ಅಕ್ಕಿಹೆಬ್ಬಾಳು

ಹೇಮಾವತಿ ನದಿ ತೀರದಲ್ಲಿರುವ ಅಕ್ಕಿಹೆಬ್ಬಾಳು ಗ್ರಾಮವು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಹೋಬಳಿ ಕೇಂದ್ರ, ಇದು ಭೇರ್ಯ ಮತ್ತು ಕೃಷ್ಣರಾಜಪೇಟೆ ನಡುವೆ ಬರುವ ಒಂದು ಸುಂದರ ಗ್ರಾಮ, ಅಕ್ಕಿಹೆಬ್ಬಾಳು ಕೃಷ್ಣರಾಜಪೇಟೆಯಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಭೌಗೋಳಿಕ ವಿಸ್ತೀರ್ಣ 152.46 ಹೆಕ್ಟೇರ್‌ಗಳು, ಅಕ್ಕಿಹೆಬ್ಬಾಳು ಗ್ರಾಮದ ಬಗ್ಗೆ ಬೆಳಕು ಚೆಲ್ಲುವ ಐತಿಹಾಸಿಕ ಆಧಾರಗಳು ಬಹಳಷ್ಟು ದೊರೆಯುವುದಿಲ್ಲ. ಹೊಯ್ಸಳರ ಕಾಲದ ಎರಡು ಶಾಸನಗಳು ಕೊಂಕಣೇಶ್ವರ ಶಿವಾಲಯದಲ್ಲಿ ದೊರೆತಿದೆ. ಈ ಶಾಸನವು ಅಕ್ಕಿಹೆಬ್ಬಾಳು ಗ್ರಾಮದ ಹಳೆಯ ಹೆಸರು ಮತ್ತು ಕೊಂಕಣೇಶ್ವರ ದೇವರ ಬಗ್ಗೆ ಮಾಹಿತಿ ನೀಡುತ್ತದೆ. ಹೇಮಾವತಿ ನದಿಯ ತೀರದಲ್ಲಿರುವ ಈ ಗ್ರಾಮದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ ಆ ಕಾರಣಕ್ಕೆ ಅಕ್ಕಿಹೆಬ್ಬಾಳು ಎಂದು ಹೆಸರು ಬಂತು ಎಂಬ ಹೇಳಲಾಗಿದೆ. ಗ್ರಾಮದ ಬಳಿ ಹರಿಯುತ್ತಿದ್ದ ಹೇಮಾವತಿ ನದಿಯನ್ನು ಹೊಯ್ಸಳರ ಕಾಲದಲ್ಲಿ ಹೆಬ್ಬಹಳ್ಳ ಎಂದು ಕರೆಯುತ್ತಿದ್ದರು. ಈ ಎರಡು ಹೆಸರು ಸೇರಿಸಿ ಅಕ್ಕಿಹೆಬ್ಬಾಳು ಎಂದು ನಮ್ಮ ಹಿರಿಯರು ನಾಮಕರಣ ಮಾಡಿದ್ದರು. ಆಗಿನ ಕಾಲದಲ್ಲಿ ಹೊಯ್ಸಳರು ಅಕ್ಕಿಹೆಬ್ಬಾಳನ್ನು “ಲಂಡನ್” ಎಂದು ಕರೆಯುತ್ತಿದರು. ಎ.ಎನ್.ಮೂರ್ತಿರಾವ್ ಅವರು ಬರೆದಿರುವ “ಸಂಜೆಗಣ್ಣಿನ ಹಿನ್ನೋಟ” ಪುಸ್ತಕದಲ್ಲಿ ಅಕ್ಕಿಹೆಬ್ಬಾಳಿನ ಹಳೆಯ ಹೆಸರು “ತಂಡಲಪುರ" ಎಂದುಅವರು ಹೇಳಿದ್ದಾರೆ.

ಇಲ್ಲಿನ ಶಾಸನವೊಂದು ಈಶ್ವರ ದೇವರನ್ನು ಕೋಗಳೇಶ್ವರ ಎಂದು ಹೆಸರಿಸಿದೆ. ದೇವಾಲಯದ ಹೆಸರು ಅಳತೆಯ ಒಂದು ಪರಂಪರಾಗತ ಸಾಧನವಾದ ಕೊಳಗದ ಹೆಸರಿನಿಂದ ಬಂದಿರಬಹುದು. ಕೊಳಗದಲ್ಲಿ ಅಳತೆ ಮಾಡಿ ಸುಂಕವನ್ನು ಪಡೆಯಿತ್ತಿದ್ದ ಪ್ರದೇಶದಲ್ಲಿ ಇದ್ದುದರಿಂದ ಈ ದೇವಾಲಯವನ್ನು ಕೊಂಕಣೇಶ್ವರ ಎಂದು ಹೆಸರು ಬಂತ್ತು. ಈ ಗ್ರಾಮದಲ್ಲಿ ಸಿಕ್ಕಿರುವ ಆಧಾರದ ಮೇಲೆ ಈ ದೇವಾಲಯಗಳು 12ನೇ ಶತಮಾನದ ದೇವಾಲಯಗಳು ಎಂದು ಹೇಳುತ್ತಾರೆ.

ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಎರಡು ಪ್ರದೇಶಗಳು ಇದೆ. ಹಳೇ ಊರು ಮತ್ತು ಹೊಸ ಊರು ಎಂಬ ಎರಡು ಪ್ರದೇಶಗಳಿವೆ. ಹಳೇ ಊರಿನಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಶ್ರೀ ಕೊಂಕಣೇಶ್ವರ ದೇವಾಲಯ ಮತ್ತು ಇತ್ತೀಚೆಗೆ ನಿರ್ಮಿಸಿರುವ ಯಾತ್ರಿನಿವಾಸ್, ಸಮುದಾಯ ಭವನ ಹಾಗೂ ಮತ್ತು ಹೇಮಾವತಿ ನದಿ ಹರಿಯುವುದನ್ನು ಬಿಟ್ಟರೆ ಇನ್ನೇನು ಅಲ್ಲಿ ಉಳಿದಿಲ್ಲ. ಹಳೇ ಊರಿನಲ್ಲಿ ಈಗ ಜನರು ವಾಸಿಸುವುದಿಲ್ಲ. ಹಳೇ ಊರಿನಲ್ಲಿ ಹಸಿರಿನಿಂದ ಕೂಡಿದ ಗದ್ದೆಗಳು ಮತ್ತು ತೋಟಗಳಿವೆ. ಹಿಂದಿನ ಕಾಲದಲ್ಲಿ ಹಳೇ ಊರಿನಲ್ಲಿ ಜನರು ವಾಸಿಸುತ್ತಿದ್ದರು. ಮಲೇರಿಯಾ ರೋಗ ಬಂದ ಕಾರಣಕ್ಕೆ ಅಲ್ಲೇ 3 ಕಿ.ಮೀ ದೂರದಲ್ಲಿ ಹೊಸ ಊರನ್ನು ನಮ್ಮ ಹಿರಿಯರು ನಿರ್ಮಾಣ ಮಾಡಿದ್ದರು. ಈಗ ಅಕ್ಕಿಹೆಬ್ಬಾಳಿನ ಹೊಸ ಊರಿನಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಹಳೇ ಊರಿನಲ್ಲಿ ಇದ್ದ ಕೆಲವು ದೇವರ ವಿಗ್ರಹಗಳನ್ನು ತೆಗೆದುಕೊಂಡು ಹೋಗಿ ಹೊಸ ಊರಿನಲ್ಲಿ ಅನೇಕ ದೇವಾಲಯಗಳನ್ನು ನಿರ್ಮಾಣ ಮಾಡಿಕೊಂಡರು ಎಂದು ನಮ್ಮ ಹಿರಿಯರು ಹೊಸ ಊರು ನಿರ್ಮಾಣದ ಇತಿಹಾಸವನ್ನು ಹೇಳುತ್ತಾರೆ.

