ಕನ್ನಡ ಬರವಣಿಗೆಯ ಪ್ರಪ್ರಥಮ ಉದಾಹರಣೆ ದೊರಕಿರುವುದು ತಾಳಗುಂದದ ಸಿಂಹಕಟಾಂಜನ ಶಾಸನ ದಲ್ಲಿ (ಸು. ಕ್ರಿ.ಶ೩೭೦ ರಿಂದ೪೫೦). ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ. ಉಪಲಬ್ಧವಾಗಿರುವ ಪ್ರಥಮ ಕನ್ನಡ ಪುಸ್ತಕವೆಂದರೆ ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗ ನೃಪತುಂಗನ ಆಸ್ಥಾನದ ಕವಿಯಾಗಿದ್ದ ಶ್ರೀವಿಜಯನ ಈ ಪುಸ್ತಕ ಕನ್ನಡ ಕಾವ್ಯ, ಕನ್ನಡ ನಾಡು, ಮತ್ತು ಕನ್ನಡಿಗರ ಬಗ್ಗೆ ಬರೆಯಲ್ಪಟ್ಟ ಒಟ್ಟಾರೆ ಸಾರಾಂಶವೆನ್ನಬಹುದು.
ಇದಕ್ಕೆ ಹಿಂದೆ ಬರೆಯಲ್ಪಟ್ಟ ಕೆಲವು ಕನ್ನಡ ಪುಸ್ತಕಗಳ ಉಲ್ಲೇಖ ಈ ಪುಸ್ತಕದಲ್ಲಿ ಬಂದಿರುವ ಆಧಾರದ ಮೇಲೆ ಕನ್ನಡ ಸಾಹಿತ್ಯದ ಉಗಮ ಸುಮಾರು ಕ್ರಿ.ಶ. ೬-೭ನೇ ಶತಮಾನಗಳಲ್ಲಿ ಆದದ್ದಿರಬಹುದು. ಆದರೆ ಕವಿರಾಜಮಾರ್ಗದ ಹಿಂದಿನ ಯಾವ ಕೃತಿಗಳೂ ಇದುವರೆಗೆ ದೊರಕಿಲ್ಲ. ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸ ಬಹುದು: ಹಳೆಗನ್ನಡ, ನಡುಗನ್ನಡ ಹಾಗೂ ಆಧುನಿಕ ಕನ್ನಡ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಗುರುತಿಸಬಹುದು. ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ. ಕನ್ನಡ ಚರಿತ್ರೆಯ ಈ ಘಟ್ಟಕ್ಕೆ ಆದಿ-ಕಾವ್ಯ ಎಂದೂ ಸಹ ಕರೆಯಬಹುದು. ಈ ಕಾಲದ ಅತಿ ಪ್ರಸಿದ್ಧ ಕವಿಯೆಂದರೆ ಪಂಪ (ಕ್ರಿ.ಶ. ೯೦೨-೯೭೫).
ಪಂಪನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತ ಇಂದಿಗೂ ಮೇರು ಕೃತಿಯೆಂದು ಪರಿಗಣಿತವಾಗಿದೆ. ಪಂಪ ಭಾರತ ಮತ್ತು ತನ್ನ ಇನ್ನೊಂದು ಮುಖ್ಯಕೃತಿಯಾದ ಆದಿಪುರಾಣದ ಮೂಲಕ ಪಂಪ ಕನ್ನಡ ಕಾವ್ಯಪರಂಪರೆಯ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ. ಪಂಪ ಭಾರತ ಸಂಸ್ಕೃತಮಹಾಭಾರತದ ಕನ್ನಡ ರೂಪಾಂತರ. ತನ್ನ ಮಾನವತಾವಾದ ಹಾಗೂ ಗಂಭೀರ ಲೇಖನಶೈಲಿಯ ಮೂಲಕ ಕನ್ನಡದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾಗಿದ್ದಾನೆ.' ಮಾನವ ಕುಲ ತಾನೊಂದೇ ವಲಂ' ಎಂದು ವಿಶ್ವಮಾನವ ತತ್ವವನ್ನು ಸಾರಿದ ಜಗದ ಕವಿ ಪಂಪ.
ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ ಶಾಂತಿನಾಥ ಪುರಾಣವನ್ನು ರಚಿಸಿದ ಪೊನ್ನ (೯೩೯-೯೬೬). ಈ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ (೯೪೯-?). ರನ್ನನ ಪ್ರಮುಖ ಕೃತಿಗಳು ಜೈನ ಧರ್ಮೀಯವಾದ ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ಧಂ ಅಥವಾ ಸಾಹಸಭೀಮ ವಿಜಯ.
ಇದು ಇಡೀ ಮಹಾಭಾರತದ ಒಂದು ಸಿಂಹಾವಲೋಕನ ದೃಷ್ಟಿ. ಮಹಾಭಾರತ ಯುದ್ಧದ ಕೊನೆಯ ದಿನದಲ್ಲಿ ಸ್ಥಿತವಾಗಿದ್ದರೂ ಸಿಂಹಾವಲೋಕನ ಕ್ರಮದಲ್ಲಿ ಇಡಿಯ ಮಹಾಭಾರತವನ್ನು ಪರಿಶೀಲಿಸುತ್ತದೆ. ಛಂದಸ್ಸಿನ ದೃಷ್ಟಿಯಿಂದ ಈ ಕಾಲದ ಕಾವ್ಯ ಚಂಪೂ ಶೈಲಿಯಲ್ಲಿದೆ (ಒಂದು ರೀತಿಯ ಗದ್ಯ ಮಿಶ್ರಿತ ಪದ್ಯ)
ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು. ಇವುಗಳಲ್ಲಿ ಮುಖ್ಯವಾದವು ರಗಳೆ, ಸಾಂಗತ್ಯ ಮತ್ತು ದೇಸಿ. ಈ ಕಾಲದ ಸಾಹಿತ್ಯ ಜೈನ, ಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ. ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಹರಿಹರ ಮತ್ತು ರಾಘವಾಂಕ. ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು.
ಹರಿಹರ ರಗಳೆ ಸಾಹಿತ್ಯವನ್ನು ಬಳಕೆಗೆ ತಂದನು, ತನ್ನ ಶೈವ ಮತ್ತು ವೀರಶೈವ ಕೃತಿಗಳ ಮೂಲಕ. ರಾಘವಾಂಕ ತನ್ನ ಆರು ಕೃತಿಗಳ ಮೂಲಕ ಷಟ್ಪದಿ ಛಂದಸ್ಸನ್ನು ಜನಪ್ರಿಯಗೊಳಿಸಿದನು. ಅವನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ, ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು. ಈ ಕೃತಿ ಸಹ ತನ್ನ ತೀವ್ರವಾದ ಮಾನವತಾವಾದಕ್ಕೆ ಪ್ರಸಿದ್ಧವಾಗಿದೆ.
ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ. ತನ್ನ ಕೃತಿಗಳಾದ ಯಶೋಧರ ಚರಿತೆ ಮತ್ತು ಅನಂಥನಾಥ ಪುರಾಣಗಳ ಮೂಲಕ ಜೈನ ಸಂಪ್ರದಾಯದ ಬಗ್ಗೆ ಬರೆದನು. ಇದೇ ಕಾಲದ ಕನ್ನಡ ವ್ಯಾಕರಣದ ಬಗೆಗಿನ ಮುಖ್ಯ ಕೃತಿ ಕೇಶಿರಾಜನಶಬ್ದಮಣಿದರ್ಪಣ.
ವಚನಗಳು ಎಂದು ಸಾಮಾನ್ಯವಾಗಿ ಕರೆಯಲಾಗುವ ಲಿಂಗಾಯತ ಶರಣರ ವಚನಗಳು ಮುಕ್ತ ಛಂದಸ್ಸಿನಲ್ಲಿವೆ. ಬಸವೇಶ್ವರ, ಅಕ್ಕಮಹಾದೇವಿ ಮೊದಲಾದವರ ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಅಳವಡಿಸಿ ಮಲ್ಲಿಕಾರ್ಜುನ ಮನಸೂರ ಮೊದಲಾದ ಹಿಂದುಸ್ತಾನಿ ಸಂಗೀತ ಕಾರರು ಹಾಡಿದ್ದಾರೆ. ಶರಣರ ನಂತರದ ಕವಿಯಾದ ಸರ್ವಜ್ಞರ ವಚನಗಳು ಮಾತ್ರ ತ್ರಿಪದಿಯಲ್ಲಿವೆ.
