ಕುಂಕುಮದ ಮರ

ಕುಂಕುಮದ ಮರ
Mallotus philippensis
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
M. philippensis
Binomial name
Mallotus philippensis
Synonyms
  • Croton philippense Lam.
  • Echinus philippensis (Lam.) Baill.
  • Rottlera tinctoria Roxb.

ಕುಂಕುಮದ ಮರ ಕೆಂಪು ಬಣ್ಣದ ಸ್ವಾಭಾವಿಕ ಬಣ್ಣವನ್ನು ನೀಡುವ ಒಂದು ಜಾತಿಯ ಸಸ್ಯ.ಭಾರತದಾದ್ಯಂತ ಕಂಡು ಬರುತ್ತದೆ.ಇದನ್ನು ಕಮಲದ ಮರ ಎಂದೂ ಕರೆಯುತ್ತಾರೆ.ದಕ್ಷಿಣ ಏಷಿಯಾ ಮಾತ್ರವಲ್ಲದ ಆಸ್ಟೇಲಿಯ ಮತ್ತು ಫಿಲಿಫೈನ್ಸ್ ನಲ್ಲಿಯೂ ಸ್ವಾಭಾವಿಕವಾಗಿ ಬೆಳೆಯುತ್ತದೆ.

ವೈಜ್ಞಾನಿಕ ವರ್ಗೀಕರಣ

[ಬದಲಾಯಿಸಿ]

ಯುಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಮೆಲೋಟಸ್ ಫಿಲಿಪೆನ್ಸಿಸ್ ಎಂಬ ವೈಜ್ಞಾನಿಕ ಹೆಸರಿನ ಸಣ್ಣಪ್ರಮಾಣದ ನಿತ್ಯ ಹರಿದ್ವರ್ಣದ ಮರ.

ಭೌಗೋಳಿಕ ಹರಡುವಿಕೆ

[ಬದಲಾಯಿಸಿ]

ಭಾರತದ ಅದ್ಯಂತವೂ ಕಂಡುಬರುವ ಈ ಮರ ಉತ್ತರ ಪ್ರದೇಶ ಮತ್ತು ಒರಿಸ್ಸ ರಾಜ್ಯಗಳಲ್ಲಿ ಹೆಚ್ಚಾಗಿಯೂ ಬಂಗಾಳ, ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಸಾಧಾರಣವಾಗಿಯೂ ಕಂಡುಬರುತ್ತದೆ. ಕರ್ನಾಟಕ ರಾಜ್ಯದ ಉತ್ತರ ಕನ್ನಡ ಮತ್ತು ಬೆಳಗಾಂವಿ ಜಿಲ್ಲೆಗಳ ತೇವಮಯ ಪ್ರದೇಶಗಳಲ್ಲೂ ಕುರುಚಲು ಗಿಡದ ಕಾಡುಗಳಲ್ಲೂ ಸ್ವಲ್ಪಮಟ್ಟಿಗೆ ಬೆಳೆಯುತ್ತದೆ.

ಲಕ್ಷಣಗಳು

[ಬದಲಾಯಿಸಿ]

ಯಥೇಚ್ಛವಾಗಿ ಕವಲೊಡೆದ ಇದರ ಕೊಂಬೆಗಳ ಮೇಲೆ ತೆಳುವಾದ ಚಕ್ಕೆಯಿರುತ್ತದೆ. ಹೆಚ್ಚುಕಡಿಮೆ ದೀರ್ಘ ವೃತ್ತಾಕಾರದ ಇದರ ಎಲೆಗಳ ಮೇಲೆ ರೋಮಗಳಿದ್ದು ಅವುಗಳ ತಳದಲ್ಲಿ ಕೆಂಪು ಗ್ರಂಥಿಗಳಿರುತ್ತವೆ. ಹೂಗಳು ಸ್ಪೈಕ್ ಮಾದರಿಯ ಗೊಂಚಲಾಗಿ ಜೋಡಿಸಿಕೊಂಡಿರುತ್ತವೆ. ಸಂಪುಟ ಮಾದರಿಯ ಇದರ ಕಾಯಿಗಳೊಳಗೆ ಕಪ್ಪುಬಣ್ಣದ ನಯವಾದ ಬೀಜಗಳಿರುತ್ತವೆ.

ಸಸ್ಯಾಭಿವೃದ್ಧಿ

[ಬದಲಾಯಿಸಿ]

ಏಪ್ರಿಲ್-ಮೇ ತಿಂಗಳುಗಳಲ್ಲಿ ಬಲಿತು ಸುರಿಯುವ ಬೀಜಗಳು ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಮೊಳೆತು ಗಿಡಗಳಾಗುತ್ತವೆ. ಏಪ್ರಿಲ್ ತಿಂಗಳಲ್ಲಿ ಬೀಜಗಳನ್ನು ಬಿತ್ತಿ ಬೆಳೆಸಿ ವ್ಯವಸಾಯ ಮಾಡುವುದುಂಟು. ಮೊದಲ ಎರಡು ವರ್ಷಗಳಲ್ಲಿ ಕಳೆ ಕಿತ್ತು ಗೊಬ್ಬರ ಹಾಕಿ ಚೆನ್ನಾಗಿ ಬೇಸಾಯ ಮಾಡಬೇಕು. ಗಿಡದ ಬೇರುಗಳಿಂದಲೂ ಹೊಸ ಗಿಡಗಳು ಹುಟ್ಟುವುದುಂಟು.

ಉಪಯೋಗಗಳು

[ಬದಲಾಯಿಸಿ]

ಹಿಂದಿನಿಂದಲೂ ಕುಂಕುಮದ ಮರ ಬಣ್ಣದ ತಯಾರಿಕೆಗಾಗಿ ಉಪಯುಕ್ತವೆನಿಸಿದೆ. ಬಲಿತ ಕಾಯಿಗಳಲ್ಲಿರುವ ಕೆಂಪು ಗ್ರಂಥಿಗಳಿಂದ ಬಣ್ಣ ತಯಾರಿಸುತ್ತಾರೆ. ಕಾಯಿಗಳನ್ನು ಬಡಿದು ಕೆಂಪು ಬಣ್ಣದ ಪುಡಿಯನ್ನು ಸಂಗ್ರಹಿಸುತ್ತಾರೆ. ಕಾಯಿಗಳನ್ನು ನೀರಿನಲ್ಲಿ ನೆನೆಸಿ ಕೆಂಪುದ್ರವವನ್ನಾಗಿ ಮಾಡಿ ಅದನ್ನು ಹಿಂಗಿಸಿ ಪುಡಿಯನ್ನು ತಯಾರಿಸುವುದೂ ಉಂಟು. ಈ ಪುಡಿಯನ್ನೆ ಕುಂಕುಮವೆಂದು ಬಳಸುವುದು. ಶುದ್ಧರೂಪದಲ್ಲಿ ಅದಕ್ಕೆ ಯಾವ ವಾಸನೆಯೂ ಇಲ್ಲ. ಆದರೆ ಮಾರಾಟಕ್ಕೆ ಬರುವ ಕುಂಕುಮದಲ್ಲಿ ಇತರ ಅಂಶಗಳನ್ನು ಸೇರಿಸಿ ಕಲಬೆರಕೆ ಮಾಡಿರುವುದುಂಟು. ನೈಸರ್ಗಿಕ ಕುಂಕುಮದಲ್ಲಿ ರಾಟ್ಲೆರಿನ್ ಮತ್ತು ಐಸೋರಾಟ್ಲೆರಿನ್ ಎಂಬ ಅಂಶಗಳು ಉಂಟು. ಟ್ಯಾನಿನ್ ಗೋಂದು, ಅಕ್ಸಾಲಿಕ್ ಮತ್ತು ಸಿಟ್ರಿಕ್ ಅಮ್ಲಗಳೂ ಇರುತ್ತವೆ. ಕುಂಕುಮ ತಣ್ಣೀರಿನಲ್ಲಿ ಕರಗುವುದಿಲ್ಲ. ಬಿಸಿನೀರಿನಲ್ಲಿ ಸ್ವಲ್ಪ ಮಟ್ಟಿಗೆ ಕರಗುತ್ತದೆ.ಅಲ್ಕೊಹಾಲಿನಲ್ಲಿ ಚೆನ್ನಾಗಿ ಕರಗಿ ಕೆಂಪು ದ್ರಾವಣವಾಗುತ್ತದೆ. ಭಾರತದಲ್ಲಿ ಕುಂಕುಮವನ್ನು ಅನಾದಿಕಾಲದಿಂದ ಶುಭಕಾರ್ಯಗಳಲ್ಲೂ ಮಹಿಳೆಯರ ಅಲಂಕಾರವಸ್ತುವನ್ನಾಗಿಯೂ ಬಳಸಲಾಗುತ್ತಿದೆ. ಇತ್ತೀಚಿನವರೆಗೂ ಅದನ್ನು ಉಣ್ಣೆ ಮತ್ತು ರೇಷ್ಮೆಬಟ್ಟೆಗಳಿಗೆ ಬಣ್ಣಕಟ್ಟಲು ಬಳಸಲಾಗುತ್ತಿತ್ತು.