ವೈದ್ಯಕೀಯ ಪರಿಭಾಷೆಯಲ್ಲಿ, ಊತ, ಬಾವು ಅಥವಾ ಊದುವಿಕೆಯು ಶರೀರದ ಒಂದು ಭಾಗ ಅಥವಾ ಪ್ರದೇಶದ ಅಶಾಶ್ವತ ಅಸಹಜ ಹಿಗ್ಗುವಿಕೆ. ಇದು ಜೀವಕೋಶಗಳ ತ್ವರಿತ ವೃದ್ಧಿಯ ಕಾರಣದಿಂದ ಉಂಟಾಗುವುದಿಲ್ಲ.[೧] ಇದು ಅಂಗಾಂಶಗಳಲ್ಲಿ ದ್ರವದ ಶೇಖರಣೆಯಿಂದ ಉಂಟಾಗುತ್ತದೆ. ಇದು ಶರೀರದಾದ್ಯಂತ (ಸಾಮಾನ್ಯೀಕೃತ) ಉಂಟಾಗಬಹುದು, ಅಥವಾ ಒಂದು ನಿರ್ದಿಷ್ಟ ಭಾಗ ಅಥವಾ ಅಂಗವು (ಸ್ಥಳೀಕೃತ) ಬಾಧಿತವಾಗಿರಬಹುದು. ಸಾಮಾನ್ಯವಾಗಿ ಊತವು ಅಪಾಯಕಾರಿಯಲ್ಲ ಮತ್ತು ಉರಿಯೂತ ಅಥವಾ ಮೂಗೇಟಿಗೆ ಸಾಮಾನ್ಯ ಪ್ರತಿಕ್ರಿಯೆಯಾಗಿರುತ್ತದೆ.
ಊತವನ್ನು ಉರಿಯೂತದ ಐದು ಲಕ್ಷಣಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ; ಅಂದರೆ ನೋವು, ಉಷ್ಣ, ಕೆಂಪುತನ, ಮತ್ತು ಕ್ರಿಯೆಯ ನಷ್ಟ ಇವುಗಳ ಜೊತೆಗೆ. ಗಾಯ, ಸೋಂಕು, ಅಥವಾ ರೋಗಕ್ಕೆ ಪ್ರತಿಕ್ರಿಯೆಯಾಗಿ ಶರೀರದ ಭಾಗವು ಊದಿಕೊಳ್ಳಬಹುದು. ಊತ, ವಿಶೇಷವಾಗಿ ಕಣಕಾಲಿನ ಊತವು ಶರೀರವು ದ್ರವವನ್ನು ಸರಿಯಾಗಿ ಪರಿಚಲನೆ ಮಾಡದಿದ್ದರೆ ಉಂಟಾಗಬಹುದು. ನೀರಿನ ಧಾರಣವು ರೋಗಲಕ್ಷಣದ ಮಟ್ಟಿಗೆ ಮುಂದುವರಿದರೆ, ಊತ ಉಂಟಾಗುತ್ತದೆ. ಸಾಮಾನ್ಯೀಕೃತ ಊತ ಅಥವಾ ಭಾರೀ ಉಬ್ಬರವು (ಈಡೀಮ) ಗಂಭೀರವಾಗಿ ಅಸ್ವಸ್ಥ ಜನರಲ್ಲಿ ಸಾಮಾನ್ಯ ಚಿಹ್ನೆಯಾಗಿದೆ. ತರಬೇತಿ ಇಲ್ಲದ ಕಣ್ಣಿಗೆ ಸ್ವಲ್ಪ ಉಬ್ಬರವನ್ನು ಪತ್ತೆಹಚ್ಚುವುದು ಕಷ್ಟವಾಗಬಹುದಾದರೂ, ವಿಶೇಷವಾಗಿ ಅಧಿಕ ತೂಕದ ವ್ಯಕ್ತಿಯಲ್ಲಿ, ಭಾರೀ ಉಬ್ಬರವು ಬಹಳ ಸ್ಪಷ್ಟವಾಗಿರುತ್ತದೆ.
ಉರಿಯೂತ ಸಂಬಂಧಿ ಊತವು ತೀವ್ರ ಅಥವಾ ದೀರ್ಘಕಾಲಿಕವಾಗಿರಬಹುದು. ತೀವ್ರ ಊತಗಳ ಚಿಹ್ನೆಗಳಲ್ಲಿ ಕೆಂಪುತನ, ಸ್ಥಳೀಯ ಜ್ವರ, ನೋವು ಮತ್ತು ಬಾಧಿತ ಅಂಗದ ಕಾರ್ಯದಲ್ಲಿ ದುರ್ಬಲತೆ ಸೇರಿವೆ. ಸಂಬಂಧಿತ ದುಗ್ಧರಸ ಗ್ರಂಥಿಗಳು ಬಾಧಿತವಾಗುವವು ಮತ್ತು ತೀವ್ರ ಉರಿಯೂತದ ಚಿಹ್ನೆಗಳನ್ನು ತೋರಿಸುವವು. ದೀರ್ಘಕಾಲದ ಉರಿಯೂತ ಸಂಬಂಧಿ ಊತಗಳು ತೀವ್ರ ಉರಿಯೂತ ಸಂಬಂಧಿ ಊತಗಳ ಚಿಹ್ನೆಗಳನ್ನು ತೋರಿಸುವವು, ಆದರೆ ಮಂದ ರೂಪದಲ್ಲಿ. ಈ ಸಂದರ್ಭದಲ್ಲಿ, ಈಡೀಮ ಉಂಟಾಗದಿರಬಹುದು. ದೀರ್ಘಕಾಲದ ಊತಗಳನ್ನು ನವೋತಕ ಸಂಬಂಧಿ ಊತಗಳಿಂದ ವ್ಯತ್ಯಾಸ ಮಾಡಬಹುದು, ಆ ವ್ಯತ್ಯಾಸವೇನೆಂದರೆ ನವೋತಕ ಸಂಬಂಧಿ ಊತಗಳು ಗಾತ್ರದಲ್ಲಿ ಎಂದೂ ಕಡಿಮೆಯಾಗುವುದಿಲ್ಲ, ಆದರೆ ಉರಿಯೂತ ಸಂಬಂಧಿ ಊತಗಳು ಸಾಂದರ್ಭಿಕ ಇಳಿಮುಖವನ್ನು ತೋರಿಸಬಹುದು.
ಸೌಮ್ಯ ಊತವು ತನ್ನಷ್ಟಕ್ಕೆ ತಾನೇ ಹೋಗುವ ಸಾಧ್ಯತೆ ಇದೆಯಾದರೂ, ಲಕ್ಷಣಗಳನ್ನು ನಿವಾರಿಸಲು ಅಥವಾ ಪ್ರಕ್ರಿಯೆಯನ್ನು ತ್ವರೆಗೊಳಿಸಲು ಹಲವಾರು ಕಾರ್ಯಗಳನ್ನು ಮಾಡಬಹುದು. ಊತಕ್ಕೆ ಕ್ಷಿಪ್ರವಾಗಿ ಚಿಕಿತ್ಸೆ ಮಾಡುವುದು ಮುಖ್ಯ ಏಕೆಂದರೆ ಘಟನೆಯ ನಂತರ ಅದು ತಕ್ಷಣ ಒಮ್ಮೆಲೇ ಅತಿ ವೇಗದ ಪ್ರಮಾಣದಲ್ಲಿ ಉಂಟಾಗುತ್ತದೆ.