ಮಂಗಳೂರಿನ ಸಣ್ಣ ಬಾಯಿಯ ಕಪ್ಪೆ | |
---|---|
Scientific classification | |
ಸಾಮ್ರಾಜ್ಯ: | |
ವಿಭಾಗ: | |
ಉಪವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | M. kodiial
|
Binomial name | |
Microhyla kodial |
ಮೈಕ್ರೊಹೈಲಾ ಕೊಡಿಯಾಲ್ ಅಥವಾ ಮಂಗಳೂರು ಸಣ್ಣಬಾಯಿ ಕಪ್ಪೆಯು ಮೈಕ್ರೊಹೈಲಿಡೆ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಕಪ್ಪೆ. ಇದು ಮಂಗಳೂರಿನ ಬೈಕಂಪಾಡಿ ಪ್ರದೇಶದಲ್ಲಿ ಪತ್ತೆಯಾದ ಕಪ್ಪೆಯಾಗಿದೆ.[೧] ಭಾರತದಲ್ಲಿ ಪತ್ತೆಯಾದ ಮೈಕ್ರೊಹೈಲಾ ಕುಟುಂಬದ ೧೦ನೇ ಪ್ರಭೇದವಾಗಿದೆ.[೨] ಮಂಗಳೂರಿಗೆ ಕೊಂಕಣಿ ಭಾಷೆಯಲ್ಲಿ ’ಕೊಡಿಯಾಲ್’ ಎಂದೂ, ಹವ್ಯಕ ಭಾಷೆಯಲ್ಲಿ ಕೆಲವು ಕಡೆ ಕೊಡೆಯಾಲ ಎಂದೂ, ಕೆಲವು ಕಡೆ ಕೊಡಿಯಾಲ ಎಂದೂ ಕರೆಯುತ್ತಾರೆ. ಈ ಕಪ್ಪೆಯು ಮಂಗಳೂರಿನಲ್ಲಿ ಪತ್ತೆಯಾದುದರಿಂದ ಅದರ ಆಧಾರದಲ್ಲಿ ಈ ಕಪ್ಪೆಗೆ ಕೊಡಿಯಾಲ್ ಎಂಬ ಹೆಸರು ಸೇರಿಸಲಾಗಿದೆ. ಈ ಸಂಶೋಧನೆಯು ಅಂತರರಾಷ್ಟ್ರೀಯ ನಿಯತಕಾಲಿಕೆ ‘ಝೂಟ್ಯಾಕ್ಸಾ’ದಲ್ಲಿ ಮೇ ೧೬, ೨೦೧೮ರಂದು ಪ್ರಕಟಗೊಂಡಿದೆ.[೩]
ಈ ಕಪ್ಪೆಯು ಕಿರಿದಾದ ಗಾತ್ರದಾಗಿದ್ದು ಗಂಡು ಕಪ್ಪೆಯು ಸುಮಾರು 16.9 ಇಂದ 17.4 ಮಿಲಿಮೀಟರ್ ಉದ್ದವಿರುತ್ತದೆ ಮತ್ತು ಹೆಣ್ಣುಕಪ್ಪೆಯು 18.0 ಇಂದ 20.4 ಮಿಲಿಮೀಟರ್ ಉದ್ದವಿರುತ್ತದೆ. ಇದರ ಚರ್ಮವು ಇತರ ಕಪ್ಪೆಗಳಂತೆ ಮಡಿಕೆಗಳಿಂದ ಕೂಡಿಲ್ಲ. ಮೈಬಣ್ಣವು ಬೂದುಬಣ್ಣದ್ದಾಗಿದ್ದು ಅದರ ಮೇಲೆ ಕಂದುಬಣ್ಣದ ವಿನ್ಯಾಸಗಳಿರುತ್ತವೆ. ಕಾಲುಗಳು ಚಿಕ್ಕದಾಗಿವೆ. ಇದಕ್ಕೆ ಪೂರ್ಣಪ್ರಮಾಣದಲ್ಲಿ ಬೆಳವಣಿಗೆ ಹೊಂದಿದ ಜಾಲಪಾದಗಳಿರುವುದಿಲ್ಲ. ಇತರ ಕಪ್ಪೆಗಳಂತೆ ಪಾರ್ಶ್ವಗಳಲ್ಲಿ ದಪ್ಪ ಪಟ್ಟೆಗಳಂಥ ರಚನೆಗಳಿಲ್ಲ.[೩] ಚರ್ಮವು ಮೃದುವಾಗಿಲ್ಲದೆ ಗಟ್ಟಿಯಾಗಿದೆ. ಗಂಡು ಕಪ್ಪೆಗಳಲ್ಲಿ ಗಂಟಲು ಚೀಲ ಗಾಢ ಬೂದು ಬಣ್ಣದಲ್ಲಿದ್ದು, ಅದರ ಮೇಲೆ ಕಪ್ಪು ಚುಕ್ಕೆಗಳನ್ನು ಹೊಂದಿದೆ.[೪] ಇದರ ದನಿಯು ಬಹಳ ಕ್ಷೀಣವಾಗಿದೆ.
ಈ ಕಪ್ಪೆಯ ಜೆನೆಟಿಕ್ ವಿಶ್ಲೇಷಣೆ ಪ್ರಕಾರ ಈ ಪ್ರಭೇದದ ಕಪ್ಪೆಗಳು ಮೂಲತಃ ಆಗ್ನೇಯ ಏಷ್ಯಾ ಪ್ರದೇಶದ್ದಾಗಿದ್ದು ಅಲ್ಲಿಂದ ಆಮದಾಗುವ ಮರದ ದಿಮ್ಮಿಗಳ ಜೊತೆ ಮಂಗಳೂರಿನ ಬಂದರಿನ ಮೂಲಕ ಈ ಪ್ರದೇಶಕ್ಕೆ ಬಂದಿರಬಹುದೆಂದು ಅಂದಾಜಿಸಲಾಗಿದೆ. ಸದ್ಯಕ್ಕೆ ಮಂಗಳೂರಿನ ನಗರದಲ್ಲಿ ಒಂದಿಷ್ಟು ಪ್ರದೇಶದಲ್ಲಿ ಮಾತ್ರ ಕಂಡುಬಂದಿದ್ದು ಇದರ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯಬೇಕಿದೆ.[೫]
ಈ ಸಂಶೋಧನೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಆನ್ವಯಿಕ ಜೀವವಿಜ್ಞಾನ ವಿಭಾಗದ ಕೆ.ವಿನೀತ್ ಕುಮಾರ್, ರಾಧಾಕೃಷ್ಣ ಕೆ. ಉಪಾಧ್ಯಾಯ, ಕೆ.ರಾಜಶೇಖರ್ ಪಾಟೀಲ, ಸೇಂಟ್ ಅಲೋಷಿಯಸ್ ಪದವಿ ಪೂರ್ವಕಾಲೇಜಿನ ಆರ್.ಡಿ.ಗಾಡ್ವಿನ್, ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಆ್ಯಂಡ್ ದಿ ಎನ್ವಿರಾನ್ಮೆಂಟ್ (ATREE) ಸಂಸ್ಥೆಯ ಸೂರಿ ಸೆಹಗಲ್, ಜೀವವೈವಿಧ್ಯ ಮತ್ತು ಸಂರಕ್ಷಣಾ ಕೇಂದ್ರದ ಅನ್ವೇಷಾ ಸಾಹ, ಎನ್.ಎ.ಅರವಿಂದ ತಂಡ ನಡೆಸಿದೆ.