ಮುಲ್ಕ್ | |
---|---|
Directed by | ಅನುಭವ್ ಸಿನ್ಹಾ |
Written by | ಅನುಭವ್ ಸಿನ್ಹಾ |
Produced by | ದೀಪಕ್ ಮುಕುಟ್ ಅನುಭವ್ ಸಿನ್ಹಾ |
Starring | ರಿಷಿ ಕಪೂರ್ ತಾಪ್ಸಿ ಪನ್ನು ಮನೋಜ್ ಪಾಹ್ವಾ ಪ್ರತೀಕ್ ಬಬ್ಬರ್ ರಜತ್ ಕಪೂರ್ |
Cinematography | ಇವಾನ್ ಮುಲಿಗನ್ |
Edited by | ಬಲ್ಲು ಸಲೂಜಾ |
Music by | (ಹಾಡುಗಳು) ಪ್ರಸಾದ್ ಸಾಷ್ಟೆ ಅನುರಾಗ್ ಸೈಕಿಯಾ (ಹಿನ್ನೆಲೆ ಸಂಗೀತ) ಮಂಗೇಶ್ ಧಾಡ್ಕೆ |
Production companies | ಬನಾರಸ್ ಮೀಡಿಯಾ ವರ್ಕ್ಸ್ ಸೋಹಂ ರಾಕ್ಸ್ಟಾರ್ ಎಂಟರ್ಟೇನ್ಮಂಟ್ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Running time | 140 ನಿಮಿಷಗಳು[೧] |
Country | ಭಾರತ |
Language | ಹಿಂದಿ |
Budget | ರೂ.20 ಕೋಟಿಗಳು[೨] |
Box office | ರೂ.42 ಕೋಟಿಗಳು[೩] |
ಮುಲ್ಕ್ (ಅನುವಾದ: ದೇಶ) ಅನುಭವ್ ಸಿನ್ಹಾ ನಿರ್ದೇಶಿಸಿದ ೨೦೧೮ರ ಒಂದು ಹಿಂದಿ ನಾಟಕೀಯ ಚಲನಚಿತ್ರ.[೪][೫][೬] ವಾರಾಣಸಿ ಮತ್ತು ಲಕ್ನೋದಲ್ಲಿ ಚಿತ್ರೀಕರಣಗೊಂಡ ಈ ಚಿತ್ರವು ತಮ್ಮ ಒಬ್ಬ ಕುಟುಂಬ ಸದಸ್ಯನು ಭಯೋತ್ಪಾದನೆಯಲ್ಲಿ ಸಿಲುಕಿಕೊಂಡ ನಂತರ ತನ್ನ ಕಳೆದುಹೋದ ಗೌರವವನ್ನು ಮರುಪಡೆಯಲು ಪ್ರಯತ್ನಿಸುವ ಮುಸ್ಲಿಮ್ ಕುಟುಂಬದ ಕಥೆಯನ್ನು ಹೇಳುತ್ತದೆ.[೭][೮][೯]
ಚಿತ್ರದಲ್ಲಿ ತಾಪ್ಸಿ ಪನ್ನು, ರಿಷಿ ಕಪೂರ್, ಮತ್ತು ರಜತ್ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದರೆ, ನೀನಾ ಗುಪ್ತಾ ಮತ್ತು ಮನೋಜ್ ಪಾಹ್ವಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲು ೧೩ ಜುಲೈ ೨೦೧೮ರಲ್ಲಿ ಬಿಡುಗಡೆಯಾಗಲು ನಿರ್ಧಾರವಾಗಿದ್ದ ಈ ಚಿತ್ರವನ್ನು ಪನ್ನು ಹಾಗೂ ದಿಲ್ಜಿತ್ ದೋಸಾಂಝ್ ನಟಿಸಿದ ಮತ್ತೊಂದು ಚಿತ್ರ ಸೂರ್ಮಾದೊಂದಿಗೆ ಸಂಘರ್ಷಣೆಯನ್ನು ತಪ್ಪಿಸಲು ಮುಂದೂಡಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ೩ ಆಗಸ್ಟ್ ೨೦೧೮ರಂದು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ಮೇಲೆ, ಈ ಚಲನಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ಮತ್ತು ಸಿನ್ಹಾರ ನಿರ್ದೇಶನ ಹಾಗೂ ಮೂರು ಮುಖ್ಯ ನಟರು ಹಾಗೂ ಪಾಹ್ವಾರ ಅಭಿನಯವನ್ನು ಪ್ರಶಂಸಿಸಲಾಯಿತು. ₹420 ಮಿಲಿಯನ್ಗಿಂತ ಹೆಚ್ಚು ಹಣವನ್ನು ಗಳಿಸಿದ ಈ ಚಿತ್ರವು ತಕ್ಕಮಟ್ಟಿಗಿನ ವಾಣಿಜ್ಯಿಕ ಯಶಸ್ಸೆನಿಸಿಕೊಂಡಿತು. ೬೪ನೇ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ವಿಮರ್ಶಕರ ಅತ್ಯುತ್ತಮ ನಟಿ (ಪನ್ನು) ಹಾಗೂ ಅತ್ಯುತ್ತಮ ಪೋಷಕ ನಟ (ಪಾಹ್ವಾ) ಸೇರಿದಂತೆ ಆರು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು ಮತ್ತು ಅತ್ಯುತ್ತಮ ಕಥೆ (ಸಿನ್ಹಾ) ಪ್ರಶಸ್ತಿಯನ್ನು ಗೆದ್ದಿತು.
