ಕಮಲಶೀಲ : ಶಾಂತರಕ್ಷಿತನ ಪ್ರತ್ಯಕ್ಷ ಶಿಷ್ಯ. ಗುರುವಿನಂತೆ ಬೌದ್ಧ ತತ್ತ್ವಜ್ಞಾನಿ ಮತ್ತು ತಂತ್ರಶಾಸ್ತ್ರವಿಶಾರದ. ಈತ ನಲಂದ ವಿದ್ಯಾಪೀಠದಲ್ಲಿ ತಂತ್ರಶಾಸ್ತ್ರದಲ್ಲಿ ಪಾಠ ಹೇಳುವ ಆಚಾರ್ಯನಾಗಿದ್ದನೆಂದು ತಿಳಿದುಬರುತ್ತದೆ. ಜನ್ಮಸ್ಥಾನ ಗೊತ್ತಿಲ್ಲ. ಕಾಲ ಸು.713-63.
ಈತನ ಹಲವು ಗ್ರಂಥಗಳು ಟಿಬೆಟನ್ ಭಾಷೆಯಲ್ಲಿ ಅನುವಾದವಾಗಿವೆ. ಸಂಸ್ಕೃತ ಮೂಲದಲ್ಲಿ ದೊರೆತ ಈತನ ಗ್ರಂಥವೆಂದರೆ ಶಾಂತರಕ್ಷಿತನ ತತ್ತ್ವಸಂಗ್ರಹದ ಮೇಲಿನ ಪಂಜಿಕೆಯೆಂಬ ಟೀಕೆ. ಇಲ್ಲಿ ಈತನ ವಿಶಾಲವಾದ ಅಧ್ಯಯನದ ಪರಿಚಯವಾಗುತ್ತದೆ. ಶಾಂತರಕ್ಷಿತನ ಶೈಲಿ ಮತ್ತು ಆತನ ಕಾರಿಕೆಗಳು ಅಷ್ಟು ಸುಲಭದವಲ್ಲ. ಆದರೂ ಕಮಲಶೀಲ ಅತ್ಯಂತ ವಿಸ್ತೃತವಾದ ಟೀಕೆಯನ್ನು ಬರೆದು ಅವುಗಳ ಅರ್ಥವನ್ನು ಸ್ಪಷ್ಟವಾಗಿ ನಿರೂಪಿಸಿದ್ದಾನೆ. ಖಂಡಿಸುವುದಕ್ಕಾಗಿ ಶಾಂತರಕ್ಷಿತ ಬೇರೆಬೇರೆಯವರ ಮತಗಳನ್ನು ಸೂಚಿಸಿದ ಕಡೆಗಳಲ್ಲೆಲ್ಲ ಕಮಲಶೀಲ ಆಯಾ ಆಚಾರ್ಯರ ಹೆಸರುಗಳನ್ನು ಹೇಳಿದ್ದಾನೆ. ಇದು ನ್ಯಾಯಶಾಸ್ತ್ರದ ಇತಿಹಾಸದ ದೃಷ್ಟಿಯಿಂದ ಬಹಳ ಮಹತ್ತ್ವದ ಸಂಗತಿ. ಎಷ್ಟೋ ಸಂದರ್ಭಗಳಲ್ಲಿ ಶಾಂತರಕ್ಷಿತನಿಗಿಂತ ಹೆಚ್ಚು ವಿಷಯಗಳನ್ನು ಹೇಳಿ ಪರಮತಖಂಡನೆ ಮಾಡುತ್ತಾನೆ, ಶಿಷ್ಯ ಕಮಲಶೀಲ. ಶಾಂತರಕ್ಷಿತನಂಥ ಗುರುವಿಗೆ ಕಮಲಶೀಲ ಯೋಗ್ಯ ಶಿಷ್ಯ ಮತ್ತು ತತ್ತ್ವಸಂಗ್ರಹಕ್ಕೆ ಒಪ್ಪುವ ವ್ಯಾಖ್ಯಾನಕಾರ.