ಅಮರುಶತಕ

ಗಂಡನ ದಾರಿ ಕಾಯುತ್ತಿರುವ ಹೆಂಡತಿ,ಅಮರುಕನ ಮರುಶತಕದ ೭೬ನೇ ಪದ್ಯ , ೧೭ನೇ ಶತಮಾನದ ಪೂರ್ವಾರ್ಧದ ವರ್ಣಚಿತ್ರ

ಅಮರುಶತಕ ಎಂಬುದು ಸಂಸ್ಕೃತ ಭಾಷೆಯ ಸುಪ್ರಸಿದ್ಧ ಪ್ರಣಯನಿಬಂಧ.ಇದರ ಕರ್ತೃ ಪ್ರಸಿದ್ಧ ಕವಿ ಅಮರುಕ .

ಕರ್ತೃ

[ಬದಲಾಯಿಸಿ]

ಇದರ ಪ್ರಸಿದ್ಧಕರ್ತೃ ಅಮರುಕ . (ಸು. 650). ಕಾಲ ಜೀವಿತಗಳ ವಿಚಾರ ತಿಳಿದಿರುವುದು ಅತ್ಯಲ್ಪ. ಗ್ರಂಥದ ವ್ಯಾಖ್ಯಾನಕಾರರೇ ಮುಂತಾದವರು ನಿರ್ದೇಶಿಸಿರುವಂತೆ ಕವಿಯ ಹೆಸರಿನಲ್ಲಿ ಕೂಡ ಅಮರು, ಅಮರಕ, ಅಮರುಕ, ಅಮರೂಕ, ಅಮ್ರಕ, ಅಮರ ಎಂಬುದಾಗಿ ವ್ಯತ್ಯಾಸ ತೋರಿದೆ. ತಿಳಿದುಬಂದಿರುವ ಜೀವಿತ ವಿಷಯವೆಂದರೆ ಕೆಳಕಂಡಂತಿರುವ ಕಥಾರೂಪದ ಪ್ರತೀತಿ ಒಂದೇ.

ಕಥಾನಕ

[ಬದಲಾಯಿಸಿ]

