ಕರಗ

ಹೂವಿನ ಕರಗ
ಹೂವಿನ ಕರಗ
ಕರಗ ಆಚರಣೆಯಲ್ಲಿರುವ ಭಕ್ತಾದಿಗಳು

ಕರಗ ಕರ್ನಾಟಕದ ಪ್ರಸಿದ್ಧ ಜಾನಪದ ಆಚರಣೆಯಾಗಿದೆ. ಈ ಸಂಧರ್ಭದಲ್ಲಿ ಆದಿಶಕ್ತಿ ಶ್ರೀ ದ್ರೌಪದಿಯನ್ನು, ವಹ್ನಿಕುಲ ಕ್ಷತ್ರಿಯ ( ತಿಗಳ ಕ್ಷತ್ರಿಯ) ಜನಾಂಗದವರು ಕುಲದೇವತೆಯಾಗಿ ಆರಾಧಿಸುತ್ತಾರೆ.

ಅರ್ಥ ವಿವರಣೆ

[ಬದಲಾಯಿಸಿ]

ಶತಮಾನಗಳ ಇತಿಹಾಸ ಹೊಂದಿರುವ ವಿಶ್ವ ಪ್ರಸಿದ್ಧ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದು. ಕರಗ(ಕರಕ) ಎಂಬ ಮಾತಿಗೆ 'ಕುಂಭ' ಎಂಬ ಅರ್ಥ ಇದೆ. ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ. ಕರಗ ಪೂಜೆ ಮತ್ತು ಉತ್ಸವಗಳು ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ವೈಭವದಿಂದ ಆಚರಿಸಲ್ಪಡುತ್ತಿದೆ. ಕರ್ನಾಟಕ ರಾಜ್ಯದ ಬೆಂಗಳೂರು, ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಆಚರಣೆ ರೂಢಿಯಲ್ಲಿದೆ. ಬೆಂಗಳೂರಿನ ಕರಗ ಪ್ರಸಿದ್ಧಿಯಾಗಿದೆ.

ಚಿತ್ರಾ ಪೂರ್ಣಿಮೆಯಂದು

[ಬದಲಾಯಿಸಿ]

ವಹ್ನಿಕುಲ ಕ್ಷತ್ರಿಯ ಜನಾಂಗದವರು ಕಳಸ ಹೊತ್ತು ನೃತ್ಯ ಮಾಡುತ್ತಾ ದೇವರ ಹರಕೆ ಒಪ್ಪಿಸುವ ಆಚರಣೆ. ಪ್ರತಿ ವರ್ಷದ ಏಪ್ರಿಲ್ ತಿಂಗಳ ಚೈತ್ರ ಹುಣ್ಣಿಮೆಯಂದು ಕರಗ ಆಚರಣೆ ನಡೆಯುತ್ತದೆ. ವಹ್ನಿಕುಲ ಕ್ಷತ್ರಿಯರ ವಿವಿಧ ಪಂಗಡಗಳು ದ್ರೌಪದಿಯನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ. ದ್ರೌಪದಿ ಅವರಿಗೆ ಆದಿಶಕ್ತಿ. ಅವಳ ಹೆಸರಿನಲ್ಲಿಯೇ ಕರಗ ನಡೆಸುತ್ತಾರೆ. ಬೆಂಗಳೂರಿನಲ್ಲಿ ತಿಗಳರ ಪೇಟೆಯಲ್ಲಿ ದ್ರೌಪದಿ ಹಾಗೂ ಧರ್ಮರಾಯ ಸ್ವಾಮಿ ದೇಗುಲಗಳಿವೆ. ಹಾಗೆಯೇ ವಹ್ನಿ ಕುಲ ಕ್ಷತ್ರಿಯರು ಹೆಚ್ಚಾಗಿ ವಾಸ ಮಾಡುವ ಸ್ಥಳಗಳಲ್ಲಿ ಮೇಲಿನ ಎರಡೂ ದೇವಾಲಯಗಳಿರುವುದನ್ನು ಕಾಣಬಹುದು. ಕರಗ ಹಬ್ಬದ ಆಚರಣೆ ಹಿಂದೂ ತೂಗುತೇದಿಯ(ಕ್ಯಾಲೆಂಡರ್‍) ಮೂದಲ ತಿಂಗಳ ಸಪ್ತಮಿ ಇಂದ ಶುರುವಾಗಿ ಹನ್ನೊಂದು ದಿನಗಳ ಕಾಲ ನಡೆಯುತ್ತದೆ. ಆ ೧೧ ದಿನಗಳ ಗಡುವಿನಲ್ಲಿ, ೩ ದಿನಗಳ ಕಾಲ ತಾಯಿ ದ್ರೌಪದಿ ತಮ್ಮೊಡನೆ ಇರುತ್ತಾಳೆಂದು ತಿಗಳರ ನಂಬಿಕೆ. ಬೆಂಗಳೂರಿನ ತಿಗಳರ ಪೇಟೆಯಲ್ಲಿರುವ ಧರ್ಮರಾಯಸ್ವಾಮಿ ಗುಡಿಯಲ್ಲಿ ಹಬ್ಬದ ಚಟುವಟಿಕೆಗಳು ನಡೆಯುತ್ತವೆ. ಹನ್ನೊಂದು ದಿನಗಳ ಸಡಗರದಲ್ಲಿ ಕಾರ್ಯಕ್ರಮಗಳು ಹೀಗಿರುತ್ತವೆ: ಈ ಉತ್ಸವದ ಆರಾಧನೆಯ ಸಂಪ್ರದಾಯವನ್ನು ನಡೆಸಿಕೊಂಡು ಬಂದಿರುವವರು ತಿಗಳರು ಎಂದು ಕರೆಯಲ್ಪಡುವ ವಹ್ನಿಕುಲ ಕ್ಷತ್ರಿಯರು. ವಹ್ನಿಕುಲದವರು ಕಳಸ ಹೊತ್ತು ನೃತ್ಯ ಮಾಡುತ್ತಾ ದೇವರ ಹರಕೆ ಒಪ್ಪಿಸುವ ಆಚರಣೆ ಇದಾಗಿದೆ. ಪ್ರತಿ ವರ್ಷದ ಏಪ್ರಿಲ್ ತಿಂಗಳ ಚೈತ್ರ ಹುಣ್ಣಿಮೆಯಂದು ಕರಗ ಆಚರಣೆ ನಡೆಯುತ್ತದೆ. ವಹ್ನಿಕುಲ ಕ್ಷತ್ರಿಯರ ವಿವಿಧ ಪಂಗಡಗಳು ದ್ರೌಪದಿಯನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ. ದ್ರೌಪದಿ ಇವರಿಗೆ ಆದಿಶಕ್ತಿ. ಅವಳ ಹೆಸರಿನಲ್ಲಿಯೇ ಕರಗ ನಡೆಸುತ್ತಾರೆ. ಬೆಂಗಳೂರಿನಲ್ಲಿ ತಿಗಳರ ಪೇಟೆಯಲ್ಲಿ ದ್ರೌಪದಿ ಹಾಗೂ ಧರ್ಮರಾಯಸ್ವಾಮಿ ದೇಗುಲಗಳಿವೆ. ಹಾಗೆಯೇ ವಹ್ನಿಕುಲ ಕ್ಷತ್ರಿಯರು ಹೆಚ್ಚಾಗಿ ವಾಸ ಮಾಡುವ ಸ್ಥಳಗಳಲ್ಲಿ ಮೇಲಿನ ಎರಡೂ ದೇವಾಲಯಗಳಿರುವುದನ್ನು ಕಾಣಬಹುದು. ಕರಗವನ್ನು ರೂಪಿಸಿ ಹೊರುವ ವಹ್ನಿಕುಲ ಕ್ಷತ್ರಿಯ ಮನೆತನದ ಹಿರಿಯ ಪೂಜಾರಿಗಳು ಈ ಆಚರಣೆಯ ಮೂಲ ರಹಸ್ಯವನ್ನು ಗೌಪ್ಯವಾಗಿಟ್ಟಿದ್ದಾರೆ ಎನ್ನಲಾಗಿದೆ. ದೈಹಿಕ ಆಚರಣೆಯ ಗುಟ್ಟನ್ನು ಬಹಿರಂಗ ಪಡಿಸುವುದು ಕುಲಕ್ಕೆ ಕೇಡು; ದೇಶಕ್ಕೆ ಹಾನಿ ಎಂಬುದು ಅವರ ನಿಲುವಾಗಿದೆ.