ನಿಜಜೀವನದ ಕಥೆಯ ಮೇಲೆ ಆಧಾರಿತವಾದ ಮುಲ್ಕ್, ತಮ್ಮ ಕುಟುಂಬದ ಒಬ್ಬ ಸದಸ್ಯನು ಭಯೋತ್ಪಾದನೆಯಲ್ಲಿ ತೊಡಗಿದ ನಂತರ ತಮ್ಮ ಗೌರವವನ್ನು ಮತ್ತೆ ಪಡೆಯಲು ಹೋರಾಡುವ, ಭಾರತದಲ್ಲಿನ ಒಂದು ಹಿಂದೂ ಬಹುಸಂಖ್ಯಾತ ಪಟ್ಟಣದ ಒಂದು ಮುಸ್ಲಿಮ್ ಕೂಡು ಕುಟುಂಬದ ಹೋರಾಟಗಳ ಮೇಲೆ ಕೇಂದ್ರೀಕರಿಸುತ್ತದೆ.[೧೦]
ವೃತ್ತಿಯಲ್ಲಿ ವಕೀಲನಾದ ಮುರಾದ್ ಅಲಿ ಮೊಹಮ್ಮದ್ (ರಿಷಿ ಕಪೂರ್) ವಾರಣಸಿಯ ಒಂದು ಜನನಿಬಿಡ ವೈವಿದ್ಯಮಯ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ಸೌಹಾರ್ದದಿಂದ ವಾಸಿಸುತ್ತಿರುತ್ತಾನೆ. ಅವನ ದಿನಚರಿಯಲ್ಲಿ ಹತ್ತಿರದ ಮಸೀದಿಯಲ್ಲಿ ನಮಾಜ಼್, ನಂತರ ತನಗೆ ನಿಕಟವಾದ ಒಬ್ಬ ಹಿಂದೂ ನೆರೆಹೊರೆಯವರ ಒಡೆತನದ ಮತ್ತು ನಿರ್ವಹಣೆಯ ಒಂದು ಚಹಾದ ಅಂಗಡಿಯಲ್ಲಿ ಒಂದು ಕಪ್ ಚಹಾ ಕುಡಿಯುತ್ತ ಸ್ವಲ್ಪ ಹರಟೆ ಹೊಡೆಯುವುದು ಸೇರಿರುತ್ತವೆ. ಅವನ ಅನ್ಯೋನ್ಯ ಕುಟುಂಬದಲ್ಲಿ ಅವನ ಹೆಂಡತಿ ತಬಸ್ಸುಮ್ (ನೀನ ಗುಪ್ತಾ), ಮೊಬೈಲ್ ಫೋನ್ ಅಂಗಡಿಯನ್ನು ನಡೆಸುತ್ತಿರುವ ಸೋದರ ಬಿಲಾಲ್ (ಮನೋಜ್ ಪಾಹ್ವಾ), ಸೋದರನ ಹೆಂಡತಿ ಛೋಟಿ ತಬಸ್ಸುಮ್ (ಪ್ರಾಚಿ ಶಾ ಪಾಂಡ್ಯಾ), ಸೋದರನ ಮಗ ಶಾಹಿದ್ (ಪ್ರತೀಕ್ ಬಬ್ಬರ್) ಮತ್ತು ಸೋದರನ ಮಗಳು ಆಯತ್ (ವರ್ತಿಕಾ ಸಿಂಗ್) ಇರುತ್ತಾರೆ. ಮುರಾದ್ನ ಮಗ ಆಫ಼್ತಾಬ್ (ಇಂದ್ರನೀಲ್ ಸೇನ್ಗುಪ್ತಾ) ತನ್ನ ಹಿಂದೂ ವಕೀಲೆ ಹೆಂಡತಿ ಆರತಿಯೊಂದಿಗೆ (ತಾಪ್ಸಿ ಪನ್ನು) ವಿದೇಶದಲ್ಲಿ ಇರುತ್ತಾನೆ ಮತ್ತು ಕುಟುಂಬದಿಂದ ಸ್ವಲ್ಪ ವೈಮನಸ್ಯ ಹೊಂದಿರುತ್ತಾನೆ.
