ಮೂಲಭೂತವಾಗಿ ಒಂದು ಉತ್ಪಾದನ ಕೇಂದ್ರ ಅಥವಾ ಕೈಗಾರಿಕಾ ಕೇಂದ್ರದಲ್ಲಿ ಜಾರಿಯಲ್ಲಿರುವ ಪ್ರಜಾಪ್ರಭುತ್ವ-ಎಂಬುದು ಕೈಗಾರಿಕಾ ಪ್ರಜಾಪ್ರಭುತ್ವದ ಸೀಮಿತ ಅರ್ಥವಾದರೂ ಇದೊಂದು ರಚನಾತ್ಮಕ ತತ್ವ್ತ. ಏಕೆಂದರೆ, ಒಂದು ಕೈಗಾರಿಕಾ ಕ್ಷೇತ್ರದ ಆಡಳಿತದಲ್ಲಿ ಉದ್ಭವಿಸ ಬಹುದಾದ ಸಮಸ್ಯೆಗಳನ್ನು ಇಕ್ಕಟ್ಟು-ಬಿಕ್ಕಟ್ಟುಗಳನ್ನು ಬಗೆಹರಿಸಲು ಇದು ಸರ್ವಸಮ್ಮತವಾದ ಮಾರ್ಗವನ್ನು ಒದಗಿಸುತ್ತದೆ. ಆರ್ಥಿಕ ಪ್ರಜಾಪ್ರಭುತ್ವಕ್ಕೆ ಇದು ಬುನಾದಿ. ಇದೊಂದು ಸೂಕ್ಷ್ಮ ಪ್ರಜಾಪ್ರಭುತ್ವ. ರಾಜಕೀಯ ಸಮಾಜದ ಬದಲು ಆರ್ಥಿಕ ಸಮಾಜದ ನಿರ್ಮಾಣ ಮಾಡಬೇಕೆಂಬ ಗ್ರೀಕ್ ಸೂತ್ರದ ಅನ್ವಯವಿದು. ಇದು ಕಾರ್ಮಿಕ ಸ್ವರಾಜ್ಯ. ಪ್ರತಿಯೊಂದು ಕೈಗಾರಿಕೋದ್ಯಮದಲ್ಲೂ ಕಾರ್ಮಿಕರ ನೇರಸ್ವರಾಜ್ಯ. ಇದರ ತಳಹದಿಯ ಮೇಲೆ ರಾಷ್ಟ್ರದ ಮಟ್ಟದಲ್ಲಿ ಕ್ರಿಯಾತ್ಮಕ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂಬುದು ಪರಮಗುರಿ. ಉದ್ಯೋಗಾನುಗುಣ ಪ್ರಾತಿನಿಧ್ಯದ ತಳಹದಿಯ ಮೇಲೆ ರಚಿತವಾದ ರಾಜಕೀಯ ವ್ಯವಸ್ಥೆಯಿದು. ಆದರೆ ಆಚರಣೆಯಲ್ಲಿ ಪ್ರಾಥಮಿಕ ಹಂತದಲ್ಲಿ ಮಾತ್ರ ಕೈಗಾರಿಕಾ ಪ್ರಜಾಪ್ರಭುತ್ವದ ಆದರ್ಶ ಜಾರಿಗೆ ಬಂದಿದೆ. ಕೈಗಾರಿಕೆಗಳ ನಿರ್ವಹಣೆಯಲ್ಲಿ ಕೆಲಸಗಾರರು ಭಾಗವಹಿಸುವಷ್ಟಕ್ಕೆ ಮಾತ್ರ ಸೀಮಿತವಾಗಿದೆ. ಜರ್ಮನಿ, ಆಸ್ಟ್ರಿಯಗಳಲ್ಲಿ ರೂಢಿಯಲ್ಲಿರುವ ಸಹ-ನಿರ್ಣಯ (ಕೋ-ಡಿಟರ್ಮಿನೇಷನ್) ಪದ್ಧತಿ, ಯೂಗೊಸ್ಲಾವಿಯದಲ್ಲಿರುವ ಕಾರ್ಮಿಕ ಮಂಡಳಿಗಳು, ಇತರ ಹಲವು ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಕಾರ್ಮಿಕ-ಮಾಲೀಕ ಜಂಟಿ ಸಮಾಲೋಚನಾ ವ್ಯವಸ್ಥೆ-ಇವು ಉದಾಹರಣೆಗಳು.[೧]
