ಕಾರ್ಲ ಗುಹಾಲಯ ಪೂನಾ ಜಿಲ್ಲೆಯಲ್ಲಿದೆ. ಅಲ್ಲಿರುವ ಚೈತ್ಯಾಲಯ ಇಡೀ ಭಾರತದಲ್ಲಿಯ ಬೌದ್ಧ ಚೈತ್ಯಾಲಯಗಳಲ್ಲಿ ಅತಿ ದೊಡ್ಡದು ಮತ್ತು ಸುಂದರವಾದುದು.
ಕಿ. ಪೂ. 1ನೆಯ ಮತ್ತು ಕ್ರಿ. ಶ. 1ನೆಯಶತಮಾನಗಳ ನಡುವಣ ಕಾಲದ ಈ ಚೈತ್ಯಾಲಯ ಮೊದಲು ಹೀನಯಾನ ಪಂಥಕ್ಕೆ ಸೇರಿದ್ದು ಅನಂತರ ಸು. 6ನೆಯ ಶತಮಾನದಲ್ಲಿ ಮಹಾಯಾನ ಪಂಥಕ್ಕೆ ಪರಿವರ್ತಿತವಾಯಿತು.
ಇದನ್ನು ಬೃಹದಾಕಾರದ ಏಕಶಿಲೆಯಲ್ಲಿ ಕಡೆಯಲಾಗಿದ್ದರೂ ಅಂದು ಪ್ರಚಲಿತವಿದ್ದ ಮರದ ವಾಸ್ತುಕಲೆಯ ರೀತಿಯಲ್ಲಿ ಮುಂಚಿನ ತೊಲೆಗಳನ್ನು ಕಲ್ಲಿನಲ್ಲಿದೆ. ಇದು ಮರದ ಕಟರಗಳ ಮಾದರಿಯಲ್ಲಿದೆ. ಪಶ್ಚಿಮಭಾರತದ ಬಂಡೆಗಳಲ್ಲಿ ಕೊರೆದ ಗುಹೆಗಳಲ್ಲಿ ಮೊದಲ ಕಾಲದ ಗುಂಪಿಗೆ ಭಾಜ, ಕೊಂಡಾನೆ, ತಲ್‍ಖೋರ, ಬೆಡ್ಸಾ ಮುಂತಾದವೂ ಅನಂತರ ಕಾಲದಕ್ಕೆ ನಾಸಿಕ್ ಮತ್ತು ಕಾರ್ಲೆ ಇವೂ ಸೇರಿವೆ. ಇವುಗಳಲ್ಲಿ ಕೊನೆಯದು ಕನ್ಹೇರಿಯ ಗುಹೆ. ಈ ಬೌದ್ಧಗುಹೆಗಳಲ್ಲಿ ಅತ್ಯಂತ ದೊಡ್ಡದು ಕಾರ್ಲೆಯ ಚೈತ್ಯಮಂದಿರ. ಇವೆಲ್ಲವೂ ಗಜಪೃಷ್ಠಾಕೃತಿಯ ಗುಹಾಮಂದಿರಗಳು. ಇದು 124' ಉದ್ದ 461/2 ಅಗಲ ಮತ್ತು 45' ಎತ್ತರವಿದೆ. ಇದರ ಮುಖಮಂಟಪ ಎರಡು ಅಂತಸ್ತುಳ್ಳದ್ದಾಗಿದೆ. ಮೊದಲ ಅಂತಸ್ತಿನಲ್ಲಿ ಪ್ರವೇಶದ್ವಾರವೂ ಮೇಲಂತಸ್ತಿನಲ್ಲಿ ಗಾಳಿಬೆಳಕುಗಳಿಗಾಗಿ ಒಂದು ದೊಡ್ಡ ಲಾಳಾಕೃತಿಯ ಕಿಟಕಿಯೂ ಇವೆ[೧]. ಹಜಾರದಲ್ಲಿ ಎರಡು ಸಾಲಿನಲ್ಲಿ 37 ಕಂಬಗಳಿದ್ದು ಮಧ್ಯದ ಅಂಕಣವನ್ನು ಸುತ್ತಿನ ಪ್ರದಕ್ಷಿಣಾ ಪಂಥದಿಂದ ಬೇರ್ಪಡಿಸುತ್ತದೆ. ಈ ಕಂಬಗಳ ತಳಭಾಗ ಕುಂಭಾಕಾರದಲ್ಲಿದೆ. ಇದಕ್ಕೆ 8 ಮುಖಗಳಿವೆ. ಇವುಗಳ ಮೇಲೆ ಪದ್ಮಪುಷ್ಪದ ಆಕೃತಿಯ ಬೋದಿಗೆ, ಅವುಗಳ ಮೇಲೆ ತಲೆಕೆಳಗಾದ ಗುಮ್ಮಟ ಮತ್ತು ಗುಮ್ಮಟಗಳ ಮೇಲೆ ಸ್ತ್ರೀ ಪುರುಷ ಸವಾರೊಂದೊಡಗೂಡಿದ ಸುಂದರವಾದ ಆನೆಗಳು ಇವೆ. ಇವುಗಳ ಮೇಲಿನ ಶಿಲ್ಪಗಳೂ ಉತ್ತಮವಾಗಿವೆ. ಈ ಚೈತ್ಯಕ್ಕೆ ಮೂರು ಪ್ರವೇಶದ್ವಾರಗಳಿವೆ. ಮುಖ್ಯಪ್ರವೇಶದ್ವಾರದ ಬದಿಯ ಗೋಡೆಗಳ ಮೇಲಿನ ಶಿಲ್ಪಗಳು ಕಲಾಪೂರ್ಣವಾದವು. ಇವನ್ನು ಬನವಾಸಿಯ ಭೂತಪಾಲಸೆಟ್ಟಿ ಕೊರೆಯಿಸಿದ್ದಾನೆ. ಇದರ ಮಧ್ಯ ಅಂಕಣದ ಕೊನೆಯಲ್ಲಿ ಬಂಡೆಗಲ್ಲಿನಲ್ಲಿ ಕೊರೆದ ಒಂದು ಸ್ತೂಪವಿದೆ. ಸ್ತೂಪದ ತಲೆಯ ಮೇಲಿರುವ ಅದೇ ಕಾಲದ ಮರದ ಛತ್ರಿ ಇನ್ನೂ ಉಳಿದುಬಂದಿದೆ. ಈ ಗುಹಾಂತರ್ದೇವಾಲಯದ ಮುಂದೆ ಈಗ ಒಂದು ದೊಡ್ಡ ಸ್ತಂಭವಿದೆ. ಅದರ ಮೇಲೆ ಅಗ್ನಿಮಿತ್ರನೆಂಬವನು ಇದನ್ನು ಮಾಡಿದನೆಂಬ ಉಲ್ಲೇಖವಿದೆ. ಆ ಸ್ತಂಭ ಅಶೋಕನ ಸ್ತಂಭಗಳ ಮಾದರಿಯಲ್ಲಿದೆ. ಅದಕ್ಕೆ 16 ಮುಖಗಳೂ ಬೋದಿಗೆಯ ಮೇಲೆ 4 ಸಿಂಹಗಳ ಶಿಲ್ಪಗಳೂ ಇವೆ.