ಮಾಲವಿಕಾಗ್ನಿಮಿತ್ರಮ್ (ಇದು ಸಂಸ್ಕೃತದಲ್ಲಿರುವ ಹೆಸರು. ‘ಮಾಳವಿಕಾಗ್ನಿಮಿತ್ರ’ ಎಂಬ ಪ್ರಯೋಗ ಕನ್ನಡದಲ್ಲಿ ಹೆಚ್ಚಾಗಿದೆ.) ಕಾಳಿದಾಸನು ಸಂಸ್ಕೃತ ಭಾಷೆಯಲ್ಲಿ ರಚಿಸಿದ ಮೂರು ನಾಟಕಗಳಲ್ಲಿ ಮೊಟ್ಟಮೊದಲನೆಯದು ಎಂದು ಪರಿಗಣಿಸಲಾಗಿದೆ. ವಿದಿಶ ರಾಜ್ಯದ ಶುಂಗ ವಂಶದ ರಾಜ ಅಗ್ನಿಮಿತ್ರ ಮತ್ತು ಅವನ ಪಟ್ಟದ ರಾಣಿಯ ಸೇವಕಿ ಮಾಲವಿಕೆಯ ಪ್ರೇಮವು ಈ ನಾಟಕದ ವಸ್ತು.
ಈ ನಾಟಕದಲ್ಲಿ ಅಗ್ನಿಮಿತ್ರನ ತಂದೆ ಪುಷ್ಯಮಿತ್ರನು ಯವನರೊಡನೆ ಮಾಡಿದ ಯುದ್ಧ ಹಾಗೂ ರಾಜಸೂಯ ಯಾಗದ ವರ್ಣನೆಯಿದೆ. ಅಲ್ಲದೆ ಸಂಗೀತ ಮತ್ತು ನಾಟ್ಯದ ಕುರಿತು ವಿಸ್ತೃತವಾದ ವಿವರಣೆಯಿದೆ[೧].
ಮಾಳವಿಕೆ ಮತ್ತು ಅಗ್ನಿಮಿತ್ರರ ಪ್ರೇಮಸಂಚಿನ ಕತೆಯು ಕೊನೆಯವರೆಗೂ ಓದುಗರ ಮನಸ್ಸನ್ನು ಸೆರೆಹಿಡಿದಿಡುವಂತೆ ರಚಿಸಲಾಗಿದೆ. ಮುಖ್ಯ ಕತೆಗೆ ಪೂರಕವಾಗಿ ಬರುವ ಅನೇಕ ಘಟನೆಗಳು ನಾಟಕವನ್ನು ಕುತೂಹಲಭರಿತವಾಗಿ ಮಾಡಿವೆ. ಸಂಗೀತ ಮತ್ತು ನಾಟ್ಯದಲ್ಲಿ ಪರಿಣಿತಳಾಗಿದ್ದರೂ ಅರಮನೆಯಲ್ಲಿ ಸಾಮಾನ್ಯ ಸೇವಕಿಯ ಮತ್ತು ರಾಜನ ನಡುವೆ ಪ್ರೇಮಾಂಕುರಿಸಿ ಬೆಳೆಯಲುಂಟಾಗುವ ಗೊಂದಲ ಮತ್ತು ಹಾಸ್ಯಮಯ ಸನ್ನಿವೇಶಗಳು ಮನಮೋಹಕವಾಗಿವೆ. ಅಗ್ನಿಮಿತ್ರನ ಬಾಲ್ಯ ಸ್ನೇಹಿತ ಹಾಗೂ ಅಸ್ಥಾನ ವಿದೂಷಕನಾದ ಗೌತಮನ ಪಾತ್ರವು ಕಥಾವಸ್ತುವಿನ ಸೂತ್ರಧಾರಿಯಾಗಿರುವ ನಾಟಕದ ತಂತ್ರ ಗಮನೀಯವಾಗಿದೆ.
ಐದು ಅಂಕಗಳ ಈ ಕೃತಿ ಕಾಳಿದಾಸನ ಮೊದಲ ನಾಟಕವಾಗಿರುವದರಿಂದ ಇರಬಹುದೇನೋ, ಮೊದಲಿಗೇ ಸೂತ್ರಧಾರನಿಂದ ಹೇಳಿಸುತ್ತಾನೆ:
ಪುರಾಣಮಿತ್ಯೇವ ನ ಸಾಧು ಸರ್ವಂ, ನ ಚಾಪಿ ಕಾವ್ಯಂ ನವಮಿತ್ಯವದ್ಯಮ್ |
ಸಂತಃ ಪರೀಕ್ಷ್ಯಾನ್ಯತರದ್ಭಜನ್ತೇ ಮೂಢಃ ಪರಪ್ರತ್ಯಯನೇಯಬುದ್ಧಿಃ ||
ಅಂದರೆ, ಹಳೆಯದೆಂದ ಮಾತ್ರಕ್ಕೆ ಎಲ್ಲ ಕಾವ್ಯವೂ ಚೆನ್ನೆಂದು ಹೇಳಲಾಗದು; ಹೊಸತೆಲ್ಲವೂ ಕೆಟ್ಟವಾಗವು. ವಿವೇಕಿಗಳು ತಮ್ಮ ಬುದ್ಧಿಯಿಂದ ಪರೀಕ್ಷಿಸಿ, ಉತ್ತಮ ಕೃತಿಯನ್ನು ಪುರಸ್ಕರಿಸುತ್ತಾರೆ. ಮೂಢರು ಇನ್ನೊಬ್ಬರ ಹೇಳಿಕೆಯನ್ನು ಅನುಸರಿಸಿ ಅದರಂತೆ ನಡೆಯುತ್ತಾರೆ.