ಹಲವಾರು ಜಾತಿಯ ಹಕ್ಕಿಗಳ ಕೂಗು ಗಂಟೆಯ ನಿನಾದವನ್ನು ಹೋಲುವುದರಿಂದ ಈ ಹಕ್ಕಿಗಳಿಗೆ ಗಂಟೆಹಕ್ಕಿ ಎಂಬ ಹೆಸರಿದೆ. ಆದರೆ ಮುಖ್ಯವಾಗಿ ದಕ್ಷಿಣ ಅಮೆರಿಕದಲ್ಲಿ ವಾಸಿಸುವ ಕ್ಯಾಂಪನೀರೊ ಗುಂಪಿಗೆ ಸೇರಿದ 4 ಪ್ರಭೇದಗಳಿಗೆ ಮುಖ್ಯವಾಗಿ ಚಾಸ್ಮೋರಿಂಕಸ್ ನಿವೀಯಸ್ ಪ್ರಭೇದಕ್ಕೆ ಈ ಹೆಸರು ಅನ್ವಯಿಸುತ್ತದೆ.
ಇದೊಂದು ಸಣ್ಣಹಕ್ಕಿ. ಇದರ ನೆತ್ತಿಯ ಮೇಲೆ ಕೋಡಿನಂಥ ಶಿಖೆ ಇದೆ. ಬಹಳ ಇಂಪಾಗಿ, ನಳಿಕೆ-ಗಂಟೆಯ ನಾದವನ್ನು ಹೋಲುವ ರೀತಿಯಲ್ಲಿ ಕೂಗುತ್ತದೆ. ಇದು ತೇವ ಉಷ್ಣವಲಯ ಮತ್ತು ಉಪೋಷ್ಣವಲಯದ ಕಾಡುಗಳಲ್ಲಿ ಕಾಣಿಸುತ್ತದೆ; ಉದಾಹರಣೆಗೆ ಬ್ರಜ಼ಿಲ್, ಫ಼್ರೆಂಚ್ ಗಯಾನಾ, ಗಯಾನಾ, ಸುರಿನಾಮ್, ಇತ್ಯಾದಿ.[೧]
ಆಸ್ಟ್ರೇಲಿಯದ ಕೆಲವು ಜೇನುಹಕ್ಕಿಗಳಿಗೂ ಗಂಟೆಹಕ್ಕಿಗಳು ಎಂಬ ಹೆಸರಿದೆ. ಪೂರ್ವ ಆಸ್ಟ್ರೇಲಿಯದಲ್ಲಿ ವಾಸಿಸುವ ಕಣ್ಣಿನ ಸುತ್ತ ಮಚ್ಚೆಗಳುಳ್ಳ ಮ್ಯಾನೊರೈನ ಮೆಲನೊಫ್ರಿಸ್, ಒಳನಾಡಿನ ಶುಷ್ಕಪ್ರದೇಶಗಳಲ್ಲಿ ವಾಸಿಸುವ ಶಿಖೆಯ ಗಂಟೆಹಕ್ಕಿಯಾದ ಓರಿಯಾಯ್ಕ ಗಟರ‍್ಯಾಲಿಸ್, ನ್ಯೂಜೀ಼ಲೆಂಡ್‌ನ ಆಂತೊರ‍್ನಿಸ್ ಮೆಲನ್ಯೂರ ಇವು ಮುಖ್ಯವಾದವು. ಆಂತೊರ‍್ನಿಸ್ ಮೆಲನ್ಯೂರ ಹಕ್ಕಿಯ ಗಾನವನ್ನು ಕೇಳಿದ ಕ್ಯಾಪ್ಟನ್ ಕುಕ್ ಉಚ್ಚ ರೀತಿಯಲ್ಲಿ ಸ್ವರಗೂಡಿಸಿದ ಸಣ್ಣ ಗಂಟೆನಾದದಂತೆ ಈ ಹಕ್ಕಿಯ ಕೂಗು ಇತ್ತು ಎಂದು ವರ್ಣಿಸಿದ್ದಾನೆ.[೨]
ಪ್ರೋಸ್ಥೆಮಡೇರ ನೋವಇಸಿಲೆಂಡಿಯೆ ಎಂಬ ಟೂಯಿ ಹಕ್ಕಿಯ ಕೂಗು ಸಹ ಇದೇ ರೀತಿ ಬೆಳ್ಳಿ ಗಂಟೆಯ ನಾದವನ್ನು ಹೋಲುತ್ತದೆ. ಈ ಹಕ್ಕಿ ಸುಮಾರು ಒಂದು ಗಂಟೆ ವಿರಾಮಕ್ಕೊಂದಾವರ್ತಿ ಕೂಗುವುದರಿಂದ ವೇಳೆಯನ್ನು ತಿಳಿಸುವಂತೆ ಕೂಗುತ್ತದೆ ಎಂಬ ಭಾವನೆ ಬರುತ್ತದೆ.