ಉಪಗುಪ್ತ: ಅಶೋಕ ಕಾಲದಲ್ಲಿದ್ದ ಪ್ರಸಿದ್ಥ ಬೌದ್ಧ ಸನ್ಯಾಸಿ. ಮೊಗ್ಗಲೀಪುತ್ತ ತಿಸ್ಸ ಎಂಬುದು ಅತನ ಇನ್ನೊಂದು ಹೆಸರು. ಬುದ್ಧದೇವನ ತರುವಾಯ ಬಂದು ವಿನಯಪಿಟಕದ ಮುಖ್ಯ ಆಚಾರ್ಯರಲ್ಲಿ ಐದನೆಯವ. ಅಶೋಕನ ಪಟ್ಟಾಭಿಷೇಕದ ವೇಳೆಗೆ ಈತನಿಗೆ 60 ವರ್ಷ. ಅನಂತರ 26 ವರ್ಷಗಳ ಕಾಲ ಜೀವಿಸಿದ್ದ. ಕಳಿಂಗ ಯುದ್ಧಾನಂತರ ಅಶೋಕ ಆಚಾರ್ಯ ಉಪಗುಪ್ತನೊಡನೆ ನಿಕಟವಾದ ಸಂಪರ್ಕವನ್ನಿಟ್ಟುಕೊಂಡಿದ್ದ[೧]: 16 . ಉಪಗುಪ್ತನಿಂದ ಬೌದ್ಧಮತವನ್ನು ಸ್ವೀಕರಿಸಿದನೆಂದೂ ಆ ಮತದ ಪುಣ್ಯಕ್ಷೇತ್ರಗಳಾದ ಲುಂಬಿಣೀವನ, ಬುದ್ಧಗಯ, ಸಾರಾನಾಥ ಮತ್ತು ಕುಶಿನಗರ ಸ್ಥಳಗಳನ್ನು ಅವನೊಡನೆ ಸಂದರ್ಶಿಸಿದನೆಂದೂ ಅಶೋಕಾವಧಾನ ಗ್ರಂಥದಿಂದ ತಿಳಿದುಬರುತ್ತದೆ. ಈತ ಅಶೋಕನ ಕಾಲದಲ್ಲಿ ಪಾಟಲೀಪುತ್ರದ ಅಶೋಕಾರಾಮದಲ್ಲಿ ನೆರವೇರಿದ 3ನೆಯ ಬೌದ್ಧ ಮಹಾ ಸಮ್ಮೇಳನದ ಅಧ್ಯಕ್ಷನಾಗಿದ್ದ. ಇವನ ಜೀವಿತ ಕಾಲದಲ್ಲಿ ರಚಿತವಾದ ಕಥಾವತ್ತು ಗ್ರಂಥದಲ್ಲಿ ಆ ಸಮ್ಮೇಳನಕ್ಕೆ ಸಂಬಂಧಿಸಿದ ದೀರ್ಘವಾದ ವಿವರಣೆಗಳಿವೆ. ಈತನ ಸ್ಮರಣಾರ್ಥವಾಗಿ ಮಧುರ ಪಟ್ಟಣದಲ್ಲಿ ಒಂದು ಬೌದ್ಧಸ್ತೂಪ ನಿರ್ಮಾಣವಾಯಿತು. ಮಹಾನಾಮ ಎಂಬುವವನಿಂದ ರಚಿತವಾದ ಮಹಾವಂಶ ಮತ್ತು ಬೌದ್ಧಮತದ ಪಾಳೀ ಗ್ರಂಥಗಳಿಂದ ಈತನಿಗೆ ಸಂಬಂಧಿಸಿದ ವಿವರಣೆಗಳು ದೊರೆಯುತ್ತವೆ.