ಅರ್ಚನೆ

ಸತ್ಕಾರ ಲೇಖನಕ್ಕಾಗಿ ಇಲ್ಲಿ ನೋಡಿ.

ಅರ್ಚನೆ ದೇವಸ್ಥಾನದ ಅರ್ಚಕರಿಂದ ಮಾಡಲಾಗುವ ಒಂದು ವಿಶೇಷ, ವೈಯಕ್ತಿಕ, ಸಂಕ್ಷಿಪ್ತ ಪೂಜೆ ಮತ್ತು ಇದರಲ್ಲಿ ವೈಯಕ್ತಿಕ ಮಾರ್ಗದರ್ಶನ ಹಾಗು ಆಶೀರ್ವಾದಗಳನ್ನು ಆವಾಹಿಸಲು ಒಬ್ಬ ಭಕ್ತನ ಹೆಸರು, ಜನ್ಮ ನಕ್ಷತ್ರ ಮತ್ತು ಕುಟುಂಬದ ವಂಶಾವಳಿಯನ್ನು ಪಠಿಸಲಾಗುತ್ತದೆ. ಅರ್ಚನೆ ಪ್ರತಿ ಪೂಜೆಯ ಕೇಂದ್ರ ಭಾಗವಾಗಿರುವ ದೇವರ ಹೆಸರುಗಳನ್ನು ಪಠಿಸುವುದನ್ನೂ ಸೂಚಿಸುತ್ತದೆ. ಇದರ ಸಂಸ್ಕೃತ ಅರ್ಥ "ಗೌರವಿಸುವುದು, ಹೊಗಳುವುದು". ಅರ್ಚನೆ : ಪೂಜ್ಯವಾದ ಒಂದು ವಸ್ತುವಿಗೆ ವಿಧ್ಯುಕ್ತವಾಗಿ ನೀಡುವ ಗೌರವ. ಎಲ್ಲ ಮತಧರ್ಮಗಳಲ್ಲಿಯೂ ಕಂಡುಬರುವ ಅಂಶ. ಇದು ಮಾನಸಿಕವಾಗಿರಬಹುದು, ಕಾಯಕವಾಗಿರಬಹುದು. ಒಂದೊಂದು ಮತಧರ್ಮದಲ್ಲಿ ಒಂದೊಂದು ರೀತಿಯ ಅರ್ಚನಾವಿಧಿ ಇದೆ, ಪೂಜ್ಯಭಾವವನ್ನು ತೋರಿಸುವ ಅನೇಕ ಪ್ರಕಾರಗಳಿವೆ. ಈ ಪ್ರಕಾರಗಳು ವಿವಿಧವಾದರೂ ಇವೆಲ್ಲದರ ಹಿಂದೆ ಇರುವ ಮನೋಭಾವ ಒಂದೇ. ವರ್ಷಿಪ್, ಆರಾಧನೆ, ಪೂಜೆ ಇವಲ್ಲ ಸಮಾನಾರ್ಥಕ ಪದಗಳು. ಮತಧರ್ಮಗಳಿಗೆ ಸಂಬಂಧಿಸಿದ ಆಚಾರ ಅನುಷ್ಠಾನಗಳಲ್ಲಿ ಪೂಜಾವಿಧಾನಗಳು ಪ್ರಮುಖ ಪಾತ್ರವಹಿಸಿವೆ. ಇವುಗಳಲ್ಲಿ ಕೆಲವು ಪುರೋಹಿತರ ಮೂಲಕ ನಡೆಸುವಂಥವು. ಯಜ್ಞ ಯಾಗಾದಿಗಳು, ವ್ರತೋಪವಾಸಗಳು, ಉತ್ಸವಗಳು, ವಿಗ್ರಹಾರಾಧನೆ ಇವೆಲ್ಲವೂ ಪೂಜೆಯ ಅಥವಾ ಅರ್ಚನೆಯ ಅಂಗಗಳು. ಪತ್ರಪುಷ್ಪಫಲಗಳ ನಿವೇದನೆಯೂ ಇದರ ಒಂದು ಅಂಗ. ತೀರ್ಥಪ್ರಸಾದ ವಿನಿಯೋಗ ಮತ್ತೊಂದು ಅಂಗ. ಗಂಟೆ ಬಾರಿಸುವುದು, ವೇದಘೋಷ, ವಾದ್ಯ ಸಂಗೀತ ಇವೂ ಅನೇಕ ಸಲ ಅರ್ಚನೆಯ ಅಂಗವಾಗುತ್ತವೆ. ಇವೆಲ್ಲದರ ಉದ್ದೇಶ ಭಕ್ತವೃಂದದ ಭಕ್ತಿಯನ್ನು ವೃದ್ಧಿ ಮಾಡುವುದಾಗಿದೆ, ಅವರ ಆಧ್ಯಾತ್ಮಿಕ ಜೀವನವನ್ನು ಪೂರ್ತಿಗೊಳಿಸುವುದಾಗಿದೆ. ಮನೆ ಮನೆಗಳಲ್ಲಿನ ದೇವಮಂದಿರಗಳಲ್ಲಿ ಪೂಜೆ ಮಾಡುವುದು ಒಂದು ಬಗೆಯಾದರೆ ಸಾರ್ವಜನಿಕ ದೇವಾಲಯಗಳಲ್ಲಿ ಎಲ್ಲರೊಂದಾಗಿ ಪೂಜೆ ಮಾಡುವುದು ಮತ್ತೊಂದು ಬಗೆ. ಮಸೀದಿ, ಚರ್ಚು, ಮಂದಿರಗಳು, ವಿಹಾರಗಳು, ಯಾತ್ರಾಸ್ಥಳಗಳಲ್ಲಿನ ಪ್ರಸಿದ್ಧದೇವಾಲ ಯಗಳು ಅರ್ಚನೆ, ಆರಾಧನೆಗಳ ಸ್ಥಾನಗಳಾಗಿಬೆಳಗುತ್ತಿವೆ. ಪಕ್ಷೋತ್ಸವ, ಮಾಸೋತ್ಸವ, ವರ್ಷೋತ್ಸವಗಳೂ ನಡೆಯುತ್ತವೆ. ದೂರದಿಂದ ಯಾತ್ರಾರ್ಥಿಗಳು ಅಲ್ಲಿಗೆ ಬಂದು ಆರಾಧನೆಯಲ್ಲಿ ಭಾಗವಹಿಸುತ್ತಾರೆ, ಹರಿಕಥೆಗಳನ್ನು ಶ್ರವಣ ಮಾಡುತ್ತಾರೆ. ಪುಣ್ಯತೀರ್ಥಗಳಲ್ಲಿ ಮಿಂದು ಪೂತರಾದೆವೆಂದುಕೊಳುತ್ತಾರೆ. ಹೀಗೆ ಮನೋರಂಗದಲ್ಲಿ ನೆಲೆಸಿರುವ ಪೂಜ್ಯ ಭಾವಕ್ಕೆ ಬಾಹ್ಯಾಚರಣೆಯ ರೂಪವನ್ನು ಕೊಡುವಂಥದು ಅರ್ಚನೆ. ಅಂತಿಮವಾಗಿ ಅರ್ಚನೆಯ ನೆಲೆ ಕೇವಲ ಮಾನಸಿಕವಾಗಬಹುದು.

