ಅಪ್ಪು | |
---|---|
ನಿರ್ದೇಶನ | ಪುರಿ ಜಗನ್ನಾಥ್ |
ನಿರ್ಮಾಪಕ | ಪಾರ್ವತಮ್ಮ ರಾಜ್‌ಕುಮಾರ್ |
ಲೇಖಕ | ಎಮ್.ಎಸ್.ರಮೇಶ್, ಆರ್. ರಾಜಶೇಖರ್ (ಸಂಭಾಷಣೆ) |
ಚಿತ್ರಕಥೆ | ಪುರಿ ಜಗನ್ನಾಥ್ |
ಕಥೆ | ಪುರಿ ಜಗನ್ನಾಥ್ |
ಸಂಭಾಷಣೆ | ಶಿವ ರಾಜ್‌ಕುಮಾರ್ |
ಪಾತ್ರವರ್ಗ |
|
ಸಂಗೀತ | ಗುರು ಕಿರಣ್ |
ಛಾಯಾಗ್ರಹಣ | ಕೆ. ದತ್ತು |
ಸಂಕಲನ | ಎಸ್. ಮನೋಹರ್ |
ಸ್ಟುಡಿಯೋ | ಪೂರ್ಣಿಮಾ ಎಂಟರ್‌ಪ್ರೈಸಸ್ |
ವಿತರಕರು | ಶ್ರೀ ವಜ್ರೇಶ್ವರಿ ಕಂಬೈನ್ಸ್ |
ಬಿಡುಗಡೆಯಾಗಿದ್ದು | ಏಪ್ರಿಲ್ ೨೬, ೨೦೦೨ |
ಅವಧಿ | ೧೪೦ ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
"ಅಪ್ಪು" ೨೦೦೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಈ ಚಲನಚಿತ್ರದಲ್ಲಿ ಪುನಿತ್ ರಾಜಕುಮಾರ್ ಹಾಗೂ ರಕ್ಷಿತಾ ಮುಖ್ಯ ಪಾತ್ರದಲ್ಲಿದ್ದಾರೆ ಜೊತೆಗೆ ಅವಿನಾಶ್,ಶ್ರೀನಿವಾಸ ಮೂರ್ತಿ, ಸುಮಿತ್ರಾ ಮುಂತಾದವರು ನಟಿಸಿದ್ದಾರೆ. "ಪೂರ್ಣಿಮಾ ಎಂಟರ್‌ಪ್ರೈಸಸ್" ಸಂಸ್ಥೆಯ ಲಾಂಛನದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದ ಈ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶಕರಾಗಿದ್ದಾರೆ. ಪುನಿತ್ ರಾಜಕುಮಾರ್ ಅವರು ಈ ಹಿಂದೆ ಹಲವಾರು ಚಿತ್ರಗಳಲ್ಲಿ ಬಾಲನಟರಾಗಿ ನಟಿಸಿದ್ದರೂ, ಯುವ ನಾಯಕ ನಟರಾಗಿ ಅಭಿನಯಿಸಿದ ಮೊದಲ ಚಿತ್ರವಾಗಿದೆ. "ಅಪ್ಪು" ಚಲನಚಿತ್ರದಲ್ಲಿ ಅವಿನಾಶ್,ಶ್ರೀನಿವಾಸ ಮೂರ್ತಿ, ಸುಮಿತ್ರಾ ಮುಂತಾದವರು ನಟಿಸಿದ್ದಾರೆ.[೧][೨]
ಅಪ್ಪು ಚಲನಚಿತ್ರವು ಏಪ್ರಿಲ್ ೨೬, ೨೦೦೨ರಲ್ಲಿ ಬಿಡುಗಡೆಯಾಗಿ, ಚಲನಚಿತ್ರ ಮಂದಿರಗಳಲ್ಲಿ ೨೦೦ ದಿನಗಳ ಸತತ ಪ್ರದರ್ಶನ ಕಂಡಿತು.[೩]