ವಚನಗಳು ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗೆಗಿನ ಯೋಚನಾಧಾರೆಗಳು. ಇನ್ನೂ ಮುಖ್ಯವಾಗಿ, ವಚನ ಸಾಹಿತ್ಯ ಅಂದಿನ ಸಾಮಾಜಿಕ ಕ್ರಾಂತಿಯ ಪ್ರಕ್ರಿಯೆಗೆ ಕನ್ನಡಿ ಹಿಡಿಯುತ್ತದೆ. ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮಗಳ ಯೋಚನೆಗಳ ಕ್ರಾಂತಿಕಾರಿ ಮರು-ಪರಿಶೀಲನೆಗೆ ದಾರಿ ಮಾಡಿಕೊಟ್ಟಿತು.
ವಚನ ಸಾಹಿತ್ಯದಿಂದ ಬಂದ ಮುಖ್ಯ ಬೋಧನೆಗಳೆಂದರೆ ಕಾಯಕವೇ ಕೈಲಾಸ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಹೊಸ ನೋಟ. ವಚನ ಸಾಹಿತ್ಯದ ಪ್ರಮುಖ ಹರಿಕಾರರೆಂದರೆ ಬಸವೇಶ್ವರ (೧೧೩೪-೧೧೯೬), ಅಲ್ಲಮಪ್ರಭು ಮತ್ತು ಕನ್ನಡದ ಮೊದಲ ಮಹಿಳಾ ಲೇಖಕಿಯಾದ ಅಕ್ಕ ಮಹಾದೇವಿ (೧೨ನೇ ಶತಮಾನ). ಇವರಲ್ಲದೆ ದೇವರ ದಾಸಿಮಯ್ಯ, ಅಂಬಿಗರ ಚೌಡಯ್ಯ ಇನ್ನೂ ಮೊದಲಾದ ವಚನಕಾರರು ವಚನ ಸಾಹಿತ್ಯಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ.
ಕುಮಾರವ್ಯಾಸ ಪ್ರಾಯಶಃ ಕನ್ನಡದ ಅತ್ಯಂತ ಪ್ರಸಿದ್ಧ ಹಾಗೂ ಅತ್ಯಂತ ಪ್ರಭಾವಶಾಲಿ ಕವಿ ಎಂದರೂ ಸರಿ. ಅವನ ಜೀವನಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದು ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಅತ್ಯದ್ಭುತ ಶೈಲಿಯಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದಾನೆ. ಅದು ಕೇವಲ ರೂಪಾಂತರವಲ್ಲ ; ಅನೇಕ ಕವಿ ಸಮಯ ದಿಂದ ಕೂಡಿದ್ದು, ಸ್ವಂತ ಕೃತಿಯೆಂಬಂತೆ ರಚಿಸಿದ್ದಾನೆ .
ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಅತಿ ಹೆಚ್ಚು ಮಾನ್ಯತೆ ಪಡೆದ ಕೃತಿಯಿದ್ದೀತು. ಇದರ ಪ್ರಸಿದ್ಧಿಗೆ ಪ್ರಮುಖ ಕಾರಣ ಇದು ಎಲ್ಲ ಕಾಲಗಳಲ್ಲಿಯೂ ಎಲ್ಲ ಬುದ್ಧಿಮತ್ತೆಯ ಜನರಿಗೂ ಸಹ ಅವರವರ ಶಕ್ತಿಗನುಸಾರವಾಗಿ ನಿಲುಕಿದೆ. ಇಡೀ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿಸಲ್ಪಟ್ಟಿದೆ. ಕುಮಾರವ್ಯಾಸ ಹುಡುಕಿ ನೋಡುವ ಮಾನವ ಭಾವಗಳ ವ್ಯಾಪ್ತಿ, ಆತನ ಕಾವ್ಯದ ವೈವಿಧ್ಯತೆ ಮತ್ತು ಶಬ್ದಭಂಡಾರ ಓದುಗರನ್ನು ಬೆರಗುಗೊಳಿಸುತ್ತವೆ.
