ಕುಂದಾಪುರ, ಇದು ಜಿಲ್ಲಾ ಕೇಂದ್ರವಾದ ಉಡುಪಿಯಿಂದ ೩೬ ಕಿಲೋ ಮೀಟರ್ ದೂರದಲ್ಲಿ ಇರುವ ತಾಲ್ಲೂಕು ಪಟ್ಟಣವಾಗಿದೆ. ಪಶ್ಚಿಮ ದಿಕ್ಕಿನಲ್ಲಿರುವ ಸಮುದ್ರ ತೀರವು ಕುಂದಾಪುರ ತಾಲ್ಲೂಕಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಈ ತಾಲ್ಲೂಕಿನ ಗಂಗೊಳ್ಳಿಯಲ್ಲಿರುವ ಸೇತುವೆಯು ಉಡುಪಿ ಜಿಲ್ಲೆಯಲ್ಲೇ ಅತೀ ದೊಡ್ಡ ಸೇತುವೆ ಎಂಬ ಖ್ಯಾತಿ ಪಡೆದಿದೆ.[೨] ಬಡಗುತಿಟ್ಟು ಯಕ್ಷಗಾನ ಕಲೆಯನ್ನು ಬೆಳೆಸುವಲ್ಲಿ ಕುಂದಾಪುರದ ಪಾತ್ರ ಬಹಳ ಪ್ರಮುಖ. ಇಲ್ಲಿ ಪರ್ಯಾಯ ದ್ವೀಪದ ರೂಪದಲ್ಲಿ- ಉತ್ತರ, ಪಶ್ಚಿಮ ಮತ್ತು ಪೂರ್ವ ದಿಕ್ಕಿನಲ್ಲಿ ನೀರಿದೆ- (ಸಮುದ್ರ, ಗಂಗೊಳ್ಳಿ ಹೊಳೆ ಮತ್ತು ಹಾಲಾಡಿ ಹೊಳೆ ಹಾಗೂ ಕೋಣಿ ಹಿನ್ನೀರು ಪ್ರದೇಶ) ಮತ್ತು ದಕ್ಷಿಣದಲ್ಲಿ ಮಾತ್ರ ನೆಲವಿರುವ ಪ್ರದೇಶವಾಗಿರುತ್ತದೆ. ಇಂತಹ ಒಂದು ವೈಚಿತ್ರ್ಯದ ಪ್ರಚಾರವಾಗಿಲ್ಲ ಮತ್ತು ಈ ನೀರಿನ ಇರವನ್ನು ಪ್ರವಾಸೋದ್ಯಮಕ್ಕೂ ಬಳಸುವ ಪ್ರಯತ್ನ ಹೆಚ್ಚಾಗಿ ನಡೆದಿಲ್ಲ. ಕುಂದಾಪುರ ಸಂತೆಯು ಸುತ್ತಲಿನ ನೂರಾರು ಹಳ್ಳಿಗಳ ವ್ಯಾಪಾರಕ್ಕೆ ಮತ್ತು 'ಕೃಷಿ ಉತ್ಪನ್ನ ಮಾರಲು' ಅನುಕೂಲ ಮಾಡಿಕೊಡುತ್ತಿದೆ.[೩]
ಈ ಊರಿನ ಹೆಸರು 'ಪಂಚ ಗಂಗಾವಳಿ ತೀರ'ದಲ್ಲಿ 'ಕುಂದವರ್ಮ'ನೆಂಬ ರಾಜನು ಕಟ್ಟಿಸಿದ 'ಕುಂದೇಶ್ವರ ದೇವಸ್ಥಾನ' ಮತ್ತು ಪಟ್ಟಣದಿಂದ ಬಂದಿದೆಯೆಂದು ಪ್ರತೀತಿ. ಕುಂದವರ್ಮ ಆಳಿದ್ದರಿಂದ, ಈ ಜಾಗವು ರಾಜನ ಹೆಸರನ್ನು ಹೊಂದಿರಬಹುದು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಲಿಷ್ಠರಾದ 'ಕೆಳದಿ ರಾಜ'ರ ಪ್ರಮುಖವಾದ ಬಂದರು ಪ್ರದೇಶ ಹತ್ತಿರದ ಬಸ್ರೂರಿನಲ್ಲಿ ಮತ್ತು ಈ ಊರಿನಲ್ಲಿ ಇತ್ತು. ಪೋರ್ಚುಗೀಸರು ೧೬ನೇ ಶತಮಾನದಲ್ಲಿ ಇಲ್ಲಿಗೆ ಬಂದು ನೆಲೆಸಿದರು ಹಾಗೂ ಒಂದು ಕೋಟೆಯನ್ನು ಕಟ್ಟಿದರು. ಆಗ ಸಮೀಪದ ಬಸ್ರೂರು ಪ್ರಮುಖ ಪಟ್ಟಣವಾಗಿದ್ದು, ವ್ಯಾಪಾರದಂತಹ ಎಲ್ಲಾ ಚಟುವಟಿಕೆಗಳೂ ಬಸರೂರಿನಲ್ಲೇ ನಡೆಯುತ್ತಿತ್ತು. ನಂತರ ಕ್ರಮೇಣ ಬಸರೂರು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು, ಕುಂದಾಪುರ ಅಭಿವೃದ್ದಿಗೆ ಬಂತು. ೧೭೯೯ ರಲ್ಲಿ ಟಿಪ್ಪು ಸುಲ್ತಾನನ ಕಾಲ ನಂತರ ಈ ಪಟ್ಟಣವನ್ನು ಬ್ರಿಟೀಷರು ವಶಪಡಿಸಿಕೊಂಡರು. ಒಂದು ಕಾಲದಲ್ಲಿ ಈ ಊರಿನ ಹತ್ತಿರದ ಒಂದು ಸ್ವಚ್ಚ ನೀರಿನ ಕೆರೆಯಲ್ಲಿ ಟಿಪ್ಪು ಸುಲ್ತಾನನಿಗೆಂದೇ ಒಂದು ವಿಶೇಷ ತಳಿಯ ಮೀನುಗಳನ್ನು ಸಾಕಲಾಗುತ್ತಿತ್ತು. ಈ ಊರಿನ ಸುತ್ತ ಮುತ್ತ ಯಥೇಛ್ಛವಾಗಿ ಬೆಳೆಯುವ ಮಲ್ಲಿಗೆ (ಕುಂದ) ಹೂವಿನಿಂದಾಗಿಯೂ ಈ ಊರಿಗೆ ಕುಂದಾಪುರ ಎಂಬ ಹೆಸರು ಬಂದಿದೆಯೆಂದು ಹೇಳುತ್ತಾರೆ. ಇನ್ನು ಕೆಲವರು ಮನೆ ಕಟ್ಟುವ ಸಾಮಗ್ರಿಗಳಲ್ಲಿ ಒಂದಾದ ಕಂಬ (ಕುಂದ) ಎಂಬ ಪದದಿಂದಲೂ ಕುಂದಾಪುರವೆಂಬ ಹೆಸರು ಬಂದಿದೆಯೆಂದು ಹೇಳುತ್ತಾರೆ.[೪]
ಬೈಂದೂರು ಕುಂದಾಪುರದಿಂದ ಸುಮಾರು ೩೨ ಕಿ. ಮೀ ದೂರದಲ್ಲಿದೆ. ಕರ್ನಾಟಕದ ವಿವಿಧ ಪ್ರಸಿದ್ದ ಪ್ರವಾಸಿ ಸ್ಥಳಗಳಲ್ಲಿ ಬೈಂದೂರು ಒಂದು. ಮೊದಲು ಇಲ್ಲಿ ’ಬಿಂದುಋಷಿ’ ಎನ್ನುವ ಮಹರ್ಷಿಗಳು ತಪಸ್ಸು ಮಾಡುತ್ತಿದ್ದರಿಂದ ಬಿಂದುನಾಡು, ಬಿಂದುಪುರ, ಬಿಂದೂರು ಕ್ರಮೇಣ ಬೈಂದೂರು ಆಗಿ ಪರಿವರ್ತನೆ ಆಯಿತು ಎಂಬುವುದು ಕೆಲವು ತಜ್ಞರ ಅಭಿಪ್ರಾಯ. ಇಲ್ಲಿ ಹಲವಾರು ವರ್ಷಗಳ ಇತಿಹಾಸವಿರುವ "ಶ್ರೀ ಸೇನೆಶ್ವರ ದೇವಸ್ಥಾನ"ವು ಬಹಳ ಪ್ರಸಿದ್ದಿಯನ್ನು ಪಡೆದಿದೆ. ಬೈಂದೂರು ಹಲವಾರು ಪ್ರವಾಸಿ ಸ್ಥಳಗಳನ್ನು ಒಳಗೊಂಡಿದ್ದು ಅವುಗಳಲ್ಲಿ ಸೋಮೇಶ್ವರ ಕಡಲ ತೀರ,ಕೋಸಳ್ಳಿ ಜಲಪಾತ ಕೋಸಳ್ಳಿ|ಜಲಪಾತ, ಸಾಯಿ ವಿಶ್ರಾಮ್ ಬೀಚ್ ರೆಸಾರ್ಟ್, ಕ್ಷಿತಿಜ ನೇಸರ ದಾಮ ಮುಂತಾದವುಗಳು ಹೆಸರುವಾಸಿಗಳಾಗಿದೆ.
ಸೋದೆ ಮಠದ ಪರಂಪರೆಯ ಪ್ರಮುಖ ಯತಿಗಳಾದ ಶ್ರೀ ವಾದಿರಾಜರು ಅವತರಿಸಿದ ಪುಣ್ಯಭೂಮಿ ಉಳ್ಳೂರು ೧೧. ಕುಂದಾಪುರದಿಂದ ಬೈಂದೂರು ಕಡೆಗ ಸಾಗುವಾಗ ಬಲ ಬದಿಯಿಂದ ೩ ಕಿ. ಮೀ. ದೂರದಲ್ಲಿ ಕಾಣಲಿರುವ ಈ ಸ್ಥಳ ಮಾಧ್ವರಿಗೆ ಪವಿತ್ರ ಸ್ಥಳ. ಪ್ರಕೃತಿಯ ಮಧ್ಯೆ ಇರುವ ಈ ಸ್ಥಳವು ಒಂದು ಸುಂದರ ಸ್ಥಳವಾಗಿದ್ದು, ಪ್ರಕೃತಿ ಪ್ರಿಯರನ್ನೂ ಕೈಬೀಸಿ ಕರೆಯುತ್ತದೆ. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶಂಕರ ದೇವಾಡಿಗ ಇಲ್ಲಿ ಜನಿಸಿರುತ್ತಾರೆ.
ಮರವಂತೆಯ ಬಳಿ ಸಮುದ್ರ ಮತ್ತು ನದಿಗಳು ತೀರ ಹತ್ತಿರಕ್ಕೆ ಬರುವುದು ಇಲ್ಲಿನ ವಿಶೇಷ ಮತ್ತು ಸಮುದ್ರ ಮತ್ತು ನದಿಯ ಮಧ್ಯೆ ರಾಷ್ಟ್ರೀಯ ಹೆದ್ದಾರಿ ೬೬ (೧೭) ಹಾದುಹೋಗಿದ್ದು, ಇಂತಹ ಅಪರೂಪದ ದೃಶ್ಯ ಭಾರತದ ಬೇರಾವುದೇ ಭಾಗದಲ್ಲೂ ಇಲ್ಲವೆನ್ನಲಾಗಿದೆ.[೫]
ಇಲ್ಲಿ ಕೇವಲ ನೂರು ಅಡಿಗಳಷ್ಟು ಹತ್ತಿರ ಬಂದ ಸೌಪರ್ಣಿಕಾ ನದಿಯು, ಯು(U) ರೀತಿ ತಿರುಗಿಕೊಂಡು ಹೋಗಿ,ಎಂಟು ಕಿಲೋಮೀಟರುಗಳ ನಂತರ ಸಮುದ್ರವನ್ನು ಸೇರುತ್ತದೆ. ಈ ಜಾಗದಲ್ಲಿರುವ ಮಾರಸ್ವಾಮಿ ದೇವಾಲಯದಲ್ಲಿ ಆಮೆಗೆ ಮತ್ತು ಮೊಸಳೆಗೆ ಪೂಜೆ ನಡೆಯುವುದು ಮತ್ತೊಂದು ವಿಶೇಷ. ನದಿಯಲ್ಲಿ ಕಾಣುವ ಕೊಡಚಾದ್ರಿ ಶಿಖರದ ಪ್ರತಿಬಿಂಬವು, ಸುತ್ತಲಿನ ತೆಂಗಿನ ಮರಗಳ ಹಿನ್ನೆಲೆಯಲ್ಲಿ ಅಪರೂಪದ ದೃಶ್ಯವಾಗಿ ಹೆಸರುವಾಸಿಯಾಗಿದೆ.
ತ್ರಾಸಿಯು ಸೌಪರ್ಣಿಕಾ ನದಿ ಹಾಗೂ ಅರಬ್ಬೀ ಸಮುದ್ರವನ್ನು ರಾಷ್ಟ್ರೀಯ ಹೆದ್ದಾರಿ ೬೬ (೧೭) ಕೆಲವೇ ಅಡಿಗಳ ಅಂತರದಲ್ಲಿ ಬೇರ್ಪಡಿಸುತ್ತದೆ. 'ಸೂರ್ಯೋದಯ' ಹಾಗೂ 'ಸೂರ್ಯಾಸ್ತ'ವನ್ನು ಒಂದೇ ಜಾಗದಲ್ಲಿ ಇಲ್ಲಿ ನೋಡಬಹುದು.[೬]
'ಮೆಕ್ಕೆ ಕಟ್ಟು', ಕುಂದಾಪುರದಿಂದ ಸುಮಾರು ೨೦ ಕಿ. ಮೀ ದಕ್ಷಿಣದಲ್ಲಿ, ಉಡುಪಿ ತಾಲ್ಲೂಕಿನ ಗಡಿಭಾಗದಲ್ಲಿ ಇರುವ ವಿಶ್ವಪ್ರಸಿದ್ಧ ಗ್ರಾಮ. 'ನಂದಿಕೇಶ್ವರ ದೇವಾಲಯ'ದಲ್ಲಿನ ಮರದ ಮೂರ್ತಿಗಳು ಅತ್ಯಂತ ಪ್ರಸಿದ್ಧಿ ಪಡೆದಿವೆ. ಸಣ್ಣ ಮರದ ಮೂರ್ತಿಗಳಿಂದ ಆರಂಭಿಸಿ, ೨೦ ಅಡಿ ಎತ್ತರದ ಈ ಮರದ ಮೂರ್ತಿಗಳನ್ನು ನೋಡಲು ದೂರದೂರಿನಿಂದ ಜನರು ಬರುತ್ತಾರೆ. 'ಜಂಬುಕೇಶ್ವರ' ಎಂಬ ಸನ್ಯಾಸಿಯು ಮೆಕ್ಕೆ ಕಟ್ಟುವಿನಲ್ಲಿ ಅನೇಕ ಯಜ್ಞಗಳನ್ನು ಮಾಡಿ ಶಿವನ ಪ್ರಮುಖ ಗಣದೇವಾಲಯವನ್ನು ನಿರ್ಮಿಸಿದನೆಂದು ಸ್ಥಳೀಯ ಪುರಾಣವಿದೆ.
ಸಾವಿರಾರು ವರ್ಷಗಳ ಪುರಾತನ ಮರದ ವೈವಿಧ್ಯಮಯ ಮೂರ್ತಿಗಳು ಇಲ್ಲಿದ್ದು, ಕಳೆದ ಶತಮಾನದಲ್ಲಿ ಹಳೆಯ ವಿಗ್ರಹಗಳನ್ನು ಬದಲಾಯಿಸಿ, ಹೊಸದಾಗಿ ಮರದ ವಿಗ್ರಹಗಳನ್ನು ಕೆತ್ತಲಾಯಿತು. ಇಲ್ಲಿನ ವಿಗ್ರಹಗಳನ್ನು ನೋಡಿದರೆ, ಯಾವುದೋ ಒಂದು ಸೈನ್ಯ ಯುದ್ದಕ್ಕೆ ಹೊರಟಂತಿದೆ. ಬಹುಪಾಲು ವಿಗ್ರಹಗಳು ಸೈನಿಕರ ವಿಗ್ರಹಗಳು - ಆ ಸೈನಿಕರಲ್ಲಿ ಸಿಖ್ ಉಡುಗೆ, ಮುಸ್ಲಿಮ್ ಶೈಲಿಯ ಉಡುಗೆ ತೊಡುಗೆ ಧರಿಸಿದ ಹಲವು ವಿಗ್ರಹಗಳಿವೆ.
ಕೆಲವು ವಿಗ್ರಹಗಳ ಕೈಯಲ್ಲಿ ಕೋವಿಯಂತಹ ಆಯುಧಗಳು, ಕತ್ತಿಗಳು ಮತ್ತಿತರ ಆಯುಧಗಳು ಇವೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಮಯದಲ್ಲಿ, ಸಿಡಿ ಪದ್ದತಿಯೂ ನಡೆಯುತ್ತದೆ. ಇಲ್ಲಿನ ಇತಿಹಾಸ ಮತ್ತು ವಿಗ್ರಹಗಳ ಹಿನ್ನೆಲೆಗಳ ಕುರಿತು ಹೆಚ್ಚಿನ ಸಂಶೋಧನೆ ನಡೆದಂತಿಲ್ಲ.
