ಗದರ್ ಪಿತೂರಿ (ಹಿಂದಿಯಲ್ಲಿ:ग़दर साज़िश, غدر سازِش ಗದರ್ ಸಾಜಿಶ್ ) ಬ್ರಿಟಿಶ್ ಭಾರತೀಯ ಸೇನೆಯಲ್ಲಿ ಅಖಿಲ-ಭಾರತೀಯ ದಂಗೆಗಾಗಿ ನಡೆದ ಒಂದು ಪಿತೂರಿಯಾಗಿದೆ. 1915ರ ಫೆಬ್ರವರಿಯಲ್ಲಿ ಭಾರತೀಯ ಕ್ರಾಂತಿಕಾರಿಗಳು ಈ ಸಂಚನ್ನು ಹೂಡಿದರು. ಬಹಳ ಬೃಹತ್ತಾಗಿದ್ದ ಇಂಡೋ-ಜರ್ಮನ್ ಪಿತೂರಿಯ ಅಸಂಖ್ಯಾತ ಯೋಜನೆಗಳಲ್ಲಿ ಇದು ಅತ್ಯಂತ ಪ್ರಮುಖವಾದ ಯೋಜನೆಯಾಗಿತ್ತು. ಇದನ್ನು 1914 ಮತ್ತು 1917ರ ಮಧ್ಯೆ ವಿಶ್ವ ಸಮರ Iರ ಸಮಯದಲ್ಲಿ ಬ್ರಿಟಿಶ್ ರಾಜ್ ವಿರುದ್ಧ ಅಖಿಲ-ಭಾರತೀಯ ದಂಗೆಯನ್ನು ಆರಂಭಿಸಲು ಯೋಜಿಸಲಾಗಿತ್ತು. ಪಿತೂರಿಗಾರರಲ್ಲಿ ಭಾರತ, ಸಂಯುಕ್ತ ಸಂಸ್ಥಾನಗಳು ಮತ್ತು ಜರ್ಮನಿಯಲ್ಲಿದ್ದ ಭಾರತೀಯ ರಾಷ್ಟ್ರೀಯವಾದಿಗಳು ಸೇರಿದ್ದರು. ಇವರಿಗೆ ಜೊತೆಗೆ ಐರಿಶ್ ರಿಪಬ್ಲಿಕನ್‌ಗಳ ಮತ್ತು ಜರ್ಮನ್ ವಿದೇಶಾಂಗ ಕಚೇರಿಯ ಸಹಾಯವೂ ಇತ್ತು.[೧][೨][೩] ಪಿತೂರಿಯು ವಿಶ್ವ ಸಮರದ ಆರಂಭದೊಂದಿಗೆ ಸಂಯುಕ್ತ ಸಂಸ್ಥಾನದಲ್ಲಿದ್ದ ಗದರ್ ಪಕ್ಷ , ಜರ್ಮನಿಯಲ್ಲಿದ್ದ ಬರ್ಲಿನ್ ಸಮಿತಿ, ಭಾರತಮತ್ತು ಸಿನ್ ಫೆಯಿನ್‌ದಲ್ಲಿದ್ದ ಭಾರತೀಯ ಭೂಗತ ಕ್ರಾಂತಿಕಾರಿಗಳು ಮತ್ತು ಸಾನ್ ಫ್ರಾನ್ಸಿಸ್ಕೊದಲ್ಲಿರುವ ಜರ್ಮನ್ ವಿದೇಶಾಂಗ ಕಚೇರಿ, ಇವರಿಂದ ಆರಂಭಗೊಂಡಿತು. ಬ್ರಿಟಿಶ್ ಬೇಹುಗಾರಿಕೆಯು ಮುಖ್ಯ ವ್ಯಕ್ತಿಗಳನ್ನು ಬಂಧಿಸುವ ಮೂಲಕ ಗದರ್ ಆಂದೋಲನವನ್ನು ರಹಸ್ಯವಾಗಿ ಬೇಧಿಸಿ, ಯೋಜಿತ ಫೆಬ್ರವರಿ ದಂಗೆಯನ್ನು ಹತ್ತಿಕ್ಕಿತು. ಭಾರತದೊಳಗಿದ್ದ ಚಿಕ್ಕ ತುಕಡಿಗಳು ಮತ್ತು ಕಾವಲುಪಡೆಗಳಲ್ಲಿ ನಡೆಯುತ್ತಿದ್ದ ದಂಗೆಯನ್ನು ಕೂಡ ಹತ್ತಿಕ್ಕಲಾಯಿತು. ದಂಗೆಗೆ ಈ ಜನಪ್ರಿಯ ಹೆಸರು ಬಂದಿದ್ದು ಸಂಯುಕ್ತ ಸಂಸ್ಥಾನದಲ್ಲಿದ್ದ ಭಾರತೀಯ "ಗದರ್" ಪಕ್ಷದಿಂದ, ದಂಗೆಯ ಯೋಜನೆಗಳನ್ನು ರೂಪಿಸುವಲ್ಲಿ ಭಾಗಿಯಾದ ಅತ್ಯಂತ ಪ್ರಮುಖರು ಎಂದರೆ ಈ ಪಕ್ಷದ ಬೆಂಬಲಿಗರು.
ಆರಂಭದಲ್ಲಿ ಬ್ರಿಟಿಶರು ಭಾರತೀಯ ದಂಗೆಯ ಕುರಿತು ಭಯದಿಂದಿದ್ದರು. ಆದರೆ ಇದಕ್ಕೆ ಪ್ರತಿಯಾಗಿ ಭಾರತೀಯ ಮುಖ್ಯವಾಹಿನಿ ರಾಜಕೀಯ ನಾಯಕತ್ವದ ಒಳಗೆ ಬ್ರಿಟನ್ನಿನ ಕುರಿತು ಊಹಿಸಲೂ ಆಗದಿದ್ದಷ್ಟು ಅತ್ಯಧಿಕ ನಿಷ್ಠೆ ಮತ್ತು ಸದಾಶಯದಿಂದಲೇ ವಿಶ್ವ ಸಮರ I ಆರಂಭಗೊಂಡಿತು. ಭಾರತವು ಬ್ರಿಟಿಶರ ಯುದ್ಧಕ್ಕೆ ಸೈನಿಕರು ಮತ್ತು ಸಂಪನ್ಮೂಲಗಳನ್ನು ಒದಗಿಸಿ ಅತ್ಯಧಿಕ ಕೊಡುಗೆ ನೀಡಿತು. ಸುಮಾರು 1.3 ದಶಲಕ್ಷ ಭಾರತೀಯ ಸೈನಿಕರು ಮತ್ತು ಕಾರ್ಮಿಕರು ಯೂರೋಪ್, ಆಫ್ರಿಕಾ, ಮತ್ತು ಮಧ್ಯ ಪ್ರಾಚ್ಯದಲ್ಲಿ ಸೇವೆ ಸಲ್ಲಿಸಿದರು. ಜೊತೆಗೆ, ಭಾರತೀಯ ಸರ್ಕಾರ ಮತ್ತು ರಾಜರುಗಳು ಅಪಾರ ಪ್ರಮಾಣದ ಆಹಾರ, ಹಣಕಾಸು ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿದರು. ಆದರೆ, ಬಂಗಾಳ ಮತ್ತು ಪಂಜಾಬ್ ವಸಾಹತುಶಾಹಿ ವಿರೋಧಿ ಚಟುವಟಿಕೆಗಳಿಗೆ ಹದವಾದ ಸ್ಥಳವಾಗಿ ಉಳಿದವು. ಬಂಗಾಳದಲ್ಲಿ ಭಯೋತ್ಪಾದನೆಯು ಪಂಜಾಬ್‌ನ ಅರಾಜಕತೆಯೊಂದಿಗೆ ಹೆಚ್ಚೆಚ್ಚು ಸಂಬಂಧ ಹೊಂದಲಾರಂಭಿಸಿತು, ಅದು ಪ್ರಾದೇಶಿಕ ಆಡಳಿತವನ್ನು ಸಾಕಷ್ಟು ಮಟ್ಟಿಗೆ ನಿಷ್ಕ್ರಿಯಗೊಳಿಸುವಷ್ಟು ಇತ್ತು.[೪][೫] ಅಲ್ಲದೇ ಯುದ್ಧದ ಆರಂಭದಿಂದಲೂ, ವಿದೇಶಗಳಲ್ಲಿದ್ದ ಭಾರತೀಯ ಜನತೆ, ವಿಶೇಷವಾಗಿ ಸಂಯುಕ್ತ ಸಂಸ್ಥಾನಗಳು, ಕೆನಡಾ, ಮತ್ತು ಜರ್ಮನಿಗಳಲ್ಲಿದ್ದ ಜನರು ಬರ್ಲಿನ್ ಸಮಿತಿ ಮತ್ತು ಗದರ್ ಪಕ್ಷದ ನೇತೃತ್ವದಲ್ಲಿ ಭಾರತದಲ್ಲಿ 1857ರ ಬಂಡಾಯದ ರೀತಿಯಲ್ಲಿಯೇ ದಂಗೆಯನ್ನು ಹುಟ್ಟುಹಾಕಲು ಪ್ರಯತ್ನಿಸಿದರು. ಐರಿಶ್ ರಿಪಬ್ಲಿಕನ್, ಜರ್ಮನ್ ಮತ್ತು ತುರ್ಕಿ ಜನರ ಸಹಾಯದಿಂದ ಇವರು ಬೃಹತ್ ಪ್ರಮಾಣದ ಪಿತೂರಿಯನ್ನು ನಡೆಸಲು ಯೋಜಿಸಿದ್ದು, ಅದನ್ನು ಹಿಂದೂ ಜರ್ಮನ್ ಪಿತೂರಿ[೨][೩][೬] ಎಂದು ಕರೆಯಲಾಯಿತು. ಈ ಪಿತೂರಿಯು ಬ್ರಿಟಿಶ್ ಭಾರತದ ವಿರುದ್ಧ ಹೋರಾಡಲು ಆಫ್ಘಾನಿಸ್ತಾನವನ್ನು ಒಟ್ಟುಗೂಡಿಸಲು ಪ್ರಯತ್ನಿಸಿತು.[೭] ದಂಗೆಗಾಗಿ ಅನೇಕ ವಿಫಲ ಪ್ರಯತ್ನಗಳನ್ನು ಮಾಡಲಾಯಿತು. ಅವುಗಳಲ್ಲಿ ಫೆಬ್ರವರಿ ದಂಗೆ ಯೋಜನೆ ಮತ್ತು ಸಿಂಗಾಪೂರ್ ದಂಗೆ ಬಹಳ ಗಮನಾರ್ಹವಾದವು. ಈ ಆಂದೋಲನವನ್ನು ಬೃಹತ್ ಪ್ರಮಾಣದ ಅಂತಾರಾಷ್ಟ್ರೀಯ ಪ್ರತಿ-ಬೇಹುಗಾರಿಕೆ ಕಾರ್ಯಾಚರಣೆ ಮತ್ತು ಕಠಿಣ ರಾಜಕೀಯ ಕ್ರಮಗಳ (1915ರ ಭಾರತದ ರಕ್ಷಣಾ ಕಾಯಿದೆಯನ್ನೂ ಒಳಗೊಂಡಂತೆ) ಮೂಲಕ ಹತ್ತಿಕ್ಕಲಾಯಿತು ಮತ್ತು ಈ ಕ್ರಮಗಳು ಸುಮಾರು ಹತ್ತು ವರ್ಷಗಳ ಕಾಲ ಜಾರಿಯಲ್ಲಿದ್ದವು.[೮][೯]
ಸಂಯುಕ್ತ ಸಂಸ್ಥಾನದಲ್ಲಿ ಭಾರತೀಯ ರಾಷ್ಟ್ರೀಯತೆಯ ನಿಟ್ಟಿನಲ್ಲಿ ಸುಮಾರು 20ನೇ ಶತಮಾನದ ಆರಂಭದ ದಶಕದಲ್ಲಿ ಪ್ರಾರಂಭಿಕ ಕೆಲಸಗಳು ನಡೆದವು. ಲಂಡನ್ನಿನಲ್ಲಿ ಇಂಡಿಯಾ ಹೌಸ್ ಸ್ಥಾಪನೆ ನಂತರ, ಅದೇ ರೀತಿಯ ಸಂಸ್ಥೆಗಳು ಸಂಯುಕ್ತ ಸಂಸ್ಥಾನಗಳು ಮತ್ತು ಜಪಾನಿನಲ್ಲಿ ಆ ಕಾಲದಲ್ಲಿ ಹೆಚ್ಚುತ್ತಿದ್ದ ಅಪಾರ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳಿಂದ ಆರಂಭಗೊಂಡವು.[೧೦] ಭಾರತ ಹೌಸ್‌ನ ಸ್ಥಾಪಕರಾದ ಶ್ಯಾಮಜಿ ಕೃಷ್ಣ ವರ್ಮಾ ಅವರು ಐರಿಶ್ ರಿಪಬ್ಲಿಕನ್ ಆಂದೋಲನದೊಂದಿಗೆ ಆಪ್ತ ಸಂಪರ್ಕವನ್ನು ಬೆಳೆಸಿದ್ದರು. ಮೊದಲ ರಾಷ್ಟ್ರೀಯವಾದಿ ಸಂಸ್ಥೆಗಳು ಎಂದರೆ ಕೃಷ್ಣ ವರ್ಮಾರ ಅಖಿಲ-ಆರ್ಯನ್ ಸಂಸ್ಥೆ (ಪಾನ್-ಆರ್ಯನ್ ಅಸೋಸಿಯೇಶನ್). ಇದನ್ನು ಭಾರತೀಯ ಹೋಂ ರೂಲ್ ಸೊಸೈಟಿಯ ಮಾದರಿಯಲ್ಲಿ 1906ರಲ್ಲಿ ಮೊಹಮ್ಮದ್ ಬರ್ಕತುಲ್ಲಾಹ್, ಎಸ್.ಎಲ್. ಜೋಷಿ ಮತ್ತು ಜಾರ್ಜ್ ಫ್ರೀಮ್ಯಾನ್, ಈ ಮೂವರ ಭಾರತ-ಐರಿಶ್ ಜಂಟಿ ಪ್ರಯತ್ನದಿಂದ ಆರಂಭಿಸಲಾಯಿತು.[೧೧] ಬರ್ಕತುಲ್ಲಾಹ್ ಅವರು ಮೊದಲು ಲಂಡನ್ನಿನಲ್ಲಿ ವಾಸಿಸಿದ್ದಾಗ ಕೃಷ್ಣ ವರ್ಮಾ ಅವರೊಂದಿಗೆ ಹತ್ತಿರದ ಸಂಪರ್ಕ ಹೊಂದಿದ್ದರು ಮತ್ತು ನಂತರದಲ್ಲಿ ಜಪಾನಿನಲ್ಲಿ ಅವರ ವೃತ್ತಿಯು ಅವರನ್ನು ಭಾರತೀಯ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಿನಲ್ಲಿ ಇರಿಸಿತು.[೧೧]
