ಕುಮಟಾ
ಕುಮಟಾ | |
---|---|
ಪಟ್ಟಣಾ | |
Population (2017) | |
• Total | ೧,೪೫,೦೦೦ |
ಕುಮಟಾ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಕರಾವಳಿಯ ಪಟ್ಟಣವಾಗಿದ್ದು ಕಾರವಾರದಿಂದ ೬೦ ಕಿ.ಮಿ ದೂರದಲ್ಲಿ ಅಂಕೋಲಾದಿಂದ ೩೬ಕಿ.ಮೀ ಮತ್ತು ಹೊನ್ನಾವರದಿಂದ ಸುಮಾರು ೨೦ ಕಿ.ಮಿ ದೂರದಲ್ಲಿದೆ. ಪ್ರಕೃತಿ ಸೊಬಗಿಗೆ ಹೆಸರುವಾಸಿಯಾಗಿದ್ದು ವನ್ನಳ್ಳಿ, ಕಾಗಲ ಮತ್ತು ಧಾರೇಶ್ವರ ಬೀಚ್‍ಗಳು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತವೆ. ಶಾಂತೇರಿ ಕಾಮಾಕ್ಷಿ ದೇವಾಲಯ, ಮಹಾಲಸ ದೇವಾಲಯ, ಹೆಗಡೆ, ಬಾಡಾದ ಅಮ್ಮನವರ ದೇವಾಲಯಗಳು ಪ್ರಸಿದ್ದಿ ಪಡೆದಿದೆ. ಧಾರೇಶ್ವರದ ಧಾರಾನಾಥ ದೇವಾಲಯ ಕುಮಟಾದಿಂದ ೮ ಕಿ.ಮೀ ದೂರದಲ್ಲಿದ್ದು ಇಲ್ಲಿ ಶಿವನ ದೇವಾಲಯ ಗೋಕರ್ಣದ ಆತ್ಮಲಿಂಗದ ಒಂದು ಭಾಗ ಎಂದು ಹೇಳಲಾಗುತ್ತದೆ. ಪಾಂಡವರು ಒಂದೇ ರಾತ್ರಿಯಲ್ಲಿ ಕಟ್ಟಿದ ದೇವಾಲಯಗಳಲ್ಲಿ ಇದು ಒಂದು. ಹಾಗೆ ಭೂಮಿ ತಾಯಿ ಎಂದೇ ಪ್ರಸಿದ್ದಿ ಆದ ಶಾಂತಿಕಾಪರಮೇಶ್ವರಿ ತಾಯಿ ಇಲ್ಲಿ ನೆಲೆಸಿದ್ದಾಳೆ.
ಕುಂಭೇಶ್ವರ ದೇವಾಲಯದಿಂದಾಗಿ ಇದನ್ನು ಕುಂಬಟುಂ ಎಂದು ಕರೆಯುತ್ತಿದ್ದುದಾಗಿಯೂ ಅದರಿಂದ ಕುಮಟವೆಂಬ ಹೆಸರು ಬಂತೆಂದೂ ಹೇಳಲಾಗಿದೆ. ೧೯ನೆಯ ಶತಮಾನದಲ್ಲಿ ದಕ್ಷಿಣ ಮಹಾರಾಷ್ಟ್ರ ಮತ್ತು ಬಳ್ಳಾರಿ ಪ್ರದೇಶಗಳಿಂದ ಹತ್ತಿಯನ್ನು ಇಲ್ಲಿಗೆ ತಂದು ಇಲ್ಲಿಂದ ಮುಂಬಯಿಗೆ ಕಳುಹಿಸಲಾಗುತ್ತಿತ್ತು. ಇದು ಹಿಂದೆ ಜೈನ ಕೇಂದ್ರವಾಗಿತ್ತು. ಈಗಲೂ ಇಲ್ಲಿ ಅನೇಕ ಜೈನ ಬಸದಿಗಳಿವೆ. ಪೋರ್ಚುಗೀಸರು ಇಲ್ಲಿಯ ಜನರಿಂದ ತೆರಿಗೆ ವಸೂಲಿ ಮಾಡುತ್ತಿದ್ದರೆಂದು ಹೇಳಲಾಗಿದೆ.ಟಿಪ್ಪು ಈ ಪಟ್ಟಣದ ಮೇಲೆ ಎರಡು ಸಾರಿ ಆಕ್ರಮಣ ನಡೆಸಿದ್ದ. ಕುಮಟ ಒಂದು ವ್ಯಾಪಾರ ಕೇಂದ್ರ. ಅನೇಕ ರಸ್ತೆಗಳ ಸಂಧಿಸ್ಧಳ. ಇಲ್ಲಿಂದ ಕಾರವಾರ, ಭಟ್ಕಳ, ಯಲ್ಲಾಪುರ, ಶಿರಸಿ, ಶಿವಮೊಗ್ಗಗಳಿಗೆ ರಸ್ತೆಗಳಿವೆ. ಗಂಧದ ಕುಸುರಿ ಕೆಲಸಕ್ಕೆ ಈ ಪಟ್ಟಣ ಪ್ರಸಿದ್ಧವಾಗಿದೆ. ಮೀನುಗಾರಿಕೆ ಒಂದು ಕಸಬು. ಇಲ್ಲಿ ತಾಲ್ಲೂಕು ಕಚೇರಿ, ಅಸ್ಪತ್ರೆ ಮತ್ತು ಶಾಲಾಕಾಲೇಜುಗಳಿವೆ.
ಕುಮಟಾದ ಹಳೆಯ ಹೆಸರು ಕುಂಭಾಪುರ.. ಬ್ರಿಟಿಷರ ಕಾಲದಲ್ಲಿ ಕುಮಟಾ ಪಟ್ಟಣವು ಮುಂಬಯಿ ಪ್ರಾಂತ್ಯದ ಅಡಿಯಲ್ಲಿ ಬರುತ್ತಿದ್ದು ಉತ್ತರ ಕನ್ನಡದ ಒಂದು ಭಾಗವಾಗಿತ್ತು. ಇಲ್ಲಿ ವಿಶೇಷವಾಗಿ ಹತ್ತಿ, ಗಂಧದ ಕೆತ್ತನೆ ಕೆಲಸ ಪ್ರಮುಖವಾಗಿದ್ದು ವ್ಯಾಪಾರ ವಹಿವಾಟಿನಲ್ಲೂ ಹೆಸರುವಾಸಿಯಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿ೦ದ ಇಂಗ್ಲೆಂಡಿಗೆ ಸರಬರಾಜಾಗುತ್ತಿದ್ದ ಹತ್ತಿಯು ’ಕುಮಟಾ ಹತ್ತಿ’ಯೆಂದೇ ಪ್ರಸಿದ್ಧವಾಗಿತ್ತು.ಕುಮಟಾ "ತೆಂಗಿನ ಕಾಯಿ "ಯಲ್ಲೂ ಪ್ರಸಿದ್ಧಿ ಪಡೆದಿದೆ.
೨೦೦೧ ರ ಅಂಕಿ ಅಂಶದ ಪ್ರಕಾರ ಕುಮಟಾ ಪಟ್ಟಣದ ಜನಸಂಖ್ಯೆಯು 27598 ಆಗಿರುತ್ತದೆ. ಇದರಲ್ಲಿ ೫೧ಶೇ ಪುರಷರು 49 ಶೇ ಮಹಿಳೆಯರು ಇದ್ದು, ಸಾಕ್ಷರತೆ ಪ್ರಮಾಣ ಶೇ. ೭೭ ರಷ್ಠು ಇದೆ. ಕುಮಟ ತಾಲ್ಲೂಕು ವಿಸ್ತೀರ್ಣ ೨೩೫ ಚ.ಮೈ. ಜನಸಂಖ್ಯೆ 1,45,772 (2001) ತಾಲ್ಲೂಕಿನಲ್ಲಿ ೧೧೨ ಹಳ್ಳಿಗಳಿವೆ. ಕುಮಟ, ಗೋಕರ್ಣ-ಇವು ಪಟ್ಟಣಗಳು.
ಬಂಡೆಕಲ್ಲುಗಳಿಂದ ಕೂಡಿದ ಕೆಲವುಬೆಟ್ಟಗಳೂ ಕೆಲವು ಸಣ್ಣಪುಟ್ಟ ಅಳಿವೆ ಕೋಡಿಗಳೂ ಇರುವ ಈ ತಾಲ್ಲೂಕಿನ ಅಗಲ ಸು. 10-12 ಮೈ. ಗಂಗಾವಳಿ ನದಿಯ ದಕ್ಷಿಣಕ್ಕಿರುವ ಈ ತಾಲ್ಲೂಕಿನ ತೀರಭಾಗ ಮರಳಿನಿಂದ ಕೊಡಿದೆ. ಒಳಭಾಗದಲ್ಲಿ ಗೋಡು ಅಥವಾ ಮರಳು ಗೋಡುಮಣ್ಣು ಸಾಮಾನ್ಯ. ಈ ತಾಲ್ಲೂಕಿನ ವಾರ್ಷಿಕ ಮಳೆ ಸು. 150”. ತಾಲ್ಲೂಕಿಗೆ ಹಿನ್ನೆಲೆಯಂತಿರುವ ಪಶ್ಚಿಮ ಘಟ್ಟದ ಮೇಲೆ ದಟ್ಟವಾದ ಕಾಡುಗಳು ಬೆಳೆದಿವೆ.
ಇಲ್ಲಿ ಕರಾವಳಿಯ ಹವಾಮಾನವಿದ್ದು ಬೇಸಗೆ ಹೆಚ್ಚು ಬಿಸಿಯಾಗಿರುತ್ತದೆ.ಮಳೆಗಾಲದಲ್ಲಿ ಹೆಚ್ಚು ಮಳೆ ಇದ್ದು ವಾರ್ಷಿಕ ಸುಮಾರು ೪೦೦೦ ಮಿ.ಮಿ.ಮಳೆಯಾಗುತ್ತದೆ.
ಕುಮಟಾದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
ಅಧಿಕ ಸರಾಸರಿ °C (°F) | 32.8 (91) |
33 (91) |
33.5 (92.3) |
34 (93) |
33.3 (91.9) |
29.7 (85.5) |
28.2 (82.8) |
28.4 (83.1) |
29.5 (85.1) |
30.9 (87.6) |
32.3 (90.1) |
32.8 (91) |
31.53 (88.7) |
ಕಡಮೆ ಸರಾಸರಿ °C (°F) | 20.8 (69.4) |
21.8 (71.2) |
23.6 (74.5) |
25 (77) |
25.1 (77.2) |
24.4 (75.9) |
24.9 (76.8) |
24 (75) |
24.1 (75.4) |
24.1 (75.4) |
24.4 (75.9) |
24.2 (75.6) |
23.87 (74.94) |
Average precipitation mm (inches) | 1.1 (0.043) |
0.2 (0.008) |
2.9 (0.114) |
24.4 (0.961) |
183.2 (7.213) |
೧,೦೨೭.೨ (೪೦.೪೪೧) |
೧,೨೦೦.೪ (೪೭.೨೬) |
787.3 (30.996) |
292.1 (11.5) |
190.8 (7.512) |
70.9 (2.791) |
16.4 (0.646) |
೩,೭೯೬.೯ (೧೪೯.೪೮೫) |
[ಸೂಕ್ತ ಉಲ್ಲೇಖನ ಬೇಕು] |
ಇಲ್ಲಿನ ಪ್ರಮುಖ ಬೆಳೆ ಭತ್ತ, ತೆಂಗು ಮತ್ತು ಅಡಿಕೆಯಾಗಿದ್ದು ಇದರ ಜೊತೆ ಗೇರು, ವೀಳ್ಯದೆಲೆ, ತರಕಾರಿಗಳು ಪ್ರಮುಖ ವಾಣಿಜ್ಯ ಬೆಳೆಯಾಗಿವೆ. ವನ್ನಳ್ಳಿ ಮತ್ತು ಅಳ್ವೇಕೋಡಿ ಗ್ರಾಮಗಳಲ್ಲಿ ಬೆಳೆಯಲಾಗುವ ವಿಶಿಷ್ಟವಾದ ಸಿಹಿ ಈರುಳ್ಳಿಯನ್ನು ಕರ್ನಾಟಕದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.
ಕುಮಟಾ ಪಟ್ಟಣವು ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಕೆಂದ್ರ ಸ್ಥಾನವಾಗಿದ್ದು ಇಲ್ಲಿ ನೂರು ವರುಷದ ಇತಿಹಾಸವುಳ್ಳ ಗಿಬ್ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಡಾ|| ಎ.ವಿ.ಬಾಳಿಗಾ ಕಾಲೇಜು, ಬಿಬಿಎ ಕಾಲೇಜು ಡಿ.ಇಡ್. ಕಾಲೇಜು, ಬಿ.ಇಡ್. ಕಾಲೇಜು, ಡಿಪ್ಲೋಮಾ ಕಾಲೇಜು ಹಾಗೂ ಎರಡು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ.
ಸುಂದರವಾದ ಸಮುದ್ರ ತೀರಗಳಿಂದ, ಪುರಾಣ ಪ್ರಸಿಧ್ಧ ದೇವಾಲಯಗಳು, ಮನಮೋಹಕ ಜಲಪಾತಗಳು, ಹಸಿರು ಪರ್ವತಗಳಿಂದ ಕೂಡಿರುವ ಕುಮಟಾ ಪ್ರವಾಸಿಗರ ಉತ್ತಮ ಆಯ್ಕೆ. ಬೃಹದಾಕಾರದ ಶಿಲಾರೂಪಗಳಿರುವ ಯಾಣ, ಶಿವನ ಆತ್ಮಲಿಂಗವಿರುವ ಸ್ಥಳ ಗೋಕರ್ಣ, ಮಿರ್ಜಾನ್ ಕೋಟೆಗಳು ಕುಮಟಾದ ಪ್ರಮುಖ ಆಕರ್ಷಣೆಗಳು. ಶಿವನ ಆತ್ಮಲಿಂಗವಿರುವ ಗೋಕರ್ಣದ ಮಹಾಬಲೇಶ್ವರ ದೇವಾಲಯ ಸುಮಾರು ೩೦ ಕಿ.ಮಿ ದೂರದಲ್ಲಿದೆ. ರಾಣಿ ಚೆನ್ನಭೈರಾದೇವಿ ನಿರ್ಮಿಸಿದ ಮಿರ್ಜಾನ್ ಕೋಟೆ ಸುಮಾರು ೧೨ ಕಿ.ಮಿ ದೂರದಲ್ಲಿದೆ. ಭಸ್ಮಾಸುರನನ್ನು ವಿಷ್ಣು ಕೊಂದ ಸ್ಥಳವಾದ ಯಾಣ ೨೦ ಕಿಮೀ ದೂರದಲ್ಲಿದೆ. ಆತ್ಮಲಿಂಗದ ಒಂದು ಚೂರು ಬಿದ್ದ ಸ್ಥಳವಾದ ಧಾರೇಶ್ವರ ೧೦ ಕಿ.ಮೀ ದೂರದಲ್ಲಿದೆ. ಇವಿಷ್ಟೇ ಅಲ್ಲದೇ ಬಾಡದ ಕಾಂಚಿಕಾ ಪರಮೇಶ್ವರಿ ದೇವಾಲಯ, ಹೆಗಡೆಯ ಶಾಂತಿಕಾ ಪರಮೇಶ್ವರಿ ದೇವಾಲಯ, ಬೆಟ್ಟದ ತುದಿಯಲ್ಲಿರುವ ಗೋರೆ, ಅಘನಾಶಿನಿ ನದಿಯ ಸಂಗಮ ಸ್ಥಳವಾದ ತದಡಿ, ಹೆಡ್‌ಬಂದರ್ ಸಮುದ್ರತೀರಗಳು,ಕಡ್ಲೆ ಸಮುದ್ರತೀರ ಮತ್ತು ಸುತ್ತಮುತ್ತಲಿನ ಪ್ರಸಿದ್ಧ ಆಕರ್ಷಣೆಗಳು.