ವಾರಣಾಸಿಯಲ್ಲಿ ಶಂಕರಾಚಾರ್ಯರೊಡನೆ ವಾದದಲ್ಲಿ ತೊಡಗಿ ಸೋಲುವ ಗತಿಯಲ್ಲಿದ್ದ ಮಂಡನಮಿಶ್ರರನ್ನು ಕಂಡು, ಇವರ ಪತ್ನಿ ತಾನೂ ವಾದಕ್ಕೆ ನಿಂತು ಕಾಮ ಶಾಸ್ತ್ರವನ್ನು ಕುರಿತು ಪ್ರಶ್ನಿಸುತ್ತಾಳೆ. ಸಂಸ್ಯಾಸಿಯಾಗಿದ್ದ ಶಂಕರಾಚಾರ್ಯರು ಉತ್ತರ ಕೊಡಲು ಒಂದು ತಿಂಗಳ ಅವಧಿಯನ್ನು ಪಡೆದು ಯಾವುದೋ ಒಂದು ನಗರಕ್ಕೆ ಬರುತ್ತಾರೆ. ಅಲ್ಲಿನ ದೊರೆ ಅಮರು ಎಂಬುವನು ಮೃತನಾಗಿರುವ ವಿಚಾರವನ್ನು ತಿಳಿದು, ಅವರು ತಮ್ಮ ದೇಹವನ್ನು ತ್ಯಜಿಸಿ, ಅದರ ರಕ್ಷಣೆಯನ್ನು ಶಿಷ್ಯರಿಗೆ ವಹಿಸಿ, ದೊರೆಯ ಮೃತದೇಹವನ್ನು ಪ್ರವೇಶಿಸುತ್ತಾರೆ. ಹೀಗೆ ಪುನಃ ಜೀವಂತನಾದ ಅಮರು ಅರಮನೆಗೆ ಹಿಂತಿರುಗಿ ಪ್ರಣಯದಲ್ಲಿ ನೈಪುಣ್ಯ ಪಡೆದುಕೊಳ್ಳುತ್ತಾನೆ. ವಾಸ್ತವವಾಗಿ ಈ ಅನುಭವವನ್ನು ಪಡೆದವರು ಶಂಕರಾಚಾರ್ಯರು. ಸ್ವಲ್ಪಕಾಲವಾದ ಮೇಲೆ ಅವರು ಅಮರುವಿನ ದೇಹವನ್ನು ಬಿಟ್ಟು ಪುನಃ ತಮ್ಮ ದೇಹವನ್ನು ಪ್ರವೇಶಿಸಿ, ಅಲ್ಲಿಂದ ಹೊರಟು ಕಾಮಶಾಸ್ತ್ರಕ್ಕೆ ಸಂಬಂಧಪಟ್ಟ ವಾದದಲ್ಲಿ ಮಂಡನಮಿಶ್ರರ ಪತ್ನಿಯನ್ನು ಸೋಲಿಸುತ್ತಾರೆ. ಇಂಥ ಸಂದರ್ಭದಲ್ಲಿ ನೃಪವೇಷಧಾರಿಯಾದ ಶಂಕರಾಚಾರ್ಯರು ಆ ಶಾಸ್ತ್ರದಲ್ಲೂ ಪಾರಂಗತರಾಗಿ ಅಮರುಶತಕವೆಂಬ ಪ್ರಣಯನಿಬಂಧವನ್ನು ರಚಿಸಿದರೆಂದು ಕಥೆಯಲ್ಲಿ ನಿರೂಪಿತವಾಗಿದೆ. ಅಂದರೆ ಗ್ರಂಥ ಶಂಕರಾಚಾರ್ಯಕೃತವೆಂದು