ಖಿಂಗಾನ್ ಎನ್ನುವುದು ಈಶಾನ್ಯ ಚೀನದ ಪರ್ವತ ವ್ಯವಸ್ಥೆ.[೧] ಆಮೂರ್ ನದಿಯಿಂದ ಲಿಯೌ ನದಿಯ ಶಿರೋಭಾಗದವರೆಗೆ 1127ಕಿ.ಮೀ. ಹಬ್ಬಿದೆ. ದೊಡ್ಡ ಶ್ರೇಣಿ, ಚಿಕ್ಕ ಶ್ರೇಣಿ-ಎಂದು ಇದನ್ನು ಎರಡು ವಿಭಾಗ ಮಾಡಬಹುದು.
ದೊಡ್ಡ ಶ್ರೇಣಿಯ ಅತ್ಯುನ್ನತ ಶಿಖರದ ಎತ್ತರ 2024ಮೀ. ಇದು ಮಂಗೋಲಿಯನ್ ಪ್ರಸ್ಥಭೂಮಿಯ ಪೂರ್ವ ಗಡಿಯಂತಿದೆ. ಪರ್ವತಶ್ರೇಣಿಯ ಪೂರ್ವಕ್ಕೆ ಮಧ್ಯ ಮಂಚೂರಿಯದ ಮೈದಾನ ಹಬ್ಬಿದೆ. ಇದು ಮೋಡದಿಂದ ಕೂಡಿದ ಆಗ್ನೇಯ ಮಾರುತವನ್ನು ತಡೆಯುವುದರಿಂದ ಪರ್ವತದ ಪೂರ್ವಕ್ಕಿರುವ ಮಂಚೂರಿಯದಲ್ಲಿ ಸಮೃದ್ಧವಾಗಿ ಮಳೆಯಾಗುತ್ತದೆ; ಪಶ್ಚಿಮದ ಮಂಗೋಲಿಯ ಪ್ರದೇಶ ಶುಷ್ಕವಾಗಿ ಪರಿಣಮಿಸಿದೆ.
ದೊಡ್ಡ ಖಿಂಗಾನ್‌ಗೆ ಅಡ್ಡಲಾಗಿ ಎರಡು ರೈಲು ರಸ್ತೆಗಳುಂಟು. ಇವುಗಳ ಉದ್ದಕ್ಕೂ ಅಲ್ಲಲ್ಲಿ ಜನವಸತಿಗಳುಂಟು. ಉತ್ತರದ ಮಾರ್ಗ ಮುಖ್ಯವಾದದು. ಇದು ಇತಿಹಾಸ ಪ್ರಸಿದ್ಧವಾದ ಚೀನೀ ಪೂರ್ವ ರೈಲ್ವೆ. ಇದು ಟ್ಸಿಟ್ಸಿಹರ್ ಮತ್ತು ಹೈಲಾರ್ ನದಿಗಳ ನಡುವೆ ಪರ್ವತವನ್ನು ಹಾಯ್ದುಹೋಗುತ್ತದೆ. ಜೌಬೀ ಮರಗಳು ಬೆಳೆದಿರುವ ಎಡೆಗಳಿಂದ ದಿಮ್ಮಿಗಳನ್ನು ಸಾಗಿಸಲೂ ರೈಲು ಮಾರ್ಗಗಳುಂಟು. ದಕ್ಷಿಣದ ರೈಲುಮಾರ್ಗ ಮಂಚೂರಿಯದ ರೈಲ್ವೆ ವ್ಯವಸ್ಥೆಯ ಒಂದು ಶಾಖೆ. ಅದು ಉಲಾನ್‍ಹಾಟ್‍ದಿಂದ ಆರ್ಷನ್‌ನಲ್ಲಿರುವ ಬಿಸಿನೀರಿನ ಬುಗ್ಗೆಯವರೆಗೂ ಸಾಗುತ್ತದೆ.
