ಅಸ್ಸಾಮೀ ಭಾಷೆಯ ಪ್ರಾಚೀನತೆ ಕ್ರಿ.ಶ. ಏಳನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಅಸ್ಸಾಮೀರಾಜ ಭಾಸ್ಕರವರ್ಮನ ಆಹ್ವಾನದ ಮೇರೆಗೆ ಅಸ್ಸಾಮಿಗೆ ಬಂದ ಹುಯೆನ್‍ತ್ಸಾಂಗ್ ಕಾಮರೂಪದೇಶದ ವಿವಿಧ ಮುಖಗಳನ್ನು ಕುರಿತು ಪ್ರಸ್ತಾಪಿಸುತ್ತ ಆ ದೇಶದ ಭಾಷೆ ಮಧ್ಯಭಾರತದ ಭಾಷೆಗಿಂತ ಸ್ವಲ್ಪ ಭಿನ್ನವಾಗಿದೆ ಎಂದು ಹೇಳುತ್ತಾನೆ. ಎಂಟು ಮತ್ತು ಹನ್ನೆರಡನೆಯ ಶತಮಾನಗಳ ನಡುವೆ ಜೀವಿಸಿದ್ದ ಬೌದ್ಧಸಿದ್ಧಾಚಾರ್ಯರು ರಚಿಸಿದ ಗೀತೆಗಳಲ್ಲೂ ಸೂತ್ರಗಳಲ್ಲೂ ಪ್ರಥಮತ: ಮಹಾಮಹೋಪಾಧ್ಯಾಯ ಹರಪ್ರಸಾದ ಶಾಸ್ತಿಯಿಂದ ಸಂಕಲಿತವಾದ ದೋಹಾಕೋಶದಲ್ಲೂ ಹಜಾರ್ ಬಚರೇರ್ ಪುರಾನ ಬಂಗ್ಲಾಭಾಶೈಬೌಧ ಗಾನ್ ಓ ದೋಹ ಎಂಬ ಗ್ರಂಥದಲ್ಲಿ ಗೋಚರಿಸುವ ಚರ್ಯೆ ಅಥವಾ ದೋಹಗಳಲ್ಲೂ ಅಸ್ಸಾಮೀ ಭಾಷೆಯ ಪ್ರಾಚೀನ ಮಾದರಿಗಳು ಸಿಕ್ಕುತ್ತವೆ. ಈ ಮಾದರಿಗಳು ಹಿಂದಿನ ಬಂಗಾಳಿಭಾಷೆಯನ್ನು ಮಾತ್ರ ಪ್ರತಿನಿಧಿಸುತ್ತವೆಯೆಂದು ಬಂಗಾಳಿ ವಿದ್ವಾಂಸರು ಪರಿಭಾವಿಸುತ್ತಾರೆ. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದ್ದೇ ಆದರೆ ಸಂಧ್ಯಾಭಾಷೆಯೆಂದು ಸಾಧಾರಣವಾಗಿ ಕರೆಯಲ್ಪಡುವ ಅವರ ಭಾಷೆ ಮಾಗಧೀ ಅಪಭ್ರಂಶದ ಕಟ್ಟಕಡೆಯ ರೂಪವನ್ನು ಪ್ರತಿನಿಧಿಸುತ್ತದೆ ಎಂಬುದೂ ಆ ಕಾರಣದಿಂದ ಬಂಗಾಳಿ, ಅಸ್ಸಾಮಿ, ಒರಿಯ ಎಂಬ ಆಧುನಿಕ ಇಂಡೋ ಆರ್ಯನ್ ಭಾಷೆಗಳ ಪ್ರಾಚ್ಯಪಂಗಡದ ಪ್ರಪ್ರಾಚೀನ ರೂಪಗಳನ್ನು ಇದು ಬಹುಮಟ್ಟಿಗೆ ಒಳಗೊಂಡಿದೆಯೆಂಬುದೂ ವಿಶದವಾಗುತ್ತದೆ. ಈ ಗೀತಗಳಲ್ಲಿ ಗೋಚರಿಸುವ ಕೆಲವು ಧ್ವನಿ ವಿಶೇಷಗಳೂ ಶಬ್ದರಚನಾಕ್ರಮಗಳೂ ಎಲ್ಲೂ ವಿಚ್ಛಿತ್ತಿಯನ್ನು ಹೊಂದದೆ ಆಧುನಿಕ ಅಸ್ಸಾಮೀ ಭಾಷೆಗೆ ಇಳಿದು ಬಂದಿವೆ.[೧]
ಹದಿಮೂರನೆಯ ಶತಮಾನದ ಅಂತ್ಯಭಾಗದಲ್ಲಿ ಆಳುತ್ತಿದ್ದನೆಂದು ಭಾವಿಸಲಾದ ಕಮತಾ (ಪಶ್ಚಿಮ ಅಸ್ಸಾಂ) ರಾಜ ದುರ್ಲಭ ನಾರಾಯಣನ ಆಸ್ಥಾನದಲ್ಲಿ ಅಸ್ಸಾಮೀ ಭಾಷೆಯ ವ್ಯವಸಾಯ ನಡೆಯಿತು. ರಾಜಸ್ಥಾನದ ಬಹುಪ್ರಾಚೀನ ಕವಿ ಹರಿಹರ ವಿಪ್ರನೆಂಬಾತ. ಆತನ ಮುಖ್ಯ ಕೃತಿಗಳಾವುವೆಂದರೆ, ಬಭ್ರುಬಾಹನೇರ್ ಯುದ್ಧ ಮತ್ತು ಲವಕುಸಾರ್ ಯುದ್ಧ; ಈ ಕೃತಿಗಳ ಕಥಾವಸ್ತು ಜೈಮಿನಿ ಭಾರತದ್ದು.ಹರಿಹರ ಸಮಕಾಲೀನನಾದ ಹೇಮಸರಸ್ವತಿ ಪ್ರಹ್ಲಾದ ಚರಿತವನ್ನು ಬರೆದ. ತಾನು ಈ ಕಥೆಯನ್ನು ವಾಮನಪುರಾಣದಿಂದ ತೆಗೆದುಕೊಂಡಿರುವುದಾಗಿ ಹೇಮಸರಸ್ವತಿ ಹೇಳಿಕೊಂಡಿದ್ದರೂ ಕಥೆ ಹೇಳುವುದರಲ್ಲಿ ಈತ ಸ್ವಾತಂತ್ರ್ಯವನ್ನು ವಹಿಸಿದ್ದಾನೆ. ಈತನ ಕಥನ ರೀತಿ ಆಕರ್ಷಕವಾಗಿಲ್ಲ; ಶುದ್ಧಪದಗಳ ಪ್ರಯೋಗಕ್ಕೂ ಈತ ಆಸೆಪಟ್ಟಂತೆ ಕಂಡುಬರುವುದಿಲ್ಲ; ಆದರೆ ಈತನ ಕೃತಿ ಭಕ್ತಿಯಿಂದ ಪ್ರೇರಿತವಾಗಿದೆ. ಎರಡನೆಯ ಕೃತಿ ಹರಗೌರಿವಿಲಾಸ ಮೊದಲನೆಯದಕ್ಕಿಂತ ದೊಡ್ಡದು. ಇದರಲ್ಲಿ 900 ಪದ್ಯಗಳಿವೆ; ವಸ್ತುವನ್ನು ಪುರಾಣಗಳಿಂದಲೂ ನಾಡಿನ ಜನಪದ ಕತೆಗಳಿಂದಲೂ ಆರಿಸಿಕೊಂಡಿದ್ದಾನೆ. ಯೋಗಾಭ್ಯಾಸದ ಮೇಲೆ ಕೆಲವು ಪದ್ಯಗಳಿದ್ದರೂ ಈ ದೊಡ್ಡ ಜನಪ್ರಿಯ ಗ್ರಂಥ ಜನಸಾಮಾನ್ಯರ ಸಾಧಾರಣ ತೃಷೆಗೆ ಮಾತ್ರ ವಸ್ತುವನ್ನೊದಗಿಸುವಂಥದಾಗಿದೆ.ಇದೇ ಕಾಲದಲ್ಲಿ ಈಗ ನೌಗಾಂಗ್ ಜಿಲ್ಲೆಯ ಪ್ರದೇಶದಲ್ಲಿ ಕಚರಿ ದೊರೆಗಳ ಆಸರೆಯುಲ್ಲಿ ಮತ್ತೊಂದು ವಿದ್ಯಾಕೇಂದ್ರ ಪ್ರವರ್ಧಮಾವಕ್ಕೆ ಬಂದಿತ್ತು. ಇಲ್ಲಿ ಕಚರಿ ರಾಜ ಮಹಾಮಾಣಿಕ್ಯನ (ಸುಮಾರು ಹದಿನಾಲ್ಕನೆಯ ಶತಮಾನ) ಪ್ರೋತ್ಸಾಹದ ಮೇರೆಗೆ ವೈಷ್ಣವ ಕವಿಗಳ ಪೈಕಿ ಅತಿ ಶ್ರೇಷ್ಠನಾದ ಮಾಧವಕಂದಳಿ ಸಂಸ್ಕøತದ ರಾಮಾಯಣ ಮಹಾಕಾವ್ಯವನ್ನು ಸಮಗ್ರವಾಗಿ ಅಸ್ಸಾಮೀಭಾಷೆಗೆ ಪರಿವರ್ತಿಸುವ ಮಹತ್ಕಾರ್ಯವನ್ನು ಕೈಗೊಂಡ. ಈತ ಆಸ್ಥಾನಕವಿ. ಕವಿರಾಜಕಂದಳಿ ಎಂಬ ಅನ್ವರ್ಥವಾದ ಬಿರುದಿನಿಂದ ಖ್ಯಾತ. ದೊಡ್ಡ ಸಂಸ್ಕøತ ವಿದ್ವಾಂಸ. ಆ ಕಾಲದ ಇತರ ಪ್ರಖ್ಯಾತ ಕವಿಗಳಂತಲ್ಲದೆ ಈತ ತನ್ನನ್ನು ಕುರಿತು ಯಾವ ಮಾತನ್ನೂ ಹೇಳಿಕೊಂಡಿಲ್ಲ. ಕೃತಿಗಳಲ್ಲಿ ತನ್ನ ಆತ್ಮಕಥೆಯ ಯಾವ ಭಾಗವನ್ನಾಗಲಿ ತೊಡರಿಸಿಲ್ಲ. ಮುಂದಿನ ಶತವಾನದಲ್ಲಿ ಅಸ್ಸಾಮೀಸಾಹಿತ್ಯಕ್ಕೆ ಮಹಾಸ್ಪೂರ್ತಿಯನ್ನು ಕೊಟ್ಟ ಶಂಕರದೇವ ಈತನನ್ನು ತುಂಬ ಗೌರವದಿಂದ ಕಾಣುತ್ತಿದ್ದ ಮತ್ತು ಈತನ ಮನೋಹರವೂ ಭಾವಪೂರ್ಣವೂ ಆದ ರಾಮಾಯಣದ ಭಾಷಾಂತರಕ್ಕೆ ಮಾರುಹೋಗಿದ್ದ. ಮಾಧವಕಂದಳಿ ಈ ರಾಮಾಯಣದಲ್ಲಿ ತನ್ನ ಆಸ್ತಿಯಾಗಿ ಬಿಟ್ಟು ಹೋದ ಶ್ರೀಮಂತವೂ ಸುಂದರವೂ ಆದ ಶೈಲಿ ಶಂಕರದೇವನ ಮೇಲೂ ಆತನ ಮುಂದಿನ ಪೀಳಿಗೆಯ ಮೇಲೂ ಮಹಾಪ್ರಭಾವವನ್ನು ಬೀರಿತು.ಮನಸಾದೇವಿ ಎಂಬ ಹೆಸರಿನಿಂದ ಸರ್ಪವನ್ನು ಪೂಜಿಸುವ ಸಂಪ್ರದಾಯ ಅಸ್ಸಾಂನಲ್ಲಿ ಬಹು ಹಿಂದಿನಿಂದಲೂ ಇದೆ. ಇದು ಮೊದಲಿಗೆ ಆರ್ಯೇತರರಿಂದ ಬಂದುದಾಗಿದ್ದು ಕ್ರಮೇಣ ಆರ್ಯ ಆಚರಣೆಗಳಲ್ಲಿ ಒಂದಾಗಿ ಸೇರಿ ಹೋಯಿತು. ಈ ಪೂಜಾವಿಧಿಗೆ ಸಂಬಂಧಿಸಿದಂತೆ ಆಕೆಯ ಮಾಹಾತ್ಮ್ಯವನ್ನು ಸಾರುವ ಕಥನಕವನಗಳ ಪರಂಪರೆಯೊಂದು ಹುಟ್ಟಿತು. ಈಗಲೂ ಜನ ಅದನ್ನು ಹಾಡುತ್ತಾರೆ.[೨]
