ಗಣಿಗಾರಿಕೆಯ ಅರ್ಥಶಾಸ್ತ್ರ

ಗಣಿಗಾರಿಕೆ ಅರ್ಥಶಾಸ್ತ್ರವು ಖನಿಜ ದ್ರವ್ಯಗಳ ಉತ್ಪಾದನೆ ಮತ್ತು ಬಳಕೆಗೆ ಸಂಬಂಧಿಸಿದ ಆರ್ಥಿಕ ಮತ್ತು ನೀತಿ ಸಮಸ್ಯೆಗಳ ತಿಳಿವಳಿಕೆಯನ್ನು ಪರಿಶೋಧಿಸುವ ಶೈಕ್ಷಣಿಕ ವಿಭಾಗ.[] ಖನಿಜ ಅರ್ಥಶಾಸ್ತ್ರವು ವಿಶೇಷವಾಗಿ ಖನಿಜ ವಿತರಣೆ ವಿಶ್ಲೇಷಣೆ ಮತ್ತು ತಿಳಿವಳಿಕೆ, ಜೊತೆಗೆ ಖನಿಜಗಳ ಶೋಧನೆ, ಬಳಕೆ ಮತ್ತು ಮಾರಾಟಗಾರಿಕೆಗೆ ಸಂಬಂಧಿಸಿದೆ.[] ಖನಿಜ ಅರ್ಥಶಾಸ್ತ್ರವು ಖನಿಜ ದ್ರವ್ಯಗಳು ಮತ್ತು ಅವುಗಳ ಜಾಗತಿಕ ವಿತರಣೆಗೆ ಸಂಬಂಧಿಸಿದಂತೆ ಕಾರ್ಯನೀತಿಗಳನ್ನು ನಿರ್ಮಿಸುವ ಶೈಕ್ಷಣಿಕ ವಿಭಾಗವಾಗಿದೆ.[]

ಗಣಿಗಾರಿಕೆಯ ಉಪಯೋಗಗಳು

[ಬದಲಾಯಿಸಿ]

ಗಣಿಗಳು ನೈಸರ್ಗಿಕ ಸಂಪನ್ಮೂಲಗಳು. ಪ್ರತಿಯೊಂದು ರಾಷ್ಟ್ರದ ಆರ್ಥಿಕ ಬೆಳವಣಿಗೆಯೂ ನೈಸರ್ಗಿಕ ಸಂಪನ್ಮೂಲಗಳನ್ನೇ ಬಹಳಮಟ್ಟಿಗೆ ಅವಲಂಬಿಸಿದೆ. ಆರ್ಥಿಕ ಅಭಿವೃದ್ಧಿಗೆ ಗಣಿಗಾರಿಕೆ ನಾನಾ ಬಗೆಯಲ್ಲಿ ಉಪಯುಕ್ತವಾಗಿದೆ:

