ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿದ್ದು, ಇಲ್ಲಿ ಅನೇಕ ಮತ ಧರ್ಮಗಳ ಜನರಿದ್ದಾರೆ. ಬೇರೆ ಬೇರೆ ಭಾಷೆಯನ್ನು ಮಾತನಾಡುವ ಜನರೂ ಇದ್ದಾರೆ. ಹೀಗೆ ತುಳುನಾಡೆಂದೆ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಉಡುಪಿ, ಮಂಗಳೂರು, ಕಾರ್ಕಳ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕಾಸರಗೋಡು ತಾಲೂಕುಗಳ ಬಹುಭಾಗ ತುಳು ಭಾಷಾವಲಯಕ್ಕೆ ಸೇರುತ್ತದೆ. ಈ ಪ್ರದೇಶದಲ್ಲಿ ಬದುಕುವ ಮೊಗವೇರರು, ಬೈದ್ಯರು, ಬಂಟರು, ವಿವಿಧ ವರ್ಗದ ಹರಿಜನರು, ಶಿವಳ್ಳಿ ಬ್ರಾಹ್ಮಣರು, ಸ್ಥಾನಿಕ ಬ್ರಾಹ್ಮಣರು, ಜೈನರು, ವಿಶ್ವಕರ್ಮರು, ಗೌಡರು, ಪ್ರೊಟೆಸ್ಟೆಂಟ್ ಕ್ರೈಸ್ತರು, ಗಟ್ಟಿಗಳು, ಮೂಲ್ಯರು, ಗಾಣಿಗರು, ಪಂಬದರು, ಪರಬರು, ನಲಿಕೆಯವರು, ದೇವಾಡಿಗರು ಮೊದಲಾದ ಹದಿನೈದು ಲಕ್ಷಕ್ಕೂ ಮಿಕ್ಕಿ ಮಂದಿಯ ತಾಯ್ನುಡಿಯಾಗಿ ಉಳ್ಳ ಭಾಷೆಯ ಮೂಲ ದ್ರಾವಿಡ ಭಾಷೆಯ ಅನೇಕ ಮೌಲಿಕಾಂಶಗಳನ್ನು ಹುದುಗಿಸಿಕೊಂಡಿರುವ ಭಾಷಾ ವಿಜ್ಞಾನ ದೃಷ್ಟಿಯಿಂದ ಸಾಕಷ್ಟು ವಿಕಸಿತವಾದ, ವೈವಿಧ್ಯಪೂರ್ಣವಾದ ಜನಪದ ಸಾಹಿತ್ಯದ ಗಣಿಯನ್ನೇ ಹೊಂದಿರುವ ತುಳು ನಾಡಿನ ಸಂಸ್ಕೃತಿಯನ್ನು ಬೆಂಬಲಿಸುವಷ್ಟು ಶಕ್ತ, ಸಂಪನ್ನ ಭಾಷೆ ಇದಾಗಿದೆ.ಹಿರಿಯ ಭಾಷಾ ವಿದ್ವಾನರ ಪ್ರಕಾರ ತುಳು ಭಾಷೆಯು ತಮಿಳ್ ಭಾಷೆಯಿಂದ ಉತ್ಪತ್ತಿಯಾದಂತಾದ್ದು ಹಾಗು ಇದನ್ನು ಹಳೇ ತಮಿಳ್ ಅಂತಸಹ ಗುರುತಿಸಿದ್ದಾರೆ.
ತುಳು ಭಾಷೆಯನ್ನು, ಮಾತನಾಡುವ (ಆಡು) ಭಾಷೆಯನ್ನಾಗಿಸಿಕೊಂಡವರಲ್ಲಿ ಶಿವಳ್ಳಿ ಬ್ರಾಹ್ಮಣರೂ ಒಬ್ಬರಾಗಿದ್ದಾರೆ. ಅಹಿಛತ್ರ ಎಂಬ ಪ್ರದೇಶದಿಂದ ಕ್ರಿ. ಶ. ೧೧ನೆ ಶತಮಾನದಲ್ಲಿ ಬ್ರಾಹ್ಮಣರ ಮೂರನೇ ವಲಸೆ ಬಂದು ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ನೆಲೆ ನಿಂತರು. ಕ್ರಿ. ಶ. ೧೧ನೆ ಶತಮಾನದಲ್ಲಿ ಬ್ರಾಹ್ಮಣರು ತಮ್ಮನ್ನು ತುಳುವರೆಂದು ಗುರುತಿಸಿಕೊಂಡಿದ್ದಾರೆ ಎಂದು ಕೆಲವು ಹೇಳಿಕೆಗಳಿಂದ ತಿಳಿದು ಬರುತ್ತದೆ. ಕದಂಬರ ಕಾಲದಲ್ಲಿ ಅಂದ್ರೆ ಕ್ರಿ.ಶ. ೮ ನೆ ಶತಮಾನದಿಂದಸಹ ಮೊದಲು ಬಾರಕೂರು ಎಂಬ ಸ್ಥಳದಲ್ಲಿ ಸ್ಥಾನಿಕ ತುಳು ಬ್ರಾಹ್ಮಣರನ್ನು ಅಧಿಕಾರಿಯಾಗಿ ನೇಮಿಸಿದ್ದರು[೧]. ಕ್ರಿ.ಶ. 8ನೇ ಶತಮಾನದಲ್ಲಿ ಕದಂಬರು ದಕ್ಷಿಣ ಕನ್ನಡ ಜಿಲ್ಲೆಯನ್ನು ಆಳುತ್ತಿದ್ದರು. ಶಿಲಾ ಶಾಸನಗಳ ಅಧ್ಯಯನದಿಂದ ತುಳುವರ ವಿಷಯ ಬೆಳಕಿಗೆ ಬಂದ ಕಾರಣದಿಂದ ಸಾಂಪ್ರದಾಯಿಕ ಅಭಿಪ್ರಾಯಪಟ್ಟ ವಿಷಯಗಳೆಲ್ಲಾ ನಿಜವೆಂದು ತಿಳಿದು ಬಂತು.ಕದಂಬ ಅರಸನಾದ ಮಯೂರವರ್ಮನ ಕಾಲದಲ್ಲಿ ಹೈವೆ (ಹೈಗ)ಯ ಹವಿಕ ಬ್ರಾಹ್ಮಣರು ಎಂದು ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ಬಾರಕೂರಿನ ಕದಂಬ ರಾಜನಾದ ಮಯೂರವರ್ಮನು ಸ್ವತಃ ಬ್ರಾಹ್ಮಣನಾದ್ದರಿಂದ ಬ್ರಾಹ್ಮಣರನ್ನು ಆದರದಿಂದ ನೋಡಿಕೊಂಡನು ಮತ್ತು ಈತನ ಕಾಲದಲ್ಲಿ ಬ್ರಾಹ್ಮಣ ಕುಟುಂಬಗಳು ಬೆಳವಣಿಗೆಯನ್ನು ಹೊಂದಿದವು. ಈ ವಿಷಯಗಳೆಲ್ಲ ತುಳು ಗ್ರಾಮಪದ್ಧತಿಯಲ್ಲಿ ಮತ್ತು ತುಳುನಾಡಿನ ಬಗ್ಗೆ ಇರುವ ಶಿಲಾಶಾಸನಗಳಲ್ಲಿ ಕಂಡು ಬರುತ್ತವೆ. ಮೊದಲನೆಯದಾಗಿ ಹಿಂದೆ ಬ್ರಾಹ್ಮಣರು ವಲಸೆ ಬಂದವರೆಂದೂ, ಆದರೆ ಯಾವಾಗ ಬಂದು, ಯಾವ ದಿನಾಂಕಕ್ಕೆ ಬಂದರೆಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ತಾಳಗುಂದ ಶಿಲಾಶಾಸನದಲ್ಲಿ ಬ್ರಾಹ್ಮಣರ ಬಗ್ಗೆ ಕಥೆಯಿದೆ. 