ಹದಿನಾಲ್ಕು ಮತ್ತು ಹದಿನೈದನೆಯ ಶತಮಾನಗಳಲ್ಲಿ ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಒಂದು ಕ್ರಾಂತಿ ನಡೆಯಿತು. ಭಾಗವತ ಪುರಾಣೋಕ್ತವಾದ ಭಕ್ತಿಯ ಉದಾರಪಂಥದ ತಳಹದಿಯ ಮೇಲೆ ಒಂದು ಹೊಸ ಧರ್ಮ ಪ್ರತಿಷ್ಠಾಪಿತವಾಯಿತು. ಮಹಾಸಮರ್ಥರಾದ ಬಹುಮಂದಿ ಸಾಧುಸಂತರು ಅನೇಕ ಪ್ರಾಂತಗಳಲ್ಲಿ ಉದಿಸಿ ಸಂಸ್ಕøತಪುರಾಣಗಳನ್ನು ದೇಶಭಾಷೆಗಳಿಗೆ ಪರಿವರ್ತಿಸುವುದರ ಮೂಲಕ ಈ ಹೊಸಧರ್ಮವನ್ನು ಹರಡಿದರು. ಅಸ್ಸಾಮಿನಲ್ಲಿ ಬಹುಗುಣ ಭೂಷಿತನೂ ಯುಗಪುರುಷನೂ ಆದ ಶಂಕರದೇವ (1449-1569) ಎಂಬ ಕಾಯಸ್ಥ ಜಾತಿಯ ಸಾಧುಕವಿ ಜನಿಸಿ ಆ ದೇಶದ ಜನರ ಕಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಮತ್ತು ಸಾಹಿತ್ಯಕ ಜೀವನವನ್ನು ಶಾಶ್ವತವಾಗಿ ನಿರೂಪಿಸಿದ. ಶಾಂಕರ ಚಳವಳಿ ದೂರಗಾಮಿಯಾದ ಧಾರ್ಮಿಕ ಹಾಗೂ ಸಾಮಾಜಿಕ ಪರಿಣಾಮವನ್ನು ಜನರಲ್ಲಿ ಉಂಟುಮಾಡಿತು. ಅದು ಅಸ್ಸಾಮಿನ ಪಾಂಡಿತ್ಯ ಮತ್ತು ಸಾಹಿತ್ಯಗಳಿಗೆ ತುಂಬ ಸ್ಫೂರ್ತಿಯನ್ನು ಕೊಟ್ಟಿತು. ತಾನು ದೊಡ್ಡ ಸಂಸ್ಕøತ ಪಂಡಿತನಾಗಿದ್ದರೂ ಶಂಕರದೇವ ಪ್ರಧಾನವಾಗಿ ಅಸ್ಸಾಮೀ ಭಾಷೆಯಲ್ಲೇ ಬರೆದ. ಸಂಸ್ಕøತದ ಜ್ಞಾನಭಂಡಾರವನ್ನು ಅವಿದ್ಯಾವಂತ ಜನರ ಮುಂದೆ ತೆರೆದಿಡುವುದೇ ಆತನ ಆಶಯವಾಗಿತ್ತು. ಆತ ತನ್ನ ಮತವನ್ನು ಹರಡುವುದಕ್ಕಾಗಿ ಅನೇಕ ಗ್ರಂಥಗಳನ್ನೂ ಭಾಷ್ಯಗಳನ್ನೂ ಭಾಷಾಂತರಗಳನ್ನೂ ರಚಿಸಿದ. ಆತ ಮುಟ್ಟಿದ್ದೆಲ್ಲ ಬಂಗಾರವಾಯಿತು. ಈ ಲೇಖನಗಳು ವ್ಯವಹಾರೋಪಯುಕ್ತವೂ ಆಗಿದ್ದುವು. ಇವುಗಳನ್ನು ಎಡೆಬಿಡದೆ ನೋಡಿಕೊಂಡು ತಮ್ಮ ಕರ್ತವ್ಯಗಳನ್ನು ಜನರು ಕ್ರಮಪಡಿಸಿಕೊಳ್ಳುತ್ತಿದ್ದರು. ಈತನ ಪ್ರತಿಭೆ ಬಹುಮುಖವಾದುದು. ಈತ ಪದ್ಯಗಳನ್ನೂ ಗೀತೆಗಳನ್ನೂ ನಾಟಕಗಳನ್ನೂ ರಚಿಸಿದ್ಧಾನೆ.ಚಿರಸ್ಮರಣೀಯವಾದ ಜನಪ್ರಿಯ ಪುರಾಣ ಕಥೆಗಳ ಚೌಕಟ್ಟಿನಲ್ಲಿ ವೇದಾಂತ ದರ್ಶನದ ಸಾರಸರ್ವಸ್ವವನ್ನು ಬಟ್ಟಿಯಿಳಿಸಿರುವ ಭಾಗವತ ಗ್ರಂಥದಿಂದ ಶಂಕರದೇವ ತನ್ನ ಸ್ಪೂರ್ತಿಯನ್ನು ಮುಖ್ಯವಾಗಿ ಪಡೆದ. ಆದಕಾರಣ ಈ ಗ್ರಂಥವನ್ನು ಅಸ್ಸಾಮೀ ಭಾಷೆಗೆ ಪರಿವರ್ತಿಸಲು ಮೊದಲು ಪ್ರಯತ್ನ ನಡೆಯಿತು. ಪ್ರೌಢ ಭಾಷೆಯ ಉದ್ಧಾಮ ಶೈಲಿಯಲ್ಲಿ ರಚಿತವಾದ ಪವಿತ್ರ ಗ್ರಂಥವೊಂದನ್ನು ದೇಶೀಯ ಭಾಷೆಯೊಂದಕ್ಕೆ ಪರಿವರ್ತಿಸುವ ಯತ್ನ ಬಹುದಿಟ್ಟ ಹಾಗೂ ಅಸಾಧಾರಣವಾದ ಕೆಲಸವಾಗಿತ್ತು. ಭಾಗವತವನ್ನು ಓದಿ, ಬೋಧಿಸಿ, ಅನುವಾದ ಮಾಡಿದುದಕ್ಕೆ ಬ್ರಾಹ್ಮಣರು ದೊರೆ ನಾರಾಯಣನ ಮುಂದೆ ಶಂಕರನ್ನು ದೂರಿದರಂತೆ.
ಶಂಕರದೇವನ ಎರಡನೆಯ ಯಶಸ್ವೀ ಸಾಹಿತ್ಯ ಗ್ರಂಥ - ಕೀರ್ತನ. ಇದು ಇಂದಿಗೂ ಪ್ರತಿಯೊಬ್ಬ ಅಸ್ಸಾಮೀಯ ಹೃದಯವನ್ನು ಉದಾರ ಭಕ್ತಿಭಾವದಿಂದ ತುಂಬಿ ಉನ್ನತಿಗೇರಿಸುತ್ತದೆ. ಉತ್ತರಭಾರತದಲ್ಲಿ ತುಳಸೀದಾಸನ ರಾಮಚರಿತಮಾನಸವನ್ನು ಯಾವ ಮಮತೆ ಪೂಜ್ಯ ಭಾವದಿಂದ ಜನರು ಕಾಣುತ್ತಿದ್ದಾರೋ ಅದೇ ಪೂಜ್ಯಭಾವದಿಂದಲೇ ಅಸ್ಸಾಮೀ ಜನರು ಈ ಗ್ರಂಥವನ್ನು ಕಾಣುತ್ತಿದ್ದಾರೆ. ಈ ಗ್ರಂಥದ ಸಂಚೀಪತ್ರಗಳ ಹಸ್ತಲಿಖಿತ ಪ್ರತಿಯೋ ಇಲ್ಲವೇ ಅಚ್ಚಾದ ಪ್ರತಿಯೋ ಇಲ್ಲದ ಹಿಂದೂ ಮನೆ ಅಸ್ಸಾಮಿನಲ್ಲಿಲ್ಲ; ಹಬ್ಬದ ವೇಳೆಯಲ್ಲಾಗಲಿ ರೋಗರುಜಿನಗಳ ವೇಳೆಯಲ್ಲಾಗಲಿ ಈ ಗ್ರಂಥದ ಕೆಲವು ಕೀರ್ತನೆಗಳನ್ನು ಹಾಡದ ಜನರಿಲ್ಲ.ಶಂಕರದೇವ ಅಸ್ಸಾಮೀ ಸಾಹಿತ್ಯದ ಇನ್ನೆರಡು ಶಾಖೆಗಳಲ್ಲಿ ಮಾರ್ಗದರ್ಶಿಯಾಗಿದ್ದಾನಲ್ಲದೆ ಆ ಕ್ಷೇತ್ರಗಳಲ್ಲಿ ತನ್ನ ಕೀರ್ತಿಸ್ತಂಭಗಳನ್ನೂ ನೆಟ್ಟುಹೋಗಿದ್ದಾನೆ. ಆ ಕ್ಷೇತ್ರಗಳಾವುವೆಂದರೆ, ಅಂಕೀಯಾ - ನಾಟ್ - ಏಕಾಂಕ ನಾಟಕ ಮತ್ತು ಬರ್‍ಗಿತ್ - ಭಕ್ತಿಗೀತ. ಮುಖ್ಯವಾಗಿ ಇಂದ್ರಿಯ ಮತ್ತು ಬುದ್ಧಿಗಳನ್ನು ತುಷ್ಟಿಗೊಳಿಸಲು ಅಂಕಿಯಾ ನಾಟ್‍ಗಳು ರಚಿತವಾದವು. ವಿದ್ಯಾಭ್ಯಾಸ ಬಹಳವಾಗಿ ನಡೆಯದಿದ್ದ ಮತ್ತು ವಿದ್ಯೆ ಕೇವಲ ಕೆಲವರಿಗೆ ಮಾತ್ರ ಮಿತಗೊಂಡಿದ್ದ ಆ ಕಾಲದಲ್ಲಿ ಅಂಕಿಯಾ ನಾಟಕಗಳು ಜನರ ಬೌದ್ಧಿಕ ಜೀವನವನ್ನು ಕಳೆಗೂಡಿಸಿದುವು. ಈ ನಾಟಕಗಳು ಪ್ರತಿಯೊಬ್ಬರಿಗೂ ಹಿಡಿಸುವಂತಿದ್ದು ಜನಸಾಮಾನ್ಯರಿಗೆ ಬೇಕಾದ ಸಂತೋಷವನ್ನು ಒದಗಿಸುತ್ತಿದ್ದವು. ಸಂಸ್ಕøತಿಯನ್ನು ಜನರಲ್ಲಿ ಹರಡುವುದಕ್ಕೆ ಸಹಜಮಾಧ್ಯಮವಾಗಿ ಈ ನಾಟಕಗಳು ಜನರ ವಿದ್ಯೆ ಮತ್ತು ಸಾಂಸ್ಕøತಿಕ ಜೀವನದ ಮೇಲೆ ಗಾಢಪ್ರಭಾವವನ್ನು ಬೀರಿ ಕೊನೆಗೆ ಒಂದು ರಾಷ್ಟ್ರೀಯ ರಂಗಭೂಮಿಯ ಬೆಳವಣಿಗೆಗೂ ಸಂಗೀತ ಹಾಗೂ ನರ್ತನಗಳ ಅಭಿವೃದ್ಧಿಗೂ ಹಾದಿ ಹಾಕಿ ಕೊಟ್ಟವು. ಶಂಕರದೇವನ ನಾಟಕಗಳಲ್ಲಿ ಕಾಳೀಯದಮನ, ಪತ್ನೀಪ್ರಸಾದ, ರಾಸಕ್ರೀಡಾ, ರುಕ್ಮಿಣೀಹರಣ, ಪಾರಿಜಾತಹರಣ, ರಾಮವಿಜಯ ಎಂಬುವು ಈಗ ಉಳಿದಿವೆ. ಇವುಗಳಲ್ಲಿ ಪ್ರತಿಯೊಂದರ ಕಥೆಯೂ ಪೂರ್ವನಿರ್ದಿಷ್ಟವಾದುದು. ಮತ್ತು ಮತಪ್ರಚಾರಕ್ಕೋಸ್ಕರ ಪ್ರಯುಕ್ತವಾಗಬೇಕಾದುದು. ಆದುದರಿಂದ ನಾಟಕಕಾರರು ತುಂಬ ಇಕ್ಕಟ್ಟಿನಲ್ಲಿ ತಮ್ಮ ರಚನೆಗಳನ್ನು ಮಾಡಬೇಕಾಗಿತ್ತು. ಶಂಕರದೇವನ ಪ್ರಥಮತಃ ಉಪದೇಶಕ, ಆಮೇಲೆ ಕತೆಗಾರ. ಆದರೂ ಈ ಮಿತಿಗಳಲೂ ಆತ ತನ್ನ ಕೆಲವು ಕತೆಗಳಲ್ಲಿ ಹೊಸ ಕ್ಷೇತ್ರಗಳನ್ನು ನಿರ್ಮಿಸಿದ. ಮುಖ್ಯವಾಗಿ ವೈಷ್ಣವ ಮತದ ಪ್ರಚಾರಕ್ಕೆ ಅಂಕಿಯಾ ನಾಟಕಗಳು ಪ್ರಯುಕ್ತವಾದರೂ ಇಂದಿಗೂ ಅಸ್ಸಾಮಿ ಜನರ ಜಿವನದ ಮೇಲೆ ಸ್ಥಿರಪ್ರಭಾವವನ್ನು ಬೀರುತ್ತಿವೆ.
