ಕಾಂಕರಿಯಾ ಸರೋವರ ಗುಜರಾತ್ ರಾಜ್ಯದ ಅಹ್ಮದಾಬಾದ್‍ನ ಎರಡನೇ ಅತಿ ದೊಡ್ಡ ಸರೋವರವಾಗಿದೆ. ಇದು ನಗರದ ಆಗ್ನೇಯ ಭಾಗವಾದ ಮಣಿನಗರ ಪ್ರದೇಶದಲ್ಲಿ ಸ್ಥಿತವಾಗಿದೆ. ಇದನ್ನು ಎರಡನೇ ಸುಲ್ತಾನ್ ಕುತುಬುದ್ದೀನ್ ಅಹ್ಮದ್ ಶಾಹ್‍ನ ಆಳ್ವಿಕೆಯ ಕಾಲದಲ್ಲಿ ೧೪೫೧ರಲ್ಲಿ ಪೂರ್ಣಗೊಳಿಸಲಾಯಿತು. ಆದರೆ ಇದರ ಹುಟ್ಟು ಚಾಲುಕ್ಯ ಅವಧಿಯ ಯಾವುದೋ ಸಮಯದಲ್ಲಾಗಿದೆಯೆಂದು ಹೇಳಲಾಗಿದೆ. ಇದರ ಸುತ್ತಲಿನ ಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಮೃಗಾಲಯ, ಆಟಿಕೆ ರೈಲು, ಮಕ್ಕಳ ನಗರ, ಕಟ್ಟಲ್ಪಟ್ಟ ಬಲೂನ್ ಸವಾರಿ, ಜಲ ಸವಾರಿಗಳು, ಜಲ ಉದ್ಯಾನ, ಆಹಾರ ಮಳಿಗೆಗಳು ಮತ್ತು ಮನೋರಂಜನಾ ಸೌಕರ್ಯಗಳಂತಹ ಅನೇಕ ಸಾರ್ವಜನಿಕ ಆಕರ್ಷಣೆಗಳನ್ನು ಹೊಂದಿದೆ. ಸರೋವರದ ಸುತ್ತಲಿನ ಭೂಮಿಯನ್ನು 2007―2008 ರಲ್ಲಿ ದುರಸ್ತಿ ಮಾಡಲಾಯಿತು. ಕಾಂಕರಿಯಾ ಉತ್ಸವವು ಡಿಸೆಂಬರ್ ಕೊನೆಯ ವಾರದಲ್ಲಿ ಆಯೋಜಿಸಲ್ಪಡುವ ವಾರಾವಧಿಯ ಉತ್ಸವವಾಗಿದೆ. ಉತ್ಸವದ ವೇಳೆ ಅನೇಕ ಸಾಂಸ್ಕೃತಿಕ, ಕಲಾ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.[೧]