ಆಲೂರ್ ಸೀಳಿನ್ ಕಿರಣ್ ಕುಮಾರ್ | |
---|---|
![]() | |
ಜನನ | ೨೨ ಅಕ್ಟೋಬರ್ ೧೯೫೨ |
ಶಿಕ್ಷಣ | 'ಬಾಹ್ಯಾಕಾಶ ವಿಜ್ಞಾನಿ' |
Years active | ೧೯೭೫ ರಿಂದ ಪ್ರಸ್ತುತ |
ಗೌರವ | ಪದ್ಮಶ್ರೀ |
ಡಾ. ಆಲೂರು ಸೀಳಿನ್ ಕಿರಣ್ ಕುಮಾರ್ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಹುದ್ದೆ ಹಾಗೂ ಬಾಹ್ಯಾಕಾಶ ಸಂಸ್ಥೆಯ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ ವಿಜ್ಞಾನಿಯಾಗಿದ್ದಾರೆ.[೧] ಜನವರಿ ೧೨, ೨೦೧೫ ರಿಂದ ಜನವರಿ ೨೦೧೮ ರ ವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದರು.[೨][೩] [೪] ಈ ಹುದ್ದೆ ನಿರ್ವಹಿಸಿದ ಎರಡನೇ ಕನ್ನಡಿಗ. ೧೯೭೫ರಲ್ಲಿ ಇಸ್ರೋ ಅಂಗಸಂಸ್ಥೆಯಾದ ಅಲಹಾಬಾದ್ ನ Space Application Centerನಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಕೊಂಡ ಕಿರಣ್ ಕುಮಾರ್ ಅಂದಿನಿಂದಲೂ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಸ್ರೊ ಹುದ್ದೆಗೆ ಬರುವ ಮೊದಲು ಅವರು ಅಲಹಾಬಾದಿನ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ನಿರ್ದೇಶಕರಾಗಿದ್ದರು. ಇವರು ಭಾಸ್ಕರ (೧೯೭೯), ಚಂದ್ರಯಾನ–೧ (೨೦೦೮) ಯೋಜನೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮಂಗಳಯಾನ ಯೋಜನೆ ಯಶಸ್ಸಿನಲ್ಲೂ ಅವರ ಪಾತ್ರವಿದೆ.
ಎ.ಎಸ್. ಕಿರಣ್ ಕುಮಾರ್ ಹಾಸನ ಜಿಲ್ಲೆಯವರು. ಆಲೂರಿನಲ್ಲಿ ೧೯೫೨ರಲ್ಲಿ ಜನಿಸಿದರು. ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಮುಗಿಸಿ (೧೯೭೧) ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಎಂಎಸ್‌ಸಿ (೧೯೭೩) ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಫಿಸಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ. (೧೯೭೫)
'ಭಾಸ್ಕರ ಟಿವಿ ಪೇಲೋಡ್' ನಿಂದ ತಮ್ಮ ಕೆಲಸ ಆರಂಭಿಸಿದ ಕಿರಣ್ ಕುಮಾರ್, ಭಾರತದ ಯಶಸ್ವಿ ಚಂದ್ರಯಾನ ಮತ್ತು ಮಂಗಳಯಾನ ಯೋಜನೆಗಳಲ್ಲಿ ಭಾಗವಹಿಸಿದ್ದಾರೆ. ಭಾರತದ ಮೊಟ್ಟ ಮೊದಲ ದೂರಸಂವೇದಿ ಉಪಗ್ರಹ (Remote Sensing satellite) ಭಾಸ್ಕರ(೧೯೭೯)ದ ಯಶಸ್ಸಿನಲ್ಲೂ ಕುಮಾರ್ ಕೊಡುಗೆ ನೀಡಿದ್ದಾರೆ. ಭೂಮಿ ಮತ್ತು ಸಮದ್ರದ ನಡುವಿನ ನಕ್ಷೆ ಮತ್ತು ಇದನ್ನು ಬಣ್ಣಗಳ ಆಧಾರ ಇಟ್ಟುಕೊಂಡು ಗುರುತು ಹಾಕುವುದರಲ್ಲಿ ಕುಮಾರ್ ನೈಪುಣ್ಯ ಸಾಧಿಸಿದ್ದು ದೇಶದ ನೆರವಿಗೆ ಬಂದಿತು. ಇದಲ್ಲದೇ 'ಇನ್ಸಾಟ್ 3ಡಿ', 'ಮೈಕ್ರೋ ಸೆಟ್ಲೈಟ್', 'ಭೂ ಪ್ರದೇಶ ಮಾಪನಾ ಕ್ಯಾಮರಾ ತಂತ್ರಜ್ಞಾನ'ದಲ್ಲಿ ಕಿರಣ್ ಕುಮಾರ್ ಅನೇಕ ಆವಿಷ್ಕಾರಗಳನ್ನು ಮಾಡಿದ್ದಾರೆ. ಮಂಗಳಯಾನಕ್ಕೆ ಸಂಬಂಧಿಸಿದ ಐದು ಉಪಕರಣ ತಯಾರಿಕೆಯ ಮೇಲ್ವಿಚಾರಣೆಯನ್ನು ಕಿರಣ್ ಕುಮಾರ್ ಹೊತ್ತುಕೊಂಡಿದ್ದರು. ಇವರ ನೇತೃತ್ವದಲ್ಲಿ ಇಸ್ರೋ ಒಂದೇ ಉಡಾಹಕದ ಮೂಲಕ ೧೦೪ ಉಪಗ್ರಹಗಳನ್ನು ವಿವಿಧ ಕಕ್ಷೆಗೆ ಸೇರಿಸಿ ವಿಶ್ವದಾಖಲೆ ಬರೆದಿದೆ.[೫]