ವಾರಹಿ ನದಿಯ ದಡದಮೇಲಿರುವ ಹಾಲಾಡಿಯಲ್ಲಿ, 'ಚಿಕ್ಕು'ಯೆಂಬ ಹೆಸರಿನಲ್ಲಿ ಹೆಸರುವಾಸಿಯಾದ ದೇವಸ್ಥಾನವಿದೆ. ’ಮರ್ಲು ಚಿಕ್ಕು’ ಇಲ್ಲಿನ ಪ್ರಧಾನದೈವ. ಇದರೊಂದಿಗೆ 'ಬಗ್ ಚಿಕ್ಕು', 'ನರ್ತನ ಚಿಕ್ಕು', 'ಅಟ್ಟೆಕಾಲ್ ಚಿಕ್ಕು', 'ಬಾಲಚಿಕ್ಕು' ಹೀಗೆ, ಇನ್ನಿತರ ಹತ್ತು 'ಚಿಕ್ಕು ದೈವ'ಗಳಿವೆ. ಈ ಕ್ಷೇತ್ರದ್ದೇ ಆದ 'ಪ್ರಸಿದ್ಧ ಯಕ್ಷಗಾನ ಮೇಳ'ವಿದೆ. ಇಲ್ಲಿ ನಡೆಯುವ ಗೆಂಡ ಮತ್ತು ಹಬ್ಬಕ್ಕೆ ಘಟ್ಟದ ಮೇಲಿನ ಜನರು ಬರುವುದು ವಾಡಿಕೆ. ವಾರಾಹಿ ನದಿ ದಡದ ಮೇಲಿರುವ ನರಸಿಂಹ ದೇವಾಲಯವೂ ಇಲ್ಲಿದೆ.
ಹಾಲಾಡಿಯ ಸನಿಹದ ಕಕ್ಕುಂಜೆ ಎಂಬಲ್ಲಿ ನವ ಶಿಲಾಯುಗದ ಕಾಲದ ಹಲವು ಅವಶೇಷಗಳು ದೊರೆತಿದ್ದು, ಅದರಿಂದಾಗಿ ಹಾಲಾಡಿಯ ಇತಿಹಾಸವನ್ನು ಸುಮಾರು ಎರಡೂವರೆ ಸಾವಿರ ವರ್ಷಗಳಷ್ಟು ಹಿಂದೆ ಕೊಂಡೊಯ್ಯತ್ತದೆ.ಇಲ್ಲಿಗೆ ಸುಮಾರು ೮ ಕಿ. ಮೀ. ದೂರದಲ್ಲಿರುವ ಗಾವಳಿ ಯಲ್ಲಿ ದೊರೆತಿರುವ ಪುರಾತನ ಬಂಡೆಚಿತ್ರಗಳು (ನಂದಿ ಮತ್ತು ರಂಗೋಲಿ ರೂಪದ ರೇಖಾ ಚಿತ್ರಗಳೂ) ಈ ಸಮಗ್ರ ಪ್ರದೇಶದ ಪ್ರಾಚೀನತೆಯನ್ನು ಕನಿಷ್ಟ ನಾಲ್ಕು ಸಾವಿರ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ.
ನಾಲ್ಕು ರಸ್ತೆ ಕೂಡುವ ಸ್ಥಳದಲ್ಲಿರುವುದರಿಂದಾಗಿ, ಹಾಲಾಡಿಯು ಒಂದು ಪ್ರಮುಖ ಜಂಕ್ಷನ್ ಆಗಿ, ಗ್ರಾಮೀಣ ಪ್ರದೇಶದ ಜನರಿಗೆ ವ್ಯಾಪಾರ ಮಾಡಲು ಅನುಕೂಲವಾಗಿರುವ ಹಳ್ಳಿಯಾಗಿದೆ. ಸಮುದ್ರದ ಬರತದ ಸಮಯದಲ್ಲಿ, ಸಮುದ್ರದ ನೀರು ಹಾಲಾಡಿಯ ತನಕ ಬರುವುದಾದ್ದರಿಂದ, ಹಿಂದೆ ಹಾಲಾಡಿಯ ಸಂತೆಗೆ ಕುಂದಾಪುರದ ಕಡೆಯಿಂದ ವ್ಯಾಪಾರಿಗಳು ದೋಣಿಯ ಮೂಲಕ ಬರುತ್ತಿದ್ದು, ಹಾಲಾಡಿಯ ಸಂತೆಗೆ ಸಾಕಷ್ಟು ಪ್ರಾಮುಖ್ಯತೆ ಇತ್ತು.
ಸ್ವಾತಂತ್ರೋತ್ತರ ಕಾಲದಲ್ಲಿ ಹೊಳೆಗಳಿಗೆ ಸೇತುವೆ ಕಟ್ಟಿದ್ದರಿಂದ, ನದಿ ಮೂಲಕ ಸಾಗಾಣಿಕೆಗೆ ಪ್ರಾಮುಖ್ಯತೆ ಕಡಿಮೆಯಾಗಿ, ಹಾಲಾಡಿ ಸಂತೆಯೂ ಮೂಲೆ ಗುಂಪಾಯಿತು.
ಈ ತಾನ ಬೈಂದೂರಿನಿಂದ ಅನತಿದೂರದಲ್ಲಿದೆ. ಅರಣ್ಯ ಇಲಾಖೆಗೆ ಸೇರಿದ ಒಂದು ಅತಿಥಿಗೃಹವಿದೆ. ಇಲ್ಲಿ ಸೂರ್ಯಾಸ್ಥಮಾನವನ್ನು ವೀಕ್ಷಿಸಬಹುದು. ರಾಷ್ಟ್ರೀಯ ಹೆದ್ದಾರಿ ೬೬ (೧೭)ರಿಂದ ಕೇವಲ ೨ ಕಿ.ಮೀ ದೂರದಲ್ಲಿರುವ ಈ ಸಮುದ್ರತೀರ, ಇದುವರೆವಿಗೂ ಪ್ರವಾಸಿಗಳಿಗೆ ಸಿದ್ಧವಾಗಿರಲಿಲ್ಲ. ಈಗ ಇಲ್ಲಿಗೆ ಬರುವ ನೋಟಗರು ಸಾವಿರಾರು ಮಂದಿ.[೭]
'ರಾಜ್ಯದ ಪ್ರಥಮ ಭೂಗರ್ಭ-ಜಲವಿದ್ಯುತ್ ಉತ್ಪಾದನಾ ಕೇಂದ್ರ'. ಪಶ್ಚಿಮ ಘಟ್ಟದ ಹೆಬ್ಬಾಗಿಲಿನಲ್ಲಿ ಜನಿಸುವ 'ವಾರಾಹಿ ನದಿ' ೭೩೦ ಮೀಟರ್ ಎತ್ತರದಿಂದ ಧುಮುಕಿ ಹರಿದು ಅರಬ್ಬೀ ಸಮುದ್ರವನ್ನು ಸೇರಿಕೊಳ್ಳುತ್ತದೆ. ೧೧೫ ಮೆ. ವ್ಯಾಟ್ ಸಾಮರ್ಥ್ಯದ ಎರಡು ಜಲ ವಿದ್ಯುತ್ ಉತ್ಪಾದಕ ಘಟಕಗಳ ಮೂಲಕ ೨೩೦ ಮೆ. ವ್ಯಾಟ್ ವಿದ್ಯುತ್ ನ್ನು ಉತ್ಪಾದಿಸಲಾಗುತ್ತಿದೆ. ಉಣಚಿಕಲ್ ಫಾಲ್ಸ್ ನದಿಯಿಂದ ಉದ್ಭವಿಸಿದ ಜಲಪಾತ ಮಳೆಗಾಲದಲ್ಲಿ ಅತ್ಯಂತ ಚೇತನವುಳ್ಳದ್ದಾಗಿರುತ್ತದೆ. ಆ ಸಮಯದಲ್ಲಿ ಪ್ರವಾಸಿಗರ ಸಮೂಹವೇ ಇಲ್ಲಿಗೆ ಭೇಟಿಕೊಡುತ್ತದೆ.
ಕತ್ತಲೆ ಬೆಳಕಿನ ಸಂಜೀವಿನಿ: ವಾರಾಹಿ ಭೂಗರ್ಭ ವಿದ್ಯುದಾಗಾರ
ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಭೂ-ಗರ್ಭ ವಿದ್ಯುದಾಗಾರ (underground power house) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಸರ್. ಎಂ. ವಿಶ್ವೇಶ್ವರಯ್ಯ ನವರ ದಿವ್ಯ ದೃಷ್ಟಿಯ ಕೃಪಾಕಟಾಕ್ಷದಿಂದ, ಪಿಕ್-ಆಪ್ ಅಣ್ಣೆಕಟ್ಟು ಮತ್ತು ಮಾಣಿ ಅಣ್ಣೆಕಟ್ಟಿನಿಂದ ವಾರಾಹಿ ನದಿಯ ನೀರನ್ನು ಹಾಯಿಸಿ ಸುಮಾರು ೫.೦೮ ದಶಲಕ್ಷ ಘನ ಮೀ .ಗಾತ್ರ ದ ಬಂಡೆಯನ್ನು ಕೊರಯಿಸಿ, ೬.೯ ಕಿ. ಮೀ. ಸುರಂಗ ಮಾರ್ಗ ಹೊಂದಿದೆ.[೮]
ವಾರಾಹಿ ನದಿ : ವಾರಾಹಿ ನದಿಯು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದ ಆಗುಂಬೆಯ ಸಮೀಪ ಇರುವ ಹೆಬ್ಬಾಗಿಲು ಎಂಬಲ್ಲಿ ಸಮುದ್ರ ಮಟ್ಟದಿಂದ ಸುಮಾರು ೭೩೦ ಮೀ . ಎತ್ತರದಲ್ಲಿ ಉಗಮಿಸಿ, ಕುಂದಾಪುರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ವಾರಾಹಿಯು ಅರಬ್ಬಿ ಸಮುದ್ರಕ್ಕೆ ಸೇರುವ ಮೊದಲು ರಾಜ್ಯದ ಅನೇಕ ಮನೆಗಳಿಗೆ ಬೆಳಕಾಗಿ, ಕೈಗಾರಿಕೆಗಳಿಗೆ ಪೂರಕ ಶಕ್ತಿಯಾಗಿ ನಿಲ್ಲುತ್ತಾಳೆ . ವಾರಾಹಿ ಯೋಜನೆಯ ಮೊದಲ ಹಂತವು ೩ ಅಣೆಕಟ್ಟುಗಳನ್ನು ಹೊಂದಿದ್ದು, ಒಂದು ಆಣೆಕಟ್ಟು ವಿದ್ಯುದಾಗಾರ ಮತ್ತು ಒಂದು ಭೂಗರ್ಭ ವಿದ್ಯುದಾಗಾರವನ್ನು ಹೊಂದಿದೆ
ಮಾಣಿ ಆಣೆಕಟ್ಟು : ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆಯ ಮಾಣಿ ಎಂಬ ಹಳ್ಳಿಯ ಹತ್ತಿರವಿದ್ದೂ ,ಇದರ ಎತ್ತರ ೫.೯ ಮೀ ಮತ್ತು ಉದ್ದ ೫೮೫ ಮೀ ಜಲಾಶಯದ ಪೂರ್ಣ ಮಟ್ಟ ೫೯೪.೩೬ ಮೀ. ಮಾಣಿ ಅಣೆಕಟ್ಟಿಗೆ ಎಡ ದಂಡೆಯಲ್ಲಿ ೯ ಹಾಗೂ ಬಲ ದಂಡೆಯಲ್ಲಿ ೩ ಮಣ್ಣಿನ ಪಲ್ಲಣ ಕಟ್ಟೆ(saddle dam)ಗಳನ್ನೂ ನಿರ್ಮಿಸಲಾಗಿದೆ .
ಪಿಕ್-ಆಪ್ ಆಣೆಕಟ್ಟು : ಮಾಣಿ ಅಣೆಕಟ್ಟಿನ ಕೆಳ ಹಂತದಲ್ಲಿ ಕುಂಚಿಕಲ್ಲು ಅಭಿ ಜಲಪಾತ ದ ನಿರ್ಮಾಣದ ಹಂತ ದಲ್ಲಿದ್ದೂ, ಇದರ ಎತ್ತರ ೩೭.೬೦ ಮೀ ಮತ್ತು ಉದ್ದ ೨೪೪ ಮೀ ಈ ಜಲಾಶಯದ ನೀರಿನ ಮಟ್ಟ EL ೫೬೩.೮೮ ಮೀ . ಈ ಜಲಾಶಯಕ್ಕೆ ಆಧಾರವಾಗಿ ಬಲ ಪಾರ್ಶ್ವದಲ್ಲಿ ಮೂರು ಮಣ್ಣಿನ ಪಲ್ಲಣ ಕಟ್ಟೆ ಗಳನ್ನೂನಿರ್ಮಿಸಲಾಗಿದೆ .
ಹುಲಿಕಲ್ ಫೋರ್ಬೆ ಆಣೆಕಟ್ಟು : ವಾರಾಹಿ ನದಿಗೆ ಸೇರುವ ಹುಲಿಕಲ್ ಹೊಳೆಗೆ ಹುಲಿಕಲ್ಲಿನಲ್ಲಿ ನಿರ್ಮಿಸಲಗಿದ್ದೂ,೪೦ ಮೀ ಎತ್ತರ, ೪೨೨ ಮೀ ಉದ್ದದಾಗಿದೆ. ಈ ಜಲಾಶಯದ ಪೂರ್ಣ ಮಟ್ಟ EL ೫೬೩.೮೮ ಮೀ. ಮಾಣಿ ಆಣೆಕಟ್ಟು , ವಿದ್ಯುದಾಗಾರದಿಂದ ಉತ್ಪಾದಿಸಲಾಗುವ ವಿದ್ಯುತನ್ನು ಸಾಗಣಿ ತಂತಿ ಜಾಲದ ಮೂಲಕ ಶಿವಮೊಗ್ಗ -ಮಂಗಳೂರು ಸಾಗಣಿ ತಂತಿ ಜಾಲಕ್ಕೆ ಸೇರಿಸಲಾಗಿದೆ .
ಭೂ-ಗರ್ಭ ವಿದ್ಯುದಾಗಾರ : ಸುಮಾರು ೫.೦೮ ದಶಲಕ್ಷ ಘನ ಮೀ. ಗಾತ್ರದ ಬಂಡೆಯನ್ನು ಕೊರೆದು ,೬ .೯ ಕೀ. ಮೀ . ಸುರಂಗ ಮಾರ್ಗ, ೧,೬೦,೦೦೦ ಮೆಟ್ರಿಕ್ ಟನ್ ಸಿಮೆಂಟ್, ೨೬,೦೦೦ ಮೆಟ್ರಿಕ್ ಟನ್ ಉಕ್ಕಿನ ಬಳಕೆಯಿಂದ ನಿರ್ಮಾಣವಾಗಿದೆ. ೩೩೫ ಕೋಟಿ ರೂ. ವೆಚ್ಚದ ೧೧೫ ಮೆಗಾ ವ್ಯಾಟ್ ೨ ಘಟಕ ನಿರ್ಮಾಣವನ್ನು, ೧೯೭೦ ರಲ್ಲಿ ಆರಂಭಿಸಿ, ೧೯೮೯-೯೦ಕ್ಕೆ ಪೂರ್ಣಗೊಳಿಸಿ ೧೧-೦೫-೧೯೯೦ ರಂದು ಅಂದಿನ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ, ಶ್ರೀ ವೀರೇಂದ್ರ ಪಾಟೀಲ್ ರವರ ನೇತ್ರತ್ವದಲ್ಲಿ ಉದ್ಗಾಟನೆ ಗೊಂಡಿತು.
ಎರಡೆನೇ ಹಂತದ ಯೋಜನೆ: ೨೦೦೭ ರಿಂದ ೨೦೧೦ ರ ಕಾಲಾವಧಿಯಲ್ಲಿ ೨೮೬.೦೬ ಕೋಟಿ ರೂ. ವೆಚ್ಚದ ೧೧೫*೨ ಮೆಗಾ ವ್ಯಾಟ್ ೨ನೇ ಘಟಕವನ್ನು ಸ್ಥಾಪಿಸಲಾಗಿದ್ದು ,ಇತ್ತಿಚೆಗೆ ಅಂದರೆ ೧೦-೦೧೨೦೧೦ ರಂದು ಅಂದಿನ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ನವರಿಂದ ಉದ್ಗಾಟನೆಗೊಂಡಿತು. ಇಲ್ಲಿಂದ ಹೊರ ಹಾಕುವ ನೀರನ್ನು ೪ ಮೀ. ಎತ್ತರದ ಆಣೆಕಟ್ಟಿಂದ ಅಡ್ಡಗಟ್ಟಿ ೨.೬ ಎತ್ತರದ ಸುರಂಗ ಮಾರ್ಗದ ಮೂಲಕ ಹರಸಿ ಉತ್ಪಾದನೆಯನ್ನು ಖಾಸಗಿ ಕಂಪನಿಯಾದ 'ಸಂಡೂರ್ ಪವರ್ ಕಂಪನಿಯು ನಿರ್ವಹಿಸು ತಿದ್ದೂ, ೩೦ ವರ್ಷಗಳ ಕಾಲಾವಧಿಯ ನಂತರ ಸರ್ಕಾರಕ್ಕೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ. ಅಲ್ಲಿಂದ ಹೊರ ಬಿಡುವ ನೀರನ್ನು ತದನಂತರ ಸಿದ್ದಾಪುರದ ಬಳಿ ಇರುವ ಜಲಾಶಯದಲ್ಲಿ ಶೇಖರಿಸಿ ನೀರಾವರಿಗೆ ಉಪಯೋಗಿಸಲಾಗುತಿದೆ.
ರಾಜ್ಯದಲ್ಲಿ ಹಲವಾರು ಶಾಕೋತ್ಪನ್ನ ಜಲ ವಿದ್ಯುತ್ ಆಗರಗಳಿದ್ದೂ, ಸತತ ಸರದಿ ಪ್ರಕಾರ ಮೂರು ಜಲ ವಿದ್ಯುತ್ ಆಗರ ಅದರಲ್ಲೂ ಭೂ-ಗರ್ಭ ಜಲವಿದ್ಯುತ್ ಆಗರ ಇದು ರಾಜ್ಯದಲ್ಲಿಯೇ ಪ್ರ-ಪ್ರಥಮವಾಗಿದೆ. ದಿನ-ನಿತ್ಯ ಹಲವಾರು ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಈ ಪ್ರದೇಶವನ್ನು ಎಲ್ಲರೂ ನೋಡಬೇಕಾದುದ್ದೆ. ಇದರ ಅಂದವನ್ನು ನೋಡಲು ಬಹು ಚೆಂದ. ಪ್ರವಾಸಿಗರು ಕೇವಲ ಕಣ್ಣಿನಲ್ಲಿಯೇ ನೋಡಿಯೆ ಆನಂದವನ್ನು ಪಡೆಯಬೇಕೆ ವಿನಹ ಛಾಯಾಚಿತ್ರಕ್ಕೆ ಅವಕಾಶ ಇರುವುದಿಲ್ಲ.
ಆನೆಗುಡ್ಡೆ (ಕುಂಭಾಶಿ)ಯು ಉಡುಪಿಯಿಂದ ೩೨ ಕಿ.ಮೀ. ಹಾಗೂ ಕುಂದಾಪುರದಿಂದ ೫ ಕಿ.ಮೀ. ದೂರದಲ್ಲಿದೆ. ಈ ಕ್ಷೇತ್ರದ ವಿನಾಯಕ ದೇವಸ್ಠಾನವು ಬಹು ಪ್ರಸಿದ್ದ. ಪ್ರತಿದಿನ ಸಾವಿರಾರು ಭಕ್ತಾದಿಗಳು ವಿನಾಯಕನ ದರ್ಶನವನ್ನು ಪಡೆಯುತ್ತಾರೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ದವಾದ ದೇವಸ್ಥಾನಗಳಲ್ಲಿ ಇದೂ ಒಂದು. ಈ ಕ್ಷೇತ್ರವು ಪರಶುರಾಮ ಮಹರ್ಷಿಯ ಸೃಷ್ಟಿಯೆಂದು ವಾಡಿಕೆ. ಕಾಲಕ್ರಮೇಣ, ಈ ದೇವಸ್ಥಾನವಿರುವ ಸ್ಥಳವು ಬೇರೆ ಬೇರೆ ಹೆಸರುಗಳನ್ನು ಪಡೆದುಕೊಂಡಿತು.
ಪುರಾಣಗಳ ಪ್ರಕಾರ ಈ ಕ್ಷೇತ್ರದಲ್ಲಿ ಬರಗಾಲವು ಬಂದಾಗ ಅಗಸ್ತ್ಯಮುನಿಗಳು ವರುಣನ ಮನವೊಲಿಸಲು ಯಜ್ಞವೊಂದನ್ನು ಇಲ್ಲಿ ನೆರವೇರಿಸಿದರು. ಈ ಯಜ್ಞವನ್ನು ಭಂಗಗೊಳಿಸಲು ಕುಂಭಾಸುರನೆಂಬ ರಾಕ್ಷಸನು ಋಷಿ ಮುನಿಗಳಿಗೆ ಉಪಟಳ ನೀಡಲಾರಂಭಿಸಿದನು. ಋಷಿಗಳನ್ನು ಕಾಪಾಡಲು ಭೀಮನುಗಣೇಶನಿಂದ ವರವಾಗಿ ಪಡೆದ ಗದೆಯಿಂದ ಕುಂಭಾಸುರನನ್ನು ಕೊಂದನು.[೯]
ಕುಂದಾಪುರದಿಂದ ಸುಮಾರು ೪೦ ಕಿ.ಮೀ. ದೂರದಲ್ಲಿ ಪಶ್ಚಿಮ ಘಟ್ಟಗಳಲ್ಲಿರುವ ಕೊಡಚಾದ್ರಿ ಬೆಟ್ಟದ ಕಣಿವೆಯಲ್ಲಿ ಈ ಊರು ಇದೆ. ಸೌಪರ್ಣಿಕಾ ನದಿಯ ತೀರದಲ್ಲಿ ಜಗತ ಪ್ರಸಿದ್ಧವಾದ 'ಮೂಕಾಂಬಿಕಾ ದೇವಾಲಯ'ವಿದೆ. ಇಲ್ಲಿ ಮೂಕಾಂಬಿಕೆಯು ಶಿವ ಹಾಗೂ ಶಕ್ತಿಯ ಮಿಲನವಾಗಿ ಜ್ಯೋರ್ತಿಲಿಂಗ ಸ್ವರೂಪಿಯಾಗಿ ನೆಲೆಸಿದ್ದಾಳೆ. ಇಲ್ಲಿಯ ಶ್ರೀ ಚಕ್ರದಲ್ಲಿ ಇರುವ ಪಂಚಲೋಹದ ಚಿತ್ರವು ಇಲ್ಲಿಗೆ ಭೇಟಿ ನೀಡಿದ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿತೆಂದು ಹೇಳುತ್ತಾರೆ. ಪಂಚಮುಖ ಗಣೇಶನ ವಿಗ್ರಹವು ಇಲ್ಲಿ ಕಾಣಸಿಗುತ್ತದೆ.
ಕರ್ನಾಟಕದ ೭ ಪವಿತ್ರ ಸ್ಥಳಗಳಾದ ಕೊಲ್ಲೂರು, ಉಡುಪಿ, ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣಗಳಲ್ಲಿ ಇದೂ ಒಂದು. ಇಲ್ಲೆನೆ ಒಂದು ಕೋಣೆಯಲ್ಲಿ ಆದಿ ಶಂಕರಾಚಾರ್ಯರು ಧ್ಯಾನದಲ್ಲಿದ್ದಾಗ ಅವರ ಮುಂದೆ ಮೂಕಾಂಬಿಕೆ ಯು ಪ್ರತ್ಯಕ್ಷವಾದ ಕಾರಣ ಅವರು ಮೂಕಾಂಬಿಕೆಯ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದರು ಎಂದು ಇತಿಹಾಸವಿದೆ. ದೇವಿಯ ಮೇಲಿರುವ ಆಭರಣಗಳನ್ನು ಇಲ್ಲಿಯ 'ನಗರ' ರಾಜರು ಹಾಗೂ 'ವಿಜಯನಗರ'ದ ರಾಜರುಗಳು ಅರ್ಪಿಸಿದ್ದರು.
೧೮ನೇ ಶತಮಾನದಲ್ಲಿ ಮರಾಠರು ದಂಡಯಾತ್ರೆಗೆ ಇಲ್ಲಿ ಬಂದಾಗ ದೇವಿಯ ಆಭರಣಗಳನ್ನು ಕೊಳ್ಳೆ ಹೊಡೆದರು. ಮೂಕಾಂಬಿಕೆಯ ವಿಗ್ರಹಕ್ಕೆ ಸುಮಾರು ೧೨೦೦ ವರ್ಷಗಳ ಇತಿಹಾಸವಿದೆ. ರಾಣಿ ಚೆನ್ನಮ್ಮಾಜಿಯ ಆಜ್ಞೆಯ ಮೇರೆಗೆ ಇಲ್ಲಿಯ ತುಂಡರಸನಾದ ಹನಗಲ್ಲು ವೀರ ಸಂಗಯ್ಯ ಎಂಬಾತನು ಈ ದೇವಾಲಯದಲ್ಲಿರುವ ಕಲ್ಲಿನ ವಿಗ್ರಹವನ್ನು ಕಂಡುಹುಡುಕಿದನು. ಕೊಲ್ಲೂರಿನ ಸಮೀಪದಲ್ಲೇ ಅರಸಿನ ಮಕ್ಕಿ ಹಾಗೂ ಗೋವಿಂದ ತೀರ್ಥ ಜಲಪಾತಗಳಿವೆ. ಕೊಡಚಾದ್ರಿ ಬೆಟ್ಟವು ಪರ್ವತಾರೋಹಿಗಳನ್ನು ಆಕರ್ಷಿಸುತ್ತದೆ.
ಕುಂದಾಪುರದಿಂದ ೩೨ ಕಿ.ಮೀ. ದೂರದಲ್ಲಿರುವ ಈ ಸ್ಥಳವು ಹಿಂದೆ 'ಕ್ರೋಢ ಕ್ಷೇತ್ರ'ವೆಂದು ಹೆಸರಾಗಿತ್ತು. ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿರುವ ೭ ಪುಣ್ಯ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ .ಕರ್ನಾಟಕದ ೭ ಪವಿತ್ರ ಸ್ಥಳಗಳಾದ ಉಡುಪಿ, ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣ, ಕೊಲ್ಲೂರುಗಳಲ್ಲಿ ಇದೂ ಒಂದು. (ರಜತಪೀಠ, ಕುಮಾರಾದ್ರಿ, ಕುಂಭಕಾಶಿ, ಧ್ವಜೇಶ್ವರ, ಕ್ರೋಢ, ಗೋಕರ್ಣ, ಮೂಕಾಂಬಿಕಾ). ಶಂಕರ ಮತ್ತು ನಾರಾಯಣ ದೇವತೆಗಳ ಪೂಜೆಯು ಒಂದೇ ಗರ್ಭಗುಡಿಯಲ್ಲಿ ನಡೆಯುವುದರಿಂದ, ಈ ಊರಿಗೆ ಶಂಕರನಾರಾಯಣ ಎಂಬ ಹೆಸರು ಬಳಕೆಗೆ ಬಂತು.
ವಾರಾಹಿ ನದಿಯ ದಕ್ಷಿಣ ದಡದಲ್ಲಿರುವ ಈ ಊರು ಅನೇಕ ದೇವಾಲಯಗಳ ಬೀಡಾಗಿದೆ. ಮಧ್ವಾಚಾರ್ಯರ ನಂತರ ದ್ವೈತ ಸಿಧ್ಧಾಂತವನ್ನು ಭೋದಿಸಿದ ವಾದಿರಾಜರು ಜನಿಸಿದ್ದು ಇಲ್ಲೆ ಸಮೀಪದಲ್ಲಿರುವ ಹೂವಿನಕೆರೆ ಎಂಬಲ್ಲಿ. ಒಂದು ಕಾಲದಲ್ಲಿ ಬಹು ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಇಂದಿಗೆ ವಾಣಿಜ್ಯ ಕೇಂದ್ರವಾಗಿ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆಯಾದರೂ, ವಾಣಿಜ್ಯ ಚಟುವಟಿಕೆಗಳನ್ನು ನೆನಪಿಸುವ ವಿವಿಧ ಹೆಸರಿನ ಬೀದಿಗಳು ಮತ್ತು ಕೇರಿಗಳು ಈ ಹಳ್ಳಿಯ ತುಂಬಾ ಹರಡಿವೆ.
ಅಲ್ಲದೆ, ವಿವಿಧ ಧರ್ಮಗಳ ೪೦ ಸ್ಥಳಗಳು ಇಲ್ಲಿವೆ. ಗೌಡ ಸಾರಸ್ವತ ಬ್ರಾಹ್ಮಣರ ಧಾರ್ಮಿಕ ಕೇಂದ್ರ ಇದು. ಈ ಸಮುದಾಯದ ಜನರ ಭಕ್ತಿ ಪಾತ್ರವಾದ 'ಮಹಾಲಸಾ ನಾರಾಯಣಿ ದೇವಾಲಯ'ವು ಇಲ್ಲಿದೆ. ಇತಿಹಾಸದ ಪ್ರಕಾರ ಈ ದೇವಾಲಯವು ಮೂಲಸ್ಥಾನವಾದ ಗೋವಾದ 'ಮಾರ್ದೋಲಿ'ಯಲ್ಲಿರುವ ಶ್ರೀ ಮಹಾಲಸಾ ದೇವಸ್ಥಾನದಿಂದ ಸ್ಪೂರ್ತಿಯನ್ನು ಪಡೆದಿದೆ.
ಸುಮಾರು ೧೬ನೆಯ ಶತಮಾನದಲ್ಲಿ, ಗೋವಾದಲ್ಲಿ ವಿಪ್ಲವಕಾರೀ ಘಟನೆಗಳು ಆದಾಗ, ಕೊಂಕಣಿ ಮಾತನಾಡುವ ಜನರು ದೋಣಿಯ ಮೂಲಕ ಬಸ್ರೂರಿಗೆ ಮೊದಲ ಬಾರಿ ಬಂದರು ಎಂಬ ನಂಬಿಕೆ ಇದೆ. ಶಾರದಾ ಕಾಲೇಜು ಇಲ್ಲಿನ ಪ್ರಮುಖ ವಿದ್ಯಾಕೇಂದ್ರವಾಗಿದೆ.
ಈ ಶಿಕ್ಷಣ ಸಂಸ್ಥೆಯು ಕಲಾ ಮತ್ತು ವಾಣಿಜ್ಯ ವಿಭಾಗವನ್ನು ಹೊಂದಿದೆ. ಈ ಕಾಲೇಜು ಸುಸಜ್ಜಿತವಾದ ಗ್ರಂಥಾಲಯ ಮತ್ತು ವಿಶಾಲವಾದ ಕ್ರೀಡಾಂಗಣವನ್ನು ಹೊಂದಿದೆ. ಈ ಕಾಲೇಜು ಇಲ್ಲಿನ ಸುತ್ತಮುತ್ತಲ ಅನೇಕ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ವಿದ್ಯಾದಾನ ಮಾಡುತ್ತಿದೆ.
ಈ ಊರಿನಲ್ಲಿ ಸುಪ್ರಸಿದ್ದವಾದ ಕೋಟಿಲಿಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಬಹು ದೊಡ್ಡ ಇತಿಹಾಸವಿದೆ. ಪುರಾಣಗಳ ಪ್ರಕಾರ ಇಲ್ಲಿ ಬ್ರಹ್ಮನು ಆದಿಶಕ್ತಿಯ ಬಗ್ಗೆ ಇಲ್ಲಿ ತಪಸ್ಸನ್ನು ಮಾಡಿದಾಗ ಮೊದಲನೆಯದಾಗಿ ಲಿಂಗಾಕೃತಿಯ ಒಂದು ಪ್ರಖರವಾದ ಜ್ಯೋತಿಯು ಕಾಣಿಸಿತು. ನಂತರ ಈ ಜ್ಯೋತಿಯು ಒಂದು ಕೋಟಿ ಲಿಂಗಗಳಾಗಿ ಮಾರ್ಪಟ್ಟಿತು. ಈ ಲಿಂಗಗಳಿಂದ ಗಂಗಾಜಲ ಹಾಗೂ ಅಮೃತವು ಬ್ರಹ್ಮಾ ನದಿಗೆ ಹರಿದು ಹೋಯಿತು. ಆದರೆ ಪ್ರಳಯದ ಸಂದರ್ಭದಲ್ಲಿ ಈ ದೇವಾಲಯವು ನಾಶವಾಯಿತು.
ನಂತರ ಈ ದೇವಾಲಯದ ಪುನರ್ ನಿರ್ಮಾಣವಾಯಿತು. ಕೋಟಿ ಲಿಂಗಗಳ ಕುರಿತು ಮತ್ತೊಂದು ಕತೆಯಿದೆ. ಬಿಜ್ಜಳನ ಕಲ್ಯಾಣದಲ್ಲಿ ಕ್ರಾಂತಿಯಾದಾಗ, ಲಿಂಗಧಾರಣೆ ಮಾಡಿದ ಹಲವಾರು ಜಾತಿಗಳ ಜನರು ಅಲ್ಲಿನ ದಬ್ಬಾಳಿಕೆ ತಾಳಲಾರದೆ, ಕರಾವಳಿಯ ಕಡೆಗೆ ಬಂದರು. ಬಸವಣ್ಣನ ಆಶಯದಂತೆ ಧರಿಸಿದ ಲಿಂಗಗಳೇ ಅವರಿಗೆ ಮುಳುವಾಗುವ ಪರಿಸ್ಥಿತಿ ಉಂಟಾಗಿದ್ದರಿಂದ, ಲಿಂಗಗಳನ್ನೆಲ್ಲಾ ಕೋಟೇಶ್ವರದ ಕೆರೆಗೆ ಹಾಕಿ, ತಾವೆಲ್ಲ ಅನಾಮಿಕರಾದರು. ಕೋಟಿಲಿಂಗೇಶ್ವರ ಎಂಬ ಹೆಸರಿಗೂ ಇದರಿಂದ ಬೆಲೆ ಬಂತು.
ಈ ದೇವಾಲಯವು ಪೂರ್ವ ದಿಕ್ಕಿಗೆ ಮುಖ ಮಾಡಿದೆ ಹಾಗೂ ಹಲವಾರು ಶಿಲ್ಪಾ ಕೃತಿಗಳ ಬೀಡಾಗಿದೆ. ಕೋಟಿ ಲಿಂಗಗಳು ದೇವಲಯದ ಒಳಗಿರುವ ಸುಂದರವಾದ ಬಾವಿಯಲ್ಲಿ ಹಾಗೂ ಪೀಠದಲ್ಲಿ ಇವೆ. ಆರು ಚಕ್ರವಿರುವ ಈ ದೇವಸ್ಥಾನದ ರಥ ಇಡೀ ಜಿಲ್ಲೆಯಲ್ಲೇ ದೊಡ್ದದು. "ಕೊಡಿಹಬ್ಬ"ಕ್ಕೆ ಈ ದೇವಸ್ಥಾನ ಬಹಳ ಪ್ರಸಿದ್ಧ. ಕೊಡಿ ಹಬ್ಬವು ಸಾಮಾನ್ಯವಾಗಿ ನವಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಬರುತ್ತದೆ.
ಕುಂದಾಪುರದಿಂದ ಸುಮಾರು ೨೦ ಕಿ.ಮೀ. ಗಳಷ್ಟು ದೂರದಲ್ಲಿರುವ ಕಮಲಶಿಲೆಯಲ್ಲಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಈ ದೇವಳವು ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರ. ಇಲ್ಲಿ ದುರ್ಗೆ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು ಮಹಾಲಕ್ಷ್ಮೀ, ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ. ದೇವಳದ ಸುತ್ತಲೂ ಹೊರಪೌಳಿಯಲ್ಲಿ ಈಶ್ವರ, ಗಣಪತಿ, ಸುಬ್ರಹ್ಮಣ್ಯ, ಹೊಸಮ್ಮ, ಕ್ಷೇತ್ರಪಾಲ, ರಕ್ತೇಶ್ವರಿ, ಹುಲಿದೇವಿ ಮುಂತಾದ ಪರಿವಾರ ದೇವರುಗಳು ನೆಲೆಸಿದ್ದಾರೆ.
ದೇವಳದ ಪಕ್ಕದಲ್ಲಿಯೇ ರುದ್ರರಮಣೀಯವಾಗಿ ಕುಬ್ಜಾ ನದಿ ಹರಿಯುತ್ತಿದ್ದು ಸಂಪ್ರದಾಯದಂತೆ ಪ್ರತೀ ವರ್ಷವೂ ದೇವಿಯ ವಿಗ್ರಹ ನದಿಯಿಂದ ತೊಯ್ಯಲ್ಪಡುತ್ತದೆ. ದೇವಳದ ವಾಯುವ್ಯ ದಿಕ್ಕಿಗೆ ಎತ್ತರದ ಸ್ಥಳದಲ್ಲಿ ಸುಪಾರ್ಶ್ವ ಗುಹೆಯಿದೆ. ಇದು ನಾಗತೀರ್ಥದ ಮೂಲಸ್ಥಳವಾಗಿದೆ. ಗುಹೆಯಲ್ಲಿ ಕಾಳಿ, ಲಕ್ಷ್ಮೀ ಹಾಗೂ ಸರಸ್ವತಿಯ ಸಾನ್ನಿಧ್ಯವಿದೆ. ಗುಹೆಯ ಹೊರಗಡೆ ಹುಲಿಚಾವಡಿ ಎಂಬ ಸ್ಥಳವಿದೆ.
ದೇವಿ ವ್ಯಾಘ್ರವಾಹಿನಿಯಾಗಿದ್ದು ಸಂಪ್ರದಾಯದ ಕಟ್ಟುಪಾಡುಗಳು ಮೀರಿ ಹೋದಲ್ಲಿ ಹುಲಿ ಬಂದು ಎಚ್ಚರಿಸುವ ಪರಿಪಾಠ ಇಂದಿಗೂ ಜಾರಿಯಲ್ಲಿದೆ. ವಾರ್ಷಿಕ ರಥೋತ್ಸವ ಸಂದರ್ಭಗಳಲ್ಲಿ ಹುಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸಿ ಘರ್ಜಿಸುವುದರ ಮೂಲಕ ರಥೋತ್ಸವಕ್ಕೆ ಕರೆ ನೀಡುವ ಪರಿಪಾಠ ಇಂದಿಗೂ ಜೀವಂತವಾಗಿದೆ. ದೇವಳದಲ್ಲಿ ಪ್ರತೀ ಏಕಾದಶಿಯಂದು ದೇವಿಗೆ ಮೃತ್ತಿಕಾಷ್ಠಿ ಬಂಧವು ಜರುಗುತ್ತದೆ. ಇದಕ್ಕೆ ಬೇಕಾಗುವ ಮೃತ್ತಿಕೆ ಎದುರಿರುವ ಗುಡ್ಡದಿಂದ ತಂದು ಶಾಸ್ತ್ರೋಕ್ತವಾಗಿ ಹದ ಮಾಡಿ ಅಷ್ಟಬಂಧ ಮಾಡುತ್ತಾರೆ.
ವಿಶೇಷವೆಂದರೆ ಅಷ್ಟಬಂಧವಾದ ಬಳಿಕ ಮೃತ್ತಿಕೆ ಎಷ್ಟು ನೀರು ಸುರಿದರೂ ಕರಗುವುದಿಲ್ಲ. ವಿಸರ್ಜಿಸಿದ ಮೃತ್ತಿಕೆಯನ್ನು ಭಕ್ತಾದಿಗಳು ಮೂಲ ಪ್ರಸಾದ ರೂಪದಲ್ಲಿ ಕೊಂಡೊಯ್ಯುತ್ತಾರೆ. ನವರಾತ್ರಿಯ ಸಂದರ್ಭ ಚಂಡಿಕಾ ಹವನ, ರಥೋತ್ಸವ, ಕುಂಕುಮಾರ್ಚನೆ, ಬೆಳ್ಳಿ ರಥ ಸೇವೆ, ಹಾಲಿನ ಪೂಜೆ ಮುಂತಾದ ಸೇವೆಗಳು ನಡೆಯುತ್ತವೆ.
ಕೊಲ್ಲೂರು ಹತ್ತಿರದ ಮಾರಣಕಟ್ಟೆಯು ಒಂದು ಹೆಸರಾಂತ ದೈವಸ್ಥಾನ. ಆದಿ ಶಂಕರಾಚಾರ್ಯರು ಇಲ್ಲಿಗೆ ಬಂದು, ಶ್ರೀ ಚಕ್ರವನ್ನು ಸ್ಥಾಪಿಸಿದ್ದರೂ, ಇತರ ದೈವಗಳೇ ಇಂದಿಗೂ ಇಲ್ಲಿ ಪ್ರಧಾನ ಪೂಜೆಯನ್ನು ಪಡೆಯುವ ಸಂಪ್ರದಾಯವಿದೆ. ಮಾರಣಕಟ್ಟೆ ಹಬ್ಬದ ಸಮಯದಲ್ಲಿ ಘಟ್ಟದ ಮೇಲಿನಿಂದ ಮತ್ತು ಸುತ್ತ ಮುತ್ತಲ ಊರುಗಳಿಂದ ಸಾವಿರಾರು ಜನ ಸೇರುತ್ತಾರೆ. ಮಾರಣಕಟ್ಟೆ ದೇವಾಲಯದ ಆಶ್ರಯದಲ್ಲಿ ಎರಡು ಯಕ್ಷಗಾನ ಮೇಳಗಳು ಉಂಟು. ಕಾಡಿನ ನಡುವೆ ಇರುವ ಮಾರಣಕಟ್ಟೆಯು ಒಂದು ಸುಂದರ ಸ್ಥಳ.ಇಲ್ಲಿನ ಈಗಿನ ಧರ್ಮದರ್ಶಿಗಳು ಶ್ರೀಯುತ ಮಂಜಯ್ಯ ಶೆಟ್ಟರು.
ಹೆಸರೇ ಸೂಚಿಸುವಂತೆ ಈ ದ್ವೀಪವು ಕುಂದಾಪುರದಿಂದ ೬ ಕಿ.ಮೀ. ಉತ್ತರಕ್ಕೆ ಇದೆ.
ಇಲ್ಲಿ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು(SALT) ತಯಾರಿಸಲಾಗುತ್ತಿತ್ತು ಹಾಗಾಗಿ ಇದಕ್ಕೆ ಲವಣಪುರ ಎನ್ನುವ ಹೆಸರು ಬಂದು ಕ್ರಮೇಣ ಅದು ಉಪ್ಪಿನಕುದ್ರು ಎಂದಾಗಿದೆ
ಸಿದ್ದಾಪುರವು ಕುಂದಾಪುರದಿಂದ ೨೫ಕಿಮೀ ದೂರದಲ್ಲಿದೆ, ಮತ್ತು ಇದು ಕುಂದಾಪುರ ಹಾಗು ಶಿವಮೊಗ್ಗ ಜಿಲ್ಲೆಯನ್ನು ಗಡಿಯಾಗಿ ಹೊಂದಿದೆ. ಹಿಂದಿನ ಕಾಲಗಳಲ್ಲಿ ಇಲ್ಲಿ ಜೈನರು ಬಹುಸಂಖ್ಯೆಯಲ್ಲಿ ವಾಸವಾಗಿದ್ದರೆಂದು ಕಂಡುಬಂದಿದೆ.
ಕುಂದಾಪುರದಿಂದ ೧೦ ಕಿ.ಮೀ. ದೂರದಲ್ಲಿರುವ ಕೋಟದಲ್ಲಿ ಅಮೃತೇಶ್ವರಿ ದೇವಾಲಯ ಹಾಗೂ ಹೀರೇ ಮಹಾಲಿಂಗೇಶ್ವರ ದೇವಾಲಯಗಳಿವೆ. ಕೋಟದಿಂದ ಸಮುದ್ರ ಕಿನಾರೆಗೆ ಕೇವಲ ೨ ಕೀ ಮಿ ದಾರಿ. ಅಮೃತೇಶ್ವರಿ ದೇವಿಯ ಮಹಿಮೆ ಅಪಾರ. ಅಲ್ಲಿ ಉದ್ಬವಿಸುವ ಲಿಂಗ ಮತ್ತು ಸಂತಾನದ ಭಾಗ್ಯ ಕರುಣೆಸುವ ಹಲವು ಮಕ್ಕಳ ತಾಯಿ ದೇಗುಲಗಳಿವೆ.
ಜನವರಿ ಒಂಬತ್ತು ಮತ್ತು ಹತ್ತನೇ ತಾರೀಖಿನಂದು ಈ ಮಹಾತಾಯಿ ಸನ್ನಿಧಿಯಲ್ಲಿ ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಆಗಮಿಸುತ್ತಾರೆ ಮತ್ತು ಈ ಸನ್ನಿಧಿಯ ಹೆಸರಲ್ಲಿ ಯಕ್ಪಗಾನ ಕೂಡ ನಡೆಯುತ್ತದೆ. ಇಲ್ಲಿ ಕೋಟ ವಿವೇಕ ಪ್ರೌಡಶಾಲೆ ಇದೆ ಮತ್ತು ಗಿಳಿಯಾರು ಶಾಂಭವೀ ಶಾಲೆ ಮತ್ತು ಮಣೂರಿನಲ್ಲಿ ಆರ್.ಪಿ ಮಣೂರು ಎಂಬ ಶಾಲೆಗಳಿವೆ ಇಲ್ಲಿನ ಪ್ರಸಿದ್ದ ವ್ಯಕ್ತಿ ಶಿವರಾಮ ಕಾರಂತ.
