ಭಾರತ ಗಣರಾಜ್ಯದಲ್ಲಿ, ಮುಖ್ಯಮಂತ್ರಿಯು ೨೮ ರಾಜ್ಯಗಳ ಪೈಕಿ ಪ್ರತಿ ರಾಜ್ಯದ ಮತ್ತು ಕೆಲವೊಮ್ಮೆ ಕೇಂದ್ರಾಡಳಿತ ಪ್ರದೇಶದ ಸರ್ಕಾರದ ಚುನಾಯಿತ ಮುಖಂಡನಾಗಿರುತ್ತಾನೆ.
ಭಾರತದ ಸಂವಿಧಾನದ ಪ್ರಕಾರ, ರಾಜ್ಯಪಾಲನು ರಾಜ್ಯದ ಕಾನೂನುಬದ್ಧ ಮುಖಂಡನಾಗಿರುತ್ತಾನೆ, ಆದರೆ ವಾಸ್ತವವಾದ ಕಾರ್ಯನಿರ್ವಾಹಕ ಅಧಿಕಾರವು ಮುಖ್ಯಮಂತ್ರಿಯ ಕೈಯಲ್ಲಿರುತ್ತದೆ. ರಾಜ್ಯದ ವಿಧಾನ ಸಭೆಯ ಚುನಾವಣೆಗಳ ನಂತರ, ರಾಜ್ಯದ ರಾಜ್ಯಪಾಲನು ಸರ್ಕಾರವನ್ನು ರಚಿಸಲು ಸಾಮಾನ್ಯವಾಗಿ ಹೆಚ್ಚು ಚುನಾಯಿತ ಸದಸ್ಯರಿರುವ (ಬಹುಮತವಿರುವ) ಪಕ್ಷವನ್ನು (ಅಥವಾ ಮೈತ್ರಿಕೂಟವನ್ನು) ಆಹ್ವಾನಿಸುತ್ತಾನೆ. ರಾಜ್ಯಪಾಲನು ಮುಖ್ಯಮಂತ್ರಿಯನ್ನು ನೇಮಕಮಾಡಿ ಅವನಿಗೆ ಪ್ರಮಾಣವಚನವನ್ನು ಬೋಧಿಸುತ್ತಾನೆ. ಮುಖ್ಯಮಂತ್ರಿಯ ಸಚಿವಸಂಪುಟವು ಒಟ್ಟಾಗಿ ವಿಧಾನಸಭೆಗೆ ಹೊಣೆಯಾಗಿರುತ್ತದೆ. ವೆಸ್ಟ್ಮಿನಿಸ್ಟರ್ ಪದ್ಧತಿಯನ್ನು ಆಧರಿಸಿ, ಮುಖ್ಯಮಂತ್ರಿಯು ವಿಧಾನಸಭೆಯ ವಿಶ್ವಾಸವನ್ನು ಉಳಿಸಿಕೊಂಡಿರುವುದರಿಂದ, ಮುಖ್ಯಮಂತ್ರಿಯ ಅಧಿಕಾರಾವಧಿಯು ವಿಧಾನಸಭೆಯ ಕಾಲಾವಧಿ-ಅಂದರೆ ಗರಿಷ್ಠ ಐದು ವರ್ಷಗಳವರೆಗೆ ಇರಬಹುದು. ಮುಖ್ಯಮಂತ್ರಿಯು ಕಾರ್ಯನಿರ್ವಹಿಸಬಹುದಾದ ಅಧಿಕಾರಾವಧಿಯ ಸಂಖ್ಯೆಗೆ ಯಾವುದೇ ಮಿತಿ ಇಲ್ಲ.[೧]