ಗರ್ಭಗೃಹ (ಗರ್ಭಗುಡಿ) ಎಂದರೆ ಹಿಂದೂ ಮತ್ತು ಜೈನ ದೇವಸ್ಥಾನಗಳ ಅತ್ಯಂತ ಒಳಗಿನ ಸ್ಥಳವಾಗಿದ್ದು ಇಲ್ಲಿ ದೇವಾಲಯದ ಪ್ರಧಾನ ದೇವತೆಯ ಮೂರ್ತಿ ಇರುತ್ತದೆ. ಜೈನ ಧರ್ಮದಲ್ಲಿ, ಮುಖ್ಯ ದೇವತೆಯನ್ನು ಮೂಲ್‍ನಾಯಕವೆಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಸಾಮಾನ್ಯವಾಗಿ ಈ ಕೋಣೆಯನ್ನು ಪ್ರವೇಶಿಸಲು ಕೇವಲ ಅರ್ಚಕರಿಗೆ ಅನುಮತಿ ಇರುತ್ತದೆ.
ಈ ಕೋಣೆಯು ಒಂದೇ ಪ್ರವೇಶದ್ವಾರವನ್ನು ಹೊಂದಿದ್ದು, ಸಾಮಾನ್ಯವಾಗಿ ಉದಯಿಸುತ್ತಿರುವ ಸೂರ್ಯನು ಪ್ರವೇಶಿಸಬಹುದಾದಂತೆ ಪೂರ್ವಾಭಿಮುಖವಾಗಿರುತ್ತದೆ, ಮತ್ತು ಯಾವುದೇ ಕಿಟಕಿಗಳಿರುವುದಿಲ್ಲ. ಇದು ಸಾಮಾನ್ಯವಾಗಿ ಚೌಕಾಕಾರವಾಗಿದ್ದು ಮತ್ತು ಕನಿಷ್ಠಪಕ್ಷ ಘನಾಕಾರವಾಗಿರುತ್ತದೆ. ಹೊರಗೆ ಆರಾಧಕರಿಗೆ ಕಾಣಿಸುವಂತೆ ದೇವಸ್ಥಾನದ ದೇವರನ್ನು ಮಧ್ಯದಲ್ಲಿ ಇರಿಸಲಾಗಿರುತ್ತದೆ. ದೇವಸ್ಥಾನದ ಗಾತ್ರಕ್ಕೆ ಹೋಲಿಸಿದರೆ, ವಿಶೇಷವಾಗಿ ಅದರ ಮೇಲೇರುವ ದೊಡ್ಡ ಗೋಪುರಕ್ಕೆ ಹೋಲಿಸಿದರೆ ಇದು ಸಾಕಷ್ಟು ಚಿಕ್ಕ ಕೋಣೆಯಾಗಿರುತ್ತದೆ.