ಇಂಗ್ಲೆಂಡ್ ಮತ್ತು ಭಾರತದಲ್ಲಿ ಹ್ವಿಟ್ಲಿ ಮಂಡಲಿಗಳು(ಕಾರ್ಮಿಕರ ಮತ್ತು ಉದ್ಯಮಗಳ ಪ್ರತಿನಿಧಿಗಳ ಸಂಯುಕ್ತ ಮಂಡಲಿಗಳು) ಈ ತತ್ತ್ವದ ತಳಹದಿಯ ಮೇಲೆ ಕೆಲಸಮಾಡುತ್ತಿವೆ. ಸಂಬಂಧಪಟ್ಟ ಎಲ್ಲರೂ ಅವುಗಳ ನಿರ್ಣಯಗಳಿಗೆ ಬಾಧ್ಯರಾಗಿರುತ್ತಾರೆ. ಉಭಯಪಕ್ಷಗಳ ಪ್ರತಿನಿಧಿಗಳು ಸಮಾನತೆಯ ತತ್ವ್ತದ ಮೇಲೆ ಒಟ್ಟಿಗೆ ಕುಳಿತು ತಮಗೆ ಸಂಬಂಧಿಸಿದ ಸಮಸ್ಯೆಗಳನ್ನೆಲ್ಲ ಚರ್ಚೆ ಹಾಗೂ ಬಹುಮತದ ನಿರ್ಣಯಗಳ ಮೂಲಕ ಬಗೆಹರಿಸುವ ಪದ್ಧತಿಯನ್ನೇ ಕೈಗಾರಿಕಾ ಪ್ರಜಾಪ್ರಭುತ್ವವೆಂದು ಕರೆಯಲಾಗುತ್ತಿದೆ. ಜರ್ಮನಿಯಲ್ಲಿ ಪ್ರಚಲಿತವಿರುವ ಸಹನಿರ್ಣಯ ಪದ್ಧತಿಯನ್ನು ಪ್ರಯೋಗಾರ್ಥವಾಗಿ ಕಲ್ಲಿದ್ದಲು ಮತ್ತು ಉಕ್ಕು ಕೈಗಾರಿಕೆಗಳಿಗೆ ಮಾತ್ರ ಅನ್ವಯಿಸಲಾಗಿದೆ. ಈ ಪದ್ಧತಿಯ ಪ್ರಕಾರ ಪ್ರತಿಯೊಂದು ಕೈಗಾರಿಕೆಗೂ ಒಂದು ಮೇಲ್ವಿಚಾರಕ ಮಂಡಳಿ ಇದ್ದು, ಅದರಲ್ಲಿ ಕಾರ್ಮಿಕ ಪ್ರತಿನಿಧಿಗಳೂ ಇರುತ್ತಾರೆ. ಇವರಿಂದ ಸಂಯುಕ್ತವಾಗಿ ಚುನಾಯಿತನಾದ ಒಬ್ಬ ಅಧ್ಯಕ್ಷನಿರುತ್ತಾನೆ. ಇದೂ ಅಲ್ಲದೆ ನಿರ್ದೇಶಕ ಮಂಡಲಿಯಲ್ಲಿ ಕಾರ್ಮಿಕರ ಪ್ರತಿನಿಧಿಯೂ ಇರುತ್ತಾನೆ. ಕಂಪನಿಯ ಮೂವರು ನಿರ್ವಾಹಕರಲ್ಲಿ ಕಾರ್ಮಿಕ ಸಂಘಕ್ಕೆ ಒಪ್ಪಿಗೆಯಾದ ಒಬ್ಬನಿರಬೇಕು. ಹೀಗೆ ರಚಿತವಾದ ವ್ಯವಸ್ಥೆ ಪ್ರಜಾಪ್ರಭುತ್ವ ತತ್ವಕ್ಕನುಗುಣವಾಗಿರುತ್ತದೆ. ನಿರ್ಣಯಗಳನ್ನು ಕಾರ್ಮಿಕ ಹಾಗೂ ನಿರ್ದೇಶಕ ಮಂಡಳಿಯ ಸಹಕಾರ ಮತ್ತು ಒಪ್ಪಿಗೆಯ ಮೇರೆಗೆ ಮಾಡಲಾಗುತ್ತದೆ. ಆದ್ದರಿಂದಲೇ ಇದನ್ನು ಸಹನಿರ್ಣಯ ಪದ್ಧತಿಯೆಂದು ಕರೆಯಲಾಗಿದೆ.ಯೂಗೊಸ್ಲಾವಿಯದಲ್ಲಿ ಕಾರ್ಮಿಕ ಸ್ವರಾಜ್ಯ ಅಥವಾ ಸ್ವಯಮಾಡಳಿತ ಪದ್ಧತಿ ಜಾರಿಯಲ್ಲಿದೆ. ಉದ್ಯಮದ ವ್ಯವಸ್ಥಾಪದ ನಿರ್ದೇಶಕ ಆ ದೇಶದ ರಾಜಕೀಯ ಆರ್ಥಿಕ ವ್ಯವಸ್ಥೆಗನುಗುಣವಾಗಿ ಅಲ್ಲಿಯ ಆಡಳಿತಕ್ಕೆ ನಿಷ್ಠೆಯುಳ್ಳವನಾಗಿರುವನಾದರೂ ಆತ ಉದ್ಯಮದ ಕಾರ್ಮಿಕರ ಸಮಿತಿಗೂ ಜವಾಬ್ದಾರನಾಗಿರುತ್ತಾನೆ.[೨]
ಕೈಗಾರಿಕಾ ಪ್ರಜಾಪ್ರಭುತ್ವ ದೇಶದ ರಾಜಕೀಯ ವ್ಯವಸ್ಥೆಯನ್ನೇ ಹೆಚ್ಚಾಗಿ ಅವಲಂಬಿಸಿರುವುದರಿಂದ ಪ್ರಜಾಪ್ರಭುತ್ವರಾಷ್ಟ್ರಗಳಲ್ಲಿ ಇದು ಹೆಚ್ಚು ಯಶಸ್ವಿಯಾಗುವುದು ಸಾಧ್ಯ. ಪ್ರಜಾಪ್ರಭುತ್ವ ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿರುವಂಥ ತತ್ತ್ವವಲ್ಲ. ಅದು ಒಂದು ಜೀವನಪದ್ಧತಿ. ಇಡೀ ಸಮಾಜವೇ ಪ್ರಜಾಪ್ರಭುತ್ವದ ತಳಹದಿಯ ಮೇಲೆ ರಚಿತವಾಗಿರಬೇಕು. ಕೇವಲ ರಾಜಕೀಯ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಒದಗಿಸಿಕೊಡುವ ಪ್ರಜಾಪ್ರಭುತ್ವ ಪರಿಪೂರ್ಣವಾಗುವುದಿಲ್ಲ. ಪರಿಪೂರ್ಣತೆ ಬರಬೇಕಾದರೆ ಆರ್ಥಿಕ ಹಾಗೂ ಸಾಮಾಜಿಕ ರಂಗಗಳಲ್ಲೂ ಅಷ್ಟೇ ಸ್ವಾತಂತ್ರ್ಯ ಮತ್ತು ಸಮಾನತೆಗಳಿರಬೇಕು. ಆರ್ಥಿಕ ಹಾಗೂ ಸಮಾಜಿಕ ಸಮಾನತೆಗಳಿಲ್ಲದ ರಾಜಕೀಯ ಸ್ವಾತಂತ್ರ್ಯ ಅರ್ಥರಹಿತವಾಗಿದ್ದು, ಸಮಾನತೆಯ ವಿಪರ್ಯಾಸವೆನಿಸುತ್ತದೆ. ಪ್ರಜಾಪ್ರಭುತ್ವವಾದಿ ಸಮಾಜರಚನೆಗೆ ತಳಹದಿಯಾಗಿ ಆರ್ಥಿಕ ಸಮಾನತೆಯನ್ನೊದಗಿಸುವುದೇ ಕೈಗಾರಿಕಾ ಪ್ರಜಾರಾಜ್ಯದ ಉದ್ದೇಶ.