ಸಂಘದ ಅಮೆರಿಕಾ ಶಾಖೆಯು ಕೂಡ, ಆ ಸಮಯದಲ್ಲಿ ಕೃಷ್ಣ ವರ್ಮಾ ಅವರೊಂದಿಗೆ ಹತ್ತಿರದಲ್ಲಿದ್ದು ಕೆಲಸ ಮಾಡಿದ್ದ ಮ್ಯಾಡಮ್ ಕಾಮಾ ಅವರನ್ನು ಸಂಯುಕ್ತ ಸಂಸ್ಥಾನದಲ್ಲಿ ಉಪನ್ಯಾಸ ಸರಣಿಗಳನ್ನು ನೀಡಲು ಆಹ್ವಾನಿಸಿತು. "ಭಾರತ ಹೌಸ್" ಅನ್ನು ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ನಲ್ಲಿ ಜನವರಿ 1908ರಲ್ಲಿ ಐರಿಷ್ ಮೂಲದ ಶ್ರೀಮಂತ ವಕೀಲರಾದ ಮಿರನ್ ಫೆಲ್ಫ್ಸ್ ಅವರು ನೀಡಿದ ಹಣಕಾಸಿನಿಂದ ಸ್ಥಾಪಿಸಲಾಯಿತು. ಫೆಲ್ಪ್ಸ್ ಅವರು ಸ್ವಾಮಿ ವಿವೇಕಾನಂದರ ಮತ್ತು ನ್ಯೂಯಾರ್ಕ್‌ನಲ್ಲಿ (ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ) ವೇದಾಂತ ಸೊಸೈಟಿಯ ಕಾರ್ಯಗಳನ್ನು ಮೆಚ್ಚಿದ್ದರು. ಆ ಕಾಲದಲ್ಲಿ ಅದನ್ನು ಬ್ರಿಟಿಶರು "ರಾಜದ್ರೋಹ ಮಾಡುವವ" ಎಂದು ಪರಿಗಣಿಸಲಾದ ಸ್ವಾಮಿ ಅಭೇದಾನಂದರು ನೋಡಿಕೊಳ್ಳುತ್ತಿದ್ದರು.[೧೦] ನ್ಯೂಯಾರ್ಕ್‌ನಲ್ಲಿ, ಭಾರತೀಯ ವಿದ್ಯಾರ್ಥಿಗಳು ಮತ್ತು ಲಂಡನ್ ಭಾರತ ಹೌಸ್‌ನ ಮಾಜಿ-ನಿವಾಸಿಗಳು ಉದಾರವಾದಿ ಪ್ರೆಸ್ ಕಾಯಿದೆಗಳ ಲಾಭ ಪಡೆದುಕೊಂಡು, ಭಾರತೀಯ ಸಮಾಜವಾದಿ ಮತ್ತು ಇನ್ನಿತರ ರಾಷ್ಟ್ರೀಯವಾದಿ ಸಾಹಿತ್ಯವನ್ನು ಪ್ರಸಾರ ಮಾಡತೊಡಗಿದರು.[೧೦] ಜಾಗತಿಕ ಭಾರತೀಯ ಆಂದೋಲನಕ್ಕೆ ನ್ಯೂಯಾರ್ಕ್ ಹೆಚ್ಚೆಚ್ಚು ಪ್ರಮುಖ ಕೇಂದ್ರವಾಗತೊಡಗಿತು. ಅವುಗಳಲ್ಲಿ ತಾರಕನಾಥ ದಾಸ್ ಪ್ರಕಟಿಸುತ್ತಿದ್ದ ಫ್ರೀ ಹಿಂದೂಸ್ತಾನ್ ಎಂಬ ಒಂದು ಕ್ರಾಂತಿಕಾರಿ ನಿಯತಕಾಲಿಕವು , ಭಾರತೀಯ ಸಮಾಜವಾದಿತ್ವ ಕ್ಕೆ ಕೈಗನ್ನಡಿಯಾಗಿತ್ತು. ಈ ನಿಯತಕಾಲಿಕವನ್ನು ಮೊದಲು ವ್ಯಾಂಕೋವರ್‌ನಿಂದ ಸೀಟಲ್‌ಗೆ ವರ್ಗಾಯಿಸಿ, ನಂತರ 1908ರಲ್ಲಿ ನ್ಯೂಯಾರ್ಕ್‌ಗೆ ವರ್ಗಾಯಿಸಲಾಯಿತು. ಬ್ರಿಟಿಶ್ ರಾಜತಾಂತ್ರಿಕ ಒತ್ತಡದಿಂದಾಗಿ 1910ರಲ್ಲಿ ಫ್ರೀ ಹಿಂದೂಸ್ತಾನ್ ಪತ್ರಿಕೆಯನ್ನು ನಿಷೇಧಿಸುವ ಮೊದಲು, ದಾಸ್ ಅವರು ಗೇಲಿಕ್ ಅಮೆರಿಕನ್ ಪತ್ರಿಕೆಯೊಡನೆ ಜಾರ್ಜ್ ಫ್ರೀಮ್ಯಾನ್ ಅವರ ಸಹಾಯದಿಂದ ವ್ಯಾಪಕವಾಗಿ ಸಹಭಾಗಿತ್ವ ಹೊಂದಿದ್ದರು.[೧೨] 1910ರ ನಂತರ, ಅಮೆರಿಕನ್ ಪೂರ್ವ ಕರಾವಳಿಯಲ್ಲಿ ಚಟುವಟಿಕೆಗಳು ಕ್ಷೀಣಿಸಲಾರಂಭಿಸಿದವು ಮತ್ತು ಕ್ರಮೇಣ ಸ್ಯಾನ್ ಫ್ರಾನ್ಸಿಸ್ಕೋಗೆ ವರ್ಗಾವಣೆಗೊಂಡವು. ಇದೇ ಸುಮಾರಿಗೆ ಹರ್ ದಯಾಲ್ ಅವರ ಆಗಮನವು ಬೌದ್ಧಿಕ ಚಳುವಳಿಗಾರರು ಮತ್ತು ಅತ್ಯಧಿಕ ಸಂಖ್ಯೆಯಲ್ಲಿದ್ದ ಪಂಜಾಬಿ ಕೂಲಿಕೆಲಸಗಾರರು ಹಾಗೂ ವಲಸಿಗರ ನಡುವಣ ಅಂತರವನ್ನು ಕಡಿಮೆಗೊಳಿಸಿ, ಗದರ್ ಆಂದೋಲನಕ್ಕೆ ಅಡಿಪಾಯವನ್ನು ಹಾಕಿದಂತಾಯಿತು.[೧೨]
ಉತ್ತರ ಅಮೆರಿಕದ ಪೆಸಿಫಿಕ್ ಕರಾವಳಿ ತೀರಕ್ಕೆ 1900ರ ಸುಮಾರಿಗೆ ಅಪಾರ ಸಂಖ್ಯೆಯ ಭಾರತೀಯ ವಲಸಿಗರು ಬಂದರು. ಅದರಲ್ಲಿಯೂ ವಿಶೇಷವಾಗಿ ಆಗ ಆರ್ಥಿಕ ಕುಸಿತವನ್ನು ಎದುರಿಸುತ್ತಿದ್ದ ಪಂಜಾಬಿನಿಂದ ಅತ್ಯಧಿಕ ಸಂಖ್ಯೆಯಲ್ಲಿ ವಲಸೆ ಬಂದರು. ಕೆನೆಡಿಯನ್ ಆಂದೋಲನವು ವಲಸಿಗರ ಈ ಒಳಹರಿವನ್ನು ವಿವಿಧ ಶಾಸನಗಳಿಂದ ಎದುರಿಸಿತು. ಈ ಶಾಸನಗಳು ಕೆನಡಾಕ್ಕೆ ದಕ್ಷಿಣ ಏಷ್ಯನ್ನರ ಪ್ರವೇಶವನ್ನು ಮಿತಿಗೊಳಿಸುವ ಮತ್ತು ಅದಾಗಲೇ ಆ ದೇಶದಲ್ಲಿದ್ದವರ ರಾಜಕೀಯ ಹಕ್ಕುಗಳನ್ನು ಮೊಟಕುಗೊಳಿಸುವ ಗುರಿಯನ್ನು ಹೊಂದಿದ್ದವು. ಆವರೆಗೆ ಪಂಜಾಬಿ ಸಮುದಾಯವು ಬ್ರಿಟಿಶ್ ಸಾಮ್ರಾಜ್ಯಕ್ಕೆ ಮತ್ತು ಕಾಮನ್‌ವೆಲ್ತ್‌ಗೆ ಬಹಳ ನಿಷ್ಠಾವಂತ ಪಡೆಯಾಗಿತ್ತು. ಹೀಗಾಗಿ ಪಂಜಾಬಿ ಸಮುದಾಯವು ತನ್ನ ಬದ್ಧತೆಯನ್ನು ಗೌರವಿಸಿ, ಬ್ರಿಟಿಶರು ಮತ್ತು ಬಿಳೀ ವಲಸಿಗರಿಗೆ ಬ್ರಿಟಿಶ್ ಮತ್ತು ಕಾಮನ್‌ವೆಲ್ತ್ ಸರ್ಕಾರಗಳು ಹಕ್ಕುಗಳನ್ನು ವಿಸ್ತರಿಸಿದಂತೆ ಸಮಾನ ಸ್ವಾಗತ ಮತ್ತು ಸಮಾನ ಹಕ್ಕುಗಳನ್ನು ತಮಗೂ ನೀಡಬೇಕೆಂದು ನಿರೀಕ್ಷಿಸಿದ್ದರು. ಈ ಶಾಸನಗಳು ಪಂಜಾಬಿ ಸಮುದಾಯದೊಳಗೆ ಅಸಂತೃಪ್ತಿ, ಪ್ರತಿಭಟನೆಗಳು ಮತ್ತು ವಸಾಹತುಶಾಹಿ-ವಿರೋಧಿ ಭಾವನೆಯನ್ನು ಕೆರಳಿಸಿದವು. ಮತ್ತಷ್ಟು ಕಠಿಣಗೊಳ್ಳುತ್ತಿರುವ ಸನ್ನಿವೇಶಗಳನ್ನು ಎದುರಿಸಿದ ಸಮುದಾಯವು ರಾಜಕೀಯ ಗುಂಪುಗಳಾಗಿ ಸಂಘಟಿತಗೊಳ್ಳಲು ಆರಂಭಿಸಿತು. ಅಲ್ಲಿಂದ ಅತ್ಯಧಿಕ ಸಂಖ್ಯೆಯ ಪಂಜಾಬಿಗಳು ಸಂಯುಕ್ತ ಸಂಸ್ಥಾನಕ್ಕೆ ಬಂದರು, ಆದರೆ ಅಲ್ಲಿಯೂ ಅದೇ ರೀತಿಯ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು.[೧೩]
ಇದೇ ವೇಳೆ, ಪೂರ್ವ ಕರಾವಳಿಯಲ್ಲಿ ಆರಂಭಗೊಂಡ ಭಾರತೀಯರಲ್ಲಿ ರಾಷ್ಟ್ರೀಯವಾದಿ ಕೆಲಸಗಳು 1908ರ ಸುಮಾರಿಗೆ ಮತ್ತಷ್ಟು ಚುರುಕುಗೊಂಡಿತು. ಆಗ ಪಿ ಎಸ್ ಖಂಕೋಜೆ, ಕಾನ್ಷಿ ರಾಮ್, ಮತ್ತು ತಾರಕನಾಥ್ ದಾಸ್ ಅವರ ಮನೋಭಾವ ಹೊಂದಿದ ಭಾರತೀಯ ವಿದ್ಯಾಥಿಗಳು ಸೇರಿಕೊಂಡು ವರ್ಗಕ್ಕೆ ಸೇರಿದ ಸೇರಿ ಒರೆಗಾನ್‌ನ ಪೋರ್ಟ್‌ಲ್ಯಾಂಡ್ನಲ್ಲಿ ಭಾರತೀಯ ಸ್ವಾಂತಂತ್ರ್ಯ ಲೀಗ್ (ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್) ಸ್ಥಾಪಿಸಿದರು. ಇವರ ಕೆಲಸಗಳು ತಾರಕನಾಥ ದಾಸ್ ಅವರೂ ಸೇರಿದಂತೆ ಆ ಕಾಲದಲ್ಲಿ ಸಂಯುಕ್ತ ಸಂಸ್ಥಾನದಲ್ಲಿದ್ದ ಇನ್ನಿತರ ಭಾರತೀಯ ರಾಷ್ಟ್ರೀಯವಾದಿಗಳ ಸಂಪರ್ಕಕ್ಕೆ ಬರುವಂತೆ ಮಾಡಿತು. ವಿಶ್ವ ಸಮರ Iರ ನಂತರದ ವರ್ಷಗಳಲ್ಲಿ, ಖಂಕೋಜೆಯವರು ಪೆಸಿಫಿಕ್ ಕರಾವಳಿ ತೀರದ ಹಿಂದೂಸ್ತಾನ್ ಅಸೋಸಿಯೇಶನ್ನಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ತದನಂತರದಲ್ಲಿ ಅವರು ಗದರ್ ಪಕ್ಷವನ್ನು ಹುಟ್ಟುಹಾಕಿದರು. ಆ ಸಮಯದಲ್ಲಿ ಅವರು ಪಕ್ಷದ ಅತ್ಯಂತ ಪ್ರಭಾವೀ ಸದಸ್ಯರಲ್ಲಿ ಒಬ್ಬರಾಗಿದ್ದರು. ಅವರು 1911ರಲ್ಲಿ ಲಾಲಾ ಹರ್ ದಯಾಳ್ ಅವರನ್ನು ಭೇಟಿಯಾದರು. ಅವರು ಒಮ್ಮೆ ವೆಸ್ಟ್ ಕೋಸ್ಟ್ ಮಿಲಿಟರಿ ಅಕಾಡೆಮಿಯಲ್ಲಿಯೂ ಹೆಸರು ನೋಂದಾಯಿಸಿದ್ದರು. ಆರಂಭದಲ್ಲಿ ಪೆಸಿಫಿಕ್ ಕೋಸ್ಟ್ ಹಿಂದೂಸ್ತಾನ್ ಅಸೋಸಿಯೇಶನ್ ಆಗಿದ್ದ ಗದರ್ ಪಕ್ಷವು, 1913ರಲ್ಲಿ ಸಂಯುಕ್ತ ಸಂಸ್ಥಾನದಲ್ಲಿ ಹರ್ ದಯಾಳ್ ಅವರ ನಾಯಕತ್ವದಲ್ಲಿ ರೂಪುಪಡೆಯಿತು. ಆಗ ಸೋಹನ್ ಸಿಂಗ್ ಭಕ್ನ ಇದರ ಅಧ್ಯಕ್ಷರಾಗಿದ್ದರು. ಇದಕ್ಕೆ ಭಾರತೀಯ ವಲಸಿಗರು, ಹೆಚ್ಚಿನದಾಗಿ ಪಂಜಾಬ್‌ನಿಂದ ವಲಸೆ ಬಂದವರು ಸದಸ್ಯರಾದರು.[೧೩] ದಯಾಳ್, ತಾರಕ ನಾಥ್ ದಾಸ್, ಕರ್ತಾರ್ ಸಿಂಗ್ ಸರಭಾ ಮತ್ತು ವಿ.ಜಿ.ಪಿಂಗಳೆ ಅವರೂ ಸೇರಿದಂತೆ, ಇದರ ಅನೇಕ ಸದಸ್ಯರು ಬರ್ಕ್ಲಿಯ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಳಾಗಿದ್ದರು. ಪಕ್ಷವು ಬಹುಬೇಗನೆ, ವಿದೇಶದಲ್ಲಿದ್ದ ಭಾರತೀಯರ, ವಿಶೇಷವಾಗಿ ಸಂಯುಕ್ತ ಸಂಸ್ಥಾನ, ಕೆನಡಾ ಮತ್ತು ಏಷ್ಯಾದಲ್ಲಿದ್ದ ಭಾರತೀಯರಿಂದ ಬೆಂಬಲ ಗಳಿಸಿತು. ಗದರ್ ಸಭೆಗಳನ್ನು ಲಾಸ್ ಎಂಜೆಲೀಸ್, ಆಕ್ಸ್‌ಫರ್ಡ್, ವಿಯೆನ್ನಾ, ವಾಷಿಂಗ್ಟನ್ ಡಿ.ಸಿ., ಮತ್ತು ಷಾಂಗೈಗಳಲ್ಲಿ ನಡೆಸಲಾಯಿತು.[೧೪]
