ಕುಮಾರದಾಸ ಜಾನಕೀಹರಣವೆಂಬ ಸಂಸ್ಕೃತ ಕಾವ್ಯದ ಕರ್ತೃ. ಈ ಕಾವ್ಯ ಮೊದಲು ದೊರೆತದ್ದು ಸಿಂಹಳೀ ಭಾಷೆಯ ಭಾಷಾಂತರದ ರೂಪದಲ್ಲಿ. ಸಂಸ್ಕತದ ಮೂಲರೂಪ ಪೂರ್ಣವಾಗಿ ಉಪಲಬ್ಧವಿಲ್ಲ. ಕೇವಲ 14 ಸರ್ಗಗಳು ಮಾತ್ರ ಸಿಕ್ಕಿವೆ. ಸಿಂಹಳದ ಐತಿಹ್ಯದಂತೆ ಈತ ಕಿ.ಶ. 6ನೆಯ ಶತಮಾನದಲ್ಲಿ (ಕಿ.ಶ.517-26) ಸಿಂಹಳ ದ್ವೀಪದ ರಾಜನಾಗಿದ್ದನೆಂದೂ ಈತನೇ ಕಾವ್ಯ ಬರೆದನೆಂದೂ ತಿಳಿದುಬರುತ್ತದೆ. ಇತ್ತೀಚಿನ ವಿಮರ್ಶಕರು ಈತನ ಕಾಲವನ್ನು 8ನೆಯ ಶತಮಾನದ ಕೊನೆ ಅಥವಾ 9ನೆಯ ಶತಮಾನದ ಆಯೆಂದು ನಿಷ್ಕರ್ಷಿಸಿದ್ದಾರೆ.
ಈತ ಅಂಧವಾಗಿ ಜನಿಸಿ ತನ್ನ ಇಬ್ಬರು ಸೋದರಮಾವಂದಿರ ಸಹಾಯದಿಂದ ರಜ ಪಡೆದು ಕೆಲಕಾಲದ ಮೇಲೆ ಕಾವ್ಯವನ್ನು ರಚಿದನೆಂದು ತಿಳಿಸುವ ಒಂದು ಕಥೆಯೂ ಇದೆ. ಜಾನಕೀಹರಣ ರಾಮಾಯಣ ಹಾಗೂ ರಘುವಂಶ ಕಾವ್ಯಗಳಲ್ಲಿ ಬರುವ ಶ್ರೀರಾಮಚಂದ್ರನ ಕಥೆ. ಈ ಕಾವ್ಯ ಅಯೋಧ್ಯೆ, ದಶರಥ ಮತ್ತು ಅವನ ಹೆಂಡತಿಯರ ವರ್ಣನೆಯಿಂದ ಪ್ರಾರಂಭವಾಗಿ ಶ್ರೀರಾಮನ ಜಯದೊಂದಿಗೆ ಮುಕ್ತಾಯವಾಗುತ್ತದೆ. ಜಾನಕಿಯ ಅಪಹರಣದ ವೃತ್ತಾಂಶ ಕಾವ್ಯದ ಮಧ್ಯದಲ್ಲಿ ಎಂದರೆ ಹತ್ತನೆಯ ಸರ್ಗದಲ್ಲಿ ಬರುತ್ತದೆ.
ಕವಿ ತನ್ನನ್ನು ಕುಮಾರ ಪರಿಚಾರಕ ಎಂದು ಕರೆದುಕೊಂಡಿದ್ದಾನೆ, ಈತನ ರಚನೆ, ಶೈಲಿಗಳಲ್ಲೂ, ಕಾವ್ಯವಸ್ತುವಿನ ವಿನ್ಯಾಸದಲ್ಲೂ ವೈದರ್ಭೀ ರಿತಿಯ ರಚನಾ ಕ್ರಮದಲ್ಲೂ ಕಾಳಿದಾಸನ ಪ್ರಭಾವ ಎದ್ದುಕಾಣತ್ತದೆ. ಅನುಪ್ರಾಸ ಪ್ರಿಯನಾದರೂ ಎಲ್ಲಿಯೂ ಎಲ್ಲೆ ಮೀರಿಲ್ಲ. ಛಂದಸ್ಸಿನ ಪ್ರಯೋಗದಲ್ಲಿ ಕೌಶಲ ತೋರಿದ್ದಾನೆ. ದ್ರುತವಿಲಂಬಿತ, ಪ್ರಮಿತಾಕ್ಷರಾ, ಉಪಜಾತಿ, ವೈತಾಲೀಯ, ಶಾರ್ದೂಲವಿಕ್ರೀಡಿತ, ಸ್ರಗ್ಧರಾ ಮುಂತಾದ ಛಂದಸ್ಸುಗಳಲ್ಲಿ ಪದ್ಯಗಳನ್ನು ಕಾವ್ಯದ ಉದ್ದಕ್ಕೂ ರಚಿದ್ದಾನೆ. ಮುರಜಬಂಧ, ಜಾಲಬಂಧಗಳಲ್ಲೂ ತನ್ನ ಕೌಶಲ ಪ್ರದರ್ಶಿಸಿದ್ದಾನೆ. ನೀತಿ ಪ್ರತಿಪಾದನೆಗೂ ಅವಕಾಶ ಕಲ್ಪಿಸಿಕೊಂಡಿದ್ದಾನೆ. ಈ ಕಾವ್ಯದ ಅನೇಕ ಪದ್ಯಗಳನ್ನು ಪ್ರಾಚೀನ ಆಲಂಕಾರಿಕರು ಉದಾಹರಿಸಿದ್ದಾರೆ. ರಾಮಾಯಣದ ವಿಸ್ತಾರ ಕಥಾಭಾಗದ ದೃಷ್ಟಿಯಿಂದ ನೋಡಿದಾಗ ಕುಮಾರದಾಸನ ಕಾವ್ಯದಲ್ಲಿ ಕೆಲವು ವೇಳೆ Pxಯ ಓಟ ಹೆಚ್ಚಾದಂತೆ ಕಾಣುತ್ತದೆ. ಬಹುಶಃ ಕವಿಗೆ ಇದು ಅನಿವಾರ್ಯವಾಗಿತ್ತೆಂದು ಕಾಣುತ್ತದೆ. ಸಂಸ್ಕತ ಕವಿಗಳ ಶ್ರೇಣಯಲ್ಲಿ ಈತನಿಗೆ ಉತ್ತಮ ಸ್ಥಾನವಿದೆ.