ಉತ್ಪನ್ನ ಪ್ರಕಾರ | ತಕ್ಷಣದ ಪಾವತಿ ವ್ಯವಸ್ಥೆ |
---|---|
ಮಾಲೀಕರು | ಎನ್ಪಿಸಿಐ |
ದೇಶ | ಭಾರತ |
ಪರಿಚಯಿಸಲಾಗಿದೆ | 11 ಏಪ್ರಿಲ್ 2016 |
ಮಾರುಕಟ್ಟೆ | ಭಾರತ |
ಜಾಲತಾಣ | www |
ಏಕೀಕೃತ ಪಾವತಿ ವ್ಯವಸ್ಥೆಯು ಹಲವು ಬ್ಯಾಂಕ್‌ಗಳು ಒಂದಾಗಿ ಹಣ ಪಾವತಿಗೆ ಮತ್ತು ವರ್ಗಾವಣೆಗೆ ಇರುವ ಬೇರೆ ಬೇರೆ ವ್ಯವಸ್ಥೆಗಳನ್ನು ಏಕೀಕರಿಸಿ ಮಾಡಿದ ಒಂದು ಪಾವತಿ ವ್ಯವಸ್ಥೆ. ಇದನ್ನು ಇಂಗ್ಲಿಶಿನಲ್ಲಿ Unified Payments Interface (UPI) ಎನ್ನುತ್ತಾರೆ. ವ್ಯಕ್ತಿಯಿಂದ ವ್ಯಕ್ತಿಗೆ (person-to-person, P2P), ವ್ಯಕ್ತಿಯಿಂದ ಕಂಪೆನಿಗೆ, ಜಾಲಮಳಿಗೆಗೆ, ಟ್ಯಾಕ್ಸಿ, ಹೋಟೆಲ್, ಅಂಗಡಿ, ಇತ್ಯಾದಿ ಯಾವುದೇ ವ್ಯಾಪಾರಕ್ಕೆ ಹಣ ಪಾವತಿ ಮಾಡುವ ಒಂದು ಸರಳ ವ್ಯವಸ್ಥೆ.[೧] ಬಹುತೇಕ ಬ್ಯಾಂಕುಗಳು ಈ ವ್ಯವಸ್ಥೆಗೆ ಸೇರಿಕೊಂಡಿವೆ. ಇದನ್ನು ರಾಷ್ಟ್ರೀಯ ಪಾವತಿ ಸಂಸ್ಥೆಯವರು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆ ಸೇರಿ ಹುಟ್ಟುಹಾಕಿದ್ದಾರೆ.[೨]
ಇದನ್ನು ಸ್ಮಾರ್ಟ್‌ಫೋನ್ ಮೂಲಕ ಬಳಸಬಹುದಾಗಿದೆ. ಇದನ್ನು ಬಳಸಲು ಸ್ಮಾರ್ಟ್‌ಫೋನಿನಲ್ಲಿ ಸೂಕ್ತ ಕಿರುತಂತ್ರಾಂಶ (ಆಪ್) ಹಾಕಿಕೊಳ್ಳಬೇಕು. ಈ ವ್ಯವಸ್ಥೆಯಲ್ಲಿ ಭಾಗಿಯಾಗಿರುವ ಎಲ್ಲ ಬ್ಯಾಂಕುಗಳು ತಮ್ಮದೇ ಕಿರುತಂತ್ರಾಂಶವನ್ನು ಇದಕ್ಕಾಗಿ ನೀಡಿವೆ. ಗೂಗಲ್ ಪ್ಲೇ ಸ್ಟೋರಿನಲ್ಲಿ UPI ಎಂದು ಹುಡುಕಿದರೆ ಬೇಕಾದಷ್ಟು ಆ್ಯಪ್‌ಗಳು ದೊರೆಯುತ್ತವೆ. ಯಾವುದೇ ಕಿರುತಂತ್ರಾಂಶದಲ್ಲಿ ಯಾವುದೇ ಬ್ಯಾಂಕಿನ ಖಾತೆಯನ್ನು ಸೇರಿಸಬಹುದು. ಒಂದಕ್ಕಿಂತ ಹೆಚ್ಚು ಖಾತೆಗಳನ್ನೂ ಸೇರಿಸಿಕೊಳ್ಳಬಹುದು.
ಈ ವ್ಯವಸ್ಥೆಯಲ್ಲಿ ಮೊದಲನೆಯದಾಗಿ ಒಂದು ವರ್ಚುವಲ್ ಅಡ್ರೆಸ್ ಮಾಡಿಕೊಳ್ಳಬೇಕು. ಪ್ರಾರಂಭದಲ್ಲಿ ಒಂದು ಎಂಪಿನ್ (MPIN) ಮಾಡಿಕೊಂಡು ನಂತರ ಬಳಕೆದಾರರು ತಮ್ಮ ವಾಸ್ತವ ವಿಳಾಸ (Virtual Address) ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಈ ವಿಳಾಸ ಇಮೇಲ್ ವಿಳಾಸದ ಮಾದರಿಯಲ್ಲಿರುತ್ತವೆ. ಈ ವಿಳಾಸವನ್ನು ಒಮ್ಮೆ ಮಾಡಿಕೊಂಡರೆ ಆಯಿತು. ನಂತರ ಎಲ್ಲ ಕಡೆ ಬಳಸಬಹುದು.