ಕಥೆಯು ಮುರಾದ್ ಹಾಗೂ ತಬಸ್ಸುಮ್ರ ವಿವಾಹ ವಾರ್ಷಿಕೋತ್ಸವ ದಿನದಂದು ಆರತಿ ಅವರನ್ನು ಭೇಟಿಯಾಗಲು ಬಂದಾಗ ಆರಂಭವಾಗುತ್ತದೆ. ಕುಟುಂಬವು ನೆರೆಹೊರೆಯವರು ಮತ್ತು ಗೆಳೆಯರೊಂದಿಗೆ ಸುಂದರ ರಾತ್ರಿಯನ್ನು ಸಂತೋಷದಿಂದ ಕಳೆಯುತ್ತದೆ. ಇನ್ನೊಂದು ಕಥೆಯನ್ನು ಸಮಾನಾಂತರವಾಗಿ ತೋರಿಸಲಾಗುತ್ತದೆ, ಇದರಲ್ಲಿ ಶಾಹಿದ್ ಬೇಕಾಗಿರುವ ಮೆಹಫ಼ೂಜ಼್ ಆಲಮ್ (ಸುಮಿತ್ ಕೌಲ್) ನೇತೃತ್ವದ ಒಂದು ಭಯೋತ್ಪಾದಕ ಸಂಘಟನೆಯೊಂದಿಗೆ ಕೈ ಜೋಡಿಸಿದ್ದಾನೆ ಎಂದು ಬಹಿರಂಗಪಡಿಸಲಾಗುತ್ತದೆ. ಇವನು ಶಾಹಿದ್ಗೆ ಬಾಂಬ್ ಸ್ಫೋಟಿಸುವ ಕೆಲಸ ವಹಿಸುತ್ತಾನೆ. ವಾರ್ಷಿಕೋತ್ಸವದ ಆಚರಣೆಗಳ ರಾತ್ರಿಯ ನಂತರ, ಶಾಹಿದ್ ಮುಂಜಾನ್ ಅಲಹಾಬಾದ್ಗೆ ಹೊರಟು, ಇಬ್ಬರು ಇತರ ಜೊತೆಗಾರರೊಂದಿಗೆ, ಯೋಜಿಸಿದಂತೆ ದಾಳಿಯನ್ನು ನಡೆಸುತ್ತಾನೆ. ಅನೇಕ ಮುಗ್ಧರು ಸಾವನ್ನಪ್ಪುತ್ತಾರೆ ಮತ್ತು ಅಪರಾಧದ ತನಿಖೆ ನಡೆಸುವ ಕೆಲಸವನ್ನು ಎಸ್ಎಸ್ಪಿ ದಾನಿಶ್ ಜಾವೇದ್ಗೆ (ರಜತ್ ಕಪೂರ್) ಒಪ್ಪಿಸಲಾಗುತ್ತದೆ. ಅವನು ದಾಳಿಯಲ್ಲಿ ಒಳಗೊಂಡಿರುವ ಎಲ್ಲರನ್ನೂ ಪತ್ತೆಹಚ್ಚಿ ಶಾಹಿದ್ನನ್ನು ಮೂಲೆಗೆ ತಳ್ಳಿ ಅಂತಿಮವಾಗಿ ಅವನನ್ನು ಗುಂಡುಹೊಡೆದು ಸಾಯಿಸುತ್ತಾನೆ ಏಕೆಂದರೆ ಅವನು ಶರಣಾಗುವ ಬದಲು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ.
ಬೇಗನೇ, ಪೋಲಿಸರು ಮುರಾದ್ನ ಮನೆಗೆ ಆಗಮಿಸಿ ಕುಟುಂಬದ ಸದಸ್ಯರ ವಿಚಾರಣೆ ಮಾಡಲು ಆರಂಭಿಸುತ್ತಾರೆ. ಅವರು ಸಾಕ್ಷ್ಯವನ್ನು ಸಂಗ್ರಹಿಸಲು ಮನೆಯನ್ನು ಕೂಲಂಕಷವಾಗಿ ಹುಡುಕುತ್ತಾರೆ. ಸುದ್ದಿಯು ಸುತ್ತಲೂ ಹರಡುತ್ತಿದ್ದಂತೆ, ಜನರು ಮುರಾದ್ನ ಮನೆಯ ಹೊರಗೆ ಸೇರುವುದು ಶುರುವಾಗುತ್ತದೆ. ಮುಂದಿನ ವಿಚಾರಣೆಗಾಗಿ ಪೋಲಿಸರು ಬಿಲಾಲ್ನನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಾರೆ. ಆರತಿ ಬಿಲಾಲ್ಗೆ ಪ್ರತಿವಾದಿ ವಕೀಲೆಯ ಹೊಣೆಹೊತ್ತು ಅವನ ಜೊತೆ ಪೋಲಿಸ್ ಠಾಣೆಗೆ ಹೋಗುತ್ತಾಳೆ. ದಾನಿಶ್ ಬಿಲಾಲ್ಗೆ ಚಿತ್ರಹಿಂಸೆಕೊಟ್ಟು ರಾತ್ರಿ ಪೂರ್ತಿ ವಿಚಾರಣೆ ಮಾಡುತ್ತಾನೆ ಆದರೆ ಅವನಿಂದ ಯಾವುದೇ ಮಾಹಿತಿಯನ್ನು ಪಡೆಯಲು ಆಗುವುದಿಲ್ಲ.