ಗದರ್ ಪಕ್ಷದ ಅಂತಿಮ ಗುರಿ ಎಂದರೆ ಭಾರತದಲ್ಲಿ ಬ್ರಿಟಿಶ್ ವಸಾಹತುಶಾಹಿ ಆಡಳಿತವನ್ನು ಸಶಸ್ತ್ರ ಕ್ರಾಂತಿಯ ಮೂಲಕ ಕಿತ್ತೆಸೆಯುವುದಾಗಿತ್ತು. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಪ್ರಭುತ್ವ ಸ್ಥಾನಮಾನ ಕ್ಕಾಗಿ ನಡೆದಿದ್ದ ಕಾಂಗ್ರೆಸ್]] ನೇತೃತ್ವದ ಮುಖ್ಯವಾಹಿನಿ ಆಂದೋಲನವನ್ನು ವಿನಮ್ರ ರೀತಿಯದು ಮತ್ತು ಅದರ ಸಾಂವಿಧಾನಿಕ ವಿಧಾನಗಳು ಬಹಳ ಮೃದು ಎಂದು ಗದರ್ ಬೆಂಬಲಿಗರು ಯೋಚಿಸಿದ್ದರು. ಗದರ್ ಅವರ ಅತ್ಯಂತ ಮಹತ್ವದ ಕಾರ್ಯತಂತ್ರ ಎಂದರೆ ಭಾರತೀಯ ಸೈನಿಕರನ್ನು ದಂಗೆಯೇಳುವಂತೆ ಪ್ರಲೋಭನೆಗೊಳಿಸುವುದಾಗಿತ್ತು.[೧೩] ಅದಕ್ಕಾಗಿ, 1913ರ ನವೆಂಬರ್‌ನಲ್ಲಿ ಗದರ್ ಬೆಂಬಲಿಗರು ಯುಗಾಂತರ್ ಆಶ್ರಮ್ ಮುದ್ರಣಾಲಯವನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸ್ಥಾಪಿಸಿದರು. ಮುದ್ರಣಾಲಯವು ಹಿಂದೂಸ್ತಾನ್ ಗದರ್ ಪತ್ರಿಕೆಯನ್ನು ಮತ್ತು ಇನ್ನಿತರ ರಾಷ್ಟ್ರೀಯವಾದಿ ಸಾಹಿತ್ಯವನ್ನು ಹುಟ್ಟುಹಾಕಿತು.[೧೪]
ಪ್ಯಾರಿಸ್‌ನಲ್ಲಿದ್ದ ಮತ್ತು ಬರ್ಲಿನ್‌ನಲ್ಲಿದ್ದ ಭಾರತ ಹೌಸ್‌ನ ಮೊದಲಿನ ಸದಸ್ಯರೊಂದಿಗೆ ಹರ್ ದಯಾಳ್ ಅವರ ಸಂಪರ್ಕಗಳು ಇಂಡೋ- ಸಹಭಾಗಿತ್ವದ ಆರಂಭಿಕ ಪರಿಕಲ್ಪನೆಗಳು ರೂಪುಗೊಳ್ಳಲು ಕಾರಣವಾಯಿತು. 1913ರ ಕೊನೆಯಲ್ಲಿ, ಪಕ್ಷವು ರಾಶ್ ಬಿಹಾರಿ ಬೋಸ್ ಅವರೂ ಸೇರಿದಂತೆ ಭಾರತದಲ್ಲಿದ್ದ ಪ್ರಮುಖ ಕ್ರಾಂತಿಕಾರಿಗಳೊಂದಿಗೆ ಸಂಪರ್ಕವನ್ನು ಬೆಳೆಸಿತು. ಹಿಂದೂಸ್ತಾನಿ ಗದರ್ ನ ಭಾರತೀಯ ಆವೃತ್ತಿಯು ಭಾರತದಲ್ಲಿ ಬ್ರಿಟಿಶ್ ಹಿತಾಸಕ್ತಿಗಳ ವಿರುದ್ಧ ಅರಾಜಕತ್ವ ಮತ್ತು ಕ್ರಾಂತಿಕಾರಕ ಭಯೋತ್ಪಾದನೆಯ ತತ್ವಗಳನ್ನು ಪ್ರತಿಪಾದಿಸಿತು. ರಾಜಕೀಯ ಅಸಂತೃಪ್ತಿ ಮತ್ತು ಹಿಂಸೆಯು ಪಂಜಾಬ್‌ನಲ್ಲಿ ಅಧಿಕಗೊಂಡಿತು ಮತ್ತು ಗದರ್‌ವಾದಿಗಳ ಪ್ರಕಟಣಗಳು ಕ್ಯಾಲಿಫೋರ್ನಿಯಾದಿಂದ ಬಾಂಬೆಯನ್ನು ತಲುಪಿದವು. ಇವುಗಳನ್ನು ರಾಜದ್ರೋಹಕರ ಎಂದು ಬ್ರಿಟಿಶ್ ರಾಜ್ ನಿಷೇಧಿಸಿತು. ಈ ಘಟನಗಳೊಂದಿಗೆ, 1912ರ ದೆಹಲಿ-ಲಾಹೋರ್ ಪಿತೂರಿಯಲ್ಲಿ ಗದರ್‌ವಾದಿಗಳ ಪ್ರಚೋದನೆಯ ಹಿಂದಿನ ಸಾಕ್ಷ್ಯಗಳು ಸೇರಿಕೊಂಡು, ಬ್ರಿಟಿಶ್ ಸರ್ಕಾರವು ಭಾರತೀಯ ಕ್ರಾಂತಿಕಾರಕ ಚಟುವಟಿಕೆಗಳನ್ನು ಮತ್ತು ಬಹುತೇಕವಾಗಿ ಸ್ಯಾನ್‌ಫ್ರಾನ್ಸಿಸ್ಕೋದಿಂದ ಪ್ರಕಟಗೊಳ್ಳುತ್ತಿದ್ದ ಗದರ್‌ವಾದಿ ಸಾಹಿತ್ಯವನ್ನು ಹತ್ತಿಕ್ಕುವಂತೆ ಅಮೆರಿಕನ್ ವಿದೇಶಾಂಗ ಇಲಾಖೆಯ ಮೇಲೆ ಒತ್ತಡ ಹೇರಿತು.[೧೫][೧೬]
ವಿಶ್ವ ಸಮರ Iರ ಸಮಯದಲ್ಲಿ, ಬ್ರಿಟಿಶ್ ಭಾರತೀಯ ಸೇನೆಯು ಬ್ರಿಟಿಶರ ಯುದ್ಧ ಪ್ರಯತ್ನಗಳಿಗೆ ಗಣನೀಯ ಕೊಡುಗೆ ಸಲ್ಲಿಸಿತ್ತು. ಇದರಿಂದಾಗಿ, 1914ರ ಕೊನೆಯ ಭಾಗದಲ್ಲಿ ಭಾರತದಲ್ಲಿ ಉಳಿದಿರುವ ಸೇನಾಪಡೆಯಲ್ಲಿ 15,000ದಷ್ಟು ಕಡಿಮೆ ಸೈನಿಕರಿದ್ದಾರೆ ಎಂದು ಅಂದಾಜು ಮಾಡಲಾಗಿತ್ತು.[೧೭] ಈ ಸನ್ನಿವೇಶದಲ್ಲಿ ಭಾರತದಲ್ಲಿ ದಂಗೆಯೇಳುವ ಬಲವಾದ ಯೋಜನೆಗಳನ್ನು ರೂಪಿಸಲಾಯಿತು.
1913ರ ಸೆಪ್ಟೆಂಬರ್‌ನಲ್ಲಿ, ಮಾತ್ರಾ ಸಿಂಗ್ ಎಂಬ ಗದರ್‌ವಾದಿಯು ಷಾಂಗೈಗೆ ಭೇಟಿ ನೀಡಿದರು ಮತ್ತು ಅಲ್ಲಿದ್ದ ಭಾರತೀಯ ಸಮುದಾಯದಲ್ಲಿ ಗದರ್‌ವಾದಿ ಆಂದೋಲನವನ್ನು ಹುಟ್ಟುಹಾಕಿದರು. 1914ರ ಜನವರಿಯಲ್ಲಿ, ಸಿಂಗ್ ಭಾರತಕ್ಕೆ ಭೇಟಿ ನೀಡಿದರು ಮತ್ತು ಇಲ್ಲಿಂದ ಹಾಂಗ್‌ಕಾಂಗ್‌ಗೆ ಹೊರಡುವ ಮೊದಲು ಭಾರತೀಯ ಸೈನಿಕರಲ್ಲಿ ಗುಪ್ತ ಮೂಲಗಳಿಂದ ಗದರ್ ಸಾಹಿತ್ಯವನ್ನು ಹಂಚಿದರು. ಭಾರತದಲ್ಲಿ ಸನ್ನಿವೇಶವು ಕ್ರಾಂತಿಗೆ ಅನುಕೂಲಕರವಾಗಿದೆ ಎಂದು ಸಿಂಗ್ ವರದಿ ಮಾಡಿದರು.[೧೮][೧೯]
1914 ಮೇಯಲ್ಲಿ, ಕೆನಡಾ ಸರ್ಕಾರವು 400 ಜನ ಭಾರತೀಯ ಪ್ರಯಾಣಿಕರಿಗೆ ಕೊಮಗಟ ಮಾರು ಹಡಗಿನಿಂದ ವ್ಯಾಂಕೋವರ್‌ನಲ್ಲಿ ಕೆಳಗಿಳಿಯಲು ಆಸ್ಪದ ನೀಡಲಿಲ್ಲ. ಭಾರತೀಯ ವಲಸೆಯನ್ನು ಪರಿಣಾಮಕಾರಿಯಾಗಿ ತಡೆಯುವ ಕೆನಡಾದ ಬಹಿಷ್ಕಾರ ಕಾಯಿದೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ನೌಕಾಯಾನವನ್ನು ಯೋಜನೆ ಮಾಡಲಾಗಿತ್ತು. ಹಡಗು ವ್ಯಾಂಕೋವರ್ ತಲುಪುವ ಮೊದಲೇ, ಅದು ತಲುಪುತ್ತಿದೆ ಎಂಬುದನ್ನು ಜರ್ಮನ್ ರೇಡಿಯೋ ಪ್ರಸಾರ ಮಾಡಿತು ಮತ್ತು ಬ್ರಿಟಿಶ್ ಕೊಲಂಬಿಯಾದ ಅಧಿಕಾರಿಗಳು ಪ್ರಯಾಣಿಕರು ಕೆನಡಾ ಪ್ರವೇಶಿಸದಂತೆ ತಡೆಯಲು ಸಿದ್ಧರಾಗಿದ್ದರು. ಈ ಘಟನೆಯು ಕೆನಡಾದಲ್ಲಿದ್ದ ಭಾರತೀಯ ಸಮುದಾಯಕ್ಕೆ ಒಂದು ಮಹತ್ವದ ಘಟನೆಯಾಯಿತು ಮತ್ತು ಅವರು ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. 2 ತಿಂಗಳ ಕಾನೂನು ಸಮರದ ನಂತರ, ಅವರಲ್ಲಿ 24 ಜನರನ್ನು ವಲಸೆ ಹೋಗಲು ಆಸ್ಪದ ನೀಡಲಾಯಿತು. ಹಡಗಿಗೆ ವ್ಯಾಂಕೋವರ್‌ನಿಂದ ಎಚ್‌ಎಂಸಿಎಸ್ ರೈನ್‌ಬೋ ನೌಕೆಯ ಕಾವಲಿನೊಂದಿಗೆ ಭಾರತಕ್ಕೆ ಮರಳಿ ಕಳುಹಿಸಲಾಯಿತು. ಕಲ್ಕತ್ತ ತಲುಪಿದ ನಂತರ, ಪ್ರಯಾಣಿಕರಿಗೆ ಬ್ರಿಟಿಶ್ ಭಾರತೀಯ ಸರ್ಕಾರವು ಭಾರತದ ರಕ್ಷಣಾ ಕಾಯಿದೆಯಡಿಯಲ್ಲಿ ಬಜ್ ಬಜ್‌ನಲ್ಲಿ ಬಂಧಿಸಿತು. ಅವರನ್ನು ನಂತರ ಬಲವಂತವಾಗಿ ಪಂಜಾಬ್‌ಗೆ ಕಳುಹಿಸಲಾಯಿತು. ಇದರಿಂದಾಗಿ ಬಜ್ ಬಜ್‌ನಲ್ಲಿ ದೊಂಬಿ ನಡೆಯಿತು ಮತ್ತು ಎರಡೂ ಕಡೆಯಿಂದ ಜನರು ಸತ್ತರು.[೨೦] ಬರ್ಕತುಲ್ಲಾಹ್ ಮತ್ತು ತಾರಕನಾಥ ದಾಸ್ ಸೇರಿದಂತೆ ಅನೇಕ ಗದರ್ ನಾಯಕರು, ಕೊಮಗಟ ಮಾರು ಘಟನೆ ಯ ಸುತ್ತ ಪ್ರತಿಭಟನೆಯ ಕೇಂದ್ರಬಿಂದುವಾಗಿ ಭಾವೋದ್ರೇಕ ಹುಟ್ಟುವಂತೆ ಮಾಡಿದರು. ಉತ್ತರ ಅಮೆರಿಕದಲ್ಲಿದ್ದ ಅನೇಕ ಅಸಂತುಷ್ಟ ಭಾರತೀಯರನ್ನು ಪಕ್ಷದ ತೆಕ್ಕೆಗೆ ಸೆಳೆದುಕೊಂಡರು.[೧೯]