ಕಥಾ ಹಿನ್ನೆಲೆ

[ಬದಲಾಯಿಸಿ]

ಕರಗ ಆಚರಣೆಯ ಮೂಲವನ್ನು ಹೇಳುವ ಒಂದು ಐತಿಹ್ಯ ಹೀಗಿದೆ: ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮಾರ್ಛಿತಳಾಗಿ ಬಿದ್ದಳಂತೆ. ದ್ರೌಪದಿ ಮೂರ್ಛಿತಳಾಗಿ ಬಿದ್ದದ್ದು ಪಾಂಡವರಿಗೆ ತಿಳಿಯದೆ ಮುಂದೆ ನಡೆಯುತ್ತಾರೆ. ಆಕೆಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗೌಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಥಿ ಮಾಡುತ್ತಾಳೆ. ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದಿರು ಹೋರಾಡಿ ಗೆಲ್ಲುತ್ತಾರೆ. ಹೀಗೆ ಮಕ್ಕಳನ್ನು ಹುಟ್ಟಿಸಿದ ದ್ರೌಪದಿ ಆದಿಶಕ್ತಿಯಾಗಿ, ಮತ್ತೆ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗುವುದು ಮಕ್ಕಳಿಗೆ ದುಗುಡ ಉಂಟು ಮಾಡುತ್ತದೆ. ಅವಳು ಹೋಗದಂತೆ ಬೇಡಿಕೊಳ್ಳಲು ಕೃಷ್ಣನು ಅವರಿಗೆ, ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ‘ಅಲಗುಸೇವೆ’ ಎನ್ನುತ್ತಾರೆ) “ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು” ಎಂದು ಅಲವತ್ತು ಕೊಳ್ಳಲು ಹೇಳುವನು. ಇದನ್ನು ನೋಡಿ ದ್ರೌಪದಿಗೆ ಮರುಕವಾಗಿ ಪ್ರತಿ ವರುಷವೂ ಮೂರು ದಿನ ಭೂಮಿಗೆ ಬಂದು ಮಕ್ಕಳೊಂದಿಗೆ ಇರುವ ಮಾತು ನೀಡುತ್ತಾಳೆ. ಆ ಮೂರು ದಿನಗಳೇ ಕರಗ ಹಬ್ಬದ ದಿನಗಳು. ಇದರ ನೆನಪಿಗೆ ಕರಗ ನಡೆಯುತ್ತದೆಂದು ಹೇಳಲಾಗಿದೆ. ಇದರ ಜೊತೆಗೆ ಇನ್ನೊಂದು ಐತಿಹ್ಯವಿದೆ. ದ್ವಾಪರ ಯುಗದಲ್ಲಿ, ಒಂದು ಸರ್ವಾಲಂಕಾರ ಭೂಷಿತೆಯಾದ ದ್ರೌಪದಿ ಮಂಗಳ ಕಲಶವನ್ನು ಹಿಡಿದು ಸ್ವಯಂವರ ಮಂಟಪವನ್ನು ಪ್ರವೇಶಿಸಿದಳು. ಮತ್ಸ್ಯವನ್ನು ಭೇದಿಸುವ ಅರ್ಜುನನ್ನೂ, ಕುಂತಿಯ ಅಭಿಲಾಷೆಯಂತೆ ಉಳಿದ ನಾಲ್ವರು ಪಾಂಡವ ಸಹೋದರರನ್ನೂ ಶಾಸ್ತ್ರೋಸ್ತವಾಗಿ ವಿವಾಹವಾದಳು. ಆಗ ಸಂತೋಷದಿಂದ ಕೈಯಲಿದ್ದ ಕಲಶವನ್ನು ಶಿರದಲ್ಲಿ ಧರಿಸಿದಳು. ಅದೇ ಕರಗವಾಯಿತು ಎಂಬ ನಂಬಿಕೆಯೂ ಇದೆ. []

