ಅಲ್ಲಮ ಪ್ರಭು

ಅಲ್ಲಮಪ್ರಭು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧನಾದವರು. ಅತ್ಯಂತ ನೇರ ನಿಷ್ಠುರವಾದಿ. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದರು.

ಅಲ್ಲಮಪ್ರಭುವಿನ ಸಂಕ್ಷಿಪ್ತ ಪರಿಚಯ

[ಬದಲಾಯಿಸಿ]

೧೨ನೆಯ ಶತಮಾನದ ಶಿವಶರಣರಲ್ಲಿ ಅಲ್ಲಮಪ್ರಭು ಉಚ್ಚಸ್ಥಾನದಲ್ಲಿದ್ದಾನೆ. ಈತನು ಅರಸು ಮನೆತನದಲ್ಲಿಯೆ ಹುಟ್ಟಿ ಬೆಳೆದವನಾದರೂ, ಮನೆ ಬಿಟ್ಟು ತೆರಳಿ ಅಧ್ಯಾತ್ಮಸಾಧಕನಾದನೆಂದು ಹೇಳಲಾಗುತ್ತಿದೆ. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷನಾಗುತ್ತಾನೆ. ಅಲ್ಲಮನ ವಚನಚಂದ್ರಿಕೆಯಲ್ಲಿ ೧೨೯೪ ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲ‍ಕ್ಕೆ ಹೋಗಿ ಅಲ್ಲಿಯ ವನದಲ್ಲಿ ಶಿವೈಕ್ಯನಾದನೆಂದು ಪ್ರತೀತಿ. ಬಸವಣ್ಣನವರ ಸಮಕಾಲೀನನಾದ ಅಲ್ಲಮಪ್ರಭುವಿನ ವಚನಗಳ ಅಂಕಿತ 'ಗುಹೇಶ್ವರ' ಅಥವಾ 'ಗೊಹೇಶ್ವರ'. ಈತನ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿವೆ. ಅಲ್ಲಮನ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಅವನ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅವನದು ಬಹುಮಟ್ಟಿಗೆ ರೂಪಕ ಭಾಷೆ. ಈ ಭಾಷೆ ಅವನ ವೈಶಿಷ್ಟ್ಯವೂ ಹೌದು. ಚಾಮರಸನು ತನ್ನ ಪ್ರಭುಲಿಂಗಲೀಲೆ ಎನ್ನುವ ಕಾವ್ಯದಲ್ಲಿ ಅಲ್ಲಮಪ್ರಭುವಿನ ಐತಿಹ್ಯವನ್ನು ವರ್ಣಿಸಿದ್ದಾನೆ.

ಹುಟ್ಟು

[ಬದಲಾಯಿಸಿ]

ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಜನಿಸಿದರು. ಸುಮಾರು(೧೨ನೇ ಶತಮಾನ) ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸಿ-೧೨೦೦೦ ಎಂಬ ಪ್ರಾಂತ್ಯದ ಒಂದು ಹಳ್ಳಿ. ಇದೇ ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ ಕೇಂದ್ರ.🙏🙏

ಜೀವನ ಚರಿತ್ರೆ

[ಬದಲಾಯಿಸಿ]

ಅಲ್ಲಮನ ಜೀವನ ಚರಿತ್ರೆಯನ್ನು ನಿಖರವಾಗಿ ನಿರೂಪಿಸಲು ಸಾಧ್ಯವಾಗಲಾರದೊಷ್ಟು ಐತಿಹ್ಯಗಳು ಆ ವ್ಯಕ್ತಿತ್ವವನ್ನು ಸುತ್ತುವರಿದಿವೆ. ಅಲ್ಲಮನ ಬಗ್ಗೆ ಹದಿಮೂರನೇ ಶತಮಾನದ ಹರಿಹರಮಹಾಕವಿಯು, ಪ್ರಭುದೇವರ ರಗಳೆಯಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಿರುವನಾದರೂ, ಅಲ್ಲಮನ ಪ್ರಭಾವಲಯದಿಂದ ಪೂರ್ಣವಾಗಿ ಹೊರ ಬಂದು, ಒಂದು ಸಹಜ ಚಿತ್ರಣವನ್ನು ಕೊಡುವಲ್ಲಿ ಹರಿಹರನಂತಹ ವಾಸ್ತವವಾದಿ ಕವಿ ಸಹ ಸೋಲುತ್ತಾನೆ. ಇನ್ನು ಚಾಮರಸನು ಅಲ್ಲಮಪ್ರಭುದೇವನನ್ನು ಈ ಲೋಕದ ಮಾನವ ಚೇತನವೆಂದು ಒಪ್ಪಿಕೊಳ್ಳುವುದೇ ಇಲ್ಲ. ಅವನು ಕೈಲಾಸದಿಂದ ಬಂದ ಶಿವನ ಚಿತ್ಕಳೆ, ಎಂದೇ ಚಿತ್ರಿಸುತ್ತಾನೆ. ಇವರಿಬ್ಬರಲ್ಲದೆ ಎಳಂದೂರು ಹರಿಹರೇಶ್ವರನೆಂಬ ಮತ್ತೊಬ್ಬ ಕವಿಯೂ ಅಲ್ಲಮಪ್ರಭುವಿನ ಬಗ್ಗೆ ಕಾವ್ಯ ರಚನೆ ಮಾಡಿದ್ದಾನೆ. ಇನ್ನು ಚಾಮರಸನು ರಚಿಸಿರುವ ಪ್ರಭುಲಿಂಗಲೀಲೆಯು ತಮಿಳು, ಮರಾಠಿ ಮುಂತಾದ ಭಾಷೆಗಳಿಗೆ ಬಲು ಹಿಂದೆಯೇ ಅನುವಾದಗೊಂಡು ಪ್ರಖ್ಯಾತವಾಗಿದ್ದಿತು.ಈ ಮಹಾಕವಿಗಳಲ್ಲದೆ,ಅಲ್ಲಮಪ್ರಭುವಿನ ಬಗ್ಗೆ ಪ್ರಾಸಂಗಿಕವಾಗಿ ಬರೆಯದ ವೀರಶೈವ ಸಾಹಿತ್ಯವೇ ಇಲ್ಲವೆನ್ನಬಹುದು. ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಸ್ವತಃ ಅಲ್ಲಮಪ್ರಭುವೇ ಅತನ ಕಾಲದ ಬಲು ದೊಡ್ಡ ಸಾಹಿತ್ಯಚೇತನವಾಗಿದ್ದನೆನ್ನುವುದು, ಮತ್ತು ಅವನವೇ ಆದ ಅನೇಕ ವಚನಗಳು ಉಪಲಬ್ಧವಿರುವುದು,ಅವನ ವ್ಯಕ್ತಿತ್ವವನ್ನು ಗ್ರಹಿಸಲು ತುಂಬಾ ಉಪಯುಕ್ತ ಮಾರ್ಗವಾಗಿದೆ.ಇಡಿಯ ವಚನ ಸಾಹಿತ್ಯದಲ್ಲಿಯೇ, ಸಾಹಿತ್ಯದ ಪರಿಭಾಷೆಯನ್ನು ಸರಿಯಾದ ಮಾರ್ಗದಲ್ಲಿ ದುಡಿಸಿಕೊಂಡವರಲ್ಲಿ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಇಬ್ಬರೂ ಅಪ್ರತಿಮರು.