ಈ ಚಿತ್ರವು ತೆಲುಗಿನಲ್ಲಿ "ಈಡಿಯಟ್" ಹಾಗೂ ತಮಿಳಿನಲ್ಲಿ "ದಮ್" ಎಂಬ ಹೆಸರುಗಳಲ್ಲಿ ನಿರ್ಮಾಣಗೊಂಡು, ಕ್ರಮವಾಗಿ ೨೦೦೨ ಹಾಗೂ ೨೦೦೩ರಲ್ಲಿ ಬಿಡುಗಡೆಗೊಂಡರೆ,[೪] ಬಂಗಾಳಿ ಭಾಷೆಯಲ್ಲಿ "ಹಿರೋ" ಎಂಬ ಹೆಸರಿನೊಂದಿಗೆ ೨೦೦೬ರಲ್ಲಿ ಮರು ನಿರ್ಮಾಣಗೊಂಡು ಬಿಡುಗಡೆಯಾಯಿತು. ಜೊತೆಗೆ ಬಾಂಗ್ಲಾ ದೇಶಿ ಬಂಗಾಳಿ ಭಾಷೆಯಲ್ಲಿ "ಪ್ರೇಮ್ ಅಮರ್ ಪ್ರೆಮ್" ಎಂಬ ಶೀರ್ಷಿಕೆಯೊಂದಿಗೆ ೨೦೦೮ರಲ್ಲಿ.ಬಿಡುಗಡೆಯಾಯಿತು. ೧೯೮೬ರಲ್ಲಿ ಬಿಡುಗಡೆಗೊಂಡ "ಅನುರಾಗ ಅರಳಿತು" ಚಿತ್ರದ ಬಳಿಕ ಹೀಗೆ ಬಂಗಾಳಿ ಭಾಷೆ ಹಾಗೂ ಬಾಂಗ್ಲಾ ದೇಶೀ ಬೆಂಗಾಳಿ ಭಾಷೆಯಲ್ಲಿ ಮರುನಿರ್ಮಾಣಗೊಂಡ ಕನ್ನಡದ ಎರಡನೇಯ ಚಲನಚಿತ್ರವಾಗಿದೆ.[೫][೬][೭]
ಅಪ್ಪು, ಹೆಡ್ ಕಾನ್ ಸ್ಟೇಬಲ್ ವೆಂಕಟ ಸ್ವಾಮಿ ಅವರ ಪುತ್ರ. ಅಪ್ಪು, ಯಾವುದೇ ಒತ್ತಡಗಳನ್ನು ತೆಗೆದುಕೊಳ್ಳದೇ ನಿರಾತಂಕವಾಗಿ ಇರುವ ವ್ಯಕ್ತಿ. ಒಂದು ರಾತ್ರಿ ಆತ ತನ್ನ ಎದುರಾಳಿಗಳಿಂದ ಥಳಿಸಲ್ಪಡುತ್ತಾನೆ ಮತ್ತು ಪ್ರಜ್ಞೆ ತಪ್ಪುತ್ತಾನೆ. ಆ ಸಂದರ್ಭದಲ್ಲಿ ಸುಚಿತ್ರಾ ಎಂಬ ಸುಂದರ ಹುಡುಗಿ ಆತನನ್ನು ಆಸ್ಪತ್ರೆಗೆ ಸೇರಿಸಿ, ರಕ್ತವನ್ನೂ ನೀಡಿ ಕಾಪಾಡುತ್ತಾಳೆ. ಆಸ್ಪತ್ರೆಯ ವೆಚ್ಚವನ್ನೂ ಕೂಡ ಅವಳೇ ಭರಿಸುತ್ತಾಳೆ. ಆದರೆ ಅಪ್ಪುಗೆ ಪ್ರಜ್ಞೆ ಬರುವಷ್ಟರಲ್ಲಿ ಅವಳು ಆಸ್ಪತ್ರೆಯಿಂದ ಹೋಗಿರುತ್ತಾಳೆ. ಅಪ್ಪುವಿನ ಗೆಳೆಯರು, ಒಬ್ಬ ಹುಡುಗಿ ಆತನನ್ನು ಕಾಪಾಡಿದ ವಿಚಾರವನ್ನು ತಿಳಿಸುತ್ತಾರೆ. ಆಗ ಅಪ್ಪು, ಆಕೆನ್ನು ನೋಡದಿದ್ದರೂ ಕೂಡ ಆಕೆ ಒಳ್ಳೆಯತನಕ್ಕೆ ಮಾರು ಹೋಗಿ ಆಕೆಯತ್ತ ಆಕರ್ಶಿತನಾಗುತ್ತಾನೆ. ಆದರೆ ನಂತರ ಆಕೆ ನಗರ ಪೊಲೀಸ್ ಕಮಿಷನರ್ ರಾಜಶೇಖರ್ ಅವರ ಮಗಳು ಎಂದು ತಿಳಿದುಬರುತ್ತದೆ. ಅಪ್ಪು ಸುಚಿಯನ್ನು ಮೊದಲ ಬಾರಿಗೆ ಕಾಲೇಜಿನಲ್ಲಿ ಭೇಟಿಯಾಗಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಅವಳು ಒಪ್ಪದಿದ್ದಾಗ, ಅವನು ಅವಳನ್ನು ಕೆಣುಕುತ್ತಾನೆ. ಇದು ಸುಚಿ ತನ್ನ ತಂದೆಗೆ ಅಪ್ಪು ಬಗ್ಗೆ ದೂರು ನೀಡಲು ಕಾರಣವಾಗುತ್ತದೆ ರಾಜಶೇಖರ್ ಅಪ್ಪುವನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅವನನ್ನು ತೀವ್ರವಾಗಿ ಥಳಿಸುತ್ತಾನೆ. ಆದರೆ ವೆಂಕಟಸ್ವಾಮಿ ಮತ್ತು ಆತನ ಮೇಲಧಿಕಾರಿ ನ ಎಸ್‌ಐ ಸುದರ್ಶನ್ ಅಪ್ಪುವನ್ನು ರಕ್ಷಿಸುತ್ತಾರೆ. ಅಪ್ಪು ರಾಜಶೇಖರ್‌ನಿಂದ ಸೋಲಿಸಲ್ಪಟ್ಟರೂ, ಅವನು ತನ್ನ ಪ್ರೀತಿಯನ್ನ ಗೆಲ್ಲುವ ಹಠ ಹಿಡಿಯುತ್ತಾನೆ. ಕಾಲೇಜಿನಲ್ಲಿ ಮತ್ತೆ ಸುಚಿಗೆ ಪ್ರಪೋಸ್ ಮಾಡುತ್ತಾನೆ. ಅವಳು ಅವನನ್ನು ಕಟ್ಟಡದಿಂದ ಜಿಗಿಯಲು ಕೇಳುತ್ತಾಳೆ. ಅವನು ಹಾಗೆ ಮಾಡಲು ಸಿದ್ಧವಾದಾಗ, ಸುಚಿ ಅಪ್ಪುವಿನ ಪ್ರೀತಿಗೆ ಒಪ್ಪುತ್ತಾಳೆ. ರಾಜಶೇಖರ್‌ಗೆ ಈ ಪ್ರೀತಿ ಒಪ್ಪಿಗೆ ಇರುವುದಿಲ್ಲ. ಆತ ಇವರಿಗೆ ಹಲವಾರು ತಡೆಗಳನ್ನು ಒಡ್ಡುತ್ತಾನೆ. ಆ ತಡೆಗಳನ್ನು ಮೀರಿ ಅಪ್ಪು ಮತ್ತು ಸುಚಿತ್ರ ಹೇಗೆ ಒಂದಾಗುತ್ತಾರೆ ಎಂಬುದೇ ಈ ಚಿತ್ರದ ಒಟ್ಟಾರೆ ಕಥಾ ಹಂದರವಾಗಿದೆ.
ಗುರುಕಿರಣ್ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಉಪೇಂದ್ರ, ಶ್ರೀರಂಗ ಮತ್ತು ಹಂಸಲೇಖ ಸಾಹಿತ್ಯವನ್ನು ರಚಿಸಿದ್ದಾರೆ. "ಅಪ್ಪು" ಚಲನಚಿತ್ರವು ಒಟ್ಟು ಆರು ಹಾಡುಗಳನ್ನು ಒಳಗೊಂಡಿದೆ.
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡಿದವರು | ಸಮಯ |
1. | "ತಾಲಿಬಾನ್ ಅಲ್ಲ.. ಅಲ್ಲ.." | ಉಪೇಂದ್ರ | ಪುನೀತ್ ರಾಜ್‌ಕುಮಾರ್ | |
2. | "ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ.." | ಶ್ರೀ ರಂಗ | ಉದಿತ್ ನಾರಾಯಣ್, ಕೆ.ಎಸ್.ಚಿತ್ರ | |
3. | "ಪಣವಿಡು..ಪಣವಿಡು" | ಹಂಸಲೇಖ | ಡಾ.ರಾಜ್‌ಕುಮಾರ್ | |
4. | "ಎಲ್ಲಿಂದ ಆರಂಭವೋ" | ಶ್ರೀ ರಂಗ | ಉದಿತ್ ನಾರಾಯಣ್, ಕೆ.ಎಸ್.ಚಿತ್ರ | |
5. | "ಜಾಲೀ ಗೋ.. ಜಾಲಿ ಗೋ.." | ಹಂಸಲೇಖ | ಶಂಕರ್ ಮಹದೇವನ್ | |
6. | "ಆ ದೇವರ ಹಾಡಿದು" | ಕೆ.ಕಲ್ಯಾಣ್ | ಡಾ. ರಾಜ್‌ಕುಮಾರ್ |