ಕುಮಾರವ್ಯಾಸ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ರೂಪಕಾಲಂಕಾರ ಚಮತ್ಕಾರಕ್ಕೆ ಪ್ರಸಿದ್ಧನಾಗಿದ್ದಾನೆ. ಇದರಿಂದಾಗಿಯೇ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದಿಗೂ ಪಾತ್ರನಾಗಿದ್ದಾನೆ. ಕುಮಾರವ್ಯಾಸನು ಗದುಗಿನ ವೀರನಾರಾಯಣನ ಭಕ್ತ, ಅವನನ್ನು ಗದುಗಿನ ನಾರಣಪ್ಪ ಎಂದು ಕರೆಯುತ್ತಾರೆ. ಈತನ ಮೊದಲಿನ ಹೆಸರು ನಾರಯಣಪ್ಪ . ಕುವೆಂಪುರವರು ಕುಮಾರವ್ಯಾಸನನ್ನು ಕುರಿತು,
ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು .
ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು... ಎಂದಿದ್ದಾರೆ.
ದಾಸ ಸಾಹಿತ್ಯ (ಭಕ್ತಿ ಸಾಹಿತ್ಯ) ೧೫ನೇ ಶತಮಾನದಲ್ಲಿ ಆರಂಭಗೊಂಡ ಭಕ್ತಿ ಪಂಥದ ಹರಿದಾಸರಿಂದ ವಿರಚಿತವಾದದ್ದು. ಈ ಪದ್ಯಗಳಿಗೆ ಸಾಮಾನ್ಯವಾಗಿ 'ಪದ' ಗಳೆಂದು ಹೆಸರು. ಇವು ಭಗವಂತನಲ್ಲಿ ಒಂದಾಗ ಬಯಸುವ ಭಕ್ತನ ಭಾವವನ್ನು ಪ್ರತಿಬಿಂಬಿಸುತ್ತವೆ. ಈ ಸಾಹಿತ್ಯ ಸಂಗೀತದೊಂದಿಗೂ ನಿಲುಕಿದೆ.
ದಾಸ ಸಾಹಿತ್ಯ ಸಂಗೀತ ಪದ್ಧತಿಗಳಲ್ಲೊಂದಾದ ಕರ್ನಾಟಕ ಸಂಗೀತಕ್ಕೆ ಬುನಾದಿಯಾಗಿದೆ. ದಾಸರ ಪದಗಳಿಗೆ ದೇವರನಾಮಗಳೆಂದೂ ಹೆಸರು. ಈ ಪ್ರಕಾರದ ಮುಖ್ಯ ಕನ್ನಡ ಕವಿಗಳೆಂದರೆ ಪುರಂದರದಾಸ (೧೪೯೪-೧೫೬೪) ಮತ್ತು ಕನಕದಾಸ(೧೫೦೯-೧೬೦೯). ಇವರನ್ನು ದಾಸ ಸಾಹಿತ್ಯದ ಅಶ್ವಿನಿದೇವತೆಗಳೆಂದು ಕರೆಯಲಾಗಿದೆ.
ನವೋದಯ ಎಂದರೆ ಹೊಸ ಹುಟ್ಟು/ಹೊಸದು. ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೆ ಇದ್ದ ಕನ್ನಡ ಸಾಹಿತ್ಯ, ೧೯ನೇ ಶತಮಾನದ ಕೊನೆಗೆ ಹಾಗು ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೆ ಕಾರಣವಾಯಿತು. ಈ ಹಂತದಲ್ಲಿ ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಬೆಳಕಿಗೆ ಬಂದರು.