32 ಬ್ರಾಹ್ಮಣ ಕುಟುಂಬಗಳನ್ನು ಮೊದಲೆ ಇದ್ದಂತ ೦೭ ಶಾಕೆ ವೇದಗಳ 12000 ಬ್ರಾಹ್ಮಣ ಅಗ್ನಿಹೊತ್ರಿಗಳು ಬರಮಾಡಿಕೊಂಡರು[೨]. ನಂತರ ಸ್ಥಾನಗುಂದದಲ್ಲಿ ಅಗ್ರಹಾರವನ್ನು ಸ್ಥಾಪಿಸಿದರು. ಶಿವಮೊಗ್ಗ ಜಿಲ್ಲೆಯ ಕುಪ್ಪೆಟ್ಟೂರಿನಲ್ಲಿಯೂ ಅಗ್ರಹಾರವಿತ್ತು. ಬ್ರಾಹ್ಮಣ ಮತ್ತು ಜೈನ ವಿದ್ವಾಂಸರು ಇಲ್ಲಿದ್ದರು ಎಂಬುದನ್ನು ಸೊರಬ ಶಾಸನ ಮಾಹಿತಿಯನ್ನು ನೀಡುತ್ತವೆ. ಬ್ರಾಹ್ಮಣರ ಅಗ್ರಹಾರಗಳು ಇದ್ದವು ಎಂಬುದನ್ನು ಶಿವಮೊಗ್ಗ ಜಿಲ್ಲೆಯ ಶಾಸನಗಳಾದ ಸ್ಥಾನಗುಂದ, ತಾಳಗುಂದ ಮತ್ತು ಕುಪ್ಪೆಟ್ಟೂರು ಶಾಸನಗಳಲ್ಲಿ ಬ್ರಾಹ್ಮಣರು ಕದಂಬ ಅರಸನಾದ ಮಯೂರವರ್ಮನ ಪ್ರದೇಶವನ್ನು ಪಡೆದುಕೊಂಡು ವಾಸ್ತವ್ಯ ಹೂಡಿದರು ಎಂದು ತಿಳಿದುಬರುತ್ತದೆ. ತುಳುನಾಡಿಗೆ ಮತ್ತು ಶಿವಮೊಗ್ಗ ಜಿಲ್ಲೆಗೆ ನಿಕಟ ಸಂಬಂಧ ಆಲೂಪ (ಕ್ರಿ.ಶ. 345) ರಾಜರ ಸಮಯದಲ್ಲಿ ಏರ್ಪಟ್ಟಿತು. ಕದಂಬ ಆಳ್ವಿಕೆಯ ಮೊದಲು ಕೆಲವು ಬ್ರಾಹ್ಮಣ ಪಂಗಡಗಳು ವಲಸೆ ಬಂದು ಆಳ್ವಖೇಡ ಮತ್ತು ಹೈವೆಯಲ್ಲಿ ವಾಸ್ತವ್ಯ ಹೂಡಿದರು. ಮೊದಲ ಕದಂಬರೆಲ್ಲರೂ ಬ್ರಾಹ್ಮಣರಾಗಿದ್ದರು. ಮೊದಲ ಬ್ರಾಹ್ಮಣರ ಬಗ್ಗೆ ಪ್ರಸ್ತಾಪ ಆಲ್ವಸರದ ವಡ್ಡರ್ಸೆ ಶಾಸನದಲ್ಲಿ ಕಂಡುಬರುತ್ತದೆ. ಈ ಶಾಸನ 7 ನೇ ಶತಮಾನದ ಮಧ್ಯಭಾಗದಲ್ಲಿ ಕಂಡುಬರುತ್ತದೆ. 7 ನೇ ಶತಮಾನದ ನಾಣ್ಯವಾದ ಕಂಚು, ಕೀಲ್ ಗಂಚು ನಾಣ್ಯಗಳಲ್ಲಿಯೂ ಆ ಕಾಲದಲ್ಲಿ ಬ್ರಾಹ್ಮಣರು ಇದ್ದರು ಎಂದು ತಿಳಿದು ಬರುತ್ತದೆ. ಈ ರೀತಿಯಲ್ಲಿ ನಾವು ಖಡಾ ಖಂಡಿತವಾಗಿ 7 ನೇ ಶತಮಾನದಲ್ಲಿ ಬ್ರಾಹ್ಮಣರಿದ್ದರು ಅಥವಾ ಅದಕ್ಕಿಂತ ಮುಂಚೆ ಬ್ರಾಹ್ಮಣತ್ವ ಎನ್ನುವುದು ತುಳುನಾಡಿನಲ್ಲಿ ಇತ್ತು ಎನ್ನುವುದು ತಿಳಿದುಬರುತ್ತದೆ. ಇದರಿಂದ ಬ್ರಾಹ್ಮಣರು ಒಂದೇ ಸಲ ವಾಸ್ತವ್ಯ ಹೂಡಿದರು ಎಂದು ಹೇಳಲು ಸಾಧ್ಯವಿಲ್ಲ. ಈ ಕಾರಣದಿಂದ ಹವಿಕರು ಈ ತುಳುನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ತಂಗಿದರು. ಹವಿಕ ಬ್ರಾಹ್ಮಣರಲ್ಲಿ 4 ವಿಧಗಳು ಹುಟ್ಟಿಕೊಂಡವು.ಉತ್ತರ ಕರ್ನಾಟಕದಲ್ಲಿ ಇರುವ ಶಿವಳ್ಳಿ ಗ್ರಾಮ, ಹವ್ಯಕರು, ಕೋಟ, ಸಕ್ಲಪುರಿಸ್. ದಕ್ಷಿಣ ಕನ್ನಡದ ಶಿವಳ್ಳಿ ಮತ್ತು ಕೋಟ ಬ್ರಾಹ್ಮಣರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡುಬರುತ್ತಾರೆ. 5 ಗ್ರಾಮಗಳಲ್ಲಿ ಬ್ರಾಹ್ಮಣರು ನೆಲೆಸಿದ್ದರಿಂದ ಪ್ರದೇಶದ (ಸ್ಥಳದ) ಅನುಗುಣವಾಗಿ 5 ಪಂಗಡಗಳು ಹುಟ್ಟಿಕೊಂಡವು. ಶಿವಳ್ಳಿ, ಕೋಟ ಕೋಟೇಶ್ವರ, ಕಂದಾವರ ಇವೇ ಆ ಪಂಗಡಗಳು. ಉಡುಪಿಯಲ್ಲಿರುವ ಶಿವಳ್ಳಿ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರಿಗೆ ಮಾಧ್ವ ಶಿವಳ್ಳಿ ಬ್ರಾಹ್ಮಣರೆಂದೇ ಹೆಸರು ಬಂತು. ಉಡುಪಿಯಲ್ಲಿರುವ ಕೋಟ ಗ್ರಾಮದಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರಿಗೆ ಕೋಟ ಬ್ರಾಹ್ಮಣರೆಂದೇ ಹೆಸರು.
ದಕ್ಷಿಣ ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದಾದ ಪಂಚ ದ್ರಾವಿಡ ಭಾಷಾ ವರ್ಗದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿಕೊಂಡಿರುವ ಭಾಷೆ ತುಳು ಭಾಷೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಯಾಣಿಪುರಿ ನದಿ ಮತ್ತು ಚಂದ್ರಗಿರಿ ಹೊಳೆಗಳ ನಡುವಿನ ಈ ಪ್ರದೇಶದ ಆಡುಭಾಷೆ ತುಳು. ಕ್ರಿ.ಪೂ. 264ರಲ್ಲಿ ಸಿದ್ಧಾಪುರದಲ್ಲಿ ಸಿಕ್ಕಿದ ಅಶೋಕನ ಕಾಲದ ಶಾಸನದ ಪ್ರಕಾರ ತುಳುರಾಜ್ಯವನ್ನು ಸತ್ಯಪುತ್ರರು (ಸತಿಪುತ್ರರು) ಮಲಯಾಳವನ್ನು ಕೇರಳಪುತ್ರರೂ ಸ್ವತಂತ್ರವಾಗಿ ಆಳಿಕೊಂಡಿದ್ಡರೆಂದು ತಿಳಿದು ಬರುತ್ತದೆ. ಕ್ರಿ. ಪೂ. 2 ನೇ ಶತಮಾನದಿಂದ ಕದಂಬ ಅರಸರು ತುಳುದೇಶವನ್ನು ಕ್ರಿ. ಶ 9ನೇ ಶತಮಾನದವರೆಗೆ ಆಳುತ್ತಿದ್ದರು.
ಬ್ರಾಹ್ಮಣರ ತುಳುವಿಲ್ಲಿ ಕನ್ನಡ, ಸಂಸ್ಕೃತ ಪದಗಳ ಬಳಕೆ ಅಧಿಕವಾಗಿರುತ್ತದೆ. ಕ್ಷೇಮ, ಅಶಿವ, ಯಥೇಷ್ಟ ಸಾವಕಾಶ, ನಿಧಾನ ಮೊದಲಾದ ಪದಗಳು ಹೆಚ್ಚಾಗಿ ಬಳಕೆಯಲ್ಲಿದೆ. ಬ್ರಾಹ್ಮಣೇತರ ತುಳುವಿನಲ್ಲಿ ‘ಲ’ ಕಾರವಿರುವಲ್ಲಿ ಬ್ರಾಹ್ಮಣರ ತುಳುವಿನಲ್ಲಿ ‘ಳ” ಕಾರವಿರುವುದು ಕಂಡುಬರುತ್ತದೆ. ಈ ತುಳುವನ್ನು ಶಿವಳ್ಳಿ ಬ್ರಾಹ್ಮಣರು,ಪದಾರ್ಥಿ ಬ್ರಾಹಣರು,ಮತ್ತು ಸ್ಥಾನಿಕ ಬ್ರಾಹ್ಮಣರು ಮಾತನಾಡುತ್ತಾರೆ. ಬ್ರಾಹ್ಮಣ ತುಳುವಿನ ಒಂದು ವಾಕ್ಯವನ್ನು ಇಲ್ಲಿ ಮಾದರಿಯಾಗಿ ನೀಡಲಾಗಿದೆ. ಬ್ರಾಹ್ಮಣರ ತುಳು ಕನ್ನಡ ಮತ್ತು ಸಂಸ್ಕೃತ ಶಬ್ಧಗಳನ್ನು ಹೆಚ್ಚಾಗಿ ಬಳಸುವ ಕಾರಣ ಇದನ್ನು ತುಳುಭಾಷೆಯ ಸಮರ್ಥ ಪ್ರತಿನಿಧಿಯಾಗಿ ತೆಗೆದುಕೊಳ್ಳಲು ಸಾದ್ಯವಿಲ್ಲ. ಆದರೂ ತುಳು ಶಬ್ದಗಳು ಪ್ರಧಾನವಾಗಿರುವುದರಿಂದ ತುಳು ಬಾಷೆಯ ಒಂದು ವಿಧ ಎನ್ನಬಹುದು.
ಹಿಂದಿನ ಶಿವಳ್ಳಿ ಬ್ರಾಹ್ಮಣರು ವೇದ, ಶಾಸ್ತ್ರ, ಉಪನಿಷತ್ತುಗಳಲ್ಲಿ ಪಾರಂಗತರಾಗಿದ್ದರು. ಇವರು ಸಂಸ್ಕೃತದಲ್ಲಿ ವೇದ, ಶಾಸ್ತ್ರ, ಉಪನಿಷತ್ತುಗಳ ಬಗ್ಗೆ ಅನೇಕ ಸಾಹಿತ್ಯ ರಚನೆ ಮಾಡಿದ್ದಾರೆ. ಆದರೆ ತುಳುವಿಗೆ ಬಂದರೆ ತುಳು ಸಾಹಿತ್ಯದಲ್ಲೇ ಮೊತ್ತ ಮೊದಲ ಯಕ್ಷಗಾನ ಗ್ರಂಥ ರಚನೆಯಾದದ್ದು ಬ್ರಾಹ್ಮಣ ತುಳುವಿನಲ್ಲಿ. ಬಾಯಾರು ಸಂಕಯ್ಯ ಭಾಗವತರ ‘ತುಳು ಬಾಸೆಟ್ ಪಂಚವಟಿ ರಾಮಾಯಣ ವಾಲಿ-ಸುಗ್ರೀವೆರೆ ಕಾಳಗೊ’ ಎಂಬದು ತುಳುವಿನ ಮೊತ್ತ ಮೊದಲನೆಯ ಉಪಲಬ್ಧ ಗ್ರಂಥವಾಗಿದೆ. ಈ ಗ್ರಂಥವನ್ನು ಕ್ರಿ.ಶ. 6-5-1887 ನೆಯ ದಿನ ಶುಕ್ರವಾರ ಬರೆದು ಮುಗಿಸಿದ್ದಾರೆ. ವಿಟ್ಲದ ಅರಸು ಮನೆತನದವರ ಭಾಷೆ ತುಳುವಾದುದರಿಂದ ಅವರ ಅಪೇಕ್ಷೆ ಮೇರೆಗೆ ಕುಂಬಳೆಯ ಪಾರ್ತಿಸುಬ್ಬ ಕವಿಯಿಂದ ಕನ್ನಡದಲ್ಲಿ ರಚಿತವಾದ ‘ಪಂಚವಟಿ ವಾಲಿ ಸುಗ್ರೀವರ ಕಾಳಗ’ ಎಂಬ ಪ್ರಸಂಗದ ಅನುವಾದವನ್ನು ತುಳುಭಾಷೆಯಲ್ಲಿ ‘ಪಂಚವಟಿ ವಾಲಿ ಸುಗ್ರೀವೆರೆ ಕಾಳಗೋ’ ಎಂಬ ಪ್ರಸಂಗವನ್ನು ಬರೆದರೆಂದು ತಿಳಿದು ಬರುತ್ತದೆ.ಮೂಲ ಗ್ರಂಥದಲ್ಲಿ ಸುಗ್ರೀವ ಪಟ್ಟಾಭಿಷೇಕದಲ್ಲಿ ಕಥೆ ಕೊನೆಗೊಂಡರೆ ತುಳು ಅನುವಾದದಲ್ಲಿ ಸಂಕ್ಷೇಪವಾಗಿ ರಾಮಾಯಣದ ಅಂತ್ಯದವರೆಗಿನ ಎಲ್ಲಾ ಕಥೆಯೂ ಬರುತ್ತದೆ. ತುಳು ಭಾಷೆಗೆ ಒಗ್ಗುವ ಶಬ್ದಗಳನ್ನು ಔಚಿತ್ಯಪೂರ್ಣವಾಗಿ ಜೀವಂತಿಕೆಯಿಂದ ಬಳಸಿರುವುದು ಸಂಕಯ್ಯ ಭಾಗವತರ ಯಶಸ್ಸಿಗೆ ಕಾರಣ. ಅವಮಾನಿತಳಾದ ಶೂರ್ಪನಖಿ ಲಂಕೆಗೆ ಓಡಿದ ಸಂದರ್ಭವನ್ನು ಈ ರೀತಿ ಚಿತ್ರಿಸಿದ್ದಾರೆ.
“ರಾಗೊ-ನಾದನಾಮಕ್ರಿಯೆ ‘ಅಷ್ಟತಾಳೊ’
ಮಿಕಿ ಮೂಂಕ್ ಕೆಬಿಮಾಂತ್ ಕೊಯ್ಯೆರ್
ಎನ್ನ ಪಳಯಡಿಕುಳೆನ್ಮಾಂತ ಕೆರಿಯೆರ್
ನರಮಾನ್ಯರೆಗಿಂಚಿ ಬುಳೆವಾಂಡ ರೌಂಡ್
ತಿರಿಂಗ್ಯಾರ ತೀರುವೋ ಇಂಚಾಂಡ
ಬುಡೆತೀನ್ ಕೊಂಡೋವಂತುಪ್ಪೆನೊ
ತಡಸಾವರಾವಂದ್ ಇಂದೆಕ್” ಎಂದ್ ಕಡತ್ ಲಡತ್ ಪೋಯಳಾಯೆರೆಗೆ
ಬೂಳೊಂದು ತರೆ ತರೆ ನೋತೊಂದು ನೆಲೊ
ಮೂರಿ ಪೋಪಿ ಲೆಕ್ಕೂ ಬುಳ್ತೊಂದು
ಪಾರ್ ಪೋಯಳ ಲಂಕಾಪಟ್ಣೊಗ್
ಮಲ್ಲ ಮಾರಿಯಾಯಳ್ ರಕ್ಕಸೆರೆಗ್
ಎಂ.ಆರ್ ಸುಬ್ರಹ್ಮಣ್ಯ ಶಾಸ್ತ್ರಿ ಅವರ ‘ತುಳು ಕನ್ಯೋಪದೇಶ”ವು ಐತಿಹಾಸಿಕ ಹಾಗೂ ಮೌಲಿಕ ಮಹತ್ವವುಳ್ಳ ತುಳುಗ್ರಂಥ, ಇದರಲ್ಲಿ ಬಾಲಿಕೆಯರು ಮುಖ್ಯವಾಗಿ ತಿಳಿಯಬೇಕಾದ ವಿಷಯಗಳನ್ನೆಲ್ಲಾ ತುಳುವಿನಲ್ಲಿಯೇ ಶ್ಲೋಕ ರೂಪವಾಗಿ ಬಾಯಿಪಾಠ ಮಾಡಲು ಅನುಕೂಲವಾಗುವಂತೆ ಮಾಡಿದ್ದೇನೆ ಎಂದು ಲೇಖಕರು ಪ್ರಥಮ ಮುದ್ರಣದಲ್ಲಿ ಹೇಳಿದ್ದಾರೆ. ಪ್ರಥಮ ಮುದ್ರಣದ ಪ್ರಸ್ತಾವನೆಯಲ್ಲಿ ತುಳುವರು ಸ್ವಭಾಷೆಯ ಮೇಲೆ ಇಡಬೇಕಾದ ಅಬಿಮಾನದ ವಿಚಾರವನ್ನು ಪ್ರಸ್ತಾಪಿಸಿ ಸ್ತ್ರೀಯರಲ್ಲಿ ವಿದ್ಯಾಭಿರುಚಿ ಉಂಟಾಗುವಂತೆ ಇನ್ನು ಮೇಲಾದರೂ ಯಥಾಶಕ್ತಿ ಪ್ರೋತ್ಸಾಹ ಕೊಡಬೇಕೆಂದು ಕೇಳಿಕೊಂಡಿದ್ದಾರೆ. “ ಕನ್ನೋಪದೇಶ “ ಬ್ರಾಹ್ಮಣರ ತುಳುವಿನಲ್ಲಿದ್ದು 88 ಶ್ಲೋಕಗಳನ್ನು ಒಳಗೊಂಡಿದೆ. 1928ರಲ್ಲಿ ಉಡುಪಿಯಲ್ಲಿ ಸ್ಥಾಪನೆಯಾದ ‘ ತುಳುವ ಮಹಾಸಭೆ ‘ ಪಣಿಯಾಡಿ (ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯ) ಅವರ ಮುಂದಾಳುತನದಲ್ಲಿ ಮಾಡಿದ ಕಾರ್ಯ ತುಳು ಸಾಹಿತ್ಯ ಚರಿತ್ರೆಯಲ್ಲಿ ಅದ್ವಿತೀಯವಾದುದು. ಪಣಿಯಾಡಿಯವರ ಪ್ರೋತ್ಸಾಹದಿಂದ ಕೊರಡ್ಕಲ್ ಶ್ರೀನಿವಾಸ ರಾವ್ “ ತುಳು ನಾಡಗೀತೆ “ ಯಲ್ಲಿ ತುಳು ಮಾತೆಯನ್ನು ಕುರಿತು ಪ್ರಾರ್ಥಿಸುತ್ತಾ ತುಳು ನಾಡಿನ ಖ್ಯಾತಿಯನ್ನು ವರ್ಣಿಸಿ, ತುಳು ಜನರು ಪರದೇಶದ ವಸ್ತುಗಳಿಗೆ, ಪರಭಾಷೆಗೆ ಮಾರು ಹೋದದ್ದನ್ನು ದುಃಖಭರಿತವಾಗಿ ನಿವೇದಿಸಿ ಶಿವಳ್ಳಿ ಬ್ರಾಹ್ಮಣರ ಪಾತ್ರ ಮಹತ್ವವಾದುದು ಎನ್ನಬಹುದು.