18ನೆಯ ಶತಮಾನದ ಉತ್ತರಾರ್ಧದಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿ, ಅದರ ಪರಿಣಾಮವಾಗಿ ಏರ್ಪಟ್ಟ ಕಾರ್ಮಿಕ-ಮಾಲೀಕ ತಂಡ, ಮಾಲೀಕರಿಂದ ಕಾರ್ಮಿಕರ ಶೋಷಣೆ-ಇವು 19ನೆಯ ಶತಮಾನದಲ್ಲಿ ಕಾರ್ಮಿಕರ ಹಿತರಕ್ಷಣೆಯ ಚಳವಳಿಯನ್ನು ಪ್ರಚೋದಿಸಿದುವು. ಇದರ ಫಲವಾಗಿ ಕಾರ್ಮಿಕರ ಸ್ಥಿತಿಗತಿಗಳು ಉತ್ತಮಗೊಂಡುವು. ಕಾರ್ಮಿಕರು ಸಾಮೂಹಿಕವಾಗಿ ಮಾಲೀಕರೊಡನೆ ಚೌಕಾಸಿ ನಡೆಸಿ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸಾಧಕವಾದ ಸಂಘಶಕ್ತಿಯನ್ನೂ ಪಡೆದುಕೊಂಡರು. 20ನೆಯ ಶತಮಾನದಲ್ಲಿ ಸಮಾಜವಾದದ ಭಾವನೆಗಳು ಬಲಗೊಂಡಂತೆ,ತನ್ನ ಉದ್ಯಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಅವಕಾಶಕೂಡ ಕಾರ್ಮಿಕನಿಗೆ ದೊರೆಯಬೇಕೆಂಬ ಅಭಿಪ್ರಾಯ ಬೆಳೆಯಿತು. ಉದ್ಯಮಿಗಳಿಗೆ ಸೂಕ್ಷ್ಮ ನಿರ್ದೇಶನ ನೀಡುವುದರ ಮೂಲಕ ಅಥವಾ ಸರ್ಕಾರಗಳು ತಾವೇ ನೇರವಾಗಿ ಉದ್ಯಮಗಳನ್ನು ನಡೆಸುವುದರ ಮೂಲಕ ಈ ಧ್ಯೇಯವನ್ನು ಸಾಧಿಸಬೇಕು ಎಂಬ ಭಾವನೆಯೂ ಹುಟ್ಟಿತು. ಕೈಗಾರಿಕೆಯಲ್ಲಿ ಮುಂದುವರಿದಿರುವ ಮತ್ತು ಮುಂದುವರಿಯುತ್ತಿರುವ ಎಲ್ಲ ರಾಷ್ಟ್ರಗಳಲ್ಲು ಈ ಅಭಿಪ್ರಾಯಕ್ಕೆ ಮನ್ನಣೆ ದೊರೆತಿದೆ. ಕಾರ್ಮಿಕನೇ ಕೈಗಾರಿಕಾ ರಾಜ್ಯದ ಪ್ರಜೆ. ಆದ್ದರಿಂದ ಈ ರಾಜ್ಯದಲ್ಲಿ ಅವನಿಗೆ ಗಣ್ಯಸ್ಥಾನವಿರಬೇಕು. ಈ ರಾಜ್ಯದ ಆಗುಹೋಗುಗಳನ್ನು ಕುರಿತ ನಿರ್ಣಯಗಳನ್ನು ರೂಪಿಸುವಲ್ಲಿ ಅವನ ಕೈವಾಡವಿರಬೇಕು ಎಂಬುದನ್ನು ತತ್ತ್ವಶಃ ಎಲ್ಲರೂ ಒಪ್ಪಿದ್ದಾರೆ. ಆದರೆ ಈ ಕೈವಾಡದ ಸ್ವರೂಪ, ವ್ಯಾಪ್ತಿಗಳ ಬಗ್ಗೆ ಇನ್ನೂ ಏಕಾಭಿಪ್ರಾಯ ಏರ್ಪಟ್ಟಿಲ್ಲ.ಒಂದು ಉದ್ಯಮದ ದುಡಿಮೆಗಾರರಿಗೆ ಆ ಉದ್ಯಮದ ಮೇಲೆ ಸಂಪೂರ್ಣ ಹತೋಟಿಯಿರಬೇಕು ಅಥವಾ ಅದರ ಹತೋಟಿಯಲ್ಲಿ ಇತರರೊಡನೆ ಅವರೂ ಸಮಭಾಗಿಗಳಾಗಿರಬೇಕು ಎಂಬುದು ಕೈಗಾರಿಕಾ ಪ್ರಜಾರಾಜ್ಯದ ಮುಖ್ಯ ಧ್ಯೇಯ; ಹಾಗೆಯೇ ಯಾವುದೇ ಉದ್ಯಮದ ಕೆಲಸಗಾರರನ್ನು ಅವರ ಜನಾಂಗ, ಜಾತಿ ಮತಗಳ ಆಧಾರದ ಮೇಲೆ ಭಿನ್ನ ಭಾವನೆಗಳಿಂದ ಕಾಣಕೂಡದು ಎಂಬುದು ಕೈಗಾರಿಕಾ ಪ್ರಜಾರಾಜ್ಯದ ಇನ್ನೊಂದು ಧ್ಯೇಯ.ಕಾರ್ಮಿಕ ಯಾವ ಸ್ಥಿತಿಗಳಿಗೆ ಒಳಪಟ್ಟು ಕೆಲಸ ಮಾಡಬೇಕು? ಉದ್ಯಮ ಗಳಿಸುವ ಲಾಭದ ಹಂಚಿಕೆ ಯಾವ ರೀತಿ ಆಗಬೇಕು? ಎಂಬ-ಉದ್ಯಮದ ಆಡಳಿತ; ನಿರ್ವಹಣೆ ಇವುಗಳಿಗೆ ಸಂಬಂಧಿಸಿದ-ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರ ದುಡಿಮೆಗಾರನಿಗೆ ಅವನು ಆರಿಸಿದ ಪ್ರತಿನಿಧಿಗಳ ಮೂಲಕ ದೊರೆಯುವುದರಿಂದ ಈ ಮೊದಲು ಹೇಳಿದ ಎರಡು ಅಂಶಗಳಲ್ಲೂ ಅವನು ತನ್ನ ವರ್ಗದವರ ಹಿತವನ್ನು ಸಾಧಿಸುವುದು ಶಕ್ಯ. ಇದರಿಂದ ದುಡಿಮೆಗಾರನ ವ್ಯಕ್ತಿತ್ವದ ಅಭಿವೃದ್ಧಿ ಮತ್ತು ಅವನ ಸಾಮಾಜಿಕ ಪ್ರಗತಿಗೆ ಸಹಾಯಕವಾದ ಪರಿಸ್ಥಿತಿ ಏರ್ಪಡುತ್ತದೆ ಎಂದು ನಿರೀಕ್ಷಿಸಬಹುದು.