ಕಾವ್ಯಗಳಿಗಿಂತ ಬರ್‍ಗೀತಗಳು ಹೆಚ್ಚು ಕಾವ್ಯಮಯವಾಗಿವೆ. ಕೀರ್ತನ ಆಖ್ಯಾನಗಳಿಗಿಂತಲೂ ಹೆಚ್ಚು ರಾಗಯುಕ್ತವಾಗಿರುತ್ತವೆ. ಸಂಗೀತದಲ್ಲಿ ಜನರ ಪ್ರೀತಿ ಹೆಚ್ಚಾಗಿದ್ದುದರಿಂದಲೂ ಭಕ್ತಿಗೀತೆಗಳು ಅವರಿಗೆ ಹೆಚ್ಚಾಗಿ ಬೇಕಾಗಿದ್ದುದರಿಂದಲೂ ಶಂಕರದೇವ ಅಸ್ಸಾಮೀ ಸಾಹಿತ್ಯದಲ್ಲಿ ಇಂದೂ ಅತ್ಯಂತ ಸುಂದರವಾದ ಸ್ತೋತ್ರಗಳೆನಿಸಿರುವ ಅನೇಕ ಬರ್‍ಗೀತ್‍ಗಳನ್ನು ರಚಿಸಿದ. ಶಂಕರದೇವನ ಬರ್‍ಗೀತ್‍ಗಳ ವಿಷಯ ಪ್ರಧಾನವಾಗಿ ಮತೀಯ ಆಧ್ಯಾತ್ಮಿಕಾನುಭವಗಳು; ಜಗತ್ತಿನ ಹುಟ್ಟುಸಾವುಗಳ ಮೇಲಣ ದಾರ್ಶನಿಕ ಚಿಂತನೆ, ಮರ್ಮಸ್ಪರ್ಶಿಯಾದ ಆತ್ಮಾವಲೋಕನ, ದೇವರಿಗಾಗಿ ಜೀವದ ತಳಮಳ, ಜ್ಞಾನ ಲಾಭಕ್ಕಾಗಿ ಸ್ವಾಹಂಕಾರ ಖಂಡನೆ, ದೇವರ ಸ್ವರೂಪ, ಆತನಿಗೂ ಮಾನವನಿಗೂ ಇರುವ ಸಂಬಂಧ, ಆತನ ಪರಮ ಕಾರುಣಿಕತ್ವ ಮಾನವ ಭವದ ಭರ, ಮುಕ್ತಿಯ ದಾರಿ - ಮುಂತಾದವು ಹಲವಾರು ಗೀತೆಗಳ ವಸ್ತುಗಳಾಗಿವೆ. ಮಿಕ್ಕವು ಹರಿನಾಮವನ್ನು ಸ್ಮರಿಸಿರಿ, ಗೋವಿಂದನ ಮೇಲೆ ಮನವಿಡಿರಿ, ರಾಮನ ಪಾದದ ಮೇಲೆ ನಿಮ್ಮ ತಲೆಯಿರಿಸಿರಿ, ಐಹಿಕ ಸುಖಗಳ ಭ್ರಾಂತಿಯನ್ನು ತೊರೆಯಿರಿ - ಎಂದು ಮುಂತಾದ ಉಪದೇಶಗಳನ್ನು ಕೊಡುತ್ತವೆ. ಬರ್‍ಗೀತ್‍ಗಳಲ್ಲಿ ಪ್ರತಿಯೊಂದೂ ಗೋವಿಂದಚರಣವೇ ಶರಣವೆಂಬ ಮೊರೆಯಿಂದಲೂ ಸಂಕಟಗಳಿಂದ ಪಾರುಗಾಣಿಸೆಂಬ ಬಿನ್ನಪದದಿಂದಲೂ ಮುಗಿಯುತ್ತದೆ.ಶಂಕರದೇವನ ಅತ್ಯುನ್ನತ ಭಾವನೆಗಳನ್ನು ಬರ್‍ಗೀತ್‍ಗಳಲ್ಲಿ ಕಾಣಬಹುದು. ಸರಳವೂ ಮನೋಹರವೂ ಆದ ಭಾಷೆಯಲ್ಲಿ ದಾರ್ಶನಿಕ ತತ್ವಗಳೂ ಆದ್ರ್ರಭಾವಗಳೂ ಮೇಳೈಸುವಂತೆ ಮಾಡಿ ಕವಿ ಇಲ್ಲಿ ತನ್ನ ಅಸಾಧಾರಣ ಸಾಮಥ್ರ್ಯವನ್ನು ಪ್ರಕಟಿಸಿದ್ದಾನೆ. ಮನಸ್ಸನ್ನು ಸೆರೆಹಿಡಿದು ಸಂತೋಷಗೊಳಿಸುವ ಅನೇಕ ಉಪಮೆಗಳು, ಉತ್ಪ್ರೇಕ್ಷೆಗಳು, ಯಮಕಗಳು. ಇತರ ಅಲಂಕಾರಗಳು ಈ ಗೀತಗಳಲ್ಲಿ ತುಂಬಿವೆ. ಬರ್‍ಗೀತಗಳ ಮೇಲೆ ಜನರ ಪ್ರೀತಿ ಬಹುಬೇಗ ಬೆಳೆಯಿತು. ಇಂಥ ಗೀತಗಳನ್ನು ಮುಂದೆ ಬಂದ ಕವಿಗಳು ಅಧಿಕವಾಗಿ ರಚಿಸತೊಡಗಿದರು. ಇವುಗಳಲ್ಲಿ ಅತ್ಯುತ್ತಮವಾದ ರಚನೆಗಳೆಂದರೆ ಸಂಗೀತ ನಿಪುಣನಾಗಿದ್ದ ಕವಿ ವಾಮದೇವನವು.
ಶಂಕರದೇವನ ಪ್ರಿಯ ಶಿಷ್ಯ ಮಾಧವದೇವ ಅಸ್ಸಾಮೀ ವೈಷ್ಣವ ಪ್ರಣಾಳಿಕೆಯಲ್ಲಿ ಎರಡನೆಯ ಮಹಾವ್ಯಕ್ತಿ. ಈ ಮಹಾಪುರುಷನ ಕೃತಿಗಳಿಗೆ ಅಸ್ಸಾಂ ಮಾರುಹೋಯಿತು. ಈತ ಆ ಗಗನ ತಲದಲ್ಲಿ ಒಂದು ನವಜ್ಯೋತಿಯನ್ನೇ ಬೆಳಗಿದ. ಲಕ್ಷ್ಮೀಪುರದ ಲೆಟೆಪುಖುಜರೀ ಎಂಬ ಗ್ರಾಮದಲ್ಲಿ ಈತ ಕ್ರಿ.ಶ. 1492 ರಲ್ಲಿ ಜನಿಸಿದ. ಈತನೊಬ್ಬ ಶಾಕ್ತ, ಆದರೆ ಶಂಕರದೇವನ ಸಂಪರ್ಕವೊದಗಿದ ಕೂಡಲೆ ವೈಷ್ಣವಭಕ್ತಿ ಪಂಥವನ್ನನುಸರಿಸಿದ. ಕಲಾಪೂರ್ಣನಾದ ಮಾಧವದೇವ ಶಂಕರದೇವ ಆಪ್ತ ಮತ್ತು ನಿಷ್ಠ ಶಿಷ್ಯನಾಗಿ ಆತನನ್ನು ನೆರಳಿನಂತೆ ಅನುಸರಿಸತೊಡಗಿದ. ಈತನ ಮತಪರಿವರ್ತನೆಯಿಂದ ವೈಷ್ಣವ ಮತ ಬಹುಬೇಗ ಹರಡುವಂತಾಯಿತು. ಏಕೆಂದರೆ ಈತನಲ್ಲಿ ಬುದ್ಧಿಸಾಮಥ್ರ್ಯದ ಜೊತೆಗೆ ಸಮಾಜ ಪರಿಷ್ಕಾರಕನಿಗೆ, ಮತಪ್ರವರ್ತಕನಿಗೆ ಬೇಕಾದ ಅನೇಕ ಸದ್ಗುಣಗಳೂ ಇದ್ದವು. ಅಂದಿನ ಸಾಂಪ್ರದಾಯಿಕ ವಿದ್ಯೆಯಲ್ಲಿ ಪಂಡಿತನಾಗಿದ್ದ ಈತ ಸುಮಧುರ ಗಾಯಕನೂ ಆಗಿದ್ದ. ಸರಿ ಸುಮಾರು ಶಂಕರದೇವನ ಇಷ್ಟಕ್ಕೆ ವಿರೋಧವಾಗಿಯೇ ಮಾಧವದೇವ ಆಮರಣಾಂತ ಬ್ರಹ್ಮಚಾರಿ ಪಂಥವೊಂದನ್ನು ಹುಟ್ಟು ಹಾಕಿದ. ಶಂಕರದೇವನ ತರುವಾಯ ಮಠಾಧಿಪತ್ಯ ಈತನಿಗೆ ಸಂದಿತು. ಅನೇಕ ವರ್ಷಗಳ ಕಾಲ ಧನ್ಯಜಿವನ ನಡೆಸಿ ಮಾಧವದೇವ ಕುಚ್‍ಬಿಹಾರದಲ್ಲಿ ದೈವಾಧೀನನಾದ. (ಕ್ರಿ.ಶ. 1596).ಅಸ್ಸಾಮೀ ಸ್ತೋತ್ರ ಸಾಹಿತ್ಯದಲ್ಲಿ ಮಾಧವದೇವ ಅತ್ಯುಚ್ಛಸಿದ್ಧಿಯನ್ನು ತನ್ನ ನಾಮಘೋಷ ಅಥವಾ ಹಜಾರಿಘೋಷ (ಸಾವಿರ ದ್ವಿಪದಿಗಳು) ಎಂಬ ಗ್ರಂಥದಲ್ಲಿ ಪಡೆದ. ಇದನ್ನು ಎಲ್ಲೆಲ್ಲೂ ಅನೇಕ ಜನ ಓದುತ್ತಾರಲ್ಲದೆ ನೆನಪಿನಲ್ಲಿಟ್ಟುಕೊಂಡು ಧಾರ್ಮಿಕಪ್ರವಚನಗಳಲ್ಲಿ ಪ್ರಮಾಣವಾಕ್ಯಗಳಂತೆ ಉದ್ಧರಿಸುತ್ತಾರೆ. ಹೀಗಿರುವುದರಿಂದ ನಿಸ್ಸಂದೇಹವಾಗಿ ವೈಷ್ಣವ ಮತಕ್ಕೆ ಒಂದು ಸ್ಥಿರವೂ ಶಾಶ್ವತವೂ ಆದ ಊರುಗೋಲಾಗಿದೆ. ಪಶ್ಚಾತ್ತಾಪ, ಬೇಡಿಕೆ, ಆತ್ಮಸಂಯಮ, ಆತ್ಮಾನುತಾಪ, ದೇವರಲ್ಲಿ ಭಕ್ತಿ, ಶ್ರದ್ಧೆ ಶರಣಾಗತಿಗಳ ಮೌಲ್ಯಪಾರಮ್ಯ-ಇವುಗಳನ್ನು ಕೀರ್ತಿಸುವ ಅನೇಕ ಸ್ತೋತ್ರಗಳು ನಾಮಘೋಷದಲ್ಲಿವೆ. ಪ್ರತಿಯೊಂದು ಸ್ತೋತ್ರದಲ್ಲೂ ಭಾವದ ತೀವ್ರ ಘೋಷವಿದೆ, ಅನಂದೋತ್ಕರ್ಷವಿದೆ. ಅದು ಸಮಸ್ತರ ಮನಸ್ಸನ್ನೂ ಮುಟ್ಟುವಂಥದು. ಇದರ ವಸ್ತು ನೀತಿಬೋೀಧೆ, ಗೀತೆ ಉಪನಿಷತ್ತುಗಳ ಜೊತೆಗೆ ನಿಲ್ಲುವ ಉದಾತ್ತ ಸಾಹಿತ್ಯ ಇದರದು. ಆಳವಾದ ಭಾವನೆಗಳು, ಕಾಣ್ಕೆಗಳ ಏಕತೆ, ಮಧುರ ವಾಗ್ವಿಲಾಸ ಇವುಗಳಿಂದ ನಾಮಘೋಷ ಒಂದು ಅತ್ಯಂತ ಶ್ರೇಷ್ಠ ಕಲಾಕೃತಿಯಾಗಿ ಪರಿಣಮಿಸಿ ಕವಿಯ ಪ್ರತಿಭೆಗೆ ಚಿರಂತನ ಸಾಕ್ಷಿಯಾಗಿ ನಿಂತಿದೆ.
