ಅಲೆಕ್ಸಿಸ್-ಥೆರೇಸ್ ಪೆಟಿಟ್ | |
---|---|
![]() ಅಲೆಕ್ಸಿಸ್-ಥೆರೇಸ್ ಪೆಟಿಟ್ | |
ಜನನ | ಅಲೆಕ್ಸಿಸ್-ಥೆರೇಸ್ ಪೆಟಿಟ್ ೨ ಅಕ್ಟೋಬರ್ ೧೭೯೧ ಫ್ರಾನ್ಸ್ |
ರಾಷ್ಟ್ರೀಯತೆ | ಫ್ರಾನ್ಸ್ |
ಫ್ರಾನ್ಸಿನ ಭೌತವಿಜ್ಞಾನಿಯಾಗಿದ್ದ ಅಲೆಕ್ಸಿಸ್-ಥೆರೇಸ್ ಪೆಟಿಟ್ರವರು 1791ರ ಅಕ್ಟೋಬರ್ 2ರಂದು ಹಾಟೆ-ಸೋನ್ನ ವೆಸೋಲ್ನಲ್ಲಿ ಜನಿಸಿದರು. ಪೆಟಿಟ್ರವರು ಮೂಲತಃ ಭೌತವಿಜ್ಞಾನಿಯಾಗಿದ್ದರು. ಅವರು ತಮ್ಮ ಭಾವಮೈದುನ ಮತ್ತು ವಿಜ್ಞಾನಿಯಾಗಿದ್ದ ಡೊಮೆನಿಕ್ ಅರಗೋರವರ (1786-1853) ಜೊತೆ ಸೇರಿಕೊಂಡು ಅನಿಲಗಳ ವಕ್ರೀಭವನಾಂಕದ (refractive index) ಮೇಲೆ ಉಷ್ಣ ಹೇಗೆ ಪರಿಣಾಮ ಬೀರುತ್ತದೆ ಎಂಬ ವಿಷಯದ ಬಗ್ಗೆ ಪ್ರಯೋಗಗಳನ್ನು ನಡೆಸಿದರು. ಆದರೆ 1815ರಲ್ಲಿ ಉಷ್ಣದ ಅಳತೆ ಮತ್ತು ಶೈತ್ಯೀಕರಣ ತತ್ವಗಳ (law of cooling) ಬಗ್ಗೆ ಒಂದು ವೈಜ್ಞಾನಿಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ಭಾಗವಹಿಸುವ ಸಲುವಾಗಿ ಪೆಟಿಟ್ರವರು ಮತ್ತು ರಸಾಯನವಿಜ್ಞಾನಿ ಡ್ಯೂಲಾಂಗ್ರವರು ಜೊತೆಯಾಗಿ ಕೂಡಿಕೊಂಡರು. ಹಾಗಾಗಿ ಪೆಟಿಟ್ರವರು ರಸಾಯನವಿಜ್ಞಾನದ ಬಗ್ಗೆ ಕೂಡ ಆಸಕ್ತಿ ವಹಿಸಿದರು. ಅಲ್ಲದೆ ಅನಿಲದ ಉಷ್ಣಮಾಪಕದ (gas thermometer) ಮಹತ್ವವನ್ನು ಸಾರಿದ ಆ ಸ್ಪರ್ಧೆಯಲ್ಲಿ ಗೆದ್ದು, 1818ರಲ್ಲಿ ಬಹುಮಾನವನ್ನು ಗಳಿಸಿದ ಮೇಲೆ ಅವರಿಬ್ಬರೂ ಮುಂದೆ ಜೊತೆಯಾಗಿ ಪ್ರಯೋಗಗಳನ್ನು ನಡೆಸಿದರು. ವಿಭಿನ್ನವಾದ ನಪದಾರ್ಥಗಳ ವಿಶಿಷ್ಟ ಉಷ್ಣಗಳನ್ನು (specific heat) ಪರೀಕ್ಷೆಗೆ ಒಡ್ಡಿದ ಆ ಇಬ್ಬರು ವಿಜ್ಞಾನಿಗಳು 1819ರಲ್ಲಿ ಪ್ರಸಿದ್ಧವಾದ ಕಡ್ಯೂಲಾಂಗ್-ಪೆಟಿಟ್ ನಿಯಮಕಿವನ್ನು (Dulong-Petit law) ಪ್ರಕಟಿಸಿದರು. ನಸ್ಥಿತಿಯ ಧಾತುಗಳಲ್ಲಿ ವಿಶಿಷ್ಟ ಉಷ್ಣ ಮತ್ತು ಪರಮಾಣು ತೂಕಗಳ ಗುಣಲಬ್ಧ ನಿಯತಾಂಕವಾಗಿರುತ್ತದೆ (constant) ಅಂದರೆ 5.97ಗೆ ಸಮನಾಗಿರುತ್ತದೆ ಎನ್ನುವುದೇ ಆ ನಿಯಮವಾಗಿದೆ.[೧] ನಂತರ ಆಧುನಿಕ ವಿಜ್ಞಾನದಲ್ಲಿ ಆ ನಿಯಮವನ್ನು ಪರಿಷ್ಕರಿಸಲಾಗಿದೆ. ಪರಿಷ್ಕೃತ ನಿಯಮದ ಪ್ರಕಾರ ವಿಶಿಷ್ಟ ಉಷ್ಣದ ಧಾರಕತೆ (specific heat capacity) ಮತ್ತು ಸಂಬಂಧಿತ ಪರಮಾಣು ರಾಶಿಗಳ (relative atomic mass) ಗುಣಲಬ್ಧ ಅಂದಾಜಿನ ಮೇಲೆ ನಿಯತಾಂಕವಾಗಿರುತ್ತದೆ ಮತ್ತು ಅದು ಸಾರ್ವತ್ರಿಕ ಅನಿಲ ನಿಯತಾಂಕದ (universal gas constant or R) ಮೂರು ಪಟ್ಟು ಪ್ರಮಾಣಕ್ಕೆ ಸಮನಾಗಿರುತ್ತದೆ ಅಥವಾ 25.07kJ/mol/Kಗೆ ಸಮನಾಗಿರುತ್ತದೆ. ಪೆಟಿಟ್ರವರು 1820ರ ಜೂನ್ 21ರಂದು ಪ್ಯಾರಿಸ್ಸಿನಲ್ಲಿ ನಿಧನರಾದರು.