ಕೃತಾಯುಗದಲ್ಲಿ ಗೌತಮ ಮಹರ್ಷಿಗಳು ಮುಂದೆ ಕಲಿಯುಗದಲ್ಲಿ ಜನರು ಕಷ್ಟಗಳನ್ನು ತಮ್ಮ ದಿವ್ಯದೃಷ್ಠಿಯಿಂದ ತಿಳಿದು ಆ ಕಷ್ಟಗಳನ್ನು ಪರಿಹರಿಸಬೇಕು ಎಂದು ಶ್ರೀಮನ್ನಾರಾಯಣನ ಅವತಾರವಾದ ಶ್ರೀಲಕ್ಷ್ಮೀನರಸಿಂಹಸ್ವಾಮಿಯನ್ನು ಕುರಿತು ಹಲವಾರು ವರ್ಷಗಳ ಕಾಲ ಇಲ್ಲಿನ ಬದರಿಕಾವೃಕ್ಷದ ಕೆಳಗೆ ಕುಳಿತು ತಪಸ್ಸು ಮಾಡಿದ್ದರು. ಮಹರ್ಷಿಗಳ ತಪಸ್ಸಿಗೆ ಪ್ರಸಾದ ಎಂಬ ಫಲಕ್ಕೆ ನರಸಿಂಹಸ್ವಾಮಿ ಲಕ್ಷ್ಮೀ ಸಮೇತವಾಗಿ ಅಕ್ಕಿಹೆಬ್ಬಾಳಿನಲ್ಲಿ ನೆಲೆಸಿದ್ದಾರೆ ಆ ಕಾರಣಕ್ಕೆ ಈ ಊರಿಗೆ “ದಕ್ಷಿಣ ಬದಾರೀಕಾಶ್ರಮ” ಎಂದು ಕರೆಯುತ್ತಾರೆ. ಎಂದು ಎ.ಎನ್.ಮೂರ್ತಿರಾವ್ ಅವರ ಪುಸ್ತಕದಲ್ಲಿ ನಮೂದಿಸಿದ್ದಾರೆ.

ಕಲಿಯುಗದಲ್ಲಿ ಜನರು ಹಲವಾರು ಸಂಕಷ್ಟಗಳಿಗೆ ಗುರಿಯಾಗುತ್ತದೆ. ಆ ಸಂಕಷ್ಟಗಳಿಂದ ನೀನು ಲಕ್ಷ್ಮಿ ಸಮೇತನಾಗಿ ಸ್ಥಿರವಾಗಿ ಭೂಮಿಯಲ್ಲಿ ನೆಲೆಸಿ, ನಿನ್ನನ್ನು ಪೂಜಿಸುವುದರಿಂದ ಸಂಕಷ್ಟಗಳನ್ನು ಪರಿಹರಿಸಬೇಕು ಎಂದುಕೇಳಿಕೊಂಡರು. ಲೋಕ ಕಲ್ಯಾಣಕಾರಕವಾದ ಮುನಿಯ ಬಯಕೆಯನ್ನು ಶ್ರೀ ಹರಿಯುಒಪ್ಪಿ ನರಸಿಂಹಾವತಾರದಲ್ಲಿ ಭಕ್ತರ ಸಂಕಷ್ಟ ಪರಿಹರಿಸಲು ಭೂಮಿಯ ಮೇಲೆ ನೆಲೆ ನಿಂತನು. ಅಂತಹ ಪುಣ್ಯಕ್ಷೇತ್ರವೇ ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯಿರುವ ಆ ಆಲಯವೇ ಗೌತಮಕ್ಷೇತ್ರ ಎಂದು ಹೇಳಿದ್ದರು.


ಗುಡುಗನಹಳ್ಳಿ

ಗುಡುಗನಹಳ್ಳಿ ಎಂಬ ಗ್ರಾಮವು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಹೋಬಳಿಯ ಆಲಂಬಾಡಿ ಕಾವಲ್ ಅಂಚೆಯ ವ್ಯಾಪ್ತಿಯಲ್ಲಿದೆ.

ಈ ಗ್ರಾಮದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿ ತ್ರಿವೇಣಿ ಸಂಗಮವಿದೆ. ಈ ತ್ರಿವೇಣಿ ಸಂಗಮದಲ್ಲಿ ಕಾವೇರಿ, ಲಕ್ಷ್ಮಣತೀರ್ಥ ಮತ್ತು ಹೇಮಾವತಿ ಈ ಮೂರು ನದಿಗಳು ಸಂಗಮ ವಾಗಿರುವಂತಹ ಸ್ಥಳವಾಗಿದ್ದು ಈ ತ್ರಿವೇಣಿ ಸಂಗಮದ ಬಳಿ ಮಹಾದೇಶ್ವರನ ದೇವಾಲಯವಿದೆ. ಈ ತ್ರಿವೇಣಿ ಸಂಗಮದಲ್ಲಿ ಕುಂಭಮೇಳವನ್ನು ನಡೆಸಲಾಗುತ್ತದೆ. ಈ ಕುಂಭಮೇಳವು ದಕ್ಷಿಣ ಭಾರತದ ಪ್ರಸಿದ್ಧ ಮಹಾ ಕುಂಭಮೇಳಗಳಲ್ಲೊಂದಾಗಿದೆ. ಇದುವರೆಗೆ 2013 ಹಾಗು 2022 ರಂದು 2 ಬಾರಿ ಮಹಾಕುಂಭಮೇಳ ನಡೆದಿದೆ. ಈ ಕುಂಭಮೇಳದ ಸಂದರ್ಭದಲ್ಲಿ ಹಲವಾರು ಧಾರ್ಮಿಕ ಪದ್ಧತಿಗಳ ಜೊತೆಗೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅವುಗಳೆಂದರೆ ಗಂಗಾರತಿ,ಲೇಸರ್ ಶೋ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು

ಮಹಾದೇಶ್ವರ ದೇವಾಲಯ

ಈ ದೇವಾಲಯದ ವಿಶೇಷವೆಂದರೆ ಮಲೆ ಮಹಾದೇಶ್ವರರು ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದ್ದರಿಂದ ಇಲ್ಲಿ ಮಹಾದೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ಮಹಾದೇಶ್ವರರ ಪ್ರಥಮ ಪವಾಡವು ಇಲ್ಲಿ ನಡೆದಿದ್ದು ಆ ಪವಾಡವೆಂದರೆ - ಮಹಾದೇಶ್ವರರು ಚಿಕ್ಕ ವಯಸ್ಸಿನಲ್ಲಿ ಉತ್ತರ ಭಾಗದಿಂದ ಬಂದು ಕಾವೇರಿ ನದಿಯನ್ನು ದಾಟಿ ಕಪ್ಪಡಿ ಕ್ಷೇತ್ರಕ್ಕೆ ಹೋಗಲು ನದಿಯನ್ನು ದಾಟಿಸುವಂತೆ ಅಂಬಿಗರನ್ನು ಕೇಳಿದಾಗ ಅಂಬಿಗರು ಹಣ ನೀಡಿದರೆ ದಾಟಿಸುತ್ತೇವೆ ಎಂದು ಹೇಳುತ್ತಾರೆ. ಮಹಾದೇಶ್ವರರು ನನ್ನ ಬಳಿ ಹಣವಿಲ್ಲ ಆದ್ದರಿಂದ ಉಚಿತವಾಗಿ ನದಿಯನ್ನು ದಾಟಿಸುವಂತೆ ಮನವಿ ಮಾಡುತ್ತಾರೆ. ಅದಕ್ಕೆ ಒಪ್ಪದ ಅಂಬಿಗರಿಗೆ ನಿಮ್ಮ ದೋಣಿಗಳು ಮುಳುಗಲಿ ಎಂದು ಶಾಪ ನೀಡಿ ನಂತರ ತಾನು ಧರಿಸಿದ್ದ ಕೆಂಪು ವಸ್ತ್ರವನ್ನು ನದಿಗೆ ಅಡ್ಡಲಾಗಿ ಹಾಸಿ ನದಿಯನ್ನು ದಾಟುತ್ತಾರೆ. ಇದು ಮಹಾದೇಶ್ವರರ ಪ್ರಥಮ ಪವಾಡವೆಂದು ಅವರ ಚರಿತ್ರೆಯ ಪುಟದಲ್ಲಿ ದಾಖಲಾಗಿದೆ. ನಂತರ ಅಂಬಿಗರು ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆ ಇರಲಿ ಎಂದು ಮಹಾದೇಶ್ವರರನ್ನು ಪ್ರಾರ್ಥಿಸಿಕೊಂಡಾಗ ಶಾಪವನ್ನು ಹಿಂಪಡೆದು ಆಶೀರ್ವದಿಸಿ ಮುಂದೆ ತೆರಳುತ್ತಾರೆ ಎನ್ನುವುದು ಜನಪದರ ಮಾತಾಗಿದೆ.