ತನ್ನ ಬರ್‍ಗೀತ್‍ಗಳಿಂದ ಮಾಧವದೇವ ಜನರ ಪ್ರೀತಿಯನ್ನು ತುಂಬ ಗಳಿಸಿದ. ಈ ಗಾಢಭಾವದ ಭಕ್ತಿಗಳಲ್ಲಿ ಆತನ ಮತನಿಷ್ಠೆ ಸಂಪೂರ್ಣ ಅಭಿವ್ಯಕ್ತಿ ಪಡೆಯಿತು. ಅನೇಕ ಗೀತಗಳಲ್ಲಿ ಪಶ್ಚಾತ್ತಾಪ, ಪೂರ್ವಾರ್ಜಿತ ಪಾಪಕ್ಕಾಗಿ ದೈನ್ಯ, ಆತ್ಮಾರ್ಪಣ ಭಾವ, ಪ್ರಪತ್ತಿಯೇ ಸರ್ವಪಾತಕನಾಶವೆಂಬ ಬುದ್ಧಿ-ಇವು ಪುಷ್ಪಗಳಿಂದ ಸೌರಭ ಹೇಗೋ ಹಾಗೆ ಸೂಸುತ್ತವೆ. ಇವುಗಳಲ್ಲಿ ಕೆಲವು ಶ್ರೀ ಬಾಲಕೃಷ್ಣನನ್ನೇ ಕೇಂದ್ರ ವ್ಯಕ್ತಿಯಾಗಿಟ್ಟುಕೊಂಡು ಬೃಂದಾವನದ ಸೊಬಗನ್ನು ಶ್ರೀಕೃಷ್ಣನ ಬಾಲ್ಯ ಮತ್ತು ನವತಾರುಣ್ಯಗಳನ್ನು ಬಹು ಸುಂದರವಾಗಿ ವರ್ಣಿಸುತ್ತವೆ. ಸಾಧಾರಣವಾಗಿ ಎಲ್ಲ ಬಾಲಕರಿಗೂ ನವತರುಣರಿಗೂ ಸಹಜವಾಗಿ ಬರುವ ಭಾವಗಳನ್ನೂ ಭಾವನೆಗಳನ್ನೂ ಪ್ರತಿಫಲಿಸುತ್ತವೆ. ಭಾಗವತದ ಪ್ರಕೃತ್ಯತೀತನೂ ಅಸಾಧಾರಣ ವ್ಯಕ್ತಿಯೂ ಆದ ಶ್ರೀಕೃಷ್ಣ ಇಲ್ಲಿ ತುಂಬ ಸರಳನೂ ಮಾನವೀಯನೂ ಆಗಿ ಕಂಗೊಳಿಸುತ್ತಾನೆ. ಪ್ರಕೃತಿಯ ಸೌಂದರ್ಯದೊಡನೆ ಬೆರೆದಿರುವ ಶ್ರೀಕೃಷ್ಣನ ಬಾಲಲೀಲೆಗಳು ಹೆಚ್ಚು ಜೀವಂತವಾಗಿಯೂ ಸಮಂಜಸವಾಗಿಯೂ ಇವೆ. ದಿನಬಳಕೆಯ ಪ್ರಸಂಗಗಳಿಗೂ ಮಾಧವದೇವನ ಮಾಯಾಲೇಖನಿ ಹೊಸ ಬೆರಗೊಂದನ್ನು ಹೊಸ ಅರ್ಥ ಮತ್ತು ಹೊಸ ಹರುಷವನ್ನೂ ಎರೆದಿದೆ. ಬಾಲಕೃಷ್ಣನಲ್ಲಿ ಬಾಲ್ಯದ ಅಮರ ಸ್ವಭಾವಗಳು ಎದ್ದುಕಾಣುತ್ತವೆ. ಈ ಕಾಲದ ಮಕ್ಕಳಂತೆ ಬಾಲಕೃಷ್ಣನೂ ಸರಳ; ಆತನ ಮಂದಸ್ಮಿತ ಅಮೃತವನ್ನು ವರ್ಷಿಸುವಂಥದು.ಭಾಗವತದ ತರುವಾಯ, ವೈಷ್ಣವ ಕವಿಗಳ ಮೇಲೆ ತುಂಬ ಪ್ರಭಾವ ಬೀರಿದ ಮಹಾಕಾವ್ಯವೆಂದರೆ ವೈಷ್ಣವಪ್ರಸ್ಥಾನಗ್ರಂಥವೆಂದು ಪರಿಗಣಿತವಾದ ಮಹಾಭಾರತ. ವೈಷ್ಣವಕವಿಗಳು ಸಹಜವಾಗಿಯೇ ಈ ಗ್ರಂಥವನ್ನು ತಮ್ಮ ಮತ ಪ್ರಚಾರಕ್ಕೆ ಒಂದು ಸಾಧನವನ್ನಾಗಿ ಮಾಡಿಕೊಂಡರು. ಮಹಾಭಾರತದ ಒಂದು ಭಾಗವನ್ನು ಭಾಷಾಂತರಿಸುವ ಕೆಲಸದಲ್ಲೋ, ಅಥವಾ ಅಲ್ಲಿನ ಒಂದು ಕಥೆಯನ್ನು ತೆಗೆದುಕೊಂಡು ಉಪಾಖ್ಯಾನವಾಗಿ ಕತೆ ಹೇಳುವಲ್ಲೂ ಇಲ್ಲವೇ ವೈಷ್ಣವ ಧ್ಯೇಯಗಳಾದ ತ್ಯಾಗ, ಸರಳಜೀವನ, ಭೂತದಯೆ, ದಾನ, ಶ್ರದ್ಧೆ, ಸತ್ಯ, ಯಾತ್ರೆ, ಸಾಧು ಸಂತರ ಸಾಹಿತ್ಯಾಧ್ಯಯನ ಮುಂತಾದುವನ್ನು ಜನರ ಮನಸ್ಸಿನಲ್ಲಿ ನೆಡಲೋ ತೊಡಗಿದರು. ಮಹಾಭಾರತವನ್ನು ಆಶ್ರಯಿಸಿ ಸಾಹಿತ್ಯವನ್ನು ನಿರ್ಮಿಸಿದ ಕವಿಗಳಲ್ಲಿ ಕವಿ ರಾಮಸರಸ್ವತಿ ಅಗ್ರಗಣ್ಯ. ರಾಮಸರಸ್ವತಿ ಒಬ್ಬ ಮಹಾಕವಿ. ಜನಪ್ರಿಯ ಕವಿ. ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ನರನಾರಾಯಣ ಎಂಬ ರಾಜನ ಆಶ್ರಯಕ್ಕೆ ತನ್ನ ಸಮಕಾಲೀನ ಕವಿಗಳೆಲ್ಲರನ್ನೂ ತಂದು ಅವರ ಸಾಹಿತ್ಯ ಕರ್ಮಗಳನ್ನೆಲ್ಲ ಒಮ್ಮೊಗವಾಗಿ ನಡೆಯುವಂತೆ ಮಾಡಿ ಖ್ಯಾತನಾಗಿದ್ದಾನೆ.
ಮಹಾಭಾರತದ ಭಾಷಾಂತರ ಅಸ್ಸಾಮೀ ಭಾಷೆಯನ್ನು ಬೆಳೆಸಿ ಅದರ ಸಾಹಿತ್ಯಕ್ಕೆ ಜನ ಒಲಿಯುವಂತೆ ಮಾಡಿತು.ಕಟ್ಟು ಕಥೆಗಳು, ಶೃಂಗಾರ ಕಥೆಗಳು, ಪೌರಾಣಿಕ ಕಥೆಗಳು, ಮುಂತಾದ ಚಿನ್ನದ ಗಣಿಗಳನ್ನದು ತೆರೆದು ತೋರಿತು. ಅಸ್ಸಾಮೀ ಭಾಷೆಯ ಆಧುನಿಕ ಸಾಹಿತಿಗಳೂ ಈ ಅಶೋಷ್ಯ ಜ್ಞಾನಾನಂದ ಮೂಲದಿಂದ ತಮ್ಮ ಸ್ಫೂರ್ತಿಯನ್ನು ಪಡೆಯುತ್ತಿದ್ದಾರೆ. ಗ್ರಾಮವಾಸಿಗಳಿಗೆ ಮಹಾಭಾರತ ಮನೋರಂಜಕವಾದ ಕಾವ್ಯ ಮಾತ್ರವಾಗಿರದೆ ಕಾಲಜ್ಞಾನದ ಪ್ರಮಾಣ ಗ್ರಂಥವೂ ಆಗಿದೆ. ಈ ಶಾಸ್ತ್ರ ಜನರ ಧಾರ್ಮಿಕ ಮತ್ತು ನೈತಿಕ ಹಾರೈಕೆಗಳನ್ನು ಪೂರೈಸಿಕೊಡುವುದಲ್ಲದೆ, ಅರ್ಥ ಕಾಮ ಮೋಕ್ಷ ಪುರುಷಾರ್ಥಗಳನ್ನೂ ಸಾಧಿಸಿ ಕೊಡುತ್ತದೆ ಎಂಬುದಾಗಿ ಶಲ್ಯಪರ್ವ ವಾಸ್ತವವಾಗಿಯೇ ನಿರೂಪಿಸಿದೆ.ಅಸ್ಸಾಮೀನ ವೈಷ್ಣವಪಂಥ ಅಖಿಲಭಾರತೀಯ ವೈಷ್ಣವ ಪಂಥದ ಒಂದು ಅಂಗವಾಗಿತ್ತು. ಈ ಕಾರಣದಿಂದ ಅದು ಸಾಧಾರಣವಾಗಿ ಎಲ್ಲ ವೈಷ್ಣವರೂ ಅಂಗೀಕರಿಸಿದ ಪವಿತ್ರ ಗ್ರಂಥಗಳನ್ನೇ ತಾನೂ ಅಂಗೀಕರಿಸಿತಲ್ಲದೆ ತನ್ನದೇ ಆದ ದಾರ್ಶನಿಕ ಮತ್ತು ದೈವಶಾಸ್ತ್ರೀಯ ಗ್ರಂಥಗಳನ್ನು ಬೆಳೆಸಿಕೊಳ್ಳಲಿಲ್ಲ. ಅಲ್ಲದೆ, ಅಸ್ಸಾಂ ವೈಷ್ಣವ ಪಂಥ ಭಕ್ತಿ ಮತ್ತು ಶರಣಾಗತಿಗಳನ್ನು ಒತ್ತಿ ಹೇಳುತ್ತಿದ್ದುದರಿಂದ ಮತತತ್ವಕ್ಕೆ ಸಂಬಂಧಪಟ್ಟ ಗ್ರಂಥಗಳೂ ಹೆಚ್ಚಾಗಿ ಬೆಳೆಯಲು ಅವಕಾಶವಿರಲಿಲ್ಲ. ವೈಷ್ಣವ ತತ್ವ ಮತ್ತು ದೈವಶಾಸ್ತ್ರಗಳನ್ನು ಕುರಿತ ಕೆಲವು ಸಾರಸಂಗ್ರಹಗಳ ಪೈಕಿ ಶಂಕರದೇವನ ಭಕ್ತಿ ರತ್ನಾಕರ, ಭಕ್ತಿ ಪ್ರದೀಪ ಎಂಬವು ಹೆಸರಾಂತಿವೆ. ಭಕ್ತಿರತ್ನಾವಳಿಯ ಜೊತೆಗೆ ಮಾಧವದೇವನ `ನಾಮಘೋಷವನ್ನೂ ವೈಷ್ಣವ ಸಿದ್ಧಾಂತದ ಪ್ರಮಾಣಗ್ರಂಥವೆಂದು ಭಾವಿಸಲಾಗಿದೆ. ಸಂಸ್ಕøತದಲ್ಲಿರುವ ಭಟ್ಟದೇವನ ಭಕ್ತಿವಿವೇಕ ಮತ್ತು ಭಕ್ತಿಸಾರಗಳೂ ರಾಮಚರಣ ಥಾಕೂರನ ಭಕ್ತಿರತ್ನ, ನರೋತ್ತಮ, ಥಾಕೂರನ ಭಕ್ತಿಪ್ರೀಮಾವಳಿ, ಅದ ವಿಷಯನಿರೂಪಣೆಯ ದೆಸೆಯಿಂದ ಅಸ್ಸಾಮೀ ವೈಷ್ಣವಧರ್ಮದಲ್ಲಿ ಗಣ್ಯಸ್ಥಾನ ಪಡೆದಿವೆ.
ವೈಷ್ಣವ ಲೇಖಕರು ಅಸ್ಸಾಮೀ ದಾರ್ಶನಿಕ ಲೇಖನಗಳಿಗೆ ಕೊಟ್ಟ ಒಂದು ಮುಖ್ಯ ಕೊಡುಗೆಯೆಂದರೆ ಭಗವದ್ಗೀತೆಯ ಮೇಲೆ ಪದ್ಯದಲ್ಲೂ ರಚಿಸಿದ ವಿಪುಲ ವ್ಯಾಖ್ಯೆಗಳು. ಶಂಕರದೇವ ಮತ್ತು ಮಾಧವದೇವ ಎಂಬಿಬ್ಬರು ಸಾಧುಗಳು ತಮ್ಮ ಭಕ್ತಿ ಮುಕ್ತಿ ಮತ್ತು ಅವತಾರ ತತ್ವಗಳನ್ನು ನಿರೂಪಿಸುವುದಕ್ಕಾಗಿ ಭಗವದ್ಗೀತೆಯ ಹಲವಾರು ಪ್ರಸಂಗೋಚಿತ ಪದ್ಯಗಳನ್ನು ಅಸ್ಸಾಮೀ ಭಾಷೆಗೆ ಭಾಷಾಂತರಿಸಿದರು; ಆದರೆ ಗೀತೆಯನ್ನು ಸಮಗ್ರವಾಗಿ ಭಾಷಾಂತರಿಸಿರುವ ಯಾವೊಂದು ಗ್ರಂಥವೂ ಇರಲಿಲ್ಲ. ಶ್ರೀಧರಸ್ವಾಮಿಯ ವ್ಯಾಖ್ಯಾನವನ್ನು ಅನುಸರಿಸಿ ಈ ಗ್ರಂಥವನ್ನು ಗದ್ಯದಲ್ಲಿ ಸಮಗ್ರವಾಗಿ ಅನುವಾದ ಮಾಡಿದ ಕೆಲಸವನ್ನು ಮೊಟ್ಟಮೊದಲು ಭಟ್ಟದೇವ ಕೈಗೊಂಡ. ಆದರೆ ಇದರ ಪದ್ಯಾನುವಾದವನ್ನು ಕಾಮರೂಪನಿವಾಸಿಯಾದ ಗೋವಿಂದ ಮಿಶ್ರ ಮಾಡಿದ. ಈ ಭಾಷಾಂತರದಲ್ಲಿ ಕಾವ್ಯಗುಣವೂ ಸಶಕ್ತವಾದ ಭಾಷಾಪ್ರಭುತ್ವವೂ ಎದ್ದುಕಾಣುತ್ತದೆ. ಈತನ ಭಾಷೆ ಸರಳವಾಗಿಯೂ ಚೆನ್ನಾಗಿ ಕಡೆದಂತೆಯೂ ಸುಂದರವಾಗಿಯೂ ನೆನಪಿನಲ್ಲಿಡಲು ಸುಲಭವಾಗಿಯೂ ಇವೆ. ಗೀತೆಯ ಗದ್ಯಭಾಷಾಂತರವನ್ನು ಭಟ್ಟದೇವನೆಂದು ಪ್ರಕೀರ್ತಿತನಾದ ವೈಕುಂಠನಾಥ ಕವಿರತ್ನ ಭಾಗವತ ಭಟ್ಟಾಚಾರ್ಯ (1558 -1638) ಕಥಾಭಾಗವತ ಮತ್ತು ಕಥಾಗೀತಗಳನ್ನು ರಚಿಸಿದ. ಇವೆರಡೂ ಗದ್ಯದಲ್ಲಿವೆ. ಕಥಾಗೀತ ಬಹಳ ಹಿಂದೆಯೇ ರಚಿತವಾದ ಕೃತಿ ಎಂಬುದನ್ನು ಗಮನಿಸಿ ಖ್ಯಾತವಿದ್ವಾಂಸ ಆಚಾರ್ಯ ಪಿ.ಸಿ.ರೇ ``ಹದಿನಾರನೆಯ ಶತಮಾನದಲ್ಲಿ ಭಟ್ಟದೇವ ರಚಿಸಿದ ಗದ್ಯಗೀತೆ ಅಂಥ ಬರವಣಿಗೆಗಳ ಪೈಕಿ ಅಸದೃಶವಾಗಿದೆ. ಅದೊಂದು ಅನಘ್ರ್ಯ ರತ್ನ. ಹದಿನಾರನೆಯ ಶತಮಾನದಷ್ಟು ಹಿಂದಿನ ಕಾಲದಲ್ಲೇ ಅಸ್ಸಾಮೀ ಗದ್ಯ, ಪ್ರಾಯಶಃ ಇಂಗ್ಲೆಂಡಿನ ಹೂಕರ್ ಮತ್ತು ಲ್ಯಾಟಿಮರ್‍ರ ಬರಹಗಳನ್ನು ಬಿಟ್ಟರೆ, ಪ್ರಪಂಚದ ಮತ್ತಾವ ಸಾಹಿತ್ಯದಲ್ಲೂ ಕಂಡು ಬಾರದ ಮಟ್ಟವನ್ನು ಮುಟ್ಟಿತ್ತು-ಎಂದಿದ್ದಾನೆ. ಸತ್ರ ಸಂಸ್ಥೆಗಳ ಆಸರೆಯಲ್ಲಿ ವರ್ಧಿಸಿದ ವೈಷ್ಣವ ಧರ್ಮಪ್ರಗತಿಯ ಒಂದು ಕುಡಿಯಂತೆ ಒಡೆದು ಬಂದು ಬೆಳೆದು ಮತ್ತೊಂದು ಮುಖ್ಯ ಸಾಹಿತ್ಯ ಶಾಖೆ ಯಾವುವೆಂದರೆ ಚರಿತ ಪುಥಿಗಳು, ಭಕ್ತರಿಗೆ ಧಾರ್ಮಿಕ ಭಾವನೆಗಳ ಸ್ಪೂರ್ತಿಯುಂಟಾಗಲೆಂದು ಈಗಲೂ ಈ ಸಂತರ ಜೀವನಚರಿತ್ರೆಗಳನ್ನು ಸಾಮೂಹಿಕ ಪ್ರಾರ್ಥನೆಗಳಾದ ಅನಂತರ ಹೇಳುತ್ತಾರೆ. ಕಥಾಗುರುಚರಿತದ (ಶಂಕರದೇವ ಮತ್ತು ಮಾಧವದೇವರ ಗದ್ಯ ಜೀವನಚರಿತ್ರೆ) ಪ್ರಕಾರ ಈ ಸಂಪ್ರದಾಯವನ್ನು ಮೊದಲು ಆಚರಣೆಗೆ ತಂದವ ಮಾಧವದೇವ. ತನ್ನ ಗುರುವಿನ ಜೀವನ ಚರಿತ್ರೆಯನ್ನು ಆತ ಪ್ರತಿನಿತ್ಯವೂ ಪಾರಾಯಣ ಮಾಡಿ ಈ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ.
ವೈಷ್ಣವ ಧರ್ಮದ ಪುನರುಜ್ಜೀವನ ಅಸ್ಸಾಮೀ ಸಾಹಿತ್ಯದಲ್ಲಿ ರಾಷ್ಟ್ರೀಯ ಜೀವನದ ಇತರ ಮುಖಗಳಲ್ಲಿ ಹೇಗೋ ಹಾಗೆ, ಒಂದು ಹೊಸ ಯುಗವನ್ನು ತೆರೆಯಿತು. ಅದೊಂದು ವಿಸ್ತಾರವಾದ ಅವಧಿ. ತರುಣ ವಿದ್ಯಾರ್ಥಿಗಳು ವಾರಣಾಸಿಗೆ ತಂಡ ತಂಡದಲ್ಲಿ ಹೋಗಿ, ಶಾಸ್ತ್ರಗಳಲ್ಲಿ ಪರಿಣಿತರಾಗಿ, ನಾಗರಿಕ ಅಭಿರುಚಿಗಳನ್ನು ಪಡೆದು, ಅವುಗಳನ್ನು ತಮ್ಮ ಸ್ವಂತ ದೇಶಗಳಿಗೊಯ್ಯುತ್ತಿದ್ದರು. ಸಾಧು ಪುರುಷರ ದರ್ಶನ ಮಾಡಿ ತಮ್ಮ ಮನಃಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಜನ ತೀರ್ಥಯಾತ್ರೆಗಳನ್ನು ಕೈಗೊಳ್ಳುತ್ತಿದ್ದರು. ಅನೇಕ ವೇಳೆ ಅವುಗಳ ಯಾತ್ರೆ ವಿಜಯಯಾತ್ರೆಯಾಗಿ ಪರಿಣಮಿಸುತ್ತಿತ್ತು. ಆ ಕಾಲದಲ್ಲಿ ಎಲ್ಲ ಶ್ರೇಷ್ಠ ಕವಿಗಳಿಗೂ ನಿಯತಗಳಿಗೂ ರಾಜಾಶ್ರಯ ದೊರೆಯುತ್ತಿತ್ತು. ಕೋಖ್ ದೊರೆಗಳು ಕಲೆ ಮತ್ತು ವಿದ್ಯಗಳ ಉದಾರ ಪೋಷಕರಾಗಿದ್ದರು. ರಾಮಸರಸ್ವತಿಯ ನರನಾರಾಯಣ ದೊರೆಯನ್ನು ಕುರಿತು ತನ್ನ ಭಣಿತಗಳಲ್ಲೊಂದರಲ್ಲಿ ಹೇಳಿರುವುದನ್ನು ಓದಿದರೆ ಆ ಕಾಲದ ರಾಜಾಶ್ರಯ ಎಂಥದೆಂಬುದು ಗೊತ್ತಾಗುತ್ತದೆ. ಆತ ಬರೆಯುತ್ತಾನೆ - `ನನ್ನ ಪ್ರಭುವು ಅಸ್ಸಾಮೀ ಪದ್ಯಗಳಲ್ಲಿ ಮಹಾಭಾರತವನ್ನು ಬರೆಯಲು ನನಗೆ ನಿಯಮಿಸಿದ್ದಾನೆ. ರಾಜಾಸ್ಥಾನದಲ್ಲಿದ್ದ ಎಲ್ಲ ವ್ಯಾಖ್ಯಾನಗಳನ್ನೂ ನನ್ನ ಮುಂದೆ ತೆರೆದಿಟ್ಟಿದ್ದಾನೆ. ಗಾಡಿಗಳ ತುಂಬ ಗ್ರಂಥಗಳನ್ನು ನನ್ನ ಅಂಗಳದಲ್ಲಿ ರಾಶಿಹಾಕಿದ್ದಾನೆ. ಸಾಕಷ್ಟು ಹಣ, ಬಟ್ಟೆ, ಉಡಿಗೆತೊಡಿಗೆಗಳು ಸೇವಕರನ್ನು ಕೊಟ್ಟು ಈ ಕಾರ್ಯವನ್ನು ನಡೆಸಲು ಪ್ರೋತ್ಸಾಹಿಸಿದ್ದಾನೆ.'
ಸುಖಾಫಾನ ಮುಂದಾಳುತನದಲ್ಲಿ ಅಹೋಂ ಎಂಬ ಒಂದು ಧಾಳಿಕಾರರ ತಂಡ ಈ ದೇಶದ ಪೂರ್ವಭಾಗವನ್ನು ಮೊದಲು ಜಯಿಸಿ (1215) ಸಂಪೂರ್ಣವಾಗಿ ಆರುನೂರು ವರ್ಷಗಳ ಕಾಲ ತನ್ನ ಆಳ್ವಿಕೆ ನಡೆಸಿತು. ಅಹೋಂ ಪ್ರಭುತ್ವ ಒಳ್ಳೆಯ ಮತ್ತು ಸಮರ್ಥವಾದ ಆಡಳಿತವನ್ನು ಶತಮಾನಗಳ ಕಾಲ ಅಸ್ಸಾಮಿಗೆ ನಿಸ್ಸಂದೇಹವಾಗಿ ಕೊಟ್ಟಿತು. ಅದು ಮುಸಲ್ಮಾನರ ಅನೇಕ ದಾಳಿಗಳನ್ನು ಎದುರಿಸಿ ದೇಶದಲ್ಲಿ ಶಾಂತಿ ಸುಭಿಕ್ಷ ಮತ್ತು ಸುವ್ಯವಸ್ಥೆಗಳನ್ನು ನೆಲೆಗೊಳಿಸಿತು. ಅಸ್ಸಾಮಿನಲ್ಲಿಯೂ ಗಿರಿಜನ ಸೀಮಾಪ್ರಾಂತಗಳಲ್ಲೂ ಏರ್ಪಟ್ಟಿದ್ದ ಅನೇಕ ಪಾಳೆಯಪಟ್ಟುಗಳನ್ನು ನಿರ್ಮೂಲನ ಮಾಡಿತು. ಈ ಪ್ರಕಾರವಾಗಿ ಭೌಗೋಳಿಕವಾಗಿಯೂ ಒಂದೆನಿಸಿದ ಅಹೋಂ ರಾಜ್ಯಭಾರದ ಒಂದು ಪ್ರಧಾನಸಿದ್ಧಿ ಯಾವುದೆಂದರೆ ದೇಶದ ರಾಜಕೀಯ ಐಕ್ಯ. ಇದು ಮುಂದೆ ಸಮಾಜ, ಸಂಸ್ಕøತಿ, ಮತ್ತು ಭಾಷೆಗಳ ಐಕ್ಯವನ್ನು ಸುಗಮವಾಗಿ ಮಾಡಿತು.