ಶಿವಳ್ಳಿ ಬ್ರಾಹ್ಮಣರದ್ದು ಅವಿಭಕ್ತ ಕುಟುಂಬ ಪದ್ಧತಿ ಆದರೆ ಈಗಿನ ಕಾಲದವರು ವಿಭಕ್ತ ಕುಟುಂಬಗಳನ್ನು ಆಶಿಸುವುದರಿಂದ ವಿಭಕ್ತ ಕುಟುಂಬಗಳು ಈಗ ಹೆಚ್ಚಾಗಿವೆ. ಶಿವಳ್ಳಿ ಬ್ರಾಹ್ಮಣರದ್ದು ಪಿತೃ ಪ್ರಧಾನ ಕುಟುಂಬವಾಗಿದೆ. ತಂದೆಯೇ ಕುಟುಂಬದ ಮುಖ್ಯಸ್ಥ. ಆಸ್ತಿ ವ್ಯವಹಾರಗಳು ತಂದೆಯಿಂದ ಮಗನಿಗೆ ಹಸ್ತಾಂತರವಾಗಿ (ಪಿತ್ರಾರ್ಜಿತ) ಬರುತ್ತದೆ. ತಂದೆ, ತಾಯಿ, ದೊಡ್ಡಪ್ಪ, ಚಿಕ್ಕಮ್ಮ, ಅತ್ತೆ, ಮಾವ, ಅಕ್ಕ, ಅಣ್ಣ, ತಮ್ಮ, ತಂಗಿ, ಭಾವ, ಅತ್ತಿಗೆ, ಅಳಿಯ, ಸೊಸೆ, ಅಜ್ಜ, ಅಜ್ಜಿ ಮೊದಲಾದ ಸಂಬಂಧಗಳಿವೆ. ವಿವಾಹ ಸಂಬಂಧಗಳು ಕುಟುಂಬದ ಒಳಗೆ ನಡೆಯುವಂತಿಲ್ಲ.
ಸಂಸ್ಕಾರದಿಂದ ಸಂಸ್ಕರಿಸಲ್ಪಡುತ್ತ ಮನುಷ್ಯನು ಬಾಳ್ವೆಯ ಒಂದೊಂದು ಮಜಲುಗಳನ್ನೇರುತ್ತಾ ಜೀವನದ ಸಾರ್ಥಕ ಗುರುವಿನೆಡೆಗೆ ಸಾಗುತ್ತಿರಬೇಕು. ಇದಕ್ಕಾಗಿಯೇ ಗರ್ಭಾದಾನದಿಂದ ವಿವಾಹದವರೆಗೆ ಪೂರ್ವ ಸಂಸ್ಕಾರಗಳೆಂದು ಹದಿನಾರು ಸಂಸ್ಕಾರಗಳೂ, ಮರಣಾನಂತರದ ಹದಿನಾರು ಸಂಸ್ಕಾರಗಳೂ ವೈದಿಕ ಧರ್ಮದಲ್ಲಿ ವಿಧಿಸಲ್ಪಟ್ಟಿವೆ. ಯಾವುದೇ ಸಂಸ್ಕಾರದ ಆರಂಭದಲ್ಲಿ ಗಣಪತಿ ಪೂಜೆಯನ್ನು ಸರ್ವ ವಿಘ್ನನಾಶಕ್ಕಾಗಿ ಮಾಡುತ್ತಾರೆ. ದಿವಸವೂ ಪುಣ್ಯಪ್ರದವಾಗಲಿ ಎಂದು ಬ್ರಾಹ್ಮಣರು ಮಾಡುವ ವಾಚನಕ್ಕೆ ಪುಣ್ಯಾಹ ವಾಚನ ಎನ್ನುವರು. ಕುಲದ ಕಲ್ಯಾಣವಾಗಬೇಕೆಂದು ಕುಲದೇವತೆಯಲ್ಲಿ ಬೇಡಿಕೊಳ್ಳುವ ಪೂಜೆ ಮಾತೃಕ ಪೂಜೆ, ಪಿತೃಗಳ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಪಿತೃಗಳಿಗೋಸ್ಕರ ಶ್ರಾದ್ಧವನ್ನು ವರ್ಷಕ್ಕೊಮ್ಮೆ ಮಾಡುತ್ತಾರೆ. ಸತ್ತವರ ಮಕ್ಕಳೆಲ್ಲಾ ಸೇರಿ ಪಿಂಡ ಹಾಕುವ ಕಾರ್ಯಕ್ರಮ. ಮೂರು ತಲೆಮಾರಿನವರಿಗೆ ಪಿಂಡ ಪ್ರದಾನ ಮಾಡುತ್ತಾರೆ. ಶಿವಳ್ಳಿ ಬ್ರಾಹ್ಮಣರು ಷೋಡಶ ಸಂಸ್ಕಾರಗಳನ್ನು ಉದ್ಧೇಶಪೂರ್ವಕವಾಗಿ ಆಚರಿಸುತ್ತಾರೆ.ಆಷಾಡ ಮಾಸದಲ್ಲಿ ತಪ್ತ ಮುದ್ರಾ ಧಾರಣೆ ಶಿವಳ್ಳಿ ಅವರಲ್ಲಿ ಬಹಳ ಮುಖ್ಯ ಹಾಗು ಕಡ್ಡಾಯ.ಇದರ ಬಗ್ಗೆ ಧರ್ಮ ಗ್ರಂಥವಾದ ನಿರ್ಣಯ ಸಿಂಧುವಿನಲ್ಲಿ ಬಹಳ ಉಲ್ಲೇಖವಿದೆ
ಅ.ಗರ್ಭಾದಾನ
ಆ.ಸೀಮಂತೋನ್ನಯನ: ಗರ್ಭದ ಶಕ್ತಿಯು ಹೆಚ್ಚಾಗಿ ಅದು ಸ್ಥಿರವಾಗಿರಬೇಕೆಂದು ಈ ಕಾರ್ಯಕ್ರಮವನ್ನು ಮಾಡುತ್ತಾರೆ. 7 ತಿಂಗಳಾದ ಗರ್ಭಿಣಿಗೆ ಸೀಮಂತದ ಕಾರ್ಯಕ್ರಮ ಮಾಡುತ್ತಾರೆ. ಊರಿನ ಮುತ್ತೈದೆಯರೆಲ್ಲಾ ಸೇರಿ ಆರತಿ ಮಾಡಿ ಮಡಿಲು ತುಂಬಿಸುವ ಕಾರ್ಯ ಮಾಡುತ್ತಾರೆ. ಪತಿಯು ಎರಡು ಕಾಯಿಗಳಿಗಿರುವ ಔದುಂಬರದ ಟೊಂಗೆ, ಮೂರು ಚುಕ್ಕೆಗಳಿರುವ ಮುಳ್ಳು ಮತ್ತು ದರ್ಭೆಗಳಿಂದ ಪತ್ನಿಯ ತಲೆಯನ್ನು ಬಾಚಬೇಕು. ಈ ಸಂದರ್ಭದಲ್ಲಿ ಗರ್ಭಿಣಿಗೆ ಉಡುಗೊರೆಯನ್ನಿತ್ತು ಸಂತೋಷಗೊಳಿಸುತ್ತಾರೆ. ಇಷ್ಟವಾದ ಸಿಹಿ ತಿಂಡಿಗಳನ್ನು ಮಾಡುತ್ತಾರೆ.