ತ್ರಿವೇಣಿ ಸಂಗಮಕ್ಕೆ ಹೋಗುವ ಮಾರ್ಗಗಳು

ಬಸ್ಸಿನ ಮಾರ್ಗಗಳು

ಕರ್ನಾಟಕದ ರಾಜಧಾನಿ ಹಾಗೂ ಪ್ರಮುಖ ನಗರವಾದ ಬೆಂಗಳೂರಿನಿಂದ ತ್ರಿವೇಣಿ ಸಂಗಮವು 348- 350 ಕಿಲೋ ಮೀಟರ್ ಇದ್ದು ಇಲ್ಲಿಗೆ ಬಸ್ಸಿನ ವ್ಯವಸ್ಥೆ ಇದೆ. ಬೆಂಗಳೂರಿನಿಂದ ಮೈಸೂರಿಗೆ ಬಂದು ಮೈಸೂರಿನಿಂದ ಕೆ ಆರ್ ಪೇಟೆ ಅಥವಾ ಕೆ ಆರ್ ನಗರಕ್ಕೆ ಬಂದು ನಂತರ ಸಂಗಾಪುರ ಬಸ್ಸಿಗೆ ಬಂದು ತ್ರಿವೇಣಿ ಸಂಗಮಕ್ಕೆ ಹೋಗಬಹುದು.

ರೈಲು ಸಾರಿಗೆ

ಬೆಂಗಳೂರಿನಿಂದ ಮೈಸೂರಿಗೆ ಬಂದು ಮೈಸೂರಿಂದ ಕೆ ಆರ್ ನಗರ ಮಾರ್ಗದ ರೈಲಿನಲ್ಲಿ ಬಂದು ಅಕ್ಕಿಹೆಬ್ಬಾಳು ನಿಲ್ದಾಣದಲ್ಲಿ ಇಳಿದುಕೊಂಡು ಸಂಗಾಪುರ ಬಸ್ಸಿಗೆ ಹೋಗಬಹುದು.

ಬರಹ : ಮೊಹಮ್ಮದ್ ಅಜರುದ್ದೀನ್ ಅಕ್ಕಿಹೆಬ್ಬಾಳು

ಅಕ್ಕಿಹೆಬ್ಬಾಳಿನ ಭೌಗೋಳಿಕ ಲಕ್ಷಣ

[ಬದಲಾಯಿಸಿ]

ಕೆ ಆರ್ ಪೇಟೆ ತಾಲ್ಲೂಕು ಒಳಪಡುವ ಪ್ರಮುಖ ಹೋಬಳಿಗಳಲ್ಲಿ ಅಕ್ಕಿಹೆಬ್ಬಾಳು ಒಂದು. ಇದು ತನ್ನದೇ ಆದ ಭೋಗಳಿಕ ವಿಸ್ತೀರ್ಣವನ್ನು ಹೊಂದಿದೆ. ಅಕ್ಕಿಹೆಬ್ಬಾಳು ಸಾಮಾನ್ಯವಾಗಿ ಅನೇಕರಿಗೆ ಪರಿಚಯವಾದವರು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ನಿಂದ ಸ್ವಲ್ಪ ದೂರ 14 ಕಿಲೋಮೀಟರ್ ದೂರದಲ್ಲಿದೆ. ಅಲ್ಲದೆ ಮೈಸೂರು ಹಾಸನ ರಾಜ್ಯ ಹೆದ್ದಾರಿಯಲ್ಲಿ ಬೇರಿಯ ಸಿಗುತ್ತದೆ ಪೂರ್ವಕ್ಕೆ 9 ಕಿಲೋಮೀಟರ್ ದೂರದಲ್ಲಿ ಕಂಡುಬರುತ್ತದೆ. ಮೈಸೂರು ಅರಸೀಕೆರೆ ರೈಲು ಮಾರ್ಗದಲ್ಲಿ ಅಕ್ಕಿಹೆಬ್ಬಾಳು ರೈಲ್ವೆ ನಿಲ್ದಾಣ ಸಿಗುತ್ತದೆ. ರೈಲ್ವೆ ನಿಲ್ದಾಣದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿದೆ.

ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ

[ಬದಲಾಯಿಸಿ]