[] ಅದರ ಕಿತ್ತಳೆಗೆಂಪು ಅಥವಾ ಜ್ವಾಲಾವರ್ಣ ಸಾಬೂನು, ಕ್ಷಾರ, ಆಮ್ಲ ಇತ್ಯಾದಿಗಳ ಪ್ರಭಾವಕ್ಕೆ ಕುಂದುವುದಿಲ್ಲವಾದರೂ ಬಿಸಿಲಿಗೆ ಬಿಳಿಚಿಕೊಳ್ಳುತ್ತದೆ. ಹಿಂದೆ ಈ ಬಣ್ಣವನ್ನು ಪರದೇಶಗಳಿಗೆ ರಫ್ತುಮಾಡಲಾಗುತ್ತಿತ್ತು. ಕುಂಕುಮವನ್ನು ಹೋಲುವ ಕೃತಕವರ್ಣಗಳು ರಾಸಾಯನಿಕವಾಗಿ ತಯಾರಾದಂತೆ ಕುಂಕುಮದ ವಾಣಿಜ್ಯಪ್ರಾಮುಖ್ಯ ಕಡಮೆಯಾಗುತ್ತಿದೆ. ತುಪ್ಪ ಮತ್ತು ವನಸ್ಪತಿ ತೈಲಗಳನ್ನು ರಕ್ಷಸಿಡುವುದಕ್ಕೂ ಅವುಗಳಲ್ಲಿರುವ ಎ ಜೀವಸತ್ತವವನ್ನು ಉಳಿಸಿಕೊಳ್ಳವುದಕ್ಕೂ ಕುಂಕುಮವನ್ನು ಸೇರಿಸುವುದುಂಟು. ಕುಂಕುಮದ ಬೀಜಗಳಿಂದ ನಸುಬಿಳಿ ತೈಲವೊಂದನ್ನು ತಯಾರಿಸುತ್ತಾರೆ. ಇದರ ಬಹುಭಾಗ ಸಂಕೀರ್ಣರೀತಿಯ ಟ್ರೈಗ್ಲಿಸóರೈಡ್‍ಗಳನ್ನು ಒಳಗೊಂಡಿದೆ. ಇದನ್ನು ಬೇಗ ಆರಬೇಕಾದ ಬಣ್ಣ ಮತ್ತು ವಾರ್ನಿಷ್‍ಗಳ ತಯಾರಿಕೆಯಲ್ಲೂ ಮುಲಾಮು ಮತ್ತು ಸುಗಂಧ ದ್ರವ್ಯಗಳ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ. ಎಣ್ಣೆ ತೆಗೆದ ಮೇಲೆ ಉಳಿಯುವ ಹಿಂಡಿಯೊಡನೆ ಮರದಪುಡಿಯನ್ನು ಬೆರೆಸಿ ಬಿರಡೆ (ಕಾರ್ಕ್) ಮತ್ತು ವಿದ್ಯುನ್ನಿರೋಧಕ (ಇನ್ಸುಲೆಟಿಂಗ್) ವಸ್ತುಗಳನ್ನು ತಯಾರಿಸುವರು. ಇದರ ತೊಗಟೆ ಮತ್ತು ಎಲೆಗಳಿಂದಲೂ ಸ್ವಲ್ಪಮಟ್ಟಿಗೆ ಕುಂಕುಮವನ್ನು ತಯಾರಿಸಬಹುದು. ಎಲೆಗಳು ದನಗಳಿಗೆ ಒಳ್ಳೆಯ ಮೇವು. ಮರ ಗಟ್ಟಿಯಲ್ಲವಾದ್ದರಿಂದ ಅದನ್ನು ಸೌದೆಯಾಗಿ ಮಾತ್ರ ಬಳಸಬಹುದು.

ಔಷಧೀಯ ಗುಣಗಳು

[ಬದಲಾಯಿಸಿ]

ಕುಂಕುಮದ ಪುಡಿಗೆ ವಿರೇಚಕ ಗುಣವಿದೆ. ಪಟ್ಟೆಹುಳುಗಳ ನಿವಾರಣೆಗೂ ಇದನ್ನು ಬಳಸುವುದುಂಟು. ಚÀರ್ಮವ್ಯಾಧಿಗಳಲ್ಲಿ ಬಳಸುವ ಮುಲಾಮುಗಳ ತಯಾರಿಕೆಗೂ ಪಶುವೈದ್ಯದಲ್ಲೂ ಇದನ್ನು ಬಳಸುವರು. ಇದರಲ್ಲಿರುವ ರಾಟ್ಲೆರಿನ್ಗೆ ಗರ್ಭನಿರೋಧಕ ಗುಣ ಇದೆ ಎಂದು ತಿಳಿದುಬಂದಿದೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Anderson, Thomas (1855). "On the Colouring matter of the Rottlera tinctoria". The Edinburgh New Philosophical Journal. 1: 296–301.