ಇದಾದ ಮೇಲೆ, ಅಹೋಂ ರಾಜಗುರು ಗಾರ್‍ಗಾಂವ್, ರಂಗಪುರ, ಜೋರ್‍ಹಾತ್, ಗೌಹಾತಿ ಮತ್ತು ಇತರ ಸ್ಥಳಗಳಲ್ಲಿ ನಿರ್ಮಾಣಮಾಡಿದ ಚಿಕ್ಕದೊಡ್ಡನಗರಗಳು ಹೊಸದೊಂದು ನಾಗರಿಕ ಸಂಸ್ಕøತಿಯನ್ನು ಮೂಡಿಸಿದವು. ಸಿರಿವಂತರೂ ಸೊಗಸುಗಾರರೂ ಆದ ಅಹೋಂ ಶ್ರೀಮಂತವರ್ಗದವರೂ ನಗರವಾಸಿಗಳು ತಮ್ಮ ಸಭ್ಯ ವರ್ತನೆ, ಸಮಾಜ ಮರ್ಯಾದೆ, ಉಡಿಗೆ ತೊಡಿಗೆ, ಜೀವನಕ್ರಮ ಮತ್ತು ವಿದ್ಯೆಗಳಲ್ಲಿ ತಮ್ಮ ನಾಗರಿಕ ಸಂಸ್ಕøತಿಯನ್ನು ಪ್ರಕಟಪಡಿಸುತ್ತಿದ್ದರು. ಈ ಹೊಸ ಸಂಸ್ಕøತಿ ಒಂದೇ ವಿಧವಾದ ಹಳೆಯ ಬದುಕನ್ನು ಬಾಳುತ್ತಿದ್ದ ಸಂಪ್ರದಾಯನಿಷ್ಠರೂ ಜಡರೂ ಆದ ಗ್ರಾಮವಾಸಿಗಳಿಂದ ಇವರನ್ನು ಪ್ರತ್ಯೇಕಿಸಿತು. ಈ ಹೊಸ ನಾಗರಿಕ ಸಮಾಜ, ಚಿಕ್ಕದಾಗಿದ್ದರೂ ಏಕಪ್ರಕಾರವಾಗಿ ಜೀವಿಸುತ್ತಿದ್ದ ಸಮಾಜದ ಜನರ ಕಲ್ಪನಾ ಶಕ್ತಿಯನ್ನು ಪ್ರಚೋದಿಸಿ ಅವರು ಹೊಸ ಭಾವನೆಗಳನ್ನು ಸ್ವೀಕರಿಸಿ ಲೌಕಿಕ ವಿಷಯಗಳನ್ನು ಅದೇ ದೃಷ್ಟಿಯಿಂದ ನೋಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ತಮ್ಮದೇ ಆದ ಸಮಾಜ ಮತ್ತು ಮತಗಳ ಸಣ್ಣಕೂಟಕ್ಕೆ ಅಂಟಿಕೊಳ್ಳದೆ, ಇತರ ಸಂಪರ್ಕವನ್ನು ಹೊಂದಿ ವಿಶಾಲ ದೃಷ್ಟಿಯನ್ನು ಪಡೆಯುವಂತೆ ಪ್ರೇರೇಪಿಸಿತು. ನಾಗರಿಕ ಸಮಾಜ ಜೀವನದ ಉನ್ನತಸ್ತರಗಳಲ್ಲಿ ಬೆಳಗುವ ಕಲೆ, ಸಾಹಿತ್ಯ, ಸಂಗೀತಾದಿಗಳಲ್ಲಿ ಜನರು ಆಸಕ್ತರಾಗುವಂತೆ ಮಾಡಿತು. ರಾಜರೂ ಮಂತ್ರಿಗಳೂ ಶ್ರೀಮಂತರೂ ಕವಿಗಳಿಗೆ ಲೇಖಕರಿಗೂ ಭೂಮಿಯನ್ನು ಕೊಟ್ಟು ಪೋಷಿಸುತ್ತಿದ್ದರು. ಹೀಗೆ ಆಶ್ರಯ ಪಡೆದ ಕವಿಗಳೂ ಲೇಖಕರೂ ತಮ್ಮ ಕವಿತೆಗಳಲ್ಲಿ ಈ ಆಶ್ರಯದಾತರನ್ನು ಹೊಗಳಿದ್ದಾರೆ. ರಾಜರನ್ನೂ ಶ್ರೀಮಂತರನ್ನೂ ಸ್ತುತಿಸುವ ಕವಿತೆಗಳಲ್ಲಿ ಹೊಸದೊಂದು ಲಕ್ಷಣ ಮೂಡಿತು. ಇದು ಕಾಣಿಸಿಕೊಂಡುದು ಅಹೋಂ ರಾಜರ ಉದಾರ ಆಶ್ರಯ ಪಡೆದ ರಾಮಮಿಶ್ರ, ಕವಿರಾಜಚಕ್ರವರ್ತಿ, ರುಚಿನಾಥ ಕಂದಲಿ, ವಿದ್ಯಾಚಂದ್ರ ಕವಿಶೇಖರ ಮುಂತಾದವರ ಪ್ರಭುಗುಣ ಸಂಕೀರ್ತನ ರೂಪವಾದ ಕವಿತೆಗಳಲ್ಲಿ. ಈ ಸ್ತುತಿಕವಿತೆಗಳು ಕೃತಕವಾದ ಸಾಹಿತ್ಯಾಲಂಕಾರಗಳಿಂದ ಮಿರುಗಿ ಕಳಕಳಿಸುತ್ತ ಯಾವ ವರ್ಗದ ಜನಕ್ಕಾಗಿ ಅವು ರಚಿತವಾದುವೋ ಅವರ ಅಭಿರುಚಿಯಂತೆ ರೂಪಿತವಾಗುತ್ತಿದ್ದವು. ಅದರೆ ಅಹೋಂ ರಾಜಸ್ತಾನ ವೈಭವಯುಕ್ತವಾದುದು. ಈ ವೈಭವ ಜನಗಳ ಅಭಿರುಚಿಯನ್ನು ಮಾರ್ಪಡಿಸಿತು. ಆದುದರಿಂದಲೇ ಈ ಕಾಲದ ಕವಿತೆಗಳಲ್ಲಿ ಕೃತಕತೆ ತಲೆದೋರಿದೆ. ವೈಷ್ಣವಯುಗದಲ್ಲಿ ಕವಿತೆ ನೈಜವೂ ಉದಾತ್ತವೂ ಆಗಿತ್ತು, ತಪಸ್ಸು ಮತ್ತು ಅಪರಿಗ್ರಹಗಳನ್ನೇ ಧ್ಯೇಯವಾಗಿಟ್ಟುಕೊಂಡಿದ್ದ ವೈಷ್ಣವ ಸಾಹಿತ್ಯವನ್ನು ವಿಕಾರ ವೈಭವಗಳಿಗೂ ಶೃಂಗಾರ ವಸ್ತುಗಳಿಗೂ ಮಾರುಹೋಗಿದ್ದ ಅಹೋಂ ರಾಜಪರಿವಾರ ಅಡಗಿಸಿತು. ಪ್ರಣಯಕ್ಕೂ ಪ್ರೇಮವಿಲಾಸಕ್ಕೂ ರಾಜಸ್ತಾನ ಆಕರವಾಯಿತು. ರಾಜಕಾರಣಿಗಳು ಭಕ್ತಿಕವಿತೆಗಳಿಂತಲೂ ಹೆಚ್ಚಾಗಿ ಶೃಂಗಾರ ಕವಿತೆಗಳಿಗೇ ಒಲಿದಿದ್ದರು. ಆದುದರಿಂದ ಕವಿಗಳು ಕಾಲ್ಪನಿಕ ಕಥೆಗಳನ್ನು ರಚಿಸಿ ಧಾರ್ಮಿಕ ಕಥೆಗಳಿಗೂ ಕಾಮನಬಿಲ್ಲಿನ ಏಳು ಬಣ್ಣಗಳನ್ನು ಹಚ್ಚುತ್ತಿದ್ದರು. ಪುರಾಣಗಳು ಪ್ರಣಯಕಥೆಗಳ ಗಣಿಗಳಾಗಿದ್ದುದರಿಂದ ಅಹೋಂ ಪ್ರಭುಗಳು ಅವುಗಳನ್ನು ಅಸ್ಸಾಮೀ ಭಾಷೆಗೆ ಪರಿವರ್ತಿಸಲು ಕವಿಗಳನ್ನೂ ಲೇಖಕರನ್ನೂ ಪ್ರೋತ್ಸಾಹಿಸುತ್ತಿದ್ದರು. ವೈಷ್ಣವ ಯುಗಕ್ಕೂ ಅಹೋಂ ಯುಗಕ್ಕೂ ಇರುವ ಗಮನಾರ್ಹ ವ್ಯತ್ಯಾಸವೆಂದರೆ ಮೊದಲನೆಯದರಲ್ಲಿ ದೇವರು ಕೇಂದ್ರವಸ್ತು, ಎರಡನೆಯದರಲ್ಲಿ ಮನುಷ್ಯ. ಸಾಹಿತ್ಯ ಈಗ ಬೇರೆ ಲೋಕವನ್ನು ಕುರಿತುದಾಗಿರಲಿಲ್ಲ, ಧ್ಯೇಯಪರವೂ ಆಗಿರಲಿಲ್ಲ. ವಾಸ್ತವದತ್ತ ಅದು ಮುಖ ಮಾಡಿತ್ತು. ಕವಿತೆಗಳಲ್ಲೂ ಕಾಲ್ಪನಿಕ ಕಥೆಗಳಲ್ಲೂ ನಿತ್ಯ ಜೀವನದ ಸಾಮಾನ್ಯ ಮನುಷ್ಯರೂ ಸ್ತ್ರೀಯರೂ ಕವಿಯ ಗಮನವನ್ನು ತಮ್ಮತ್ತ ಸೆಳೆದಿದ್ದರು.
ಅಹೋಂ ರಾಜಸ್ತಾನದ ಪ್ರಸಂಗಗಳನ್ನು ಚಿತ್ರಸುವ ಬುರಂಜೀಗಳಲ್ಲಿ ಅಸ್ಸಾಮೀ ಸಾಹಿತ್ಯದ ಬಹಳ ಹೆಚ್ಚಿನ ಫಸಲು ಗೋಚರಿಸುತ್ತದೆ. ದೊರೆಗಳು, ಸಾಮಂತ ರಾಜರು ಮತ್ತು ರಾಜ್ಯದ ಉನ್ನತಾಧಿಕಾರಿಗಳ ನಿಯಮದ ಮೇರೆಗೆ ಬುರಂಜಿಗಳು ಸಂಕಲಿತವಾಗುತ್ತಿದ್ದವು. ಏಕೆಂದರೆ ಈ ಪ್ರಸಂಗಗಳಿಗೆ ಆಧಾರವಾಗಿರುವ ಸರ್ಕಾರದ ಕಾಗದ ಪತ್ರಗಳನ್ನು ನೋಡಲು ಇವರ ಅನುಮತಿ ಅಗತ್ಯವಾಗಿತ್ತು. ಕಾಗದ ಪತ್ರಗಳು ಯಾವುವೆಂದರೆ, ಸೈನ್ಯಾಧಿಪತಿಗಳೂ ಗಡಿನಾಡಿನ ರಾಜ್ಯಪಾಲರೂ ಕಾಲಕಾಲಕ್ಕೆ ರಾಜಸ್ತಾನಕ್ಕೆ ಕಳುಹಿಸುತ್ತಿದ್ದ ವರದಿಗಳು, ಪರದೇಶದ ರಾಜರು ಮತ್ತು ಮಿತ್ರರಿಂದ ಬರುವ ಹಾಗೂ ಅವರಿಗೆ ಕಳುಹಿಸುವ ರಾಜಕೀಯ ಪತ್ರಗಳು, ಪ್ರಭುಗಳಿಗೂ ಮಂತ್ರಿಗಳಿಗೂ ಅದರ ಕೊನೆಯ ತೀರ್ಮಾನಕ್ಕಾಗಿ ಕೆಳಗಿನಿಂದ ಕಳಿಸುವ ನ್ಯಾಯ ಮತ್ತು ಆದಾಯಗಳಿಗೆ ಸಂಬಂಧಪಟ್ಟ ಕಾಗದಪತ್ರಗಳು, ರಾಜಸ್ತಾನದ ಸಮಸ್ತ ದೈನಂದಿನ ವ್ಯವಹಾರಗಳನ್ನೂ ಜರುಗಿದ ಕಾರ್ಯಗಳನ್ನೂ ಮುಖ್ಯ ಹೇಳಿಕೆಗಳನ್ನೂ ವಿಶ್ವಾಸಾರ್ಹರ ಪ್ರತ್ಯಕ್ಷ ಸಂಗತಿಗಳ ವರದಿಗಳನ್ನೂ ಒಳಗೊಂಡಿರುವ ದಾಖಲೆಗಳು. ಅಸ್ಸಾಮೀ ಸಾಹಿತ್ಯದಲ್ಲಿ ಹಿಂದೆಂದೂ ಕಾಣದ ಸುವರ್ಣಾಧ್ಯಾಯಗಳನ್ನೊಳಗೊಂಡಿದೆ, ಈ ಬುರಂಜಿಗಳು. ಇವುಗಳ ಮೂಲಕವೇ ಆಧುನಿಕ ಅಸ್ಸಾಮೀ ಗದ್ಯ ತನ್ನ ಸಂಪೂರ್ಣ ಸಜ್ಜಿನಲ್ಲಿ ಮೈದೋರುತ್ತದೆ. ಈ ಅಸದೃಶವಾದ ಐತಿಹಾಸಿಕ ಸಾಹಿತ್ಯ ಸಂಗತಿಗಳ ಬಗ್ಗೆ ಸರ್ ಜಿ. ಎ. ಗ್ರಿಯರ್‍ಸನ್ `ಅಸ್ಸಾಮೀಗಳು ತಮ್ಮ ರಾಷ್ಟ್ರೀಯ ಸಾಹಿತ್ಯದ ವಿಷಯದಲ್ಲಿ ನ್ಯಾಯವಾಗಿಯೇ ತುಂಬ ಅಭಿಮಾನಶಾಲಿಗಳಾಗಿದ್ದಾರೆ. ಭಾರತದ ಎಲ್ಲ ಕಡೆಗಳಲ್ಲೂ ಯಾವ ಕೊರತೆ ಕಾಣುತ್ತದೋ ಆ ಸಾಹಿತ್ಯ ಶಾಖೆಯಲ್ಲೇ ಅಸ್ಸಾಮೀ ಜನರು ಶ್ರೀಮಂತರಾಗಿರುವುದು ಒಂದು ಸೋಜಿಗದ ಸಂಗತಿ. ಐತಿಹಾಸಿಕ ಕೃತಿಗಳಾದ ಬುರುಂಜೀಗಳು ಅನೇಕವಾಗಿವೆ; ಇವುಗಳ ಗಾತ್ರ ತುಂಬ ದೊಡ್ಡದು. ಅಸ್ಸಾಮೀ ಗೃಹಸ್ಥನಿಗೆ ಬುರುಂಜೀಗಳ ತಿಳುವಳಿಕೆ ಅತ್ಯಾವಶ್ಯಕ ಎಂದಿದ್ದಾನೆ.