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವಾಸ್ತು:- ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರನ್ನು ಹಳೆಯ ಊರಿನಲ್ಲಿರುವ ದೇವಸ್ಥಾನದಲ್ಲಿ ಪೂಜಿಸಲಾಗುತ್ತಿದೆ. ಇದು ಚೌಕಾಕೃತಿಯ ಪ್ರಾಕಾರದ ಒಳಗೆ ಇದೆ. ಸುತ್ತಲೂ ಕಲ್ಲಿನಿಂದ ನಿರ್ಮಿತವಾದ ಪ್ರಾಕಾರದ ಗೋಡೆಗಳನ್ನು ಹೊಂದಿದೆ. ಪ್ರಾಕಾರದ ಮಧ್ಯದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ವಿಗ್ರಹ ಇದೆ. ಈ ದೇವಾಲಯದ ಉತ್ತರಕ್ಕೆ ಏಕ ಕೊಠಡಿಯ ಲಕ್ಷ್ಮೀಗುಡಿ ಹಾಗೂ ಆಗ್ನೆಯ ಮೂಲೆಯಲ್ಲಿ ಯಜ್ಞ ಶಾಲೆ ಇದೆ. ದೇವಾಲಯವು ಪಶ್ಚಿಮ ದಿಕ್ಕಿನಲ್ಲಿ ಪ್ರವೇಶದ್ವಾರವನ್ನು ಹೊಂದಿದೆ. ಮೂರ್ತಿಯು ಸಹ ಪಶ್ಚಿಮಾಭಿಮುಖವಾಗಿದೆ. ದೇವಾಲಯವು ಗರ್ಭಗೃಹ, ಅಂತರಾಳ, ಮಹಾ ಮಂಟಪ ಮತ್ತು ಮುಖ ಮಂಟಪಗಳನ್ನು ಹೊಂದಿದೆ. ಈ ದೇವಾಲಯದ ರಚನಾ ಶೈಲಿಯು ವಿಜಯನಗರದ ನಂತರದ ಕಾಲದ್ದೆಂದು ತಿಳಿದು ಬರುತ್ತದೆ. ಆದರೆ ಗರ್ಭಗೃಹದಲ್ಲಿ ಇರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ವಿಗ್ರಹವು ಹೊಯ್ಸಳ ಶೈಲಿಗೆ ಸೇರುತ್ತದೆ. ದೇವಾಲಯದ ಕಂಬಗಳು ಅತ್ಯಂತ ಸರಳವಾಗಿ ನಿರ್ಮಿತವಾಗಿವೆ. ಕಂಬಗಳು ಕೆಳಗಿನ ಭಾಗದಲ್ಲಿ ಚೌಕಾಕಾರವಾಗಿದ್ದು, ಮಧ್ಯದಲ್ಲಿ ಅಳಭುಜಾಕೃತಿಯನ್ನು ಹೊಂದಿದ್ದು, ಮೇಲೆ ಪುನಃ ಉರುಳೆಯಾಕರವಾಗಿದೆ. ನವರಂಗದ ಪೂರ್ವದ ಗೋಡೆಯಲ್ಲಿ ಅಂದರೆ ಅಂತರಾಳದ ಪ್ರವೇಶದ್ವಾರದ ಬಲ ಮತ್ತು ಎಡ ಭಾಗಗಳಲ್ಲಿ ನಿರ್ಮಿತವಾದ ಅಲಂಕೃತ ಗೂಡುಗಳು ಮತ್ತು ಅದರಲ್ಲಿ ದೇವದೇವಿಯರ ವಿಗ್ರಹಗಳಿವೆ. ಇದಲ್ಲದೆ ಪ್ರಾಕಾರದ ಪಶ್ಚಿಮದ ಗೋಡೆಗೆ ಸೇರಿದಂತೆ, ಅಂದರೆ ಮುಖ್ಯದ್ವಾರದ ಎರಡು ಪಕ್ಕಗಳಲ್ಲಿ ಕೈಸಾಲೆಗಳಿವೆ, ಮುಖ್ಯದ್ವಾರದ ಮೇಲೆ ಇಟ್ಟಿಗೆ ಗಾರೆಯಿಂದ ನಿರ್ಮಿತವಾಗಿರುವ ಮೂರು ತಲಗಳನ್ನೂ ಮತ್ತು ಕಳಶಗಳನ್ನು ಹೊಂದಿದ ಗೋಪುರವಿದೆ. ಈ ಗೋಪುರದ ರಚನೆಯಲ್ಲಿ ಮೈಸೂರು ಒಡೆಯರ ಕಾಲದ ಕುಶಲ ಕರ್ಮಿಗಳ ಕಲೆಗಾರಿಕೆಯನ್ನು ಕಾಣುತ್ತೇವೆ. ಗರ್ಭಗೃಹದ ಮೇಲೆ ಅತ್ಯಂತ ಸುಂದರವಾಗಿ ನಿರ್ಮಿತವಾದ ವಿಮಾನಗೋಪುರವಿದೆ, ಇದು ಸಹ ಇಟ್ಟಿಗೆಗಾರೆಯಿಂದ ನಿರ್ಮಿತವಾಗಿದೆ. ಲಕ್ಷ್ಮೀನರಸಿಂಹಸ್ವಾಮಿ ವಿಗ್ರಹವು ಸುಖಾಸಿನ ಭಂಗಿಯಲ್ಲಿಗರುಡ ಪೀಠದ ಮೇಲೆ ಕುಳಿತಿದೆ. ಸ್ವಾಮಿಯ ಎಡತೊಡೆಯ ಮೇಲೆ ಮಹಾಲಕ್ಷ್ಮಿಯ ವಿಗ್ರಹವು ಸುಖಾಸನದಲ್ಲಿದೆ. ಮೂರ್ತಿಯು ನಾಲ್ಕು ಕೈಗಳನ್ನೂ ಹೊಂದಿದ್ದು, ಮೇಲಿನ ಎಡಗೈಯಲ್ಲಿ ಶಂಖವನ್ನು, ಬಲಗೈಯಲ್ಲಿ ಚಕ್ರವನ್ನು ಹಿಡಿದಿದೆ. ಲಕ್ಷ್ಮಿಯು ಕೇವಲ ಎರಡು ಕೈಗಳನ್ನು ಹೊಂದಿದ್ದು ಬಲಗೈಯಲ್ಲಿ ಸ್ವಾಮಿಯನ್ನು ಆಲಂಗಿಸಿರುವ ರೀತಿಯಲ್ಲಿ ರೂಪಿಸಲಾಗಿದೆ. ಎಡಗೈಯಲ್ಲಿ ಅಮೃತ ಕಳಶವಿದೆ. ದೇವತೆಯ ವಿಗ್ರಹವು ಅತ್ಯಂತ ಸುಂದರವಾಗಿದೆ. ಸಂಪೂರ್ಣ ಹೊಯ್ಸಳ ಶೈಲಿಗೆ ಸೇರುವ ಈ ವಿಗ್ರಹವನ್ನು ಬೇರೆಡೆಯಿಂದ ತಂದು ಸ್ಥಾಪಿಸಿರಬಹುದೆಂದು ಊಹಿಸಲಾಗಿದೆ. ಅಮ್ಮನವರ ವಿಗ್ರಹವು ವಿಜಯನಗರದ ಕಾಲಕ್ಕೆ ಸೇರುತ್ತದೆ. ಈದೇವಾಲಯದ ರಚನೆಯ ಕಾಲವನ್ನು ಸರಿಸುಮಾರು 17-18ನೆ ಶತಮಾನಕ್ಕೆ ಕೊಂಡೊಯ್ಯಬಹುದು.

ಗರುಡ ಬೃಂದಾವನಕಟ್ಟೆ:- ಈ ಗರುಡ ಬೃಂದಾವನಕಟ್ಟೆಯು ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಮುಂದೆ ಇದೆ. ಬೃಂದಾವನಕಟ್ಟೆಯನ್ನು ಸುಮಾರು 600 ವರ್ಷಗಳ ಹಿಂದೆ ಚೋಳರು ನಿರ್ಮಾಣ ಮಾಡಿದ್ದಾರೆ. ಈ ಬೃಂದಾವನ ಕಟ್ಟೆಯಲ್ಲಿ ತುಳಸಿ ಸಸ್ಯವನ್ನು ನೆಟ್ಟಿ ಪೋಷಿಸುತ್ತಿದ್ದಾರೆ. ಅಕ್ಕಿಹೆಬ್ಬಾಳು ಕ್ಷೇತ್ರದಲ್ಲಿ ಧ್ವಜಸ್ತಂಭ ಇಲ್ಲದ ಕಾರಣೀಗರುಡ ಬೃಂದಾವನವನ್ನು ಹಿಂದಿನ ಕಾಲದಲ್ಲಿ ಚೋಳರು ನಿರ್ಮಾಣ ಮಾಡಿದ್ದಾರೆ. ದಿನಾಂಕ 13-02-1979ರಂದು ತಮಿಳುನಾಡಿನ ಮೂಲದ ಒಬ್ಬ ವ್ಯಕ್ತಿಯು ಅಕ್ಕಿಹೆಬ್ಬಾಳು ಕ್ಷೇತ್ರ ಬಂದವರು ಗರುಡ ಬೃಂದಾವನವನ್ನು ಪೂಜಿಸಿ ಸಂಖ್ಯಾಶಾಸ್ತ್ರವೂ ಸಹ ಇದಕ್ಕೆ ಪುಷ್ಟಿ ನೀಡುತ್ತದೆ. 256 ಸಲ ಪ್ರದಕ್ಷಣೆ ಮಾಡಿದರೆ ಮನಸ್ಸಿನಲ್ಲಿ ಇರುವ ಆಸೆಗಳು ಫಲಿಸುತ್ತದೆ ಎಂದು ಹೇಳಿದರು. ಈಗಲೂ ಈ ಗರುಡ ಬೃಂದಾವನಕಟ್ಟೆಯನ್ನು ಭಕ್ತರು ಪ್ರದಕ್ಷಣೆ ಮಾಡುತ್ತಾರೆ.