ಈ ಕಾಲದ ಸಾಹಿತ್ಯ ಪ್ರಕಾರಗಳು ರೊಮ್ಯಾಂಟಿಕ್ ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು. ಈ ಘಟ್ಟದ ಬೆಳವಣಿಗೆಯನ್ನು ತಂದವರು ಬಿ.ಎಂ.ಶ್ರೀ, ತಮ್ಮ ಇಂಗ್ಲಿಷ್ ಗೀತಗಳ ಪುಸ್ತಕ ದೊಂದಿಗೆ. ಅನೇಕ ಸುಶಿಕ್ಷಿತ ಕನ್ನಡಿಗರು, ಮುಖ್ಯವಾಗಿ ಶಿಕ್ಷಕ ವೃತ್ತಿಯಲ್ಲಿದ್ದವರು, ತಮ್ಮ ಮಾತೃಭಾಷೆಯಲ್ಲಿ ಬರೆಯುವುದರ ಮಹತ್ವವನ್ನು ಕಂಡು ಕೊಂಡು ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯನ್ನೊದಗಿಸಿದರು.
ಇದಕ್ಕೆ ಉದಾಹರಣೆಯಾಗಿ ಕುವೆಂಪು - ತಮ್ಮ ಒಬ್ಬ ಶಿಕ್ಷಕರಿಂದ (ಬ್ರಿಟಿಷ್ ಮೂಲದವರು) ಕನ್ನಡದಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಮುಂದೆ ರಾಷ್ಟ್ರಕವಿ ಬಿರುದಿಗೆ ಪಾತ್ರರಾದರು. ಅವರ ಪ್ರಕೃತಿಪ್ರೇಮ, ಮಾನವನ ಉನ್ನತಿಯಲ್ಲಿ ನಂಬಿಕೆ ಮತ್ತು ಪ್ರಕೃತಿ ಮತ್ತು ದೇವರ ಸಮ್ಮಿಶ್ರಣವನ್ನು ಕಾಣುವ ಅವರ ಮನಸ್ಸು ಅವರನ್ನು ಕನ್ನಡದ ಉಚ್ಚ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿವೆ. ಅವರ ಅತಿ ಪ್ರಸಿದ್ಧ ಕಾವ್ಯಕೃತಿ ಶ್ರೀ ರಾಮಾಯಣ ದರ್ಶನಂ.
ಇದಕ್ಕೆ ಉದಾಹರಣೆಯಾಗಿ ನಿಂತಿರುವ ಮತ್ತೊಬ್ಬ ಲೇಖಕರೆಂದರೆ ಶಿವರಾಮ ಕಾರಂತ - ಅತ್ಯಂತ ಬುದ್ಧಿಮತ್ತೆಯ, ಆಳವಾದ ಆದರ್ಶಗಳುಳ್ಳ ವ್ಯಕ್ತಿತ್ವ, ಹಾಗೂ ಅಷ್ಟೇ ಆಳವಾದ ಸಾಮಾಜಿಕ ಕಳಕಳಿಯಿದ್ದ ಲೇಖಕರು. ಅವರ ಶಕ್ತಿಶಾಲಿ ಸಾಮಾಜಿಕ ಕಾದಂಬರಿಗಳಲ್ಲಿ ಪ್ರಸಿದ್ಧವಾದವು-ಚೋಮನ ದುಡಿ, ಬೆಟ್ಟದ ಜೀವ, ಮೈಮನಗಳ ಸುಳಿಯಲ್ಲಿ, ಮರಳಿ ಮಣ್ಣಿಗೆ ಮತ್ತು ಮೂಕಜ್ಜಿಯ ಕನಸುಗಳು ಮೊದಲಾದುವು.
೧೯೪೭ ರ ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು: ನವ್ಯ. ಈ ಪ್ರಕಾರದ ಪಿತಾಮಹರೆಂದರೆ ಗೋಪಾಲಕೃಷ್ಣ ಅಡಿಗರು. ನವ್ಯ ಕವಿಗಳು ನಿರಾಶಾವಾದಿ ಬುದ್ಧಿಜೀವಿಗಳಿಗಾಗಿ ಹಾಗೂ ನಿರಾಶಾ ವಾದಿ ಬುದ್ಧಿಜೀವಿಗಳಂತೆ ಕಾವ್ಯ ರಚಿಸಿದರು. ಭಾಷಾಪ್ರಯೋಗದ ಚಮತ್ಕಾರ ಹಾಗೂ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು.