ಕೆಲವೇ ಗಂಟೆಗಳಲ್ಲಿ, ಮುರಾದ್ನ ಮನೆಯ ಸುತ್ತಲಿನ ಪರಿಸ್ಥಿತಿಯು ತೀವ್ರವಾಗಿ ಬದಲಾಗುತ್ತದೆ. ದಶಕಗಳಿಂದ ಮುರಾದ್ನ ಪರಿಚಯವಿದ್ದ ಎಲ್ಲರೂ ಅವನನ್ನು ಭಯೋತ್ಪಾದಕನಂತೆ ನೋಡಲು ಆರಂಭಿಸುತ್ತಾರೆ. ಒಂದೇ ದಿನದಲ್ಲಿ ಅವನ ಜೀವನದಲ್ಲಿನ ಹೆಸರು ಹಾಗೂ ಸೌಹಾರ್ದ ಚೂರುಚೂರಾಗುತ್ತದೆ. ಬಿಲಾಲ್ನನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತದೆ ಮತ್ತು ನ್ಯಾಯಾಧೀಶ ಹರೀಶ್ ಮಧೋಕ್ (ಕುಮುದ್ ಮಿಶ್ರಾ) ಅವನ ಜಾಮೀನನ್ನು ನಿರಾಕರಿಸಿ ಮುಂದಿನ ವಿಚಾರಣೆಗಾಗಿ ೭ ದಿನಗಳ ಪೋಲಿಸ್ ಬಂಧನಕ್ಕೆ ಅನುಮತಿ ನೀಡುತ್ತಾರೆ. ಶವಪರೀಕ್ಷೆಯ ನಂತರ, ಪೋಲೀಸರು ಶಾಹಿದ್ನ ಶವವನ್ನು ಮುರಾದ್ಗೆ ಒಪ್ಪಿಸಲು ತರುತ್ತಾರೆ, ಆದರೆ ಅವನು ಸ್ವೀಕರಿಸಲು ಒಪ್ಪುವುದಿಲ್ಲ. ಅವನು ಶಾಹಿದ್ನ ಕೃತ್ಯವನ್ನು ಬಲವಾಗಿ ಖಂಡಿಸಿದರೂ, ಮುರಾದ್ನ ನೆರೆಹೊರೆಯಲ್ಲಿ ಪರಿಸ್ಥಿತಿಯು ಹದಗೆಡುತ್ತದೆ ಮತ್ತು ಹಿಂದೂಗಳು ಅವನ ಇಡೀ ಕುಟುಂಬಕ್ಕೆ ಸಾಧ್ಯವಾದ ಪ್ರತಿ ರೀತಿಯಲ್ಲೂ ಅವರನ್ನು ಅವಮಾನಮಾಡಲು ಪ್ರಯತ್ನಿಸುವ ಭಯೋತ್ಪಾದಕರೆಂಬ ಪಟ್ಟಿಯನ್ನು ಕೊಡುತ್ತಾರೆ. ಮನೆಯೊಳಗೆ ಕಲ್ಲುಗಳನ್ನು ತೂರಲಾಗುತ್ತದೆ ಮತ್ತು ಅವರ ಮನೆಯ ಹೊರಗಿನ ಗೋಡೆಯ ಮೇಲೆ "ಪಾಕಿಸ್ತಾನಕ್ಕೆ ವಾಪಸ್ ಹೋಗಿ" ಎಂದು ಬರೆಯಲಾಗುತ್ತದೆ. ಮತ್ತೊಂದೆಡೆ, ಉಗ್ರಗಾಮಿ ಮನೋಭಾವದ ಕೆಲವು ಮುಸ್ಲಿಮರು ಮುರಾದ್ನ ಬಳಿ ಬಂದು ಶಾಹಿದ್ ಜಿಹಾದ್ನ ಹೆಸರಿನಲ್ಲಿ ತನ್ನ ಪ್ರಾಣವನ್ನು ತೆತ್ತನು ಎಂದು ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ. ಅವನು ನಿಜವಾದ ಹುತಾತ್ಮನು ಮತ್ತು ಎಲ್ಲ ಮುಸ್ಲಿಮರು ಅವನ ಕೃತ್ಯವನ್ನು ಶ್ಲಾಘಿಸಿ ಹಿಂದೂ ಪ್ರಾಬಲ್ಯದ ಸಮಾಜದ ವಿರುದ್ಧ ಮೇಲೇಳಬೇಕು. ಇದನ್ನು ಮುರಾದ್ ಬಲವಾಗಿ ವಿರೋಧಿಸುತ್ತಾನೆ. ಎಲ್ಲದರ ಹೊರತಾಗಿಯೂ, ಕುಟುಂಬವು ತಮ್ಮ ಪ್ರಶಾಂತತೆಯನ್ನು ಕಾಪಾಡಿಕೊಂಡು ತಮ್ಮ ಹೆಸರನ್ನು ಖುಲಾಸೆ ಮಾಡಿಕೊಳ್ಳಲು ಕಾನೂನು ಪ್ರಕ್ರಿಯೆಗಳ ಮೇಲೆ ಅವಲಂಬಿಸುತ್ತದೆ.