ಅಕ್ಕಿಹೆಬ್ಬಾಳಿನ ಜಾತ್ರೆ:-ಭಾರತೀಯ ಸಂಸ್ಕೃತಿಯಲ್ಲಿ ಐದು ದಿನದ ಜಾತ್ರೆ, ಏಳು ದಿನದ ಜಾತ್ರೆ ಮತ್ತು ಒಂಭತ್ತು ದಿನದಜಾತ್ರೆ ಎಂಬ ಮೂರು ವಿಧಗಳ ಜಾತ್ರೆಗಳಿವೆ. ನಮ್ಮ ಅಕ್ಕಿಹೆಬ್ಬಾಳಿನಲ್ಲಿ ಐದು ದಿನದ ಪಂಚಮಿ ರಥೋತ್ಸವ ಮಾಡುತ್ತಾರೆ. ಅಕ್ಕಿಹೆಬ್ಬಾಳು ಗ್ರಾಮದ ಗೌತಮಕ್ಷೇತ್ರದಲ್ಲಿ ಹೇಮಗಿರಿಯ ರಥೋತ್ಸವ ಕಳೆದ ಒಂದು ವಾರದ ನಂತರಜಾತ್ರೆ ನಡೆಸುತ್ತಾರೆ. ಈ ಜಾತ್ರೆಯು ಮಾಘ ಮಾಸದ ಕೃಷ್ಣಪಕ್ಷ, ಪ್ರತಿಪತ್ /ದ್ವಿತೀಯ ಮಹಾನಕ್ಷತ್ರದ ದಿನ ನಡೆಯುತ್ತದೆ. ಜಾತ್ರೆ ನಡೆಯುವ ಐದು ದಿನ ನಾನಾ ರೀತಿಯ ಪೂಜೆಗಳನ್ನು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ಸಲ್ಲಿಸುತ್ತಾರೆ. ಮೊದಲನೆಯ ದಿನ ಅಭಿಷೇಕ, ಎರಡನೆಯ ದಿನ ಕಲ್ಯಾಣೋತ್ಸವ, ಮೂರನೆಯ ದಿನ ಪಲ್ಲಕಿ ಉತ್ಸವ, ನಾಲ್ಕನೆಯ ದಿನ ರಥೋತ್ಸವ ಮತ್ತು ಐದನೆ ದಿನ ತೆಪ್ಪೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಈ ಐದು ದಿನದಕಾರ್ಯಕ್ರಮ ನೋಡಲುದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ.

ಅಭಿಷೇಕ:- ಜಾತ್ರೆಯ ಮೊದಲನೆಯ ದಿನ ಮತ್ತು ವಿಶೇಷ ದಿನಗಳಲ್ಲಿ ಅಕ್ಕಿಹೆಬ್ಬಾಳು ಶ್ರೀಲಕ್ಷ್ಮೀನರಸಿಂಹಸ್ವಾಮಿಗೆ ಅಭಿಷೇಕ ನಡೆಯುತ್ತದೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಸೇರಿಸಿ ದೇವರಿಗೆ ಪಂಚಾಮೃತಾ ಅಭಿಷೇಕ ಮಾಡುತ್ತಾರೆ. ಈ ದೇವಾಲಯದಲ್ಲಿ ನಿತ್ಯ ಪಾನೀಯ ಅಭಿಷೇಕ ನಡೆಯುತ್ತದೆ.

ಕಲ್ಯಾಣೋತ್ಸವ:- ಜಾತ್ರೆಯಎರಡನೆಯ ದಿನ ನಡೆಯುವ ಕಾರ್ಯಕ್ರಮವೇ ಕಲ್ಯಾಣೋತ್ಸವ ಈ ದಿನ ವಿಷ್ಣು ಮತ್ತು ಲಕ್ಷ್ಮೀ ಅಮ್ಮನವರಿಗೆ ಕಲ್ಯಾಣ ಮಾಡಿಸುತ್ತಾರೆ. ಈ ಉತ್ಸವ ನೋಡಲು ದೇವತೆಗಳು ಬರುತ್ತಾರೆ. ಹಾಗೂ ಮಳಕಿತರಾಗುತ್ತಾರೆ ಎಂದು ಪ್ರತೀತಿ ಇದೆ. ಈ ದೃಶ್ಯವನ್ನು ನೋಡಿ ಕಣ್ಣು ತುಂಬಿಕೊಳ್ಳತ್ತಾರೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ.

ಪಲ್ಲಕಿ ಉತ್ಸವ:- ಜಾತ್ರೆಯ ಮೂರನೆಯ ದಿನ ನಡೆಯುವ ಉತ್ಸವವೇ ಪಲ್ಲಕ್ಕಿ ಉತ್ಸವ. ಈ ಉತ್ಸವದಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿಯಲ್ಲಿ ಹೂಗಳಿಂದ ಸುಂದರವಾಗಿ ಅಲಂಕಾರ ಮಾಡುತ್ತಾರೆ. ಈ ಉತ್ಸವದಲ್ಲಿ ಮುಖ್ಯವಾದುದ್ದು ಎಂದರೆ ಹೂ ಅಲಂಕರವಾಗಿರು. ದೇವರನ್ನು ರಾತ್ರಿ ವೇಳೆಯಲ್ಲಿ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ. ಈ ದಿನ ವಿವಿಧ ಜನಪದ ಕಲಾ ತಂಡಗಳ ಜೊತೆಯಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿಯನ್ನು ಮೆರವಣಿಗೆ ಮಾಡುತ್ತಾರೆ. ದೇವರನ್ನು ಶ್ರೀಲಕ್ಷ್ಮೀನರಸಿಂಹಸ್ವಾಮಿಯ ದೇವಾಲಯದಿಂದ ಅಕ್ಕಿಹೆಬ್ಬಾಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮತ್ತೇ ದೇವಾಲಯಕ್ಕೆ ಮಧ್ಯರಾತ್ರಿ ಮೂರುಗಂಟೆ ಸುಮಾರಿಗೆ ತೆಗೆದುಕೊಂಡು ಹೋಗಿ ಗುಡಿ ದುಂಬಿಸಲಾಗುತ್ತದೆ.

ರಥೋತ್ಸವ:- ಜಾತ್ರೆಯ ನಾಲ್ಕನೆಯ ದಿನ ನಡೆಯುವ ಸುಂದರ ಉತ್ಸವವೇ ಈ ರಥೋತ್ಸವ. ಈ ರಥೋತ್ಸವ ದಿನ ಪಲ್ಲಕ್ಕಿ ಉತ್ಸವ ಮುಗಿಸಿಕೊಂಡು ಬಂದಿರುವ ದೇವರನ್ನು ರಥದಲ್ಲಿ ಕೂರಿಸಿ ಜಾತ್ರೆ ನಡೆಸುತ್ತಾರೆ. ರಥೋತ್ಸವದ ದಿನ ವಿಷ್ಣುವಿನ ವಾಹನ ಗರುಡ ಆಜ್ಞೆ ನೀಡಿದರೆ ಮಾತ್ರ ಜಾತ್ರೆಯನ್ನು ನಡೆಸುತ್ತಾರೆ. ಜಾತ್ರೆಯ ದಿನ ಹಣ್ಣುಕಾಯಿ ಮತ್ತು ಇತರೆ ಪೂಜೆಗಳನ್ನು ಭಕ್ತರು ನಡೆಸುತ್ತಾರೆ. ಈ ಉತ್ಸವಕ್ಕೆ ಬಂದಿರುವ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡುತ್ತಾರೆ. ಈ ಉತ್ಸವ ನೋಡಲು ದೇಶ-ವಿದೇಶಗಳಿಂದ ಭಕ್ತರು ಬಂದು ದೇವರ ದರ್ಶನ ಮಾಡುತ್ತಾರೆ.

ತೆಪ್ಪೋತ್ಸವ:- ಜಾತ್ರೆಯ ಐದನೆಯ ಮತ್ತು ಕೊನೆಯ ದಿನ ನಡೆಯವ ಉತ್ಸವವೇ ತೆಪ್ಪೋತ್ಸವ. ಈ ದಿನ ದೇವರಿಗೆ ಸ್ನಾನ ಮಾಡಿಸಿ ದೇವರು ಹೇಗೆ ಮೊದಲನೆಯ ದಿನ ಇರುತ್ತೋ ಹಾಗೆ ಇರಿಸುತ್ತಾರೆ. ರಥದ ಮೇಲೆ ಇರುವ ಹಾಗೆ ತೆಪ್ಪದ ಮೇಲೆ ದೇವರಿಗೆ ಜಲಕ್ರೀಡೆ ಆಡಿಸಿ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಾರೆ.