ಬುರಂಜೀಗಳ ಸಂಕಲನ ಒಂದು ಪವಿತ್ರಕಾರ್ಯವೆನಿಸಿತ್ತಾದ್ದರಿಂದ ಅದರ ಬರವಣಿಗೆಯನ್ನು ದೇವತಾಸ್ತುತಿಯಿಂದ ಪ್ರಾರಂಭಿಸುವುದು ರೂಢಿಯಾಗಿದೆ. ಸಾಮಾನ್ಯವಾಗಿ ರಾಜ್ಯದ ವ್ಯವಹಾರವನ್ನು ಸಮಗ್ರವಾಗಿ ಬಲ್ಲ ಜನಗಳೇ ಇವನ್ನು ರಚಿಸಲು ತೊಡಗುತ್ತಿದ್ದರು. ಈಗ ಉಪಲಬ್ಧವಾಗಿರುವ ಅನೇಕ ಬುರುಂಜೀಗಳನ್ನು ಬರೆದವರು ಸರ್ಕಾರದ ಉನ್ನತಾಧಿಕಾರಿಗಳಾಗಿದ್ದವರು. ಆದುದರಿಂದ ಈ ಇತಿಹಾಸಗಳ ಭಾಷೆ ಬಹಳ ಗಂಭೀರವಾಗಿದೆ, ನಾಜೂಕಾಗಿದೆ. ಇವು ವಾಸ್ತವ ಸಂಗತಿಗಳ ವರದಿಗಳಾಗಿರುವುದರಿಂದ ಇವನ್ನು ಭಾವೋದ್ರೇಕಗಳಿಲ್ಲದ ನಿರಾಲಂಕಾರಿಕ ಮಾತುಗಳಲ್ಲಿ ಬರೆಯಲಾಗಿದೆ. ನೇರವೂ ಸರಳವೂ ಅಸಂದಿಗ್ಧವೂ ಆದ ಮಾತುಗಳಲ್ಲಿ ಈ ಗ್ರಂಥಗಳು ಮನೋಹರವಾಗಿ ನಮ್ಮ ಮೆಚ್ಚುಗೆಯನ್ನು ಗಳಿಸುತ್ತವೆ. ಗದ್ಯದಲ್ಲೋ ಪದ್ಯದಲ್ಲೋ ರಚಿತವಾಗಿರುವ ಮತ್ತೊಂದು ಸಾಹಿತ್ಯ ಪ್ರಕಾರವಿದೆ. ಅದನ್ನು ಸಾಮಾನ್ಯವಾಗಿ ವಂಶಾವಳಿ ಎಂದು ಕರೆಯುತ್ತಾರೆ. ರಾಜರ ವಿವಿಧ ವಂಶಾವಳಿಯ ಚರಿತ್ರೆಯನ್ನು ಉಲ್ಲೇಖಿಸಿರುವುದರ ಜೊತೆಗೆ ವಂಶಾವಳಿಗಳು ಪ್ರಮುಖರಾದ ಶ್ರೀಮಂತರ ಜೀವನಚರಿತ್ರೆ ಮತ್ತು ಪುರೋಭಿವೃದ್ಧಿಗಳನ್ನೂ ನಮೂದಿಸುತ್ತವೆ. ರಾಜರಿಂದ ದತ್ತಿಗಳನ್ನೋ ಅಧಿಕಾರಿಗಳನ್ನೋ ಪಡೆಯುವ ಸಲುವಾಗಿ ಮತ್ತು ಇತರ ಕಾರಣಗಳಿಂದ ಇತರ ಶ್ರೀಮಂತವಂಶಗಳ ಚರಿತ್ರೆಯನ್ನು ಬರೆದಿಡುವುದು ಮುಖ್ಯವೆನಿಸಿತು. ಈ ಪ್ರಕಾರವಾಗಿ ಬುರಂಜೀಗಳಲ್ಲಿ ಕಂಡುಬರದ ಸಂಗತಿಗಳನ್ನು ಈ ವಂಶಾವಳಿ ತುಂಬಿಕೊಡುತ್ತದೆ. ಇಂಥ ಒಂದು ವಂಶಾವಳಿ ಹದಿನೆಂಟನೆಯ ಶತಮಾನದ ಉತ್ತರಾರ್ಧದ ಡರ್ರಂಗಿನ ಕೋಖ್ ಅರಸ ಸಮುದ್ರನಾರಾಯಣ ಆಶ್ರಯದಲ್ಲಿದ್ದ ಸೂರ್ಯಖರಿ ದೈವಜ್ಞನಿಂದ ಪದ್ಯದಲ್ಲಿ ರಚಿತವಾದ ಡರ್ರಂಗ್-ರಾಜವಂಶಾವಳಿ ಎಂಬುದು. ಈ ಪುಸ್ತಕದ ಮೂಲಪ್ರತಿ ಚಿತ್ರಗಳಿಂದ ಅಲಂಕೃತವಾಗಿದೆ. ಇದು ಕೋಖ್ ಪ್ರಭುಗಳ ಪೂರ್ವೇತಿಹಾಸವನ್ನು ತಿಳಿದುಕೊಳ್ಳಬಯಸುವವರಿಗೆ ಅಮೂಲ್ಯವಾದ ಆಕರವಾಗಿದೆ. ಎಂದು ಡಾ. ಎಸ್. ಕೆ. ಭೂಯನ್ ಬರೆಯುತ್ತಾನೆ.
ದೊರೆಗಳ ಆಸರೆಯಲ್ಲಿ ಪವಿತ್ರವೂ ಧಾರ್ಮಿಕವೂ ಅಲ್ಲದ ಅನೇಕ ಇತರ ಸಂಸ್ಕøತ ಗ್ರಂಥಗಳು ಅಸ್ಸಾಮೀ ಗದ್ಯಕ್ಕೆ ಭಾಷಾಂತರಗೊಂಡವು ಅವು ವೈದ್ಯ, ಜ್ಯೋತಿಷ, ಗಣಿತ, ನೃತ್ಯ ಮತ್ತು ಶಿಲ್ಪಗಳಿಗೆ ಸಂಬಂಧಪಟ್ಟಿದೆ. ಈ ಗ್ರಂಥಗಳಲ್ಲಿ ಮೊದಲಬಾರಿಗೆ ಅಸ್ಸಾಮೀ ಗದ್ಯ ಶಾಸ್ತ್ರಲೇಖನ ಒದಗಿಬಂದಿದೆ. ಈ ಬರಹಗಳು ಆಧುನಿಕ ವೈಜ್ಞಾನಿಕ ವಿಷಯಗಳನ್ನು ತಿಳಿಸಲು ಪ್ರಯುಕ್ತವಾಗುವ ಗದ್ಯಕ್ಕೆ ಮೇಲುಪಂಕ್ತಿಯಾಗಿವೆ. ಇವುಗಳಲ್ಲಿ ಮುಖ್ಯವಾದುದು ಸುಕುಮಾರ ಬರ್‍ಕಾತ್ ಎಂಬಾತನ ಹಸ್ತಿವಿದ್ಯಾರ್ಣವ ಎಂಬ ಗ್ರಂಥ. ಈ ಸಚಿತ್ರ ಪುಸ್ತಕ ಕ್ರಿ.ಶ. 1754ರಲ್ಲಿ ಶಿವಸಿಂಗ್ ಎಂಬ ಮಹಾರಾಜ ಮತ್ತು ಆತನ ರಾಣಿ ಅಂಬಿಕಾದೇವಿಯರ ಅಪ್ಪಣೆಯ ಮೇರೆಗೆ ರಚಿತವಾಯಿತು.ವೈದ್ಯಶಾಸ್ತ್ರ ಗ್ರಂಥಗಳ ಜೊತೆಗೆ ಜ್ಯೋತಿಷ್ಯ ಮತ್ತು ಭವಿಷ್ಯ ವಿಜ್ಞಾನಗಳ ಮೇಲೆ ಸಂಸ್ಕøತದಲ್ಲೂ ಅಸ್ಸಾಮೀ ಭಾಷೆಯಲ್ಲೂ ಗ್ರಂಥಗಳು ರಚಿತವಾದವು. ಕಾಯಿಲೆಗಳನ್ನುಂಟುಮಾಡುವ ಗ್ರಹಗತಿಗಳ ಸ್ವಭಾವವನ್ನು ತಿಳಿದುಕೊಳ್ಳುವುದು ಆವಶ್ಯಕವಾದ ಪ್ರಯುಕ್ತ ವೈದ್ಯಶಾಸ್ತ್ರ ಗ್ರಂಥಗಳಲ್ಲೂ ಜ್ಯೋತಿಷ್ಯದ ಮೇಲಣ ಅಧ್ಯಾಯಗಳು ಸಂಗತವಾಗಿವೆ.ಕಾಯಿಲೆಯ ಕಾರಣವನ್ನು ತಿಳಿಯುವುದಕ್ಕೂ ಗುಣಪಡಿಸುವುದಕ್ಕೂ ಭವಿಷ್ಯ ಜ್ಞಾನವನ್ನು ಆಶ್ರಯಿಸಲಾಗಿತ್ತು. ಕಾಯಿಲೆಗಳನ್ನು ಗುಣಪಡಿಸಲು ಮಾಟಮಂತ್ರಗಳನ್ನು ಪ್ರಯೋಗಿಸಲಾಗಿತ್ತು. ಕಾಯಿಲೆ ಬರಿಸುವ ಭೂತ ಪ್ರೇತ ಪಿಶಾಚಿಗಳನ್ನು ಬಿಡಿಸಲೂ ಹಾವಿನ ವಿಷವನ್ನಿಳಿಸಲೂ ಕೆಟ್ಟಕನಸುಗಳ ಕೇಡುಗಳನ್ನು ಪರಿಹರಿಸಲೂ ವಿಪತ್ತಿನಿಂದ ಪಾರಾಗಲೂ ಹೊಲಗದ್ದೆಗಳನ್ನು ಹಾಳುಮಾಡುವ ಕ್ರಿಮಿಕೀಟ ಮೃಗಪಕ್ಷಿಗಳನ್ನು ನಾಶಪಡಿಸಲು ಮನೆಯ ಏಳಿಗೆ, ದವಸ ಧಾನ್ಯ ಸಮೃದ್ಧಿ, ಮತ್ತು ಇತರ ನೂರೊಂದು ಆಕಾಂಕ್ಷೆಗಳಿಗಾಗಿಯೂ ಮಂತ್ರಗಳನ್ನೂ ಪ್ರಯೋಗಿಸಲಾಗುತ್ತಿತ್ತು. ಅಹೋಂ ವೃತ್ತಾಂತಗಳೂ ಮುಸ್ಲಿಂ ಇತಿಹಾಸಲೇಖಕರೂ ವರದಿಗಳೂ ತಿಳಿಸುವ ಹಾಗೆ, ಮಾಟಮಂತ್ರಗಳಿಂದ ಕೆಲವು ಅಧಿಕಾರಿಗಳು ಮರಣಕ್ಕೀಡಾದರೆಂಬುದು ಕಂಡುಬರುತ್ತದೆ. ಆಳುವರಸನ ಆಡಳಿತವನ್ನು ಮುರಿಯುವುದಕ್ಕಾಗಿ ಸಂಚು ನಡೆಸಿದವರನ್ನು ನ್ಯಾಯಸ್ಥಾನದಲ್ಲಿ ತನಿಖೆಗೆ ಒಳಪಡಿಸಿದುದನ್ನು ಉಲ್ಲೇಖಿಸುವ ಅಹೋಂ ಬುರಂಜೀಯಲ್ಲಿ ಒಬ್ಬನ ಸಾಕ್ಷ್ಯವನ್ನು ಈ ರೀತಿಯಲ್ಲಿ ಬರೆಯಲಾಗಿದೆ: `ಒಬ್ಬ ಬಗನ ಹತ್ತಿರ ಒಂದು ಹಳೆಯ ಪುಥಿ (ಪುಸ್ತಕ) ಇದೆ. ಅದು ರಾಜನನ್ನೂ ಆತನ ಪ್ರಜೆಗಳನ್ನು ಅಡಗಿಸುತ್ತದೆ ಎಂಬ ವಿಷಯ ಯಾರಿಂದಲೋ ತಿಳಿದು ಬಂದಿದೆ.' ಈ ಕಾರಣದಿಂದ, ಮಂತ್ರಗಳ ಮೇಲೆ ಪದ್ಯದಲ್ಲೂ ಗದ್ಯದಲ್ಲೂ ಒಂದು ರಾಶಿ ಬರಹಗಳು ರಚಿತವಾಗಿವೆ. ಮಂತ್ರ ಸಾಹಿತ್ಯದ ಗಾತ್ರ ಮತ್ತು ವೈವಿಧ್ಯಗಳ ಲಕ್ಷಣವನ್ನು ಸ್ವಲ್ಪ ಮಟ್ಟಿಗೆ ಈ ಹೆಸರುಗಳಿಂದ ತಿಳಿದುಕೊಳ್ಳಬಹುದು: ಸಾಪರ್-ಧರಣೀ-ಮಂತ್ರ, ಸರ್ವಧಾಕ್ ಮಂತ್ರ, ಕಾಮರತ್ನತಂತ್ರ, ಭೂತರ್‍ಮಂತ್ರ, ಖೇತ್ರಮಂತ್ರ ಈ ಪಟ್ಟಿಯನ್ನು ಸರಾಗವಾಗಿ ಬೆಳೆಸಬಹುದು. ಮಾಟಮಂತ್ರ, ಬೂಟಾಟಿಕೆ, ಒಗಟು ಮುಂತಾದವುಗಳಿಗೆ ಯಾವ ಸಾಹಿತ್ಯ ಮೌಲ್ಯವೂ ಇಲ್ಲ. ಆದರೆ ಸಮಾಜದ ಅವನತಿ, ಜನರನ್ನು ಮರಳು ಮಾಡುವ ಗ್ರಾಮ್ಯ ನಂಬಿಕೆ, ಮತ್ತು ಜನರಲ್ಲಿ ಹರಡಿರುವ ಮೂಢನಂಬಿಕೆ ಇವುಗಳ ಸ್ವರೂಪವನ್ನು ತಿಳಿಸುವ ಈ ಬರೆಹ ಕುತೂಹಲಜನಕವಾಗಿವೆ.