ತಾತ್ಪರ್ಯ. ಈ ಅಮರು ಎಂಬ ದೊರೆ ಕಾಶ್ಮೀರದವನೆಂದೂ, ಅಲ್ಲಿ ನಡೆದ ಒಂದು ವಿದ್ವತ್ಸಭೆಯಲ್ಲಿ ಶಂಕರಾಚಾರ್ಯರು ಭಾಗವಹಿಸಿದ್ದರೆಂದು ಕಾಮಶಾಸ್ತ್ರವನ್ನು ಚರ್ಚಿಸುವ ಸಂದರ್ಭ ಒದಗಿ ಅವರು ಮೃತನಾಗಿದ್ದ ಆ ದೊರೆಯ ದೇಹವನ್ನು ಪ್ರವೇಶಿಸಿ ಅವನ ನೂರುಜನ ಪತ್ನಿಯರೊಡನೆ ವಿಹರಿಸುವಾಗ ಶತಕದ ಒಂದು ನೂರು ಶ್ಲೋಕಗಳನ್ನು ರಚಿಸಿದರೆಂದೂ ಕಥೆಗೆ ಪಾಠಾಂತರವಿದೆ. ಅವರ ಈ ಸಾಧನೆಯನ್ನು ಗಮನಿಸಿದ ಕೆಲವರು ಅವರನ್ನು ಕಪಟಸಂನ್ಯಾಸಿಯೆಂದು ಜರಿದಾಗ ಆ ಶ್ಲೋಕಗಳಿಗೇ ಸಂನ್ಯಾಸಕ್ಕನುಗುಣವಾಗಿ ಅರ್ಥವಿವರಣೆ ಕೊಟ್ಟರೆಂದೂ ಅಲ್ಲಿ ಹೇಳಿದೆ. ಅಮರುಕನ ಜೀವಿತದ ವಿವರಣೆಗಳಂತೆ, ಕಾಲದ ವಿಚಾರವೂ ಕೇವಲ ಸಮಸ್ಯಾತ್ಮಕವಾಗಿದೆ. ಸುಪ್ರಸಿದ್ಧ ಸಂಸ್ಕøತ ವಿಮರ್ಶಕ ಆನಂದವರ್ಧನ (ಸು. 850) ತನ್ನ ಧ್ವನ್ಯಾಲೋಕದಲ್ಲಿ ಅಮರುಶತಕದಿಂದ ಶ್ಲೋಕಗಳನ್ನುದ್ಧರಿಸಿರುವುದಲ್ಲದೆ ಅವುಗಳ ಪ್ರಶಂಸೆಯನ್ನೂ ಮಾಡಿದ್ದಾನೆ. ವಾಮನ ಎಂಬ ಮತ್ತೊಬ್ಬ ಅಲಂಕಾರಿಕ (ಸು. 800) ತಾನು ರಚಿಸಿರುವ ಕಾವ್ಯಾಲಂಕಾರಸೂತ್ರದಲ್ಲಿ ಅಮರುಶತಕದ ಕೆಲವು ಶ್ಲೋಕಗಳನ್ನು ಉದಾಹರಣೆಗಳಾಗಿ ಸೇರಿಸಿಕೊಂಡಿದ್ದಾನೆ. ಮೇಲ್ಕಂಡ ಅಧಾರಗಳ ಮೇಲೆ ಶತಕ 750ಕ್ಕಿಂತಲೂ ಹಿಂದಿನದೆಂದು ಹೇಳಬಹುದು. ಈ ದೃಷ್ಟಿಯಿಂದ ಅಮರುಕನ ಕಾಲ ಸುಮಾರು 650 ಆಗಿರಬಹುದೆಂದು ವಿದ್ವಾಂಸರ ಮತ.