ಕಳೆದ ಐದು ದಶಕಗಳಲ್ಲಿ ಕನ್ನಡ ಸಾಹಿತ್ಯದ ದಾರಿ ಸಾಮಾಜಿಕ ವಿಷಯಗಳನ್ನು ಕುರಿತದ್ದಾಗಿದೆ. ಜಾತಿಪದ್ಧತಿಯ ತಾರತಮ್ಯಗಳಿಂದ ಬಂಡಾಯ ಮತ್ತು ದಲಿತ ಕಾವ್ಯ ಪ್ರೇರಿತವಾಗಿದೆ. ಸ್ತ್ರೀ-ವಿಮೋಚನಾ ಚಳುವಳಿಗಳು ಸ್ತ್ರೀ-ಕಾವ್ಯ ಪ್ರಕಾರಕ್ಕೆ ಎಡೆ ಮಾದಿಕೊಟ್ಟಿವೆ. ಸಣ್ಣ ಕಥೆಗಳು ಹಾಗೂ ಭಾವಗಿತೆಗಳು ಸಹ ಇಪ್ಪತ್ತನೆ ಶತಮಾನದಲ್ಲಿ ಜನಪ್ರಿಯವಾದ ಸಾಹಿತ್ಯ ಪ್ರಕಾರಗಳು ರಾಜ್ಯದ ಹಲವರು ತಮ್ಮನ್ನು ಸ್ಥಳೀಯ ಬಾಷೆಯಲ್ಲಿ ಕಥೆ ಕಾದಂಬರಿ ಬರೆಯುವಲ್ಲಿ ಗುರುತಿಸಿಕೊಂಡರು. ಅದರಲ್ಲಿ ಬಾಳಾಸಾಹೇಬ ಲೋಕಾಪುರ ಅಮರೇಶ ನುಗಡೋಣಿ ಶಂಕರ ಬೈಚಬಾಳ ಲೋಕೇಶ ಅಗಸನಕಟ್ಟೆ ಮುಂತಾದ ಹಲವರನ್ನು ಇಲ್ಲಿ ಹೆಸರಿಸಬಹುದಾಗಿದೆ.
ಕನ್ನಡ ಸಾಹಿತ್ಯದ ಶಕ್ತಿಗೆ ಕನ್ನಡಿಯಾಗಿ ಕನ್ನಡ ಸಾಹಿತ್ಯಕ್ಕೆ ಇದುವರೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಇದು ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು. ಆಗಸ್ಟ್ ೨೦೦೪ ರ ವರೆಗೆ ಒಟ್ಟು ೪೬ ಕನ್ನಡ ಭಾರತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಯಾವುದೇ ಭಾಷೆಯ ಸಾಹಿತ್ಯದ ಜನಪ್ರಿಯತೆ ಸುಶಿಕ್ಷಿತ ಮತ್ತು ಆಸಕ್ತ ಜನರಿಂದೆ ಪಡೆದ ಮನ್ನಣೆಯನ್ನು ಅವಲಂಬಿಸುತ್ತದೆ. ಆದರೆ ಕಾವ್ಯದ ನಿಜವಾದ ಜನಪ್ರಿಯತೆ ತಿಳಿದು ಬರುವುದು ಅದು ಸಾಮಾನ್ಯ ಜನರ ಬಾಯಲ್ಲಿ ನಲಿದಾಗ. ಯಾವುದೇ ಸಾಹಿತ್ಯ ಪ್ರಕಾರಕ್ಕೂ ಸರ್ವಜನಮಾನ್ಯತೆ ಪಡೆಯುವುದು ಕಷ್ಟ. ಕನ್ನಡ ಸಾಹಿತ್ಯದ ಕೆಲವು ಪ್ರಕಾರಗಳು ಇಂತಹ ಮಾನ್ಯತೆಯನ್ನು ಪಡೆದಿವೆ. ಕುಮಾರವ್ಯಾಸನ ಭಾರತ ಇಂದಿಗೂ ಜನಪ್ರಿಯವಾಗಿ ಉಳಿದಿದೆ. ಭಾವಗೀತೆಗಳು ಅನೇಕ ಕನ್ನಡ ಹಾಡುಗಳನ್ನು ಜನಪ್ರಿಯಗೊಳಿಸಿ ಜನರ ಬಾಯಲ್ಲಿ ಓಡಾಡುತ್ತಿವೆ.