೭ ದಿನಗಳ ನಂತರ ಕಾನೂನಿನ ಕಾರ್ಯಕಲಾಪಗಳು ಆರಂಭಗೊಂಡಾಗ, ಶಾಹಿದ್ನ ಈ ಕೃತ್ಯವು ಪ್ರತ್ಯೇಕ ಘಟನೆಯಲ್ಲ ಬದಲಾಗಿ ಮುಸ್ಲಿಮರು ಹೇಗೆ ಭಯೋತ್ಪಾದಕರ ಪೋಷಕರಾಗಿದ್ದಾರೆ ಎಂಬುದಕ್ಕೆ ಕಣ್ಣುತೆರೆಸುವ ಘಟನೆಯಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಸಾರ್ವಜನಿಕ ಅಭಿಯೋಕ್ತ ಸಂತೋಷ್ ಆನಂದ್ (ಆಷುತೋಶ್ ರಾಣಾ) ಪ್ರಯತ್ನಿಸುತ್ತಾರೆ. ಮುರಾದ್ನ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಶಾಹಿದ್ನ ಕೃತ್ಯದ ಅರಿವಿತ್ತು ಮತ್ತು ಅದನ್ನು ಬೆಂಬಲಿಸಿದರು ಮತ್ತು ಅವರ ಮನೆಯು ಭಯೋತ್ಪಾದಕ ಕೃತ್ಯಗಳ ರಹಸ್ಯಸ್ಥಳವಾಗಿತ್ತು ಎಂದು ಅವರು ವಾದಿಸುತ್ತಾರೆ. ಆಧಾರವಾಗಿ, ಅವರು ಬಾಂಬ್ಗಳನ್ನು ಹೇಗೆ ತಯಾರಿಸಬೇಕೆಂಬ ವಿವರವಾದ ವಿಧಾನವಿರುವ ಶಾಹಿದ್ನ ಲ್ಯಾಪ್ಟಾಪ್, ಖಾಸಗಿ ಆವರ್ತನಗಳ ಮೂಲಕ ಭಯೋತ್ಪಾದಕರನ್ನು ಸಂಪರ್ಕಿಸಲು ಮುರಾದ್ನ ಮನೆಯಲ್ಲಿ ಸ್ಥಾಪಿತವಾದ ಪ್ರಸಾರ ಯಂತ್ರ, ಬಿಲಾಲ್ ಮೆಹಫ಼ೂಜ಼್ ಆಲಮ್ನ್ನು ಕರೆದೊಯ್ಯುವ, ಮತ್ತು ಅವನು ಭಯೋತ್ಪಾದಕರಿಗೆ ಸಿಮ್ ಕಾರ್ಡ್ಗಳನ್ನು ಯಾವುದೇ ಸಕ್ರಮ ದಸ್ತಾವೇಜುಗಳನ್ನು ಕೇಳದೇ ಮಾರಾಟಮಾಡುತ್ತಿರುವ ಸಿಸಿಟಿವಿ ಚಿತ್ರತುಣುಕನ್ನು ಪ್ರಸ್ತುತ ಪಡಿಸುತ್ತಾರೆ. ಈ ಎಲ್ಲ ವಾಸ್ತವಾಂಶಗಳನ್ನು ಆಧರಿಸಿ, ಮುರಾದ್ನನ್ನೂ ಈ ಮೊಕದ್ದಮೆಯಲ್ಲಿ ಆಸಕ್ತಿಯ ವ್ಯಕ್ತಿಯಾಗಿ ಪರಿಗಣಿಸಿ ಅವನನ್ನು ಬಿಲಾಲ್ನ ಪ್ರತಿವಾದಿ ವಕೀಲನ ಸ್ಥಾನದಿಂದ ತೆಗೆಯಬೇಕೆಂದು ಅವರು ನ್ಯಾಯಾಧೀಶನನ್ನು ವಿನಂತಿಸಿಕೊಳ್ಳುತ್ತಾರೆ. ನ್ಯಾಯಾಲವು ಒಪ್ಪಿಕೊಂಡಾಗ, ಮುರಾದ್ ಸ್ಥಾನ ತ್ಯಜಿಸಬೇಕಾಗುತ್ತದೆ ಮತ್ತು ಆ ವ್ಯಾಜ್ಯಕ್ಕಾಗಿ ಮುಖ್ಯ ವಕೀಲೆಯಾಗಿ ಆರತಿ ಅವನ ಸ್ಥಾನ ತೆಗೆದುಕೊಳ್ಳುತ್ತಾಳೆ.
ನ್ಯಾಯಾಲಯದಲ್ಲಿ ಪರಿಸ್ಥಿತಿಗಳು ಅವನು ವಿರುದ್ಧವಾಗುತ್ತಿದ್ದಂತೆ, ಆಗಲೇ ದಣಿದ, ಅವಮಾನಗೊಂಡ, ಗೊಂದಲಗೊಂಡ, ದುಃಖಿತನಾದ, ಚಿತ್ರಹಿಂಸೆ ಅನುಭವಿಸಿದ ಮತ್ತು ಅಪಮಾನಿತನಾದ ಬಿಲಾಲ್ಗೆ ತೀವ್ರ ಹೃದಯಾಘಾತವಾಗುತ್ತದೆ ಮತ್ತು ಆಸ್ಪತ್ರೆಗೆ ಹೋಗುವಾಗ ಸಾವನ್ನಪ್ಪುತ್ತಾನೆ. ಮುರಾದ್ನ ಕುಟುಂಬವು ಮತ್ತೊಮ್ಮೆ ಇನ್ನೊಂದು ಹಿನ್ನಡೆಯನ್ನು ಅನುಭವಿಸುತ್ತದೆ ಮತ್ತು ಈಗ ಕೇವಲ ಪೂರ್ವಾಗ್ರಹದ ಆಧಾರದ ಮೇಲೆ ತನ್ನ ಮಾವ ಮತ್ತು ಅವನ ಕುಟುಂಬದ ಮೇಲೆ ಹೊರಿಸಲಾದ ಆಪಾದನೆಗಳಿಂದ ಅವರನ್ನು ಮುಕ್ತಗೊಳಿಸುವುದು ಎಲ್ಲವೂ ಆರತಿಯ ಮೇಲೆ ಬರುತ್ತದೆ.