ಅಮರುಶತಕ ಸಾರತಃ ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಸಿಕ್ಕಿರುವ ಹಸ್ತಪ್ರತಿಗಳಲ್ಲಿರುವ ಪದ್ಯಗಳ ಸಂಖ್ಯೆ ತೊಂಬತ್ತರಿಂದ ಒಂದು ನೂರ ಹದಿನೈದರವರೆಗಿದೆ. ಗ್ರಂಥದ ನಾಲ್ಕು ಪಾಠಗಳು ಉಪಲದ್ಧವಾಗಿವೆ; ಪ್ರತಿ ಪಾಠದಲ್ಲೂ ಸುಮಾರು ಒಂದು ನೂರು ಶ್ಲೋಕಗಳಿವೆ. ಅವುಗಳಲ್ಲಿ ಐವತ್ತೊಂದು ಮಾತ್ರ ಎಲ್ಲ ಪಾಠಗಳಲ್ಲೂ ಬರುತ್ತವೆ. ಅಲ್ಲದೆ, ಶ್ಲೋಕಗಳ ಕ್ರಮದಲ್ಲೂ ವ್ಯತ್ಯಾಸವಿದೆ. ಶತಕದ ಕೆಲವು ಶ್ಲೋಕಗಳು ಬೇರೆ ಕರ್ತೃಗಳ ಹೆಸರಿನಿಂದ ಸುಭಾಷಿತ ಸಂಗ್ರಹಗಳಲ್ಲಿ ಉದ್ಧøತವಾಗಿವೆ; ಅಂಥ ಸುಭಾಷಿತ ಸಂಗ್ರಹಗಳಲ್ಲಿ ಅಮರುವಿನ ಹೆಸರಿನಲ್ಲಿರುವ ಕೆಲವು ಪದ್ಯಗಳು ಉಪಲಬ್ಧವಾಗಿರುವ ಅಮರುಶತಕದಲ್ಲಿ ಇಲ್ಲವಾಗಿವೆ. ಹೀಗಾಗಿ ಗ್ರಂಥದ ಮೂಲಪಾಠವನ್ನು ನಿರ್ಣಯಿಸಲು ವಿಶೇಷ ಪ್ರಯತ್ನ ನಡೆದಿದೆ. ಶತಕದಲ್ಲಿರುವ ಶಾರ್ದೂಲವಿಕ್ರೀಡಿತ ಪದ್ಯಗಳು ಮಾತ್ರ ಮೂಲಪಾಠಕ್ಕೆ ಸೇರಿದವೆಂದು ಕೆಲವರ ಅಭಿಪ್ರಾಯ. ಇದನ್ನೊಪ್ಪಿದರೆ, ಹಾಗೆ ಲೆಕ್ಕಕ್ಕೆ ಬರತಕ್ಕವು ಶತಕದ ಕೆವಲ ಅರವತ್ತೊಂದು ಪದ್ಯಗಳು. ಆ ಗ್ರಂಥದ ವ್ಯಾಖ್ಯಾನಕಾರರಲ್ಲೊಬ್ಬನಾದ ಅರ್ಜುನವರ್ಮದೇವ (ಸು. 1215) ಅನುಸರಿಸಿರುವ ಪಾಠಕ್ಕೇ ಮೂಲದ ದೃಷ್ಟಿಯಿಂದ ಹೆಚ್ಚು ಬೆಲೆಯುಂಟೆಂಬ ಮತ್ತೊಂದುವಾದ ಗಮನಾರ್ಹವಾಗಿದೆ. ಗ್ರಂಥ ಭಿನ್ನಕರ್ತೃಕ ಪದ್ಯಗಳ ಸಂಗ್ರಹವಿರಬಹುದೆಂದು ಕೆಲವು ವಿದ್ವಾಂಸರ ಮತ. ಆದರೆ ಅಂಥ ತೀರ್ಮಾನಕ್ಕೆ ಸರಿಯಾದ ಆಧಾರಗಳಿಲ್ಲ. ಸಾಮಾನ್ಯವಾಗಿ ಸಂಸ್ಕøತಸಾಹಿತ್ಯದಲ್ಲಿ ಶತಕವೆಂಬುದು ಒಬ್ಬ ಕರ್ತೃವಿನದೇ ಆಗಿರುತ್ತದೆ. ಬಿಡಿ ಪದಗಳಿರುವುದರಿಂದ ಪ್ರಕ್ಷಿಪ್ತಗಳಿಗೆ ಅವಕಾಶವುಂಟೆಂದು ಮಾತ್ರ ಒಪ್ಪಿಕೊಳ್ಳಬಹುದು. ಅಮರುಶತಕದ ಪ್ರತಿಪದ್ಯವೂ ಒಂದು ಪ್ರೇಮಗೀತೆ. ಅದು ಅನುರಾಗದ ಒಂದು ದಶೆಯ ಅಥವಾ ಅದಕ್ಕೆ ಸಂಬಂಧಪಟ್ಟ ಒಂದು ಯುಕ್ತ್ಯಾತ್ಮಕ ಪ್ರಸಂಗದ ಮನೋಹರ ಚಿತ್ರಣವಾಗಿದ್ದು ಸ್ವಯಂಪೂರ್ಣವಾದ ರಚನೆಯಾಗಿದೆ. ಆ ಪ್ರೇಮಗೀತೆಗಳಲ್ಲಿ ಉತ್ಕಟವಾದ ಇಚ್ಛೆಯಿಂದ ಸಂಭೋಗದ ಪಾರವಶ್ಯದ ಮೈಮರೆವಿನವರೆಗೆ ಪ್ರಣಯದ ನಾನಾಸ್ಥಿತಿಗಳು ಮನೋಜ್ಞವಾಗಿ ವರ್ಣಿತವಾಗಿರುವುದಲ್ಲದೆ. ಕೆಲವು ಸಂಭೋಗಶೃಂಗಾರವನ್ನೂ ಮತ್ತೆ ಕೆಲವು ವಿಪ್ರಲಂಭವನ್ನೂ ಅವಲಂಬಿಸಿಕೊಂಡಿದೆ. ಭಾವಸಂಪತ್ತುಳ್ಳ ಕೆಲವು ನಾಟಕೀಯ ಸ್ವಾರಸ್ಯದಿಂದ ಕೂಡಿವೆ.

