ಸುಜಯ್ ಕುಮಾರ್ ಗುಹ ಒಬ್ಬ ಭಾರತೀಯ ಬಯೋಮೆಡಿಕಲ್ ಇಂಜಿನಿಯರ್ . ಅವರು ಭಾರತದ ಪಾಟ್ನಾದಲ್ಲಿ ೨೦ ಜೂನ್ ೧೯೪೦ ರಂದು [೧] ಜನಿಸಿದರು. ಅವರು ಐಐಟಿ ಖರಗ್‌ಪುರದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಬಿ.ಟೆಕ್. ಪದವಿ ಮಾಡಿದರು. ನಂತರ ಐಐಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಅರ್ಬಾನಾ-ಚಾಂಪೇನ್‌ನ ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ಮತ್ತೊಂದು ಸ್ನಾತಕೋತ್ತರ ಪದವಿ ಪಡೆದರು. ತದನಂತರ ಸೇಂಟ್ ಲೂಯಿಸ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಶರೀರಶಾಸ್ತ್ರದಲ್ಲಿ ಗುಹ ಅವರು ಪಿಎಚ್‌ಡಿ ಪಡೆದರು. [೨]
ಗುಹ ಅವರು ಬಯೋಮೆಡಿಕಲ್ ಇಂಜಿನಿಯರಿಂಗ್ ಕೇಂದ್ರವನ್ನು ಸ್ಥಾಪಿಸಿದರು. ಅವರು ತಮ್ಮ ಎಂಬಿಬಿಎಸ್ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪಡೆದರು. ಭಾರತದಲ್ಲಿ ಬಯೋಮೆಡಿಕಲ್ ಎಂಜಿನಿಯರಿಂಗ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಗುಹ ಅವರು ಪುನರ್ವಸತಿ ಎಂಜಿನಿಯರಿಂಗ್, ಸಂತಾನೋತ್ಪತ್ತಿ ವೈದ್ಯಕೀಯದಲ್ಲಿ ಜೈವಿಕ ಎಂಜಿನಿಯರಿಂಗ್ ಮತ್ತು ಗ್ರಾಮೀಣ ಆರೋಗ್ಯ ರಕ್ಷಣೆಗಾಗಿ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ಸಂಶೋಧನಾ ನಿಯತಕಾಲಿಕೆಗಳಲ್ಲಿ ೧೦೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ೨೦೦೩ ರಲ್ಲಿ ಅವರು ಐಐಟಿ ಖರಗ್‌ಪುರದಲ್ಲಿ ಪ್ರಮುಖ ಪ್ರೊಫೆಸರ್ ಆದರು. [೩] ಅವರಿಗೆ ೨೦೨೦ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.
ಗುಹ ಅವರ ಪ್ರಮುಖ ಕೊಡುಗೆ ಹಾರ್ಮೋನ್-ರಹಿತ ಪಾಲಿಮರ್-ಆಧಾರಿತ ಪುರುಷ ಗರ್ಭನಿರೋಧಕ ( RISUG ) ಚುಚ್ಚುಮದ್ದಿನ ಆವಿಷ್ಕಾರ ಮತ್ತು ಅಭಿವೃದ್ಧಿ ಆಗಿದೆ. ಇದಕ್ಕಾಗಿ ಮೂರನೆಯ ಅಂತಿಮ ಹಂತದ ಕ್ಲಿನಿಕಲ್ ಪ್ರಯೋಗವನ್ನು ೨೦೧೯ ರಲ್ಲಿ ಪೂರ್ಣಗೊಳಿಸಲಾಯಿತು. [೪] [೫]