ಆವಕಿರೆ

Senna auriculata
At Sindhrot near Vadodara, Gujarat
Scientific classification e
Unrecognized taxon (fix): Senna
ಪ್ರಜಾತಿ:
S. auriculata
Binomial name
Senna auriculata
Synonyms

Cassia auriculata L.
Cassia densistipulata Taub.

ಸಾಮಾನ್ಯವಾಗಿ ಮಳೆ ಕಡಿಮೆ ಬೀಳುವ ಮರಳು ಮಿಶ್ರಿತ ಫಲವತ್ತಲ್ಲದ ಪ್ರದೇಶಗಳಲ್ಲಿ ಬೆಳೆಯುವ ನಿತ್ಯಹರಿದ್ವರ್ಣದ ಗಿಡ (ಕ್ಯಾಶಿಯಾ ಅರಿಕ್ಯುಲಾಟಾ). ತಂಗಡಿ ಪರ್ಯಾಯನಾಮ. ಗಿಡ ಆರೇಳು ಅಡಿ ಎತ್ತರ ಬೆಳೆದು ರೆಂಬೆಗಳು ನೆಲಕ್ಕೆ ಸೇರಿದಂತೆ ವಿಪುಲವಾಗಿ ಬುಡದಿಂದ ಹೊರಡುತ್ತವೆ. ಇದು ಭಾರತದ ಅರಣ್ಯಗಳಲ್ಲಿ ಒಂದು ಮುಖ್ಯ ಫಸಲು. ಚರ್ಮ ಹದಮಾಡಲು ಈ ಗಿಡದ ತೊಗಟೆ ಉತ್ತಮ ವಸ್ತು. ಮೈಸೂರು ಜಿಲ್ಲೆಯ ಹುಣಸೂರು ಕೇಂದ್ರದಲ್ಲಿ ತೊಗಟೆಯಿಂದ ಹದಮಾಡಿದ ಕಂದುಬಣ್ಣದ ಗಡುಸಾದ ಹೊದಿಕೆಯುಳ್ಳ ಚರ್ಮ ತಯಾರಿಸುತ್ತಾರೆ. ಇದಕ್ಕೆ ಹಲವು ವರ್ಷಗಳ ಹಿಂದೆ ಗಿರಾಕಿ ಬಹುವಾಗಿತ್ತು. ಬೆಂಗಳೂರು, ಮದರಾಸು ಚರ್ಮ ಹದಮಾಡುವ ಕೇಂದ್ರಗಳಲ್ಲಿ ಈಗಲೂ ಈ ಗಿಡದ ಚಕ್ಕೆಯನ್ನು ಉಪಯೋಗಿಸುತ್ತಾರೆ. ಮೊದಲನೆಯ ಮಹಾಯುದ್ಧದ ಅನಂತರ ಬಳಕೆಗೆ ಬಂದ ಜಾಲಿ ಜಾತಿಯ ಅಕೇಶಿಯಾ ಮಲನೊಕ್ಸೈಲಾನ್ ಎಂಬ ಗಿಡದಿಂದ ಈ ಗಿಡಕ್ಕೆ ಪ್ರಾಶಸ್ತ್ಯ ಕಡಿಮೆಯಾಯಿತು. ಆವರಿಕೆ ಸಸ್ಯದ ತೋಪುಗಳನ್ನು ನೀಲಗಿರಿ ಜಿಲ್ಲೆಯಲ್ಲಿ ತಮಿಳುನಾಡು ಸರ್ಕಾರ ಬೆಳೆಯಿಸುತ್ತಿದೆ.

A Senna auriculata shrub

ಲೆಗ್ಯುಮಿನೋಸಿ ಕುಟುಂಬ

[ಬದಲಾಯಿಸಿ]

ಆವರಿಕೆ, ಸೀಮೆತಂಗಡಿ, ಹುಣಸೆ ಇತ್ಯಾದಿ ಸಸ್ಯಗಳು ಲೆಗ್ಯುಮಿನೋಸಿ ಎಂಬ ಕುಟುಂಬದ ಸಿಸಾಲ್ಪಿನಾಯ್ಡೆ ಎಂಬ ಉಪಕುಟುಂಬಕ್ಕೆ ಸೇರಿವೆ. ಈ ಸಸ್ಯಗಳು ಮಧ್ಯ ಮತ್ತು ದಕ್ಷಿಣ ಭಾರತದ ಬಯಲುಗಳಲ್ಲೂ ಗುಡ್ಡಗಳಲ್ಲೂ ವ್ಯಾಪಕವಾಗಿ ಬೆಳೆಯುತ್ತವೆ. ಇದರ ಹಳದಿ ಹೂಗಳು ಅಕ್ಟೋಬರ್, ಮೇ ತಿಂಗಳುಗಳವರೆಗೂ ಅರಳುತ್ತವೆ. ಜೊತೆಯಲ್ಲೇ ಕಾಯಿಗಳೂ ಇರುತ್ತವೆ. ಬೀಜಗಳು ಬೇಗ ಮೊಳೆಯುವುದರಿಂದ ಸ್ವಾಭಾವಿಕ ರೀತಿಯಲ್ಲಿ ಪುನರುತ್ಪತ್ತಿಗೆ ಹೆಚ್ಚಿನ ಸೌಲಭ್ಯವುಂಟು.