ಕನ್ನಡ ಅನುವಾದಗಳು

[ಬದಲಾಯಿಸಿ]

thumb|ಅಮರುಶತಕ: ಕನ್ನಡ ಅನುವಾದದ ಮುಖಪುಟ. ಸಾಹಿತ್ಯ ಅಕಾದೆಮಿ ಪ್ರಕಟಣೆ. ಅಮರುಶತಕಕ್ಕೆ ಕನ್ನಡದಲ್ಲಿ ಅನೇಕ ಅನುವಾದಗಳಿವೆ. ದೇವರಾಜ (ಸು. 1410) ಪರಿವರ್ಧಿನಿಯಲ್ಲಿ ಅನುವಾದಿಸಿದ್ದಾನೆ. ಚಿಕುಪಾಧ್ಯಾಯ (1672) ಕನ್ನಡಿಸಿದಂತೆ ಕಾಣುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ವೆಂಕಟರಾಮಶಾಸ್ತ್ರಿ (1842) ನವ್ಯ ಕರ್ಣಾಟಭಾಷಾ ಪ್ರಕಟಿತ ಶೃಂಗಾರದೀಪಿಕಾ ಸರ್ವಸಂಗ್ರಹ ಎಂಬ ಹೆಸರಿನಿಂದ ಟೀಕೆ ಬರೆದಿದ್ದಾನೆ. ಈಚೆಗೆ ತೀ.ನಂ.ಶ್ರೀ. ಅವರು ಹಲವು ಮುಕ್ತಕಗಳನ್ನು ಅನುವಾದಿಸಿದ್ದಾರಲ್ಲದೆ ಎಸ್.ವಿ. ಪರಮೇಶ್ವರಭಟ್ಟರು ಪೂರ್ಣಶತಕವನ್ನು ಅನುವಾದ ಮಾಡಿದ್ದಾರೆ. 2021ರಲ್ಲಿ ಸಾಹಿತ್ಯ ಅಕಾದೆಮಿ ರಾಮಪ್ರಸಾದ್ ಕೆ.ವಿ (ಹಂಸಾನಂದಿ) ಅವರ ಹೊಸಗನ್ನಡ ಪದ್ಯಾನುವಾದವನ್ನು ಪ್ರಕಟಿಸಿದೆ.

ಅಮರುಶತಕದ ಪದ್ಯಗಳಲ್ಲಿ ಒಂದೊಂದೂ ನೂರು ಪ್ರಬಂಧಗಳಿಗೆ ಸಮನೆಂಬ ಪ್ರಶಂಸೆ ಇದೆ. ಅನ್ವರ್ಥವಾಗಿ ಅವನ್ನು ಮುಕ್ತಕಗಳೆಂದು ಕರೆದಿದ್ದಾರೆ. ಆನಂದ ವರ್ಧನ ಅವುಗಳ ವಿಚಾರವಾಗಿ ಕೆಳಕಂಡ ಮಾತುಗಳಲ್ಲಿ ತನ್ನ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾನೆ. ಮುಕ್ತಕೇಷು ಪ್ರಬಂಧೇಷ್ವಿವ ರಸಬಂಧಾಭಿನಿವೇಶಿನಃ ಕವಯೋ ದೃಶ್ಯಂತೇ | ಯಥಾ ಹಿ ಅಮರುಕಸ್ಯ ಕವೇಃ ಮುಕ್ತಕಾಃ ಶೃಂಗಾರರಸಸ್ಯಂದಿನಃ ಪ್ರಬಂಧಾಯ ಮನಾಃ ಪ್ರಸಿದ್ಧಾ ಏವ. (ಧ್ವನ್ಯಾಲೋಕ; ಉದ್ದ್ಯೋತ-3.) ಅಂದರೆ ಪ್ರಬಂಧಗಳಲ್ಲಿ ಹೇಗೋ ಮುಕ್ತಕಗಳಲ್ಲೂ ಕವಿಗಳು ರಸಪ್ರತಿಪಾದನೆಯ ಧಾಟಿಯೊಂದನ್ನೇ ಇಟ್ಟುಕೊಂಡಿರುವುದನ್ನು ನೋಡಬಹುದು. ಉದಾಹರಣೆಗೆ, ಅಮರುಕ ಕವಿಯ ಮುಕ್ತಕಗಳು ಶೃಂಗಾರರಸವನ್ನು ಸ್ರವಿಸುತ್ತ ಪ್ರಬಂಧಗಳಂತಿರುವುದು ಪ್ರಸಿದ್ಧವಾಗಿಯೇ ಇದೆ.