1914ರ ಅಕ್ಟೋಬರ್ ಹೊತ್ತಿಗೆ, ಅಸಂಖ್ಯಾತ ಗದರ್‌ವಾದಿಗಳು ಭಾರತಕ್ಕೆ ಮರಳಿದರು. ಅವರಿಗೆ ಭಾರತೀಯ ಕ್ರಾಂತಿಕಾರಿಗಳನ್ನು ಮತ್ತು ಸಂಘಗಳನ್ನು ಸಂಪರ್ಕಿಸುವುದು, ತತ್ವಪ್ರಚಾರ ಮತ್ತು ಸಾಹಿತ್ಯವನ್ನು ಪ್ರಸಾರ ಮಾಡುವುದು, ಜರ್ಮನಿಯ ಸಹಾಯದೊಂದಿಗೆ ಸಂಯುಕ್ತ ಸಂಸ್ಥಾನದಿಂದ ಹಡಗಿನಲ್ಲಿ ವ್ಯವಸ್ಥೆ ಮಾಡಿ ಕಳುಹಿಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ದೇಶದೊಳಗೆ ಪಡೆದುಕೊಳ್ಳಲು ವ್ಯವಸ್ಥೆ ಮಾಡುವುದು, ಈ ರೀತಿಯ ಹಲವು ಕೆಲಸಗಳನ್ನು ವಹಿಸಲಾಗಿತ್ತು.[೨೧] 60 ಗದರ್‌ವಾದಿಗಳ ಮೊದಲ ಗುಂಪು ಜ್ವಾಲಾ ಸಿಂಗ್ ನೇತೃತ್ವದಲ್ಲಿ ಸ್ಯಾನ್ ಫ್ರಾನ್ಸಿಸ್ಕೋವನ್ನು ಬಿಟ್ಟು ಕ್ಯಾಂಟನ್‌ಗೆ ಎಸ್‌ಎಸ್ ಕೊರಿಯಾ ಉಗಿಹಡಗಿನಲ್ಲಿ ಆಗಸ್ಟ್ 29ರಂದು ಹೊರಟಿತು. ಅವರು ಭಾರತಕ್ಕೆ ಜಲಯಾನ ಮಾಡಿ, ಅಲ್ಲಿ ಕ್ರಾಂತಿಯನ್ನು ಸಂಘಟಿಸಲು ಶಸ್ತ್ರಾಸ್ತ್ರಗಳನ್ನು ಒದಗಿಸಬೇಕಿತ್ತು. ಕ್ಯಾಂಟನ್‌ನಲ್ಲಿ, ಇನ್ನಷ್ಟು ಹೆಚ್ಚಿನ ಭಾರತೀಯರು ಇವರನ್ನು ಸೇರಿಕೊಂಡರು ಮತ್ತು ಈಗ ಗುಂಪಿನಲ್ಲಿ ಒಟ್ಟು 150 ಜನರಾದರು. ಅವರು ದೊಡ್ಡ ಜಪಾನೀ ದೋಣಿಯೊಂದರಲ್ಲಿ ಕಲ್ಕತ್ತಗೆ ಪ್ರಯಾಣ ಬೆಳೆಸಿದರು. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಬರುತ್ತಿದ್ದ ಇನ್ನಷ್ಟು ಜನ ಭಾರತೀಯರು ಅವರನ್ನು ಸೇರಿಕೊಳ್ಳುವವರಿದ್ದರು. ಸೆಪ್ಟೆಂಬರ್ - ಅಕ್ಟೋಬರ್ ವೇಳೆಗೆ, ಸುಮಾರು 300 ಜನ ಭಾರತೀಯರು ಎಸ್‌ಎಸ್ ಸೈಬೀರಿಯಾ , ಚಿನ್ಯೊ ಮಾರು , ಚೈನಾ , ಮಂಚೂರಿಯ , ಎಸ್ಎಸ್ ಟೆನ್ಯೊ ಮಾರು , ಎಸ್ಎಸ್ ಮಂಗೋಲಿಯಾ ಮತ್ತು ಎಸ್ಎಸ್ ಶಿನ್ಯೊ ಮಾರು , ಇತ್ಯಾದಿ ಹಡಗುಗಳಲ್ಲಿ ಭಾರತಕ್ಕೆ ಹೊರಟರು.[೧೮][೨೧][೨೨] ಎಸ್ಎಸ್ ಕೊರಿಯಾ'ಸ್ ಹಡಗಿನಲ್ಲಿ ಬರುತ್ತಿದ್ದವರು ರಕ್ಷಣೆಯನ್ನು ಹೊಂದಿರಲಿಲ್ಲ ಮತ್ತು ಕಲ್ಕತ್ತೆಗೆ ಬರುತ್ತಿದ್ದಂತೆ ಅದನ್ನು ಬಂಧಿಸಲಾಯಿತು. ಇಷ್ಟಾಗಿಯೂ, ಸಂಯುಕ್ತ ಸಂಸ್ಥಾನ ಮತ್ತು ಭಾರತದ ಮಧ್ಯೆ ಒಂದು ಯಶಸ್ವೀ ಭೂಗತ ಸಂಪರ್ಕಜಾಲವನ್ನು ಷಾಂಗೈ, ಸ್ವಾಟೊ ಮತ್ತು ಸಿಯಮ್ ಮೂಲಕ ಸ್ಥಾಪಿಸಲಾಗಿತ್ತು. ಷಾಂಗೈನಲ್ಲಿ ಗದರ್ ಕಾರ್ಯಕರ್ತನಾಗಿದ್ದ ತೆಹ್ಲ್ ಸಿಂಗ್, ಭಾರತದೊಳಗೆ ಕ್ರಾಂತಿಕಾರಿಗಳನ್ನು ಒಳನುಗ್ಗಿಸಲು ಸಹಾಯ ಮಾಡಲಿಕ್ಕಾಗಿ ಸುಮಾರು 30,000 ಡಾಲರ್ ಹಣವನ್ನು ಖರ್ಚು ಮಾಡಿದ್ದಾನೆ ಎಂದು ನಂಬಲಾಗಿದೆ.[೨೩]
ಹಿಂತಿರುಗಿದವರಲ್ಲಿ ಪ್ರಮುಖರೆಂದರೆ ವಿಷ್ಣು ಗಣೇಶ್ ಪಿಂಗಳೆ, ಕರ್ತಾರ್ ಸಿಂಗ್, ಸಂತೋಷ್ ಸಿಂಗ್, ಪಂಡಿತ್ ಕಾನ್ಷಿ ರಾಮ್, ಭಾಯಿ ಭಗವಾನ್ ಸಿಂಗ್, ಇವರು ಗದರ್ ಪಕ್ಷದ ನಾಯಕತ್ವದಲ್ಲಿ ಅತ್ಯಂತ ಉನ್ನತ ಶ್ರೇಣಿಯಲ್ಲಿದ್ದವರಾಗಿದ್ದರು. ಪಿಂಗಳೆಗೆ ಗದರ್ ಗುಂಪಿನ ಸದಸ್ಯರಲ್ಲಿ (ಕರ್ತಾರ್ ಸಿಂಗ್ ಸರಭಾ ಅಂತಹವರ) ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿದ್ದ ಸತ್ಯೇನ್ ಭೂಷಣ್ ಸೇನ್ (ಜತಿನ್ ಮುಖರ್ಜಿಯ ಗುಪ್ತಚಾರ) ಗೊತ್ತಿತ್ತು . ಗದರ್ ಪಿತೂರಿಯ ಭಾಗವಾಗಿ, ಭಾರತೀಯ ಕ್ರಾಂತಿಕಾರಕ ಆಂದೋಲನದೊಂದಿಗೆ ಸಂಪರ್ಕಗಳನ್ನು ಒಗ್ಗೂಡಿಸುವ ಕೆಲಸವನ್ನು ವಹಿಸಿಕೊಂಡ, ಸತ್ಯೇನ್ ಭೂಷಣ್ ಸೇನ್, ಕರ್ತಾರ್ ಸಿಂಗ್ ಸರಭಾ, ವಿಷ್ಣು ಗಣೇಶ್ ಪಿಂಗಳೆ ಮತ್ತು ಸಿಖ್ ತೀವ್ರಗಾಮಿಗಳ ಒಂದು ತಂಡವು ಅಮೆರಿಕದಿಂದ ಎಸ್.ಎಸ್. ಸಾಲಮಿನ್ ಹಡಗಿನಲ್ಲಿ 1914ರ ಅಕ್ಟೋಬರ್ ಉತ್ತರಾರ್ಧದಲ್ಲಿ ಪ್ರಯಾಣ ಬೆಳೆಸಿತು. ಸತ್ಯೇನ್ ಮತ್ತು ಪಿಂಗಳೆ ಭವಿಷ್ಯದ ಯೋಜನೆಗಳನ್ನು ರೂಪಿಸಲು ಗದರ್ ನಾಯಕರನ್ನು (ಮುಖ್ಯವಾಗಿ ತಹಲ್ ಸಿಂಗ್) ಭೇಟಿಯಾಗಲೆಂದು ಚೀನಾದಲ್ಲಿ ಕೆಲವು ದಿನಗಳ ಕಾಲ ತಂಗಿದರು. ಅವರು ಡಾ. ಸನ್ ಯತ್ ಸೆನ್- ಅವರನ್ನು ಸಹಕಾರ ಕೋರಿ ಭೇಟಿಯಾದರು. ಡಾ. ಸನ್ ಬ್ರಿಟಿಶರನ್ನು ಅಸಂತೋಷಗೊಳಿಸಲು ಸಿದ್ಧರಿರಲಿಲ್ಲ. ಸತ್ಯೇನ್ ಮತ್ತು ಪಕ್ಷದವರು ಭಾರತಕ್ಕೆ ಹೊರಟರು. ತೆಹಲ್ ಅವರು ಆತ್ಮಾರಾಮ್ ಕಪೂರ್, ಸಂತೋಷ್ ಸಿಂಗ್ ಮತ್ತು ಶಿವ್ ದಯಾಳ್ ಕಪೂರ್ ಅವರನ್ನು ಬ್ಯಾಂಕಾಕ್‌ಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಕಳುಹಿಸಿದರು.[೨೪][೨೫][೨೬][೨೭] 1914ರ ನವೆಂಬರ್‌ನಲ್ಲಿ ಪಿಂಗಳೆ, ಕರ್ತಾರ್ ಸಿಂಗ್ ಮತ್ತು ಸತ್ಯೇನ್ ಸೇನ್ ಕಲ್ಕತ್ತೆಗೆ ತಲುಪಿದರು. ಸತ್ಯೇನ್ ಅವರು ಪಿಂಗಳೆ ಮತ್ತು ಕರ್ತಾರ್ ಸಿಂಗ್‌ರನ್ನು ಜತಿನ್ ಮುಖರ್ಜಿಗೆ ಪರಿಚಯಿಸಿದರು. ಡಿಸೆಂಬರ್ ಮೂರನೇ ವಾರದಲ್ಲಿ ಅಗತ್ಯ ಮಾಹಿತಿಯೊಂದಿಗೆ "ಪಿಂಗಳೆ ಜತಿನ್ ಮುಖರ್ಜಿ ಬಹಳಷ್ಟು ಹೊತ್ತು ಮಾತನಾಡಿದ್ದರು. ಮುಖರ್ಜಿಯವರು ಇವರನ್ನು ಬನಾರಸ್‌ನಲ್ಲಿರುವ ರಾಶ್ ಬಿಹಾರಿಯವರಲ್ಲಿಗೆ ಕಳುಹಿಸಿದರು".[೨೮] ಸತ್ಯೇನ್‌ರು ಕಲ್ಕತ್ತೆಯ 159 ಬೋ ಬಜಾರ್‌ನಲ್ಲಿ ಉಳಿದುಕೊಂಡರು. ಟೆಗರ್ಟ್‌ರಿಗೆ ಕೆಲವು ಸಿಖ್ ಪಡೆಗಳನ್ನು ದಕ್ಷಿಣೇಶ್ವರ್ ಗನ್‌ಪೌಡರ್ ಮ್ಯಾಗಜಿನ್‌ನಲ್ಲಿ ಗುಪ್ತವಾಗಿ ಒಳಹಾಕಿಕೊಳ್ಳುವ ಪ್ರಯತ್ನದ ಕುರಿತು ತಿಳಿಸಲಾಯಿತು. "ಪ್ರಶ್ನೆಯಲ್ಲಿರುವ ಪಡೆಗಳು 93ನೇ ಬರ್ಮನ್ ಪಡೆ ಎಂದು ಒಂದು ಸೇನಾ ಅಧಿಕಾರಿಗಳ ಉಲ್ಲೇಖವು ತೋರಿಸುತ್ತದೆ" ಮತ್ತು ಅವರನ್ನು ಮೆಸಪಟೋಮಿಯಾಕ್ಕೆ ಕಳುಹಿಸಲಾಯಿತು. ಜತಿನ್ ಮುಖರ್ಜಿ ಮತ್ತು ಸತ್ಯೇನ್ ಭೂಷಣ್ ಸೇನ್ ಅವರು ಈ ಸಿಖ್‌ರನ್ನು ಸಂದರ್ಶಿಸಿರುವಂತೆ ತೋರುತ್ತಾರೆ.[೨೯] ಗದರ್‌ವಾದಿಗಳು ತ್ವರಿತಗತಿಯಲ್ಲಿ ಭಾರತೀಯ ಭೂಗತ ಕ್ರಾಂತಿಕಾರಿಗಳೊಂದಿಗೆ, ಮುಖ್ಯವಾಗಿ ಬಂಗಾಳದಲ್ಲಿರುವವರೊಂದಿಗೆ ಸಂಪರ್ಕವನ್ನು ಬೆಳೆಸಿದರು. ರಾಶ್ ಬಿಹಾರಿ ಬೋಸ್, ಜತಿನ್ ಮುಖರ್ಜಿ ಸೇರಿ ಗದರ್‌ವಾದಿಗಳೊಂದಿಗೆ ಒಂದು ಸಂಯೋಜಿತ ರೀತಿಯಲ್ಲಿ ಸಾಮಾನ್ಯ ದಂಗೆಯೇಳಲು ಯೋಜನೆಗಳನ್ನು ಕ್ರೋಡೀಕರಿಸಲು ಆರಂಭಿಸಿದರು.