ವಹ್ನಿಕುಲದ ಮೂಲ

[ಬದಲಾಯಿಸಿ]

ಇವರು ಮೂಲತಃ ತಮಿಳುನಾಡಿನವರು. ಹದಿನೈದನೆಯ ಶತಮಾನದಲ್ಲಿಯೇ ಮೈಸೂರು ಸಂಸ್ಥಾನಕ್ಕೆ ಬಂದು ನೆಲೆಸಿದರೆಂದು ತಿಳಿದು ಬರುತ್ತದೆ. ಹೈದರಾಲಿಯು ದಕ್ಷಿಣ ಭಾರತದ ಮೇಲೆ ದಂಡಯಾತ್ರೆ ಮಾಡಿದಾಗ ವೀರಾವೇಶದಿಂದ ಹೈದರಾಲಿಯ ವಿರುದ್ಧ ಹೋರಾಡುತ್ತಾರೆ. ಈ ವಹ್ನಿಕುಲ ಕ್ಷತ್ರಿಯರಲ್ಲಿನ ಧೈರ್ಯ ಹಾಗೂ ಇವರ ಕುಲ ಪ್ರವೃತ್ತಿ ತೋಟಗಾರಿಕೆಯನ್ನು ಮೆಚ್ಚಿ ತಾನು ಮೈಸೂರಿಗೆ ಹಿಂತಿರುಗುವಾಗ ಈ ಮನೆತನದ ಕೆಲವರನ್ನು ತನ್ನೊಡನೆ ಕರೆತಂದು ಶ್ರೀರಂಗಪಟ್ಟಣದ ಗಂಜಾಂನಲ್ಲೂ, ಬೆಂಗಳೂರಿನಲ್ಲೂ ಬದುಕಲು ಆಶ್ರಯ ನೀಡಿದನೆಂದು ಇತಿಹಾಸ ಹೇಳುತ್ತದೆ. ಆನಂತರ ಈ ಜನಾಂಗ ಬೆಂಗಳೂರು, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ವಿಸ್ತರಿಸಿದಂತೆ ಕಾಣುತ್ತದೆ. ಇವರು ಪ್ರಾರಂಭದಿಂದಲೂ ಪಾಂಡವರ ಆರಾಧಕರು. ಇವರ ಮೂಲ ಪುರುಷ ಬೆಂಕಿಯಲ್ಲಿ ಜನಿಸಿದನೆಂಬ ಪ್ರತೀತಿ ಇದೆ. ಆದ್ದರಿಂದಲೇ ಅಗ್ನಿ ಸಂಭವೆಯೂ ಪಾಂಡವರ ಪತ್ನಿಯೂ ಆದ ದ್ರೌಪದಿಯ ಹೆಸರಿನಲ್ಲೇ ಕರಗದ ಆಚರಣೆಯನ್ನು ಇವರು ನಡೆಸುತ್ತಾ ಬಂದಿದ್ದಾರೆ.

ವೀರ ಕುಮಾರರ ಶುಚಿತ್ವ

[ಬದಲಾಯಿಸಿ]

ಕರಗ ಹೊರುವ ವೀರ ಕುಮಾರರು ಎಲ್ಲ ಬಗೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಂಡಿರುತ್ತಾರೆ. ಹುಣ್ಣಿಮೆಗೆ ಒಂಭತ್ತು ದಿನ ಇರುವಾಗ ಕರಗದ ಧಾರ್ಮಿಕ ಆಚರಣೆಗಳು ಆರಂಭವಾಗುತ್ತವೆ. ಮೊದಲು ಧರ್ಮರಾಯನ ಮಂದಿರದ ಮುಂದೆ ದ್ವಜಾರೋಹಣ, ದೀಪಾರತಿ ಉತ್ಸವ, ಹಸಿ ಕರಗ, ಪೊಂಗಲು ಸೇವೆ, ಹೂವಿನ ಕರಗ, ವಸಂತೋತ್ಸವ, ಗಾವುಸೇವೆ ಇತ್ಯಾದಿಗಳು ನಡೆಯುತ್ತದೆ. ಈ ಎಲ್ಲ ವಿಧಿ ವಿಧಾನಗಳಲ್ಲಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ.

ಧಾರ್ಮಿಕ ವಿಧಿಗಳು

[ಬದಲಾಯಿಸಿ]

ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಅತ್ಯಂತ ವಿಧಿವತ್ತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದ ನಂತರ ನಡುರಾತ್ರಿಯ ವೇಳೆಗೆ ಕಳಸದ ಆಕೃತಿಯ ಮಲ್ಲಿಗೆ ಹೂವಿನ ಕರಗವನ್ನು ಮುಖ ಮುಚ್ಚುವಂತೆ ತಲೆಯ ಮೇಲೆ ಹೊತ್ತ ಪೂಜಾರಿ ನರ್ತಿಸುತ್ತಾ ಗುಡಿಯಿಂದ ಹೊರಬರುತ್ತಾರೆ. ಧಾರ್ಮಿಕವಾಗಿ ಇವರು ಸಾಕ್ಷಾತ್ ಆದಿಶಕ್ತಿಯ ರೂಪ. ಖಡ್ಗವನ್ನು ಹಿಡಿದ ವೀರಕುಮಾರರು ಗೋವಿಂದ... ಗೋವಿಂದ... ಗೋವಿಂದ ಎನ್ನುತ್ತಾ, ಡಿ. ಡಿ. ಡಿ. ಡಿ ಕ್. ಡಿ... ಎಂದು ಕೂಗಿ ಅಲಗು ಸೇವೆಯನ್ನು ಮಾಡುತ್ತ ಕರಗದ ಪೂಜಾರಿಯನ್ನು ಅನುಸರಿಸುತ್ತಾರೆ. ಆಧಿಶಕ್ತಿ ದುಷ್ಟಶಕ್ತಿಯನ್ನು ಸಂಹರಿಸಿದ ಸಂಕೇತವಾಗಿ ಕರಗ ಆಚರಣೆ ನಡೆಯುತ್ತದೆ.