ಸ್ಮಾರ್ಟ್‌ಫೋನಿನಲ್ಲಿ ಯುಪಿಐ ಕಿರುತಂತ್ರಾಂಶವನ್ನು ಚಾಲನೆ ಮಾಡಿ ಯಾರಿಗೆ ಹಣ ಪಾವತಿ ಮಾಡಬೇಕೋ ಅವರ ವಾಸ್ತವ ವಿಳಾಸವನ್ನು (ವರ್ಚುವಲ್ ಅಡ್ರೆಸ್) ನಮೂದಿಸಿ ಹಣ ವರ್ಗಾವಣೆ ಮಾಡಬೇಕು. ಅದು ತಕ್ಷಣ ಹಣ ಸ್ವೀಕರಿಸುವವರ ಖಾತೆಗೆ ತಲುಪಿರುತ್ತದೆ. ಪ್ರತಿ ಸಲ ಹಣ ಕಳುಹಿಸಲೂ ಎಂಪಿನ್ ನಮೂದಿಸಬೇಕು. ಇದು ಖಾತೆಯ ಸುರಕ್ಷತೆಗಾಗಿ. ಅಂದರೆ ಫೋನ್ ಕಳೆದುಹೋದರೆ, ಬೇರೆಯವರ ಕೈಗೆ ಅದು ಸಿಕ್ಕಿದರೆ, ಅವರಿಗೆ ಬಳಕೆದಾರರ ಎಂಪಿನ್ ತಿಳಿದಿರುವ ಸಾಧ್ಯತೆಯಿಲ್ಲದಿರುವ ಕಾರಣ ದುರುಪಯೋಗದ ಸಾಧ್ಯತೆ ಇಲ್ಲ. ಪ್ರತಿ ಸಲ ಹಣ ಕಳುಹಿಸುವಾಗಲೂ ಯಾವ ಬ್ಯಾಂಕಿನ ಖಾತೆಯಿಂದ ಎಂದು ಆಯ್ಕೆ ಮಾಡಿಕೊಳ್ಳಬಹುದು. ಚಿಕ್ಕ ಪುಟ್ಟ ವ್ಯವಹಾರಕ್ಕೆ ಈ ವ್ಯವಸ್ಥೆ ತುಂಬ ಸೂಕ್ತವಾದುದು ಮತ್ತು ಇದರ ಮೂಲಕ ಹಣ ವರ್ಗಾವಣೆ ತಕ್ಷಣವೇ ಆಗುತ್ತದೆ.
ಈ ವ್ಯವಸ್ಥೆಯಲ್ಲಿ ಹಣ ಸ್ವೀಕರಿಸುವವರ ಖಾತೆಯನ್ನು ಸೇರಿಸುವುದು ಬಹಳ ಸುಲಭ. ಅವರ ಬ್ಯಾಂಕಿನ ಹೆಸರು, ವಿಳಾಸ, ಖಾತೆ ಸಂಖ್ಯೆ, ಐಎಫ್‌ಎಸ್ ಕೋಡ್ ಇತ್ಯಾದಿ ಯಾವ ಮಾಹಿತಿಗಳ ಅಗತ್ಯವೂ ಇಲ್ಲ. ಅವರ ವಾಸ್ತವ ವಿಳಾಸ ಗೊತ್ತಿದ್ದರೆ ಸಾಕು.
ಅಂಗಡಿಯಿಂದ ಸಾಮಾನು ಕೊಳ್ಳುವಾಗ ಹಣ ಪಾವತಿಯ ಪ್ರಕ್ರಿಯೆಯನ್ನು (push) ಬಳಕೆದಾರರೇ ಪ್ರಾರಂಭಿಸಬಹುದು ಅಥವಾ ಸ್ವೀಕೃತಿಯ ಪ್ರಕ್ರಿಯೆಯನ್ನು (pull) ಅಂಗಡಿಯಾತನೂ ಪ್ರಾರಂಭಿಸಬಹುದು. ಎರಡನೆಯ ವಿಧಾನದಲ್ಲಿ ಅಂಗಡಿಯಾತ ಬಳಕೆದಾರರ ವಾಸ್ತವ ವಿಳಾಸವನ್ನು ನಮೂದಿಸಿ ಹಣ ಸ್ವೀಕರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾನೆ. ಈ ಕೋರಿಕೆ ಬಳಕೆದಾರರ ಫೋನಿನ ಕಿರುತಂತ್ರಾಂಶದಲ್ಲಿ ಗೋಚರಿಸುತ್ತದೆ. ಬಳಕೆದಾರ ಈ ಕೋರಿಕೆಯನ್ನು ಸ್ವೀಕರಿಸಿ ಒಪ್ಪಿಗೆ ಸೂಚಿಸಿದರೆ ಅಂಗಡಿಯಾತನಿಗೆ ಹಣ ವರ್ಗಾವಣೆಯಾಗುತ್ತದೆ. ಪ್ರತಿ ವ್ಯವಹಾರಕ್ಕೂ ಎಂಪಿನ್ ನಮೂದಿಸುವುದು ಕಡ್ಡಾಯ.