ಭಾರತೀಯ ಕ್ರಾಂತಿಕಾರಿಗಳು ಲೋಕಮಾನ್ಯ ತಿಲಕರ ಪ್ರೇರಣೆಯಿಂದ, 1900ರಿಂದಲೇ ಬನಾರಸ್‌ಅನ್ನು ರಾಜದ್ರೋಹದ ಕೇಂದ್ರವಾಗಿ ಪರಿವರ್ತಿಸಿದ್ದರು. ಸುಂದರ್‌ಲಾಲ್ (ಜನ್ಮ. 1885, ಮುಜಾಫರ್‌ನಗರದ ತೋತಾ ರಾಮ್ ಅವರ ಮಗ)1907ರಲ್ಲಿ ಬನಾರಸ್‌ನಲ್ಲಿ ನಡೆದ ಶಿವಾಜಿ ಉತ್ಸವದಲ್ಲಿ ಆಕ್ಷೇಪಣಾರ್ಹ ಭಾಷಣವನ್ನು ಮಾಡಿದ್ದರು. ತಿಲಕ್, ಲಾಲಾ ಲಜಪತ್ ರಾಯ್ ಮತ್ತು ಶ್ರೀ ಅರೊಬಿಂದೋ ಅವರ ಅನುಯಾಯಿಯಾದ ಈತನು 1908ರಲ್ಲಿ ಉತ್ತರಪ್ರದೇಶದಲ್ಲಿ ಲಾಲಾ ಅವರ ಉಪನ್ಯಾಸ ಪ್ರವಾಸದಲ್ಲಿ ಜೊತೆಯಾಗಿದ್ದನು. ಆತನ ಸಂಸ್ಥೆ, ಅಲಹಾಬಾದ್‌ನಲ್ಲಿದ್ದ ಸ್ವರಾಜ್ಯ ಕ್ಕೆ 1908ರ ಏಪ್ರಿಲ್‌ನಲ್ಲಿ ರಾಜದ್ರೋಹದ ಚಟುವಟಿಕೆಗಳ ವಿರುದ್ಧ ಎಚ್ಚರಿಕೆ ನೀಡಲಾಗಿತ್ತು. 1909ರ ಆಗಸ್ಟ್ 22ರಂದು ಸುಂದರ್ ಲಾಲ್ ಮತ್ತು ಶ್ರೀ ಅರೋಬಿಂದೋ ಅವರು ಕಲ್ಕತ್ತೆಯ ಕಾಲೇಜ್ ಸ್ಕ್ವೇರ್‌ನಲ್ಲಿ "ಹಾನಿಕರ ಭಾಷಣ"ಗಳನ್ನು ನೀಡಿದ್ದರು. ಹಿಂದಿಯಲ್ಲಿ ಕರ್ಮಯೋಗಿ ಯನ್ನು 1909ರ ಸೆಪ್ಟೆಂಬರ್‌ನಿಂದಲೇ ಅಲಹಾಬಾದ್‌ನಲ್ಲಿ ಪ್ರಕಟಿಸಲಾಗುತ್ತಿತ್ತು: ಕಲ್ಕತ್ತೆಯಿಂದ ಪ್ರಕಟವಾಗುತ್ತಿದ್ದ ಕರ್ಮಯೋಗಿನ್ ಅನ್ನು ಅಮರೇಂದ್ರ ಚಟರ್ಜಿಯವರು ಸಂಪಾದಿಸುತ್ತಿದ್ದು, ಅರೋಬಿಂದೋ ಅವರು ಅದನ್ನು ನಿಯಂತ್ರಿಸುತ್ತಿದ್ದರು. ಚಟರ್ಜಿಯವರು ಸುಂದರ್‌ಲಾಲ್‌ಗೆ ರಾಶ್ ಬಿಹಾರಿಯನ್ನು ಪರಿಚಯಿಸಿದರು. 1915ರಲ್ಲಿ, ಪಿಂಗಳೆಯವರನ್ನು ಅಲಹಬಾದ್‌ನಲ್ಲಿ ಸ್ವರಾಜ್ಯ ಗುಂಪಿನವರು ಬರಮಾಡಿಕೊಂಡರು.[೩೦] ರಾಶ್ ಬಿಹಾರಿ ಬೋಸ್ ಅವರು ಬನಾರಸ್‌ನಲ್ಲಿ 1914ರ ಆರಂಭದಿಂದಲೇ ಇದ್ದರು. ಅಲ್ಲಿ ಹಲವಾರು ಬಾರಿ ಬೃಹತ್ ಪ್ರಮಾಣದ ವಿರೋಧವನ್ನು 1914ರ ಅಕ್ಟೋಬರ್ ಮತ್ತು 1915ರ ಸೆಪ್ಟೆಂಬರ್ ಮಧ್ಯೆ ವ್ಯಕ್ತಪಡಿಸಲಾಗಿತ್ತು, ಅವುಗಳಲ್ಲಿ 45 ಪ್ರತಿಭಟನೆಗಳು ಫೆಬ್ರವರಿಯ ಒಳಗೇ ನಡೆದಿದ್ದವು. 1914ರ ನವೆಂಬರ್ 18ರಂದು, ಎರಡು ಬಾಂಬ್ ಕ್ಯಾಪ್‌ಗಳನ್ನು ಪರೀಕ್ಷಿಸುವಾಗ ಆತ ಮತ್ತು ಸಚಿನ್ ಸನ್ಯಾಲ್ ಗಾಯಗೊಂಡರು. ಅವರನ್ನು ಬಂಗಾಲಿಟೋಲದಲ್ಲಿರುವ ಒಂದು ಮನೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಜತಿನ್ ಮುಖರ್ಜಿಯವರಿಂದ ಒಂದು ಪತ್ರದೊಂದಿಗೆ ಪಿಂಗಳೆಯವರು ಇವರನ್ನು ಭೇಟಿ ಮಾಡಿದರು ಮತ್ತು ಅದಾಗಲೇ ಸುಮಾರು ಗದರ್ ಪಕ್ಷದ ಸುಮಾರು 4000 ಸಿಖ್‌ರು ಕಲ್ಕತ್ತೆಗೆ ತಲುಪಿದ್ದಾರೆ ಎಂದು ತಿಳಿಸಿದರು. ಇನ್ನೂ 15,000ಕ್ಕೂ ಹೆಚ್ಚಿನ ಜನರು ಬರಲಿಕ್ಕೆ ಮತ್ತು ದಂಗೆಗೆ ಸೇರಿಕೊಳ್ಳಲು ಕಾಯುತ್ತಿದ್ದಾರೆ ಎಂದು ತಿಳಿಸಿದರು.[೩೧] ರಾಶ್ ಬಿಹಾರಿಯವರು ಪಿಂಗಳೆ ಮತ್ತು ಸಚಿನ್‌ರನ್ನು ಅಮೃತ್‌ಸರ್‌ಗೆ ಷಾಂಗೈನಿಂದ ಬಂದಿದ್ದ ಮೂಲಾ ಸಿಂಗ್ ಅವರೊಂದಿಗೆ ಚರ್ಚೆ ಮಾಡಲು ಕಳುಹಿಸಿದರು. ರಾಶ್ ಬಿಹಾರಿಯವರ ವಿಶ್ವಾಸಿಕರಾಗಿದ್ದ ಪಿಂಗಳೆ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಹಲವಾರು ವಾರಗಳವರೆಗೆ ಕಠಿಣ ಬದುಕು ನಡೆಸಿದರು.[೩೨]
ಕಲ್ಕತ್ತೆಯ ಹತ್ತಿರದ ಬಜ್ ಬಜ್‌ನಲ್ಲಿ 1914ರ ಸೆಪ್ಟೆಂಬರ್ 29ರಂದು ನಡೆದ ಕೊಮಗಟ ಮಾರು ದೊಂಬಿಯ ಸಮಯದಲ್ಲಿ, ಬಾಬಾ ಗುರುಮುಖ್ ಸಿಂಗ್ ಅವರು ಅತುಲ್‌ಕೃಷ್ಣ ಘೋಷ್ ಮತ್ತು ಸತೀಶ್ ಚಕ್ರವರ್ತಿ ಎಂಬ ಜತಿನ್ ಮುಖರ್ಜಿಯವರ ಇಬ್ಬರು ಪ್ರಮುಖ ಬೆಂಬಲಿಗರನ್ನು ಭೇಟಿಯಾದರು ಮತ್ತು ಇವರಿಬ್ಬರೂ ಕ್ರಿಯಾಶೀಲವಾಗಿ ಸಿಂಗ್ ಅವರಿಗೆ ಸಹಾಯ ಮಾಡಿದರು. ಆಗಿನಿಂದ, ಜರ್ಮನ್ ಜಯಗಳಿಸುತ್ತದೆ ಎಂಬ ಆಶಯದಿಂದ ಅಮೆರಿಕದಲ್ಲಿ ವಾಸಿಸಿದ್ದ ಭಾರತೀಯರಿಂದ ಕ್ರೋಧದ ಪತ್ರಗಳು ಭಾರತವನ್ನು ತಲುಪಿದವು; ಒಬ್ಬ ವಲಸಿಗ ಮುಖಂಡರಿಗೆ ಆತನ ಜೊತೆಗಾರರು ಬಂಗಾಳದ ಕ್ರಾಂತಿಕಾರಕ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿತ್ತು. ಈ ಸಮಯದಲ್ಲಿಯೇ, 1914ರ ಡಿಸೆಂಬರ್‌ನಲ್ಲಿ, ಪಿಂಗಳೆಯವರು ಪಂಜಾಬ್‌ಗೆ ತಲುಪಿದರು, ಅಸಂತುಷ್ಟ ವಲಸಿಗರಿಗೆ ಬಂಗಾಳಿಗಳ ಸಹಕಾರ ನೀಡುವ ವಾಗ್ದಾನ ಮಾಡಿದ್ದರು. ಅಲ್ಲಿ ಒಂದು ಸಭೆ ನಡೆದು, ಕ್ರಾಂತಿಯಾಗಬೇಕು, ಸರ್ಕಾರಿ ಖಜಾನೆಯನ್ನು ಲೂಟಿ ಮಾಡಬೇಕು, ಭಾರತೀಯ ಪಡೆಗಳನ್ನು ಪ್ರಚೋದಿಸಬೇಕು, ಶಸ್ತ್ರಾಸ್ತ್ರಗಳ ಸಂಗ್ರಹ, ಬಾಂಬ್‌ಗಳ ತಯಾರಿಕೆ ಮತ್ತು ಡಕಾಯಿತಿಗಳನ್ನು ನಡೆಸಬೇಕೆಂಬ ಕುರಿತು ಬೇಡಿಕೆಗಳು ವ್ಯಕ್ತವಾದವು. ರಾಶ್ ಬಿಹಾರಿ ದಂಗೆಗಾಗಿ ಹಳ್ಳಿಗರ ಗುಂಪನ್ನು ಒಗ್ಗೂಡಿಸುವ ಯೋಜನೆ ಮಾಡಿದರು. ಏಕಕಾಲಿಕವಾಗಿ ಲಾಹೋರ್, ಫಿರೋಜ್‌ಪುರ್ ಮತ್ತು ರಾವಲ್ಪಿಂಡಿಯಲ್ಲಿ ಪ್ರತಿಭಟನೆ ನಡೆಸಲು ಯೋಜಿಸಿದರು. ಡಾಕಾದಲ್ಲಿ ಆರಂಭಗೊಂಡು, ಬನಾರಸ್, ಜಬಲ್‌ಪುರ್‌ಗೆ ಪ್ರತಿಭಟನೆಯ ಕಾವು ಹಬ್ಬಿತ್ತು.[೩೩]
ಬಾಂಬ್‌ಗಳನ್ನು ತಯಾರಿಸುವುದು ಗದರ್ ಕಾರ್ಯಕ್ರಮದ ಒಂದು ನಿಶ್ಚಿತ ಭಾಗವಾಗಿತ್ತು. ಇದರ ಬಗ್ಗೆ ಅತ್ಯಲ್ಪ ತಿಳಿದಿದ್ದ ಸಿಖ್ ಪಿತೂರಿಗಾರರು ಬಂಗಾಳಿ ಪರಿಣಿತರೊಬ್ಬರನ್ನು ಕರೆಸಲು ನಿರ್ಧರಿಸಿದ್ದರು. ಅವರಿಗೆ ಕ್ಯಾಲಿಫೋರ್ನಿಯಾದಲ್ಲಿ ತಾರಕ್‌ನಾಥ್ ದಾಸ್ ಅವರ ಒಡನಾಡಿಯಾಗಿದ್ದ ಪ್ರೊಫೆಸರ್ ಸುರೇಂದ್ರ ಬೋಸ್ ಕುರಿತು ಪರಿಚಯವಿತ್ತು. 1914ರ ಡಿಸೆಂಬರ್ ಕೊನೆಯ ಭಾಗದಲ್ಲಿ ಕಪುರ್ತಲದಲ್ಲಿ ಒಂದು ಸಭೆ ನಡೆದು, ಬಂಗಾಳಿ ಬಾಬು ಒಬ್ಬರು ಅವರಿಗೆ ಸಹಾಯ ಮಾಡಲು ಸಿದ್ಧರಿದ್ದಾರೆ ಎಂದು ಪಿಂಗಳೆ ಹೇಳಿದರು. 1915ರ ಜನವರಿ 3ರಂದು ಪಿಂಗಳೆ ಮತ್ತು ಸಚೀಂದ್ರ ಅಮೃತಸರದಲ್ಲಿ ಗದರ್ ಪಕ್ಷದಿಂದ 500 ರೂ.ಗಳನ್ನು ಪಡೆದುಕೊಂಡು, ಬನಾರಸ್‌ಗೆ ಮರಳಿದರು.[೩೪]
