ಕಲ್ಲುಬಾಳೆ ಔಷಧೀಯ ಗುಣ ಹೊಂದಿರುವ ಎನ್ಸೆಟೆ ಜಾತಿಗೆ ಸೇರಿದ ಸಸ್ಯ. ಬಾಳೆ ಗಿಡದ ಕುಟುಂಬದಲ್ಲಿ ಮೂಸ,ಎನ್ಸೆಟೆ ಮತ್ತು ಮುಸೆಲ್ಲಾ ಎಂಬ ಮೂರು ವರ್ಗಗಳಿವೆ. ಕಲ್ಲುಬಾಳೆಯು ಬೀಜದಿಂದ ಕೂಡಿರುತ್ತದೆ. ಇದರ ಕಾಂಡಗಳು ಒರಟಾಗಿ ದಪ್ಪವಿರುತ್ತವೆ. ಕಲ್ಲು ಬಾಳೆಗಳಲ್ಲಿ ಸುಮಾರು ೭ ಉಪಜಾತಿಗಳಿವೆ. ಇವು ಏಷ್ಯಾ ಮತ್ತು ಆಫ್ರಿಕಾದ ಉಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.[೧]
ಕಲ್ಲುಬಾಳೆಗಳ ಕಾಂಡ ದಪ್ಪವಿದ್ದು ಒರಟಾಗಿರುತ್ತದೆ. ಇವುಗಳ ಎಲೆಯು ಸಾಮಾನ್ಯವಾಗಿ ೧೦ ಅಡಿಗಳಿಗಿಂತಲೂ ಹೆಚ್ಚು ಉದ್ದವಾಗಿ ಬೆಳೆಯುತ್ತವೆ. ಇದರ ಹೂವುಗಳು ಕೂಡ ದೊಡ್ಡ ಗಾತ್ರದಲ್ಲಿರುತ್ತದೆ. ಇದರ ಹಣ್ಣುಗಳ ಒಳಗೆ ಕಲ್ಲುಗಳಂತೆ ಕಪ್ಪು ಬಣ್ಣದ ಬೀಜಗಳಿರುತ್ತವೆ. ಇದರ ಹಣ್ಣುಗಳು ಸಿಹಿಯೊಂದಿಗೆ ಸ್ವಲ್ಪ ಕಹಿಯಾಗಿರುತ್ತದೆ. ಹೆಚ್ಚಾಗಿ ಈ ಬಾಳೆಗಳು ಹಾಸಿದಂತಿರುವ ಕಲ್ಲುಗಳ (ಪಾರೆಕಲ್ಲು) ನಡುವೆ ಬೆಳೆಯುತ್ತವೆ. ಕಲ್ಲುಬಾಳೆಗಳಿಗೆ ಬೆಳವಣಿಗೆಗೆ ಹೆಚ್ಚಿನ ನೀರಿನಾಂಶದ ಅಗತ್ಯವಿಲ್ಲ. ಇವುಗಳು ಸುಮಾರು ೪ ವರ್ಷದ ವರೆಗೆ ಬೆಳೆಯುತ್ತವೆ.[೨][೩]
ಆಫ್ರಿಕಾ ಮತ್ತು ಏಷ್ಯಾದಲ್ಲಿ ಕಲ್ಲುಬಾಳೆಗಳು ಹೆಚ್ಚಾಗಿ ಬೆಳೆಯುತ್ತವೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿಯೂ ಇವುಗಳು ಹೇರಳವಾಗಿ ಬೆಳೆಯುತ್ತವೆ. ಕೀನ್ಯಾ, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ಹಾಗೂ ಉಗಾಂಡದಲ್ಲಿಯೂ ಇದು ಬೆಳೆಯುತ್ತವೆ.
ವಿನಾಶದಂಚಿನಲ್ಲಿರುವ ಕಲ್ಲುಬಾಳೆಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆಯಿದೆ. ಇದರ ನೀರಿನಲ್ಲಿ ಹಾಕಿ ಇದರಿಂದ ಕಲ್ಲುಗಳಂತಿರುವ ಬೀಜಗಳನ್ನು ಬೇರ್ಪಡಿಸುತ್ತಾರೆ. ಬೀಜಗಳನ್ನು ಜಜ್ಜಿ ರಸ ತೆಗೆದು ಕಷಾಯ ತಯಾರಿಸುತ್ತಾರೆ. ಇದನ್ನು ಮೂತ್ರ ಪಿಂಡದ ಕಲ್ಲು ನಿವಾರಿಸಲು ಬಳಸುತ್ತಾರೆ. ಕಲ್ಲುಬಾಳೆಯ ಬೇರನ್ನು ಹಲ್ಲು ನೋವಿನ ಉಪಶಮನಕ್ಕೆ ಬಳಸುತ್ತಾರೆ. ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಕಲ್ಲು ಬಾಳೆಯ ಉಪಯೋಗವನ್ನು ಮಾಡುತ್ತಾರೆ.[೪][೫]