ಅರಿಹಂತ್ ಪ್ರಥಮವರ್ಗದ (ಆರ್ಥ:ಶತ್ರುನಾಶಕ:ಸಂಸ್ಕೃತ) ಪರಮಾಣು ಚಾಲಿತ ಕ್ಷಿಪಣಿ ಜಲಾಂತರ್ಗಾಮಿ. ಇದನ್ನು ಭಾರತೀಯ ನೌಕಾಪಡೆಗಾಗಿ ನಿರ್ಮಿಸಲಾಗಿದೆ. ಒಂದು ಉತ್ತಮ ವರ್ಗದ್ದಾಗಿದೆ. $ 2.9 ಶತಕೋಟಿಯ ಪರಮಾಣು ಚಾಲಿತ ಜಲಾಂತರ್ಗಾಮಿ ನಿರ್ಮಿಸುವ ಯೋಜನೆ 'ಅಮೇರಿಕಾದ ಅಡ್ವಾನ್ಸ್ಡ್ ಟೆಕ್ನಾಲಜಿ ಹಡಗು ನಿರ್ಮಾಣ'ದ ಯೋಜನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಿ (ಎಟಿವಿ) ವಿನ್ಯಾಸಗೋಳಿಸಿದೆ.
ದೇಶೀಯವಾಗಿ ನಿರ್ಮಿಸಲಾದ ಮೊದಲ ಅಣ್ವಸ್ತ್ರ ಜಲಾಂತರ್ಗಾಮಿ ‘ಐಎನ್‌ಎಸ್ ಅರಿಹಂತ್’ ರಹಸ್ಯವಾಗಿ ತನ್ನ ಕಾರ್ಯಾಚರಣೆ ಆರಂಭಿಸಿದೆ. ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿರುವ ಈ ಜಲಾಂತರ್ಗಾಮಿ ಅಣ್ವಸ್ತ್ರಗಳನ್ನು ಸಿಡಿಸುವ ಸಾಮರ್ಥ್ಯ ಹೊಂದಿದೆ. ಆಗಸ್ಟ್ 25ರಂದು ವಿಶಾಖಪಟ್ಟಣದಲ್ಲಿ ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ, ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಿರುವ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ರಕ್ಷಣಾ ಸಚಿವಾಲಯ ಮತ್ತು ನೌಕಾಪಡೆ ಈ ಕುರಿತ ವರದಿಗಳನ್ನು ದೃಢಪಡಿಸಿಲ್ಲ ಅಥವಾ ತಳ್ಳಿ ಹಾಕಿಲ್ಲ. ‘ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ವೈಸ್ ಆಡ್ಮಿರಲ್ ಜಿ.ಎಸ್. ಪಬ್ಬಿ ತಿಳಿಸಿದ್ದಾರೆ. ‘ಐಎನ್‌ಎಸ್ ಅರಿಹಂತ್’ ಸೇರ್ಪಡೆಯಿಂದ ಭೂಮಿ, ಆಕಾಶ ಮತ್ತು ಸಮುದ್ರದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವನ್ನು ಭಾರತ ಹೊಂದಿದಂತಾಗಿದೆ.
ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರು ಇರಿಸಲಾಗಿರುವ ‘ಕೆ’ ಸರಣಿಯ ಕ್ಷಿಪಣಿಗಳನ್ನು ಈ ಜಲಾಂತರ್ಗಾಮಿ ಹೊಂದಿದೆ. ‘ಕೆ–15’ ಕ್ಷಿಪಣಿಗಳು 750 ಕಿಲೋ ಮೀಟರ್ ಮತ್ತು ‘ಕೆ–4’ ಕ್ಷಿಪಣಿಗಳು 3,500 ಕಿಲೋ ಮೀಟರ್ ದೂರವರೆಗೆ ಸಾಗಬಲ್ಲವು. ‘ಕೆ–5’ ಕ್ಷಿಪಣಿಗಳು ಇನ್ನೂ ಹೆಚ್ಚಿನ ಸಾಮರ್ಥ್ಯ ಹೊಂದಿವೆ. ಆದರೆ, ಈ ವಿವಿಧ ಮಾದರಿಯ ಕ್ಷಿಪಣಿಗಳನ್ನು ಅಳವಡಿಸಿರುವುದನ್ನು ನೌಕಾಪಡೆ ದೃಢಪಡಿಸಿಲ್ಲ. 2013ರ ಜನವರಿಯಲ್ಲಿ ಈ ಕ್ಷಿಪಣಿಗಳ ಸಾಮರ್ಥ್ಯದ ಬಗ್ಗೆ ನೀರಿನ ಒಳಗೆ ಪರೀಕ್ಷೆ ಕೈಗೊಳ್ಳಲಾಗಿತ್ತು. ಜಲಾಂತರ್ಗಾಮಿಯಿಂದ ಕನಿಷ್ಠ ಮೂರು ಬಾರಿ ಕ್ಷಿಪಣಿಗಳನ್ನು ಸಿಡಿಸುವ ಪರೀಕ್ಷೆ ಕೈಗೊಳ್ಳುವುದು ಕಡ್ಡಾಯವಾಗಿದೆ. ಕಳೆದ ವರ್ಷ ಪರಿಸರ ಖಾತೆ ಹೊಂದಿದ್ದ ಪ್ರಕಾಶ್ ಜಾವಡೇಕರ್ ಅವರು ನಿಕೋಬಾರ್‌ನ ತಿಲಾಂಚಂಗ್ ದ್ವೀಪದಲ್ಲಿ ನೀರಿನ ಒಳಗೆ ಕ್ಷಿಪಣಿಗಳನ್ನು ಸಿಡಿಸುವ ಪರೀಕ್ಷೆಗೆ ನೌಕಾಪಡೆಗೆ ಅನುಮತಿ ನೀಡಿದ್ದರು. ಈ ಪರೀಕ್ಷೆ ಬಳಿಕ ಸರ್ಕಾರ ಮೌನವಹಿಸಿತ್ತು. ಆದರೆ, ಜಲಾಂತರ್ಗಾಮಿಯ ಖಂಡಾಂತರ ಕ್ಷಿಪಣಿಗಳ ಕಡ್ಡಾಯ ಪ್ರಯೋಗ ಇನ್ನೂ ಪೂರ್ಣಗೊಳ್ಳದ ಕಾರಣ ‘ಅರಿಹಂತ್’ ಇನ್ನೂ ಕಾರ್ಯಾಚರಣೆಗೆ ನಿಯೋಜಿಸಲು ಸಿದ್ಧವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅಣು ಸಾಮರ್ಥ್ಯದ ಎರಡನೇ ಜಲಾಂತರ್ಗಾಮಿ ‘ಐಎನ್‌ಎಸ್ ಅರಿಧಾನ್’ ಇನ್ನೂ ನಿರ್ಮಾಣ ಹಂತದಲ್ಲಿದೆ. ಅಮೆರಿಕ, ಬ್ರಿಟನ್, ರಷ್ಯಾ, ಫ್ರಾನ್ಸ್ ಮತ್ತು ಚೀನಾ ಮಾತ್ರ ಅಣು ಸಾಮರ್ಥ್ಯದ ಜಲಾಂತರ್ಗಾಮಿಗಳನ್ನು ಹೊಂದಿವೆ.
ಚೀನಾ ತನ್ನ ಆಪ್ತ ಮಿತ್ರ ಪಾಕಿಸ್ತಾನಕ್ಕೆ ಎಂಟು ದಾಳಿ ಜಲಾಂತರ್ಗಾಮಿಗಳನ್ನು ಮಾರಾಟ ಮಾಡುವುದಾಗಿ ಹೇಳಿದೆ. ಸುಮಾರು $ 5 ಬಿಲಿಯನ್ ಅಂದಾಜು ಮೌಲ್ಯದ (5ನೂರು ಕೋಟಿ ಡಾಲರ್) ಬೀಜಿಂಗ್‍ನ ದೊಡ್ಡ ಮಿಲಿಟರಿ ಒಪ್ಪಂದ ಎಂದು ಪರಿಗಣಿಸಲಾಗಿದೆ.[೨]