ಪರಮಾರ್ಥ

ಪರಮಾರ್ಥ (ಕ್ರಿ.ಶ. ೪೯೯-೫೬೯) ಮಧ್ಯ ಭಾರತದ ಉಜ್ಜೈನ್‍ನ ಒಬ್ಬ ಸಂನ್ಯಾಸಿಯಾಗಿದ್ದನು. ಇವನು ವಸುಬಂಧುವಿನ ಅಭಿಧರ್ಮಕೋಶವನ್ನು ಒಳಗೊಂಡಂತೆ ತನ್ನ ಸಮೃದ್ಧ ಚೀನಿ ಅನುವಾದಗಳಿಗೆ ಸುಪರಿಚಿತನಾಗಿದ್ದಾನೆ. ಪರಮಾರ್ಥನನ್ನು ಕುಮಾರಜೀವ ಮತ್ತು ಕ್ಸುವಾನ್‍ಜ಼ಾಂಗ್‍ರ ಜೊತೆಗೆ ಚೀನಿ ಬೌದ್ಧಧರ್ಮದಲ್ಲಿನ ಸೂತ್ರಗಳ ಅತ್ಯಂತ ಮಹಾನ್ ಅನುವಾದಕರಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ.

ಪರಮಾರ್ಥನು ಕ್ರಿ.ಶ. ೪೯೯ರಲ್ಲಿ ಮಧ್ಯ ಭಾರತದ ಸ್ವಾಯತ್ತ ರಾಜ್ಯವಾದ ಮಾಲ್ವಾದಲ್ಲಿ, ಗುಪ್ತ ರಾಜವಂಶದ ಕೊನೆಯ ಅವಧಿಯಲ್ಲಿ ಜನಿಸಿದನು.[] ಇವನ ಮೊದಲ ಹೆಸರು ಕುಲನಾಥನೆಂದು (ಅಂದರೆ ಕುಟುಂಬದ ಉದ್ಧಾರಕ) ಮತ್ತು ಇವನ ಹೆತ್ತವರು ಭಾರದ್ವಾಜ ಗೋತ್ರಕ್ಕೆ ಸೇರಿದ್ದ ಬ್ರಾಹ್ಮಣರಾಗಿದ್ದರು.[]

ಪರಮಾರ್ಥನು ಭಾರತದಲ್ಲಿ ಬೌದ್ಧ ಸಂನ್ಯಾಸಿಯಾದನು ಮತ್ತು ಬೌದ್ಧ ಧರ್ಮದ ಬೋಧನೆಗಳನ್ನು ಹರಡುವುದಕ್ಕಾಗಿ ತನ್ನ ಪ್ರಯಾಣಗಳಿಗೆ ರಾಜವಂಶಜರಿಂದ ಬೆಂಬಲ ಪಡೆದನು. ಇವನು ಹೆಚ್ಚು ಸಂಭಾವ್ಯವಾಗಿ ಎರಡನೇ ಬಾಲಾದಿತ್ಯ ಅಥವಾ ಮೂರನೇ ಕುಮಾರಗುಪ್ತನಿಂದ ರಾಜಾಶ್ರಯವನ್ನು ಪಡೆದನು. ಮೌಖರಿ ಅರಸ ಮೊದಲನೇ ಧ್ರುವಸೇನನೂ ಪರಮಾರ್ಥನಿಗೆ ಬೆಂಬಲ ನೀಡಿರಬಹುದು, ಏಕೆಂದರೆ ಅವನ ರಾಜ್ಯ ಪರಮಾರ್ಥನು ಪ್ರತಿಪಾದಿಸುತ್ತಿದ್ದ ಯೋಗಾಚಾರ ಬೋಧನಾ ಪ್ರಕಾರದ ಸುಪರಿಚಿತ ಸುಭದ್ರ ನೆಲೆಯಾಗಿತ್ತು.

ಫ಼ೂನಾನ್ ರಾಜ್ಯ, ಅಥವಾ ಆಂಗ್ಕೋರ್-ಪೂರ್ವ ಕಂಬೋಡಿಯಾ ಪರಮಾರ್ಥನ ಮೊದಲ ಗಮ್ಯಸ್ಥಾನವಾಗಿತ್ತು. ಫ಼ೂನಾನ್‍ನಲ್ಲಿ, ಪರಮಾರ್ಥನ ಪ್ರಸಿದ್ಧಿ ಬೆಳೆಯಿತು ಎಷ್ಟರ ಮಟ್ಟಿಗೆಂದರೆ ಲಿಯಾಂಗ್‍ನ ಸಾಮ್ರಾಟ ವೂ ಪರಮಾರ್ಥನನ್ನು ಚೀನಿ ಸಾಮ್ರಾಜ್ಯದ ಆಸ್ಥಾನಕ್ಕೆ ಕರೆತರಲು ರಾಯಭಾರಿಗಳನ್ನು ಕಳುಹಿಸಿದನು. ಪರಮಾರ್ಥನು ಗುವಾಂಗ್‍ಡಾಂಗ್ ಮೂಲಕ ಚೀನಾಕ್ಕೆ ೨೫ ಸೆಪ್ಟೆಂಬರ್, ಕ್ರಿ.ಶ. ೫೪೬ರಂದು ಆಗಮಿಸಿದನು.

