ಕೊಂಕಣಿ ಮುಸ್ಲಿಮರು (ಕೋಕಣಿ ಮುಸ್ಲಿಮರು ಎಂದೂ ಕರೆಯುತ್ತಾರೆ) ಕೊಂಕಣಿ ಜನರು ಒಂದು ಉಪಗುಂಪು. ಇವರು ಮುಖ್ಯವಾಗಿ ಪಶ್ಚಿಮ ಭಾರತದ ಕೊಂಕಣ ಪ್ರದೇಶದಲ್ಲಿ ವಾಸವಿದ್ದು, ಇಸ್ಲಾಂ ಧರ್ಮವನ್ನು ಪಾಲಿಸುತ್ತಾರೆ. ಸಿಂಧುದುರ್ಗ, ರತ್ನಾಗಿರಿ, ರಾಯಗಡ, ಮುಂಬೈ (ಬಾಂಬೆ) ನಗರ ಮತ್ತು ಉಪನಗರ, ಮತ್ತು ಥಾಣೆ ಜಿಲ್ಲೆಗಳ ಸ್ಥಳೀಯ ಮುಸ್ಲಿಮರನ್ನು ಸಾಮಾನ್ಯವಾಗಿ ಕೊಂಕಣಿ ಮುಸ್ಲಿಮರು ಎಂದು ಪರಿಗಣಿಸಲಾಗುತ್ತದೆ.[೧] ಕೊಂಕಣ ಪ್ರದೇಶದ ದಕ್ಷಿಣ ಗಡಿಯಲ್ಲಿರುವ, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕೊಂಕಣಿ ಮುಸ್ಲಿಮರನ್ನು ನವಾಯತರು ಎಂದು ಕರೆಯುಲಾಗುತ್ತದೆ.[೨]
ಕೊಂಕಣಿ ಮುಸ್ಲಿಂ ಸಮುದಾಯವು ಕೊಂಕಣಿ ಮಾತನಾಡುವ ವಿಶಾಲ ಸಮುದಾಯದ ಒಂದು ಭಾಗವಾಗಿದೆ. ಇವರು ಮುಖ್ಯವಾಗಿ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ನೆಲೆಸಿದ್ದಾರೆ. [೩] ಇದು ಮುಂಬೈ, ಮುಂಬೈ ಉಪನಗರ, ಪಾಲ್ಘರ್, ಥಾಣೆ, ರಾಯಗಡ, ರತ್ನಾಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳನ್ನು ಒಳಗೊಂಡಿದೆ.
ಪರ್ಷಿಯನ್ ಕೊಲ್ಲಿ ರಾಷ್ಟ್ರಗಳು, [೪] ಯುನೈಟೆಡ್ ಕಿಂಗ್ಡಮ್ [೫][೬] ಮತ್ತು ದಕ್ಷಿಣ ಆಫ್ರಿಕಾದಲ್ಲಿ ವಲಸೆಗಾರ ಕೊಂಕಣಿ ಮುಸ್ಲಿಂ ಸಮುದಾಯಗಳಿವೆ. [೭][೮] ೧೯೪೭ರಲ್ಲಿ ಸ್ವಾತಂತ್ರ್ಯದ ನಂತರ ಬಹಳಷ್ಟು ಕೊಂಕಣಿ ಮುಸ್ಲಿಮರು ಪಾಕಿಸ್ತಾನಕ್ಕೆ ವಲಸೆ ಹೋಗಿ, ಮುಹಾಜಿರ್ ಸಮುದಾಯದ ಭಾಗವಾಗಿ ಕರಾಚಿಯಲ್ಲಿ ನೆಲೆಸಿದ್ದಾರೆ.[೯]
ಪ್ರಾಚೀನ ಕಾಲದಿಂದಲೂ ಕೊಂಕಣ ಕರಾವಳಿಯು ಕೆಂಪು ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯ ಪ್ರಮುಖ ಬಂದರುಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದೆ. ಕೊಂಕಣಿ ಮುಸ್ಲಿಮರು ತಮ್ಮ ಪೂರ್ವಜರ ಜಾಡನ್ನು ಮಧ್ಯಕಾಲೀನ ಯುಗದಲ್ಲಿ ಕರಾವಳಿಗೆ ಭೇಟಿ ನೀಡಿದ ಅರಬ್ ವ್ಯಾಪಾರಿಗಳಲ್ಲಿ ಕಂಡುಕೊಳ್ಳಬಹುದು. [೧೦] ಸಾಮಾಜಿಕ ಶ್ರೇಣೀಕರಣವು ಪೂರ್ವಜರು ಯಾರು ಎಂಬುದರ ಆಧಾರವಾಗಿತ್ತು: ಅರಬ್ ವ್ಯಾಪಾರಿಗಳ ನೇರ ವಂಶಸ್ಥರು ಗಣ್ಯ ವರ್ಗದವರಾದರೆ, ಇಸ್ಲಾಂಗೆ ಮತಾಂತರಗೊಂಡ ಸ್ಥಳೀಯರೊಂದಿಗೆ ವಿವಾಹದ ಮೂಲಕ ಹುಟ್ಟಿದವರು ಕೆಳ ವರ್ಗದವರಾಗಿದ್ದಾರೆ. [೧೧][೧೨][೧೩] ಶಿರೋನಾಮ ಮತ್ತು ಪ್ರದೇಶದ ಅನ್ವಯವಾಗಿ ಅನೇಕರು ಹಿಂದೂ ಉಪನಾಮಗಳನ್ನು ಹೊಂದಿದ್ದಾರೆ.