ಆಕಾಶದಲ್ಲಿ ಗರುಡ ಪಕ್ಷಿಯ ಪ್ರದಕ್ಷಿಣೆ ಮತ್ತು ರಥೋತ್ಸವ:- ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವವು ಪ್ರತಿ ವರ್ಷವು ರಥಸಪ್ತಮಿಯಾದ ಒಂದು ವಾರದ ನಂತರ ನಡೆಯುತ್ತದೆ. ಈ ರಥೋತ್ಸವದ ವಿಶೇಷವೆಂದರೆ ಆಕಾಶದಲ್ಲಿ ಗರುಡ ಪಕ್ಷಿಗಳು ರಥದ ಮೇಲ್ಬಾಗದಲ್ಲಿ 50ರಿಂದ 60 ಅಡಿ ಅಂತರದಲ್ಲಿ ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವವನ್ನು ಮುನ್ನಡೆಸಲಾಗುತ್ತದೆ. ಈ ದೃಶ್ಯವಂತೂ ವೈಜ್ಞಾನಿಕ ಲೋಕಕ್ಕೆ ಸವಾಲೆಸೆಯುವಂತಾಗಿದೆ ಎಂಬ ಭಾವ ಪ್ರತಿಯೊಬ್ಬ ಪ್ರತ್ಯಕ್ಷದರ್ಶಿ ಭಕ್ತಾದಿಗಳಲ್ಲಿ ಮೂಡುಯತ್ತದೆ. ಇದು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವರ ಮಹಿಮೆಗೆ ಸಾಕ್ಷಿಯಾಗಿದೆ.

ದಕ್ಷಿಣ ಬದರಿಕಾಶ್ರಮ:- ಗೌತಮ ಮಹರ್ಷಿಗಳು ಅನೇಕ ಕಾಲ ಹೇಮಾವತಿ ನದಿ ಪಶ್ಚಿಮ ಮುಖನಾಗಿ ಹರಿಯುವ ದಿವ್ಯ ಸ್ಥಳದಲ್ಲಿ ಸ್ನಾನ ಆಹರ್ನಿಕಾದಿಗಳನ್ನು ಮಾಡುತ್ತಾ ಒಂದು ಬದರಿ ವೃಕ್ಷದ ಕೆಳಗೆ ಕೂತು ತಪಸ್ಸು ಮಾಡುತ್ತಾ ಇರಲು, ಭಕ್ತವತ್ಸಲನಾದ ಮಹಾವಿಷ್ಣವು ಗೌತಮ ಮಹರ್ಷಿಯನ್ನು ಹೆಚ್ಚು ಪರೀಕ್ಷೆ ಮಾಡಬಾರದೆಂಬ ಮನಸ್ಸಿನಿಂದ ಶ್ರೀ ಲಕ್ಷ್ಮೀ ಸಮೇತನಾಗಿ ನರಸಿಂಹ ರೂಪಿನಿಂದ ದರ್ಶನವನ್ನು ಕೊಡಲು ಗೌತಮ ಮಹರ್ಷಿ ಸಾಷ್ಟಾಂಗ ಸಮಸ್ಕಾರಗಳನ್ನು ಮಾಡುತ್ತಾ ಅನೇಕ ವಿಧವಾದ ಸ್ತೋತ್ರಗಳನ್ನು ಮಾಡುತ್ತಾ ಕಣ್ಣಿನಿಂದ ಆನಂದಾಶ್ರುಗಳನ್ನು ಸುರಿಸುತ್ತಾ ನಿಂತಿರಲು ಭಗವಂತನು ಏತಕ್ಕೋಸ್ಕರ ನನ್ನನ್ನು ಕುರಿತು ತಪಸ್ಸು ಮಾಡಿದೆ ನಿನ್ನಕೋರಿಕೆ ಏನು ಹೇಳು ಎನ್ನಲು, ಗೌತಮನು ಆನಂದಪರವಶನಾಗಿ 'ಹೇ ಭಗವಂತ, ಮುಂದೆ ಕಲಿಯುಗದಲ್ಲಿ ಮನುಷ್ಯಾದಿಗಳು ಅನೇಕ ಕಷ್ಟಕಾರ್ಪಣ್ಯಕ್ಕೆ ಸಿಕ್ಕಿ ಸಂಕಟಪಡುತ್ತಾರೆ. ಅವರ ಕಷ್ಟಗಳು ಸುಲಭೋಪಾಯವಾಗಿ ಪರಿಹಾರವಾಗಲಿ ಎಂದು ನಿನ್ನನ್ನು ಕುರಿತು ತಪಸ್ಸು ಮಾಡಿದೆ. ರಾಮಾವತಾರವಾದರೋ ಅನೇಕ ಸಹಸವರ್ಷಗಳು, ಕೃಷ್ಣಾವತಾರವೂ ಅಷ್ಟೆ, ನಿನ್ನ ಅವತಾರಗಳು ಕೇವಲ ಘಳಿಗೆಗಳು ಮಾತ್ರವಾದ್ದರಿಂದ ಭಕ್ತರಿಗೆ ಬಲುಬೇಗ ನಿನ್ನ ಅನುಗ್ರಹ ಪ್ರಾಪ್ತಿಗಾಗಿಯೂ, ನೀನು ನನಗೆ ಪಶ್ಚಿಮ ಮೂಖನಾಗಿ ದರ್ಶನಕೊಟ್ಟಿದ್ದರಿಂದ, ಪಶ್ಚಿಮಮುಖನಾಗಿಯೇ ಶಿಲಾರೂಪ ಧರಿಸಿ ಶ್ರೀ ಲಕ್ಷ್ಮೀ ಸಮೇತನಾಗಿ ಇಲ್ಲೇ ನೆಲಸಬೇಕೆಂದು ಪ್ರಾರ್ಥಿಸಲು, ಸ್ವಾಮಿಯ ಅದೇರೀತಿ ನೆಲೆಸಿದನು.

