ಜಲ್‍ಜೀರಾ ಒಂದು ಭಾರತೀಯ ಪಾನೀಯವಾಗಿದೆ. ಇದನ್ನು ಜಲ್‍ಜೀರಾ ಪುಡಿ ಎಂದು ಕರೆಯಲ್ಪಡುವ ಸಂಬಾರ ಪದಾರ್ಥಗಳ ಮಿಶ್ರಣದಿಂದ ರುಚಿ ಹಾಗೂ ಕಂಪು ಬರಿಸಲಾಗುತ್ತದೆ. "ಜಲ್" ಎಂದರೆ ನೀರು ಮತ್ತು "ಜೀರಾ" ಎಂದರೆ ಜೀರಿಗೆ. ಪಾನೀಯ ರೂಪವು ಮೂಲಭೂತವಾಗಿ ಜಲ್‍ಜೀರಾ ಪುಡಿ ಸೇರಿಸಿದ ನಿಂಬೆ ಪಾನಕವಾಗಿರುತ್ತದೆ, ಮತ್ತು ಭಾರತದಲ್ಲಿ ಒಂದು ಜನಪ್ರಿಯ ಬೇಸಿಗೆ ಪಾನೀಯವಾಗಿದೆ. ಕೆಲವೊಮ್ಮೆ ಇದನ್ನು ಕ್ಷುಧಾವರ್ಧಕವಾಗಿ ಬಡಿಸಲಾಗುತ್ತದೆ, ಏಕೆಂದರೆ ರುಚಿ ಮೊಗ್ಗುಗಳನ್ನು ಬೆರಗುಪಡಿಸುವುದು ಇದರ ಉದ್ದೇಶವಾಗಿರುತ್ತದೆ.
ಜಲ್‍ಜೀರಾ ಪುಡಿಯು ಸಾಮಾನ್ಯವಾಗಿ ಜೀರಿಗೆ, ಶುಂಠಿ, ಕರಿಮೆಣಸು, ಪುದೀನಾ, ಕಾಲಾ ನಮಕ್, ಯಾವುದಾದರೂ ಒಂದು ಹಣ್ಣಿನ ಪುಡಿ (ಸಾಮಾನ್ಯವಾಗಿ ಮಾವು ಅಥವಾ ಯಾವುದೋ ಬಗೆಯ ಸಿಟ್ರಸ್ ಸಿಪ್ಪೆಯ ಚೂರು), ಮತ್ತು ಮೆಣಸಿನಕಾಯಿ ಅಥವಾ ಅದರ ಪುಡಿ.
ಜಲ್‍ಜೀರಾ ಬಹಳ ದೀರ್ಘ ಇತಿಹಾಸವನ್ನು ಹೊಂದಿದೆ, ಮತ್ತು ಗಂಗಾ ನದಿಯ ತಟದಲ್ಲಿ ಹುಟ್ಟಿಕೊಂಡಿತು.[೧] ಒಂದು ಕಾಲದಲ್ಲಿ, ಪುಡಿಯನ್ನು ಕಲ್ಲು ಚಪ್ಪಡಿಗಳ ಮೇಲೆ ರುಬ್ಬಿ ಮಣ್ಣಿನ ಮಡಕೆಗಳಲ್ಲಿ ಸಂಗ್ರಹಿಸಿಡಲಾಗುತ್ತಿತ್ತು.