ಕೊಂಕಣಿ ಮುಸ್ಲಿಮರು ಸುನ್ನಿ ಇಸ್ಲಾಮಿಕ್ ಕಾನೂನಿನ ಶಫೀ'ಇ ವ್ಯವಸ್ಥೆಯ ಪಾಲಿಸುತ್ತಾರೆ. ಇದು ಹನಾಫಿ ವ್ಯವಸ್ಥೆಯನ್ನು ಪಾಲಿಸುವ ಉತ್ತರ ಭಾರತ ಮತ್ತು ಡೆಕ್ಕನ್ ಪ್ರದೇಶದ ಸುನ್ನಿ ಮುಸ್ಲಿಮರಿಗಿಂತ ಬೇರೆಯದಾಗಿದೆ. [೧೪]
ಕೊಂಕಣಿ ಮುಸ್ಲಿಮರು ಒಟ್ಟಾಗಿ ಮಹಾರಾಷ್ಟ್ರಿ ಕೊಂಕಣಿ ಎಂದು ಕರೆಯಲ್ಪಡುವ ವಿವಿಧ ಉಪಭಾಷೆಗಳನ್ನು ಮಾತನಾಡುತ್ತಾರೆ. ಇದರಲ್ಲಿ ಪರಭಿ, ಕುಣ್ಬಿ, ಕರಧಿ, ಸಂಗಮೇಶ್ವರಿ ಮತ್ತು ಭಾನ್ಕೋಟಿ ಉಪಭಾಷೆಗಳು ಸೇರಿವೆ. ಮುಂಬೈ ಸುತ್ತಮುತ್ತಲಿನ ಪ್ರದೇಶದ ಪ್ರಮಾಣಿತ ಮರಾಠಿ ಮತ್ತು ಗೋವಾ ಸುತ್ತಮುತ್ತಲಿನ ಪ್ರದೇಶದ ಕೊಂಕಣಿ ಭಾಷೆಯ ನಡುವೆ ಈ ಉಪಭಾಷೆಗಳು ಕ್ರಮೇಣ ಭಾಷಾ ನಿರಂತರತೆಯನ್ನು ರೂಪಿಸುತ್ತವೆ.
ಇದಲ್ಲದೆ, ಮಾಲ್ವಣ್ ಬಳಿಯ ದಕ್ಷಿಣ ಸಿಂಧುದುರ್ಗ ಮತ್ತು ಹಿಂದಿನ ಸಾವಂತವಾಡಿ ರಾಜಪ್ರಭುತ್ವದ ಮುಸ್ಲಿಮರು ಕೊಂಕಣಿ ಭಾಷೆಯ ಮಾಲ್ವಣಿ ಕೊಂಕಣಿ ಉಪಭಾಷೆಯನ್ನು ಮಾತನಾಡುತ್ತಾರೆ.
ಕೊಂಕಣಿ ಮುಸ್ಲಿಮರದ್ದು ಮಾಂಸಾಹಾರಿ ಪಾಕಪದ್ಧತಿ, ಹೆಚ್ಚಾಗಿ ಕಡಲ ಆಹಾರ. ಅನ್ನ ಮತ್ತು ಅಕ್ಕಿರೊಟ್ಟಿಯನ್ನು (ರಾತ್ರಿ ಊಟದಲ್ಲಿ ಹೆಚ್ಚು) ಮೀನು ಮತ್ತು ಮಸೂರ ಅಥವಾ ತರಕಾರಿಗಳೊಂದಿಗೆ ತಿನ್ನುವುದು ಪ್ರಮುಖ ಆಹಾರವಾಗಿದೆ. ಇದು ಮುಖ್ಯವಾಗಿ ಮಹಾರಾಷ್ಟ್ರದ ಪಾಕಪದ್ಧತಿಯಿಂದ ಪ್ರಭಾವಿತವಾಗಿದೆ. [೧೫] ದಕ್ಷಿಣ ಕೊಂಕಣ ಪ್ರದೇಶವು ಮಾಲ್ವಣಿ ಪಾಕಪದ್ಧತಿಯನ್ನು ಹೊಂದಿದ್ದು, ಮಹಾರಾಷ್ಟ್ರ ಮತ್ತು ಗೋವಾದ ಪಾಕಪದ್ಧತಿಗಳ ಮಿಶ್ರಣವಾಗಿದೆ.
↑Deshmukh, Cynthia (1979). "The People Of Bombay 1850-1914 (An approach paper)". Proceedings of the Indian History Congress. 40: 836–840. JSTOR44142034.
↑Green, Nile (2008). "Islam for the Indentured Indian: A Muslim Missionary in Colonial South Africa". Bulletin of the School of Oriental and African Studies, University of London. 71 (3): 529–553. doi:10.1017/s0041977x08000876. JSTOR40378804.
↑Dandekar, Deepra (2017). "Margins or Center? Konkani Sufis, India and "Arabastan"". In Mielke, Katja; Hornidge, Anna-Katharina (eds.). Area Studies at the Crossroads: Knowledge Production after the Mobility Turn. Palgrave Macmillan. pp. 141–156.