯಕ್ರಮದಲ್ಲಿ ಬಳಸುವ ಮರಗಳಲ್ಲಿ ಇದೂ ಒಂದು ಮುಖ್ಯ ಜಾತಿ.
ಇದರ ಚೌಬೀನೆ ಕೆಂಪುಮಿಶ್ರಿತ ಕಂದುಬಣ್ಣದ್ದು. ಭಾರವಾಗಿಯೂ ಗಡುಸಾಗಿಯೂ ಬಲಯುತವಾಗಿಯೂ ಇರುವುದರಿಂದ ಇದನ್ನು ಹದಮಾಡುವುದು ಕಷ್ಟ. ಹಸಿಯ ಮರವನ್ನೇ ಕೊಯ್ದು ನಿಧಾನವಾಗಿ ಆರಲು ಬಿಡಬೇಕು. ಗೆದ್ದಲು ಹತ್ತುವುದಾಗಲೀ ಕೊಳೆಯುವುದಾಗಲೀ ಬಹು ವಿರಳ.[೨] ಕೊರೆಯುವ ಹುಳುಗಳಿಂದ ಸ್ವಲ್ಪ ಹಾನಿ ಉಂಟು. ಒಣಮರವನ್ನು ಕೊಯ್ಯುವುದು ಕಷ್ಟವಾದರೂ ಹಸಿಯದರಲ್ಲಿ ಮರಗೆಲಸ ಸುಲಭ.
ಗಡುಸು ಮರವಾದುದರಿಂದ ಗಾಡಿಯ ಗುಂಭ, ಒನಕೆ, ನೇಗಿಲು, ಯಂತ್ರಘರ್ಷಣಾ ಭಾಗಗಳಿಗೂ (ಬೇರಿಂಗ್ಸ್) ಗಣಿಗಳ ಊರುಗಂಧ ತೊಲೆಗಳು, ನೆಲಹಾಸುಗಳು ಇತ್ಯಾದಿಗಳಿಗೆ ಬಳಸುವರು.[೩]