ರಾಶ್ ಬಿಹಾರಿಯವರು ಜುಂಗಂತರ್ ಮುಖಂಡರಿಗೆ ಭೇಟಿಯಾಗಲು ನೀಡಿದ್ದ ಆಹ್ವಾನದ ಮೇರೆಗೆ ಪಿಂಗಳೆಯವರು ಅವರೊಂದಿಗೆ ತಮ್ಮ ಯೋಜನೆಯನ್ನು ಸಂಯೋಜನೆ ಮಾಡುವುದು ಮತ್ತು ಅಂತಿಮಗೊಳಿಸುವುದನ್ನು ಮಾತನಾಡಲು ಕಲ್ಕತ್ತೆಗೆ ಮರಳಿದರು. ಜತಿನ್ ಮುಖರ್ಜಿ, ಅತುಲ್ ಕೃಷ್ಣ ಘೋಷ್, ನರೇನ್ ಭಟ್ಟಾಚಾರ್ಯ ಬನಾರಸ್‌ಗೆ ಹೊರಟರು (1915ರ ಜನವರಿಯ ಆರಂಭದಲ್ಲಿ). ಒಂದು ಬಹಳ ಮಹತ್ವದ ಸಭೆಯಲ್ಲಿ, ರಾಶ್ ಬಿಹಾರಿಯವರು ದಂಗೆಯ ಕುರಿತು "ನಿಮ್ಮ ದೇಶಕ್ಕಾಗಿ ಮಡಿಯಿರಿ" ಎಂಬ ಘೋಷಣೆಯೊಂದಿಗೆ ಪ್ರಕಟಿಸಿದರು. ಹವಾಲ್ದಾರ್ ಮನ್ಷ ಸಿಂಗ್ ಅವರ ಮೂಲಕ, 16ನೇ ರಜಪುತ್ ರೈಫಲ್ಸ್ ಪಡೆಯು ಫೋರ್ಟ್ ವಿಲಿಯಂಗೆ ಯಶಸ್ವಿಯಾಗಿ ತಲುಪಿದ್ದರೂ, ಜತಿನ್ ಮುಖರ್ಜಿಯವರು ಸೇನೆಯು ದಂಗೆಯೇಳಲು ಇನ್ನೂ ಎರಡು ತಿಂಗಳು ಕಾಯಬಯಸಿದ್ದರು, ಆ ವೇಳೆಗೆ ಜರ್ಮನ್ ಶಸ್ತ್ರಾಸ್ತ್ರಗಳೂ ಬರುತ್ತಿದ್ದವು. ಗದರ್ ತೀವ್ರಗಾಮಿಗಳು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕೆಂಬ ಅಸಹನೆ ಹೊಂದಿದ್ದರಿಂದ ಅದಕ್ಕೆ ತಕ್ಕಂತೆ ಯೋಜನೆಯನ್ನು ಪರಿಷ್ಕರಿಸಿದರು. ರಾಶ್ ಬಿಹಾರಿ ಮತ್ತು ಪಿಂಗಳೆ ಲಾಹೋರ್‌ಗೆ ಹೋದರು. ಸಚಿನ್ 7ನೇ ರಜಪುತ್ (ಬನಾರಸ್) ಮತ್ತು ದಿನಾಪುರದಲ್ಲಿ 89ನೇ ಪಂಜಾಬಿಗಳ ಪಡೆಯನ್ನು ಗುಪ್ತವಾಗಿ ಒಳಸೇರಿಸಿಕೊಂಡರು. ದಾಮೋದರ್ ಸರಪ್ [ಸೇತ್] ಅಲಹಬಾದ್‌ಗೆ ಹೋದರು. ವಿನಾಯಕ್ ರಾವ್ ಕಪಿಲೆ ಬಾಂಬ್‌ಗಳನ್ನು ಬಂಗಾಳದಿಂದ ಪಂಜಾಬ್‌ಗೆ ಒಯ್ದರು. ವಿಭೂತಿ [ಹಲ್ದಾರ್, ಅನುಮೋದಕ] ಮತ್ತು ಪ್ರಿಯೋ ನಾಥ್[ಭಟ್ಟಾಚಾರ್ಯ?] ಬನಾರಸ್‌ನಲ್ಲಿ ಪಡೆಗಳನ್ನು ಗುಪ್ತವಾಗಿ ಒಳಹಾಕಿಕೊಂಡರು; ಹಾಗೆಯೇ ನಳಿನಿ [ಮುಖರ್ಜಿ] ಜಬಲ್‌ಪುರ್‌ನಲ್ಲಿ ಮಾಡಿದರು. ಫೆಬ್ರವರಿ 14ರಂದು, ಕಪಿಲೆ 18 ಬಾಂಬ್‌ಗಳಿಗೆ ಆಗುವಷ್ಟು ಸಾಂಗ್ರಿಗಳ ಒಂದು ಪಾರ್ಸೆಲ್ ಅನ್ನು ಬನಾರಸ್‌ನಿಂದ ಲಾಹೋರ್‌ಗೆ ಒಯ್ದರು.[೩೫][೩೬]
ಜನವರಿಯ ಮಧ್ಯಭಾಗದಲ್ಲಿ, ಪಿಂಗಳೆಯವರು ಅಮೃತಸರಕ್ಕೆ "ದಪ್ಪಗಿರುವ ವ್ಯಕ್ತಿ"ಯೊಂದಿಗೆ (ರಾಶ್ ಬಿಹಾರಿ)ಮರಳಿದರು; ಬಹಳ ಜನ ಭೇಟಿಯಾಗಲು ಬರುತ್ತಿರುವುದನ್ನು ತಪ್ಪಿಸಲು, ರಾಶ್ ಬಿಹಾರಿಯವರು ಹದಿನೈದು ದಿನಗಳ ನಂತರ ಲಾಹೋರ್‌ಗೆ ಹೋದರು. ಎರಡೂ ಸ್ಥಳಗಳಲ್ಲಿ ಅವರು ಬಾಂಬ್ ಮಾಡಲು ಬೇಕಾದ ವಸ್ತುಗಳನ್ನು ಸಂಗ್ರಹಿಸಿದರು ಮತ್ತು ಲಾಹೋರ್‌ನ ಫೌಂಡ್ರಿಯೊಂದಕ್ಕೆ (ಎರಕದ ಕೆಲಸ ಮಾಡುವ ಘಟಕ) 80 ಬಾಂಬ್ ಕೇಸ್‌ಗಳನ್ನು ಮಾಡಿಕೊಡಲು ಹೇಳಿದರು. ಅದರ ಮಾಲೀಕರಿಗೆ ಅನುಮಾನ ಬಂದು, ಮಾಡಿಕೊಡಲು ನಿರಾಕರಿಸಿದರು. ಬದಲಿಗೆ, ಹಲವಾರು ಡಕಾಯಿತಿಗಳಲ್ಲಿ ಇಂಕ್‌ಪಾಟ್‌ಗಳನ್ನೇ ಕೇಸ್‌ಗಳನ್ನಾಗಿ ಬಳಸಲಾಯಿತು. ಮನೆಯನ್ನು ಶೋಧಿಸುವ ಸಮಯದಲ್ಲಿ ಪೂರ್ಣವಾಗಿ ಸಿದ್ಧಗೊಂಡಿದ್ದ ಬಾಂಬ್‌ಗಳು ದೊರಕಿದವು ಮತ್ತು ರಾಶ್ ಬಿಹಾರಿ ಪರಾರಿಯಾದರು. "ಅಷ್ಟು ಹೊತ್ತಿಗೆ ಮರಳಿಬಂದ ಗದರ್‌ವಾದಿಗಳು ಮತ್ತು ರಾಶ್ ಬಿಹಾರಿಯವರ ನೇತೃತ್ವದ ಕ್ರಾಂತಿಕಾರಿಗಳ ನಡುವೆ ಒಳ್ಳೆಯ ಸಂಪರ್ಕ ಏರ್ಪಟ್ಟಿತ್ತು. ಉತ್ತರ ವಾಷಿಂಗ್ಟನ್‌ನಲ್ಲಿದ್ದ (ಎನ್‌ಡಬ್ಲ್ಯು) ಬಹುಸಂಖ್ಯಾತ ಸೈನಿಕರಿಗೆ ಯಾವುದೇ ಹಾನಿಯೂ ಆಗಲಿಲ್ಲ." "ಸಂಕೇತ ದೊರೆತೊಡನೆ ಪಂಜಾಬ್‌ನಿಂದ ಬಂಗಾಳದವರೆಗೆ ದಂಗೆಗಳು ಮತ್ತು ವ್ಯಾಪಕ ಪ್ರತಿಭಟನೆಗಳನ್ನು ನಡೆಸಲು ಯೋಚಿಸಲಾಗಿತ್ತು." "ಲಾಹೋರ್ ಪಿತೂರಿ ಪ್ರಕರಣದ 81 ಜನ ಆಪಾದಿತರಲ್ಲಿ ರಾಶ್ ಬಿಹಾರಿಯವರ ಹತ್ತಿರದ ಒಡನಾಡಿಗಳಾದ ಪಿಂಗಳೆ,ಮಥುರಾ ಸಿಂಗ್ ಮತ್ತು ಕರ್ತಾರ್ ಸಿಂಗ್ ಸರಭಾ ಸೇರಿದಂತೆ 48 ಜನರು ಇತ್ತೀಚೆಗಷ್ಟೆ ಉತ್ತರ ಅಮೆರಿಕದಿಂದ ಬಂದಿದ್ದರು."[೩೭]
ರಾಶ್ ಬಿಹಾರಿ ಬೋಸ್, ಸಚಿನ್ ಸನ್ಯಾಲ್ ಮತ್ತು ಕರ್ತಾರ್ ಸಿಂಗ್ ಅವರೊಂದಿಗೆ ಪಿಂಗಳೆ ಕೂಡ 1915ರ ಫೆಬ್ರವರಿಯಲ್ಲಿ ಪ್ರಯತ್ನಿಸಬೇಕೆಂದಿದ್ದ ದಂಗೆಯ ಪ್ರಮುಖ ಸಂಯೋಜಕರಲ್ಲಿ ಒಬ್ಬರಾಗಿದ್ದರು. ರಾಶ್ ಬಿಹಾರಿ ಅವರ ಅಡಿಯಲ್ಲಿ, ಪಿಂಗಳೆಯವರು 1914ರ ಡಿಸೆಂಬರ್‌ನಿಂದ ತೀವ್ರವಾದ ಕ್ರಾಂತಿಯ ತೀವ್ರವಾದ ಪ್ರಚಾರವನ್ನು ಮಾಡಿದ್ದರು, ಕೆಲವೊಮ್ಮೆ ಶ್ಯಾಮಲಾಲ್ ಎಂಬ ಬಂಗಾಳಿಯಾಗಿ, ಮತ್ತೆ ಕೆಲವೊಮ್ಮೆ ಗಣಪತ್ ಸಿಂಗ್ ಎಂಬ ಪಂಜಾಬಿಯಾಗಿ ವೇಷಮರೆಸಿಕೊಂಡು ಪ್ರಚಾರ ನಡೆಸಿದ್ದರು.[೩೮]
ಭಾರತೀಯ ಸಿಪಾಯಿಗಳ ಪ್ರತಿಭಟನೆಯನ್ನು ನಡೆಸುವ ಕುರಿತು ವಿಶ್ವಾಸ ಹೊಂದಿದ ನಂತರ, ದಂಗೆಯ ಅಂತಿಮ ರೂಪರೇಶೆಗಳನ್ನು ಯೋಜಿಸಲಾಯಿತು. ಪಂಜಾಬ್‌ನಲ್ಲಿದ್ದ 23ನೇ ಕಾಲಾಳು ಪಡೆಯು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು, ಫೆಬ್ರವರಿ 21ರಂದು ಹಾಜರಿ ಕರೆಯುವಾಗ ತಮ್ಮ ಅಧಿಕಾರಿಗಳನ್ನು ಕೊಲ್ಲಬೇಕಿತ್ತು. ಇದರ ಹಿಂದೆಯೇ ಪಂಜಾಬ್ 26ನೇ ಪಡೆ ದಂಗೆಯೇಳಬೇಕಿತ್ತು, ಇದು ದಂಗೆ ಆರಂಭಗೊಳ್ಳುವುದರ ಸೂಚನೆಯಾಗಿದ್ದು, ದೆಹಲಿ ಮತ್ತು ಲಾಹೋರ್‌ಗಳಲ್ಲಿ ದಂಗೆ ಇನ್ನಷ್ಟು ಉಗ್ರವಾಗಬೇಕಿತ್ತು. ಬಂಗಾಳದ ಕ್ರಾಂತಿಕಾರರು ಡಾಕಾದಲ್ಲಿದ್ದ ಸಿಖ್ ದಳಗಳನ್ನು ಲಾಹೋರ್‌ನ ಸಿಖ್ ಸೈನಿಕರು ಕಳುಹಿಸಿದ ಪರಿಚಯದ ಪತ್ರಗಳ ಮೂಲಕ ಮತ್ತು ಮತ್ತು ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದರು.[೩೯] ಬಂಗಾಳದ ಕ್ರಾಂತಿಯ ಕೇಂದ್ರವು ಪಂಜಾಬ್ ಮೈಲ್ ರೈಲು ಹೌರಾ ನಿಲ್ದಾಣವನ್ನು ಪ್ರವೇಶಿಸುವುದನ್ನೇ ಕಾಯುತ್ತಿದ್ದು (ಪಂಜಾಬ್ ಅನ್ನು ಸ್ವಾಧೀನ ಪಡಿಸಿಕೊಂಡಿದ್ದರೆ ಆ ರೈಲು ಮರುದಿನ ರದ್ದಾಗುತ್ತಿತ್ತು), ಕೂಡಲೇ ಮುಷ್ಕರ ಹೂಡಲು ಸಜ್ಜಾಗಿದ್ದರು.