ಅವರು ಭಯೋತ್ಪಾದನೆಯಲ್ಲಿ ಒಳಗಾಗಿದ್ದಾರೆ ಎಂದು ಶಾಹಿದ್ನ ಹೊರತಾಗಿ ಬೇರೆ ಯಾವ ಕುಟುಂಬ ಸದಸ್ಯನ ವಿರುದ್ಧ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದು ಆರತಿ ನ್ಯಾಯಾಲಯದಲ್ಲಿ ಸಮರ್ಥಿಸಲು ಪ್ರಯತ್ನಿಸುತ್ತಾಳೆ. ಲ್ಯಾಪ್ಟಾಪ್ನ್ನು ನಡೆಸುವುದು ಶಾಹಿದ್ ಒಬ್ಬನಿಗೇ ತಿಳಿದಿತ್ತು ಮತ್ತು ಪ್ರಸಾರ ಯಂತ್ರವನ್ನು ಅವನು ಕೇಬಲ್ ಟಿವಿಯ ಸಂಕೇತವನ್ನು ಹೆಚ್ಚಿಸುವ ನೆಪದಲ್ಲಿ ಸ್ಥಾಪಿಸಿದ್ದನು. ಅವನಿಗೆ ಬಿಲಾಲ್ನ ಮೊಬೈಲ್ ಅಂಗಡಿಗೆ ಪ್ರವೇಶವಿದ್ದ ಕಾರಣ ಅವನು ಯಾವುದೇ ದಸ್ತಾವೇಜಿಲ್ಲದ ಸಿಮ್ ಕಾರ್ಡ್ಗಳನ್ನು ಮಾತ್ರ ತೆಗೆದುಕೊಂಡಿರುತ್ತಾನೆ ಮತ್ತು ಭಯೋತ್ಪಾದಕರನ್ನು ಸಂಪರ್ಕಿಸಲು ಅವನ್ನು ಬಳಸಿರುತ್ತಾನೆ. ಮೆಹಫ಼ೂಜ಼್ ಆಲಮ್ ಯಾರು ಎಂಬ ಬಗ್ಗೆ ಬಿಲಾಲ್ಗೆ ಯಾವುದೇ ಕಲ್ಪನೆಯಿರದ ಕಾರಣ ಅವನು ಶಾಹಿದ್ನನ್ನು ಭೇಟಿಯಾಗಲು ಬಂದಾಗ, ಅವನು ಶಾಹಿದ್ನ ಗೆಳೆಯನೆಂದು ಭಾವಿಸಿ ತಾನೂ ಅದೇ ದಿಕ್ಕಿನಲ್ಲಿ ಹೋಗುತ್ತಿದ್ದುದರಿಂದ ಅವನನ್ನು ರೇಲ್ವೆ ನಿಲ್ದಾಣದಳಲ್ಲಿ ಬಿಡುವ ಪ್ರಸ್ತಾಪ ಮಾಡುತ್ತಾನೆ. ಎಲ್ಲ ಮುಸ್ಲಿಮರನ್ನು ಭಯೋತ್ಪಾದಕರು ಎಂದು ಪರಿಗಣಿಸುವುದು ಜನರ ಮನೋಭಾವವಾಗಿಬಿಟ್ಟಿದೆ ಎಂದೂ ಆರತಿ ವಾದಿಸುತ್ತಾಳೆ ಮತ್ತು ಕೇವಲ ಗಡ್ಡ ಬೆಳೆಸುವುದರಿಂದ ಅಥವಾ ಇಸ್ಲಾಮನ್ನು ಅನುಸರಿಸುವುದರಿಂದ ಒಬ್ಬರು ಸಾರ್ವಜನಿಕರ ದೃಷ್ಟಿಯಲ್ಲಿ ಭಯೋತ್ಪಾದಕರಾಗಿಬಿಡುತ್ತಾರೆ. ಮುಸ್ಲಿಮರ ಬಗ್ಗೆ ಕೇವಲ ಈ ಸ್ಥಾಪಿತವಾದ ನಿಷೇಧದ ಕಾರಣ, ಮುರಾದ್ ಮತ್ತು ಅವನ ಕುಟುಂಬವು ಈ ಭೀಕರ ಆಘಾತ ಮತ್ತು ಅವಮಾನವನ್ನು ಅನುಭವಿಸುತ್ತಿರುತ್ತದೆ ಮತ್ತು ಇದು ಬಿಲಾಲ್ನ ಪ್ರಾಣವನ್ನೂ ತೆಗೆದುಕೊಳ್ಳುತ್ತದೆ.
ಸಾರ್ವಜನಿಕ ಅಭಿಯೋಕ್ತ ಸಂತೋಷ್ ಆನಂದ್ ಯಾವುದೇ ಹೆಚ್ಚಿನ ಸಾಕ್ಷ್ಯಾಧಾರವನ್ನು ಒದಗಿಸಲು ವಿಫಲರಾಗುತ್ತಾರೆ ಮತ್ತು ಮುರಾದ್ ಹಾಗೂ ಅವನ ಕುಟುಂಬದ ವಿರುದ್ಧದ ಎಲ್ಲ ಸಾಕ್ಷ್ಯಾಧಾರಗಳು ಸಾಂದರ್ಭಿಕವೆಂದು ತೀರ್ಮಾನಿಸಿ ನ್ಯಾಯಾಲವು ಅವರ ವಿರುದ್ಧದ ಎಲ್ಲ ಆರೋಪಗಳನ್ನು ತೆಗೆದುಹಾಕುತ್ತದೆ. ನ್ಯಾಯಾಧೀಶ ಹರೀಶ್ ಮಧೋಕ್ ಮುಖ್ಯ ಸಮಸ್ಯೆಯು ಜನರ ಮನೋಭಾವದ್ದಾಗಿದೆ ಮತ್ತು ಬದಲಾವಣೆಯನ್ನು ತರಲು ಎಲ್ಲರೂ ತಮ್ಮ ಧರ್ಮವನ್ನು ಲೆಕ್ಕಿಸದೇ ಅದರ ವಿರುದ್ಧ ಹೋರಾಡಬೇಕು ಎಂದು ಹೇಳಿ ಮೊಕದ್ದಮೆಯನ್ನು ವಜಾಗೊಳಿಸುತ್ತಾರೆ.
