ಅಖಾಡಾ ಭೋಜನ, ವಸತಿ, ಮತ್ತು ತರಬೇತಿಯ ಸೌಲಭ್ಯಗಳಿರುವ ಅಭ್ಯಾಸದ ಸ್ಥಳಕ್ಕೆ ಒಂದು ಭಾರತೀಯ ಶಬ್ದ. ಅದು ಭಾರತೀಯ ಸಮರ ಕಲಾಕಾರರಿಂದ ಬಳಸಲ್ಪಡುವ ತರಬೇತಿ ಹಜಾರ ಅಥವಾ ಧಾರ್ಮಿಕ ಪರಿತ್ಯಾಗಿಗಳಿಗಾಗಿ ಮಠ/ವಿಹಾರವನ್ನು ಸೂಚಿಸಬಹುದು.[೧] ದಶನಾಮಿ ಸಂಪ್ರದಾಯದ ವಿಷಯದಲ್ಲಿ, ಈ ಶಬ್ದವು ಒಂದು ತುಕಡಿಯನ್ನು ಸೂಚಿಸುತ್ತದೆ.
ಅಖಾಡಾ ಪದವನ್ನು ಏಕರೂಪದ ವಂಶಾವಳಿಯನ್ನು ಹಂಚಿಕೊಂಡ ಅಥವಾ ಏಕವ್ಯಕ್ತಿ ನಾಯಕತ್ವದ ಅಡಿಯಲ್ಲಿರುವ ಶಾರೀರಿಕ ಸಂಸ್ಥೆ ಅಥವಾ ಅವುಗಳ ಗುಂಪಿನ ಅರ್ಥಕೊಡಲು ಬಳಸಬಹುದು. ಗುರುವಿನ ಮನೆಯಲ್ಲಿ ವಿದ್ಯಾರ್ಥಿಗಳು ವಾಸಿಸಿ ಅಧ್ಯಯನ ಮಾಡುವ ಗುರುಕುಲದಿಂದ ಭಿನ್ನವಾಗಿ, ಅಖಾಡಾದ ಸದಸ್ಯರು ಸಾಂಸಾರಿಕ ಅಥವಾ ಗೃಹಸ್ಥ ಜೀವನ ಜೀವಿಸುವುದಿಲ್ಲ. ಕೆಲವರು ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ ಮತ್ತು ಇತರರಿಗೆ ಪ್ರಾಪಂಚಿಕ ಜೀವನದ ಸಂಪೂರ್ಣ ಪರಿತ್ಯಾಗದ ಅಗತ್ಯವಿರುತ್ತದೆ. ಉದಾಹರಣೆಗೆ, ಕುಸ್ತಿಪಟುಗಳು ಮೈಥುನದಿಂದ ದೂರವಿರುವ ಮತ್ತು ಸ್ವಲ್ಪವೇ ಪ್ರಾಪಂಚಿಕ ಸ್ವತ್ತನ್ನು ಹೊಂದಿರುವ, ಶುದ್ಧ ಜೀವನ ಜೀವಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ.
ಈ ಶಬ್ದದ ಪ್ರಾಚೀನ ಬಳಕೆ ಮಹಾಭಾರತದಲ್ಲಿ ಕಂಡುಬರುತ್ತದೆ. ಇದು ರಾಜ್‍ಗೀರ್‍ನಲ್ಲಿನ ಜರಾಸಂಧನ ಅಖಾಡಾವನ್ನು ಉಲ್ಲೇಖಿಸುತ್ತದೆ. ಪರಶುರಾಮ ಮತ್ತು ಅಗಸ್ತ್ಯರಂಥ ಪೌರಾಣಿಕ ವ್ಯಕ್ತಿಗಳನ್ನು ಮುಂಚಿನ ಸಮರ ಅಖಾಡಾದ ಸ್ಥಾಪಕರು ಎಂದು ಗುರುತಿಸಲಾಗುತ್ತದೆ.
ಆಧುನಿಕ ಬಳಕೆಯಲ್ಲಿ, ಅಖಾಡಾ ಹೆಚ್ಚಾಗಿ ಕುಸ್ತಿ ಮೈದಾನವನ್ನು ಸೂಚಿಸುತ್ತದೆ.