ಸಂರಕ್ಷಣಕಾರ್ಯ:- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ನ್ಯಾಸ ಟ್ರಸ್ಟ್ ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಸಮಿತಿಯ ಸಹಯೋಗದೊಂದಿಗೆ ದೇವಾಲಯದ ಪುನರುಜೀವನ ಕಾರ್ಯವನ್ನು ನೆರವೇರಿಸಲಾಗಿದೆ. ಈ ಸಂರಕ್ಷಣಕಾರ್ಯದ ವೆಚ್ಚದ ಮೊತ್ತದಲ್ಲಿ ಶೇ 50 ಭಾಗವನ್ನು ಗ್ರಾಮಸ್ಥರನ್ನು ಒಳಗೊಂಡ ದೇವಾಲಯ ಸಮಿತಿ ಮತ್ತು ಉಳಿದ 50 ಭಾಗವನ್ನು ಮಂಜುನಾಥೇಶ್ವರ ಟ್ರಸ್ಟ್ ನೀಡಿದೆ. ಈ ದೇವಾಲಯ ಪ್ರಾಕೃತಿಕವಾಗಿತನ್ನ ಭದ್ರತೆಯನ್ನು ಕಳೆದುಕೊಂಡಿತ್ತು. ದೇವಾಲಯದ ಪ್ರಾಕಾರ ಮಣ್ಣಿನಿಂದ ಆವೃತವಾಗಿ ಅದಿಷ್ಟಾನದ ಭಾಗ ಮಣ್ಣಿನಲ್ಲಿ ಹುದುಗಿಹೊಗಿತ್ತು. ಪ್ರಥಮ ಹಂತದಲ್ಲಿ ದೇವಾಲಯದ ಪ್ರಾಕಾರ ಮತ್ತು ಮಹಾದ್ವಾರದ ಮುಂದೆ ಆವರಿಸಿದ್ದ ಮಣ್ಣಿನ ಪದರಗಳನ್ನು ಉತ್ಕನನ ಮಾಡಿತೆಗೆಯಲಾಯಿತು. ದೇವಾಲಯದ ಗರ್ಭ ಗೃಹ ಅಂತರಾಳದ ಗೋಡೆಗಳು ಹಾಗು ತಳಪಾಯ ಕುಸಿದಿತ್ತು. ನಶಿಸಿದ್ದ ಗೋಡೆಗಳಿಗೆ ಆಧಾರ ಗೋಡೆಗಳನ್ನು ಕಟ್ಟಿ ಅವುಗಳನ್ನು ಕಾಪಾಡಿದ್ದರು. ದೇವಾಲಯದ ಗರ್ಭ ಗೃಹ ಅಂತರಾಳದ ಗೋಡೆಯ ಹೊರಕವಚಗಳನ್ನು ಬಿಚ್ಚಿದೇವಾಲಯದ ಸಂಪೂರ್ಣ ತಳಪಾಯವನ್ನು ಭದ್ರಗೊಳಿಸಿ ನಂತರ ಗೋಡೆಗಳನ್ನು ಪುನರ್ ನಿರ್ಮಿಸಲಾಯಿತು. ದೇವಾಲಯದ ಗರ್ಭಗೃಹದ ಮೇಲಿದ್ದ ವಿಮಾನ, ಸ್ವಾಮಿಯ ಆಲಯದ ಪಕ್ಕದಲ್ಲಿದ್ದ ಶ್ರೀ ಲಕ್ಷ್ಮೀ ಆಲಯದ ತಳಪಾಯ, ಗೋಡೆ ಹಾಗು ವಿಮಾನ ಮತ್ತು ಮಂಟಪಗಳು ಶಿಥಿಲವಾಗಿದ್ದು ಅವುಗಳನ್ನು ಪ್ರಾಚೀನ ಮಾದರಿಯಲ್ಲಿ ಪುನರ್ರಚಿಸಲಾಗಿದೆ. ದೇವಾಲಯದ ಸುತ್ತಲು ಹಾಸು ಕಲ್ಲುಗಲ್ಲುಗಳನ್ನು ಹಾಕಿಸಿ ದೇವಾಲಯದ ತಳಪಾಯಕ್ಕೆ ನೀರು ಸೇರದಂತೆ ಮಾಡಲಾಗಿದೆ. ಪ್ರಾಕಾರದ ಗೋಡೆಗಳಲ್ಲಿ ಇದ್ದಯ ಜ್ಞಶಾಲೆ ಮಂಟಪಗಳು ಸಂಪೂರ್ಣವಾಗಿ ನಾಶವಾಗಿದ್ದವು, ಅವುನ್ನು ಸಹ ಸಂರಕ್ಷಿಸಲಾಗಿದೆ. ಮಹಾದ್ವಾರದ ಮೇಲಿನ ಗೋಪುರದಲ್ಲಿ ಇದ್ದ ಗಾರೆಯಿಂದ ನಿರ್ಮಿತವಾದ ಶಿಲ್ಪಗಳು ಕೆಲವು ನಾಶವಾಗುವ ಹಂತವನ್ನು ತಲುಪಿದ್ದಾರೆ ಮತ್ತೆ ಕೆಲವು ಭಗ್ನವಾಗಿದ್ದವು. ಅಂತಹ ಮೂರ್ತಿಗಳನ್ನು ಸರಿಪಡಿಸಿ ಉಳಿದವುಗಳನ್ನು ಸಂರಕ್ಷಿಸುವ ಕಾರ್ಯಗಳನ್ನು ಮಾಡಲಾಗಿದೆ. ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿದೇವಾಲಯದಲ್ಲಿ ಬ್ರಹ್ಮರಥೋತ್ಸವ (ಮಾಘ ಮಾಸದಕಳ ಪಕ್ಷ, ಪ್ರತಿಪತ್-ದ್ವಿತೀಯ ಮಹಾ ನಕ್ಷತ್ರ), ಶ್ರೀ ನರಸಿಂಹ ಜಯಂತಿ, ಶಂಕರಜಯಂತಿ ಹಾಗು ರಾಮ ನವಮಿ, ಪ್ರತಿ ನಿತ್ಯ ಸ್ವಾಮಿಗೆ ನಿತ್ಯ ಪೂಜೆ ನಡೆಯುತ್ತದೆ.

ಇದು ಮೂರ್ತಿರಾಯರ ಕಾಲದ ವರ್ಣನೆ

[ಬದಲಾಯಿಸಿ]

ಊರಿಗೆ ಕಾಲಿಟ್ಟಕೂಡಲೇ ಮೊದಲು ಕಾಣಿಸುವುದು, ಚೆನ್ನಿಗರಾಯಸ್ವಾಮಿಯ ಪಾಳುಗುಡಿ. ಊರಿನ ಚಾವಡಿ, ಹನುಮಂತರಾಯನ ಗುಡಿ, ತೆಂಗಿನಮರಗಳು, ಸಿಹಿನೀರಿನ ಬಾವಿ, ಅದರ ಬಳಿ ತೊಳೆದಿಟ್ಟಿರುವ ಬಿಂದಿಗೆಗಳು, ನೀರೆಳೆಯುವ ಹೆಂಗೆಳೆಯರು, ಎಲ್ಲರ ಮನೆಯಮುಂದೆಯೂ ಹಾಕಿದ ವೈವಿಧ್ಯಮಯ ರಂಗವಲ್ಲಿ ಚಿತ್ತಾರ, ದೇವಾಲಯದ ಗೋಪುರಗಳು, ಮತ್ತು ಒಡನಾಡಿಗಳ ತಂಡ. ಅವರಲ್ಲಿ ಕೆಲವರು ಮೂರ್ತಿರಾಯರ ಸಂಗಡ ಕೊಪ್ಪರಿಗೆ ಮಡುವಿನಲ್ಲಿ ಈಜಿದವರು, ತೋಟದಲ್ಲಿ ಎಳನೀರುಕದ್ದವರು, ಕಂಡವರ ತೋಟದಲ್ಲಿ ಸೌತೆಕಾಯಿಕದ್ದವರು, ಇತ್ಯಾದಿ. ಅಕ್ಕಿಹೆಬ್ಬಾಳಿನ ದಾರಿಯಲ್ಲಿ ಯಾವದಿನವಾದರೂ ಹೋಗಲಿ, ಬೆಳಗಿನ ಹೊತ್ತು ತಲೆಯ ಮೆಲೊಂದು ನೀರುತುಂಬಿದ ಕೊಡ, ಅದರಮೇಲೊಂದು ಚೆಂಬು, ಎಡಸೊಂಟದಮೇಲೆ ಮತ್ತೊಂದು ಕೊಡ, ಬಲಗೈಯಲ್ಲೊಂದು ತಾಲಿ- ಇಷ್ಟನ್ನೂ ಹೊತ್ತು, ಸ್ತೋತ್ರಗಳನ್ನು ಹಾಡುತ್ತಾಬರುವ ಹೆಂಗಸರ ಸಾಲನ್ನು ನೋಡುವುದು ಕಣ್ಣಿಗೊಂದು ಹಬ್ಬ. ಆ ನಡಗೆಯ ಲಯದಲ್ಲಿ, ಯಾವ ನಾಟ್ಯರಾಣಿಯ ಕಲೆಯಲ್ಲೂ ಕಾಣದ ಸೊಬಗಿತ್ತು. ನಾಟ್ಯರಾಣಿ ಪ್ರದರ್ಶನಕ್ಕಾಗಿ ಸೌಂದರ್ಯಸೃಷ್ಟಿ ಮಾಡುತ್ತಾಳೆ. ಇವರ ಸೊಬಗು ಅಪ್ರಯತ್ನತಃ ದೇಹದ ಸೌಷ್ಠವದಿಂದ, ಮನಸ್ಸಿನ ಅನುದ್ರಿಕ್ತ ಗೆಲುವಿನಿಂದ ತಾನಾಗಿ ಹೊರಹೊಮ್ಮುತ್ತಿತ್ತು.