ಚೀನಾದಲ್ಲಿ, ಪರಮಾರ್ಥನು ಇಪ್ಪತ್ತು ನಿಪುಣ ಸಂನ್ಯಾಸಿಗಳ ಒಂದು ಅನುವಾದ ತಂಡದ ಜೊತೆಗೆ ಕೆಲಸಮಾಡಿದನು. ಈ ಅವಧಿಯಲ್ಲಿನ ರಾಜಕೀಯ ಘಟನೆಗಳು ಮತ್ತು ಚೀನಾದ ಸಾಮಾನ್ಯ ಅಸ್ತವ್ಯಸ್ತ ಪರಿಸ್ಥಿತಿಯಿಂದ ಪರಮಾರ್ಥನ ಕೆಲಸಕ್ಕೆ ಅಡ್ಡಿಯುಂಟಾಯಿತು. ಇದರಲ್ಲಿ ಸಾಮ್ರಾಟ ವೂ ನ ಕೊಲೆಯೂ ಸೇರಿತ್ತು. ಹಲವಾರು ವರ್ಷಗಳ ನಂತರ, ತನ್ನ ಅನುವಾದ ತಂಡದೊಂದಿಗೆ ಅನುವಾದ ಪ್ರಯತ್ನಗಳನ್ನು ಶ್ರದ್ಧೆಯಿಂದ ಮುಂದುವರಿಸಲು ಪರಮಾರ್ಥನಿಗೆ ಸಾಧ್ಯವಾಯಿತು. ಇದು ಸುವರ್ಣಪ್ರಭಾಸ ಸೂತ್ರದಿಂದ ಆರಂಭವಾಯಿತು. ತನ್ನ ನಂತರದ ಜೀವನದ ಬಹುತೇಕ ಅವಧಿಯಲ್ಲಿ, ಪರಮಾರ್ಥನು ಚೀನಾದ ಪ್ರದೇಶದಿಂದ ಪ್ರದೇಶಕ್ಕೆ ಪ್ರಯಾಣಿಸುತ್ತಿರುವಾಗಲೇ ನಿರಂತರವಾಗಿ ಪಠ್ಯಗಳನ್ನು ಅನುವಾದಿಸುವ ಮಾದರಿಯನ್ನು ಮುಂದುವರಿಸಿದನು. ಯಾವುದೇ ವಿಷಯಕ್ಷೇತ್ರಗಳಲ್ಲಿನ ಶಬ್ದಗಳು ಮತ್ತು ಸಾಮಾನ್ಯ ಅರ್ಥ ಸಂಘರ್ಷದಲ್ಲಿದ್ದಲ್ಲಿ ತನ್ನ ಹಳೆಯ ಅನುವಾದಗಳನ್ನು ಪುನಃ ಪರಿಶೀಲಿಸುವುದನ್ನೂ ಮುಂದುವರಿಸಿದನು. ಕ್ರಿ.ಶ. ೫೬೩ರ ವೇಳೆಗೆ, ಪರಮಾರ್ಥನು ದಕ್ಷಿಣ ಚೀನಾದಾದ್ಯಂತ ಪ್ರಾಮುಖ್ಯ ಪಡೆದಿದ್ದನು ಮತ್ತು ಬೆಂಬಲಿಸುವ ಶಿಷ್ಯ ಅನುಯಾಯಿಗಳನ್ನು ಗಳಿಸಿದ್ದನು. ಇವರಲ್ಲಿ ಅನೇಕರು ಇವನ ಬೋಧನೆಗಳನ್ನು, ವಿಶೇಷವಾಗಿ ಮಹಾಯಾನ ಸಂಗ್ರಹದ ಬೋಧನೆಗಳನ್ನು ಕೇಳಲು ಬಹಳ ದೂರ ಪ್ರಯಾಣ ಮಾಡಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. Paul 1984, p. 14.
  2. Paul 1984, p. 22.