ಅನುಭವ್ ಸಿನ್ಹಾ ಓದಿದ ಒಂದು ಪತ್ರಿಕಾ ವರದಿಯು ಮುಲ್ಕ್ನ ಮೂಲಬಿಂದುವಾಯಿತು. ಇದು ಒಂದು ಕಲ್ಪನೆಯನ್ನು ಅಭಿವೃದ್ಧಿಪಡಿಸಲು ಅವರನ್ನು ಪ್ರಚೋದಿಸಿತು ಮತ್ತು ಅದನ್ನು ತಮ್ಮ ಮಿತ್ರರೊಂದಿಗೆ ಪ್ರತ್ಯಾದಾನಕ್ಕಾಗಿ ಹಂಚಿಕೊಂಡರು.[೧೩] ತಮ್ಮ ಗೆಳೆಯರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದ ಮೇಲೆ ಅವರು ಕಥೆಯನ್ನು ಬರೆಯಲು ಆರಂಭಿಸಿದರು. ಚಿತ್ರದ ೧೩-೧೪ ಕರಡುಗಳನ್ನು ಬರೆದ ನಂತರ, ಅನುಭವ್ ಕಥೆಯನ್ನು ನಿರ್ದೇಶಕ್ ಶೂಜಿತ್ ಸರ್ಕಾರ್ ಸೇರಿದಂತೆ ಚಿತ್ರೋದ್ಯಮದಲ್ಲಿನ ತಮ್ಮ ಗೆಳೆಯರಿಗೆ ಹೇಳಲು ಆರಂಭಿಸಿದರು.[೭] ಶೂಜಿತ್ಗೆ ಕಥೆ ಬಹಳ ಹಿಡಿಸಿ ಈ ಯೋಜನೆಯನ್ನು ಮರುಪರಿಗಣಿಸಬಾರದೆಂದು ವಿನಂತಿಸಿ ಅದನ್ನು ಮುಂದುವರೆಸಲು ಹೇಳಿದರು.[೧೪]
ಪಾತ್ರಗಳ ಸಿದ್ಧತೆ ಮಾಡಿಕೊಳ್ಳಲು ನಟರಿಗೆ ಮೂರು ತಿಂಗಳು ಸಮಯ ನೀಡಲಾಗಿತ್ತು. ಒಬ್ಬ ಮುಸ್ಲಿಮ್ ಭಯೋತ್ಪಾದಕನ ಪಾತ್ರವಹಿಸಬೇಕಾಗಿದ್ದ ಪ್ರತೀಕ್ ಬಬ್ಬರ್ಗೆ ಅಮಂಗ್ ದ ಬಿಲೀವರ್ಸ್ ಸಾಕ್ಷ್ಯಚಿತ್ರವನ್ನು ನೋಡಲು ಮತ್ತು ಡೇವಿಡ್ ಹೆಡ್ಲಿ ಬಗ್ಗೆ ವ್ಯಾಪಕವಾಗಿ ಓದಲು ಹೇಳಲಾಯಿತು. ನ್ಯಾಯಾಲಯದಲ್ಲಿನ ಮೊಕದ್ದಮೆಗಳ ಸೂಕ್ತ ಚಿತ್ರಣಕ್ಕಾಗಿ, ತಾಪ್ಸಿ ಪನ್ನು ಮತ್ತು ಆಶುತೋಷ್ ರಾಣಾ ನಿವೃತ್ತ ಉಚ್ಚ ನ್ಯಾಯಾಲಯ ನ್ಯಾಯಾಧೀಶ ಲಕ್ನೋದ ನದೀಮ್ ಸಿದ್ದೀಕಿಯವರಿಂದ ಮಾರ್ಗದರ್ಶನ ಪಡೆದರು. ಮಲೀಹಾಬಾದ್ನ ಒಬ್ಬ ಮುಸ್ಲಿಮ್ ವಿದ್ವಾಂಸನನ್ನು ಕರೆದು ರಿಷಿ ಕಪೂರ್ರನ್ನು ಒಳಗೊಂಡ ಮುಸ್ಲಿಮ್ ಕ್ರಿಯಾವಿಧಿಗಳನ್ನು ಮೇಲ್ವಿಚಾರಣೆ ಮಾಡಲಾಯಿತು.[೧೩][೧೫] ಮುಲ್ಕ್ನ ಬಂಡವಾಳ ₹ 18 ಕೋಟಿಯಷ್ಟಾಗಿತ್ತು.[೧೬]
ಚಿತ್ರದಲ್ಲಿ ಮುಖ್ಯ ಪಾತ್ರವಹಿಸುವ ನಟರನ್ನು ಜುಲೈ ೨೦೧೭ ಮತ್ತು ಸೆಪ್ಟೆಂಬರ್ ೨೦೧೭ರ ಮಧ್ಯೆ ಪಾತ್ರವರ್ಗದಲ್ಲಿ ಸೇರಿಸಿಕೊಳ್ಳಲಾಯಿತು. ಲಕ್ನೋ ರಂಗಭೂಮಿಯ ಹನ್ನೆರಡು ನಟರನ್ನು ಚಿತ್ರದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಲು ಸೇರಿಸಿಕೊಳ್ಳಲಾಯಿತು.