ಆನೆಗಳು ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬುದ್ಧಿವಂತ ಜೀವಿಗಳಾಗಿವೆ. ಸುಮಾರು ೫ ಕೆಜಿಯಷ್ಟು(೧೧ ಪೌಂಡು) ತೂಕವಿರುವ ಆನೆಯ ಮಿದುಳು ಇತರ ಯಾವುದೇ ಭೂವಾಸಿ ಪ್ರಾಣಿಗಿಂತ ದೊಡ್ಡದಾಗಿದೆ. ಅತಿ ದೊಡ್ಡ ತಿಮಿಂಗಿಲಗಳು ಆನೆಗಳಿಗಿಂತ ಇಪ್ಪತ್ತು-ಪಟ್ಟು ಹೆಚ್ಚು ದೇಹ ತೂಕವನ್ನು ಹೊಂದಿದ್ದರೂ, ಅವುಗಳ ಮಿದುಳುಗಳು ಆನೆಗಳ ಮಿದುಳುಗಳಿಗಿಂತ ಕೇವಲ ಎರಡು ಪಟ್ಟು ದೊಡ್ಡದಾಗಿರುತ್ತವೆ. ಆನೆಯ ಮಿದುಳು ರಚನೆ ಮತ್ತು ಸಂಕೀರ್ಣತೆಯಲ್ಲಿ ಮಾನವನ ಮಿದುಳಿನಂತೆಯೇ ಇರುತ್ತದೆ - ಉದಾ, ಆನೆಯ ಮಿದುಳಿನ ಹೊರಪದರವು ಮಾನವನ ಮಿದುಳಿನಷ್ಟೇ ನರಗಳನ್ನು ಹೊಂದಿದೆ,[೧] ಇದು ಅಭಿಗಾಮಿ ವಿಕಾಸವನ್ನು ಸೂಚಿಸುತ್ತದೆ.[೨] ಆನೆಗಳು ವಿಭಿನ್ನ ರೀತಿಯ ವರ್ತನೆಗಳನ್ನು ವ್ಯಕ್ತಪಡಿಸುತ್ತವೆ, ಅವುಗಳೆಂದರೆ ದುಃಖ, ಕಲಿಕೆ, ತಾಯಿಯಲ್ಲದ ಪೋಷಣೆ, ಅನುಕರಣೆ, ಕಲೆ, ಆಟ, ಹಾಸ್ಯಪ್ರಜ್ಞೆ, ಪರೋಪಕಾರ ಬುದ್ಧಿ, ಸಾಧನಗಳ ಬಳಕೆ, ಅನುಕಂಪ, ಸಹಕಾರ,[೩] ಸ್ವ-ಜಾಗೃತಿ, ಜ್ಞಾಪಕ ಶಕ್ತಿ ಮತ್ತು ಪ್ರಾಯಶಃ ಭಾಷೆ.[೪] ಹೆಚ್ಚು ಬುದ್ಧಿವಂತ ಜೀವಿಗಳು ತಿಮಿವರ್ಗದ ಪ್ರಾಣಿಗಳು[೫][೬][೭][೮] ಮತ್ತು ಪ್ರೈಮೇಟ್‌ಗಳೆಂದು ಭಾವಿಸಲಾಗಿದೆ.[೬][೯][೧೦] ಆನೆಗಳ ಹೆಚ್ಚು ಬುದ್ಧಿವಂತಿಕೆ ಮತ್ತು ಪ್ರಬಲ ಕುಟುಂಬ ಸಂಬಂಧದಿಂದಾಗಿ ಕೆಲವು ಸಂಶೋಧಕರು ಇವುಗಳನ್ನು ಮಾನವರಿಂದ ಪ್ರತ್ಯೇಕಿಸುವುದು ನೈತಿಕವಾಗಿ ತಪ್ಪು ಎಂದು ವಾದಿಸುತ್ತಾರೆ.[೧೧] ಆನೆಗಳು "ಬುದ್ಧಿ ಮತ್ತು ಜ್ಞಾಪಕ ಶಕ್ತಿಯಲ್ಲಿ ಇತರೆ ಜೀವಿಗಳನ್ನು ಮೀರಿಸುವ ಪ್ರಾಣಿಗಳಾಗಿವೆ"ಯೆಂದು ಒಮ್ಮೆ ಅರಿಸ್ಟಾಟಲ್ ಹೇಳಿದ್ದಾರೆ.[೧೨]
ಆನೆಗಳು (ಏಷ್ಯನ್ ಮತ್ತು ಆಫ್ರಿಕನ್ ಎರಡೂ) ಅತಿ ದೊಡ್ಡ ಮತ್ತು ಹೆಚ್ಚು ಸುರುಳಿಸುತ್ತಿಕೊಂಡಿರುವ ನಿಯೊಕಾರ್ಟೆಕ್ಸ್ಅನ್ನು ಹೊಂದಿರುತ್ತವೆ, ಈ ವಿಶೇಷ ಲಕ್ಷಣವನ್ನು ಮಾನವರು, ಕಪಿಗಳು ಮತ್ತು ಕೆಲವು ಡಾಲ್ಫಿನ್ ಜಾತಿಗಳೂ ಹೊಂದಿರುತ್ತವೆ. ಇದು ಸಂಕೀರ್ಣ ಬುದ್ಧಿಶಕ್ತಿಯ ಸಂಕೇತವೆಂದು ವಿಜ್ಞಾನಿಗಳು ಹೇಳುತ್ತಾರೆ. ಇದು ವ್ಯಾಪಕವಾಗಿ ನಂಬಲಾದ ನಂಬಿಕೆಯಾಗಿದ್ದರೂ, ಇದಕ್ಕೆ ಹೊರತಾದ ಉದಾಹರಣೆಯೊಂದಿದೆ: ಇಕಿಡ್ನವು ಹೆಚ್ಚಾಗಿ ಬೆಳೆದ ಮಿದುಳನ್ನು ಹೊಂದಿದೆ, ಆದರೂ ಇದನ್ನು ಬುದ್ಧಿವಂತ ಪ್ರಾಣಿಯೆಂದು ಪರಿಗಣಿಸಲಾಗುವುದಿಲ್ಲ.[೧೩] ಅಸ್ತಿತ್ವದಲ್ಲಿರುವ ಎಲ್ಲಾ ಭೂವಾಸಿ ಪ್ರಾಣಿಗಳ ಗ್ರಹಣ ಶಕ್ತಿಯ ಪ್ರಕ್ರಿಯೆಗಾಗಿ ಲಭ್ಯಯಿರುವ ಮಿದುಳಿನ ಹೊರಪದರವು ಏಷ್ಯನ್ ಆನೆಗಳಲ್ಲಿ ದೊಡ್ಡ ಗಾತ್ರದಲ್ಲಿರುತ್ತದೆ. ಆನೆಗಳ ಗ್ರಹಣ ಶಕ್ತಿಯ ಪ್ರಕ್ರಿಯೆಗೆ ಅಗತ್ಯವಾದ ಮಿದುಳಿನ ಹೊರಪದರದ ಗಾತ್ರವು ಪ್ರೈಮೇಟ್ ಜೀವಿಗಳ ಮಿದುಳಿನ ಹೊರಪದರಕ್ಕಿಂತ ದೊಡ್ಡದಾಗಿದೆ. ವ್ಯಾಪಕ ಅಧ್ಯಯನಗಳು ಸಲಕರಣೆಗಳ ಬಳಕೆ ಮತ್ತು ತಯಾರಿಕೆಯ ಅರಿವಿನ ಆಧಾರದಲ್ಲಿ ಆನೆಗಳನ್ನು ದೊಡ್ಡ ಕಪಿಗಳ ವರ್ಗಕ್ಕೆ ಸೇರಿಸುತ್ತವೆ.[೯] ಆನೆಯ ಮಿದುಳು ಮಾನವರು, ಪ್ರೈಮೇಟ್‌ಗಳು ಅಥವಾ ಮಾಂಸಾಹಾರಿಗಳಿಗಿಂತ ಹೆಚ್ಚು ಸಂಕೀರ್ಣವಾದ ಮತ್ತು ಅಸಂಖ್ಯಾತ ಸುರುಳಿಗಳನ್ನು ಹೊಂದಿರುವ ಗಿರಲ್ ಮಾದರಿಯೊಂದನ್ನು ಹೊಂದಿರುತ್ತದೆ, ಆದರೆ ತಿಮಿವರ್ಗದ ಪ್ರಾಣಿಗಳಿಗಿಂತ ಕಡಿಮೆ ಸಂಕೀರ್ಣವಾಗಿರುತ್ತದೆ.[೧೪] ಆದರೆ ಆನೆಯ ಮಿದುಳಿನ ಹೊರಪದರವು ತಿಮಿವರ್ಗದ ಪ್ರಾಣಿಗಳಿಗಿಂತ ದಪ್ಪವಾಗಿರುತ್ತದೆ ಮತ್ತು ಅದು ತಿಮಿವರ್ಗದ ಪ್ರಾಣಿಗಳನ್ನು ಮೀರಿಸುವ, ಮಾನವರಷ್ಟೇ ಮಿದುಳಿನ ಹೊರಪದರದ ನರಕೋಶಗಳು ಮತ್ತು ನರಕೋಶ ಸಂಗಮಗಳನ್ನು ಹೊಂದಿರುತ್ತದೆಂದು ನಂಬಲಾಗುತ್ತದೆ.[೧]: 71 ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯಗಳ ಆಧಾರದಲ್ಲಿ ಆನೆಗಳಿಗೆ ಡಾಲ್ಫಿನ್‌ಗಳದೇ ಸ್ಥಾನವನ್ನು ನೀಡಲಾಗುತ್ತದೆ.[೭] ಹೆಚ್ಚಿನ ವಿಜ್ಞಾನಿಗಳು ಆನೆಗಳ ಬುದ್ಧಿಶಕ್ತಿಯು ತಿಮಿವರ್ಗದ ಪ್ರಾಣಿಗಳ ಬುದ್ಧಿಶಕ್ತಿಯಷ್ಟೇ ಮಟ್ಟದಲ್ಲಿರುತ್ತದೆಂದು ಹೇಳುತ್ತಾರೆ; ವಾಸ್ತವವಾಗಿ 'ಆನೆಗಳು ಚಿಂಪಾಂಜಿಗಳು ಮತ್ತು ಡಾಲ್ಫಿನ್‌ಗಳಷ್ಟೇ ಬುದ್ಧಿಶಾಲಿಯಾಗಿರುತ್ತವೆ' ಎಂದು ABC ಸೈನ್ಸ್‌ನಿಂದ ಪ್ರಕಟವಾದ ೨೦೧೧ರ ದಶಕದ ಲೇಖನವೊಂದು ಹೇಳಿದೆ.[೫]
ಆನೆಗಳು ಅತಿ ದೊಡ್ಡ ಮತ್ತು ಹೆಚ್ಚು ಸುರುಳಿ ಸುತ್ತಿಕೊಂಡಿರುವ ಹಿಪೊಕ್ಯಾಂಪಸ್ಅನ್ನೂ ಹೊಂದಿರುತ್ತವೆ, ಇದು ಲಿಂಬಿಕ್ ವ್ಯವಸ್ಥೆಯಲ್ಲಿರುವ ಒಂದು ಮಿದುಳು ರಚನೆಯಾಗಿದೆ ಮತ್ತು ಇದು ಮಾನವರು, ಪ್ರೈಮೇಟ್‌ಗಳು ಅಥವಾ ತಿಮಿವರ್ಗದ ಪ್ರಾಣಿಗಳಿಗಿಂತ ದೊಡ್ಡದಾಗಿದೆ.[೧೫] ಆನೆಯ ಹಿಪೊಕ್ಯಾಂಪಸ್ ಮಿದುಳಿನ ಕೇಂದ್ರ ರಚನೆಗಳಲ್ಲಿ ೦.೭%ನಷ್ಟು ಭಾಗವನ್ನು ಆವರಿಸುತ್ತದೆ, ಇದು ಮಾನವರಲ್ಲಿ ೦.೫%ನಷ್ಟು, ರಿಸ್ಸೊನ ಡಾಲ್ಫಿನ್‌ಗಳಲ್ಲಿ ೦.೧% ನಷ್ಟು ಮತ್ತು ಸೀಸೆ ಮೂತಿಯ ಡಾಲ್ಫಿನ್‌ಗಳಲ್ಲಿ ೦.೦೫%ನಷ್ಟಿರುತ್ತದೆ.[೧೬] ಹಿಪೊಕ್ಯಾಂಪಸ್ ಕೆಲವು ಪ್ರಕಾರದ ಜ್ಞಾಪಕ ಶಕ್ತಿಯನ್ನು ಪ್ರಕ್ರಿಯೆಗೊಳಿಸುವ ಮೂಲಕ ಭಾವನೆಯೊಂದಿಗೆ ಸಂಬಂಧಿಸಿದೆ. ಇದರಿಂದಾಗಿ ಆನೆಗಳು ಹಿಂದೆ ನಡೆದ ಘಟನೆಗಳನ್ನು ನೆನೆಪಿಸಿಕೊಳ್ಳುತ್ತವೆ ಮತ್ತು ಮಾನಸಿಕ ಆಘಾತದ ನಂತರದ ಒತ್ತಡ ಕಾಯಿಲೆಯನ್ನು (PTSD) ಅನುಭವಿಸುತ್ತವೆ.[೧೭][೧೮] ಆನೆಗಳ ಎನ್ಸೆಫಲೈಸೇಶನ್ ಕೋಶನ್ (EQ) ೧.೧೩ರಿಂದ ೨.೩೬ವರೆಗೆ ವ್ಯತ್ಯಾಸಗೊಳ್ಳುತ್ತದೆ. ಒಟ್ಟು EQ ಸರಾಸರಿಯು ೧.೮೮ ಆಗಿದೆ, ಏಷ್ಯನ್ ಆನೆಗಳು ೨.೧೪ನಷ್ಟು ಮತ್ತು ಆಫ್ರಿಕನ್ ಆನೆಗಳು ೧.೬೭ನಷ್ಟು ಸರಾಸರಿಯನ್ನು ಹೊಂದಿವೆ.[೧೯]: 151 . ಮರ-ಇಲಿಯು ಹೆಚ್ಚು EQ ಹೊಂದಿರುವ ಪ್ರಾಣಿಯಾಗಿದೆ,[೨೦] ಆದರೂ ಅದನ್ನು ಹೆಚ್ಚು ಬುದ್ಧಿವಂತ ಪ್ರಾಣಿಯೆಂದು ಪರಿಗಣಿಸಲಾಗುವುದಿಲ್ಲ, ಆದ್ದರಿಂದ EQ ಅಥವಾ ದೇಹದ ಗಾತ್ರಕ್ಕೆ ಸಂಬಂಧವುಳ್ಳ ಮಿದುಳಿನ ಗಾತ್ರವು ಬುದ್ಧಿಶಕ್ತಿಯನ್ನು ಅಂದಾಜು ಮಾಡುವ ಸೂಕ್ತ ಮಾಪನವಾಗಿದೆಯೇ ಎಂಬ ಬಗ್ಗೆ ಗಮನಾರ್ಹ ವಿವಾದವಿದೆ.
ಮಾನವರಂತೆ, ಆನೆಗಳೂ ಸಹ ಬೆಳೆದಂತೆ ವರ್ತನೆಗಳನ್ನು ಕಲಿತುಕೊಳ್ಳುತ್ತವೆ. ಅವು ಹೇಗೆ ಬದುಕಬೇಕೆಂಬುದನ್ನು ಹುಟ್ಟುವಾಗಲೇ ತಿಳಿದುಕೊಂಡಿರುವುದಿಲ್ಲ.[೨೧] ಆನೆಗಳು ಅವುಗಳ ಜೀವನದಲ್ಲಿ ಕಲಿಯಲು ಸುಮಾರು ಹತ್ತು ವರ್ಷಗಳ ಬಹು ದೀರ್ಘಾವಧಿಯನ್ನು ಹೊಂದಿರುತ್ತವೆ. ಜನನ ಸಂದರ್ಭದಲ್ಲಿನ ಮಿದುಳಿನ ಗಾತ್ರವನ್ನು ಸಂಪೂರ್ಣವಾಗಿ ಬೆಳೆದ ಮಿದುಳಿನೊಂದಿಗೆ ಹೋಲಿಸುವುದು ಬುದ್ಧಿಶಕ್ತಿಯನ್ನು ಅಂದಾಜು ಮಾಡುವ ಒಂದು ತುಲನಾತ್ಮಕ ಮಾರ್ಗವಾಗಿದೆ. ಇದು ಜೀವಿಯೊಂದು ಸಣ್ಣದಿರುವಾಗ ಎಷ್ಟು ವಿಷಯವನ್ನು ಕಲಿತುಕೊಳ್ಳುತ್ತದೆ ಎಂಬುದನ್ನು ಸೂಚಿಸುತ್ತದೆ. ಬಹುತೇಕ ಸಸ್ತನಿಗಳು ಹುಟ್ಟುವಾಗ, ಪೂರ್ತಿ ಬೆಳೆದ ಮಿದುಳಿನ ಗಾತ್ರದ ೯೦%ನಷ್ಟಿರುವ ಮಿದುಳನ್ನು ಹೊಂದಿರುತ್ತವೆ.[೨೧] ಮಾನವರು ಹುಟ್ಟುವಾಗ ಪೂರ್ತಿ ಬೆಳೆದ ಮಿದುಳಿನ ಗಾತ್ರದ ೨೮%ನಷ್ಟು,[೨೧] ಸೀಸೆ-ಮೂತಿಯ ಡಾಲ್ಫಿನ್‌ಗಳು ೪೨.೫%ನಷ್ಟು,[೨೨] ಚಿಂಪಾಂಜಿಗಳು ೫೪%ನಷ್ಟು[೨೧] ಮತ್ತು ಆನೆಗಳು ೩೫%ನಷ್ಟನ್ನು ಹೊಂದಿರುತ್ತವೆ.[೨೩] ಆನೆಗಳು ಜೀವನದಲ್ಲಿ ಮಾನವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಲಿತುಕೊಳ್ಳುತ್ತವೆ ಮತ್ತು ಅವುಗಳ ವರ್ತನೆಯು ಸಹಜ-ಪ್ರವೃತ್ತಿಯಿಂದ ಬರುವುದಿಲ್ಲ, ಜೀವನದಾದ್ಯಂತ ಕಲಿಸಿಕೊಡಬೇಕಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಸಹಜ-ಪ್ರವೃತ್ತಿಯು ಕಲಿಸಿದ ಬುದ್ಧಿಶಕ್ತಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ತಾಯಿ ಆನೆಗಳು ತಮ್ಮ ಮರಿಗಳಿಗೆ ಹೇಗೆ ತಿನ್ನಿಸುವುದು, ಹೇಗೆ ಸಲಕರಣೆಗಳನ್ನು ಬಳಸುವುದು ಮತ್ತು ಹೆಚ್ಚು ಸಂಕೀರ್ಣ ಆನೆಗಳ ಸಮುದಾಯದಲ್ಲಿ ತಮ್ಮ ಸ್ಥಾನವನ್ನು ಹೇಗೆ ತಿಳಿದುಕೊಳ್ಳುವುದು ಮೊದಲಾದವನ್ನು ಕಲಿಸಿಕೊಡುತ್ತವೆ. ಆನೆಗಳ ಜ್ಞಾಪಕ ಶಕ್ತಿಯ ಒಂದು ಸಂಗ್ರಹವಾಗಿ ಕಾರ್ಯನಿರ್ವಹಿಸುವ ಮುಮ್ಮಿದುಳು ಕಪೋಲ ಪಾಲಿಗಳು ಮಾನವರಿಗಿಂತ ದೊಡ್ಡದಾಗಿವೆ.[೨೧]
ಸ್ಪಿಂಡಲ್ ಜೀವಕೋಶಗಳು ಬುದ್ಧಿವಂತ ವರ್ತನೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆರಂಭದಲ್ಲಿ ಸ್ಪಿಂಡಲ್ ನರಕೋಶಗಳ ಅಸ್ತಿತ್ವವು ಮಾನವರು ಮತ್ತು ದೊಡ್ಡ ಕಪಿಗಳಿಗೆ ಮಾತ್ರ ಅನನ್ಯವಾಗಿತ್ತೆಂದು ಭಾವಿಸಲಾಗಿತ್ತು. ಆದರೆ, ಸ್ಪಿಂಡಲ್ ನರಕೋಶಗಳು ಏಷ್ಯನ್ ಮತ್ತು ಆಫ್ರಿಕನ್ ಆನೆಗಳ ಮಿದುಳುಗಳಲ್ಲೂ ಕಂಡುಬರುತ್ತವೆಂದು ಅಧ್ಯಯನಗಳು ಕಂಡುಹಿಡಿದಿವೆ.[೨೪]: 242 ಅಷ್ಟೇ ಅಲ್ಲದೆ ಈ ನರಕೋಶಗಳು ಗೂನ್ನುಬೆನ್ನಿನ ತಿಮಿಂಗಿಲಗಳು, ಈಜುರೆಕ್ಕೆಯುಳ್ಳ ತಿಮಿಂಗಿಲಗಳು, ಹಿಂಸ್ರ ತಿಮಿಂಗಿಲಗಳು, ತಿಮಿಂಗಿಲಗಳು,[೨೫][೨೬] ಸೀಸೆ-ಮೂತಿಯ ಡಾಲ್ಫಿನ್‌ಗಳು, ರಿಸ್ಸೋದ ಡಾಲ್ಫಿನ್‌ಗಳು ಮತ್ತು ಬಿಳಿ ತಿಮಿಂಗಿಲಗಳಲ್ಲೂ ಕಂಡುಬರುತ್ತವೆ.[೨೭] ಆನೆಗಳ ಮಿದುಳು ಮತ್ತು ಮಾನವರ ಮಿದುಳುಗಳ ನಡುವಿನ ಗುರುತಿಸಬಹುದಾದ ಹೋಲಿಕೆಯು ಅಭಿಗಾಮಿ ವಿಕಾಸ ವಿಷಯವನ್ನು ಬೆಂಬಲಿಸುತ್ತದೆ.[೨೮]: 154
ಆನೆಗಳು ಇತರ ಯಾವುದೇ ಜೀವಿಗಳಿಗಿಂತ ಹೆಚ್ಚು ನಿಕಟ ಜೀವನ ಕ್ರಮವನ್ನು ಹೊಂದಿರುತ್ತವೆ. ಆನೆಗಳ ಕುಟುಂಬಗಳು ಕೇವಲ ಸಾವು ಸಂಭವಿಸಿದಾಗ ಅಥವಾ ಸೆರೆಹಿಡಿಯಲ್ಪಟ್ಟಾಗ ಮಾತ್ರ ಪ್ರತ್ಯೇಕಿಸಲ್ಪಡುತ್ತವೆ. ಆನೆಗಳ ವರ್ತನೆ-ಶಾಸ್ತ್ರಜ್ಞ ಸಿಂತಿಯಾ ಮೋಸ್ ಆಫ್ರಿಕನ್ ಆನೆಗಳ ಕುಟುಂಬವನ್ನು ಒಳಗೊಂಡ ಘಟನೆಯೊಂದನ್ನು ನೆನೆಪಿಸಿಕೊಳ್ಳುತ್ತಾರೆ. ಈ ಕುಟುಂಬದಲ್ಲಿ ಎರಡು ಆನೆಗಳನ್ನು ಕಳ್ಳ ಬೇಟೆಗಾರರು ಸಾಯಿಸುತ್ತಾರೆ, ನಂತರ ಇವರನ್ನು ಉಳಿದ ಆನೆಗಳು ಅಟ್ಟಿಸಿಕೊಂಡು ಬರುತ್ತವೆ. ಒಂದು ಆನೆ ಸತ್ತರೂ, ಟೀನಾ ಹೆಸರಿನ ಮತ್ತೊಂದು ಆನೆಯು ಬದುಕಿಕೊಳ್ಳುತ್ತದೆ. ಆದರೆ ಅದರ ಮೊಣಕಾಲುಗಳಿಗೆ ಪೆಟ್ಟು ಬಿದ್ದುದರಿಂದ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಟ್ರಿಸ್ಟಾ ಮತ್ತು ಟೆರೆಶಿಯಾ (ಟೀನಾ ಹೆಸರಿನ ಆನೆಯ ತಾಯಿ) ಟೀನಾದ ಎರಡೂ ಬದಿಗೆ ಸರಿದು, ಅದಕ್ಕೆ ಮೇಲೇಳಲು ಸಹಾಯ ಮಾಡುತ್ತವೆ. ಅಂತಿಮವಾಗಿ, ಟೀನಾ ಹೆಚ್ಚು ದುರ್ಬಲವಾಗಿ ನೆಲದ ಮೇಲೆ ಬಿದ್ದು, ಸತ್ತುಹೋಗುತ್ತದೆ. ಆದರೂ ಟ್ರಿಸ್ಟಾ ಮತ್ತು ಟೆರೆಶಿಯಾ ಅದನ್ನು ಬಿಟ್ಟುಹೋಗದೆ, ನಿರಂತರವಾಗಿ ಮೇಲೆತ್ತಲು ಪ್ರಯತ್ನಿಸುತ್ತವೆ. ಅವು ಕಷ್ಟಪಟ್ಟು ಅದನ್ನು ಕುಳಿತ ಭಂಗಿಯಲ್ಲಿ ಕುಳ್ಳಿರಿಸುತ್ತವೆ, ಆದರೆ ಅದರ ದೇಹವು ಪ್ರಾಣ ಕಳೆದುಕೊಂಡಿದುದರಿಂದ ಮತ್ತೆ ನೆಲದ ಮೇಲೆ ಬೀಳುತ್ತದೆ. ಮತ್ತೊಂದು ಕುಟುಂಬದ ಆನೆಗಳು ಹೆಚ್ಚಿನ ಸಹಾಯ ಮಾಡುವುದರಿಂದ, ಅವು ಟೀನಾದ ಬಾಯಿಗೆ ಹುಲ್ಲನ್ನು ನೀಡಲು ಪ್ರಯತ್ನಿಸುತ್ತವೆ. ನಂತರ ಟೆರೆಶಿಯಾ ಅದರ ದಂತಗಳನ್ನು ಟೀನಾದ ತಲೆ ಮತ್ತು ಮುಂದಿನ ಕಾಲುಗಳ ಕೆಳಗೆ ಹಾಕಿ, ಅದನ್ನು ಎತ್ತಲು ಪ್ರಯತ್ನಿಸುತ್ತದೆ. ಹಾಗೆ ಮಾಡಿದಾಗ ಅದರ ಒಂದು ದಂತವು ಸಂಪೂರ್ಣವಾಗಿ ಮುರಿದುಹೋಗುತ್ತದೆ. ಆನೆಗಳು ಟೀನಾವನ್ನು ಮೇಲೆತ್ತುವ ಪ್ರಯತ್ನವನ್ನು ಕೈಬಿಡುತ್ತವೆ, ಆದರೆ ಅವು ಅದನ್ನು ಬಿಟ್ಟುಹೋಗುವುದಿಲ್ಲ; ಬದಲಿಗೆ, ಅವು ಅದನ್ನು ಹೆಚ್ಚು ಆಳವಿಲ್ಲದ ಗುಂಡಿಯಲ್ಲಿ ಹೂಳುತ್ತವೆ ಮತ್ತು ಅದರ ದೇಹದ ಮೇಲೆ ಎಲೆಗಳನ್ನು ಹಾಕುತ್ತವೆ. ಅವು ಟೀನಾದ ದೇಹದ ಹತ್ತಿರ ರಾತ್ರಿ ಪೂರ್ತಿ ಕಳೆಯುತ್ತವೆ, ನಂತರ ಬೆಳಿಗ್ಗೆ ಒಂದೊಂದೇ ಆನೆಗಳು ಅಲ್ಲಿಂದ ಹೋಗಲು ಆರಂಭಿಸುತ್ತವೆ. ಟೆರೆಶಿಯಾವು ಕೊನೆಯದಾಗಿ ಬಿಟ್ಟುಹೋಗುತ್ತದೆ.[೨೯] ಆನೆಗಳು ಹೆಚ್ಚು ನಿಕಟವಾಗಿ ಒಂದುಗೂಡಿರುವುದರಿಂದ ಮತ್ತು ಮಾತೃಪ್ರಾಧಾನ್ಯವಾಗಿರುವುದರಿಂದ, ಅವುಗಳ ಕುಟುಂಬವೊಂದು ಮತ್ತೊಂದರ ಸಾವಿನಿಂದ (ವಿಶೇಷವಾಗಿ ತಾಯಿ) ಹಾಳಾಗುತ್ತದೆ ಮತ್ತು ಕೆಲವು ಗುಂಪುಗಳು ಅವುಗಳ ಸ್ಥಾನಕ್ಕೆ ಹಿಂದಿರುಗುವುದಿಲ್ಲ. ಸಿಂತಿಯಾ ಮೋಸ್ ನೋಡಿದ ಒಂದು ತಾಯಿ ಆನೆಯು ಅದರ ಮರಿಯು ಸತ್ತ ನಂತರ ನಿಧಾನವಾಗಿ ಚುರುಕಿಲ್ಲದೆ ತನ್ನ ಕುಟುಂಬಕ್ಕೆ ಹಿಂದಿರುಗುತ್ತದೆ.[೨೯] ಎಡ್ವರ್ಡ್ ಟಾಪ್ಸೆಲ್ ೧೬೫೮ರಲ್ಲಿ ತನ್ನ ಪ್ರಕಟಣೆ ದಿ ಹಿಸ್ಟರಿ ಆಫ್ ಫೋರ್-ಫೂಟೆಡ್ ಬೀಸ್ಟ್ಸ್ ನಲ್ಲಿ ಹೀಗೆಂದು ಹೇಳಿದ್ದಾರೆ - "ಪ್ರಪಂಚದಲ್ಲಿರುವ ಎಲ್ಲಾ ಮೃಗಗಳಲ್ಲಿ ಆನೆಯಂತೆ ಸರ್ವಶಕ್ತ ದೇವರ ಪ್ರಾಬಲ್ಯ ಮತ್ತು ಬುದ್ಧಿವಂತಿಕೆಯ ಅತ್ಯುತ್ಕೃಷ್ಟದ ಮತ್ತು ವ್ಯಾಪಕವಾದ ಪ್ರದರ್ಶನವನ್ನು ಬೇರೆ ಯಾವುದೇ ಪ್ರಾಣಿಯು ಹೊಂದಿಲ್ಲ.[೩೦]" ಆನೆಗಳು ಸೂರ್ಯ ಮತ್ತು ಚಂದ್ರರನ್ನು ಪೂಜಿಸುತ್ತವೆ ಹಾಗೂ ಮ್ಯಾಂಡ್ರೇಕ್ಅನ್ನು ತಿನ್ನುವುದರಿಂದ ಬಸಿರಾಗುತ್ತವೆ ಎಂದು ಆತ ಅದೇ ಪ್ರಕಟಣೆಯಲ್ಲಿ ಹೇಳಿದ್ದಾರೆ, ಇವೆರಡೂ ನಿಜವಲ್ಲ. ಆನೆಗಳು ಅವುಗಳ ಸಹಕರಿಸುವ ಕೌಶಲಗಳ ಆಧಾರದಲ್ಲಿ ಚಿಂಪಾಂಜಿಗಳಿಗೆ ಸರಿಸಮಾನವಾಗಿವೆಯೆಂದು ನಂಬಲಾಗುತ್ತದೆ.[೩]
ಆನೆಗಳನ್ನು ಹೆಚ್ಚು ಪರೋಪಕಾರಿಬುದ್ಧಿಯ ಪ್ರಾಣಿಗಳೆಂದು ತಿಳಿಯಲಾಗುತ್ತದೆ, ಅವು ಮಾನವರನ್ನೂ ಒಳಗೊಂಡಂತೆ ಒತ್ತಡದಲ್ಲಿರುವ ಇತರ ಜೀವಿಗಳಿಗೂ ಸಹಾಯ ಮಾಡುತ್ತವೆ. ಭಾರತದಲ್ಲಿ, ಮಾವುತನ ಸೂಚನೆಯಂತೆ ಆನೆಯೊಂದು ಲಾರಿಯಿಂದ ಮರದ ದಿಮ್ಮಿಗಳನ್ನು ಕೆಳಕ್ಕಿಳಿಸಿ, ಮೊದಲೇ ತೋಡಿದ ಗುಂಡಿಗಳಲ್ಲಿ ಆ ದಿಮ್ಮಿಗಳನ್ನು ಇರಿಸುವ ಮೂಲಕ ಸ್ಥಳೀಯರಿಗೆ ಸಹಾಯ ಮಾಡುತ್ತಿತ್ತು. ಆನೆಯು ಒಂದು ಗುಂಡಿಯಲ್ಲಿ ದಿಮ್ಮಿಯನ್ನು ಇರಿಸಲು ನಿರಾಕರಿಸುತ್ತದೆ. ಆ ಅಡಚಣೆಗೆ ಕಾರಣವೇನೆಂದು ತಿಳಿಯಲು ಮಾವುತನು ಅಲ್ಲಿಗೆ ಬಂದು ನೋಡಿದಾಗ, ಆ ಗುಂಡಿಯಲ್ಲಿ ನಾಯಿಯೊಂದು ಮಲಗಿರುವುದನ್ನು ಗಮನಿಸುತ್ತಾನೆ. ನಾಯಿಯು ಅಲ್ಲಿಂದ ಹೋದ ನಂತರವೇ ಆನೆಯು ದಿಮ್ಮಿಯನ್ನು ಆ ಗುಂಡಿಯಲ್ಲಿ ಇಳಿಸಿತು.[೩೧] ಆನೆಗಳು ಹೆಚ್ಚಾಗಿ ಅವುಗಳಿಗೆ ಕಷ್ಟವಾದರೂ (ಉದಾ, ವ್ಯಕ್ತಿಯಿಂದ ತಪ್ಪಿಸಿಕೊಂಡು ಹೋಗಲು ಕೆಲವೊಮ್ಮೆ ಅವು ಹಿಂದಕ್ಕೆ ಹೋಗಬೇಕಾಗುತ್ತದೆ) ಮಾನವರಿಗೆ ಕೇಡುಂಟುಮಾಡುವುದನ್ನು ಅಥವಾ ಕೊಲ್ಲುವುದನ್ನು ತಪ್ಪಿಸಲು ತಮ್ಮ ದಾರಿಯನ್ನು ಬಿಟ್ಟು ಬೇರೆ ದಾರಿಯಲ್ಲಿ ಸಾಗುತ್ತವೆಂದು ಸಿಂತಿಯಾ ಮೋಸ್ ಹೇಳುತ್ತಾರೆ. ಕುಕಿ ಗ್ಯಾಲ್‌ಮ್ಯಾನ್‌ನ ಲೈಕಿಪಿಯಾ ರಾಂಚ್‌ನಲ್ಲಿ ಕೊಲಿನ್ ಫ್ರ್ಯಾನ್ಕೋಂಬೆ ಹೇಳಿದ ಮುಖಾಮುಖಿಯನ್ನು ಜೋಯ್ಸೆ ಪೂಲ್ ಆಧಾರಗಳಿಂದ ಪ್ರಮಾಣೀಕರಿಸಿದ್ದಾರೆ. ಜಾನುವಾರುಗಳನ್ನು ಕಾಯುವವನು ತನ್ನ ಒಂಟೆಗಳೊಂದಿಗೆ ಹೊರಗೆ ಹೋಗಿರುತ್ತಾನೆ, ಆಗ ಆತ ಆನೆಗಳ ಹಿಂಡೊಂದನ್ನು ಸಂಧಿಸುತ್ತಾನೆ. ತಾಯಿ ಆನೆಯು ಆತನ ಮೇಲೆ ಆಕ್ರಮಣ ಮಾಡುತ್ತದೆ ಮತ್ತು ತನ್ನ ದಂತದಿಂದ ಆತನನ್ನು ತಿವಿದು, ಆತನ ಒಂದು ಕಾಲನ್ನು ಮುರಿಯುತ್ತದೆ. ಸಂಜೆ ಆತನು ಹಿಂದಿರುಗದಿದ್ದಾಗ ಆತನನ್ನು ಹುಡುಕಲು ಲಾರಿಯಲ್ಲಿ ಒಂದು ಶೋಧನ ಗುಂಪನ್ನು ಕಳುಹಿಸಲಾಗುತ್ತದೆ. ಆ ಗುಂಪು ಆತನನ್ನು ಪತ್ತೆಹಚ್ಚಿದಾಗ, ಒಂದು ಆನೆಯು ಆತನನ್ನು ಕಾವಲು ಕಾಯುತ್ತಿರುತ್ತದೆ. ಅದು ಅವರ ಲಾರಿಯ ಮೇಲೆ ದಾಳಿ ಮಾಡುತ್ತದೆ, ಆದ್ದರಿಂದ ಅವರು ಅದರೆಡೆಗೆ ಗುಂಡು ಹೊಡೆದು, ಭಯಹುಟ್ಟಿಸುತ್ತಾರೆ. ಆ ಜಾನುವಾರು ಕಾಯುವವನಿಗೆ ನಿಲ್ಲಲು ಸಾಧ್ಯವಾಗದಿದ್ದಾಗ ಆ ಆನೆಯು ಅದರ ಸೊಂಡಿಲಿನಿಂದ ಆತನನ್ನು ಮರದ ನೆರಳಿಗೆ ಕರೆತಂದಿತ್ತೆಂದು ಆತ ನಂತರ ಅವರಿಗೆ ಹೇಳುತ್ತಾನೆ. ಆ ಆನೆಯು ಆ ದಿನ ಪೂರ್ತಿ ಅವನಿಗೆ ರಕ್ಷಣೆಯನ್ನು ನೀಡಿತ್ತು ಮತ್ತು ಅದರ ಸೊಂಡಿಲಿನಿಂದ ಅವನನ್ನು ಮೃದುವಾಗಿ ಸವರುತ್ತಿತ್ತು.[೨೧]
ಆಫ್ರಿಕಾದ ಆನೆಗಳು ಕೃತಕವಾಗಿ ಹೆರಿಗೆ ಮಾಡಿಸುವ ಬೊರಾಗಿನೇಸಿಯೆ ಕುಟುಂಬದ ಒಂದು ಮರದ ಎಲೆಗಳನ್ನು ತಿನ್ನುವ ಮೂಲಕ ಸ್ವ-ಔಷಧೀಕರಣ ಮಾಡಿಕೊಳ್ಳುತ್ತವೆ. ಕೀನ್ಯಾದ ಜನರೂ ಸಹ ಈ ಮರವನ್ನು ಅದೇ ಕಾರಣಕ್ಕಾಗಿ ಬಳಸುತ್ತಾರೆ.[೩೨]
ಆನೆಗಳು ಭೂಮಿಯ ಮೇಲೆ ಹೋಮೊ ಸೇಪಿಯನ್ಸ್ ಸೇಪಿಯನ್ಸ್ ಮತ್ತು ನಿಯಾಂಡರ್ತಲ್‌ಗಳ[೩೩] ನಂತರ ಸಾವಿನ ಸುತ್ತ ಗುರುತಿಸಬಹುದಾದ ಕ್ರಿಯಾವಿಧಿಗಳನ್ನು ಹೊಂದಿರುವ ಅಥವಾ ಹೊಂದಿದ್ದ ಏಕೈಕ ಜೀವಿಗಳಾಗಿವೆ. ಅವು ಅವುಗಳದೇ ಜಾತಿಯ ಆನೆಗಳ (ಕೆಲವೊಮ್ಮೆ ಬಹುಹಿಂದೆಯೇ ಸತ್ತ ಅವುಗಳಿಗೆ ಸಂಬಂಧಿಸಿರದ ಆನೆಗಳ) ಮೂಳೆಗಳ ಬಗ್ಗೆ ತೀವ್ರ ಆಸಕ್ತಿ ತೋರಿಸುತ್ತವೆ. ಅವು ಹೆಚ್ಚಾಗಿ ತಮ್ಮ ಸೊಂಡಿಲುಗಳು ಮತ್ತು ಕಾಲಿನಿಂದ ಮೂಳೆಗಳನ್ನು ಶೋಧಿಸುತ್ತಿರುತ್ತವೆ. ಕೆಲವೊಮ್ಮೆ ಸತ್ತ ಆನೆಗೆ ಸಂಪೂರ್ಣವಾಗಿ ಸಂಬಂಧಿಸಿರದ ಆನೆಗಳು ಅದನ್ನು ಮಣ್ಣುಮಾಡಿದ ಸ್ಥಳಕ್ಕೆ ಹೋಗುತ್ತಿರುತ್ತವೆ.[೧೨] ಒಂದು ಆನೆಗೆ ಏನಾದರೂ ತೊಂದರೆಯುಂಟಾದರೆ ಇತರ ಆನೆಗಳು (ಅವು ಅದಕ್ಕೆ ಸಂಬಂಧಿಸಿರದಿದ್ದರೂ) ಅದಕ್ಕೆ ಸಹಾಯ ಮಾಡುತ್ತವೆ.[೨೧] ಆನೆಗಳ ಸಂಶೋಧಕ ಮಾರ್ಟಿನ್ ಮೆರೆಡಿತ್ ಆನೆಯ ಮರಣ ಕ್ರಿಯಾವಿಧಿಯ ಬಗೆಗಿನ ಘಟನೆಯೊಂದನ್ನು ತನ್ನ ಪುಸ್ತಕದಲ್ಲಿ ನೆನಪಿಸಿಕೊಳ್ಳುತ್ತಾರೆ. ಆ ಘಟನೆಯನ್ನು ದಕ್ಷಿಣ ಆಫ್ರಿಕಾದ ಆಡ್ಡೊದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಆನೆಗಳ ಬಗ್ಗೆ ಅಧ್ಯಯನ ಮಾಡಿದ ದಕ್ಷಿಣ ಆಫ್ರಿಕಾದ ಜೀವಶಾಸ್ತ್ರಜ್ಞ ಆಂಥೋನಿ ಮೈಕೆಲ್ ಹಾಲ್ ನೋಡಿದ್ದರು. ಸತ್ತ ತಾಯಿ ಆನೆಯ ಮರಿಯನ್ನೂ ಒಳಗೊಂಡಂತೆ ಸಂಪೂರ್ಣ ಕುಟುಂಬವು ತಮ್ಮ ಸೊಂಡಿಲುಗಳಿಂದ ಅದನ್ನು ಮೃದುವಾಗಿ ಸ್ಪರ್ಶಿಸುತ್ತಾ, ಮೇಲೆತ್ತಲು ಪ್ರಯತ್ನಿಸುತ್ತಿದ್ದವು. ಆ ಆನೆಗಳ ಹಿಂಡು ಗಟ್ಟಿಯಾಗಿ ಘೀಳಿಡುತ್ತಿತ್ತು. ಮರಿ ಆನೆಯು ಅಳುತ್ತಿತ್ತು ಮತ್ತು ಕಿರಿಚುವಂತೆ ಶಬ್ದ ಮಾಡುತ್ತಿತ್ತು. ಆದರೆ ನಂತರ ಸಂಪೂರ್ಣ ಹಿಂಡು ಆಶ್ಚರ್ಯಕರವಾಗಿ ನಿಶ್ಯಬ್ದವಾದವು. ಅವು ನಂತರ ಆ ಸತ್ತ ಆನೆಯ ಮೇಲೆ ಎಲೆಗಳನ್ನು ಮತ್ತು ಕೆಸರನ್ನು ಹಾಕಲು ಆರಂಭಿಸಿದವು ಹಾಗೂ ಮರದ ಕೊಂಬೆಗಳನ್ನು ಮುರಿದು ಅದನ್ನು ಮುಚ್ಚಿದವು. ಅವು ಅದರ ಸುತ್ತ ನಿಶ್ಯಬ್ದವಾಗಿ ಎರಡು ದಿನಗಳವರೆಗೆ ಹಾಗೆಯೇ ನಿಂತುಕೊಂಡಿದ್ದವು. ಕೆಲವೊಮ್ಮೆ ಅವು ನೀರು ಅಥವಾ ಆಹಾರಕ್ಕಾಗಿ ಆ ಜಾಗವನ್ನು ಬಿಟ್ಟು ಹೋದರೂ ಮತ್ತೆ ಅಲ್ಲಿಗೇ ಹಿಂದಿರುಗುತ್ತಿದ್ದವು.[೩೪] ಮನುಷ್ಯರ ಬಗ್ಗೆ ಈ ರೀತಿಯಲ್ಲಿ ವರ್ತಿಸುವ ಆನೆಗಳು ಆಫ್ರಿಕಾದಾದ್ಯಂತ ಸಾಮಾನ್ಯವಾಗಿ ಕಂಡುಬರುತ್ತಿರುತ್ತವೆ. ಅನೇಕ ಸಂದರ್ಭಗಳಲ್ಲಿ, ಅವು ಸತ್ತ ಅಥವಾ ಮಲಗಿದ್ದ ವ್ಯಕ್ತಿಗಳನ್ನು ಹೂತಿವೆ ಅಥವಾ ತೊಂದರೆಯುಂಟಾದವರಿಗೆ ಸಹಾಯವನ್ನು ಮಾಡಿವೆ.[೨೧] ಕೀನ್ಯಾದ ಬೇಟೆಯ ಕಾನೂನನ್ನು ಪಾಲಿಸುವಂತೆ ನೋಡಿಕೊಳ್ಳವವ ಜಾರ್ಜ್ ಆಡಮ್ಸನ್ ಹೇಳಿದ ಘಟನೆಯೊಂದನ್ನು ಮೆರೆಡಿತ್ ಸ್ಮರಿಸಿಕೊಳ್ಳುತ್ತಾರೆ, ಈ ಘಟನೆಯು ಮನೆಗೆ ಹಿಂದಿರುಗುವ ದಾರಿ ತಪ್ಪಿದ ನಂತರ ಮರವೊಂದರ ಅಡಿಯಲ್ಲಿ ನಿದ್ರಿಸುತ್ತಿದ್ದ ವಯಸ್ಸಾದ ಟರ್ಕಾನ ಮಹಿಳೆಯ ಬಗ್ಗೆಯಾಗಿದೆ. ಆಕೆಗೆ ನಿದ್ರೆಯಿಂದ ಎಚ್ಚರವಾದಾಗ, ಆನೆಯೊಂದು ಮುಂದೆ ನಿಂತು, ಆಕೆಯನ್ನು ಮೃದುವಾಗಿ ಸ್ಪರ್ಶಿಸುತ್ತಿರುತ್ತದೆ. ತುಂಬಾ ಹೆದರಿದ್ದರಿಂದ ಆಕೆ ಅಲುಗಾಡದೆ ನಿಶ್ಯಬ್ದವಾಗಿದ್ದಳು. ಇತರ ಕೆಲವು ಆನೆಗಳು ಬಂದು ಸೇರಿದ ನಂತರ ಅವು ಗಟ್ಟಿಯಾಗಿ ಘೀಳಿಡಲು ಆರಂಭಿಸಿದವು ಮತ್ತು ಆಕೆಯನ್ನು ಕೊಂಬೆಗಳಡಿಯಲ್ಲಿ ಹೂಳಿದವು. ಆಕೆಯನ್ನು ಮರುದಿನ ಬೆಳಿಗ್ಗೆ ಸ್ಥಳೀಯ ಜಾನುವಾರು ಕಾಯುವವರು ಕಂಡುಹಿಡಿದರು, ಆಕೆಗೆ ಯಾವುದೇ ಹಾನಿಯಾಗಿರಲಿಲ್ಲ.[೩೪] ಜಾರ್ಜ್ ಆಡಮ್ಸನ್ ಉತ್ತರ ಕೀನ್ಯಾದ ಸರ್ಕಾರಿ ಉದ್ಯಾನಗಳನ್ನು ಹಾಳುಮಾಡುತ್ತಿದ್ದ ಬುಲ್ ಆನೆಯೊಂದನ್ನು ಹಿಂಡೊದರಲ್ಲಿ ಗುಂಡಿಕ್ಕಿ ಕೊಂದ ಘಟನೆಯನ್ನೂ ಸ್ಮರಿಸಿಕೊಳ್ಳುತ್ತಾರೆ. ಜಾರ್ಜ್ ಆ ಆನೆಯ ಮಾಂಸವನ್ನು ಸ್ಥಳೀಯ ಟರ್ಕಾನ ಬುಡಕಟ್ಟು ಜನಾಂಗದವರಿಗೆ ನೀಡಿದರು ಮತ್ತು ನಂತರ ಆ ಸತ್ತ ಆನೆಯ ಉಳಿದ ಭಾಗವನ್ನು ಎಳೆದುಕೊಂಡು ಅರ್ಧ ಮೈಲು ದೂರ ಹೋದರು. ಆ ರಾತ್ರಿ, ಇತರ ಆನೆಗಳು ಆ ಸತ್ತ ಆನೆಯನ್ನು ಕಂಡುಹಿಡಿದು, ಅದರ ಹೆಗಲ ಮೂಳೆ ಮತ್ತು ಕಾಲಿನ ಮೂಳೆಯನ್ನು ತೆಗೆದುಕೊಂಡು ಅದನ್ನು ಕೊಂದ ಸ್ಥಳಕ್ಕೇ ಹಿಂದಿರುಗಿದವು.[೩೫] ಆನೆಗಳು ಭಾವನೆಯನ್ನು ಹೊಂದಿವೆಯೆಂದು ಹೆಚ್ಚಾಗಿ ವಿಜ್ಞಾನಿಗಳು ವಾದಿಸುತ್ತಾರೆ.[೩೫]
ಜಾಯ್ಸೆ ಪೂಲ್ ಅನೇಕ ಸಂದರ್ಭಗಳಲ್ಲಿ ಆಫ್ರಿಕಾದ ಕಾಡಿನ ಆನೆಗಳು ಆಡುವುದನ್ನು ಗಮನಿಸಿದ್ದಾರೆ. ಅವು ಅವುಗಳ ಸ್ವಂತ ಮತ್ತು ಇತರರ ಮನರಂಜನೆಗಾಗಿ ಈ ರೀತಿ ಆಡುತ್ತವೆ. ಆನೆಗಳು ನೀರನ್ನು ಹೀರಿಕೊಂಡು, ಸೊಂಡಿಲನ್ನು ಎತ್ತರದಲ್ಲಿ ಹಿಡಿದುಕೊಂಡು ನಂತರ ಕಾರಂಜಿಯಂತೆ ಆ ನೀರನ್ನು ಚಿಮುಕಿಸುತ್ತವೆ.[೨೧]
ಆನೆಗಳು ಅವುಗಳು ಕೇಳಿಕೊಳ್ಳುವ ಶಬ್ದಗಳನ್ನು ಅನುಕರಿಸಬಲ್ಲವು ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಒಂದು ಅನಾಥ ಆನೆ ಮ್ಲೈಕಾವು ಸಾಗಿಹೋಗುತ್ತಿದ್ದ ಲಾರಿಗಳ ಶಬ್ದವನ್ನು ಅನುಕರಿಸಿದಾಗ ಈ ವಿಷಯವನ್ನು ಕಂಡುಹಿಡಿಯಲಾಯಿತು. ಇದುವರೆಗೆ, ಶಬ್ದಗಳನ್ನು ಅನುಕರಿಸುತ್ತವೆಂದು ತಿಳಿಯಲಾದ ಇತರೆ ಪ್ರಾಣಿಗಳೆಂದರೆ - ತಿಮಿಂಗಿಲಗಳು, ಡಾಲ್ಫಿನ್‍ಗಳು, ಬಾವಲಿಗಳು, ಪ್ರೈಮೇಟ್‌ಗಳು ಮತ್ತು ಪಕ್ಷಿಗಳು.[೩೬] ೨೩ ವರ್ಷ ವಯಸ್ಸಿನ ಆಫ್ರಿಕನ್ ಆನೆ ಕ್ಯಾಲಿಮೆರೊ ಸಹ ಒಂದು ಭಿನ್ನ ರೀತಿಯಲ್ಲಿ ಅನುಕರಣೆ ಮಾಡಿತ್ತು. ಅದು ಕೆಲವು ಏಷ್ಯನ್ ಆನೆಗಳೊಂದಿಗೆ ಸ್ವಿಸ್ ಮೃಗಾಲಯದಲ್ಲಿತ್ತು. ಏಷ್ಯನ್ ಆನೆಗಳು ಆಫ್ರಿಕನ್ ಆನೆಗಳ ತೀಕ್ಷ್ಣ ಘೀಳಿಡುವ ಶಬ್ದಗಳಿಂದ ಭಿನ್ನವಾಗಿ ಕೀಚುದನಿಯಲ್ಲಿ ಕೂಗುತ್ತವೆ. ಕ್ಯಾಲಿಮೆರೊ ಅದರ ಜಾತಿಯ ಆನೆಗಳಂತೆ ತೀಕ್ಷ್ಣವಾಗಿ ಘೀಳಿಡದೆ ಕೀಚುದನಿಯಲ್ಲಿ ಕೂಗಲು ಆರಂಭಿಸಿತ್ತು.[೩೭] ದಕ್ಷಿಣ ಕೊರಿಯಾದ ಎವರ್ಲ್ಯಾಂಡ್ ವಿಹಾರ-ಉದ್ಯಾನದಲ್ಲಿ ಕೋಸಿಕ್ ಹೆಸರಿನ ಒಂದು ಭಾರತದ ಆನೆಯು ತರಬೇತಿದಾರರನ್ನು ಆಶ್ಚರ್ಯಗೊಳಿಸಿತು, ಅವರು ಅದರ ಹತ್ತಿರ ಒಬ್ಬ ವ್ಯಕ್ತಿಯಿದ್ದಾನೆಂದು ಭಾವಿಸಿದ್ದರು, ಆದರೆ ನಿಜವಾಗಿ ಕೋಸಿಕ್ ಅದರ ತರಬೇತಿದಾರ ಜೋಂಗ್ ಗ್ಯಾಪ್ ಕಿಮ್‌ನನ್ನು ಅನುಕರಣೆ ಮಾಡುತ್ತಿತ್ತು. ಕೋಸಿಕ್ ಕುಳಿತುಕೊ, ಇಲ್ಲ, ಹೌದು ಮತ್ತು ಮಲಗು ಮೊದಲಾದವನ್ನೂ ಒಳಗೊಂಡಂತೆ ಸುಮಾರು ಎಂಟು ಕೊರಿಯನ್ ಪದಗಳನ್ನು ಅನುಕರಿಸುವ ಶಬ್ದಗಳನ್ನು ಮಾಡಬಲ್ಲುದು. ಅದರ ಅನುಕರಣೆಯು ಅಸಾಧಾರಣ ರೀತಿಯಲ್ಲಿ ಮಾನವರ ಶಬ್ದದಂತೆಯೇ ಇದೆ. ಮಾನವರು ತಮ್ಮ ಬೆರಳುಗಳಿಂದ ಸಿಳ್ಳೆ ಹೊಡೆಯುವ ರೀತಿಯಲ್ಲಿ, ಕೋಸಿಕ್ ಅದರ ಸೊಂಡಿಲನ್ನು ಬಾಯಿಯಲ್ಲಿ ಇಟ್ಟುಕೊಂಡು, ಉಸಿರು ಹೊರಬಿಡುವಾಗ ಅದನ್ನು ಅಲ್ಲಾಡಿಸುವ ಮೂಲಕ ಮಾನವರಂತೆ ಶಬ್ದಗಳನ್ನು ಮಾಡುತ್ತದೆ.[೩೮] ಆನೆಗಳು ಬೇರೆ ಆನೆಗಳ ಸ್ಥಳಗಳಿಂದ ದೂರವಿದ್ದಾಗ ಅವುಗಳೊಂದಿಗೆ ಪರಸ್ಪರ ಸಂಪರ್ಕ ಇಟ್ಟುಕೊಳ್ಳಲು ಒಂದು ರೀತಿಯ ಸಂಪರ್ಕ ಕೂಗುಗಳನ್ನು ಬಳಸುತ್ತವೆ. ಹೆಣ್ಣಾನೆಗಳು ತಮ್ಮ ಕುಟುಂಬದ ಹೆಣ್ಣಾನೆಗಳ ಸಂಪರ್ಕ-ಕೂಗುಗಳನ್ನು ನೆನೆಪಿಸಿಕೊಳ್ಳುವ ಮತ್ತು ಗುರುತಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಹಾಗೂ ಅವುಗಳ ವಿಸ್ತೃತ ಕುಟುಂಬ ಜಾಲದ ಹೊರಗಿನ ಹೆಣ್ಣಾನೆಗಳ ಗುಂಪಿನ ಆನೆಗಳನ್ನು ಕೂಡಿಸುತ್ತವೆ. ಅವು ಎಷ್ಟು ಬಾರಿ ಸಂಧಿಸಿದ್ದಾವೆಂಬ ಆಧಾರದಲ್ಲಿ ಕುಟುಂಬದ ಇತರ ಆನೆಗಳ ಕೂಗುಗಳನ್ನೂ ಗುರುತಿಸಬಲ್ಲವು.[೩೯]
ಆನೆಗಳು ಅವುಗಳ ಸೊಂಡಿಲುಗಳನ್ನು ಕೈಗಳಂತೆ ಬಳಸಿಕೊಂಡು ಸಲಕರಣೆಗಳನ್ನು ಉಪಯೋಗಿಸುವ ಗಮನಾರ್ಹ ಸಾಮರ್ಥ್ಯವನ್ನು ತೋರಿಸುತ್ತವೆ. ಆನೆಗಳು ಬಾಯಾರಿಕೆಯಾದಾಗ ನೀರು ಕುಡಿಯಲು ಗುಂಡಿಗಳನ್ನು ತೋಡುತ್ತವೆ, ನಂತರ ಮರದ ತೊಗಟೆಯನ್ನು ತೆಗೆದು, ಅದನ್ನು ಕಚ್ಚಿ ಚೆಂಡಿನಾಕಾರ ನೀಡಿ ಆ ಗುಂಡಿಗಳ ಮೇಲೆ ಇಟ್ಟು, ನೀರು ಆವಿಯಾಗಿ ಹೋಗದಂತೆ ತಡೆಯಲು ಅದನ್ನು ಮಣ್ಣಿನಿಂದ ಮುಚ್ಚುತ್ತವೆ. ನಂತರ ಬೇಕೆಂದಾಗ ಆ ಜಾಗಕ್ಕೆ ಬಂದು ನೀರು ಕುಡಿಯುತ್ತವೆ. ಅವು ಕೀಟಗಳನ್ನು ಹೊಡೆದು ಸಾಯಿಸಲು ಅಥವಾ ತಮ್ಮ ಮೈ ತುರಿಸಿಕೊಳ್ಳಲು ಹೆಚ್ಚಾಗಿ ಮರದ ಕೊಂಬೆಗಳನ್ನು ಬಳಸುತ್ತವೆ.[೩೧] ಆನೆಗಳು ವಿದ್ಯುತ್ ಬೇಲಿಯನ್ನು ನಾಶಮಾಡಲು ಅಥವಾ ಅದರಲ್ಲಿನ ವಿದ್ಯುತ್ ಸಂಪರ್ಕವನ್ನು ಕಡಿದುಹಾಕಲು ಆ ಬೇಲಿಯ ಮೇಲೆ ದೊಡ್ಡ ಕಲ್ಲುಗಳನ್ನು ಹಾಕುತ್ತವೆ ಎಂಬುದೂ ತಿಳಿದುಬಂದಿದೆ.[೨೧]
ಅನೇಕ ಇತರ ಜೀವಿಗಳಂತೆ, ಆನೆಗಳು ಕುಂಚಗಳನ್ನು ಹಿಡಿದುಕೊಳ್ಳಲು ತಮ್ಮ ಸೊಂಡಿಲುಗಳನ್ನು ಬಳಸಿಕೊಂಡು ಅಮೂರ್ತ ಕಲಾಕೃತಿಗಳನ್ನು ರಚಿಸಬಲ್ಲವು. ಇದಕ್ಕೆ ಒಂದು ಉದಾಹರಣೆಯನ್ನು ಎಕ್ಸ್‌ಟ್ರಾರ್ಡಿನರಿ ಆನಿಮಲ್ಸ್ ಎಂಬ ಟಿವಿ ಕಾರ್ಯಕ್ರಮವೊಂದರಲ್ಲಿ ತೋರಿಸಲಾಗಿದೆ, ಇದರಲ್ಲಿ ಥೈಲ್ಯಾಂಡ್‌ನ ಒಂದು ಕ್ಯಾಂಪ್‌ನಲ್ಲಿನ ಆನೆಗಳು ಹೂಗಳಿಂದ ತಮ್ಮ ಸ್ವಂತ-ಚಿತ್ರಗಳನ್ನು ಬಿಡಿಸುವುದನ್ನು ತೋರಿಸಲಾಗಿತ್ತು. ಚಿತ್ರಗಳನ್ನು ಆನೆಗಳು ಬಿಡಿಸುತ್ತಿದ್ದರೂ, ಅವುಗಳಿಗೆ ಒಬ್ಬ ವ್ಯಕ್ತಿಯು ಸಹಾಯ ಮತ್ತು ಮಾರ್ಗದರ್ಶನ ನೀಡುತ್ತಿದ್ದನು.[ಸೂಕ್ತ ಉಲ್ಲೇಖನ ಬೇಕು] ಆ ಚಿತ್ರಗಳಿಂದ, ಆನೆಗಳು ಅವುಗಳು ಬಿಡಿಸಿದ ಚಿತ್ರಗಳ ಆಕಾರದ ಬಗ್ಗೆ ತಿಳಿದಿವೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತವಾಗಿ ನಿರ್ಣಯಿಸಲು ಸಾಧ್ಯವಿಲ್ಲ.[dubious ] ಸ್ವಪ್ರಜ್ಞೆಯನ್ನು ಸೂಚಿಸುವ, ಆನೆಯೊಂದು ಅದರದೇ ಚಿತ್ರವನ್ನು ಬಿಡಿಸುವ ಅದ್ಭುತ ವೀಡಿಯೊ ಸಾಕ್ಷ್ಯ-ಸಂಗ್ರಹವು ಅಂತರಜಾಲ ಸುದ್ದಿ ಮತ್ತು ವೀಡಿಯೊ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತು.[೪೦] ಆ ವರ್ಣಚಿತ್ರದ ಗುಣಮಟ್ಟವು ಅತ್ಯುತ್ತಮವಾಗಿರುವುದರಿಂದ, ಹೆಚ್ಚಿನ ಆಶ್ಚರ್ಯಚಕಿತರಾದ ವೀಕ್ಷಕರು ಆ ವೀಡಿಯೊದ ನಿಜತ್ವದ ಬಗ್ಗೆ ಅನುಮಾನಿಸಿದರು. ನಗರದ ಆಧಾರರಹಿತವಾದ ನಂಬಿಕೆಗಳ ನಿಜಸ್ವರೂಪವನ್ನು ತಿಳಿಯಪಡಿಸುವ ಜಾಲತಾಣ snopes.com ಈ ವೀಡಿಯೊವನ್ನು 'ನಿಜವಾದುದೆಂದು' ಪಟ್ಟಿಮಾಡಿದೆ. ಅದರಲ್ಲಿ ಆನೆಯು ಕುಂಚದ ಗೆರೆಗಳಿಂದ ಚಿತ್ರಗಳನ್ನು ಬಿಡಿಸಿದೆ, ಆದರೆ ಬಿಡಿಸಿದ ಚಿತ್ರಗಳ ಸಮಾನರೂಪತೆಯು ಸೃಜನಾತ್ಮಕ ಪ್ರಯತ್ನವಾಗಿರದೆ ಅದೊಂದು ಕಲಿಸಿಕೊಟ್ಟ ಚಿತ್ರವೆಂಬುದನ್ನು ಸೂಚಿಸುತ್ತದೆ.[೪೧]
ಆನೆಗಳು ಸಮಸ್ಯೆಗಳನ್ನು ಪರಿಹರಿಸಲು ದೀರ್ಘ ಕಾಲ ಕಳೆಯುವ ಸಾಮರ್ಥ್ಯವನ್ನು ಹೊಂದಿವೆ. ಅವು ಹೊಸ ಸವಾಲುಗಳನ್ನು ಎದುರಿಸಲು ತಮ್ಮ ವರ್ತನೆಗಳನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬಲ್ಲವು, ಇದು ಸಂಕೀರ್ಣ ಬುದ್ಧಿಶಕ್ತಿಯ ಉತ್ಕೃಷ್ಟ ಲಕ್ಷಣವಾಗಿದೆ. ಆಹಾರವನ್ನು ಪಡೆಯಲು, ಬಹುಮಾನಕ್ಕಾಗಿ ಒಂದು ಹಗ್ಗದ ಎರಡು ತುದಿಗಳನ್ನು ಏಕಕಾಲದಲ್ಲಿ ಎಳೆಯುವಂತಹ ಎರಡು ಆನೆಗಳು ಬೇಕಾಗುವ ಕಾರ್ಯವೊಂದರಲ್ಲಿ ಆನೆಗಳು ಒಂದು ಜೊತೆಗಾರ ಆನೆಯೊಂದಿಗೆ ಹೊಂದಿಕೊಳ್ಳುವುದನ್ನು ಕಲಿತುಕೊಳ್ಳುತ್ತವೆಂದು ೨೦೧೦ರ ಪ್ರಯೋಗವೊಂದು ತಿಳಿಯಪಡಿಸಿದೆ,[೩][೪೨] ಇದು ಅವುಗಳ ಸಹಕರಿಸುವ(ಹೊಂದಿಕೊಳ್ಳುವ) ಕೌಶಲಗಳ ಆಧಾರದಲ್ಲಿ ಅವುಗಳಿಗೆ ಚಿಂಪಾಜಿಗಳೊಂದಿಗೆ ಸಮಾನ ಸ್ಥಾನವನ್ನು ನೀಡುತ್ತದೆ. ೧೯೭೦ರ ದಶಕದಲ್ಲಿ, USA ಯ ಮೆರೈನ್ ವರ್ಲ್ಡ್ ಆಫ್ರಿಕಾದಲ್ಲಿ ಬಾಂದುಲ ಹೆಸರಿನ ಒಂದು ಏಷ್ಯನ್ ಆನೆಯಿತ್ತು. ಬಾಂದುಲ ಅದರ ಕಾಲುಗಳನ್ನು ಹಾಕಿದ್ದ ಬಂಧನ ಸಂಕೋಲೆಗಳಲ್ಲಿ ಬಳಸುತ್ತಿದ್ದ ಸಾಧನವನ್ನು ಮುರಿಯಲು ಅಥವಾ ಅದರ ಬೀಗ ತೆಗೆಯಲು ಕಲಿತುಕೊಂಡಿತ್ತು. ಎರಡು ವಿರುದ್ಧ ಬದಿಗಳು ಪರಸ್ಪರ ಜಾರಿದರೆ ಮುಚ್ಚಿಕೊಳ್ಳುವ ಒಂದು ಸಂಕೀರ್ಣವಾದ ಸಾಧನ ಬ್ರೋಮ್ಮಲ್ ಕೊಂಡಿಯನ್ನು ಬಳಸಲಾಗುತ್ತಿತ್ತು. ಬಾಂದುಲವು ಆ ಕೊಂಡಿಯು ಸರಿಹೊಂದಿದಾಗ ಪ್ರತ್ಯೇಕಗೊಂಡು ಜಾರಿಹೋಗುವವರೆಗೆ ಅದನ್ನು ಆಡಿಸುತ್ತಲೇ ಇರುತ್ತಿತ್ತು. ಒಮ್ಮೆ ಅದು ಆ ಸಂಕೋಲೆಗಳಿಂದ ಬಿಡಿಸಿಕೊಂಡ ನಂತರ ಇತರ ಆನೆಗಳಿಗೆ ಬಿಡಿಸಿಕೊಳ್ಳಲು ಸಹಾಯ ಮಾಡುತ್ತಿತ್ತು.[೩೨] ಬಾಂದುಲದ ಘಟನೆಯಲ್ಲಿ ಮತ್ತು ಸೆರೆಯಲ್ಲಿರುವ ಇತರ ಆನೆಗಳ ಸಂಗತಿಗಳಲ್ಲಿ, ತಪ್ಪಿಸಿಕೊಳ್ಳುವ ಸಂದರ್ಭಗಳಲ್ಲಿ ವಂಚನೆಯ ಅಂಶವು ಕಂಡುಬಂದಿತ್ತು, ಉದಾ, ಆ ಪ್ರಾಣಿಗಳು ಯಾರೂ ಗಮನಿಸುತ್ತಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲು ಸುತ್ತಲೂ ನೋಡುತ್ತಿದ್ದವು.[೩೨] ಮತ್ತೊಂದು ಘಟನೆಯಲ್ಲಿ, ಒಂದು ಹೆಣ್ಣಾನೆಯು ಒಂದು ಇಂಚಿನಷ್ಟು ದಪ್ಪವಿರುವ ತೂತಿರುವ ಕಬ್ಬಿಣದ ಸರಳುಗಳನ್ನು ಹೇಗೆ ಕಳಚುವುದು ಎಂಬುದನ್ನು ತಿಳಿದುಕೊಂಡಿತ್ತು. ಅದು ತನ್ನ ಸೊಂಡಿಲನ್ನು ಸನ್ನೆಯ ರೀತಿಯಲ್ಲಿ ಬಳಸಿಕೊಂಡು, ಬೋಲ್ಟನ್ನು ತಿರುಚಿ ಬಿಡಿಸಿಕೊಳ್ಳುತ್ತಿತ್ತು.[೩೨] ಫೊಯನಿಕ್ಸ್ ಮೃಗಾಲಯದಲ್ಲಿನ ಒಂದು ಏಷ್ಯನ್ ಆನೆ ರೂಬಿಯು ಹೆಚ್ಚಾಗಿ ಪಾಲಕರು ಅದರ ಬಗ್ಗೆ ಮಾತನಾಡುವುದನ್ನು ಕದ್ದುಕೇಳುತ್ತಿತ್ತು. ಅದು ವರ್ಣಚಿತ್ರ ವೆಂಬ ಪದವನ್ನು ಕೇಳಿದಾಗ, ತುಂಬಾ ಉದ್ರೇಕಗೊಂಡಿತು. ಹಸಿರು, ಹಳದಿ, ನೀಲಿ ಮತ್ತು ಕೆಂಪು ಅದರ ಮೆಚ್ಚಿನ ಬಣ್ಣಗಳಾಗಿದ್ದವು. ಒಂದು ದಿನ, ಒಬ್ಬ ವ್ಯಕ್ತಿಗೆ ಹೃದಾಘಾತವಾದುದರಿಂದ ಆತನನ್ನು ಕರೆದೊಯ್ಯಲು ಆಸ್ಪತ್ರೆಗಾಡಿಯೊಂದು ಬಂದು ಈ ಆನೆಯ ಆವರಣದ ಹೊರಗೆ ನಿಂತುಕೊಂಡಿತ್ತು. ಆ ವಾಹನದ ಮೇಲಿನ ಬೆಳಕು ಕೆಂಪು, ಬಿಳಿ ಮತ್ತು ಹಳದಿ ಬಣ್ಣದಲ್ಲಿ ಬೆಳಗುತ್ತಿದ್ದವು. ನಂತರದ ದಿನಗಳಲ್ಲಿ ರೂಬಿಯು ಚಿತ್ರಬಿಡಿಸಿದಾಗ ಈ ಬಣ್ಣಗಳನ್ನು ಆರಿಸಿಕೊಂಡಿತು. ಅದು ಪಾಲಕರು ಧರಿಸುತ್ತಿದ್ದ ಬಣ್ಣಗಳಿಗೂ ಆದ್ಯತೆಯನ್ನು ನೀಡಿತ್ತು.[೩೨] ಆನೆಗೆ ತರಬೇತಿ ನೀಡುವ ತರಪೇತುದಾರ ಹ್ಯಾರಿ ಪೀಚೆಯು ಕೋಕೊ ಹೆಸರಿನ ಒಂದು ಆನೆಯೊಂದಿಗೆ ಅನ್ಯೋನ್ಯ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಕೋಕೊ ಪಾಲಕರಿಗೆ ಸಹಾಯ ಮಾಡುತ್ತಿತ್ತು, ಕೋಕೊ ಕಲಿಯಬಹುದಾದ ವಿವಿಧ ಆದೇಶಗಳು ಮತ್ತು ಪದಗಳೊಂದಿಗೆ ಅದನ್ನು ಪ್ರೋತ್ಸಾಹಿಸಲು ಅದು ಪಾಲಕರನ್ನು ಪ್ರೇರೇಪಿಸುತ್ತಿತ್ತು. ಆನೆಗಳು ಅವುಗಳೊಂದಿಗೆ ಗೌರವ ಮತ್ತು ಸೂಕ್ಷ್ಮತೆಯಿಂದ ನಡೆದುಕೊಳ್ಳುವವರೆಗೆ ಮಾನವರೊಂದಿಗೆ ಅನ್ಯೋನ್ಯದಿಂದಿರುತ್ತವೆ ಮತ್ತು ಅವರಿಗಾಗಿ ಕೆಲಸ ಮಾಡಿಕೊಡುತ್ತವೆ ಎಂದು ಪೀಚೆ ಹೇಳಿದ್ದಾರೆ. ಕೋಕೊ ಅದರ ಪಾಲಕರಿಗೆ ಹೆಣ್ಣಾನೆಗಳನ್ನು ಮತ್ತೊಂದು ಮೃಗಾಲಯಕ್ಕೆ ಸಾಗಿಸಲು 'ಆನೆಯ ಸಹಾಯ' ಬೇಕಾದಾಗ ನೆರವು ನೀಡುತ್ತಿತ್ತು. ಪಾಲಕರು ಹೆಣ್ಣಾನೆಯೊಂದನ್ನು ವರ್ಗಾಯಿಸಲು ಬಯಸಿದಾಗ, ಅವರು ಸಾಮಾನ್ಯವಾಗಿ ಅದರ ಹೆಸರು ಮತ್ತು ನಂತರ ವರ್ಗಾವಣೆ ಎಂಬ ಪದವನ್ನು (ಉದಾ, "ಕೊನ್ನಿ ವರ್ಗಾವಣೆ") ಹೇಳುತ್ತಿದ್ದರು. ಕೋಕೊ ಶೀಘ್ರದಲ್ಲಿ ಅದೇನೆಂದು ಅರ್ಥ ಮಾಡಿಕೊಳ್ಳುತ್ತಿತ್ತು. ಪಾಲಕರು ಆನೆಯೊಂದರ ಹತ್ತಿರ ವರ್ಗಾಯಿಸಲು ನೆರವು ಕೇಳಿದಾಗ ಅದು ಕದಲದಿದ್ದರೆ, ಅವರು 'ಕೋಕೊ ನಮಗೆ ಸಹಾಯ ಮಾಡು' ಎಂದು ಹೇಳುತ್ತಿದ್ದರು. ಇದನ್ನು ಕೇಳಿದ ಕೋಕೊ ತಕ್ಷಣವೇ ಅವರಿಗೆ ಸಹಾಯ ಮಾಡಲು ಸಿದ್ಧವಾಗುತ್ತಿತ್ತು. ೨೭ ವರ್ಷಗಳ ಕಾಲ ಆನೆಗಳೊಂದಿಗೆ ಜತೆಯಾಗಿ ಕೆಲಸ ಮಾಡಿದ ನಂತರ ಅವು ಕೇಳಿಸಿಕೊಳ್ಳುವ ಕೆಲವು ಪದಗಳ ಶಬ್ದಾರ್ಥ ಮತ್ತು ವಾಕ್ಯರಚನೆಗಳನ್ನು ಅರ್ಥೈಸಿಕೊಳ್ಳಬಲ್ಲವು ಎಂದು ಪೀಚೆ ದೃಢವಾಗಿ ನಂಬುತ್ತಾರೆ. ಇದು ಪ್ರಾಣಿ ಜಗತ್ತಿನಲ್ಲಿ ತುಂಬಾ ವಿರಳವಾದುದಾಗಿದೆ.[೩೨] ಟೋಕಿಯೊ ವಿಶ್ವವಿದ್ಯಾನಿಲಯದ ಡಾ. ನಯೋಕೊ ಐರಿಯ ಅಧ್ಯಯನವೊಂದು, ಆನೆಗಳು ಲೆಕ್ಕದಲ್ಲೂ ಕೌಶಲಗಳನ್ನು ತೋರಿಸುತ್ತವೆಂದು ತಿಳಿಯಪಡಿಸಿದೆ. ಈ ಪ್ರಯೋಗದಲ್ಲಿ, ಯುಯೆನೊ ಮೃಗಾಲಯದ ಆನೆಗಳ ಮುಂದೆ ಎರಡು ಬಕೆಟ್‌ಗಳಲ್ಲಿ ವಿವಿಧ ಸಂಖ್ಯೆಯ ಸೇಬುಗಳನ್ನು ಹಾಕಿ, ಆ ಆನೆಗಳು ಎಷ್ಟು ಬಾರಿ ಹೆಚ್ಚು ಹಣ್ಣುಗಳನ್ನು ಹೊಂದಿರುವ ಸರಿಯಾದ ಬಕೆಟ್ಅನ್ನು ಆರಿಸುತ್ತವೆ ಎಂಬುದನ್ನು ದಾಖಲಿಸಲಾಯಿತು. ಒಂದಕ್ಕಿಂತ ಹೆಚ್ಚು ಸೇಬುಗಳನ್ನು ಬಕೆಟ್‌ಗೆ ಹಾಕಿದಾಗ, ಆನೆಗಳು ಮನಸ್ಸಿನಲ್ಲೇ ಹಣ್ಣುಗಳನ್ನು ಲೆಕ್ಕ ಮಾಡುತ್ತಿದ್ದವು. ಈ ಪ್ರಯೋಗವು ಈ ಕೆಳಗಿನಂತೆ ಫಲಿತಾಂಶವನ್ನು ನೀಡಿತು - ಎಪ್ಪತ್ತನಾಲ್ಕು ಪ್ರತಿಶತದಷ್ಟು ಬಾರಿ ಆನೆಗಳು ಸರಿಯಾಗಿ ಸಂಪೂರ್ಣ ತುಂಬಿದ ಬಕೆಟ್ಅನ್ನು ಆರಿಸಿದ್ದವು. ಆಶ್ಯಾ ಹೆಸರಿನ ಆಫ್ರಿಕನ್ ಆನೆಯೊಂದು ಅದ್ಭುತವಾಗಿ ಎಂಭತ್ತೇಳು ಪ್ರತಿಶತದಷ್ಟು ಬಾರಿ ಸರಿಯಾಗಿ ಆರಿಸುವುದರೊಂದಿಗೆ ಅತ್ಯಂತ ಹೆಚ್ಚು ಅಂಕಗಳಿಸಿತು. ಇದೇ ಸ್ಪರ್ಧೆಯಲ್ಲಿ ಮಾನವರು ಕೇವಲ ಅರವತ್ತೇಳು ಪ್ರತಿಶತದಷ್ಟು ಬಾರಿ ಸರಿಯಾಗಿ ಹೇಳಿದರು. ಆ ಅಧ್ಯಯನದ ಖಚಿತತೆಯನ್ನು ದೃಢಪಡಿಸಲು ಅದನ್ನು ಚಿತ್ರೀಕರಿಸಲಾಯಿತು.[೪೩]
ಏಷ್ಯನ್ ಆನೆಗಳನ್ನು ಸ್ವ-ಪ್ರಜ್ಞೆಯನ್ನು ವ್ಯಕ್ತಪಡಿಸುವ ದೊಡ್ಡ ಕಪಿಗಳು, ಸೀಸೆ-ಮೂತಿಯ ಡಾಲ್ಫಿನ್‌ಗಳು ಮತ್ತು ಮ್ಯಾಗ್‌ಪೈ ಮೊದಲಾದವನ್ನು ಒಳಗೊಂಡ ಪ್ರಾಣಿಗಳ ಒಂದು ಸಣ್ಣ ಗುಂಪಿಗೆ ಸೇರಿಸಲಾಗಿದೆ. ಇದರ ಬಗ್ಗೆ ಅಧ್ಯಯನವನ್ನು ನ್ಯೂಯಾರ್ಕ್‌ನ ಬ್ರೋಂಕ್ಸ್ ಮೃಗಾಲಯದ ಆನೆಗಳನ್ನು ಬಳಸಿಕೊಂಡು ವೈಲ್ಡ್‌ಲೈಫ್ ಕನ್ಸರ್ವೇಶನ್ ಸೊಸೈಟಿಯು (WCS) ನಡೆಸಿತು. ಕನ್ನಡಿಯನ್ನು ನೋಡಿ ಹೆಚ್ಚಿನ ಪ್ರಾಣಿಗಳು ಪ್ರತಿಕ್ರಿಯಿಸಿದರೂ, ಕೆಲವು ಮಾತ್ರ ನಿಜವಾಗಿ ಕನ್ನಡಿಯಲ್ಲಿರುವ ಪ್ರತಿಬಿಂಬವು ತಮ್ಮದೇ ಎಂದು ಪತ್ತೆಹಚ್ಚಿರುವ ಬಗ್ಗೆ ಸ್ಪಷ್ಟತೆಯನ್ನು ತೋರಿಸುತ್ತವೆ. ಈ ಅಧ್ಯಯನದಲ್ಲಿನ ಏಷ್ಯನ್ ಆನೆಗಳೂ ಸಹ ೨.೫ ಮೀಟರ್-ಬೈ-೨.೫ ಮೀಟರ್ ಕನ್ನಡಿಯ ಮುಂದೆ ನಿಂತುಕೊಂಡಾಗ ಈ ರೀತಿಯ ವರ್ತನೆಯನ್ನು ಪ್ರಕಟಪಡಿಸಿದವು - ಅವು ಹಿಂದಕ್ಕೆ ಹೋಗಿ, ಆಹಾರವನ್ನು ಕನ್ನಡಿಯ ಹತ್ತಿರಕ್ಕೆ ತಂದು ತಿನ್ನಿಸಲು ಪ್ರಯತ್ನಿಸಿದವು. ಹ್ಯಾಪಿ ಹೆಸರಿನ ಆನೆಯು ಕನ್ನಡಿಯಲ್ಲಿ ಮಾತ್ರ ಕಾಣಿಸುವ ಅದರ ತಲೆಯ ಮೇಲಿನ ಗುರುತು X ಅನ್ನು ತನ್ನ ಸೊಂಡಿಲಿನಿಂದ ನಿರಂತರವಾಗಿ ಸ್ಪರ್ಶಿಸುತ್ತಿದ್ದುದರಿಂದ ಆನೆಯ ಸ್ವ-ಪ್ರಜ್ಞೆಯ ಬಗ್ಗೆ ಸ್ಪಷ್ಟತೆಯು ಕಂಡುಬಂದಿತು. ಹ್ಯಾಪಿ ಅದರ ತಲೆಯ ಮುಂಭಾಗದಲ್ಲಿದ್ದ ಬಣ್ಣಗಳಿಲ್ಲದೆ ಮಾಡಿದ ಮತ್ತೊಂದು ಗುರುತನ್ನು ಅಲಕ್ಷಿಸಿತು, ಇದು ಅದು ವಾಸನೆ ಅಥವಾ ಭಾವನೆಗೆ ಪ್ರತಿಕ್ರಿಯಿಸುವುದಿಲ್ಲವೆಂಬುದನ್ನು ಖಚಿತಪಡಿಸಿತು. ಈ ಅಧ್ಯಯನವನ್ನು ಮಾಡಿದ ಫ್ರ್ಯಾನ್ಸ್ ಡಿ ವಾಲ್ ಹೀಗೆಂದು ಹೇಳಿದ್ದಾರೆ - ಈ ಮಾನವರು ಮತ್ತು ಆನೆಗಳ ನಡುವಿನ ಹೋಲಿಕೆಯು ಸಂಕೀರ್ಣ ಸಮಾಜ ಮತ್ತು ಸಹಕಾರಕ್ಕೆ ಸಂಬಂಧಿಸಿದ ಒಂದು ಅಭಿಗಾಮಿ ಅರಿವಿನ ವಿಕಾಸವನ್ನು ಸೂಚಿಸುತ್ತದೆ.[೪೪] ಕೀನ್ಯಾದ ಅಂಬೋಸೆಲಿ ಎಲಿಫ್ಯಾಂಟ್ ರಿಸರ್ಚ್ ಪ್ರಾಜೆಕ್ಟ್‌ನ ಜಾಯ್ಸೆ ಪೂಲ್, ಆನೆಗಳು ಪರಸ್ಪರ ಮತ್ತು ಪರಿಸರದಲ್ಲಿ ಮಾಡುವ ಶಬ್ದಗಳ ಅನುಕರಣೆ ಮತ್ತು ಉಚ್ಚಾರದ ಕಲಿಯುವಿಕೆಯನ್ನು ತೋರ್ಪಡಿಸಿದರು. ಆಕೆ ಆನೆಗಳು ಉಂಟುಮಾಡುವ ಶಬ್ದಗಳು ಭಾಷಾಪ್ರಭೇದವನ್ನು ಹೊಂದಿವೆಯೇ ಎಂಬುದನ್ನು ಸಂಶೋಧಿಸಲು ಆರಂಭಿಸಿದ್ದಾರೆ, ಇದು ಪ್ರಾಣಿ ಜಗತ್ತಿನಲ್ಲೇ ವಿರಳವಾದ ಒಂದು ವಿಶೇಷ ಲಕ್ಷಣವಾಗಿದೆ.[೩೬]
ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನದ ಆಫ್ರಿಕನ್ ಆನೆಗಳನ್ನು ಅವುಗಳ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಕೊಲ್ಲುವ ಬಗ್ಗೆ ಗಮನಾರ್ಹವಾದ ವಿವಾದವಿದೆ. ಅವುಗಳನ್ನು[೪೫] ಕೊಲ್ಲುವುದು 'ಅನಾವಶ್ಯಕ ಮತ್ತು ಅಮಾನವೀಯತೆ'ಯಾಗಿದೆಯೆಂದು ಕೆಲವು ವಿಜ್ಞಾನಿಗಳು ಮತ್ತು ಪರಿಸರಿ-ತಜ್ಞರು ವಾದಿಸುತ್ತಾರೆ ಏಕೆಂದರೆ ಆನೆಗಳು ಅನೇಕ ರೀತಿಯಲ್ಲಿ ಮಾನವರನ್ನು ಹೋಲುತ್ತವೆ, ದೊಡ್ಡ ಗಾತ್ರದ ಮಿದುಳುಗಳನ್ನು ಹೊಂದಿರುವುದು ಮಾತ್ರವಲ್ಲದೆ ಪರಾನುಭೂತಿಯುಳ್ಳ ಸಾಮಾಜಿಕ ಸಂಬಂಧ, ದೀರ್ಘ ಗರ್ಭಾವಧಿ, ಹೆಚ್ಚು ಬುದ್ಧಿಶಕ್ತಿ, ಮರಿಗಳಿಗೆ ದೀರ್ಘಕಾಲದ ಅವಲಂಬಿತ ಕಾಳಜಿಯ ಅಗತ್ಯತೆ ಮತ್ತು ದೀರ್ಘ ಜೀವನಾವಧಿ.[೪೬]: 20824 ದಕ್ಷಿಣ ಆಫ್ರಿಕಾದ ಪ್ರಾಣಿಗಳ ಹಕ್ಕುಗಳ ಗುಂಪೊಂದು ಹೀಗೆಂದು ಒಂದು ಹೇಳಿಕೆಯಲ್ಲಿ ಕೇಳಿದೆ 'ನಮ್ಮಂತೆ ಎಷ್ಟು ಆನೆಗಳು ಅವುಗಳನ್ನು ಕೊಲ್ಲಲಾಗುತ್ತಿದೆಯೆಂದು ತಿಳಿದು ನಮ್ಮನ್ನು ಸಾಯಿಸುತ್ತಿವೆ?'.[೪೭] ಜೀವವೈವಿಧ್ಯತೆಗೆ ಅಪಾಯ ಉಂಟಾಗುವುದರಿಂದ ಈ ರೀತಿ ಕೊಲ್ಲುವುದು ಅಗತ್ಯವಾದುದೆಂದು ಇತರರು ವಾದಿಸುತ್ತಾರೆ.[೪೮]
{{cite book}}
: Unknown parameter |coauthors=
ignored (|author=
suggested) (help)
{{cite journal}}
: Check date values in: |date=
and |year=
/ |date=
mismatch (help)
{{cite journal}}
: Unknown parameter |coauthors=
ignored (|author=
suggested) (help); Unknown parameter |month=
ignored (help)
{{cite journal}}
: More than one of |pages=
and |page=
specified (help)
{{cite journal}}
: Check date values in: |date=
and |year=
/ |date=
mismatch (help)
{{cite web}}
: Check |url=
value (help)
{{cite journal}}
: Unknown parameter |coauthors=
ignored (|author=
suggested) (help); Unknown parameter |month=
ignored (help)
{{cite journal}}
: Unknown parameter |month=
ignored (help)CS1 maint: multiple names: authors list (link)
{{cite journal}}
: Check date values in: |date=
and |year=
/ |date=
mismatch (help)
{{cite book}}
: ISBN / Date incompatibility (help)
{{cite journal}}
: Check date values in: |date=
and |year=
/ |date=
mismatch (help)