ಕೊಮಗಟ ಮರು ಎಂಬುದು ಒಂದು ಜಪಾನಿ ಉಗಿಹಡಗಿನ ಹೆಸರು. ಈ ಹಡಗು ೧೯೧೪ ರಲ್ಲಿ ೩೭೬ ಪಂಜಾಬಿ ಪ್ರಯಾಣಿಕರೊಂದಿಗೆ ಹಾಂಗ್ ಕಾಂಗ್, ಶಾಂಘೈ, ಚೀನಾ, ಯುಕೊಹೋಮಾ, ಜಪಾನ್ ಮೂಲಕ ಕೆನಡಾ ದೇಶದ ಬ್ರಿಟಿಶ್ ಕೊಲಂಬಿಯಾ ರಾಜ್ಯದ ವ್ಯಾಂಕೋವರ್ ನಗರಕ್ಕೆ ಪ್ರಯಾಣಿಸಿತು. ೩೪೦ ಸಿಖ್, ೨೪ ಮುಸ್ಲಿಂ, ೧೨ ಹಿಂದೂಗಳಿದ್ದ ಇದರಲ್ಲಿ ೨೪ ಜನರನ್ನು ಮಾತ್ರ ಕೆನಡಾದೊಳಗೆ ಪ್ರವೇಶಿಸಲು ಅನುಮತಿಸಲಾಯಿತು ಹಾಗೂ ಇನ್ನುಳಿದವರನ್ನು ಹಡಗಿನ ಸಮೇತ ಬಲವಂತವಾಗಿ ಭಾರತಕ್ಕೆ ವಾಪಸ್ ಕಳುಹಿಸಲಾಯಿತು[೧]. ೨೦ನೇ ಶತಮಾನದ ಶುರುವಿನಲ್ಲಿ ಕೆನಡಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ಏಷಿಯಾ ಮೂಲದ ಜನರ ವಲಸೆಯನ್ನು ತಡೆಯಲು ಮಾಡಿದ ಕಾನೂನು ಪ್ರಯತ್ನಗಳಲ್ಲಿ ಇದು ಒಂದು ಪ್ರಮುಖ ಘಟನೆಯಾಗಿ ಇತಿಹಾಸದಲ್ಲಿ ದಾಖಲಾಗಿದೆ..