ಧರ್ಮರಾಯನ ದೇವಸ್ಥಾನ

[ಬದಲಾಯಿಸಿ]

ಬೆಂಗಳೂರಿನ ಧರ್ಮರಾಯನ ದೇವಸ್ಥಾನ ಕರಗ ಮಹೋತ್ಸವದ ಕೇಂದ್ರ. ಈ ದೇವಾಲಯದ ನಿರ್ಮಾಣ ಯಾವಾಗ ಆಯಿತೆಂದು ಸ್ವಷ್ಟ ಆಧಾರಗಳಿಲ್ಲ. ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ ಕಾಲಕ್ಕಾಗಲೇ ಆ ದೇವಾಲಯ ಇತ್ತೆಂದು ಕೆಲವರು ಹೇಳಿದರೆ, ಕೆಲವರು ವಹ್ನಿಕುಲ ಕ್ಷತ್ರಿಯರು ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ನಿರ್ಮಾಣವಾಯಿತ್ತೆನ್ನುತ್ತಾರೆ. ನಂತರ ಮುಮ್ಮಡಿ ಕೃಷ್ಣರಾಜ ಒಡೆಯರು ಧರ್ಮರಾಯ ದೇವಾಸ್ಥಾನಕ್ಕೆ ಇನಾಂ ಜಮೀನುಗಳನ್ನು ಕೊಟ್ಟುದಕ್ಕೆ ದಾಖಲೆ ಇದೆ. ದೇವಾಲಯವು ವಿಶಾಲವಾದ ಅಂಗಳ, ಅಶ್ವತ್ಥಕಟ್ಟೆ, ವಿಸ್ತಾರವಾದ ಕಂಬಗಳು ತೂಗು ಉಯ್ಯಾಲೆಗಳಿಂದ ಕೂಡಿ ಆಕರ್ಷಕವಾಗಿದೆ. ದ್ರಾವಿಡ ಶೈಲಿಯ ಮೂರು ಸಚಿತ್ರ ಗೋಪುರಗಳಿವೆ. ಮಹಾದ್ವಾರದ ಮೂಲಕ ಒಳಗೆ ಪ್ರವೇಶಿಸಿದರೆ ಮುಖ್ಯ ಮಂಟಪದ ಎರಡು ಕಡೆಗಳಲ್ಲಿ ಕಲ್ಲಿನ ಆನೆಯ ಸುಂದರಾಕೃತಿಗಳಿವೆ. ಮೂದಲಾರ್ಧ ಭಾಗದ ಮಂಟಪ ಭದ್ರವಾದ ಕೆತ್ತನೆಯ ಶಿಲಾ ಸ್ತಂಭಗಳ ಮೇಲೆ ನಿಂತಿದೆ. ಉಳಿದರ್ಧ ಭಾಗ ಗರ್ಭಗುಡಿ. ಈ ದೇವಾಲಯದ ಗರ್ಭಗುಡಿಯೊಳಗೆ ಪ್ರೇಕ್ಷಕರ ಎಡಭಾಗಕ್ಕೆ ಧರ್ಮರಾಯಸ್ವಾಮಿ, ಬಲಭಾಗಕ್ಕೆ ಶ್ರೀಕೃಷ್ಣನ ವಿಗ್ರಹಗಳಿವೆ. ಇವೆರಡರ ಮುಂಭಾಗದಲ್ಲಿ ದಿವ್ಯಶಕ್ತಿಯ ಪೀಠವಿದೆ. ಈ ಪೀಠದ ಮೇಲೆಯೇ ಹಸೀಕರಗವನ್ನು ಅಲಂಕರಿಸಿ ಅರ್ಚಿಸುವುದು. ಇದರ ಜತೆಗೆ ಅರ್ಜುನ, ದ್ರೌಪದಿ, ಭೀಮಸೇನರ ಸುಂದರ ಮೂರ್ತಿಗಳಿವೆ. ಬೆಂಗಳೂರು ಕರಗ ಒಂಬತ್ತು ದಿನಗಳ ಸಮಾರಂಭ. ಹೊಸವರ್ಷದ ಯುಗಾದಿ ಹಬ್ಬದ ಆನಂತರ ಸಪ್ತಮಿ ಅಥವಾ ಅಷ್ಟಮಿಯಂದು ದ್ವಜಾರೋಹಣದಿಂದ ಆರಂಭವಾಗಿ ಬಿದಿಗೆಯಂದಿನ ಧ್ವಜಾರೋಹಣದವರೆಗೆ ವಿವಿಧ ಕಾರ್ಯಕ್ರಮವಿರುತ್ತವೆ. ಇವುಗಳಲ್ಲಿ ದ್ವಾದಶಿಯಂದು ನಡೆಯುವ ಸಮುದಾಯದ ಆರತಿ, ತ್ರಯೋದಶಿಯಂದು ಹಸೀಕರಗದ ರಚನೆ ಮತ್ತು ಸ್ಥಾಪನೆ, ಚತುರ್ದಶಿಯಂದು ಪೊಂಗಲುಸೇವೆ ಮತ್ತು ಪೂರ್ಣಿಮೆಯಂದು ನಡೆಯುವ ಕರಗದ ಉತ್ಸವ ಪ್ರಮುಖ ಕಾರ್ಯಕ್ರಮಗಳಾಗಿವೆ.