ಇಷ್ಟು ಹಿರಿದಾದ ಪ್ರಶಂಸೆಗೆ ಪಾತ್ರನಾಗಿರುವ ಆ ಕವಿಯ ಶೃಂಗಾರದೃಷ್ಟಿಯ ಸಂಕೇತವಾಗಿ ಕೆಳಗಿನ ಶ್ಲೋಕವನ್ನು ಅವನ ಶತಕದಿಂದ ಉದ್ಧರಿಸಿ, ಅದೇ ಪದ್ಯದ ಎರಡು ಕನ್ನಡ ಅನುವಾದಗಳನ್ನು ಇಲ್ಲಿ ಉದಾಹರಿಸಲಾಗಿದೆ.

ದಂಪತ್ಯೋರ್ನಿಶಿ ಜಲ್ಪತೋರ್ಗೃಹ ಶುಕೇನಾಕರ್ಣಿತಂ ಯದ್ವಚ-

ಸ್ತತ್ಟ್ರಾತರ್ಗುರುಸಂನಿಧೌ ನಿಗದತಸ್ತಸ್ಯಾತಿಮಾತ್ರಂ ವಧೂಃ I

ಕರ್ಣಾಲಂಬಿತಪದ್ಮರಾಗಶಕಲಂ ವಿನ್ಯಸ್ಯ ಚಂಚೂಪುಟೇ ವ್ರೀಡಾರ್ತಾ-

ವಿದಧಾತಿ ದಾಡಿಮಫಲವ್ಯಾಜೇನ ವಾಗ್ಬಂಧನಮ್ II

ಗಂಡ ಹೆಂಡಿರು ರಾತ್ರಿ ಆಡಿದ ಮಾತನಾಲಿಸಿ ಮನೆಯ ಗಿಣಿ ಬೆಳ

ಗಿನೊಳು ಹಿರಿಯರ ಮುಂದೆ ಹೇಳಲು ದೊಡ್ಡದನಿಗೈದು

ನಾಚಿ ದಾಳಿಂಬೆಯನು ತಿನಿಸುವ ನೆವದೊಳಾ ವಧು ಕಿವಿಯ ಓಲೆಯ

ಕೆಂಪು ಹರಳನು ಕೊಕ್ಕಿನೊಳಗಿಟ್ಟದರ ಬಾಯನು ಮುಚ್ಚಿಸಿದಳಂದು

-ಎಸ್.ವಿ. ಪರಮೇಶ್ವರಭಟ್ಟರ ಅನುವಾದ.

ಗಂಡಹೆಂಡಿರ ಇರುಳ ಸರಸದ ಮಾತ ಕೇಳಿದ ಮನೆಗಿಳಿ

ಅದನೆ ನಸುಕಲಿ ಹಿರಿಯರೆದುರಲಿ ಚೀರಿರಲು ನಾಚುತ್ತಲಿ

ಕಿವಿಯಲೋಲಾಡುತಿಹ ಕೆಂಪಿನ ಓಲೆಯಿರಿಸುತ ಕೊಕ್ಕಿಗೆ

ನೀಡಿಹಳು ’ದಾಳಿಂಬೆಯಿದು ಕೋ’ಯೆನುತ ಬಾಯನು ಮುಚ್ಚಿಸೆ

-ರಾಮಪ್ರಸಾದ್ ಕೆ ವಿ (ಹಂಸಾನಂದಿ) ಅವರ ಅನುವಾದ

ಇಂಗ್ಲೀಷ್ ಅನುವಾದಗಳು

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: