ಆರ್ಗಿರೊಡರ್ಮ ಉದ್ಯಾನವನದ ಒಂದು ರಸಭರಿತ ಕುಳ್ಳು ಸಸ್ಯ. ಗುಂಪಾಗಿ ಬೆಳೆದಿರುವ ಈ ಗಿಡದ ದೃಶ್ಯ ನೋಡುವವರಿಗೆ ಬಹಳ ವಿಚಿತ್ರ. ಆರ್ಗಿರೊಡರ್ಮ ಸಸ್ಯಗಳನ್ನು ಕುಂಡಸಸ್ಯಗಳಾಗಿಯೂ ಮನೆಯ ಅಲಂಕಾರ ಸಸ್ಯಗಳಾಗಿಯೂ ಬೆಳೆಸುತ್ತಾರೆ. ಈ ಜಾತಿಯ ಗಿಡಗಳು ಕಾಂಡವಿಲ್ಲದ, ಒಂದೇ ಸಸ್ಯದಿಂದ ಮೋಸುಗಳು ಹೊರಬಂದು ಗುಂಪಾಗಿ ಬೆಳೆಯುವ, ರಸಭರಿತ ಸಸ್ಯಗಳು. ಇವುಗಳ ಎಲೆಗಳು ಕಾಂಡದಂತೆ ಗುಂಪಾಗಿ ಕೊಳವೆಯಾಕಾರವಾಗಿ ಬೆಳೆಯುತ್ತವೆ. ಅಭಿಮುಖ ಸಂಯೋಗದಲ್ಲಿ ಜೋಡಿಸಿರುತ್ತವೆ. ಎಲೆಯ ಮೈ ಮೃದುವಾಗಿದೆ. ಅವುಗಳ ಆಕಾರ ಗಾತ್ರ ಮತ್ತು ಬಣ್ಣ ಪ್ರಭೇದಗಳನ್ನು ಆನುಸರಿಸುತ್ತವೆ. ತುದಿಯಲ್ಲಿ ಬಿಡುವ ಇದರ ಹೂವುಗಳು ತೊಟ್ಟಿಲ್ಲದವು; ಹೂವು ಎಲ್ಲ ಪ್ರಭೇದಗಳಲ್ಲೂ ದ್ವಿಲಿಂಗಿ. ಆದರೆ ಬಣ್ಣದಲ್ಲಿ ವ್ಯತ್ಯಾಸ ಇದೆ. ಆರ್ಗಿರೊಡರ್ಮ ಅಂಗುಸ್ಟಿ ಪೆಟಲಮ್ ಎಂಬ ಪ್ರಭೇದಗಳ ಎಲೆಗಳು ದಪ್ಪವಾಗಿ ಮೊಟ್ಟೆಯಾಕಾರದಲ್ಲಿವೆ. ಬೂದಿ ಮಿಶ್ರಿತ ಹಸಿರು ಬಣ್ಣದ ಎಲೆಯ ಮೇಲುಭಾಗದ ಮಧ್ಯದ ಸೀಳು ಆಳವಾಗಿದ್ದು, ತಳಭಾಗದಲ್ಲಿ ಅಂಟಿಕೊಂಡಿದೆ. ಈ ಸೀಳಿನ ಮಧ್ಯದಲ್ಲಿ ತೊಟ್ಟಿಲ್ಲದ ಹಳದಿ ಹೂಗಳು ಮೂಡಿರುತ್ತವೆ. ಆರ್ಗಿರೊಡರ್ಮ ಆಕ್ಟೊಫೈಲಮ್ ಎಂಬ ಇನ್ನೊಂದು ಪ್ರಭೇದದಲ್ಲಿ ನಾಲ್ಕು ಅಥವಾ ಎರಡು ನೀಲಿ ಮಿಶ್ರಿತ ಹಸುರು ಬಣ್ಣದ ಎಲೆಗಳಿದ್ದು, ತೊಟ್ಟಿಲ್ಲದ ಹಳದಿ ಬಣ್ಣದ ಸುಂದರವಾದ ಒಂಟೊಂಟಿ ಹೂ ಬಿಡುತ್ತದೆ. ಇದು ಎಲ್ಲ ಹವಾಗುಣಗಳಿಗೂ ಹೊಂದಿ ಕೊಂಡು ಬೆಳೆಯುವುದರಿಂದ ಹೆಚ್ಚಿನ ಜನಪ್ರಿಯತೆಗಳಿಸಿದೆ. ಇದರ ಉಗಮಸ್ಥಾನದ ಕೇಪ್ ಪ್ರಾವಿನ್ಸ್. ಈ ಕುಲದ ಸಸ್ಯಗಳನ್ನು ಬೀಜಗಳಿಂದ ಸುಲಭವಾಗಿ ಬೆಳೆಸಬಹುದು.