ಇ.ಜಾತಕರ್ಮ: ಗಂಡು ಮಗು ಜನಿಸಿದ ಕೂಡಲೇ ಗಂಟೆಯನ್ನು ಬಾರಿಸುತ್ತಾರೆ. ಹೆಣ್ಣು ಹುಟ್ಟಿದರೆ ಶಂಖವನ್ನು ಊದುತ್ತಾರೆ. ಮಗು ಹುಟ್ಟಿದೊಡನೆಯೇ ಬಂಗಾರದ ಕಡ್ಡಿಯಿಂದ ತುಪ್ಪ ಮತ್ತು ಜೇನನ್ನು ಮಗುವಿಗೆ ಕುಡಿಸಲಾಗುತ್ತದೆ. ನಂತರ ಅದೇ ಬಂಗಾರದ ಕಡ್ಡಿಯಿಂದ ಮಗುವಿಗೆ ಕಿವಿ ಚುಚ್ಚಿ ಅದರ ಸ್ಮರಣಶಕ್ತಿಯನ್ನು ವ್ರಧ್ದಿಸಲಾಗುತ್ತದೆ,
ಈ.ನಾಮಕರಣ ಮಗು ಹುಟ್ಟಿದ 11 ನೇ ದಿನದಂದು ನಾಮಕರಣ ಮಾಡುತ್ತಾರೆ. ಆಗ ಕುಟುಂಬದವರಿಗೆ ಬಿಡುವಿಲ್ಲದಿದ್ದರೆ ಹುಟ್ಟಿದ 16, 27, 40 ದಿನಗಳಲ್ಲಿ ಮಾಡುತ್ತಾರೆ. ಮಗುವಿಗೆ ನಾಲ್ಕು ವಿಧದ ಹೆಸರಿಡುವ ಪರಿಪಾಠವಿದೆ.
ಉ.ನಿಷ್ಕ್ರಮಣ ಆಯಸ್ಸು, ಮಾನಸಿಕ ಶಾರೀರಿಕ ಶಕ್ತಿಗಳು ಹೆಚ್ಚಾಗಬೇಕೆಂಬ ಉದ್ಧೇಶದಿಂದ ಮಗುವನ್ನು ಮನೆಯಿಂದ ಹೊರತಂದು ಸೂರ್ಯ, ಚಂದ್ರ, ಅಗ್ನಿ, ದನ, ದಿಕ್ಪಾಲ, ಸಮೀಪದ ಬಂಧುಗಳ ದರ್ಶನ ಮಾಡಿಸುವುದು ಆ ಸಂಸ್ಕಾರದ ಮುಖ್ಯ ಉದ್ದೇಶ.
ಊ.ಅನ್ನಪ್ರಾಸನ: ಮಗುವಿಗೆ ಆಯಸ್ಸು, ವರ್ಚಸ್ಸು, ಶಾರೀರಿಕ ಶಕ್ತಿ, ದಾರ್ಢ್ಯ ಇತ್ಯಾದಿಗಳ ವೃದ್ಧಿಯಾಗಬೇಕೆಂಬ ಉದ್ದೇಶದಿಂದ ಕೈಯಲ್ಲಿ ಸುವರ್ಣವನ್ನು ಹಿಡಿದು ಅದರಿಂದ ಅನ್ನವನ್ನು ಉಣಿಸುವುದು. ಈ ಅನ್ನಪಾಶನ ಕಾರ್ಯಕ್ರಮ ನಾಮಕರಣದಂದು ಅಥವಾ ಬೇರೆ ದಿವಸಗಳಲ್ಲಿ ದೇವಸ್ಥಾನ ಸನ್ನಿಧಿಯಲ್ಲಿ ಮಾಡಿಸುತ್ತಾರೆ.
ಋ.ಚೂಡಾಕರ್ಮ: ಶಿಖೆಯನ್ನು ಕಲ್ಪಿಸುವ ಸಂಸ್ಕಾರ ಎಂದರ್ಥ, ಆಯಸ್ಸು, ಬ್ರಹ್ಮ ತೇಜಸ್ಸು ಮುಂತಾದವುಗಳು ವೃದ್ಧಿಸಬೇಕೆಂಬ ಉದ್ದೇಶದಿಂದ ಇದನ್ನು ಮಾಡಲಾಗುತ್ತದೆ.
ಎ.ಉಪನಯನ : ಉಪ ಎಂದರೆ ಆಚಾರ್ಯನ, ಗುರುವಿನ ಸಮೀಪ. ನಯನ ಎಂದರೆ ಕೊಂಡೊಯ್ಯುವುದು. ಗಾಯತ್ರಿಯ ಉಪದೇಶ ಪಡೆಯಲು, ವೇದ, ಶಾಸ್ತ್ರಗಳನ್ನು ಅಭ್ಯಸಿಸಲು, ಗುರುವಿನ ಬಳಿ ಸೇರುವುದು, ಕಟಿಸೂತ್ರ, ಕೌಪೀನವಸ್ತ್ರ, ಅಬಿನ, ಯಜ್ಞೋಪವೀತ, ದಂಡ ಇತ್ಯಾದಿಗಳ ಧಾರಣ ಮುಂತಾದ ಪ್ರಧಾನ ವಿಧಿಗಳು ಸೆರಿಕೊಂಡಿವೆ. ಈ ಸಂಸ್ಕಾರದಿಂದ ಮುನುಷ್ಯನಿಗೆ ಪುನರ್ಜನ್ಮವೇ ದೊರೆತಂತಾಗಿ ದ್ವಿಜತ್ವ ಪ್ರಾಪ್ತವಾಗುತ್ತದೆ.
ಏ.ಮಹಾನೌಮೀ
ಐ.ಮಹಾವ್ರತ
ಒ.ಉಪನಿಷದ್ ವ್ರತ
ಓ.ಕೇಶಾಂತ
ಔ.ಗೋದಾನ: ಇವುಗಳನ್ನು ಒಟ್ಟಿಗೆ ವೇದವ್ರತಗಳೆಂದು ಕರೆಯುತ್ತಾರೆ. ಗುರುಕುಲದಲ್ಲಿ ಗುರುವಿನ ಬಳಿ ಸಕಲ ವೇದಗಳನ್ನು ಈ ಕಾಲದಲ್ಲಿ ಅಧ್ಯಯನ ಮಾಡುವುದು, ವೇದಾಧ್ಯಯನವಾದ ಮೇಲೆ ಕ್ಷೌರಮಾಡಿಸಿ ಸ್ನಾನ ಮಾಡುವುದಕ್ಕೆ ಕೇಶಾಂತ ಎನ್ನುತ್ತಾರೆ. ದಕ್ಷಿಣಾರೂಪದಲ್ಲಿ ಗುರುವಿಗೆ ಗೋವನ್ನು ಅರ್ಪಿಸುವುದು ಗೋದಾನ.
ಅಂ.ಸಮಾವರ್ತನ: ಗೃಹಸ್ಥಾಶ್ರಮ ಸ್ವೀಕಾರಕ್ಕೆ ಗುರುವಿನಿಂದ ಅನುಮತಿ ಪಡೆದು ಉಪಯುಕ್ತವಾದ ವಿಶಿಷ್ಟ ಉಪದೇಶಗಳನ್ನು ಪಡೆಯುವುದಾಗಿದೆ.