ದೊಡ್ಡ ಖಿಂಗಾನ್ ಪರ್ವತವನ್ನು ಸಂಪೂರ್ಣವಾಗಿ ಪರಿಶೋಧಿಸಿಲ್ಲ. ಇದರ ಅತ್ಯಂತ ಉತ್ತರದ ಭಾಗದಲ್ಲಿ ಬಹುಭಾಗವೂ, ಉಳಿದ ಕೆಲವು ಭಾಗಗಳೂ ಇಂದಿಗೂ ಅಜ್ಞಾತವಾಗಿಯೇ ಇವೆ. ಇಲ್ಲಿ ಜನವಸತಿ ಅತ್ಯಂತ ವಿರಳ. ಇರುವವರು ಬಹುತೇಕ ಮಂಗೋಲರು. ಪಶ್ಚಿಮ ಇಳಿಜಾರು ಪ್ರದೇಶದಲ್ಲಿ ಅಲೆಮಾರಿ ಜನರಿದ್ದರು. ಇವರು ಕುರಿಗಳು ಮತ್ತು ಒಂಟೆಗಳನ್ನು ಸಾಕಿ ತಮ್ಮ ಗ್ರಾಮೀಣ ಆರ್ಥಿಕತೆಗೆ ಮಂಗೋಲಿಯನ್ ಪ್ರಸ್ಥಭೂಮಿಯನ್ನು ಬಳಸುತ್ತಿದ್ದರು.[೨] ಇದು ಈಗ ಒಳಮಂಗೋಲಿಯನ್ ಸ್ವಯಮಾಡಳಿತ ಪ್ರದೇಶದ ಭಾಗವಾಗಿದೆ.
ಚಿಕ್ಕ ಖಿಂಗಾನ್ ಶ್ರೇಣಿಗೂ ದೊಡ್ಡ ಖಿಂಗಾನ್ ಶ್ರೇಣಿಗೂ ಸಂಬಂಧ ಏರ್ಪಟ್ಟಿರುವುದು ಇಲ್ಖುರಿ ಶ್ರೇಣಿಯಿಂದಾಗಿ. ಚಿಕ್ಕ ಖಿಂಗಾನ್ ಶ್ರೇಣಿ ಆಮೂರ್ ನದಿಯ ಪೂರ್ವದಂಡೆಯ ಉದ್ದಕ್ಕೂ 604ಕಿ.ಮೀ. ದೂರ ಸಾಗುತ್ತದೆ. ಈ ಪ್ರದೇಶ ಅಷ್ಟೇನೂ ಅಭಿವೃದ್ಧಿಯಾಗಿಲ್ಲ. ಈಚುನ್ ಎಂಬಲ್ಲಿ ಮಾತ್ರ ಚೌಬೀನೆ ಕೆಲಸದಲ್ಲಿ ನಿರತರಾದ ಕೆಲವರು ನೆಲೆಸಿದ್ದಾರೆ.
ಚಿಕ್ಕ ಖಿಂಗಾನ್ ಶ್ರೇಣಿಯು ಸ್ಥೂಲವಾಗಿ ವಾಯವ್ಯದಿಂದ ಆಗ್ನೇಯಕ್ಕೆ ಸಾಗುತ್ತದೆ ಮತ್ತು ಆಮೂರ್ ನದಿ ಹಾಗೂ ನೆಂಜಿಯಾಂಗ್ ನದಿಗಳ ಕಣಿವೆಗಳನ್ನು ಬೇರ್ಪಡಿಸುತ್ತದೆ. ನಂತರ ಈ ಪರ್ವತಶ್ರೇಣಿಯು ಪೂರ್ವ ಹಾಗೂ ಈಶಾನ್ಯದ ಕಡೆಗೆ ತಿರುಗುತ್ತದೆ ಮತ್ತು ರಷ್ಯಾವನ್ನು ಪ್ರವೇಶಿಸುತ್ತದೆ.[೩]