ಒಟ್ಟಿನಲ್ಲಿ ಅಹೋಂ ಆಳ್ವಿಕೆಯ ಆರುನೂರು ವರ್ಷಗಳಲ್ಲಿ ಜನಜೀವನದ ಎಲ್ಲ ಶಾಖೆಗಳೂ ಬಹು ಬೇಗ ಅಭಿವೃದ್ಧಿ ಹೊಂದಿರುವ ದೃಶ್ಯ ಗೋಚರಿಸುತ್ತದೆ. ಈ ಹಿಂದೆ ಗಮನಿಸಿದಂತೆ, ಈ ಕಾಲದ ವಿಶೇಷ ಲಕ್ಷಣಗಳಾವುವೆಂದರೆ, ದೇಶ ಭೌಗೋಳಿಕವಾಗಿ ಒಂದು ಕ್ಷೇತ್ರವೆನಿಸಿ ಸಾಮಾಜಿಕವಾಗಿ ಒಂದು ಜನವೆನಿಸಿದುದು, ರಾಜಕೀಯ ಸಂಸ್ಥೆಗಳು ದೃಢವಾಗಿ ನೆಲೆಗೊಂಡುದು, ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಪ್ರಕ್ರಮಗಳು ಸುವ್ಯವಸ್ಥಿತವಾದುದು ಮತ್ತು ಕೊನೆಯದಾಗಿ ಒಂದು ಜನಾಂಗ ಉದಿಸಿದುದು. ಮುಘಲರ ಇಸ್ಲಾಂ ಪ್ರವೇಶ, ದೊರೆಗಳ ರಾಜ್ಯವಿಸ್ತರಣೋತ್ಸಾಹ, ಮತ್ತು ನಾಡಿನಲ್ಲಿ ಉಂಟಾದ ಜನಜಾಗೃತಿ ಮುಂತಾದ ಅನೇಕ ಅಂಶಗಳು ಈ ಜನಾಂಗವನ್ನು ಬೆಳೆಸಿವೆ. ಆ ಕಾಲದಲ್ಲಿ ಜನರ ಮನಸ್ಸು ವಿಚಾರಶೀಲವಾಗಿತ್ತಾದುದರಿಂದ ಆ ಮನೋಭಾವ ಆ ಕಾಲದ ಕಲೆ ಮತ್ತು ಸಾಹಿತ್ಯದ ಮೇಲೆ ತನ್ನ ಪ್ರಭಾವ ಬೀರಿ ಜನಜೀವನವನ್ನು ಮಧುರವಾಗಿಸಿತ್ತು.ಆಗಿನ ಅನೇಕ ಕೈಬರಹದ ಪುಸ್ತಕಗಳಿಂದ ಮಾತ್ರ ಆ ಕಾಲದ ಬುದ್ಧಿ ಮತ್ತು ಕಲೆಗಳ ಮೂರ್ತಸ್ವರೂಪವನ್ನು ಅರಿಯಬಹುದು. ಕೈಬರಹದ ಪ್ರತಿಗಳ ತಯಾರಿಕೆಗೆ ಕಲಾಸಾಮಥ್ರ್ಯ ಅಕ್ಷರಸಂಯೋಜನ ಸಾಮಥ್ರ್ಯ ಮತ್ತು ಲೇಖನಕೌಶಲ ಅವಶ್ಯಕವಾಗಿದ್ದವು. ಅವುಗಳ ರಚನೆಯೇ ಆ ಕಾಲದ ಒಂದು ಸಿದ್ಧಿ ಎಂದು ಹೇಳಬಹುದು. ಕೈಬರಹದ ಪ್ರತಿಯನ್ನು ತಯಾರಿಸುವುದು ಕಷ್ಟದ ಕೆಲಸ. ಅದಕ್ಕೆ ವಿರಾಮ ಬೇಕು. ಹಣವಿದ್ದ ಹೊರತು ಕೈಬರೆಹದ ಪ್ರತಿಗಳನ್ನು ಬಹಳವಾಗಿ ತಯಾರಿಸುವುದು ಅಸಾಧ್ಯ. ರಾಜಸ್ಥಾನದಲ್ಲಿ ತಯಾರಾದ ಪ್ರತಿಯೊಂದು ಕೈಬರೆಹದ ಗ್ರಂಥವೂ ತಮ್ಮ ಅಂದವಾದ ಲಿಪಿಗಳಿಂದಲೂ ಮತ್ತು ಆ ಪದಗಳನ್ನು ಯಾವುದರ ಮೇಲೆ ಬರೆಯುತ್ತಾರೋ ಆ ವಸ್ತುವಿನಿಂದಲೂ ಈಗಲೂ ಅಮೂಲ್ಯವಾದ ಕಲಾ ನಿಧಿಯೆನಿಸಿದೆ.
ಕೈಬರಹದ ಪ್ರತಿಗಳ ಉತ್ಪಾದನೆಯ ಸಂಗಡವೇ ವರ್ಣಚಿತ್ರಗಳ ಕಲೆಯೂ ಬರುತ್ತದೆ ಎಂಬುದನ್ನು ಮರೆಯಬಾರದು. ಆ ಕಾಲದಲ್ಲಿ ಬಹು ಸುಂದರ ಚಿತ್ರಗಳಿಂದ ಅಲಂಕೃತವಾದ ಕೈಬರೆಹದ ಪ್ರತಿಗಳು ಯಾವುವೆಂದರೆ: ಗೀತಗೋವಿಂದ, ಶಂಖಾಸುರವಧ, ಭಾಗವತ, ಡರಂಗ ರಾಜವಂಶಾವಳಿ, ಹಸ್ತಿವಿದ್ಯಾರ್ಣವ ಎಂಬ ಗ್ರಂಥಗಳು. ಕೈಬರಹದ ಪ್ರತಿಗಳಲ್ಲಿನ ವರ್ಣಚಿತ್ರಗಳು ಧಾರ್ಮಿಕ ಚಿತ್ರಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅವುಗಳಲ್ಲಿ ರಾಜರು ಮತ್ತು ರಾಜಾಸ್ಥಾನಗಳ ಚಿತ್ರಗಳೂ ಇದ್ದವು.ಅದರ ಸಾಹಿತ್ಯ ಚರಿತ್ರೆಯ ನಿಲುವಿನಲ್ಲಿ ಆ ಕಾಲದ ವಿಶೇಷ ಲಕ್ಷಣಗಳಾವುವೆಂದರೆ: ಗದ್ಯ ಮತ್ತು ಲೌಕಿಕ ಸಾಹಿತ್ಯದ ಬೆಳವಣಿಗೆ, ಅದರಲ್ಲೂ ರಾಜರು ಮತ್ತು ಸಾಧುಗಳನ್ನು ಮೇಲೇರಿಸುವ ಪ್ರವೃತ್ತಿ ಮತ್ತು ವೈಜ್ಞಾನಿಕ ಕೌತುಕೋದಯ. ಗದ್ಯದ ಜೊತೆಗೆ ವಿವಿಧ ಉಪಯುಕ್ತ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿ ಆಸಕ್ತಿಯೂ ಸಹಜವಾಗಿಯೇ ಮೂಡಿಬಂತು. ಈ ದಿಸೆಯಲ್ಲಿನ ಪ್ರಗತಿಗೆ ಗಣಿತ ಮತ್ತು ಶಿಲ್ಪಶಾಸ್ತ್ರಗಳ ವ್ಯಾಸಂಗ ಮೊದಲ ಹೆಜ್ಜೆಯಾಯಿತು. ಜ್ಯೋತಿಷ್ಯದೊಂದಿಗೆ ಖಗೋಳವಿಜ್ಞಾನದ ವ್ಯಾಸಂಗವೂ ನಡೆಯುತ್ತಿತ್ತು. ಜ್ಯೋತಿಷ್ಯ ಗ್ರಂಥಗಳಲ್ಲಿ ಗ್ರಂಥಕರ್ತರು ಗ್ರಹಗಳ ಗತಿಗಳನ್ನೂ ಪ್ರಕೃತಿ ವ್ಯಾಪಾರಗಳನ್ನೂ ತಮ್ಮ ತಿಳುವಳಿಕೆಯ ಮಿತಿಯಲ್ಲಿ ಶ್ಲಾಘ್ಯವಾಗಿ ವರ್ಣಿಸುತ್ತಿದ್ದರು. ಆಯುರ್ವೇದ ಗ್ರಂಥಗಳಲ್ಲಿ ಔಷಧಕ್ಕೆ ಒದಗುವ ಮೂಲಿಕೆಗಳು ಮತ್ತು ಪ್ರಾಣಿಗಳ ಬಗೆಗೆ ಗೋಚರವಾದ ವಿಷಯಗಳು, ಚಿಕಿತ್ಸಾ ಕ್ರಮಗಳು ಮತ್ತು ಔಷಧಗಳು ಸೇರಿದ್ದವು. ಹೀಗೆ ಅಸ್ಸಾಮೀ ಸಾಹಿತ್ಯಕ್ಷೇತ್ರದ ಪರಾಮರ್ಶೆ ಮಾಡಿದರೆ ಭಾರತದ ಇತರ ಭಾಗಗಳಲ್ಲಿ ಕಾಲಕಾಲಕ್ಕೆ ಕಂಡುಬರುವ ಸ್ಫೂರ್ತಿ, ಉತ್ಸಾಹ, ಪ್ರಚೋದನೆಗಳೊಡನೆ ದೇಸೀಯ ಪ್ರವೃತ್ತಿಗಳೂ ಮಿಳಿತವಾಗಿ ಈ ಸಾಹಿತ್ಯ ಬೆಳೆದಿರುವುದು ಕಂಡುಬರುತ್ತದೆ.