1915ರ ಆರಂಭದ ವೇಳೆಗೆ, ಅಪಾರ ಸಂಖ್ಯೆಯ ಗದರ್‌ವಾದಿಗಳು (ಕೆಲವು ಅಂದಾಜುಗಳ ಪ್ರಕಾರ ಪಂಜಾಬ್ ಪ್ರಾಂತ್ಯವೊಂದರಲ್ಲಿಯೇ ಸುಮಾರು 8,000) ಭಾರತಕ್ಕೆ ಮರಳಿದರು.[೪][೪೦] ಆದರೆ ಅವರಿಗೆ ಕೇಂದ್ರೀಯ ನಾಯಕತ್ವವನ್ನು ವಹಿಸಿರಲಿಲ್ಲ, ಅವರೆಲ್ಲ ಅಡ್ ಹಾಕ್ ಆಧಾರದಲ್ಲಿ ಕೆಲಸ ಆರಂಭಿಸಿದರು. ಕೆಲವರನ್ನು ಪೊಲೀಸರು ಅನುಮಾನದಿಂದ ಒಟ್ಟುಸೇರಿಸಿದರೂ, ಅನೇಕರು ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡು ಉಳಿದರು ಮತ್ತು ಅವರುಗಳು ಲಾಹೋರ್, ಫಿರೋಜ್‌ಪುರ್ ಮತ್ತು ರಾವಲ್ಪಿಂಡಿಯಂತಹ ಪ್ರಮುಖ ನಗರಗಳ ರಕ್ಷಕಸೈನ್ಯದೊಂದಿಗೆ ಸಂಪರ್ಕ ಬೆಳೆಸಲು ಆರಂಭಿಸಿದರು. ಲಾಹೋರ್ ಬಳಿಯ ಮಿಯಾನ್ ಮೀರ್‌ನಲ್ಲಿ ಸೇನಾ ಶಸ್ತ್ರಾಗಾರದ ಮೇಲೆ ಆಕ್ರಮಣ ಮಾಡಲು ವಿವಿಧ ಯೋಜನೆಗಳನ್ನು ರೂಪಿಸಿದ್ದರು ಮತ್ತು 1914ರ ನವೆಂಬರ್ 15ರಂದು ಒಂದು ಸಾಮಾನ್ಯ ದಂಗೆಯನ್ನು ಆರಂಭಿಸಲು ಯೋಜಿಸಿದ್ದರು. ಇನ್ನೊಂದು ಯೋಜನೆಯಂತೆ, ಸಿಖ್ ಸೈನಿಕರ ಗುಂಪು, ಮಂಜಾ ಜಾತಾ , ಲಾಹೋರ್ ಕಂಟೋನ್ಮೆಂಟ್‌ನ 23ನೇ ಕಾಲಾಳು ಪಡೆಯಲ್ಲಿ ನವೆಂಬರ್ 26ರಂದು ದಂಗೆಯೇಳಬೇಕೆಂದು ಯೋಜಿಸಲಾಗಿತ್ತು. ಇನ್ನೊಂದು ಯೋಜನೆಯು ನವೆಂಬರ್ 30ರಂದು ಫಿರೋಜ್‌ಪುರ್‌ನಲ್ಲಿ ದಂಗೆಯೇಳುವಂತೆ ಕರೆ ನೀಡಿತ್ತು.[೪೧] ಬಂಗಾಳದಲ್ಲಿ, ಜುಗಾಂತರವು ಜತಿನ್ ಮುಖರ್ಜಿಯವರ ಮೂಲಕ ಕಲ್ಕತ್ತದ ಫೋರ್ಟ್ ವಿಲಿಯಂನ ರಕ್ಷಕಸೈನ್ಯದೊಂದಿಗೆ ಸಂಪರ್ಕ ಬೆಳೆಸಿತ್ತು.[೪][೪೨] 1914ರ ಆಗಸ್ಟ್‌ನಲ್ಲಿ, ಮುಖರ್ಜಿಯವರ ಗುಂಪು ಭಾರತದ ಅತಿದೊಡ್ಡ ಗನ್ ತಯಾರಿಕಾ ಕಂಪನಿಯಾದ ರೊಡ್ಡ ಕಂಪನಿಯಿಂದ ಬೃಹತ್ ಪ್ರಮಾಣದ ಗನ್‌ಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತು. ಡಿಸೆಂಬರ್‌ನಲ್ಲಿ, ಹಣಕಾಸನ್ನು ಪಡೆದುಕೊಳ್ಳಲು ಕಲ್ಕತ್ತದಲ್ಲಿ ರಾಜಕೀಯವಾಗಿ ಪ್ರೇರಿತವಾದ ಸಶಸ್ತ್ರ ದರೋಡೆಗಳು ನಡೆದವು. ಮುಖರ್ಜಿಯವರು ಕರ್ತಾರ್ ಸಿಂಗ್ ಮತ್ತು ವಿ.ಜಿ. ಪಿಂಗಳೆಯ ಮೂಲಕ ರಾಶ್ ಬಿಹಾರಿ ಬೋಸ್ ಅವರ ಸಂಪರ್ಕದಲ್ಲಿದ್ದರು. ಆ ವರೆಗೆ ವಿವಿಧ ಗುಂಪುಗಳಿಂದ ಪ್ರತ್ಯೇಕವಾಗಿ ನಡೆಸಲಾಗುತ್ತಿದ್ದ ಈ ಕ್ರಾಂತಿಕಾರಕ ಚಟುವಟಿಕೆಗಳನ್ನು ಉತ್ತರ ಭಾರತದಲ್ಲಿ ರಾಶ್ ಬಿಹಾರಿ ಬೋಸ್, ಮಹಾರಾಷ್ಟ್ರದಲ್ಲಿ ವಿ.ಜಿ. ಪಿಂಗಳೆ ಮತ್ತು ಬನಾರಸ್‌ನಲ್ಲಿ ಸಚೀಂದ್ರನಾಥ ಸನ್ಯಾಲ್ ಅವರುಗಳ ನೇತೃತ್ವದಲ್ಲಿ ಒಂದೇ ಸಾಮಾನ್ಯ ನೆಲೆಯಡಿಯಲ್ಲಿ ತರಲಾಯಿತು.[೪][೪೨][೪೩] ಏಕೀಕೃತ ದಂಗೆಯನ್ನು 1915ರ ಫೆಬ್ರವರಿ 21ರಂದು ಮಾಡಬೇಕೆಂದು ದಿನಾಂಕ ನಿಗದಿ ಮಾಡಿ, ಒಂದು ಯೋಜನೆ ಮಾಡಲಾಯಿತು.[೪][೪೨]
ಭಾರತೀಯ ಸಿಪಾಯಿಗಳ ಪ್ರತಿಭಟನೆಯನ್ನು ನಡೆಸುವ ಕುರಿತು ವಿಶ್ವಾಸ ಹೊಂದಿದ ನಂತರ, ದಂಗೆಯ ಅಂತಿಮ ರೂಪರೇಶೆಗಳನ್ನು ಯೋಜಿಸಲಾಯಿತು. ಪಂಜಾಬ್‌ನಲ್ಲಿದ್ದ 23ನೇ ಕಾಲಾಳು ಪಡೆಯು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು, ಫೆಬ್ರವರಿ 21ರಂದು ಹಾಜರಿ ಕರೆಯುವಾಗ ತಮ್ಮ ಅಧಿಕಾರಿಗಳನ್ನು ಕೊಲ್ಲಬೇಕಿತ್ತು.[೧೯] ಇದರ ಹಿಂದೆಯೇ ಪಂಜಾಬ್ 26ನೇ ಪಡೆ ದಂಗೆಯೇಳಬೇಕಿತ್ತು, ಇದು ದಂಗೆ ಆರಂಭಗೊಳ್ಳುವುದರ ಸೂಚನೆಯಾಗಿದ್ದು, ದೆಹಲಿ ಮತ್ತು ಲಾಹೋರ್‌ಗಳಲ್ಲಿ ದಂಗೆ ಇನ್ನಷ್ಟು ಉಗ್ರವಾಗಬೇಕಿತ್ತು. ಬಂಗಾಳದ ಕ್ರಾಂತಿಯ ಕೇಂದ್ರವು ಪಂಜಾಬ್ ಮೈಲ್ ರೈಲು ಹೌರಾ ನಿಲ್ದಾಣವನ್ನು ಪ್ರವೇಶಿಸುವುದನ್ನೇ ಕಾಯುತ್ತಿದ್ದು (ಪಂಜಾಬ್ ಅನ್ನು ಸ್ವಾಧೀನ ಪಡಿಸಿಕೊಂಡಿದ್ದರೆ ಆ ರೈಲು ಮರುದಿನ ರದ್ದಾಗುತ್ತಿತ್ತು), ಕೂಡಲೇ ಮುಷ್ಕರ ಹೂಡಲು ಸಜ್ಜಾಗಿದ್ದರು.
ಆದರೆ, ಪಂಜಾಬ್ ಸಿಐಡಿಗಳು ಕೊನೇಘಳಿಗೆಯಲ್ಲಿ ಕೃಪಾಲ್ ಸಿಂಗ್‌ನ ಮೂಲಕ ಪಿತೂರಿಯನ್ನು ಯಶಸ್ವಿಯಾಗಿ ಭೇದಿಸಿದರು: ಸೈನಿಕ ಬಲವಂತ್ ಸಿಂಗ್(23ನೇ ಕಾಲಾಳುಪಡೆ)ನ ಸಹೋದರ ಬಂಧುವಾದ ಕೃಪಾಲ್ ಸಿಂಗ್ ಅಮೆರಿಕದಿಂದ ಮರಳಿದ ಬೇಹುಗಾರನಾಗಿದ್ದನು. ಆತನು ಲಾಹೋರ್‌ನಲ್ಲಿ ಮೋಚಿ ಗೇಟ್ ಬಳಿಯಿದ್ದ ರಾಶ್ ಬಿಹಾರಿಯವರ ಕೇಂದ್ರಕಚೇರಿಗೆ ಭೇಟಿ ನೀಡಿದ್ದು, ಪಿಂಗಳೆಯವರೂ ಸೇರಿದಂತೆ ಹತ್ತು ಹನ್ನೆರೆಡು ಜನ ನಾಯಕರನ್ನು 1915ರ ಫೆಬ್ರವರಿ 15ರಂದು ಭೇಟಿಯಾಗಿದ್ದನು. ಕೃಪಾಲ್ ಪೊಲೀಸರಿಗೆ ತಿಳಿಸಿದನು.[೪೪] ತಮ್ಮ ಯೋಜನೆಗಳು ಸಂಶಯಕ್ಕೆ ಈಡಾಗಿವೆ ಎಂಬುದನ್ನು ಗ್ರಹಿಸಿದ, ದಂಗೆಯ ದಿನವನ್ನು( ಡಿ-ಡೇ) ಫೆಬ್ರವರಿ 19ಕ್ಕೇ ಮಾಡಲು ಅಂದರೆ ನಿಗದಿ ದಿನಾಂಕಕ್ಕಿಂತ ಮೊದಲೇ ಮಾಡಲು ನಿರ್ಧರಿಸಲಾಯಿತು. ಆದರೆ ಅದೂ ಪಂಜಾಬ್ ಸಿಐಡಿಗಳಿಗೆ ತಿಳಿಯಿತು. ಫೆಬ್ರವರಿ 21ರಂದು ರಂಗೂನ್‌ನಲ್ಲಿದ್ದ 130ನೇ ಬಲೂಚಿ ರೆಜಿಮೆಂಟ್ ದಂಗೆಯೇಳಬೇಕೆಂಬ ಯೋಜನೆಯನ್ನೂ ಭಂಗಪಡಿಸಲಾಯಿತು. ಫೆಬ್ರವರಿ 15ರಂದು ಯಶಸ್ವಿಯಾಗಿ ದಂಗೆ ಎದ್ದ ಕೆಲವೇ ದಳಗಳಲ್ಲಿ ಸಿಂಗಾಪೂರ್‌ನಲ್ಲಿದ್ದ 5ನೇ ಲೈಟ್ ಇನ್‌ಫಂಟ್ರಿ ಪಡೆಯು ಒಂದಾಗಿತ್ತು. 15ರ ಮಧ್ಯಾಹ್ನ ರೆಜಿಮೆಂಟ್‌ನಲ್ಲಿದ್ದ ಎಂಟುನೂರಾ ಐವತ್ತು ಪಡೆಗಳ ಸುಮಾರು ಅರ್ಧದಷ್ಟು ಪಡೆಗಳು[೪೫], ಸುಮಾರು ಮಲಯ್ ಸ್ಟೇಟ್‌ಗಳ ಗೈಡ್‌ಗಳೊಂದಿಗೆ ಸೇರಿ ದಂಗೆ ಎದ್ದರು. ಈ ದಂಗೆಯು ಸುಮಾರು ಏಳು ದಿನಗಳ ಕಾಲ ನಡೆಯಿತು ಮತ್ತು ಒಟ್ಟು ನಲವತ್ತೇಳು ಜನ ಬ್ರಿಟಿಶ್ ಸೈನಿಕರು ಮತ್ತು ಸ್ಥಳೀಯ ನಾಗರಿಕರು ಸತ್ತರು. ದಂಗೆಕೋರರು ಬಂಧಿಸಿಟ್ಟಿದ್ದ ಎಸ್‌ಎಂಎಸ್ ಎಮ್‌ಡೆನ್ ಹಡಗಿನ ಚಾಲಕ ಸಿಬ್ಬಂದಿಯನ್ನೂ ಬಿಡುಗಡೆ ಮಾಡಿದರು. ಫ್ರೆಂಚ್, ರಷಿಯನ್ ಮತ್ತು ಜಪಾನೀ ಹಡಗುಗಳು ಬಲವರ್ಧನೆಗೊಂಡು ಆಗಮಿಸಿದ ನಂತರವೇ ದಂಗೆಯನ್ನು ಹತ್ತಿಕ್ಕಲಾಯಿತು.[೪೬][೪೭] ಸಿಂಗಾಪೂರ್‌ನಲ್ಲಿ ದಂಗೆಗೆ ಪ್ರಯತ್ನಿಸಿದ ಸುಮಾರು ಇನ್ನೂರು ಜನರಲ್ಲಿ, ನಲ್ವತ್ತು ಜನರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಇನ್ನುಳಿದ ಬಹತೇಕರನ್ನು ಜೀವಮಾನವಿಡೀ ಗಡೀಪಾರು ಮಾಡಲಾಯಿತು ಅಥವಾ ಏಳರಿಂದ ಇಪ್ಪತ್ತು ವರ್ಷಗಳ ಶಿಕ್ಷೆ ನೀಡಿ ಜೈಲಿಗೆ ಕಳುಹಿಸಲಾಯಿತು.[೪೬] ಹ್ಯೂ ಸ್ಟ್ರಾಚೆನ್ ಸೇರಿದಂತೆ ಕೆಲವು ಇತಿಹಾಸಕಾರರು, ಗದರ್‌ವಾದಿಗಳು ಸಿಂಗಾಪೂರ್ ದಳದಲ್ಲಿಯೇ ಕಾರ್ಯಾಚರಣೆ ನಡೆಸಿದ್ದರೂ, ದಂಗೆಯು ಪ್ರತ್ಯೇಕವಾಗಿತ್ತು ಮತ್ತು ಇದು ಪಿತೂರಿಯ ಭಾಗವಾಗಿರಲಿಲ್ಲ ಎಂದು ಪ್ರತಿಪಾದಿಸುತ್ತಾರೆ.