ಮೆರವಣಿಗೆ

[ಬದಲಾಯಿಸಿ]

ಬೆಂಗಳೂರಿನ ತಿಗಳರ ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ಇತ್ಯಾದಿ ದೇವಸ್ಥಾನಗಳಲ್ಲಿ ಕರಗಧಾರಿಗಳು ಸಂಚರಿಸಿ ಸೂರ್ಯೋದಯದ ವೇಳೆಗೆ ಧರ್ಮರಾಯಸ್ವಾಮಿ ಗುಡಿಗೆ ಬರುತ್ತಾರೆ. ಇಲ್ಲಿಯ ಒಂದು ವಿಶೇಷವೆಂದರೆ ಭಾವೈಕ್ಯದ ಸಂಕೇತವೆಂಬಂತೆ ಕರಗದಾರಿಗಳು ಮೊದಲು ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪಾರತಿ ಸ್ವೀಕರಿಸಿ ನಂತರ ನಗರದ ಪ್ರದಕ್ಷಿಣೆ ಹೊರಡುತ್ತಾರೆ. ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ, ತಳಿರು ತೋರಣಗಳಿಂದ ಅಲಂಕೃತಗೊಂಡಿರುತ್ತದೆ. ಕರಗವನ್ನು ಸಾವಿರಾರು ಜನ ರಾತ್ರಿ ಇಡೀ ರಸ್ತೆಯ ಇಕ್ಕೆಲ ಗಳಲ್ಲಿ ನಿಂತು ನೋಡುತ್ತಾರೆ. ಬೆಂಗಳೂರಲ್ಲದೇ ವಹ್ನಿಕುಲಸ್ಥಿರಿರುವ ಎಲ್ಲಾ ಪ್ರದೇಶಗಳಲ್ಲಿ ಕರಗ ಮಹೋತ್ಸವ ನಡೆಯುತ್ತವೆ.[]

ಕರಗ ವಿಧಗಳು

[ಬದಲಾಯಿಸಿ]

ಒನಕೆ ಕರಗ

[ಬದಲಾಯಿಸಿ]

ಇದೊಂದು ಚಮತ್ಕಾರಯುತ ಕಲೆ. ಸುಮಾರು ೫-೬ ಅಡಿ ಉದ್ದದ ಒನಕೆಯ ಒಂದು ತುದಿಗೆ, ಸೈಕಲ್ಲು ಚಕ್ರವನ್ನು ಅಡ್ಡಲಾಗಿ ಕಟ್ಟಿ ಅದರ ಸುತ್ತ ಹೂವಿನ ಹಾರಗಳಿಂದ ಅಲಂಕಾರ ಮಾಡಿರುತ್ತಾರೆ. ಒನಕೆಯ ಮತ್ತೊಂದು ತುದಿಯನ್ನು ಶಿರದ ಮಧ್ಯದಲ್ಲಿ ನಿಲ್ಲಿಸಿಕೊಂಡು ವಾದ್ಯದ ಗತ್ತಿಗನುಗುಣವಾಗಿ ಗೆಜ್ಜೆಯ ಕಾಲಿನ ತಾಳದೊಂದಿಗೆ ಲಯಬದ್ಧವಾಗಿ ಕುಣಿಯುವ ಈ ಕಲೆಯಲ್ಲಿ ಬಹು ಮುಖ್ಯವಾದ ಅಂಶವೆಂದರೆ ಒನಕೆಯ ವಾಸರವನ್ನು ತಿದ್ದಿಕೊಳ್ಳುವುದು. ಕುಣಿಯುವ ವ್ಯಕ್ತಿ ಕೆಂಪುಬಟ್ಟೆಯ ವೀರಗಾಸೆ, ಸೊಂಟಕ್ಕೆ ನಡುಪಟ್ಟಿ, ಕೊರಳಿಗೆ ಹಾರ, ಹಣೆಗೆ ಗಂಧ, ಕುಂಕುಮ, ಕಾಲಿಗೆ ಗೆಜ್ಜೆ ಧರಿಸಿರುತ್ತಾನೆ. ಕುಣಿತ ಪರಾಕಾಷ್ಠೆಗೆ ಮುಟ್ಟಿದಾಗ ಎರಡೂ ಕೈಗಳನ್ನು ಬಿಟ್ಟು ಮೈ ಮರೆತವರಂತೆ ಕುಣಿಯುವಾಗಲೂ ಒನಕೆಯ ವಾಸರದ ಕಡೆ ಗಮನವಿಟ್ಟಿರುವ ಕಲಾವಿದನ ಚಮತ್ಕಾರವನ್ನು ಯಾರಾದರೂ ಮೆಚ್ಚಬೇಕು.

ಚೊಂಬಿನ ಕರಗ

[ಬದಲಾಯಿಸಿ]

ಹೂವು, ಕುಂಕುಮಗಳಿಂದ ಸಂಪೂರ್ಣವಾಗಿ ಅಲಂಕೃತವಾದ ದುಂಡನೆಯ ಚೊಂಬನ್ನು ಸಿಂಬೆಯಿಲ್ಲದೆ ತಲೆಯ ಮೇಲಿಟ್ಟುಕೊಂಡು ವಿವಿಧ ಗತಿ-ಗತ್ತುಗಳಲ್ಲಿ ವಾದ್ಯದ ಲಯಕ್ಕೆ ತಕ್ಕಂತೆ ಬಾಗಿ-ತೂಗಿ, ಬಳುಕಿ ಮಂಡಿಯೂರಿ ಕುಣಿಯುವ ನೈಪುಣ್ಯ ನೋಡುವವರನ್ನು ಬೆರಗುಗೊಳಿಸದಿರದು. ಕುಣಿಯವವರು ಹಾಕುವ ಮುಖದ ಬ;ಣ್ಣ, ಬಣ್ಣ ಬಣ್ಣದ ಬಟ್ಟೆಯುಡಿಗೆ ಕುಣಿತಕ್ಕೆ ಮತ್ತಷ್ಟು ಆಕರ್ಷಣೆಯಾಗುತ್ತದೆ. ಚೊಂಬಿನ ಕರಗಕ್ಕೆ ಸಾಮಾನ್ಯವಾಗಿ ಸ್ತ್ರೀ ಕಲಾವಿದರೇ ಇರುತ್ತಾರೆ.