[೧೭] ಮೊದಲು, ರಜತ ಕಪೂರ್ ರಿಷಿ ಕಪೂರ್ರ ಸೋದರನ ಪಾತ್ರವನ್ನು ಮತ್ತು ನಟ ಮನೋಜ್ ಪಾಹ್ವಾ ಪೋಲಿಸ್ ಅಧಿಕಾರಿ ದಾನಿಶ್ ಜಾವೇದ್ರ ಪಾತ್ರವನ್ನು ನಿರ್ವಹಿಸಬೇಕೆಂದು ಕಲ್ಪಿಸಲಾಗಿತ್ತು. ಆದರೆ ರಂಗಸಜ್ಜಿನಲ್ಲಿ ಇಬ್ಬರೂ ಬಂದಾಗ ಅನುಭವ್ ಸಿನ್ಹಾಗೆ ಅವರು ಬೇರೆ ಪಾತ್ರಗಳನ್ನು ವಹಿಸಬೇಕೆಂದು ಅನಿಸಿ ಅವರ ಪಾತ್ರಗಳನ್ನು ಅದಲುಬದಲು ಮಾಡಿದರು.[೧೮]
ಚಿತ್ರದ ಪ್ರಧಾನ ಛಾಯಾಗ್ರಹಣವು ಲಕ್ನೋದಲ್ಲಿ ಅಕ್ಟೊಬರ್ ೨೦೧೭ರಲ್ಲಿ ಆರಂಭವಾಗಿ ೨೭ ದಿನ ಮುಂದುವರೆಯಿತು.[೧೯] ನಿರ್ದೇಶಕ ಅನುಭವ್ ಸಿನ್ಹಾರ ಪ್ರಕಾರ, ಚಿತ್ರದಲ್ಲಿ ಲಕ್ನೋವನ್ನು ವಾರಾಣಸಿಯಾಗಿ ತೋರಿಸಲಾಗಿದೆ. ಚಿತ್ರದ ಸ್ವಲ್ಪ ಭಾಗವನ್ನು ಎರಡು ದಿನ ವಾರಾಣಸಿಯಲ್ಲೂ ಚಿತ್ರೀಕರಿಸಲಾಯಿತು.[೨೦] ಚಿತ್ರೀಕರಣ ಪ್ರಕ್ರಿಯೆಯು ೯ ನವಂಬರ್ ೨೦೧೭ರಂದು ಮುಗಿಯಿತು.[೨೧][೨೨]
ಚಿತ್ರದ ಹಿನ್ನೆಲೆ ಸಂಗೀತವನ್ನು ಮಂಗೇಶ್ ಧಾಕ್ಡೆ ಸಂಯೋಜಿಸಿದ್ದಾರೆ. ಹಾಡುಗಳನ್ನು ಪ್ರಸಾದ್ ಸಾಷ್ಟೆ ಮತ್ತು ಅನುರಾಗ್ ಸೈಕಿಯಾ ಸಂಯೋಜಿಸಿದ್ದಾರೆ. ಶಕೀಲ್ ಆಜ಼್ಮಿ ಗೀತೆಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ.
ಈ ಚಿತ್ರವು ಭಾರತದಲ್ಲಿ ೩ ಆಗಸ್ಟ್ ೨೦೧೮ರಂದು ಬಿಡುಗಡೆಯಾಯಿತು.[೧೬] ಚಲನಚಿತ್ರದ ಚುಟುಕು ಚಿತ್ರವನ್ನು ೨೮ ಜೂನ್ನಂದು,[೨೩] ಮತ್ತು ಅಧಿಕೃತ ಮಾದರಿ ತುಣುಕನ್ನು ೯ ಜುಲೈನಂದು ಬಿಡುಗಡೆಗೊಳಿಸಲಾಯಿತು.[೨೪]
ಪಾಕಿಸ್ತಾನದಲ್ಲಿ ಚಲನಚಿತ್ರದ ಮಾದರಿ ತುಣುಕನ್ನು ನಿಷೇಧಿಸಿದ ನಂತರ, ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ, ಪಾಕಿಸ್ತಾನವು, ಚಲನಚಿತ್ರವನ್ನೂ ೩ ಆಗಸ್ಟ್ ೨೦೧೮ರಂದು ನಿಷೇಧಿಸಿತು.[೨೫] ಆ ತೀರ್ಮಾನಕ್ಕೆ ಪ್ರತಿಕ್ರಿಯಿಸುತ್ತಾ, ನಿರ್ದೇಶಕ ಅನುಭವ್ ಸಿನ್ಹಾ ಪಾಕಿಸ್ತಾನದ ನಾಗರಿಕರಿಗೆ ಪತ್ರವನ್ನು ಬರೆದರು.[೨೬]
ಮುಲ್ಕ್ ಭಾರತದಲ್ಲಿನ ಚಿತ್ರ ವಿಮರ್ಶಕರಿಂದ ಬಹಳ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು.[೨೭][೨೮]