ತತ್ತ್ವ ಒಂದು ಸಂಸ್ಕೃತ ಶಬ್ದವಾಗಿದೆ. ಇದರರ್ಥ 'ಸೂತ್ರ', 'ಅದು', 'ವಾಸ್ತವ' ಅಥವಾ 'ಸತ್ಯ'.[೧] ವಿವಿಧ ಭಾರತೀಯ ತತ್ತ್ವಶಾಸ್ತ್ರದ ಪಂಥಗಳ ಪ್ರಕಾರ, ತತ್ತ್ವವು ಸತ್ಯತೆಯ ಘಟಕ ಅಥವಾ ಅಂಶವಾಗಿದೆ. ಕೆಲವು ಸಂಪ್ರದಾಯಗಳಲ್ಲಿ, ಅವನ್ನು ದೇವರ ಅಂಶವೆಂದು ಭಾವಿಸಲಾಗುತ್ತದೆ. ತತ್ತ್ವಶಾಸ್ತ್ರೀಯ ಪಂಥವನ್ನು ಆಧರಿಸಿ ತತ್ತ್ವಗಳ ಸಂಖ್ಯೆಯು ಬದಲಾಗುತ್ತದಾದರೂ, ಅವು ಒಟ್ಟಾಗಿ ನಮ್ಮ ಎಲ್ಲ ಅನುಭವದ ಆಧಾರವನ್ನು ರೂಪಿಸುತ್ತವೆ ಎಂದು ಭಾವಿಸಲಾಗಿದೆ. ಸಾಂಖ್ಯ ದರ್ಶನವು ೨೫ ತತ್ತ್ವಗಳ ವ್ಯವಸ್ಥೆಯನ್ನು ಬಳಸಿದರೆ, ಶೈವ ಪಂಥವು ೩೬ ತತ್ತ್ವಗಳನ್ನು ಗುರುತಿಸುತ್ತದೆ. ಬೌದ್ಧ ಧರ್ಮದಲ್ಲಿ, ಸತ್ಯತೆಯನ್ನು ರಚಿಸುವ ಧಮ್ಮಗಳ ಪಟ್ಟಿಯು ಇದಕ್ಕೆ ಸಮಾನವಾಗಿದೆ.
ಬ್ರಹ್ಮಾಂಡವು ಎರಡು ಶಾಶ್ವತ ಸತ್ಯತೆಗಳಾದ ಪುರುಷ ಮತ್ತು ಪ್ರಕೃತಿಯನ್ನು ಹೊಂದಿದೆ ಎಂದು ಸಾಂಖ್ಯ ದರ್ಶನವು ಭಾವಿಸುತ್ತದೆ. ಹಾಗಾಗಿ ಇದು ಬಹಳ ದ್ವೈತವಾದಿ ದರ್ಶನವಾಗಿದೆ. ಪುರುಷ ಪ್ರಜ್ಞೆಯ ಕೇಂದ್ರವಾಗಿದೆ, ಮತ್ತು ಪ್ರಕೃತಿಯು ಎಲ್ಲ ಭೌತಿಕ ಅಸ್ತಿತ್ವದ ಮೂಲವಾಗಿದೆ. ಸಾಂಖ್ಯದ ಇಪ್ಪತ್ತೈದು ತತ್ತ್ವಗಳ ವ್ಯವಸ್ಥೆಯು ಕೇವಲ ಸೃಷ್ಟಿಯ ವಾಸ್ತವ ರೂಪದ ಕುರಿತಾಗಿದೆ, ಮತ್ತು ಪ್ರಕೃತಿಯು ಆಗುವಿಕೆಯ ಪ್ರಪಂಚದ ಮೂಲವಾಗಿದೆ ಎಂದು ಸಿದ್ಧಾಂತಿಸುತ್ತದೆ.