ಚಾಮರಸನ ಪ್ರಭುಲಿಂಗಲೀಲೆ

[ಬದಲಾಯಿಸಿ]
  • ಚಾಮರಸನು ಅಲ್ಲಮನ ತಂದೆ ತಾಯಿಗಳನ್ನು ನಿರಹಂಕಾರ-ಸುಜ್ಞಾನಿಗಳೆಂದು ಕರೆಯುತ್ತಾನೆ. ನಂತರ ಮಾಯಾದೇವಿಯ ತಂದೆ ತಾಯಿಗಳನ್ನು ಮಮಕಾರ-ಮೋಹಿನಿಯರೆಂದು ಕರೆಯುವುದನ್ನು ಕಂಡಾಗ ಇವೆಲ್ಲವೂ ವಾಸ್ತವವಲ್ಲದ, ಕವಿಯ ಭಾವನಾತ್ಮಕ ರೂಪಕಗಳೆನಿಸದೆ ಇರದು.
  • ಹರಿಹರ ಮಹಾಕವಿಯು ಅಲ್ಲಮನ ತಂದೆ ತಾಯಿಗಳ ಹೆಸರುಗಳನ್ನೆ ಪ್ರಸ್ತಾಪಿಸದೆ ಅಲ್ಲಮನ ತಂದೆಯು ಬಳ್ಳಿಗಾವಿಯ ನಾಗವಾಸಾಧಿಪನಾಗಿದ್ದನೆಂದು ವಿವರಿಸುವನು. ನಾಗವಾಸಾಧಿಪನೆಂದರೆ ಅರಮನೆಯ ಅಂತಃಪುರದ ಸಂಗೀತ, ನರ್ತನಗಳ ವಲಯದ ಅಧಿಕಾರಿಯೆಂದೇ ಅರ್ಥ ಬರುವುದರಿಂದ, ಅಲ್ಲಮನು ಒಬ್ಬ ಕಲಾವಿದನ ಮಗನಾಗಿದ್ದನೆಂದು ಭಾವಿಸಬಹುದು ಮತ್ತು ಅಂದಿನ ಕಾಲಮಾನದಲ್ಲಿ ನಟರಿಗೆ, ನಟುವಾಂಗದ ವೃತ್ತಿಯವರಿಗೆ ಸಾಮಾಜಿಕ ಮನ್ನಣೆಯೂ ಇರಲಿಲ್ಲವೆಂಬುದು ಗಮನಾರ್ಹವಾದುದು.
  • ಅಲ್ಲಮನ ಯೌವ್ವನ ಕಾಲದ ಪ್ರೇಮ, ಕಾಮ, ವ್ಯಾಮೋಹಗಳ ಚಿತ್ರಗಳನ್ನು ಹರಿಹರಮಹಾಕವಿಯೂ, ಚಾಮರಸನೂ ಕಟ್ಟಿ ಕೊಡುವ ರೀತಿಗಳು ತುಂಬಾ ವಿಭಿನ್ನವಾಗಿವೆ. ಅಲ್ಲಮನು ಸಾಕ್ಷಾತ್ ಶಿವಾಂಶ ಸಂಭೂತನಾದುದರಿಂದ, ಕಾಮಾದಿ ಅರಿಷಡ್ವರ್ಗಗಳು ಅವನನ್ನು ಸೋಂಕುವುದೇ ಇಲ್ಲ. ಬನವಾಸೆಯ ಮಧುಕೇಶ್ವರ ಮಂದಿರದಲ್ಲಿ ಶಿವನೆದುರಿನಲ್ಲಿ ಮದ್ದಳೆಯ ಮಹಾ ಯೋಗದಲ್ಲಿ ತಲ್ಲೀನನಾಗಿದ್ದ ಅಲ್ಲಮನನ್ನು ಆ ಊರಿನ ರಾಜನ ಮಗಳು, ಮಾಯಾದೇವಿ ಕಂಡು ವಿಭ್ರಾಂತಿಗೊಳಗಾಗುತ್ತಾಳೆ. ಅವನನ್ನು ಮೋಹಿಸಿ, ಕಾಮಿಸುತ್ತಾಳೆ. ಇಲ್ಲಿ ಚಾಮರಸನ ಪ್ರಕಾರ ಪಾರ್ವತೀ ದೇವಿಯ ಮಾಯೆಯ ಅಂಶವೇ ಅಲ್ಲಮನನ್ನು ಜಯಿಸಲು ಭೂಲೋಕದಲ್ಲಿ ಮಾಯಾದೇವಿಯಾಗಿ, ಮಮಕಾರ, ಮೋಹಿನಿಯರ ಮಗಳಾಗಿ ಜನಿಸಿರುತ್ತಾಳೆ. ಇದನ್ನು ಅರಿತ ಅಲ್ಲಮನು, ಅಂತರ್ಧಾನನಾಗಿ, ಅರಣ್ಯವನ್ನು ಸೇರುತ್ತಾನೆ. ಹಿಂಬಾಲಿಸಿದ ಮಾಯೆಗೆ, ಪರವಶನಾಗದೆ ಶಾಶ್ವತ ನಿಲುವನ್ನು ವಿವರಿಸುತ್ತಾನೆ. ಹೀಗೆ ಇಬ್ಬರು ಮಹಾ ಕವಿಗಳು ಅಲ್ಲಮನನ್ನು ವಿಭಿನ್ನವಾಗಿ ಕಟ್ಟಿ ಕೊಡುತ್ತಾರೆ.
  • ಹರಿಹರ, ಚಾಮರಸರ ಕಾವ್ಯಗಳ ನಾಯಕನಾಗಿ ತೋರಿ ಬರುವ ಅಲ್ಲಮಪ್ರಭುವು, ನಂತರ ಶೂನ್ಯ ಸಂಪಾದನೆಕಾರರ ಕೃತಿಯಲ್ಲಿ ಅಸಾಮಾನ್ಯ ವ್ಯಕ್ತಿತ್ವದವನಾಗಿ ಚಿತ್ರಿತನಾಗಿದ್ದಾನೆ.
  • ಅಲ್ಲಮನ ವಚನಗಳು ಮತ್ತು ಸಮಕಾಲೀನ ಶರಣರ ವಚನಗಳನ್ನೇ, ರತ್ನಮಾಲೆಯಂತೆ ಕೋದು,ಸಂದರ್ಭಕ್ಕೆ ಅನುಗುಣವಾಗಿ ಕೆಲವು ವಚನಗಳನ್ನು ಸೇರಿಸಿ, ಶಿವಗಣ ಪ್ರಸಾದಿ ಮಹದೇವಯ್ಯಗಳು ಮೊದಲ ಶೂನ್ಯ ಸಂಪಾದನೆಯನ್ನು ರಚಿಸಿದರು.
  • ನಂತರ ಗೂಳೂರು ಸಿದ್ದವೀರಣ್ಣೊಡೆಯರುಮೂರನೆಯದಾಗಿ ಗುಮ್ಮಳಾಪುರದ ಸಿದ್ದಲಿಂಗದೇವರು ಅಂತಿಮವಾಗಿ ಕೆಂಚವೀರಣ್ಣೊಡೆಯರುಹೀಗೆ ನಾಲ್ಕು ಶೂನ್ಯ ಸಂಪಾದನೆಗಳು ಅಲ್ಲಮ ಪ್ರಭುವಿನ ಜೀವನ ಚಿತ್ರಣ ನೀಡುವಲ್ಲಿ ಇಂದು ನೆರವಾಗಿವೆ.

