ಅಮೋಘವಜ್ರ ಭಾರತದಿಂದ ಚೀನಾದೇಶಕ್ಕೆ ಹೋಗಿ ಬೌದ್ಧ ಧರ್ಮವನ್ನು ಪ್ರಚಾರ ಮಾಡಿದವರಲ್ಲಿ ಪ್ರಮುಖ.
ಉತ್ತರ ಭಾರತದ ಬ್ರಾಹ್ಮಣ ವಂಶಕ್ಕೆ ಸೇರಿದವ. ತನ್ನ ಹದಿನೈದನೆಯ ವಯಸ್ಸಿನಲ್ಲೇ ವಜ್ರಬೋಧಿಯಿಂದ ಪ್ರಭಾವಿತನಾಗಿ ಬೌದ್ಧನಾದ. ಚೀನಾದೇಶಕ್ಕೆ ಕ್ರಿ.ಶ. 724ರಲ್ಲಿ ಹೋಗಿ ಎಂಟು ವರ್ಷಗಳ ಕಾಲ ಅಲ್ಲಿಯೇ ನೆಲೆಸಿದ್ದ. ಅನಂತರ ಬೌದ್ಧಗ್ರಂಥಗಳ ಶೋಧನೆಗಾಗಿ ಸಿಂಹಳದ್ವೀಪಕ್ಕೆ ತೆರಳಿದ. ಸಿಂಹಳದ ದಂತವಿಹಾರದಲ್ಲಿದ್ದು ಅನೇಕ ಅಮೂಲ್ಯ ಬೌದ್ಧಗ್ರಂಥಗಳ ಪ್ರತಿಗಳನ್ನು ತಯಾರಿಸಿಕೊಂಡು ಕ್ರಿ.ಶ. 740ರಲ್ಲಿ ಚೀನಾದೇಶಕ್ಕೆ ಹಿಂದಿರುಗಿದ. ಅನಂತರ ಚೀನಾದಲ್ಲಿ ಮರಣಹೊಂದುವವರೆಗೂ (ಕಿ.ಶ. 774) ತಾನು ತಂದಿದ್ದ ಬೌದ್ಧ ಗ್ರಂಥಗಳನ್ನು ಚೀನೀ ಭಾಷೆಗೆ ಭಾಷಾಂತರಿಸುವುದರಲ್ಲಿ ನಿರತನಾಗಿದ್ದ. ವಜ್ರಯಾನ ಪಂಥದ ಅತ್ಯಂತ ಮುಖ್ಯ ಪಂಡಿತನೆಂದು ಹೆಸರುವಾಸಿಯಾದ ಈತ ನೂರಕ್ಕೂ ಹೆಚ್ಚು ಗ್ರಂಥಗಳನ್ನು ಭಾಷಾಂತರಿಸಿದ್ದಾನೆ.