ಚಿತ್ತಗೋಪುರ ಕರಗ

[ಬದಲಾಯಿಸಿ]

ಗೋಪುರಾಕಾರವಾಗಿ ಹೆಣೆದ ಬುಟ್ಟಿಗೆ ಹೂವಿನಿಂದ ಅಲ;ಂಕಾರವನ್ನು ಮಾಡಿ ತಲೆಯ ಮೇಲಿಟ್ಟುಕೊಂಡು ವಿವಿಧ ಭಾವ-ಭಂಗಿಗಳಲ್ಲಿ ಕುಣಿಯುವುದು. ಕರಗದ ಯಾವುದೇ ಪ್ರಕಾರವಿರಲಿ ಅಲ್ಲಿ ಅಲಂಕಾರ ಮತ್ತು ಕುಣಿಯುವಾಗ ತೋರುವ ವೈವಿಧ್ಯಪೂರ್ಣ ಚಲನವಲನಗಳು ಕಲಾವಿದರ ನೈಪುಣ್ಯತೆಗೆ ನಿದರ್ಶನವಾಗಿರುತ್ತವೆ. ಕರ್ನಾಟಕದಲ್ಲಿ ಈ ಕಲೆ ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಕೆಲವು ಕಡೆ ಪ್ರಚಲಿತವಿದೆ. ಆದರೆ ಮೂಲ ಸೊಗಸನ್ನು ಕಾಪಾಡಿಕೊಂಡು ಧಾರ್ಮಿಕ ಸಂಬಂಧವನ್ನುಳಿಸಿಕೊಂಡು ಬಂದಿರುವ ಕರಗವೆಂದರೆ ಬೆಂಗಳೂರು ಕರಗ.

ಪಟದ ಕುಣಿತ

[ಬದಲಾಯಿಸಿ]

ವೈಷ್ಣವ ಸಂಪ್ರದಾಯದ ಕುಣಿತಗಳಲ್ಲಿ ಒಂದೆಂದು ಹೇಳಲಾಗುವ `ಪಟದ ಕುಣಿತ’ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಂಡುಬರುತ್ತದೆ. ಕುಣಿತದ ರೀತಿ ಸುಗ್ಗಿಯ ಕುಣಿತದಂತಿದ್ದರೂ ಕಲಾವಿದರು ಕೈಯಲ್ಲಿ ಹಿಡಿಯುವ `ಪಟ’ಗಳಿಂದಾಗಿ ಈ ಕಲೆ ವಿಶಿಷ್ಟವೆನಿಸಿದೆ. ಸುಮಾರು ಹತ್ತು ಹದಿನೈದು ಅಡಿ ಉದ್ದದ ಬಿದಿರಿನ ಜವಳೆ (ಕೋಲು)ಗಳಿಗೆ ಬಣ್ಣ ಬಣ್ಣದ ರೇಷ್ಮೆ ಜಾಲರಿ ಬಟ್ಟೆಯ ಪಟ್ಟಿಗಳನ್ನು ಸುತ್ತಿ ಅಲಂಕಾರ ಮಾಡುವುದೇ `ಪಟ’. ಇದರ ತುದಿಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ಛತ್ರಿ ಅಳವಡಿಸಿರುವುದು ಪಟಕ್ಕೆ ಒಂದು ಕಳೆ ಕೊಡುತ್ತದೆ. ಸಾಮಾನ್ಯವಾಗಿ ಒಕ್ಕಲಿಗರಲ್ಲಿ ಪ್ರಚಲಿತವಿರುವ ಪಟದ ಕುಣಿತ ನಡೆಯುವುದು ಹಬ್ಬ ಹರಿದಿನಗಳಲ್ಲಿ, ಜಾತ್ರೆ ಉತ್ಸವಗಳಲ್ಲಿ. ತಮಟೆ, ನಗಾರಿಗಳ ಬಡಿತ ಪಟದ ಕುಣಿತಕ್ಕೆ ಹಿನ್ನಲೆ ವಾದ್ಯ. ಬಿಳಿಯ ಕಾಸೆಪಂಚೆ, ಬಿಳಿಯ ನಿಲುವಂಗಿ, ಬಿಳಿಯ ರುಮಾಲು, ಸೊಂಟಕ್ಕೆ ಬಿಗಿದ ಬಣ್ಣದ ವಸ್ತ್ರ, ಕೊರಳಿಗೆ ಮಣಿಸರ, ಒಂದು ಕೈಯಲ್ಲಿ ಬಿಳಿಯ ಚೌಕ, ಕಾಲಿಗೆ ಗೆಜ್ಜೆ – ಇವು ಕಲಾವಿದರ ವೇಷಭೂಷಣ.

ಧರ್ಮರಾಯನ ಕರಗ

[ಬದಲಾಯಿಸಿ]

ಚಿತ್ರಗೊಪುರ ಕರಗ

[ಬದಲಾಯಿಸಿ]

ಹೂವಿನ ಕರಗ

[ಬದಲಾಯಿಸಿ]

ಹಸೀಕರಗ

[ಬದಲಾಯಿಸಿ]

ಚೈತ್ರ ಶುದ್ಧ ತ್ರಯೋದಶೀಯದ ದಿವಸ ಧರ್ಮರಾಯಸ್ವಾಮಿ ದೇವಾಲಯದ ಪೂರ್ವಕ್ಕೆ ಸ್ವಲ್ಪ ದೂರದಲ್ಲಿರುವ ಸಂಪಂಗಿ ಕೆರೆಯ ಅಂಗಳದಲ್ಲಿ ನಡುರಾತ್ರಿಯ ಹೊತ್ತಿಗೆ ಪೂಜಾರಿ, ಕುಲಪುರೋಹಿತರು, ವೀರಕುಮಾರರು ಮತ್ತು ಕುಲಸ್ಥರು ಸೇರುವರು. ಅಲ್ಲಿ ಒಂದೆಡೆ ಸ್ಥಳ ಶುದ್ಧಿಮಾಡಿ ಕೆಂಪು ಬಣ್ಣದ ಛತ್ರಿಯನ್ನು ನೆಡುವರು. ಹಿಂದಿನ ಏಳು ದಿನಗಳಿಂದ ವ್ರತ ನಿರತರಾಗಿದ್ದ ವೀರಕುಮಾರರು ಹೊಳೆಯುವ ಹರಿತವಾದ ಶಕ್ತಿಗಳನ್ನು ಅರ್ಧ ಚಂದ್ರಾಕಾರವಾಗಿ ಜೋಡಿಸುವರು. ಇವರು ಕರಗ ದೇವತೆಯ ಹೆಸರಿನಲ್ಲಿ ತಮ್ಮ ಕುಲ ಪುರೋಹಿತರು ಮತ್ತು ಹಿರಿಯರ ಸಮ್ಮುಖದಲ್ಲಿ ದೀಕ್ಷೆ ಕೈಗೊಂಡವರು, ದೇವಿಯ ಆರಾಧನೆಯಲ್ಲಿ ಅಚಲವಾದ ಶ್ರದ್ಧೆ ಭಕ್ತಿಯನ್ನು ಇಟ್ಟಿರುವ ಇವರು ಕರಗಕ್ಕೆ ಅಂಗ ರಕ್ಷಕರು. ಭಕ್ತಿ ದ್ಯೋತಕವಾಗಿ ಕೈಯಲ್ಲಿರುವ ಅಲರುಗಳಿಂದ ಎದೆಯ ಮೇಲೆ ಇವರು ಪ್ರಹಾರ ಮಾಡಿಕೊಳ್ಳುತ್ತಾರೆ. ಆಗ ರಕ್ತ ಬಂದರೆ ಔಷಧಿಯ ಬದಲಾಗಿ ದೇವಿಯ ಬಂಡಾರವನ್ನು ಗಾಯದ ಮೇಲೆ ಹಾಕಿಕೊಳ್ಳುತ್ತಾರೆ. ಆನಂತರ ಕುಲಪುರೋಹಿತರ ನಿರ್ದೇಶನ ಮತ್ತು ಕುಲವೃದ್ಧರ ನೇತೃತ್ವದಲ್ಲಿ ರಾತ್ರಿ ಸುಮಾರು ಮೂರುಗಂಟೆಯ ಹೊತ್ತಿಗೆ ಹಸೀಕರಗ ಸಿದ್ಧವಾಗಿರುತ್ತದೆ. ಕೆಂಪು ಛತ್ರಿಯ ಕೆಳಗೆ, ಅರ್ಧ ಚಂದ್ರಾಕಾರವಾಗಿ ಜೋಡಿಸಿದ ಕತ್ತಿಗಳ ಮಧ್ಯೆ ಜಲ ತುಂಬಿದ ಕರಗವನ್ನು ಕೆಂಪು ವಸ್ತ್ರ, ದುಂಡು ಮಲ್ಲಿಗೆಹಾರ, ಅರಿಶಿಣ-ಕುಂಕುಮ ಮುಂತಾದ ಮಂಗಳ ದ್ರವ್ಯಗಳಿಂದ ಅಲಂಕರಿಸಿ ಪೂಜೆಗೆ ಅಣಿ ಮಾಡಲಾಗುತ್ತದೆ. ಈ ವೇಳೆಗಾಗಲೇ ಕರಗದ ಪೂಜಾರಿಯನ್ನು ಮಲ್ಲಿಗೆ ಹೂವಿನಿಂದ ಸಿಂಗರಿಸಿರುತ್ತಾರೆ. ಪೂಜಾರಿ ಮಹಾ ಮಂಗಳಾರತಿ ಮಾಡುತ್ತಾನೆ. ದೇವಿಯ ಸೇವೆಗಾಗಿ ನಿಂತಿರುವ ವೀರಕುಮಾರರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ಆವೇಶ ತುಂಬಿಕೊಂಡು ಎದೆಯ ಮೇಲೆ ಪ್ರಹಾರ ಮಾಡಿಕೊಳ್ಳುತ್ತಾರೆ.

ಸುತ್ತುವರೆದ ವೀರಕುಮಾರರ ನಡುವೆ ಪೂಜಾರಿ ಭಕ್ತಿಯಿಂದ ಕರಗವನ್ನು ಎತ್ತಿಕೊಂಡು, ತನ್ನ ಸೊಂಟದ ಎಡಭಾಗದಲ್ಲಿ ಗಡಿಗೆ ಇಟ್ಟುಕೊಳ್ಳುವಂತೆ ಇಟ್ಟುಕೊಳ್ಳುತ್ತಾನೆ. ಪೂಜಾರಿ ನರ್ತನ ಮಾಡುತ್ತಾ ಮುಂದುವರೆಯುತ್ತಾನೆ. ಘಂಟೆ ಪೂಜಾರಿ ಮಾರ್ಗದರ್ಶನ ಮಾಡುತ್ತಿರುತ್ತಾನೆ. ಈ ಮಹೋತ್ಸವದಲ್ಲಿ ಘಂಟೆ ಪೂಜಾರಿಯ ಪಾತ್ರ ಮುಖ್ಯವಾದದ್ದು. ಕರಗ ಹೊರಟಾಗ ಈತ ತಾಳಬದ್ಧವಾಗಿ ಘಂಟೆಯ ನಾದ ಮಾಡುತ್ತಾ, ದೇವಿಯ ಮಹಿಮೆಯನ್ನು ಹೊಗಳುತ್ತಾ ಕರಗಕ್ಕೆ ಮಾರ್ಗದರ್ಶನ ಮಾಡುತ್ತಾ ಮುಂದುವರೆಯುತ್ತಾನೆ. ಈ ಹಕ್ಕು ಪೂಜಾರಿಯ ಹಕ್ಕಿನಂತೆ ವಂಶಪಾರಂಪರ್ಯವಾಗಿ ಬಂದಿದೆ. ಮಧ್ಯೆ ಕೆಲವೆಡೆ ಪೂಜಾರಿ ಮಂಡಿಯೂರಿ ಕುಳಿತಾಗ ಅಲಗು ಸೇವೆ ನಡೆಯುತ್ತದೆ. ಹೀಗೆ ಮುಂದುವರೆದ ಹಸೀಕರಗ ನಗರಸಭೆ ಕಛೇರಿಯ ಉತ್ತರ ಭಾಗದಲ್ಲಿರುವ ಏಳು ಸುತ್ತಿನ ಕೋಟೆಯ ಸಂಕೇತದಲ್ಲಿರುವ ದೊಡ್ಡ ಹುತ್ತವನ್ನು ಏಳು ಅಥವಾ ಒಂಬತ್ತು ಸಲ ಪ್ರದಕ್ಷಿಣೆ ಮಾಡಿ ದೇವಾಲಯದ ಅಭಿಮುಖವಾಗಿ ಬಂದು ದೇವಾಸ್ಥಾನ ಮತ್ತು ಹೊರಾಂಗಣದಲ್ಲಿ ಸಿದ್ಧವಾಗಿರುವ ರಥವನ್ನು ಪ್ರದಕ್ಷಿಣೆ ಮಾಡಿ ನರ್ತನ ಮಾಡುತ್ತದೆ. ಮಾರನೆಯ ದಿನ ಚತುರ್ದಶಿ. ಅಂದು ರಾತ್ರಿ ದೇವಾಲಯದಲ್ಲಿ ಮಹಾಭಾರತ ಪ್ರವಚನ, ಸೂರ್ಯೋದಯದ ವೇಳೆಗೆ ಪೊಂಗಲು ಸೇವೆಯನ್ನೊಳಗೊಂಡು ಹಲವು ಕಾರ್ಯಗಳಿರುತ್ತವೆ.