ಹರಿಹರ ಮಹಾಕವಿಯ ಪ್ರಭುದೇವರ ರಗಳೆ

[ಬದಲಾಯಿಸಿ]
  • ಅತ್ಯಂತ ಸುಂದರನೂ, ಅಪ್ರತಿಮ ಮದ್ದಲಿಗನೂ, ಆಕರ್ಷಕ ಯುವಕನೂ ಆಗಿದ್ದ ಅಲ್ಲಮನನ್ನು ಶಿವ ದೇವಾಲಯದಲ್ಲಿ, ಮದ್ದಳೆ ಬಾರಿಸುತ್ತಿರುವ ಸಮಯದಲ್ಲಿ ಕಾಮಲತೆಯು ಆಕಸ್ಮಿಕವಾಗಿ ಸಂಧಿಸುತ್ತಾಳೆ. ಅವನನ್ನು ಕಂಡ ಕೂಡಲೇ ಅವನಲ್ಲಿ ಅನುರಕ್ತಳಾಗಿ ; ಕಾಮವಶಳಾಗಿ ಮೂರ್ಛಿತಳಾಗುತ್ತಾಳೆ. ಅಲ್ಲಮನ ಅವಸ್ಥೆಯೂ ಸಹ ಅದೇ ಪರಿಯಾಗುತ್ತದೆ.ಕಾಮಲತೆಯಂತಹ ಮಿಂಚಿನ ಮೋಹನಾಂಗಿಯನ್ನು ಕಂಡು, ಅಲ್ಲಮನು ವಿವಶನಾಗುತ್ತಾನೆ. ಇವರಿಬ್ಬರ ಸ್ಥಿತಿಯನ್ನು ಮನಗಂಡ ಸಖಿಯರು ಇವರ ಮಿಲನಕ್ಕೆ ಅವಕಾಶ ಕಲ್ಪಿಸುತ್ತಾರೆ. ಅಲ್ಲಿಂದ ಅಲ್ಲಮ ಮತ್ತು ಕಾಮಲತೆಯರು ಇಹದ ಸಮಸ್ತವನ್ನೂ ಮರೆತು, ಏಕ ದೇಹಿಗಳಂತೆ, ಕಾಲ ದೇಶಾತೀತರಾಗಿ, ಲೋಕದ ಮರವೆಯಲ್ಲಿ ಕಾಲ ಕಳೆಯುತ್ತಿರುವಾಗ, ಕಾಮಲತೆಯು ಜ್ವರ ಪೀಡಿತೆಯಾಗಿ ಆಕಸ್ಮಿಕವಾಗಿ ಮರಣ ಹೊಂದುತ್ತಾಳೆ. ಇದರಿಂದ ವಿಚಲಿತನಾದ ಅಲ್ಲಮನು ವಿರಹ ಜ್ವಾಲೆಯಲ್ಲಿ ಬೇಯುತ್ತಾ, ಮರುಳನಂತೆ ಅಲೆಯುತ್ತಾ, ತಿರುಗುತ್ತಿರುವಾಗ, ಊರ ಹೊರಗೆ ಹೂತು ಹೋದ ಪ್ರಾಚೀನ ಶಿವಾಲಯವೊಂದರ ಶಿಖರದ ತುದಿಯು, ಕಾಲಬೆರಳ ತುದಿಗೆ ತಗುಲಿ, ಕುತೂಹಲಗೊಂಡು ಅಗೆಯ ತೊಡಗಿದಾಗ ಇಡಿ ಶಿವಾಲಯ ಗೋಚರವಾಗುತ್ತದೆ. ಅದರೊಳಗೆ ಪ್ರವೇಶಿಸಿ ದಾಗ ಅಲ್ಲಿ ಶಿವಯೋಗದಲ್ಲಿದ್ದ ಅನಿಮಿಷ ದೇವನ ದರ್ಶನವಾಗಿ, ಅವನ ಕೈಯ್ಯಲ್ಲಿದ್ದ ಅತ್ಮಲಿಂಗವು ಅಲ್ಲಮಪ್ರಭುವಿನ ಕೈಗೆ ಬಂದು ಸೇರುತ್ತದೆ. ಇದರಿಂದಾಗಿ ಇಬ್ಬರ ನಡುವೆ ಗುರು ಶಿಷ್ಯ ಸಂಬಂಧವೇರ್ಪಡುತ್ತದೆ. ತಕ್ಷಣ ಅನಿಮಿಷದೇವನು ಶಿವಾಧೀನನಾಗುತ್ತಾನೆ. ನಂತರ ಅಲ್ಲಮನ ಎಲ್ಲ ಮೋಹ ಮಮತೆಗಳು ಅಳಿದು, ಜಗತ್ತಿನ ನಶ್ವರತೆ; ವಿಶ್ವಕಾರಣದ ಶಾಶ್ವತತೆ ಅರಿವಿಗೆ ಬಂದು ಅನಂತ ಜ್ಞಾನಿಯಾಗುತ್ತಾನೆ. ಇದು ಹರಿಹರ ಮಹಾಕವಿಯು ಕಟ್ಟಿಕೊಡುವ ಅಲ್ಲಮನ ಪರಿವರ್ತನೆಯ ಚಿತ್ರಣ.

ಎಚ್.ತಿಪ್ಪೇರುದ್ರಸ್ವಾಮಿಯವರ ಪರಿಪೂರ್ಣದೆಡೆಗೆ

[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • ಇಪ್ಪತ್ತನೆಯ ಶತಮಾನದಲ್ಲಿ ಅಲ್ಲಮಪ್ರಭುವಿನ ಚಿತ್ರಣವನ್ನು ಪುನರ್ರೂಪಿಸುವಲ್ಲಿ ಎಚ್.ತಿಪ್ಪೇರುದ್ರಸ್ವಾಮಿಯವರು ಪರಿಪೂರ್ಣದೆಡೆಗೆ ಕಾದಂಬರಿಯ ಮೂಲಕ ಅನನ್ಯವಾಗಿ ಪ್ರಯತ್ನಿಸಿದ್ದಾರೆ.
  • ಬಿ.ಪುಟ್ಟಸ್ವಾಮಯ್ಯನವರು ಅಲ್ಲಮಪ್ರಭುವಿನ ಬಗೆಗೆ ಅದೇ ಹೆಸರಿನ ಕಾದಂಬರಿಯನ್ನು ರಚಿಸಿರುವುದಲ್ಲದೆ, ಹನ್ನೆರಡನೆಯ ಶತಮಾನದ, ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ,ಹೀಗೆ ಸಮಸ್ತ ಮುಖಗಳನ್ನೊಳಗೊಂಡ ಆರು ಕಾದಂಬರಿಗಳಲ್ಲಿ, ಅಲ್ಲಮನನ್ನು ಅತ್ಯಂತ ವಿಶಿಷ್ಟವಾಗಿ ಚಿತ್ರಿಸುತ್ತಾರೆ.
  • ಹೀಗೆ ಎಷ್ಟೆಲ್ಲಾ ಮಹನೀಯರಿಂದ ಪೂಜನೀಯನಾದ ಅಲ್ಲಮಪ್ರಭುವಿನ ವ್ಯಕ್ತಿತ್ವ ಮತ್ತು ಜೀವನ ವಿವರವು ಕಡೆಗೂ ನಿಗೂಢವೇ ಆಗಿ ಉಳಿತ್ತದೆ. ಲಭ್ಯವಿರುವ ಅವನ ವಚನಗಳಂತೆ, ಅವನ ವ್ಯಕ್ತಿತ್ವ ಎಂದು ಊಹಿಸಬಹುದು.[][][]

ವಚನಗಳು

[ಬದಲಾಯಿಸಿ]

ಹೆಣ್ಣಿಗಾಗಿ ಸತ್ತವರು ಕೋಟಿ
ಮಣ್ಣಿಗಾಗಿ ಸತ್ತವರು ಕೋಟಿ
ಹೊನ್ನಿಗಾಗಿ ಸತ್ತವರು ಕೋಟಿ
ಗುಹೇಶ್ವರಾ
ನಿಮಗಾಗಿ ಸತ್ತವರನಾರನೂ ಕಾಣೆ
ಇಲ್ಲಿ ಅಲ್ಲಮ ಪ್ರಭುಗಳು, ಹೆಣ್ಣಿಗಾಗಿ ನಡೆದ ರಾಮ-ರಾವಣರ ಯುದ್ಧ, ಮಣ್ಣಿಗಾಗಿ ನೆಡೆದ ಕುರುಕ್ಷೇತ್ರ ಯುದ್ಧ, ಹೊನ್ನಿಗಾಗಿ ನೆಡೆದ ಅಶೋಕನ ಕಳಿಂಗ ಯುದ್ಧವನ್ನು ಉದಾಹರಣೆ ನೀಡಿ, ದೇವರಿಗಾಗಿ ಯಾರೂ ಜೀವ ನೀಡಲು ಸಿದ್ಧರಿಲ್ಲದ, ಮಾನವನ ಸ್ವಾರ್ಥವನ್ನು ಎತ್ತಿ ತೋರಿಸಿದ್ದಾರೆ.

"ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಯಲನಾ ಬಣ್ಣ ಶೃಂಗರಿಸಲು ಬಯಲು ಸ್ವರೂಪುಗೊಂಡಿತ್ತು.
ಅಂತಪ್ಪ ಸ್ವರೂಪಿನ ಬೆಡಗು ತಾನೆ
ನಮ್ಮ ಗುಹೇಶ್ವರ ಲಿಂಗದ ಪ್ರಥಮಭಿತ್ತಿ."
ಎಂದು ಅಲ್ಲಮಪ್ರಭುದೇವರು ಹೇಳುವಲ್ಲಿ ವಿಶ್ವದ ವಿರಾಟ್ ಸ್ವರೂಪದ ಕಲ್ಪನೆ ಇದೆ. ಚೈತನ್ಯವು ವಸ್ತುವಾಗಿ ರೂಪುಗೊಳ್ಳುವ ಕ್ರಮವಿದೆ. ಇದೇ ವಸ್ತು ರಹಸ್ಯ.

ಆದಿಯಾಧಾರವಿಲ್ಲದಂದು
ಹಮ್ಮು ಬಿಮ್ಮುಗಳಿಲ್ಲದಂದು
ಸುರಾಳನಿರಾಳವಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು
ಗುಹೇಶ್ವರ, ನಿಮ್ಮ ಶರಣನುದಯಿಸಿದನಂದು

ಕಲ್ಲ ಮನೆಯ ಮಾಡಿ
ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ
ದೇವರೆತ್ತ ಹೋದರೋ?
ಲಿಂಗಪ್ರತಿಷ್ಠೆಯ ಮಾಡಿದವಂಗೆ
ನಾಕನರಕ ಗುಹೇಶ್ವರ.

