ಖಾರ್ದಾ ಕದನವು ಅಹ್ಮದ್‌ನಗರದ ಆಗ್ನೇಯಕ್ಕೆ 56 ಮೈಲಿಗಳ ದೂರದಲ್ಲಿರುವ ಖಾರ್ದಾ ಅಥವಾ ಕುರ್ದ್ಲಾ ಎಂಬಲ್ಲಿ ಹೈದರಾಬಾದಿನ ನಿಜಾಮ ಮತ್ತು ಮರಾಠಾ ನಾಯಕರ ನಡುವೆ ಮಾರ್ಚ್, 1795ರಲ್ಲಿ ನಡೆದ ಕದನ. ಮೈಸೂರಿನ ಟೀಪು ಸುಲ್ತಾನನ ವಿರುದ್ಧ ಬ್ರಿಟಿಷರು, ನಿಜಾಮ ಮತ್ತು ಮರಾಠರು ಒಕ್ಕೂಟ ರಚಿಸಿಕೊಂಡಿದ್ದರೂ ನಿಜಾಮ ಮತ್ತು ಮರಾಠರ ನಡುವೆ ಹಳೆಯ ದ್ವೇಷ ಹೊಗೆಯಾಡುತ್ತಿತ್ತು. ನಿಜಾಮ ಚೌತಾಯ ಮತ್ತು ಸರ್‌ದೇಶಮುಖಿ ಕಾಣಿಕೆಗಳನ್ನು ಕೊಡಲಿಲ್ಲವೆಂಬ ಕಾರಣವನ್ನೊಡ್ಡಿ ಪೇಷ್ವ ಮಹದಾಜಿ ಸಿಂಧ್ಯನ ನಾಯಕತ್ವದಲ್ಲಿ ಮರಾಠರು ನಿಜಾಮನ ಸೈನ್ಯದ ಮೇಲೆ ಬಿದ್ದರು. ನಿಜಾಮನ ಸೈನ್ಯ ರೇಮಾಂಡ್ ಎಂಬ ಫ್ರೆಂಚ್ ದಳಪತಿಯ ನೇತೃತ್ವದಲ್ಲಿ ತರಬೇತಾಗಿದ್ದರೂ ಖಾರ್ದಾದಲ್ಲಿ ಪೂರ್ಣವಾಗಿ ಸೋತುಹೋಯಿತು.[೧][೨][೩] ಬ್ರಿಟಿಷರು ಅವನ ಸಹಾಯಕ್ಕೆ ಬರಲಿಲ್ಲ. ಆ ಸೋಲಿನ ಫಲವಾಗಿ ನಿಜಾಮ ವಿಧಿಯಿಲ್ಲದೆ ಸಂಧಾನಕ್ಕೆ ಒಪ್ಪಿಕೊಳ್ಳಬೇಕಾಯಿತು. ಯುದ್ಧದ ಖರ್ಚನ್ನು ಕೊಡಲೊಪ್ಪಿದುದಲ್ಲದೆ ತನ್ನ ರಾಜ್ಯದ ಕೆಲಭಾಗಗಳನ್ನು ಮರಾಠರಿಗೆ ಬಿಟ್ಟುಕೊಡಬೇಕಾಯಿತು. ಆ ಸೋಲಿನಿಂದಾಗಿ ನಿಜಾಮ ಬ್ರಿಟಿಷರ ಆಶ್ರಿತ ರಾಜನಾಗುವಂತಾಯಿತು.