ಆತ್ಮಾತ್ವಂ ಗಿರಿಜಾಮತಿಃ ಪರಿಜನಾಃ ಪ್ರಾಣಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ
ಸಂಚಾರಃ ಪದಯೋಃ ಪ್ರದಕ್ಷಿಣ ವಿಧಿಃ ಸ್ತೋತ್ರಾಣಿ ಸರ್ವಾಗಿರೋ
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ

-ಎಂದು ಮೊದಲಾಗುವ ಪ್ರಸಿದ್ಧ ಸ್ತೋತ್ರ ಮಾನಸಪೊಜೆಯ ಚಿತ್ರವನ್ನು ಬಹು ಚೆನ್ನಾಗಿ ಕೊಡುತ್ತದೆ. ಹೃದಯಕಮಲದಲ್ಲಿ ನೆಲೆಸಿರುವ ಪರಮಾತ್ಮನನ್ನು ಮಾನಸಿಕವಾಗಿ ಧ್ಯಾನಿಸಿ ಪೊಜೆಸುವ ವಿಧಾನವನ್ನು ಶಂಕರಾಚಾರ್ಯರೇ ಅದಿಯಾಗಿ ಎಲ್ಲ ವಿಭೂತಿ ಪುರುಷರು ಅನುಸರಿಸಿದ್ದಾರೆ, ಬೋಧಿಸಿದ್ದಾರೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: