ಕ್ಷೀರಸಮುದ್ರವು ಪುರಾಣೋಕ್ತವಾದ ಸಪ್ತ ಸಮುದ್ರಗಳಲ್ಲಿ ಒಂದು. ಲವಣ, ಇಕ್ಷು, ಸುರಾ (ಮದ್ಯ) ಸರ್ಪಿಸ್ (ತುಪ್ಪ), ದಧಿ, ಜಲ ಇವೇ ಉಳಿದ ಆರು ಸಮುದ್ರಗಳು. ಕ್ಷೀರ ಸಮುದ್ರದ ವಿಸ್ತೀರ್ಣ ಆರು ಲಕ್ಷ ಯೋಜನಗಳೆನ್ನಲಾಗಿದೆ. ಈ ಸಮುದ್ರದಲ್ಲಿ ನಡೆದ ಆಮೃತಮಥನದ ವಿಚಾರ ರಾಮಾಯಣ, ಭಾರತ, ಭಾಗವತ, ಪದ್ಮಪುರಾಣಾದಿಗಳಲ್ಲಿ ಬಂದಿದೆ.
ಒಮ್ಮೆ ದೂರ್ವಾಸ ಮುನಿ ಇಂದ್ರನನ್ನು ಕಾಣಲು ಅಮರಾವತಿಯ ಕಡೆಗೆ ಹೊರಟಾಗ, ಎದುರಿಗೆ ಬಂದ ಇಂದ್ರ ಮುನಿಯನ್ನು ಕಂಡೂ ಕಾಣದಂತೆ ಇದ್ದುದನ್ನು ಗಮನಿಸಿ ಸಿಟ್ಟಿಗೆದ್ದ ಮುನಿ ಆತನ ಸಕಲ ಐಶ್ವರ್ಯವೂ ನಾಶವಾಗಲೆಂದು ಶಾಪಕೊಟ್ಟ. ಇಂಥ ಸಮಯ ನಿರೀಕ್ಷೆಯಲ್ಲಿದ್ದ ದೈತ್ಯರು ಇಂದ್ರಲೋಕವನ್ನು ವಶಪಡಿಸಿಕೊಂಡು ದೇವತೆಗಳಿಗೆಲ್ಲ ತೊಂದರೆ ಕೊಡಲು ಉಪಕ್ರಮಿಸಿದರು. ಕಳೆಗುಂದಿದ ದೇವತೆಗಳು ವಿಷ್ಣುವನ್ನು ಮೊರೆ ಹೊಕ್ಕರು. ಆಗ ವಿಷ್ಣು ದೇವತೆಗಳನ್ನು ಸಮಾಧಾನಪಡಿಸಿ ರಾಕ್ಷಸರೊಂದಿಗೆ ಸಮುದ್ರಮಥನ ಮಾಡಿದಲ್ಲಿ ಶುಭವಾಗುವುದೆಂದು ಸೂಚಿಸಿದ. ಅದರಂತೆ ದೇವತೆಗಳು ಉಪಾಯದಿಂದ ದೈತ್ಯರನ್ನು ಒಲಿಸಿಕೊಂಡು ಪಾಲ್ಗಡಲನ್ನು ಕಡೆದು ಅಮೃತವನ್ನು ಸಂಪಾದಿಸಿಕೊಂಡು ಇಬ್ಬರೂ ಸುಖವಾಗಿ ಬಾಳುವ ಯೋಜನೆಯನ್ನು ಹಾಕಿದರು. ಸ್ವಭಾವದಿಂದ ಅಲ್ಪ ತೃಪ್ತರಾದ ದಾನವರು ದೇವತೆಗಳ ಮಾತನ್ನು ನಂಬಿ ಮಂದರ ಪರ್ವತವನ್ನು ಕಡೆಗೋಲಾಗಿಯೂ ವಾಸುಕಿಯನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ಅಮೃತಕ್ಕಾಗಿ ಸಮುದ್ರವನ್ನು ಮಥಿಸಲು ಆರಂಭಿಸಿದರು. ಕುಸಿಯುತ್ತಿದ್ದ ಪರ್ವತವನ್ನು ಕೂರ್ಮಾವತಾರಿಯಾದ ವಿಷ್ಣು ಬೆನ್ನ ಮೇಲೆ ಹೊತ್ತವನಾಗಿ ಮಂಥನ ಸುಸೂತ್ರವಾಗಿ ನಡೆಯಿತು. ಕಡೆತ ಮುಂದುವರಿದಂತೆ ವಾಸುಕಿಯ ವದನದಿಂದ ವಿಷ ಉಕ್ಕಿ ಹರಿಯತೊಡಗಿತು. ವಿಷಜ್ವಾಲೆಗೆ ಕಂಗೆಟ್ಟ ದೇವದಾನವರು ಶಿವನನ್ನು ಮರೆಹೊಕ್ಕರು. ಶಿವ ಆ ವಿಷವನ್ನು ಪಾನ ಮಾಡಿ ವಿಷಕಂಠನಾದ. ಅನಂತರ ಸಮುದ್ರದಿಂದ ಕಾಮಧೇನು, ಉಚ್ಚೈಃಶ್ರವಸ್ಸು, ಐರಾವತ, ಕೌಸ್ತುಭಮಣಿ, ಚಂದ್ರ, ಲಕ್ಷ್ಮಿ, ಅಪ್ಸರ ಸ್ತ್ರೀಯರು ಹುಟ್ಟಿ ಬಂದರು. ಕೊನೆಯಲ್ಲಿ ಧನ್ವಂತರಿ ಒಂದು ಕೈಲಿ ಅಮೃತವನ್ನೂ ಮತ್ತೊಂದು ಕೈಲಿ ಅಳಲೆಕಾಯನ್ನೂ ಹಿಡಿದು ಬಂದ. ಧನ್ವಂತರಿಯ ಕೈಲಿದ್ದ ಅಮೃತಕಳಶವನ್ನು ದಾನವರು ಅಪಹರಿಸಿದರು. ಆದರೆ ವಿಷ್ಣು ಮೋಹಿನಿ ರೂಪದಿಂದ ಅಮೃತವನ್ನು ಪಡೆದು ದೇವತೆಗಳಿಗೆ ಬಡಿಸಿದ. ಅಂದಿನಿಂದ ದೇವತೆಗಳು ಅಮರತ್ವವನ್ನು ಪಡೆದರು. ಈ ವಿವರಗಳು ಭಾಗವತದಲ್ಲಿವೆ.