ಗಿಡದ ರಚನೆ

[ಬದಲಾಯಿಸಿ]

ಜಾಲಿಮರದ ಜಾತಿಯ ಮರಗಳ ತೊಗಟೆ ಚರ್ಮ ಹದಮಾಡಲು ಬಳಕೆಗೆ ಬರುವ ಮುನ್ನ ಆವರಿಕೆ ಗಿಡಗಳನ್ನು ವ್ಯವಸಾಯಮಾಡಿ ಬೆಳೆಸುತ್ತಿದ್ದರು. ದನಗಳು ಮತ್ತು ಆಡುಗಳು ಇದರ ಸೊಪ್ಪನ್ನು ತಿನ್ನುವುದಿಲ್ಲವಾದ್ದರಿಂದ ಗಿಡಗಳಿಗೆ ಇವುಗಳಿಂದ ನಷ್ಟ ಉಂಟಾಗುತ್ತದೆ ಎಂಬ ಭಯವಿಲ್ಲ. ಗಿಡಕ್ಕೆ ಎರಡು ಮೂರು ವರ್ಷವಾದಾಗ ರೆಂಬೆಗಳನ್ನು ಬುಡದಲ್ಲಿ ಸ್ವಲ್ಪ ಬಿಟ್ಟು ಕತ್ತರಿಸಿ ತೊಗಟೆಯನ್ನು ಸಂಗ್ರಹಿಸುತ್ತಾರೆ. ರೆಂಬೆಗಳನ್ನು ಕತ್ತರಿಸಿದ ಮೇಲೆ ಅನೇಕ ಕವಲುಗಳು ಗಿಡದ ಉಳಿದ ಭಾಗಗಳಿಂದ ಹೊರಟು ಚೆನ್ನಾಗಿ ಬೆಳೆಯುತ್ತವೆ. ಪ್ರತಿ ವರ್ಷವೂ ಈ ರೀತಿ ರೆಂಬೆಗಳನ್ನು ಕತ್ತರಿಸಿ ತೊಗಟೆಗಳನ್ನು ಸಂಗ್ರಹಿಸುತ್ತಾರೆ. ವ್ಯವಸಾಯ ಮಾಡಿ ಬೆಳೆಯುವುದು ಈಚೆಗೆ ಕಡಿಮೆಯಾಗಿದೆ. ಬಂಜರು ಪ್ರದೇಶದಲ್ಲಿ ತಾನಾಗಿ ಬೆಳೆಯುವ ಗಿಡಗಳಿಂದ ತೊಗಟೆಯನ್ನು ಸಂಗ್ರಹಿಸುತ್ತಾರೆ. ತಮಿಳುನಾಡಿನಲ್ಲಿ ವರ್ಷಕ್ಕೆ ಹನ್ನೊಂದು ಸಾವಿರ ಟನ್ ತೊಗಟೆ ಈಗಲೂ ದೊರೆಯುತ್ತದೆ. ಮೈಸೂರು ಆಂಧ್ರ ಪ್ರಾಂತ್ಯಗಳಲ್ಲಿನ ವಾರ್ಷಿಕ ಉತ್ಪನ್ನ ಎಂಟು-ಹತ್ತು ಸಾವಿರ ಟನ್. ತೊಗಟೆಯಲ್ಲಿರುವ ಟ್ಯಾನಿನ್ ಹಸಿಚರ್ಮದೊಳಗಡೆ ವಿಶಾಲವಾಗಿ ಒಂದೇ ಸಮವಾಗಿ ಹರಡುತ್ತದೆ. ಇದರಿಂದ ಹಿಗ್ಗಿಸಲಾಗುವ ಬಾಳಿಕೆ ಬರುವ ತಿಳಿಬಣ್ಣದ ಹದಮಾಡಿದ ಚರ್ಮಸಿದ್ಧವಾಗುತ್ತದೆ. ಈ ಗುಣದಿಂದಾಗಿ ಇದರಿಂದ ಹದಮಾಡಿದ ಚರ್ಮಕ್ಕೆ ಗಿರಾಕಿ ವಿಶೇಷ.

ಔಷಧೀಯ ಗುಣಗಳು

[ಬದಲಾಯಿಸಿ]

ತೊಗಟೆಯಲ್ಲದೆ ಹೂ, ಎಲೆ ಹಣ್ಣುಗಳೂ ಉಪಯೋಗಕ್ಕೆ ಬರುತ್ತವೆ. ತೊಗಟೆಯಲ್ಲಿ ರಕ್ತಸ್ರಾವವನ್ನು ನಿಲ್ಲಿಸುವ ಗುಣವಿದೆ. ಹೂವಿನ ದಳಗಳನ್ನು ಒಣಗಿಸಿ ಅದರಿಂದ ಪಾನೀಯವನ್ನು (ಚಹ ಮಾಡುವಂತೆ) ಮಾಡಿ ಕುಡಿಯುತ್ತಾರೆ. ಎಲೆ ಮತ್ತು ಕಾಯಿಗಳಿಗೆ ಕರುಳಿನಲ್ಲಿರುವ ಜಂತುಗಳನ್ನು ನಾಶಮಾಡುವ ಶಕ್ತಿ ಇದೆ. ಬೇರು ಚರ್ಮರೋಗದಲ್ಲಿ, ಔಷಧಿಯಾಗಿ ಉಪಯೋಗಕ್ಕೆ ಬರುತ್ತದೆ. ಹಳ್ಳಿಗಾಡಿನವರು ಅಡಕೆ ಸಿಕ್ಕದಿದ್ದಾಗ ಇದರ ತೊಗಟೆಯ ಚೂರನ್ನು ವೀಳ್ಯದೆಲೆ ಜೊತೆ ಅಗಿಯಲು ಉಪಯೋಗಿಸುವುದುಂಟು.

ಉಲ್ಲೇಖ

[ಬದಲಾಯಿಸಿ]

[]

  1. Jayaweera (1981)[verification needed]