ಸಿಗ್ನೇಚರ್ ಜೇಡ ಎಂಬುದು ವಿಶ್ವದ ಅನೇಕ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಬಗೆಯ ಜೇಡ. ಆರ್ಗಿಯೋಪ್ ಅನುಸುಜ ಎಂಬುದು ಇದರ ವೈಜ್ಞಾನಿಕ ಹೆಸರು. ತನ್ನ ಬಲೆಯ ಮೇಲೆ ಇದು ಮೂಡಿಸುವ ’ಸಹಿ’ (ಸಿಗ್ನೇಚರ್)ಯಂತಹ ಗುರುತಿನ ಕಾರಣದಿಂದಾಗಿ ಇದು ಸಿಗ್ನೇಚರ್ ಜೇಡ ಎಂದು ಕರೆಯಲ್ಪಡುತ್ತದೆ. ಇದು ತನ್ನ ಬಲೆಯಲ್ಲಿ ನಾಲ್ಕು ಕಡೆಗಳಲ್ಲಿ ’X’ ಆಕಾರದ ತುದಿಯಲ್ಲಿ ಬಿಳಿಬಣ್ಣದ ಜಿಗ್ ಜಾಗ್ ಗೆರೆಗಳನ್ನು ರಚಿಸುತ್ತದೆ. ಹಾಗಾಗಿ ಇದು ರೈಟಿಂಗ್ ಜೇಡ, ದಸ್ಕತ್ ಜೇಡ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತದೆ. ತೋಟಗಳಲ್ಲಿ, ಉದ್ಯಾನಗಳಲ್ಲಿ ಸಾಮಾನ್ಯವಾಗಿ ಕಾಣುವುದರಿಂದ ಇದನ್ನು ಗಾರ್ಡನ್ ಜೇಡ ಎನ್ನುತ್ತಾರೆ. ದಕ್ಷಿಣ ಏಶಿಯಾದಲ್ಲಿ ಸೀಶೇಲ್ಸ್ ದ್ವೀಪಗಳಿಂದ ಹಿಡಿದು ಭಾರತದ ಪ್ರದೇಶಗಳಲ್ಲೆಲ್ಲಾ ಕಂಡುಬರುತ್ತದೆ. ಮಾಲ್ಡೀವ್ಸ್ ದ್ವೀಪಗಳಲ್ಲೂ ಕಾಣಸಿಗುತ್ತದೆ.
ಹೆಣ್ಣು ಜೇಡವು ಬಲೆ ನಡುವಿನಲ್ಲಿ ತಲೆಕೆಳಗಾಗಿ ಎರಡೆರಡು ಕಾಲುಗಳನ್ನು ಜೋಡಿಸಿಕೊಂಡು ಕೂತಿರುತ್ತದೆ. ಇದರ ಬಲೆಯ ನಡುವಿನಲ್ಲಿ ತೂತೊಂದಿರುತ್ತದೆ. ಅಪಾಯದ ಮುನ್ಸೂಚನೆ ದೊರೆತಾಗ ಜೇಡವು ಆ ತೂತಿನ ಮೂಲಕ ಬಲೆಯ ಮತ್ತೊಂದು ಬದಿಗೆ ಹೋಗಿ ತಪ್ಪಿಸಿಕೊಳ್ಳುತ್ತದೆ.[೧] ಇದರ ಸಹಿಗುರುತು ಹಕ್ಕಿಗಳನ್ನು ದೂರ ಇಡಲು, ಬೇರೆ ಪ್ರಾಣಿಗಳು ಗೊತ್ತಾಗದೇ ಬಲೆಯನ್ನು ಹಾಳುಗೆಡವದಂತೆ ತಡೆಯಲು ಗುರುತಾಗಿ ಸಹಾಯಕಾರಿಯಾಗುತ್ತದೆ. ಇವುಗಳ ಬಲೆನೂಲುಗಳು ಅತಿನೇರಳೆ ಕಿರಣಗಳನ್ನು ಚೆನ್ನಾಗಿ ಪ್ರತಿಫಲಿಸಿ ಕೀಟಗಳನ್ನು ಆಕರ್ಷಿಸುತ್ತವೆ.[೨]