ಗಂಗಾದೇವಿಯು ಕನ್ನಡ ನಾಡಿನ ಒಬ್ಬ ಸಂಸ್ಕೃತ ಕವಯಿತ್ರಿ. ವಿಜಯನಗರದ ಬುಕ್ಕರಾಯನ (ಆಳ್ವಿಕೆ 1356-1377) ಎರಡನೆಯ ಮಗ ಕಂಪಣ್ಣ, ಕಂಪಣ್ಣವೊಡೆಯ, ಕಂಪಣ್ಣರಾಯ ಅಥವಾ ಕಂಪರಾಯನ (ಮರಣ 1377) ಪತ್ನಿ. ಈಕೆಯ ಬಾಲ್ಯ ಮತ್ತು ತಂದೆತಾಯಿಯರ ವಿಷಯ ತಿಳಿದುಬರುವುದಿಲ್ಲ.[೧][೨]
ಗಂಗಾದೇವಿ ಮಧುರಾ ವಿಜಯಂ ಅಥವಾ ವೀರಕಂಪಣರಾಯಚರಿತಂ ಎಂಬ ಸಂಸ್ಕೃತ ಕಾವ್ಯವನ್ನು ರಚಿಸಿದ್ದಾಳೆ. ವಿಜಯನಗರದ ದಕ್ಷಿಣ ಪ್ರಾಂತ್ಯದ ಮೇಲಾಧಿಕಾರಿಯಾಗಿದ್ದ ಕಂಪಣ್ಣನ ದಕ್ಷಿಣ ದೇಶದ ದಂಡಯಾತ್ರೆ (ಸು. 1360)-ಮುಖ್ಯವಾಗಿ ಮಧುರೆಯ ವಿಜಯದ-ವರ್ಣನೆ ಇಲ್ಲಿದೆ. ಕಂಪಣ್ಣನ ಹುಟ್ಟು, ವಂಶ, ಬುಕ್ಕರಾಯನ ವ್ಯಕ್ತಿತ್ವ ಇವನ್ನೂ ಗಂಗಾದೇವಿ ಇಲ್ಲಿ ವಿವರಿಸಿದ್ದಾಳೆ. 1360-71ರ ಸುಮಾರಿನಲ್ಲಿ ರಚಿತವಾದ ಈ ಕೃತಿಯಲ್ಲಿ ವಿಜಯನಗರದ ವರ್ಣನೆಯೂ ಇದೆ. ವಿಜಯನಗರ ಸುರನಗರಿಯಾದ ಅಮರಾವತಿಯಂತೆ ಶೋಭಯಮಾನವಾಗಿತ್ತೆಂದೂ ಅದರ ಕೋಟೆಯ ಹೆಬ್ಬಾಗಿಲು ಮೇರುವಿನಂತೆ ಬೃಹತ್ತರವಾಗಿತ್ತೆಂದೂ ಸಕಲ ಶ್ರೀಮಂತಿಕೆಯಿಂದಲೂ ಭವ್ಯ ಪ್ರಾಸಾದಗಳಿಂದಲೂ ಹೂಗಿಡಬಳ್ಳಿಗಳಿಂದಲೂ ಕಣ್ಮನಗಳಿಗೆ ಹಬ್ಬವುಂಟುಮಾಡುತ್ತಿತ್ತೆಂದೂ ಗಂಗಾದೇವಿ ವರ್ಣಿಸಿದ್ದಾಳೆ. ಗಂಗಾದೇವಿಯೊಡನೆ ವಿವಾಹವಾದ ಮೇಲೆ ಕಂಪಣ್ಣ ತನ್ನ ವಿಜಯಯಾತ್ರೆ ಕೈಗೊಂಡ. ಸಂಬುವರಾಯನನ್ನು ಸೋಲಿಸಿ ಕಾಂಚೀಪುರದಲ್ಲಿ ಸುವ್ಯವಸ್ಥೆ ನೆಲೆಸುವಂತೆ ಮಾಡಿದ. ಅನಂತರ ಕಂಪರಾಯ ಮಧುರೆಯನ್ನು ಮುತ್ತಿ ಅಲ್ಲಿಯ ಸುಲ್ತಾನನನ್ನು ಸೋಲಿಸಿದ. ವಿಜಯಯಾತ್ರೆಯ ಸಮಯದಲ್ಲಿ ಈಕೆಯೂ ಗಂಡನೊಂದಿಗಿದ್ದು ತಾನು ಕಣ್ಣಾರೆ ಕಂಡಿದ್ದನ್ನು ವರ್ಣಿಸಿರಬೇಕು. ದುರದೃಷ್ಟವಶಾತ್ ಮಧುರಾವಿಜಯಂ ಪೂರ್ಣವಾಗಿ ಲಭ್ಯವಾಗಿಲ್ಲ. ಮೊದಲಿನ ಎಂಟು ಸರ್ಗಗಳೂ ಒಂಬತ್ತನೆಯದರ ಸ್ವಲ್ಪ ಭಾಗವೂ ಸಿಕ್ಕಿವೆ. ಸಿಕ್ಕಿರುವ ಏಕೈಕ ಪ್ರತಿಯಲ್ಲೂ ಅನೇಕ ಪದ್ಯಗಳು ನಷ್ಟವಾಗಿವೆ.[೩]