ಅಃ.ವಿವಾಹ: ಧಾರ್ಮಿಕವಾಗಿ ವಿವಾಹವು ಗೃಹಸ್ಥಾಶ್ರಮ ಪ್ರವೇಶಿಸಲು ಮಾಡುವ ದಾರಿ ಎನ್ನಬಹುದು. ಧರ್ಮಶ್ರದ್ಧೆಯುಳ್ಳ ಉತ್ತಮ ಸಂತಾನಾಭಿವೃದ್ಧಿಯೇ ವಿವಾಹದ ಮುಖ್ಯ ಉದ್ದೇಶ. ಇದಕ್ಕೆ ಧಾರ್ಮಿಕ ಮಹತ್ವದಷ್ಟೇ ಸಾಮಾಜಿಕ ಮಹತ್ವವೂ ಇದೆ. ಈ ಸಂಸ್ಕಾರದಲ್ಲಿ ಈ ಕೆಳಗಿನ ಪ್ರದಾನ ವಿಧಿಗಳನ್ನು ಆಚರಿಸುತ್ತಾರೆ.
ಭಾರದ್ವಾಜ, ವಸಿಷ್ಟ, ಕಾಶ್ಯಪ, ವಿಶ್ವಾಮಿತ್ರ, ಕೌಶಿಕ, ಶಾಂಡಿಲ್ಯ, ಗಾರ್ಗ್ಯ ಮುತಾಂದ 94 ಗೋತ್ರಗಳಿವೆ. ಗೋತ್ರಕ್ಕನುಗುಣವಾಗಿ ಸೂತ್ರಗಳು ಬರುತ್ತವೆ. 2 ಸೂತ್ರಗಳಿವೆ.
ಶಿವಳ್ಳಿ ಬ್ರಾಹ್ಮಣರ ಕುಲನಾಮಗಳು: ಶಗ್ರಿತ್ತಾಯ, ಶಬರಾಯ, ತೋಡ್ತಿಲ್ಲಾ, ಪುಣ್ಚಿತ್ತಾಯ,ಪಡ್ವೆಟ್ಣಾಯ,ಮೂಡಣ್ಣಾಯ, ಅಂಗಿತ್ತಾಯ, ತೋಳ್ಪಡಿತ್ತಾಯ, ನೂರಿತ್ತಾಯ, ವಾರಿತ್ತಾಯ, ವಾರಂಬಳಿತ್ತಾಯ,ಕಾಯರತ್ತಾಯ,ಕಾವೇರತ್ತಾಯ, ಕಡಂಬಳಿತ್ತಾಯ, ನೆಲ್ಲಿತ್ತಾಯ, ಮೂಡೆತ್ತಾಯ, ಕೆದಿಲಾಯ, ಸರಳಾಯ, ಮನೋಲಿತ್ತಾಯ, ಎಡಪಡಿತ್ತಾಯ, ಕುದ್ದಣ್ಣಾಯ, ಇರ್ವತ್ರಾಯ, ಬೈಪಾಡಿತ್ತಾಯ ಹೀಗೆ ಸುಮಾರು ೫೨೦ ರಷ್ಟು ಕುಲನಾಮಗಳಿವೆ.
ಶಿವಳ್ಳಿ ಬ್ರಾಹ್ಮಣರು ಋಗ್ವೇದಿಗಳು. ಶಿವಳ್ಳಿ ಬ್ರಾಹ್ಮಣರು ವೈಷ್ಣವರು. ಮಾದ್ವಾನುಯಾಯಿಗಳು, ಶಿವಳ್ಳಿ. ಬ್ರಾಹ್ಮಣರ ಮೂಲ ವೃತ್ತಿ ಪೌರೋಹಿತ್ಯ ಮಾಡುವುದು.ದೇವಸ್ಥಾಗಳಲ್ಲಿ ಪೂಜೆ ಮಾಡುವುದು. ಕೃಷಿಯನ್ನೂ ಕೂಡ ಮಾಡುತ್ತಾರೆ. ಈಗ ಬ್ಯಾಂಕ್ ಉದ್ಯೋಗ, ವ್ಯಾಪಾರ ಇನ್ನಿತರ ರೀತಿಯ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಶಿವಳ್ಳಿ ಬ್ರಾಹ್ಮಣರು ಕಟ್ಟುನಿಟ್ಟಾದ ವೈದಿಕ ಸಂಪ್ರದಾಯಸ್ಥರು. ಚೇದೋಕ್ತ ಜಪ-ತಪ-ಯಜ್ಞಯಾಗಾದಿಗಳನ್ನು ಶ್ರದ್ಧೆಯಿಂದ ಆಚರಿಸುವ ನಿಷ್ಠಾವಂತರು.
ಸರಳ ನಡೆನುಡಿಯ ಶಿವಳ್ಳಿ ಬ್ರಾಹ್ಮಣರಿಗೆ ವ್ರತ ನಿಯಮಗಳಲ್ಲಿ ಅತೀವವಾದ ಶ್ರದ್ಧೆ ಭಕ್ತಿಯಿದೆ. ಶಿವಳ್ಳಿ ಬ್ರಾಹ್ಮಣರು ಪಂಚಾಯತನ ಪೂಜೆಯನ್ನು ಮಾಡುತ್ತಾರೆ. ಶಿವಳ್ಳಿ ಬ್ರಾಹ್ಮಣರಲ್ಲಿ ವ್ರತ ನಿಯಮಗಳನ್ನು ಗಂಡಸರೂ, ಹೆಂಗಸರೂ ಆಚರಿಸುತ್ತಾರೆ.ತಪ್ತ ಮುದ್ರಾ ಧಾರಣೆ ಎಲ್ಲರಿಗು ಕಡ್ಡಾಯ.ಇದರಿಂದ ವೈಶ್ಣವ ಸಿದ್ಧಿ ಅಗ್ತದೆ ಎಂದು ಒಂದು ನಂಬಿಕೆ. ಮಂಗಳವಾರ-ವಿಷ್ಣು,ದುರ್ಗೆ, ಬುಧವಾರ ಶಿವ, ಗುರುವಾರ-ರಾಘವೇಂದ್ರ, ಶುಕ್ರವಾರ- ಲಕ್ಷ್ಮೀ, ದುರ್ಗೆ ಶನಿವಾರ ಆಂಜನೇಯ ವ್ರತಗಳನ್ನು ಮಾಡುತ್ತಾರೆ. ಸಂಕಷ್ಟಿ, ಋಷಿ ಪಂಚಮಿ, ಸತ್ಯನಾರಾಯಣ ವ್ರತ, ಅನಂತನ ವ್ರತ ಮೊದಲಾದ ವ್ರತಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ.
ನಾಗರ ಪಂಚಮಿಯಂದು ನಾಗದೇವರಿಗೆ ವಿಶೇಷವಾದ ಪರ್ವವನ್ನು ಮಾಡುತ್ತಾರೆ. ಬೆಲ್ಲ, ಅಕ್ಕಿ, ತೆಂಗಿನಕಾಯಿ, ಅರಳು, ಅವಲಕ್ಕಿ, ಬಾಳೆ, ಅಡಿಕೆಯ ಹಿಂಗಾರವನ್ನು ಇಟ್ಟು ಪೂಜೆ ಮಾಡುವುದಕ್ಕೆ ಪರ್ವ ಮಾಡುವುದು ಎನ್ನುತ್ತಾರೆ.
ತುಳು ನಾಡಿನಲ್ಲಿ ಆಚರಿಸುವ ಎಲ್ಲಾ ಹಬ್ಬ ಹರಿದಿನಗಳನ್ನು ಶಿವಳ್ಳಿ ಬ್ರಾಹ್ಮಣರು ಆಚರಿಸುತ್ತಾರೆ. ಆಟಿ (ಆಷಾಡ) ತಿಂಗಳ ಬಿರುಮಳೆಯ ದಿನಗಳನ್ನು ಬಿಟ್ಟರೆ ವರ್ಷದುದ್ದಕ್ಕೂ ಬೇರೆ ಬೇರೆ ಬಗೆಯ ಹಬ್ಬಗಳನ್ನು ಆಚರಿಸುತ್ತಾರೆ. ಚೌತಿ, ಅಷ್ಟಮಿ, ನಾಗರಪಂಚಮಿ, ಷಷ್ಟಿ, ಅನಂತ ಚತುರ್ದಶಿ, ನರಕ ಚತುರ್ದಶಿ, ಬಲಿಪಾಡ್ಯ, ತುಳಸಿ ಹಬ್ಬ, ದೀಪಾವಳಿ, ನವರಾತ್ರಿ, ಮಹಾಲಯ ಅಮಾವಾಸ್ಯೆ,ಯುಗಾದಿ ಇತ್ಯಾದಿಗಳನ್ನು ವಿಶಿಷ್ಟವಾದ ರೀತಿಯಲ್ಲಿ ಆಚರಿಸುತ್ತಾರೆ. ಆಯಾ ಹಬ್ಬಗಳಿಗೆ ಆಗಬೇಕಾದ ಪೂಜಾಕ್ರಮ, ತಿಂಡಿ, ಪಲ್ಯ ಇತ್ಯಾದಿಗಳಲ್ಲೂ ನಿರ್ದಿಷ್ಟತೆ ಇದೆ. ಇನ್ನು ಮನೆ ತುಂಬಿಸುವುದು, ಹೊಸ ಊಟ, ಕೆಡ್ಡಸ ಇತ್ಯಾದಿ ಸಂದರ್ಭಗಳಲ್ಲಿ ಬೇರೆ ಬಗೆಯದೇ ಆದ ಆಚರಣೆ ನಡೆಯುತ್ತದೆ. ಸೋಣ ತಿಂಗಳು ವಿಶೇಷವಾಗಿ ಎರಡು ಹೊತ್ತು ಹೊಸ್ತಿಲ ಪೂಜೆ ನಡೆಯುತ್ತದೆ. ಪ್ರಾತಃಕಾಲ ದಿನವೂ ತುಳಸಿ ಪೂಜೆ ಮಾಡುತ್ತಾರೆ.
ಎಲ್ಲಾ ಜನಾಂಗಳಲ್ಲೂ, ಪ್ರದೇಶಗಳಲ್ಲೂ ಹಿಂದಿನ ದಿನಗಳಿಂಲೇ ಪ್ರಚಲಿತವಾಗಿರುವ ಅನೇಕ ಜನಪದ ಆಟಗಳಿವೆ. ಆಟಗಳು ಪ್ರಾಚೀನ ಸಂಸ್ಕೃತಿಯನ್ನು ತಕ್ಕಮಟ್ಟಿಗೆ ಬಿಂಬಿಸುವುದು ಕೂಡ ಆಗಿದೆ. ಅಜ್ಜಿಯಾಟ, ತೋಳತೊಟ್ಟಿಲಾಟ, ಕೋಳಿಕಾದುವಿಕೆ, ಕುದುರೆ ಆಟ, ಬೀಸು ಹೊಡೆತ, ಉಪ್ಪಾಟ, ಕಪ್ಪೆಲಾಗ, ಉಸಿರು ಕಟ್ಟಿಸುವುದು, ಡೊಂಕ ಹಾಕುವುದು, ಕಾಗೆ-ಗಿಳಿ, ಕಬಡ್ಡಿ, ಹುಲಿದನ, ಪುಣಿಚ್ಚೆಲ್ ಆಟ, ಪಲ್ಲಿಪತ್, ಮರಕೋತಿಯಾಟ, ನೇಲಾಟ, ಅವಿತುಕೊಳ್ಳುವಾಟ, ದುರ್ಸುಬಾಣ, ನೀರಮೇಲೆ ಕಪ್ಪೆಲಾಗ,ತಪ್ಪಂಗಾಯಿ, ಚೆಂಡು ಹೊಡೆತ, ಕುಟ್ಟಿದೊಣ್ಣೆ, ಏಳುಪಲ್ಲೆಯಾಟ, ಬುಗುರಿ, ಜುಬುಲಿ, ಗೋಲಿಯಾಟ, ಏಳು ಗುಳಿಯ ಆಟ, ಕಣ್ಣಾಮುಚ್ಚಾಲೆ, ಗಾಡಿಯಾಟ, ಗೇರುಬೀಜದಾಟ ಮುಂತಾದವು ಹೊರಾಂಗಣ ಆಟಗಳನ್ನು ಜನರು ಆಡುತ್ತಿದ್ದರು. ಚೆನ್ನಮಣೆ, ಪಗಡೆ, ಕಲ್ಲಾಟ, ಕವಡೆ ಆಟ, ಹೊಂಗಾರನ ಕಾಯಿ, ಗಜ್ಜುಗ, ಮಂಜೊಟ್ಟಿ, ಹುಣಸೇ ಬೀಜಗಳಿಂದ ಆಡುವ ಆಟ ಮುಂತಾದ ಒಳಾಂಗಣ ಆಟಗಳನ್ನು ಶಿವಳ್ಳಿ ಬ್ರಾಹ್ಮಣರು (ಮಕ್ಕಳು) ಇತರರಂತೆ ಆಡುತ್ತಿದ್ದರು. ಎಳೆಯರ ಸತ್ವಪೂರ್ಣ ಬೆಳವಣಣಿಗೆಗೆ ಸಹಕಾರಿಯಾಗಬಲ್ಲುದು. ಎಲ್ಲಾ ಆಟಗಳು ಕೆಲವೊಂದು ನಿಯಮಗಳನ ಚೌಕಟ್ಟಿನಲ್ಲಿ ಸಾಗುವುದರಿಂದ ಪರ್ಯಾಯವಾಗಿ ಒಂದು ಬಗೆಯ ಶಿಸ್ತನ್ನು ಮೂಡಿಸುತ್ತವೆ ಎನ್ನಬಹುದು. ಸರಳ, ಸಜ್ಜನಿಕೆಯ ನಡೆನುಡಿಯುಳ್ಳ ಶಿವಳ್ಳಿ ಬ್ರಾಹ್ಮಣರು ಎಲ್ಲಾ ಧಾರ್ಮಿಕ ಆಚರಣೆಗಳನ್ನು ಕಾಲಕ್ಕೆ ತಕ್ಕಂತೆ ವಿಧಿವತ್ತಾಗಿ ಆಚರಿಸುತ್ತಾರೆ. ಹಬ್ಬ ಹರಿದಿನಗಳನ್ನು ಮಾಡುತ್ತಾರೆ. ಎಲ್ಲಾ ರಂಗದಲ್ಲಿಯೂ ಶಿವಳ್ಳಿ ಬ್ರಾಹ್ಮಣರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ ಎನ್ನಬಹುದು.