  1. ರಾಷ್ಟ್ರದ ಬೆಳವಣಿಗೆಗೆ ಉಪಯುಕ್ತವಾದ ಅನೇಕ ವಸ್ತುಗಳು ಒದಗುವುದು ಗಣಿಗಳಿಂದ.
  2. ಗಣಿಗಾರಿಕೆಯಿಂದ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗಾವಕಾಶ ಒದಗುವುದಲ್ಲದೆ ಅವರು ಕಾರ್ಯಕುಶಲರಾಗಿ ತರಬೇತು ಪಡೆಯುತ್ತಾರೆ.
  3. ಇದರಿಂದ ನಾನಾ ಬಗೆಯ ಸೌಲಭ್ಯಗಳು ಲಭ್ಯವಾಗುವುವಲ್ಲದೆ ಮಾರುಕಟ್ಟೆಗಳು ಬೆಳೆದು ರಾಷ್ಟ್ರದ ಅಥವಾ ನಿರ್ದಿಷ್ಟ ಪ್ರದೇಶಗಳ ಅಭಿವೃದ್ಧಿ ಸಾಧಿಸುತ್ತದೆ.
  4. ಉತ್ಪನ್ನ, ಉದ್ಯೋಗ, ವಾಣಿಜ್ಯ ವರ್ಧಿಸುವುದರಿಂದ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ ಸಾಧಿತವಾಗುತ್ತದೆ.
  5. ಉದ್ಯಮದಿಂದ ನಿರ್ಯಾತ ಸಾಮಗ್ರಿ ಅಧಿಕವಾಗುವುದರಿಂದ ವಿದೇಶಿ ವಿನಿಮಯ ಸಂಪಾದನೆ ಸಾಧ್ಯ. ಆರ್ಥಿಕ ಅಭಿವೃದ್ಧಿಗೆ ಬೇಕಾಗುವ ಬಂಡವಾಳದ ಸಂಪಾದನೆಗೆ ಅಥವಾ ಅವಶ್ಯವಾದ ವಸ್ತುಗಳನ್ನು ಆಯಾತ ಮಾಡಿಕೊಳ್ಳುವುದಕ್ಕೆ ಇದು ಸಾಧಕ.
  6. ಗಣಿ ಉದ್ಯಮದಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸರ್ಕಾರದ ಆದಾಯ ಹೆಚ್ಚಿ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಅನುಕೂಲವಾಗುತ್ತದೆ.

ವಿಶ್ವದ ನಾನಾ ರಾಷ್ಟ್ರಗಳಲ್ಲಿ ಖನಿಜ ನಿಕ್ಷೇಪಗಳು ಹರಡಿರುವ ಬಗೆಯನ್ನು ಗಮನಿಸಿದಾಗ, ಅಭಿವೃದ್ಧಿಹೊಂದಿದ ಅನೇಕ ರಾಷ್ಟ್ರಗಳು ತಮ್ಮ ಕೈಗಾರಿಕೆಗಳಿಗಾಗಿ ಹಿಂದುಳಿದ ರಾಷ್ಟ್ರಗಳ ಖನಿಜ ಸಂಪತ್ತನ್ನು ಅವಲಂಬಿಸಬೇಕಾಗಿ ಬಂದಿರುವುದು ವ್ಯಕ್ತವಾಗುತ್ತದೆ. ವಸಾಹತುಗಳ ನಿರ್ಮಾಣ, ರಾಷ್ಟ್ರಗಳ ನಡುವೆ ಸ್ಪರ್ಧೆ, ವಿರಸ, ಅಶಾಂತಿಗಳಿಗೆ ಇದೂ ಕಾರಣ. ಅನೇಕ ಹಿಂದುಳಿದ ರಾಷ್ಟ್ರಗಳಿಗೆ ಅವುಗಳ ಖನಿಜ ಸಂಪತ್ತೇ ವಿದೇಶಿ ವಿನಿಮಯ ಗಳಿಕೆಯ ಸಾಧನವಾಗಿದೆ.

ಕೃಷಿ-ಅರಣ್ಯಗಾರಿಕೆ ಮತ್ತು ಗಣಿಗಾರಿಕೆ ನಡುವಿನ ವ್ಯತ್ಯಾಸ

[ಬದಲಾಯಿಸಿ]

