ನಾಸಿರುದ್ದೀನ್ ಖುಸ್ರಾವ್ ಖಾನ್ ಗುಜರಾತಿನ ನಿಮ್ನವರ್ಗದಿಂದ ಇಸ್ಲಾಮಿಗೆ ಮತಾಂತರ ಹೊಂದಿದ್ದ ಒಬ್ಬ ವ್ಯಕ್ತಿ.
ಖಲ್ಜಿ ಮನೆತನದ ಮುಬಾರಕ್ ಖಲ್ಜಿಯ (1316-20) ಒಲುಮೆಗೆ ಪಾತ್ರನಾಗಿ ಅವನ ಪ್ರಧಾನಿಯಾದ.[೧] ಅಲ್ಲಾವುದ್ದೀನನ ಮರಣಾನಂತರ ಸಿಂಹಾಸನವನ್ನೇರಿದ ಮುಬಾರಕ್ ಎಲ್ಲ ರಾಜ್ಯಸೂತ್ರಗಳನ್ನೂ ಖುಸ್ರಾವ್ ಖಾನನಿಗೆ ಒಪ್ಪಿಸಿಕೊಟ್ಟಿದ್ದ. ಮುಬಾರಕನ ಎಲ್ಲ ಕೆಟ್ಟ ಚಟಗಳಿಗೂ ಇವನು ಬೆಂಬಲ ಕೊಡುತ್ತಿದ್ದ. ಕೊನೆಗೆ ಇವನು ತನ್ನ ಸ್ವಾಮಿಗೇ ದ್ರೋಹ ಬಗೆದ. 1320ರಲ್ಲಿ ಮುಬಾರಕನನ್ನು ಕೊಲ್ಲಿಸಿ, ಸುಲ್ತಾನ್ ನಾಸಿರುದ್ದೀನ್ ಖುಸ್ರಾವ್ ಷಹ ಎಂಬ ಅಭಿದಾನ ತಳೆದು ಸಿಂಹಾಸನವನ್ನೇರಿದ.[೨] ಆದರೆ ಇವನು ಆಡಳಿತದಲ್ಲಿ ನೆಮ್ಮದಿಯಾಗಿರಲಿಲ್ಲ. ಆಸ್ಥಾನದ ಶ್ರೀಮಂತರು ತನಗೇನೂ ಕೆಡಕು ಮಾಡದಂತೆ ಅವರಿಗೆ ಲಂಚ ಕೊಡಬೇಕಾಯಿತು. ತನ್ನ ನೆಂಟರಿಷ್ಟರಿಗೂ ಬೊಕ್ಕಸದಿಂದ ಧಾರಾಳವಾಗಿ ಹಣ ಕೊಟ್ಟ. ಇದರಿಂದ ಭಂಡಾರ ಬರಿದಾಯಿತು. ತನಗೆ ಹಿಂದೆ ಸುಲ್ತಾನನಾಗಿದ್ದ ಮುಬಾರಕನ ಕುಟುಂಬದವರನ್ನೂ, ಅವನಲ್ಲಿ ನಿಷ್ಠೆ ಹೊಂದಿದ್ದವರನ್ನೂ ಕೊಲೆಗೆ ಈಡು ಮಾಡಿದ. ಈ ಅಪಕೃತ್ಯಗಳಿಂದಾಗಿ ಇವನ ಆಳ್ವಿಕೆ ಬಹುಕಾಲ ಮುಂದುವರಿಯಲಿಲ್ಲ. ಈತ ಅಧಿಕಾರಕ್ಕೆ ಬಂದ ಐದೇ ತಿಂಗಳುಗಳಲ್ಲಿ ಇವನ ಕ್ರೌರ್ಯ, ಅನೀತಿಗಳಿಗೆ ಬೇಸತ್ತ ಮುಸ್ಲಿಂ ನಾಯಕರು ತೊಗಲಕನ ನೇತೃತ್ವದಲ್ಲಿ ಖುಸ್ರಾವ್ ಖಾನನನ್ನು ಸಿಂಹಾಸನದಿಂದ ತಳ್ಳಿ, ಶೂಲಕ್ಕೇರಿಸಿದರು.[೩] ಇವನ ಸಾವಿನೊಂದಿಗೆ ಖಲ್ಜಿವಂಶದ ಆಳ್ವಿಕೆ ಕೊನೆಗೊಂಡು ತೊಗಲಕರ ವಂಶದ ಆಳ್ವಿಕೆ ಪ್ರಾರಂಭವಾಯಿತು.