[೪೮] ಮತ್ತೆ ಕೆಲವರು ಇದು ದಿಯೋಬಂದಿ ಮುಖಂಡರು ಆರಂಭಿಸಿದ ಸಿಲ್ಕ್ ಲೆಟರ್ ಮೂವ್‌ಮೆಂಟ್‌ನಿಂದ ಪ್ರಚೋದನೆಗೊಂಡಿದೆ ಎಂದು ಪ್ರತಿಪಾದಿಸುತ್ತಾರೆ, ಈ ಹೋರಾಟವು ಗದರ್‌ವಾದಿ ಪಿತೂರಿಯೊಂದಿಗೆ ತುಂಬ ಅನ್ಯೋನ್ಯವಾದ ಸಂಬಂಧವನ್ನು ಹೊಂದಿತ್ತು.[೪೯] 26ನೇ ಪಂಜಾಬ್, 7ನೇ ರಜಪೂತ್, 130ನೇ ಬಲೂಚ್, 24ನೇ ಜಾಟ್ ಶಸ್ತ್ರಾಗಾರ ಮತ್ತು ಇತರೆ ದಳಗಳಲ್ಲಿ ನಡೆದ ದಂಗೆಯ ಪ್ರಯತ್ನಗಳನ್ನು ಹತ್ತಿಕ್ಕಲಾಯಿತು. ಫಿರೋಜ್‌ಪುರ್, ಲಾಹೋರ್, ಮತ್ತು ಆಗ್ರಾದಲ್ಲಿ ನಡೆದ ದಂಗೆಗಳನ್ನು ಕೂಡ ದಮನ ಮಾಡಲಾಯಿತು ಮತ್ತು ಪಿತೂರಿಯ ಅನೇಕ ಪ್ರಮುಖ ಮುಖಂಡರನ್ನು ಬಂಧಿಸಲಾಯಿತು. ಆದಾಗ್ಯೂ ಕೆಲವರು ಪರಾರಿಯಾದರು ಅಥವಾ ತಪ್ಪಿಸಿಕೊಂಡರು. ಆದರೂ ಮೀರತ್‌ನಲ್ಲಿದ್ದ 12ನೇ ಕಾಲಾಳು ದಳದಲ್ಲಿ ದಂಗೆಯನ್ನು ಪ್ರಚೋದಿಸಲು ಕರ್ತಾರ್ ಸಿಂಗ್ ಮತ್ತು ಪಿಂಗಳೆ ಕೊನೆಯ ಯಶಸ್ವಿಗೊಳ್ಳುವ ಪ್ರಯತ್ನ ನಡೆಸಿದರು.[೫೦] ಕರ್ತಾರ್ ಸಿಂಗ್ ಲಾಹೋರ್‌ನಿಂದ ತಲೆತಪ್ಪಿಸಿಕೊಂಡರು, ಆದರೂ ಅವರನ್ನು ಬನಾರಸ್‌ನಲ್ಲಿ ಬಂಧಿಸಲಾಯಿತು. ವಿ. ಜಿ. ಪಿಂಗಳೆಯವರನ್ನು 1915ರ ಮಾಚ್ 23ರಂದು ಮೀರತ್‌ನಲ್ಲಿರುವ 12ನೇ ಕಾಲಾಳುಪಡೆಯನ್ನು ಪ್ರಚೋದಿಸಿದ ಸಂಬಂಧದಲ್ಲಿ ಸೆರೆಹಿಡಿಯಲಾಯಿತು. ಮುಂಬಯಿ ಪೊಲೀಸ್ ವರದಿಯ ಪ್ರಕಾರ ಆತ "ದೆಹಲಿಯಲ್ಲಿ ಲಾರ್ಡ್ ಹಾರ್ಡಿಂಜ್‌ರನ್ನು ಹತ್ಯೆ ಮಾಡಲು ನಡೆಸಿದ ಪ್ರಯತ್ನದಲ್ಲಿ ಬಳಸಿದ ಮಾದರಿಯ ಹತ್ತು ಬಾಂಬ್‌ಗಳನ್ನು" ತೆಗೆದುಕೊಂಡು ಹೋಗುತ್ತಿದ್ದರು.[೩೯] ಅಷ್ಟು ಬಾಂಬ್ ಇಡೀ ದಳವನ್ನೇ(ರೆಜಿಮೆಂಟ್) ಸಿಡಿಸಲು ಸಾಕಾಗುತ್ತಿತ್ತು.[೫೧] ಪಂಜಾಬ್ ಮತ್ತು ಕೇಂದ್ರ ಪ್ರಾಂತ್ಯಗಳಲ್ಲಿ ಗದರ್‌ವಾದಿಗಳನ್ನು ಹತ್ತಿಕ್ಕಿದ ನಂತರ ಅಪಾರ ಜನರನ್ನು ಬಂಧಿಸಲಾಯಿತು. ರಾಶ್ ಬಿಹಾರಿ ಬೋಸ್ ಲಾಹೋರ್‌ನಿಂದ ಪರಾರಿಯಾದರು ಮತ್ತು 1915ರ ಮೇನಲ್ಲಿ ಜಪಾನ್‌ಗೆ ತಲೆತಪ್ಪಿಸಿಕೊಂಡು ಹೋದರು. ಗ್ಯಾನಿ ಪ್ರೀತಮ್ ಸಿಂಗ್, ಸ್ವಾಮಿ ಸತ್ಯಾನಂದ ಪುರಿ ಮತ್ತು ಇನ್ನಿತರರನ್ನು ಒಳಗೊಂಡಂತೆ ಇತರೆ ಮುಖಂಡರು ಥಾಯ್ಲೆಂಡ್ ಅಥವಾ ಇವರ ಕುರಿತು ಸಹಾನುಭೂತಿಯುಳ್ಳ ಬೇರೆ ದೇಶಗಳಿಗೆ ತಲೆತಪ್ಪಿಸಿಕೊಂಡು ಹೋದರು.[೧೯][೫೦]
ಇನ್ನಿತರ ಇದಕ್ಕೆ ಸಂಬಂಧಿಸಿದ ಘಟನೆಗಳು ಎಂದರೆ 1915ರ ಸಿಂಗಾಪೂರ್ ದಂಗೆ, ಆನ್ನಿ ಲಾರ್ಸೆನ್ ಶಸ್ತ್ರಾಸ್ತ್ರಗಳ ಸಂಚು, ಕ್ರಿಸ್‌ಮಸ್ ದಿನದ ಸಂಚು, ಬಾಗಾ ಜತಿನ್‌ನ ಸಾವಿನಲ್ಲಿ ಕೊನೆಗೊಂಡ ಘಟನೆಗಳು, ಜೊತೆಗೆ ಕಾಬೂಲ್‌ಗೆ ಜರ್ಮನ್ ಮಿಶನ್ , ಭಾರತದಲ್ಲಿ ನಡೆದ ಕನ್ನಾಟ್ ರೇಂಜರ್ಸ್ ದಂಗೆ, ಜೊತೆಗೆ ಕೆಲವು ರೀತಿಯಿಂದ ನೋಡಿದರೆ, 1916ರಲ್ಲಿ ನಡೆದ ಬ್ಲ್ಯಾಕ್ ಟಾಮ್ ಸ್ಫೋಟ . ಭಾರತ-ಐರಿಶ್-ಜರ್ಮನ್ ಮೈತ್ರಿಕೂಟ ಮತ್ತು ಪಿತೂರಿಗಳು ವಿಶ್ವವ್ಯಾಪಿಯಾಗಿದ್ದ ಬ್ರಿಟಿಶ್ ಬೇಹುಗಾರಿಕೆ ಪ್ರಯತ್ನದ ಗುರಿಯಾಗಿದ್ದು, ಅವು ಮುಂದಿನ ಪ್ರಯತ್ನಗಳನ್ನು ತಡೆಯುವಲ್ಲಿ ಯಶಸ್ವಿಯಾದವು. ಅಮೆರಿಕದ ಬೇಹುಗಾರಿಕೆ ಏಜೆನ್ಸಿಗಳು 1917ರಲ್ಲಿ ಆನ್ನಿ ಲಾರ್ಸೆನ್ ಘಟನೆಯ ನಂತರ ಪ್ರಮುಖ ವ್ಯಕ್ತಿಗಳನ್ನು ಸೆರೆಹಿಡಿದವು. ಈ ಪಿತೂರಿಗಳ ನಂತರ ಭಾರತದಲ್ಲಿ ಲಾಹೋರ್ ಪಿತೂರಿ ಮೊಕದ್ದಮೆ ಮತ್ತು ಸಂಯುಕ್ತ ಸಂಸ್ಥಾನದಲ್ಲಿ ಹಿಂದೂ ಜರ್ಮನ್ ಪಿತೂರಿ ವಿಚಾರಣೆಯಂತಹ ಕೆಲವು ಕಾನೂನು ವಿಚಾರಣೆಗಳನ್ನು ನಡೆಸಲಾಯಿತು. ಅಮೆರಿಕದಲ್ಲಿ ನಡೆದ ವಿಚಾರಣೆಯು ಅತ್ಯಂತ ಸುದೀರ್ಘ ಅವಧಿಯ ಮತ್ತು ಆ ಕಾಲದಲ್ಲಿ ದೇಶದಲ್ಲಿಯೇ ಅತ್ಯಂತ ದುಬಾರಿಯ ನ್ಯಾಯಾಂಗ ವಿಚಾರಣೆಯಾಗಿತ್ತು.[೧]
ಪಿತೂರಿಯು ಭಾರತದಲ್ಲಿ ಹಲವಾರು ನ್ಯಾಯಾಂಗ ವಿಚಾರಣೆಗಳು ನಡೆಯಲು ಕಾರಣವಾಯಿತು. ಅವುಗಳಲ್ಲಿ ಬಹಳ ಪ್ರಸಿದ್ಧವಾದುದು ಎಂದರೆ ಲಾಹೋರ್ ಪಿತೂರಿ ನ್ಯಾಯಾಂಗ ವಿಚಾರಣೆ, ವಿಫಲಗೊಳಿಸಲಾದ ಫೆಬ್ರವರಿ ದಂಗೆಯ ನಂತರ ಲಾಹೋರ್‌ನಲ್ಲಿ 1915ರ ಏಪ್ರಿಲ್‌ನಲ್ಲಿ ವಿಚಾರಣೆ ಆರಂಭಿಸಲಾಯಿತು. ಇನ್ನಿತರ ವಿಚಾರಣೆಗಳು ಎಂದರೆ ಬನಾರಸ್, ಸಿಮ್ಲಾ, ದೆಹಲಿ ಮತ್ತು ಫಿರೋಜ್‌ಪುರ್ ಪಿತೂರಿ ಪ್ರಕರಣಗಳು ಮತ್ತು ಬಜ್ ಬಜ್‌ನಲ್ಲಿ ಬಂಧಿಸಲಾಗಿದ್ದವರ ನ್ಯಾಯಾಂಗ ವಿಚಾರಣೆಗಳು.[೫೧] ಲಾಹೋರ್‌ನಲ್ಲಿ ಒಂದು ವಿಶೇಷ ಟ್ರಿಬ್ಯೂನಲ್‌ಅನ್ನು 1915ರ ಭಾರತದ ರಕ್ಷಣಾ ಕಾಯಿದೆ ಅಡಿಯಲ್ಲಿ ರಚಿಸಲಾಯಿತು ಮತ್ತು ಒಟ್ಟು 291 ಪಿತೂರಿಗಾರರನ್ನು ವಿಚಾರಣೆಗೆ ಒಳಪಡಿಸಲಾಯಿತು. ಇವರಲ್ಲಿ 42 ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು, 114 ಜನರಿಗೆ ಜೀವಮಾನವಿಡೀ ಗಡೀಪಾರು ಮಾಡಲಾಯಿತು ಮತ್ತು 93 ಜನರಿಗೆ ವಿವಿಧ ಪ್ರಮಾಣದ ಜೈಲುಶಿಕ್ಷೆ ನೀಡಲಾಯಿತು. ಇವರಲ್ಲಿ ಅನೇಕರನ್ನು ಅಂಡಮಾನ್‌ನಲ್ಲಿದ್ದ ಸೆಲ್ಯುಲೆರ್ ಜೈಲ್‌ಗೆ ಕಳುಹಿಸಲಾಯಿತು. ನಲವತ್ತೆರಡು ಪ್ರತಿವಾದಿಗಳನ್ನು ಬಿಡುಗಡೆ ಮಾಡಲಾಯಿತು. ಲಾಹೋರ್ ವಿಚಾರಣೆಯು ಸಂಯುಕ್ತ ಸಂಸ್ಥಾನಗಳಲ್ಲಿ ಮಾಡಿದ ಯೋಜನೆಗಳು ಮತ್ತು ಫೆಬ್ರವರಿ ದಂಗೆ ಸಂಚಿಗೆ ನೇರ ಸಂಬಂಧ ಕಲ್ಪಿಸಿತು. ವಿಚಾರಣೆಯ ನಿರ್ಣಯದ ತರುವಾಯ, ಸಂಯುಕ್ತ ಸಂಸ್ಥಾನದಲ್ಲಿ ಭಾರತೀಯ ಕ್ರಾಂತಿಕಾರಕ ಚಟುವಟಿಕೆಗಳನ್ನು ನಾಶ ಮಾಡಲು ರಾಜತಾಂತ್ರಿಕ ಪ್ರಯತ್ನಗಳು ನಡೆದವು ಮತ್ತು ಅದರ ಸದಸ್ಯರನ್ನು ನ್ಯಾಯಾಂಗ ವಿಚಾರಣೆಗೆ ಒಳಪಡಿಸುವುದು ಸಾಕಷ್ಟು ಹೆಚ್ಚಿತು.[೫೨][೫೩][೫೪]
ಒಟ್ಟಾರೆಯಾಗಿ ಭಾರತ-ಜರ್ಮನ್ ಪಿತೂರಿ ಮತ್ತು ಯುದ್ಧದ ಸಮಯದಲ್ಲಿ ಪಂಜಾಬ್‌ನಲ್ಲಿ ಗದರ್ ಪಕ್ಷದ ಒಳಸಂಚು ಭಾರತದ ರಕ್ಷಣಾ ಕಾಯಿದೆಯ ಜಾರಿಗೆ ಮುಖ್ಯ ಪ್ರಚೋಸನೆಯಾಗಿತ್ತು. ಇದರೊಂದಿಗೆ ರೋಲಟ್ ಸಮಿತಿಯನ್ನು ನೇಮಿಸಿ,ರೋಲಟ್ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಕೂಡ ಭಾರತದಲ್ಲಿ, ವಿಶೇಷವಾಗಿ ಪಂಜಾಬ್‌ನಲ್ಲಿ 1919ರಲ್ಲಿ ಗದರ್‌ವಾದಿಗಳ ಬಂಡಾಯದ ಕುರಿತು ಬ್ರಿಟಿಶ್ ರಾಜ್‌ಗೆ ಇದ್ದ ಭಯದೊಂದಿಗೆ ಹತ್ತಿರದ ಸಂಬಂಧಹೊಂದಿತ್ತು.
{{citation}}
: Check |isbn=
value: length (help).{{citation}}
: Check |isbn=
value: length (help).