ಹೆಗಲಿಗೆ ಅಡ್ಡಲಾಗಿ ಇಳಿಬಿಟ್ಟುಕೊಂಡ ಗಟ್ಟಿ ಬಟ್ಟೆಯ `ನವಾರ’ದಲ್ಲಿ ಸಿಕ್ಕಿಸಿದ ಪಟದ ಕೋಲನ್ನು ಬಲಗೈಯಲ್ಲಿ ಹಿಡಿದುಕೊಂಡ ಕಲಾವಿದರು ವಾದ್ಯದ ಗತ್ತಿಗೆ ಅನುಗುಣವಾಗಿ ವಿವಿಧ ಭಂಗಿಗಳಲ್ಲಿ ಕುಣಿಯುತ್ತಾರೆ. ಕುಣಿತಕ್ಕೆ ಇಷ್ಟೇ ಜನರಿರಬೇಕೆಂಬ ನಿಯಮವಿಲ್ಲದಿದ್ದರೂ ಹತ್ತು ಹನ್ನೆರಡಕ್ಕಿಂತ ಹೆಚ್ಚು ಜನರಿದ್ದರೇ ನೋಡಲು ಚೆಂದ. ಕುಣಿಯುವಾಗ ಪಟದ ಜವಳಿಗಳು ಅತ್ತಿತ್ತ ಬಾಗುವಾಗ ಅವಕ್ಕೆ ಸುತ್ತಿದ್ದ ಬಟ್ಟೆಯ ಜಾಲರಿಗಳ ಚಲ್ಲಾಟದ ದೃಶ್ಯ ಮನಮೋಹಕ. ಪಟದ ಸೊಬಗನ್ನು ಹೆಚ್ಚಿಸಲು ತುದಿಯಲ್ಲಿ ರೇಷ್ಮೆ ಗೊಂಡೇವುಗಳನ್ನು ಕಟ್ಟಿರುವುದುಂಟು.

ಕುಣಿತದಲ್ಲಿ ಗೆಜ್ಜೆ ಕುಣಿತ, ಎರಡ್ಹೆಜ್ಜೆ, ಮೂರು ಹೆಜ್ಜೆ ಮೊದಲಾದ ವಿಧಗಳಿವೆ. ಸಾಮಾನ್ಯವಾಗಿ ಒಂಟಿ ಸಾಲಿನಲ್ಲಿ ಕುಣಿತ ನಡೆಯುತ್ತದೆ. ಒಮ್ಮೊಮ್ಮೆ ಕಲಾವಿದರು ಎರಡು ಸಾಲಾಗಿ ಪರಸ್ಪರ ಎದುರು ನಿಂತು, ಒಮ್ಮೊಮ್ಮೆ ವೃತ್ತಾಕಾರದಲ್ಲಿ ಚಲಿಸುತ್ತಾ ಪಟದ ಜವಳಿಗಳನ್ನು ಹಿಂದಕ್ಕೆ ಮುಂದಕ್ಕೆ ಬಾಗಿಸಿ ಕುಣಿಯುವ ವಿಧಾನವಂತೂ ಕಣ್ಣಿಗೆ ಹಬ್ಬ. ಕುಣಿತದ ಗತ್ತು, ವಿನ್ಯಾಸಗಳನ್ನು ನೋಡಿದರೆ ವಿಜಯದ ಸಂಭ್ರಮ ಸಡಗರಗಳ ಸಂಕೇತವೆಂಬುದು ಸ್ಪಷ್ಟವಾಗುತ್ತದೆ, ಕೆಲವು ಕಡೆ ಭಾಗವಂತಿಕೆಯ ಜೊತೆಯಲ್ಲಿ ಪಟದ ಕುಣಿತ ನಡೆಯುವುದುಂಟ. ಮಂಡ್ಯ ಜಿಲ್ಲೆಯ ಕೆಲವು ಕಡೆ ದೀವಳಿಗೆ ತಿಂಗಳಲ್ಲಿ ಮಾತ್ರ ಪಟ ಮುಟ್ಟುವ ಸಂಪ್ರದಾಯವಿದೆ ಎಂದು ಹೇಳುತ್ತಾರೆ.[]

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]