ಅಕ್ಕಿಹೆಬ್ಬಾಳು ರತ್ನಗಳು

[ಬದಲಾಯಿಸಿ]

ಅಕ್ಕಿಹೆಬ್ಬಾಳು ಸಾಹಿತ್ಯ ಕ್ಷೇತ್ರಕ್ಕೆ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಅಪಾರವಾದ ಸೇವೆ ಸಲ್ಲಿದೆ. ಈ ಗ್ರಾಮದಲ್ಲಿ ಹುಟ್ಟಿ ಬೆಳೆದ ಡಾ.ನಾಗಪ್ಪ ಇವರು ಹಿಂದಿ ಭಾಷೆಯಲ್ಲಿ ಎಂ.ಎ ಪದವಿ ದಕ್ಷಿಣ ಭಾತರದಲ್ಲೇ ಮೊಟ್ಟಮೊದಲ ಬಾರಿಗೆ ಪಡೆದರು. ಮತ್ತು ಹಿಂದಿ ಭಾಷೆಯಲ್ಲಿ ಹೆಸರುವಾಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ಪ್ರಥಮ ಕಲಾಮಂದಿರ ನಿಮಾಣ ಮಾಡಲು ಕಾರಣರಾದ ಅ.ನಾ.ಸುಬ್ಬರಾಯರು ಅಕ್ಕಿಹೆಬ್ಬಾಳಿನವರು. ದೇವರು ಕೃತಿಯಿಂದ ಹೆಸರು ಮಾಡಿರುವ ಪಂಪ ಪ್ರಶಸ್ತಿ ವಿಜೇತರು ಎ.ಎನ್. ಮೂರ್ತಿರಾವ್ ಇದೇ ಗ್ರಾಮದವರು. ಹಾಸ್ಯಸಾಹಿತ್ಯಕ್ಕೆ ಹೆಸರುವಾಸಿಯಾದ ಅ.ರಾ.ಮಿತ್ರರವರು ಕೂಡ ಇದೇ ಗ್ರಾಮದವರು. ‘ಆಕಾಶವಾಣಿ ಈರಣ್ಣ’ ಎಂಬ ಖ್ಯಾತಿಯ ಎ.ಎಸ್.ಮೂರ್ತಿ, ವಿಡಂಬನಾ ಸಾಹಿತಿ ಅ.ರಾ.ಶೇಷಗಿರಿ, ಪತ್ರಿಕೋದ್ಯಮಕ್ಕೆ ಕೀರ್ತಿ ತಂದ ಕೃ.ನ.ಮೂರ್ತಿ, ಕಾದಂಬರಿಕಾರ ಅ.ರಾ. ಆನಂದ, ಶಿಶುಸಾಹಿತಿ ಅ.ರಾ.ಚಂದ್ರ, ಕರ್ನಾಟಕ ನಾಟಕ ಅಕಾq Éಯಿ ಸದಸ್ಯರಾಗಿದ್ದ ಎ.ಆರ್.ಶಶಿಧರ್ ಭಾರಿಘಾಟ್, ಭರತನಾಟ್ಯ ಪ್ರವೀಣರಾದ ಶ್ರೀಧರ್, ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ವಿಜಯಲಕ್ಷಿö್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾ ನಿರ್ದೇಶಕರಾದ ಎ.ಎಸ್.ನಾಗರಾಜು, ಸಾಹಿತಿ ಮತ್ತು ಅಂಕಣ ಬರಹಗಾರ ಮೊಹಮ್ಮದ್ ಅಜರುದ್ದೀನ್ ಸೇರಿದ ಹಾಗೆ ಮೇಲಿನ ಎಲ್ಲಾ ಸಾಧಕರು ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಹುಟ್ಟಿ ದೇಶದ ಮೂಲೆ-ಮೂಲೆಯಲ್ಲಿ ಸಾಧನೆ ಮಾಡಿದ್ದಾರೆ.

ಬಾಲ್ಯದ ನಂಟು

[ಬದಲಾಯಿಸಿ]

೩೦ ವರ್ಷಗಳಕಾಲ, ಮೂರ್ತಿರಾಯರಿಗೆ ಅಕ್ಕಿಹೆಬ್ಬಾಳಿನ ನಂಟು. ಅಕ್ಕಿಹೆಬ್ಬಾಳಿನ ಬಳಿಯಲ್ಲೇ, ಹೇಮಗಿರಿ, ಹೇಮಾವತಿ ನದಿ, ಮತ್ತು ಅಲ್ಲಿನ ದೇವರು ನರಸಿಂಹ. ಪ್ರಸನ್ನಮೂರ್ತಿ,ಲಕ್ಷ್ಮೀ ನರಸಿಂಹ. ಲಕ್ಷ್ಮೀ ನರಸಿಂಹಸ್ವಾಮಿಯ ಕೃಪೆಯಿಂದ ಅವರ ವಂಶದ ಎಲ್ಲರೂ ಕಷ್ಟ, ಕೋಟಲೆಗಳಿಂದ ಉಳಿದು ಬದುಕಿದರಂತೆ. ಅಕ್ಕಿಹೆಬ್ಬಾಳಿನಲ್ಲಿ ಲಕ್ಷ್ಮೀನರಸಿಂಹಸ್ವಾಮಿಯ ತೇರು/ರಥೋತ್ಸವಕ್ಕೆ ಪ್ರಾಶಸ್ತ್ಯ ಹೆಚ್ಚು. ಒಮ್ಮೆ, ತಂದೆಯವರು, ಖಾಯಿಲೆಯಿಂದ ನರಳುತ್ತಿದ್ದಾಗ, ಕಾಣಲು ಅಕ್ಕಿಹೆಬ್ಬಾಳಿಗೆ ಹೋಗುತ್ತಾರೆ. ಅವರಿಗೆ ಲಭ್ಯವಾದದ್ದು ತಂದೆಯವರ ನೆನಪು ಮಾತ್ರ ! ಅವರು ಅಲ್ಲಿಗೆ ತಲುಪುವ ವೇಳೆಗೆ, ತಂದೆಯವರು ಮೃತರಾಗಿದ್ದು "ಅಂತ್ಯಕ್ರಿಯೆ" ಗಳೆಲ್ಲಾ ನಡೆದುಹೋಗಿರುತ್ತದೆ. ರಾಯರು ಬಹಳವಾಗಿ ನೊಂದುಕೊಳ್ಳುತ್ತಾರೆ. ಅಕ್ಕಿಹೆಬ್ಬಾಳಿಗೆ ಅವರ ಮುಂದಿನ ಭೇಟಿ, ಸುಮಾರು ೧೫ ವರ್ಷಗಳ ನಂತರದ್ದು. ಆ ಹೊತ್ತಿಗೆ, ಬಾಲ್ಯದಲ್ಲಿ ನೋಡಿದ್ದ ಅಕ್ಕಿಹೆಬ್ಬಾಳು ಅವರಿಗೆ ಮತ್ತೆ, ಗೋಚರಿಸಲೇಯಿಲ್ಲ. ಆಗಿನ ಅಕ್ಕಿಹೆಬ್ಬಾಳಿಗೂ, ಅವರ ಬಾಲ್ಯದ ಅಕ್ಕಿಹೆಬ್ಬಾಳಿಗೂ, ಅಜ- ಗಜಾಂತರ ವ್ಯತ್ಯಾಸ. ಇವುಗಳನ್ನು ವಿಶ್ಲೇಶಿಸಿ ತಮ್ಮ "ಲಲಿತ ಪ್ರಬಂಧ," ಗಳಲ್ಲಿ ಅದರ ಬಗ್ಗೆ ಒಂದು "ಪುಟಾಣಿ ಪರಿಚ್ಛೇದ" ವನ್ನೇ ಬರೆದಿದ್ದಾರೆ.