ಕೃಷಿ, ಅರಣ್ಯಗಾರಿಕೆಗಳಂತೆ ಗಣಿಗಾರಿಕೆಯೂ ನಿಸರ್ಗದಿಂದ ಸಂಪತ್ತನ್ನು ನೇರವಾಗಿ ತೆಗೆಯುವುದರಲ್ಲಿ ಮಗ್ನವಾಗಿರುತ್ತದೆ. ಆದರೆ ಕೃಷಿ-ಅರಣ್ಯಗಾರಿಕೆಗಳಿಗೂ, ಗಣಿಗಾರಿಕೆಗೂ ಕೆಲವು ಮೂಲಭೂತ ವ್ಯತ್ಯಾಸಗಳುಂಟು. ಕೃಷಿಯ ಉತ್ಪಾದಕತೆಯನ್ನು ಅನೇಕ ಕ್ರಮಗಳಿಂದ ಬೆಳೆಸಬಹುದು. ಕಾಡು ಕಡಿದಂತೆ ಹೊಸ ಕಾಡು ಬೆಳೆಯಿಸಬಹುದು. ಆದರೆ ಖನಿಜ ನಿಕ್ಷೇಪ ಪರಿಮಿತವಾದ್ದು. ಅದು ಕೆಲವು ಕ್ಷೇತ್ರಗಳಲ್ಲಿ ಸಾಂದ್ರೀಕೃತವಾಗಿರುತ್ತದೆ. ಕೃಷಿ ಉತ್ಪಾದನೆಯ ಮೂಲವಾದ ಭೂಮಿ ಎಲ್ಲ ಕಡೆಗೂ ವಿಪುಲವಾಗಿ ಹರಡಿರುವಂತೆ, ಖನಿಜಗಳು ಹರಡಿರುವುದಿಲ್ಲ. ಇದರ ಪರಿಣಾಮವಾಗಿ ದೊಡ್ಡ ದೊಡ್ಡ ಉದ್ಯಮಗಳನ್ನು ಗಣಿಪ್ರದೇಶಗಳ ಹತ್ತಿರ ಸ್ಥಾಪಿಸುವುದು ಸಹಜ. ಗಣಿಯಿಂದ ತೆಗೆದ ಅದುರುಗಳು ಕೃಷಿವಸ್ತುಗಳಿಗಿಂತ ಹೆಚ್ಚು ಭಾರವಾಗಿದ್ದು, ದೊಡ್ಡ ಗಾತ್ರವುಳ್ಳವಾಗಿರುವುದರಿಂದ ಅವುಗಳ ಸಾರಿಗೆ ವೆಚ್ಚ ದುಬಾರಿ.

ಗಣಿ ಕೆಲಸ ಶ್ರಮದಾಯಕ ಮತ್ತು ಅಪಾಯಕರ. ಗಣಿಗಳಲ್ಲಿ ಕೆಲಸ ಮಾಡಲು ಕಾರ್ಮಿಕರಿಗೆ ಪ್ರತ್ಯೇಕ ಸವಲತ್ತುಗಳನ್ನು ಮತ್ತು ಹೆಚ್ಚಿನ ಸಂಬಳವನ್ನು ಕೊಟ್ಟು ಅವರನ್ನು ಆಕರ್ಷಿಸಬೇಕು. ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಒಂದೇ ಕಡೆ ನೆಲಸಿರುವುದರಿಂದ ಅವರು ಹೆಚ್ಚು ಸಂಘಟಿತರಾಗಿರುತ್ತಾರೆ. ಭಾರತದಲ್ಲೂ ಬೇರೆ ದೇಶಗಳಲ್ಲಿಯ ಹಾಗೆ ಗಣಿ ಕಾರ್ಮಿಕ ಸಂಘಗಳು ಉಳಿದ ಕಾರ್ಮಿಕ ಸಂಘಗಳಿಗಿಂತ ಬಲಯುತವಾಗಿರುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Gordon, Richard L., and John E. Tilton. "Mineral economics: Overview of a discipline." Resources policy 33, no. 1 (2008): 4-11.
  2. "mineral economics". TheFreeDictionary.com. Retrieved 2022-05-31.
  3. Eggert, Roderick G. (2008-03-01). "Trends in mineral economics: Editorial retrospective, 1989–2006". Resources Policy (in ಇಂಗ್ಲಿಷ್). 33 (1): 1–3. doi:10.1016/j.resourpol.2007.11.002. ISSN 0301-4207.


ಹೊರಗಿನ ಕೊಂಡಿಗಳು

[ಬದಲಾಯಿಸಿ]