ಹೊನ್ನು ಮಾಯೆಯೆಂಬರು
ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆಯೆಂಬರು
ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು
ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ
ಗುಹೇಶ್ವರ

ಅಲ್ಲಮನ ತತ್ತ್ವ ದೃಷ್ಠಿ

[ಬದಲಾಯಿಸಿ]
ಅಲ್ಲಮ ತನ್ನ ಬೆಡಗಿನ ವಚನದಲ್ಲಿ ತತ್ತ್ವಜ್ಞಾನದ ಒಳಗುಟ್ಟನ್ನು ಹೀಗೆ ಹೇಳಿದ್ದಾನೆ:
ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು!
ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು;
ಮಾಬುದು ಗುಹೇಶ್ವರಾ.
ಅರ್ಥ:- ಕಚ್ಚದಿರುವ (ಇಲ್ಲದ)ಚೇಳಿನ ಆಗದೇ ಇರುವ ನೋವಿನಿಂದ (ಇಲ್ಲದ ನೋವಿನಿಂದ) ಮೂರು ಲೋಕವೂ ನರಳಿತು! ಹುಟ್ಟದೇ ಇರುವ ಗಿಡದ ಎಲೆಯನ್ನು ತಂದು, ಅದನ್ನು ಮುಟ್ಟದೆ ಹಚ್ಚಲು ಗಾಯ/ನೋವು ಮಾಯಿತು(ವಾಸಿಯಾಯಿತು). ಅಂದರೆ, ಚೇಳೇ ಇರಲಿಲ್ಲ, ಆದರೆ ಕಚ್ಚಿತೆಂಬ ಬ್ರಮೆ.ಭ್ರಮೆಯಿಂದ ನೋವಿಲ್ಲದಿದ್ದರೂ ಭ್ರಮೆಯಿಂದ ನೋವು; ಈ ನೋವಿಗೆ 'ಇಲ್ಲ ಇಲ್ಲ' ಎಂಬುದೇ ಮದ್ದು! (ಅದ್ವೈತ ಸಿದ್ಧಾಂತದ ಸಂಕ್ಷಿಪ್ತ ನಿರೂಪಣೆ)[] (ಅದಕ್ಕೇ ಅಲ್ಲಮ ಪ್ರಭು ತನ್ನ ಹೆಸರನ್ನೇ "ಅಲ್ಲ- ಮ" ಎಂದು ಇಟ್ಟುಕೊಂಡಿದ್ದಾನೆ)

ಬೆಡಗಿನ ವಚನಗಳು

[ಬದಲಾಯಿಸಿ]
:ಅಜ್ಞಾನವೆಂಬ ತೊಟ್ಟಿಲೊಳಗೆ

ಜ್ಞಾನವೆಂಬ ಶಿಶುವ ಮಲಗಿಸಿ ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂದಲ್ಲದೆ ಗುಹೇಶ್ವರನೆಂಬ ಲಿಂಗವ ಕಾಣಬಾರದು

https://archive.org/stream/Bedagina-Vachanagalu-1900/Bedagina-Vachanagalu#page/n353/mode/2up

ಗ್ರಂಥ ನೆರವು

[ಬದಲಾಯಿಸಿ]
  • ಹರಿಹರಮಹಾಕವಿಯ- "ಪ್ರಭುದೇವರ ರಗಳೆ"
  • ಚಾಮರಸನ - "ಪ್ರಭುಲಿಂಗಲೀಲೆ"
  • ಎಚ್.ತಿಪ್ಪೇರುದ್ರಸ್ವಾಮಿ - "ಪರಿಪೂರ್ಣದೆಡೆಗೆ"

ಇದನ್ನೂ ನೋಡಿ

[ಬದಲಾಯಿಸಿ]

ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಲ್ಲಿನ ಲೇಖನ

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖಗಳು

[ಬದಲಾಯಿಸಿ]
  1. ಹರಿಹರಮಹಾಕವಿಯ- "ಪ್ರಭುದೇವರ ರಗಳೆ"
  2. ಚಾಮರಸನ - "ಪ್ರಭುಲಿಂಗಲೀಲೆ"
  3. ಎಚ್.ತಿಪ್ಪೇರುದ್ರಸ್ವಾಮಿ - "ಪರಿಪೂರ್ಣದೆಡೆಗೆ"
  4. ತತ್ವಶಾಸ್ತ್ರದಿಂದ ಏನು ಪ್ರಯೋಜನ? ರಘು ಕೆ. ಸಿ.d: 19 ಅಕ್ಟೋಬರ್ 2019