ಕುಂದಾಪುರದಿಂದ ೧೫ ಕಿ.ಮೀ. ದೂರದಲ್ಲಿರುವ ಸಾಲಿಗ್ರಾಮದಲ್ಲಿ ಗುರುನರಸಿಂಹ ಹಾಗೂ ಆಂಜನೇಯ ದೇವಾಲಯಗಳಿವೆ. ಆಂಜನೇಯ ದೇವಲಯವು ಗುರುನರಸಿಂಹ ದೇವಾಲಯಕ್ಕೆ ಮುಖ ಮಾಡಿ ನಿಂತಿದೆ. ಬಹಳ ಉಗ್ರನಾದ ನರಸಿಂಹನನ್ನು ಆಂಜನೇಯನು ಸಂತೈಸುತ್ತಾನೆ ಎಂದು ಪ್ರತೀತಿ. ಹಿಂದೆ ನರಸಿಂಹನ ಉಗ್ರ ಪ್ರತಾಪದಿಂದ ಆತನ ಎದುರಿನ ಪಾರಂಪಳ್ಳಿಯ ಹೊಲಗಳಲ್ಲಿ ಪೈರು ಸುಟ್ಟುಹೊಗುತ್ತಿತ್ತು.
ಆಂಜನೇಯನ ಸ್ಥಾಪನೆಯ ನಂತರ ಅವನೇ ಆ ಉಗ್ರತೆಯನ್ನು ತೆಗೆದುಕೊಂಡು ಪೈರನ್ನು ಕಾಪಾಡುತ್ತಾನೆ. ಇದರಿಂದಾಗಿ ಆತನ ಮೈಮೇಲೆ ಬೊಬ್ಬೆಗಳಾಯಿತು. ಅದಕ್ಕಾಗಿ ಇಂದಿಗೂ ಆತನ ಮೈಮೇಲೆ ಚಂದನವನ್ನು ಹಚ್ಚುತ್ತಾರೆ ಎಂಬ ದಂತಕತೆ ಇದೆ. ಇಲ್ಲಿನ ಗುರುನರಸಿಂಹ ದೇವರುಕೂಟ ಬ್ರಾಹ್ಮಣರ ಕುಲದೇವರು ಆಗಿರುತ್ತಾರೆ.
೮ನೇ ಶತಮಾನದಲ್ಲಿ ಸ್ಥಾಪಿತವಾದ ಗಣಪತಿಯ ದೇವಸ್ಥಾನವು ಇಲ್ಲಿದೆ. ಈ ದೇವಾಲಯದ ಸುತ್ತಲೂ ಹಲವಾರು ಪ್ರಾಚೀನ ದೇವಾಲಯಗಳು ಹಾಗೂ ಜೈನ ಬಸದಿಗಳಿವೆ. ೭ನೇ ಹಾಗೂ ೮ನೇ ಶತಮಾನದಲ್ಲಿ ಗೋಷ್ಠಿಪುರವೆಂದು (ಅನೇಕ ವಿಚಾರ ಗೋಷ್ಠಿಗಳು ಇಲ್ಲಿ ನಡೆದುದರಿಂದ) ಹೆಸರಾಗಿದ್ದ ಈ ಊರು, ತುಳುನಾಡನ್ನು ಆಳಿದ ಅಳುಪ ರಾಜರ ರಾಜಧಾನಿಯಾಗಿತ್ತು.[೧೦]
ಕುಂದಾಪುರದಿಂದ ೨೨ ಕಿ. ಮೀ. ದೂರದಲ್ಲಿರುವ ಈ ಊರಿನಲ್ಲಿ, ಬಹಳ ಸುಂದರ ಪರಿಸರದ ನಡುವೆ ಕಿರಿಮಂಜೇಶ್ವರ ದೇವಾಲಯವಿದೆ. ಅಗಸ್ತ್ಯ ಮುನಿಗಳ ಹೆಸರಿನ, ಪುರಾತನ ಅಗಸ್ತ್ಯೇಶ್ವರ ದೇವಸ್ಥಾನವೂ ಇಲ್ಲಿದೆ.
ತಲ್ಲೂರು ಇದು ಕುಂದಾಪುರಕ್ಕೆ ಉತ್ತರ ದಿಕ್ಕಿನಲ್ಲಿ ಸಮೀಪವಿರುವ ಗ್ರಾಮ. ಇಲ್ಲಿ ಮಹಾಲಿಂಗೇಶ್ವರ ದೇವಸ್ಥಾನ,ಕುಂತಿಯಮ್ಮನ ದೇವಸ್ಥಾನವಿದೆ.ಇವು ಇತಿಹಾಸ ಪ್ರಸಿದ್ದವಾದ ದೇವಾಲಯಗಳಾಗಿವೆ.ತಲ್ಲೂರು ಕಂಬಳ ಇದೊಂದು ಪ್ರಮುಖ ಆಕರ್ಷಣೀಯ ಕೋಣಗಳ ಕ್ರೀಡಾಕೂಟವಾಗಿದೆ. ಈ ಗ್ರಾಮವು ಟೆಬಾಗಿಲು, ಸಬ್ಲಾಡಿ, ಸುಪ್ರೀಮ್,ಕಡಮಾರು ಬೆಟ್, ಹೇರಿಕುದ್ರು, ಪಿಂಗಾಣಿ ಗುಡ್ಡೆ, ಪಾರ್ತಿಕಟ್ಟೆ, ಗರಡಿ, ರಾಜಾಡಿ, ಚಿತ್ತೇರಿಮಕ್ಕಿ ಮುಂತಾದ ಸ್ಥಳಗಳನ್ನು ಒಳಗೊಂಡಿದೆ.
ಇಲ್ಲಿನ ಜನರು ಪ್ರಮುಖವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಇಲ್ಲಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದ್ದು, ಇದು ಇಲ್ಲಿನ ಬಡಮಕ್ಕಳ ಶಿಕ್ಷಣಕ್ಕೆ ದಾರಿದೀಪವಾಗಿದೆ.ಇಲ್ಲಿ ಹಂಚು ಮತ್ತು ಸುಣ್ಣದ ಕಾರ್ಖಾನೆ ಇದ್ದು,ಇದು ಇಲ್ಲಿನ ಸಾಮಾನ್ಯ ಜನರಿಗೆ ಉದ್ಯೋಗ ಸೃಷ್ಠಿ ಮಾಡಿ ಕೊಟ್ಟಿದೆ, ಮರಳು ಮತ್ತು ಸುಣ್ಣದ ಚಿಪ್ಪು ತೆಗೆಯುವದು ಇಲ್ಲಿನ ಜನರ ಸಾಮಾನ್ಯ ಕೆಲಸವಾಗಿದೆ.
ಇಲ್ಲಿನ ಕೃಷಿಕರು ಭತ್ತವನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಅಡಿಕೆ, ತೆಂಗು,ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಬಾಂಧವರು ಹೆಚ್ಚಾಗಿ ನೆಲೆಸಿರುತ್ತಾರೆ.ಹಿಂಧೂ ಧರ್ಮದಲ್ಲಿ ಪೂಜಾರಿ, ಮೋಗವೀರ, ಶೆಟ್ಟಿ , ದೇವಾಡಿಗ, ಆಚಾರಿ, ಕೊಠಾರಿ,ಗಾಣಿಗ ಹೀಗೆ ಅನೇಕ ಪಂಗಡಗಳಾಗಿ ವಿಭಜನೆಗೊಂಡಿದೆ. ತಾಲ್ಲೂಕಿನಲ್ಲಿ ಕಂಡುಬರುವ 'ದೇವಾಲಯಗಳು'
ಕುಂದಾಪುರದಿಂದ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಇತ್ತ ಮಂಗಳೂರು ಮತ್ತು ಉಡುಪಿಗಳಿಗೆ ಸಂಪರ್ಕ ನೀಡಿದರೆ, ಅತ್ತ ಕಾರವಾರ ಹುಬ್ಬಳ್ಳಿಗೂ ಸಂಪರ್ಕ ನೀಡುವ ರಸ್ತೆ ಇದಾಗಿದ್ದು, ಪ್ರತಿದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಿವಮೊಗ್ಗಕ್ಕೆ ಸಾಗುವ ರಾಜ್ಯ ಹೆದ್ದಾರಿಯೂ ಸಹ ಈ ಊರಿಗೆ ಪ್ರಮುಖ ಸಂಪರ್ಕವನ್ನು ನೀಡಿದೆ. ಕುಂದಾಪುರದಿಂದ ೪ ಕಿ.ಮೀ.ದೂರದಲ್ಲಿರುವ ರೈಲ್ವೇ ನಿಲ್ದಾಣವೂ ಈ ಪಟ್ಟಣವನ್ನು ಮುಂಬಯಿ, ಮಂಗಳೂರು, ಕೊಚ್ಚಿ ಮೊದಲಾದ ಸ್ಥಳಗಳಿಗೆ ಸಂಪರ್ಕಿಸಿದೆ. ಈ ಊರಿಗೆ ಬರುವ ಹೊಸಬರಿಗೆ ಮತ್ತು ಪ್ರವಾಸಿಗರಿಗೆಂದೇ ತಂಗಲು ಹಲವಾರು ವಸತಿ ಗೃಹಗಳು ಇಲ್ಲಿವೆ.